Home Blog Page 55

ಶಿವಸಂಗಮ ಸಮೂಹ ವಿಸ್ತರಣೆ: ಹಗರಿಬೊಮ್ಮನಹಳ್ಳಿಯಲ್ಲಿ ನೂತನ ಶಾಖೆ ಉದ್ಘಾಟನೆ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಉತ್ತರ ಕರ್ನಾಟಕದ ಹೆಸರಾಂತ ಹಣಕಾಸು ಸಂಸ್ಥೆಯಾದ ಶಿವಸಂಗಮ ಸಮೂಹ (ಎಸ್‌.ಎಸ್‌. ಗ್ರೂಪ್) ತನ್ನ 16ನೇ ಶಾಖೆಯನ್ನು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಾಗೂ ಗಣ್ಯರ ಸಮ್ಮುಖದಲ್ಲಿ ಶುಭಾರಂಭಗೊಳಿಸಿತು.
ನಂದೀಪುರದ ಪೂಜ್ಯ ಮಹೇಶ್ವರ ಮಹಾಸ್ವಾಮಿಗಳು, ಹಾಲಸ್ವಾಮಿಮಠದ ಪರಮಪೂಜ್ಯ ಹಾಲಸ್ವಾಮಿಗಳು, ಹಿರೇಮಲ್ಲನಕೇರಿಯ ವಿರಕ್ತಮಠದ ಪೂಜ್ಯ ಅಭಿನವ ಚನ್ನಬಸವ ಮಹಾಸ್ವಾಮಿಗಳು ಹಾಗೂ ಕೊಪ್ಪಳ ಗವಿಮಠದ ಕಡಲಬಾಳು ಶಾಖಾಮಠದ ಪೂಜ್ಯ ಮರಿಶಾಂತವೀರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ನೂತನ ಶಾಖೆಯನ್ನು ಉದ್ಘಾಟಿಸಲಾಯಿತು. ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜಿ.ಎಂ. ಪಲ್ಲೇದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಂದೀಪುರದ ಪೂಜ್ಯ ಮಹೇಶ್ವರ ಮಹಾಸ್ವಾಮಿಗಳು, ಶಿವಸಂಗಮ ಸಮೂಹ ಕೇವಲ ಲಾಭ ಗಳಿಸುವ ಉದ್ದೇಶ ಹೊಂದದೇ ಸಮಾಜಮುಖಿ ಚಿಂತನೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸಣ್ಣ ಹಾಗೂ ಮಧ್ಯಮ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಸಂಸ್ಥಾಪಕ ಅಧ್ಯಕ್ಷ ಜಿ.ಎಂ. ಪಲ್ಲೇದ ಮಾತನಾಡಿ, ಗ್ರಾಹಕರ ವಿಶ್ವಾಸವೇ ಸಂಸ್ಥೆಯ ಬೆಳವಣಿಗೆಯ ಬುನಾದಿಯಾಗಿದೆ. ಇದೇ ವಿಶ್ವಾಸದ ಬಲದಿಂದ ಕಳೆದ ತಿಂಗಳು ಬೆಂಗಳೂರಿನಲ್ಲಿ 15ನೇ ಶಾಖೆ ಹಾಗೂ ಇದೀಗ ಹಗರಿಬೊಮ್ಮನಹಳ್ಳಿಯಲ್ಲಿ 16ನೇ ಶಾಖೆಯನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನಸ್ನೇಹಿ ಸೇವೆಗಳನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕರಾದ ಎಂ.ಬಿ. ಲಿಂಗದಾಳ, ವ್ಹಿ.ಎಸ್. ಶಿವಕಾಳಿಮಠ, ವ್ಯವಸ್ಥಾಪಕ ನಿರ್ದೇಶಕರಾದ ಪಿ.ಎ. ದೇಸಾಯಿಮಠ ಹಾಗೂ ಎಂ.ಬಿ. ಗಾಣಿಗೇರ, ವ್ಯವಸ್ಥಾಪಕ ಗುರುರಾಜ ಬೆಳಮಕರ, ಪುರಸಭೆ ಸದಸ್ಯ ಹನುಮಂತಪ್ಪ ಜೋಗಿ, ಪ್ರಥಮ ದರ್ಜೆ ಗುತ್ತಿಗೆದಾರ ಕೇಶವರೆಡ್ಡಿ, ರಮೇಶ ಗುಡ್ಲಾನೂರ, ಶರಣಪ್ಪ ಹೊಸಪೇಟೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಮೂಹ ಸಂಸ್ಥೆಯ ಎಲ್ಲ ಶಾಖೆಗಳ ವ್ಯವಸ್ಥಾಪಕರು, ಸಿಬ್ಬಂದಿ, ಗ್ರಾಹಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 “ಶಿವಸಂಗಮ ಸಮೂಹವು ಕೇವಲ ಹಣಕಾಸು ಸಂಸ್ಥೆಯಲ್ಲ; ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರನ್ನು ಸಬಲರನ್ನಾಗಿಸುವ ಸಮಾಜಮುಖಿ ಸಂಸ್ಥೆಯಾಗಿದೆ.”
– ಪೂಜ್ಯ ಮಹೇಶ್ವರ ಮಹಾಸ್ವಾಮಿಗಳು, ನಂದೀಪುರ

ಉರಿಯುವ ದೀಪವಾಗಿ ವಚನಗಳನ್ನು ಉಳಿಸಿದ ಹಳಕಟ್ಟಿ: ಪ್ರೊ. ಎಸ್.ಎಸ್. ಹರ್ಲಾಪೂರ

ವಿಜಯಸಾಕ್ಷಿ ಸುದ್ದಿ, ಅಣ್ಣಿಗೇರಿ: ಸಕಲ ವೈಭೋಗಗಳನ್ನು ತ್ಯಜಿಸಿ, ತಮ್ಮ ಬದುಕನ್ನೇ ಉರಿಯುವ ದೀಪವನ್ನಾಗಿ ಮಾಡಿಕೊಂಡು ವಚನ ಸಾಹಿತ್ಯಕ್ಕೆ ಹೊಸ ಜೀವ ತುಂಬಿದ ಪುಣ್ಯಾತ್ಮ ಡಾ. ಫ.ಗು. ಹಳಕಟ್ಟಿ ಅವರು ಕನ್ನಡ ನಾಡಿನ ಹೆಮ್ಮೆಯ ಮಹನೀಯರು ಎಂದು ಪ್ರೊ. ಎಸ್.ಎಸ್. ಹರ್ಲಾಪೂರ ಹೇಳಿದರು.

ಪಟ್ಟಣದ ಶ್ರೀಮತಿ ನಿಂಗಮ್ಮ ಎಸ್. ಹೂಗಾರ ವಿದ್ಯಾಲಯದಲ್ಲಿ ಭಾನುವಾರ ನಡೆದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನೋತ್ಸವ ಹಾಗೂ ವಚನ ಸಂರಕ್ಷಣಾ ದಿನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಳಕಟ್ಟಿ ಅವರು ಇರದಿದ್ದರೆ ಬಸವಣ್ಣ ಸೇರಿದಂತೆ ಶರಣರ ವಚನಗಳು ಇತಿಹಾಸದ ಪುಟಗಳಲ್ಲಿ ಕಣ್ಮರೆಯಾಗುವ ಸಾಧ್ಯತೆ ಇತ್ತು. ತಮ್ಮ ಮನೆ-ಮಠವನ್ನೇ ಮಾರಾಟ ಮಾಡಿ ವಿಜಯಪುರದಲ್ಲಿ ಮುದ್ರಣಾಲಯ ಸ್ಥಾಪಿಸಿ ವಚನ ಸಾಹಿತ್ಯವನ್ನು ಪ್ರಕಟಿಸಿದ ಅವರ ತ್ಯಾಗ ಕನ್ನಡ ಸಾಹಿತ್ಯದ ಸುವರ್ಣ ಅಧ್ಯಾಯವಾಗಿದೆ. ಅವರ ಸೇವೆಗೆ ನಾವು ವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕವೇ ನಿಜವಾದ ಗೌರವ ಸಲ್ಲಿಸಬಹುದು ಎಂದು ಹೇಳಿದರು.

ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ. ಅಂದಿನ ದಿನಗಳಲ್ಲಿ ಮಂಗಳೂರಿನ ಕ್ರಿಶ್ಚಿಯನ್ ಮಿಷನರಿ ಮುದ್ರಣಾಲಯವು ವಚನ ಸಾಹಿತ್ಯ ಪ್ರಕಟಿಸಲು ನಿರಾಕರಿಸಿದಾಗ, ಹಳಕಟ್ಟಿ ಅವರು ತಮ್ಮ ಆಸ್ತಿಯನ್ನೇ ಮಾರಾಟ ಮಾಡಿ ಸ್ವಂತ ಮುದ್ರಣಾಲಯ ಆರಂಭಿಸಿ ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸಿದರು ಎಂದು ವಿವರಿಸಿದರು.

ಹಿರಿಯ ಪತ್ರಕರ್ತ ವೀರೇಶ ಶಾನುಭೋಗರ ಮಾತನಾಡಿ, ಬಸವಣ್ಣ ಕನ್ನಡದ ನೆಲದಿಂದ ಜಗತ್ತಿಗೆ ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರಿದ ಮಹಾನ್ ಚಿಂತಕರಾಗಿದ್ದು, ಆ ವಿಚಾರಧಾರೆಯನ್ನು ಉಳಿಸಿ ಬೆಳೆಸಿದ ಮಹತ್ವದ ಕೆಲಸವನ್ನು ಡಾ. ಫ.ಗು. ಹಳಕಟ್ಟಿ ಮಾಡಿದ್ದಾರೆ ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷ ಕಿರಣ ಬೂದಿಹಾಳ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಳಕಟ್ಟಿ ಅವರ ಮರಿ ಮೊಮ್ಮಗಳು 83 ವರ್ಷದ ಪ್ರಭಾವತಿ ರಬರಬಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಶೇಷ ಆಕರ್ಷಣೆಯಾಗಿ ನಿಂಗಮ್ಮ ಎಸ್. ಹೂಗಾರ ವಿದ್ಯಾಲಯದ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶರಣ-ಶರಣೆಯರ ವೇಷಭೂಷಣದಲ್ಲಿ ವಚನಗಳನ್ನು ವಾಚಿಸಿದರು. ಡಾ. ಫ.ಗು. ಹಳಕಟ್ಟಿ ಅವರ ವೇಷದಲ್ಲಿ ವಿದ್ಯಾರ್ಥಿಯೊಬ್ಬರು ಅವರ ಜೀವನಗಾಥೆ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.

ಕಾರ್ಯಕ್ರಮದಲ್ಲಿ ವೇದವತಿ ಕಟ್ಟಿ, ಚಂದ್ರಶೇಖರ ಮುಂಡರಗಿ ಉಪಸ್ಥಿತರಿದ್ದರು. ಸುಮಿತ್ರಾ ಹುಣಸಿಮರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಕ್ಷಿ ಹರ್ಲಾಪೂರ ಪ್ರಾರ್ಥಿಸಿದರು. ಅಂಜಲಿ ಅಡಾಡಿ ಸ್ವಾಗತಿಸಿದರು. ಶಂಕ್ರಮ್ಮ ಕೋರಿ ವಂದಿಸಿದರು. ಲಕ್ಷ್ಮಿ ಬನ್ನೆಣ್ಣವರ ಕಾರ್ಯಕ್ರಮ ನಿರೂಪಿಸಿದರು.

“ತಮ್ಮ ಬದುಕನ್ನೇ ಉರಿಯುವ ದೀಪವನ್ನಾಗಿ ಮಾಡಿಕೊಂಡು ವಚನಗಳಿಗೆ ಬೆಳಕು ನೀಡಿದ ಮಹಾತ್ಮ ಡಾ. ಫ.ಗು. ಹಳಕಟ್ಟಿಯವರ ಸೇವೆ ಕನ್ನಡ ನಾಡು ಎಂದೆಂದಿಗೂ ಸ್ಮರಿಸಲಿದೆ.”

– ಪ್ರೊ. ಎಸ್.ಎಸ್. ಹರ್ಲಾಪೂರ

ಮಧುಮೇಹಕ್ಕೆ ಆರಂಭಿಕ ಪತ್ತೆಯೇ ಮದ್ದು: ಡಾ. ನಿಹಾಲ್ ಥಾಮಸ್

ವಿಜಯಸಾಕ್ಷಿ ಸುದ್ದಿ, ಗದಗ: ಮಧುಮೇಹಕ್ಕೆ ಚಿಕಿತ್ಸೆ ನೀಡುವುದಕ್ಕಿಂತ ಅದನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ಜೀವನಶೈಲಿಯಲ್ಲಿ ಬದಲಾವಣೆ, ರೋಗಿಗಳ ಶಿಕ್ಷಣ ಹಾಗೂ ಸೂಕ್ತ ಚಿಕಿತ್ಸೆಯ ಮೂಲಕ ಮೂತ್ರಪಿಂಡ ವೈಫಲ್ಯ, ಹೃದಯಾಘಾತ ಮತ್ತು ದೃಷ್ಟಿಹೀನತೆಯಂತಹ ಗಂಭೀರ ತೊಂದರೆಗಳನ್ನು ತಡೆಗಟ್ಟುವುದೇ ವೈದ್ಯಕೀಯ ಕ್ಷೇತ್ರದ ನಿಜವಾದ ಯಶಸ್ಸು ಎಂದು ಸಿಎಂಸಿ ವೆಲ್ಲೂರಿನ ಎಂಡೋಕ್ರಿನಾಲಜಿಸ್ಟ್ ಡಾ. ನಿಹಾಲ್ ಥಾಮಸ್ ಹೇಳಿದರು.

ಸಿಎಂಸಿ ವೆಲ್ಲೂರು, ಬಾಸೆಲ್ ಮಿಷನ್ ಸಿಎಸ್‌ಐ ಆಸ್ಪತ್ರೆ ಹಾಗೂ ಗದಗ ಐಎಂಎ ಸಹಯೋಗದಲ್ಲಿ ನಗರದ ಕ್ಲಾರ್ಕ್ಸ್ ಇನ್ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಮಧುಮೇಹ ಮತ್ತು ಎಂಡೋಕ್ರಿನಾಲಜಿ ಕುರಿತ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮದಲ್ಲಿ ಅವರು ಮುಖ್ಯ ಉಪನ್ಯಾಸ ನೀಡಿದರು.

ಮಧುಮೇಹವು ಕೇವಲ ಸಕ್ಕರೆ ಕಾಯಿಲೆಯಲ್ಲ, ಅದು ಚಯಾಪಚಯ ಸಿಂಡ್ರೋಮ್‌ನ ಪ್ರಮುಖ ಭಾಗವಾಗಿದೆ. ನಿರಂತರ ಗ್ಲೂಕೋಸ್ ಮಾನಿಟರಿಂಗ್ (CGM), ವೈಯಕ್ತಿಕ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಹಾಗೂ ಆಧುನಿಕ ಔಷಧೋಪಚಾರಗಳಿಂದ ಮಧುಮೇಹದ ಗಂಭೀರ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ವಿವರಿಸಿದರು.

ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟಿರುವ ಟೈಪ್–5 ಮಧುಮೇಹ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ. ಥಾಮಸ್, ದೇಹದ ತೂಕ ಕಡಿಮೆ ಇರುವ ಯುವಜನರಲ್ಲಿ ಕಂಡುಬರುವ ಈ ಹೊಸ ಮಾದರಿಯ ಮಧುಮೇಹದ ಕುರಿತು ಸಿಎಂಸಿ ವೆಲ್ಲೂರಿನ ಸಂಶೋಧನೆ ಮಹತ್ವದ ಮೈಲಿಗಲ್ಲಾಗಿದೆ ಎಂದು ತಿಳಿಸಿದರು.

ಡಾ. ಎಂ.ಡಿ. ಅನ್ವರ್ ಹುಸೇನ್ ಅವರು ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಮಧುಮೇಹದ ಕುರಿತು ಉಪನ್ಯಾಸ ನೀಡಿ, ಗರ್ಭಿಣಿಯರಲ್ಲಿ ರಕ್ತದಲ್ಲಿನ ಸಕ್ಕರೆಯ ನಿಯಂತ್ರಣ, ಸಮತೋಲನ ಆಹಾರ, ವ್ಯಾಯಾಮ ಹಾಗೂ ಅಗತ್ಯವಿದ್ದರೆ ಇನ್ಸುಲಿನ್ ಚಿಕಿತ್ಸೆಯ ಮಹತ್ವವನ್ನು ವಿವರಿಸಿದರು.

ಮಧುಮೇಹಿಗಳಲ್ಲಿ ಪಾದದ ಹುಣ್ಣು ಹಾಗೂ ಅಂಗಚ್ಛೇದನದಂತಹ ಗಂಭೀರ ಸಮಸ್ಯೆಗಳನ್ನು ತಪ್ಪಿಸಲು ಆರಂಭಿಕ ತಪಾಸಣೆ, ಅಪಾಯದ ಮೌಲ್ಯಮಾಪನ, ಸೂಕ್ತ ಪಾದದ ಆರೈಕೆ ಹಾಗೂ ವಿಶೇಷ ಪಾದರಕ್ಷೆಗಳ ಬಳಕೆಯ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು.

ಬಾಸೆಲ್ ಮಿಷನ್ ಸಿಎಸ್‌ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅಜಯ್ ಚೈತನ್ಯ ರಾಜು ಸ್ವಾಗತಿಸಿ, ಇಂತಹ ಶೈಕ್ಷಣಿಕ ಕಾರ್ಯಕ್ರಮಗಳು ವೈದ್ಯರಿಗೆ ಇತ್ತೀಚಿನ ವೈದ್ಯಕೀಯ ಜ್ಞಾನವನ್ನು ತಲುಪಿಸುವ ಮೂಲಕ ಉತ್ತರ ಕರ್ನಾಟಕದ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ನೆರವಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ತಜ್ಞ ವೈದ್ಯರೊಂದಿಗೆ ಸಂವಾದ ನಡೆಸಿದರು. ಡಾ. ಸರ್ವೇಶ್ ಕಾಖಂಡಕಿ, ಡಾ. ಸಂಜೀವ ಜೋಷಿ ಹಾಗೂ ಡಾ. ಶಿಲ್ಪಾ ಧಡೂತಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಸಾಮ್ಯುಲ್ ವೆಸ್ಲೆ ನಿರೂಪಿಸಿ ವಂದಿಸಿದರು.

ಹಿರಿಯ ವೈದ್ಯರಾದ ಡಾ. ಕುಶಾಲ್ ಗೋಡಖಿಂಡಿ, ಡಾ. ಜೆ.ಕೆ. ಲಖಾನಿ, ಡಾ. ಸೊಲೊಮನ್, ಡಾ. ಶಶಿಧರ ರೇಶ್ಮೆ, ಡಾ. ಆರ್.ಎನ್. ಗೋಡಬೋಲೆ, ಡಾ. ಸವಿತಾ ರಾಜು ಸೇರಿದಂತೆ ಅನೇಕ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

“ಮಧುಮೇಹದ ಚಿಕಿತ್ಸೆ ಎಂದರೆ ಕೇವಲ ರಕ್ತದಲ್ಲಿನ ಸಕ್ಕರೆ ನಿಯಂತ್ರಣವಲ್ಲ; ರೋಗವನ್ನು ಆರಂಭದಲ್ಲೇ ಪತ್ತೆಹಚ್ಚಿ, ಜೀವನಶೈಲಿಯಲ್ಲಿ ಬದಲಾವಣೆ ಮೂಲಕ ಹೃದಯ, ಮೂತ್ರಪಿಂಡ ಹಾಗೂ ಕಣ್ಣಿನ ಗಂಭೀರ ತೊಂದರೆಗಳನ್ನು ತಡೆಗಟ್ಟುವುದೇ ನಿಜವಾದ ಯಶಸ್ಸು.”

ಡಾ. ನಿಹಾಲ್ ಥಾಮಸ್, ಎಂಡೋಕ್ರಿನಾಲಜಿಸ್ಟ್, ಸಿಎಂಸಿ ವೆಲ್ಲೂರು

ಉಭಯ ಗುರುಗಳು ವೀರೇಶ್ವರ ಪುಣ್ಯಾಶ್ರಮದ ಕಲ್ಪವೃಕ್ಷಗಳು: ಡಾ. ಸಿದ್ದರಾಮ ಮಹಾಸ್ವಾಮಿಗಳು

ವಿಜಯಸಾಕ್ಷಿ ಸುದ್ದಿ, ಗದಗ: ಉಭಯ ಗುರುಗಳಾದ ಲಿಂ. ಪಂಡಿತ ಪಂಚಾಕ್ಷರಿ ಗವಾಯಿಗಳು ಹಾಗೂ ಲಿಂ. ಡಾ. ಪಂಡಿತ ಪುಟ್ಟರಾಜ ಗವಾಯಿಗಳು ಅಂಧ–ಅನಾಥರು, ಬಡವರ ಸೇವೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಜೀವನವನ್ನು ಸಾರ್ಥಕಗೊಳಿಸಿದ ಮಹಾಪುರುಷರು. ವೀರೇಶ್ವರ ಪುಣ್ಯಾಶ್ರಮಕ್ಕೆ ಅವರು ಕಲ್ಪವೃಕ್ಷಗಳಾಗಿದ್ದು, ಅಂತಹ ಮಹಾತ್ಮರನ್ನು ಸಮಾಜ ಸದಾ ಸ್ಮರಿಸುತ್ತದೆ ಎಂದು ಗದುಗಿನ ತೋಂಟದಾರ್ಯ ಶ್ರೀಮಠದ ಜಗದ್ಗುರು ಡಾ. ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂಚಾಕ್ಷರಿ ಗವಾಯಿಗಳ 82ನೇ ಹಾಗೂ ಪಂ. ಪುಟ್ಟರಾಜ ಗವಾಯಿಗಳ 16ನೇ ಪುಣ್ಯಸ್ಮರಣೋತ್ಸವ ಮತ್ತು ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಶಿವಾನುಭವ ಗೋಷ್ಠಿಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಹಾನಗಲ್ ಕುಮಾರೇಶ್ವರ ಶಿವಯೋಗಿಗಳ ದಿವ್ಯ ಚೈತನ್ಯದಿಂದ ಪಂಚಾಕ್ಷರಿ ಗವಾಯಿಗಳು ಗಾನಯೋಗಿಗಳಾಗಿ ರೂಪುಗೊಂಡರು. ಗುರುಗಳ ಮಾರ್ಗದರ್ಶನದಲ್ಲಿ ನಡೆದ ಪುಟ್ಟರಾಜ ಗವಾಯಿಗಳು ಅಂಧ–ಅನಾಥರ ಆಶಾಕಿರಣವಾಗಿ ಸಂಗೀತದ ಮೂಲಕ ಸಾವಿರಾರು ಬದುಕುಗಳನ್ನು ಕಟ್ಟಿಕೊಟ್ಟರು. ದೇಶದ ಅನೇಕ ಕಡೆ ಜಾತ್ರೆಗಳು ನಡೆಯುತ್ತವೆ. ಆದರೆ ಸಂಗೀತದ ಜಾತ್ರೆ ನಡೆಯುವುದು ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲೇ ಎಂಬ ಹೆಗ್ಗಳಿಕೆ ಈ ಕ್ಷೇತ್ರಕ್ಕಿದೆ ಎಂದು ಹೇಳಿದರು.

ಜಾತಿ–ಪಕ್ಷ ಭೇದವಿಲ್ಲದೆ ಎಲ್ಲರಿಗೂ ಆಶ್ರಯ ನೀಡಿರುವ ಈ ಪುಣ್ಯಮಠದ ಘನತೆಗೆ ಧಕ್ಕೆಯಾಗುವ ಯಾವುದೇ ಬೆಳವಣಿಗೆ ನಡೆಯಬಾರದು ಎಂದು ಶ್ರೀಗಳು ಕಿವಿಮಾತು ಹೇಳಿದರು.

ಸ್ಮಾರಕ ಭವನ ಪೂರ್ಣಗೊಳಿಸಲು ನೆರವು: ಪ್ರಹ್ಲಾದ ಜೋಶಿ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ವೀರೇಶ್ವರ ಪುಣ್ಯಾಶ್ರಮವು ಸಂಗೀತದ ಮೂಲಕ ಜಗತ್ತಿಗೆ ಮಾನವೀಯತೆಯ ಸಂದೇಶ ಸಾರಿದ ಪುಣ್ಯಕ್ಷೇತ್ರವಾಗಿದೆ. ಸ್ವತಃ ಅಂಧರಾಗಿದ್ದರೂ ಸಾವಿರಾರು ಅಂಧ ಮಕ್ಕಳ ಬದುಕಿಗೆ ಜ್ಞಾನದ ಬೆಳಕು ನೀಡಿದ ಉಭಯ ಗುರುಗಳ ಸೇವೆ ಅನನ್ಯವಾಗಿದೆ. ಗವಾಯಿಗಳ ಸ್ಮಾರಕ ಭವನದ ಕಾಮಗಾರಿ ಪೂರ್ಣಗೊಳ್ಳಲು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಮಾನವೀಯ ಮೌಲ್ಯಗಳ ಪ್ರತೀಕ ಉಭಯ ಗುರುಗಳು: ಬಸವರಾಜ ಬೊಮ್ಮಾಯಿ

ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ–ಗದಗ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಇಂದಿನ ವಸ್ತುಪ್ರಧಾನ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಉಭಯ ಗುರುಗಳು ಸಾತ್ವಿಕತೆ, ಸೇವೆ ಮತ್ತು ಸಾರ್ಥಕ ಬದುಕಿನ ಆದರ್ಶವನ್ನು ಸಮಾಜಕ್ಕೆ ನೀಡಿದ್ದಾರೆ. ಸಂಗೀತದ ಮೂಲಕ ಸಾವಿರಾರು ಅಂಧ ಹಾಗೂ ಅಸಹಾಯಕರಿಗೆ ಬದುಕು ಕಟ್ಟಿಕೊಟ್ಟ ಪುಟ್ಟರಾಜ ಗವಾಯಿಗಳ ಸೇವೆ ಇತಿಹಾಸದಲ್ಲಿ ಅಜರಾಮರವಾಗಿರುತ್ತದೆ ಎಂದರು.

ಗವಾಯಿಗಳ ಸ್ಮಾರಕ ಭವನಕ್ಕಾಗಿ ಹಿಂದೆ ₹5 ಕೋಟಿ ಮಂಜೂರು ಮಾಡಲಾಗಿತ್ತು. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಮನ್ವಯ ಸಾಧಿಸಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ 2026ನೇ ಸಾಲಿನ ‘ಪದ್ಮಭೂಷಣ ಪಂ. ಪುಟ್ಟರಾಜ ಪ್ರಶಸ್ತಿ’ಯನ್ನು ಕೀರ್ತನ ಕ್ಷೇತ್ರದ ಸಾಧಕ ನೀಲಕಂಠ ಶಾಸ್ತ್ರಿಗಳು (ಕೂಸಗೂರು) ಅವರಿಗೆ ಪ್ರದಾನ ಮಾಡಲಾಯಿತು.

ಹಾಗೆಯೇ ಚೆನ್ನೈನ ಶಹನಾಯಿ ವಾದಕ ಪದ್ಮಶ್ರೀ ಪಂ. ಡಾ. ಎಸ್. ಬಾಳೇಶ ಭಜಂತ್ರಿ, ಪ್ರವಚನ ಕ್ಷೇತ್ರದ ಡೋಣಿಯ ಶಶಿಧರ ಶಾಸ್ತ್ರಿ ಹಿರೇಮಠ ಹಾಗೂ ತಬಲಾ ವಾದಕ ಹೊನ್ನಿಗನೂರಿನ ಬಸವರಾಜ ಅಮರಗೋಳ ಅವರಿಗೆ ‘ಕುಮಾರಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ‘ಗಾನಯೋಗಿ ಶಿವಯೋಗಿ ಶ್ರೀ ಪರಮಪಂಚಾಕ್ಷರ ಮಹಾಪುರಾಣ’ ಹಾಗೂ ‘ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಾಂಬೆಯ ಪುರಾಣ’ ಗ್ರಂಥಗಳು ಲೋಕಾರ್ಪಣೆಗೊಂಡವು.

ವೇದಿಕೆಯಲ್ಲಿ ಗುಳೇದಗುಡ್ಡ ಮುರುಘಾಮಠದ ಕಾಶೀನಾಥ ಮಹಾಸ್ವಾಮಿಗಳು, ಅಡ್ನೂರ ಬ್ರಹನ್ಮಠದ ಅಭಿನವ ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು, ಮೈಸೂರು ಕುಂದೂರು ಮಠದ ಡಾ. ಶರತ್‌ಚಂದ್ರ ಸ್ವಾಮಿಗಳು, ಮೈಸೂರು ಅರಮನೆ ಪಂಚಗವಿ ಮಠದ ಶ್ರೀಕಂಠ ಸ್ವಾಮಿಗಳು, ಅಂತೂರು–ಬೆಂತೂರಿನ ಕುಮಾರ ದೇವರು, ಅಡವೀಂದ್ರಮಠದ ಮಹೇಶ್ವರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ವೀರೇಶ್ವರ ಪುಣ್ಯಾಶ್ರಮದ ಸೋಲ್ ಟ್ರಸ್ಟ್ ಅಧ್ಯಕ್ಷ ನಿಂಗಪ್ಪ ಕೆಂಗಾರ, ಪರಶುರಾಮ ಕಟ್ಟಿಮನಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

“ದೇಶದ ಅನೇಕ ಕಡೆ ಜಾತ್ರೆಗಳು ನಡೆಯುತ್ತವೆ. ಆದರೆ ಸಂಗೀತದ ಜಾತ್ರೆ ನಡೆಯುವುದು ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲೇ. ಉಭಯ ಗುರುಗಳು ಈ ಪುಣ್ಯಕ್ಷೇತ್ರದ ಕಲ್ಪವೃಕ್ಷಗಳು.”

ಜಗದ್ಗುರು ಡಾ. ಸಿದ್ದರಾಮ ಮಹಾಸ್ವಾಮಿಗಳು, ತೋಂಟದಾರ್ಯ ಶ್ರೀಮಠ

ಪಡಿತರ ಅಕ್ಕಿ ಕಾಳಸಂತೆಗೆ ಬ್ರೇಕ್!

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಮಳೆಯಿಂದ ಅಥವಾ ಇತರೆ ಕಾರಣಗಳಿಂದ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡರೆ ಹೆಸ್ಕಾಂ ಅಧಿಕಾರಿಗಳು ತಕ್ಷಣ ಸಮಸ್ಯೆ ಬಗೆಹರಿಸಬೇಕು. ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಗ್ಯಾರಂಟಿ ಯೋಜನೆಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕೆಪಿಟಿಸಿಎಲ್ (ಕೆಇಬಿ) ಸರ್ವೆ ಕಾರ್ಯ ಆರಂಭಗೊಂಡಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುವವರು ಕೈಬರಹದ ಬಾಡಿಗೆ ಪತ್ರ ಹಾಗೂ ಆಧಾರ್ ಕಾರ್ಡ್ ಸಲ್ಲಿಸಿ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದರು. ಲೈನ್‌ಮನ್‌ಗಳು ಸುರಕ್ಷತಾ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವಕರು ಮತ್ತು ಯುವತಿಯರಿಗೆ ಹೆಚ್ಚಿನ ಪ್ರಮಾಣದಲ್ಲಿ ತರಬೇತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಕೋಚಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಯೋಜನೆ ಕುರಿತು ಮಾಹಿತಿ ನೀಡಬೇಕು. ಗ್ರಾಮ ಮಟ್ಟದಲ್ಲಿ ಸಭೆಗಳು, ಜಾಗೃತಿ ಕಾರ್ಯಕ್ರಮಗಳು ಹಾಗೂ ಮಾಹಿತಿ ಶಿಬಿರಗಳನ್ನು ಆಯೋಜಿಸಿ ಅರ್ಹ ಯುವಕರಿಗೆ ಯೋಜನೆಯ ಪ್ರಯೋಜನಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಹತೆ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗೃಹಲಕ್ಷ್ಮಿ ಯೋಜನೆಯ ಮಾಹಿತಿಯನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಬೇಕು. ಮರಣ ಹೊಂದಿದ ಫಲಾನುಭವಿಗಳ ವಿವರಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಪರಿಶೀಲಿಸಿ ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಬೇಕು. ಬಸ್ ನಿಲ್ದಾಣಗಳ ಶೌಚಾಲಯಗಳ ಸ್ವಚ್ಛತೆ ಪರಿಶೀಲಿಸಿ, ಅಸ್ವಚ್ಛತೆ ಕಂಡುಬಂದರೆ ಸಂಬಂಧಪಟ್ಟ ಸಿಬ್ಬಂದಿಗೆ ದಂಡ ವಿಧಿಸುವಂತೆ ಸೂಚಿಸಿದರು.

ಸರ್ಕಾರದ ನಿರ್ದೇಶನದಂತೆ ಎಲ್ಲ ಅನ್ನಭಾಗ್ಯ ನ್ಯಾಯಬೆಲೆ ಅಂಗಡಿಗಳಲ್ಲಿ ಮುಖ್ಯಮಂತ್ರಿ ಹಾಗೂ ಆಹಾರ ಸಚಿವರ ಭಾವಚಿತ್ರ, ಧಾನ್ಯಗಳ ದರಪಟ್ಟಿ, ಲಭ್ಯವಿರುವ ದಾಸ್ತಾನು ಮತ್ತು ವಿತರಣಾ ದಿನಾಂಕವನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಪ್ರದರ್ಶಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ಮರಣ ಹೊಂದಿದ ಫಲಾನುಭವಿಗಳ ಖಾತೆಗೆ ಜಮೆಯಾಗಿರುವ ಹಣವನ್ನು ಸರ್ಕಾರಕ್ಕೆ ಮರಳಿ ವಸೂಲಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮರಣ ಹೊಂದಿದ ಫಲಾನುಭವಿಗಳ ಖಾತೆಯಿಂದ ಕುಟುಂಬದವರು ಎಟಿಎಂ ಮೂಲಕ ಹಣ ಪಡೆದಿದ್ದರೆ ಅದನ್ನು ಸರ್ಕಾರಕ್ಕೆ ಮರಳಿಸಬೇಕು. ಹಣ ಮರುಪಾವತಿಸದಿದ್ದರೆ ಮುಂದಿನ ಸರ್ಕಾರಿ ಸೌಲಭ್ಯಗಳನ್ನು ಸ್ಥಗಿತಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮುರಗಯ್ಯಾ ವಿರಕ್ತಮಠ, ಶಾಂತಪ್ಪ ಎಸ್. ಅಕ್ಕಿ, ರೇಹಾನ್ ರಝಾ ಐನಾಪೂರಿ, ರತ್ನಾ ತೇಗೂರಮಠ, ಸುಧೀರ ಎಸ್. ಬೋಳಾರ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊಗಲಬಾವಿ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ವಿನಾಯಕ ಕುರುಬರ, ಬಸಪ್ಪ ಮಹಾಬಲೇಶ್ವರ ಬಾವಕಾರ, ಮಂಜುನಾಥ ಮಾಯಣ್ಣವರ, ವರ್ಧಮಾನ ಹಿರೇಗೌಡರ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

“ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಗ್ಯಾರಂಟಿ ಯೋಜನೆಗಳ ಸೌಲಭ್ಯ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.”

ಎಸ್.ಆರ್. ಪಾಟೀಲ

ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ

ಯುವನಿಧಿ ಯೋಜನೆಯಡಿ 12,448 ಅರ್ಜಿಗಳು ಸ್ವೀಕೃತವಾಗಿದ್ದು, 10,350 ಫಲಾನುಭವಿಗಳಿಗೆ ಡಿಬಿಟಿ ಮೂಲಕ ₹32,08,57,000 ಸಹಾಯಧನ ಜಮೆಯಾಗಿದೆ. ಶಕ್ತಿ ಯೋಜನೆ ಆರಂಭವಾದ ಬಳಿಕ ಇದುವರೆಗೆ 41,13,76,389 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, ಸರ್ಕಾರ ₹907.77 ಕೋಟಿ ಬಿಡುಗಡೆ ಮಾಡಿದೆ. ಗೃಹಜ್ಯೋತಿ ಯೋಜನೆಯಡಿ 5,08,244 ಫಲಾನುಭವಿಗಳಿಗೆ ₹778.56 ಕೋಟಿ, ಗೃಹಲಕ್ಷ್ಮಿ ಯೋಜನೆಯಡಿ 3,77,912 ಫಲಾನುಭವಿಗಳಿಗೆ ₹2,194.80 ಕೋಟಿ ಹಾಗೂ ಅನ್ನಭಾಗ್ಯ ಯೋಜನೆಯಡಿ 3,75,996 ಫಲಾನುಭವಿಗಳಿಗೆ ₹362.51 ಕೋಟಿ ಬಿಡುಗಡೆ ಮಾಡಲಾಗಿದೆ.

ವ್ಯಾಪಾರಸ್ಥರ ಸಮಸ್ಯೆಗೆ ವಾಣಿಜ್ಯೋದ್ಯಮ ಸಂಸ್ಥೆ ಭರವಸೆ: ಪವನ್ ಚೋಪ್ರಾ

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಜಿಎಸ್‌ಟಿ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳು ಹಲವು ವರ್ಷಗಳ ಹಿಂದಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನೀಡುತ್ತಿರುವ ನೋಟಿಸ್‌ಗಳಿಂದ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದು, ಇಂತಹ ಪ್ರಕರಣಗಳಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಗತ್ಯ ನೆರವು ನೀಡಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಪವನ್ ಚೋಪ್ರಾ ಭರವಸೆ ನೀಡಿದರು.

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಮುಂಡರಗಿ ವ್ಯಾಪಾರಸ್ಥರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯಲ್ಲಿ ವ್ಯಾಪಾರಸ್ಥರು ಜಿಎಸ್‌ಟಿ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳು 5ರಿಂದ 6 ವರ್ಷಗಳ ಹಿಂದಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡುತ್ತಿರುವುದರಿಂದ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ ಎಂದು ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಪವನ್ ಚೋಪ್ರಾ, ಇಂತಹ ಪ್ರಕರಣಗಳಲ್ಲಿ ವ್ಯಾಪಾರಸ್ಥರು ಸಂಸ್ಥೆಯನ್ನು ಸಂಪರ್ಕಿಸಿದರೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ನ್ಯಾಯಸಮ್ಮತವಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮುಂಡರಗಿ ಭಾಗದಲ್ಲಿ ಯಾವುದೇ ಪ್ರಮುಖ ಕೈಗಾರಿಕೆಗಳಿಲ್ಲದ ಕಾರಣ ಹೊಸ ಕೈಗಾರಿಕಾ ಪ್ರದೇಶ ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ರೈತರು ಗೋವಿನಜೋಳ ಸೇರಿದಂತೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯಾಪ್ತಿಯ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡಿದರೆ ಸರ್ಕಾರದ ಪ್ರೋತ್ಸಾಹಧನದ ಲಾಭ ದೊರೆಯುವುದರ ಜೊತೆಗೆ ರೈತರು ಮತ್ತು ವ್ಯಾಪಾರಸ್ಥರ ನಡುವೆ ಉತ್ತಮ ಬಾಂಧವ್ಯ ಬೆಳೆಯಲಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸಿ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಿ ಸಾಧನೆ ಮಾಡಿದ ವ್ಯಾಪಾರಸ್ಥರ ಮಕ್ಕಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಇದೇ ವೇಳೆ ಮುಂಡರಗಿಯ ವರ್ತಕರಾದ ಗಿರೀಶ್ ಹಾವನಾಳ, ಕೋಟ್ರೇಶ್ ಸೇರಿದಂತೆ ಗಣ್ಯರನ್ನು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಗೌರವಿಸಲಾಯಿತು.

ಬೆಲೆ ಏರಿಕೆಯಿಂದ ಕಂಗೆಟ್ಟ ಜನರಿಗೆ ಮತ್ತೊಂದು ಶಾಕ್: ಶೀಘ್ರದಲ್ಲೇ ದುಬಾರಿಯಾಗಲಿದೆ ಸೇಬು ಹಣ್ಣು

ನವದೆಹಲಿ/ಬೆಂಗಳೂರು: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಮತ್ತೊಂದು ಆಘಾತ ಎದುರಾಗಿದೆ. ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯದ ಪರಿಣಾಮ ದೇಶದಲ್ಲಿ ಸೇಬು ಹಣ್ಣಿನ ಉತ್ಪಾದನೆ ಗಣನೀಯವಾಗಿ ಕುಸಿದಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸೇಬಿನ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಹಿಮಾಚಲ ಪ್ರದೇಶದಲ್ಲಿ ಕಳೆದ ವರ್ಷ 6.99 ಲಕ್ಷ ಮೆಟ್ರಿಕ್ ಟನ್ ಸೇಬು ಉತ್ಪಾದನೆಯಾಗಿದ್ದರೆ, ಈ ವರ್ಷ ಅದು ಕೇವಲ 2.63 ಲಕ್ಷ ಮೆಟ್ರಿಕ್ ಟನ್‌ಗೆ ಇಳಿದಿದೆ. ಅಂದರೆ ಉತ್ಪಾದನೆಯಲ್ಲಿ ಭಾರೀ ಕುಸಿತ ದಾಖಲಾಗಿದೆ.

ಸೇಬು ಬೆಳೆ ಪ್ರದೇಶದಲ್ಲೂ ಗಣನೀಯ ಇಳಿಕೆ ಕಂಡುಬಂದಿದೆ. 2025ರಲ್ಲಿ 2.37 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೇಬು ಬೆಳೆಯಲಾಗಿದ್ದರೆ, ಈ ವರ್ಷ ಅದು 1.16 ಲಕ್ಷ ಹೆಕ್ಟೇರ್‌ಗೆ ಸೀಮಿತವಾಗಿದೆ.

ಹಿಮಾಚಲ ಪ್ರದೇಶದಲ್ಲಿ ಸುಮಾರು 2.5 ಲಕ್ಷ ಕುಟುಂಬಗಳು ಸೇಬು ಬೆಳೆಯನ್ನು ಅವಲಂಬಿಸಿವೆ. ಆದರೆ ಔಷಧಿ, ರಸಗೊಬ್ಬರ ಸೇರಿದಂತೆ ಕೃಷಿ ವೆಚ್ಚ ಹೆಚ್ಚಳ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಅನೇಕ ರೈತರು ಈ ಬಾರಿ ಸೇಬು ಬೆಳೆಯಲು ಹಿಂದೇಟು ಹಾಕಿದ್ದಾರೆ.

ಈ ಎಲ್ಲ ಕಾರಣಗಳಿಂದಾಗಿ ಈ ವರ್ಷ ಸುಮಾರು 4.36 ಲಕ್ಷ ಮೆಟ್ರಿಕ್ ಟನ್ ಸೇಬಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಉತ್ಪಾದನೆ ಕಡಿಮೆಯಾಗಿರುವುದರಿಂದ ಮಾರುಕಟ್ಟೆಯಲ್ಲಿ ಪೂರೈಕೆ ಕುಂಠಿತವಾಗಿ, ಸೇಬಿನ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಮ್ ಮಾಧವ್ ವಿರುದ್ಧದ ಆರೋಪ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ʼಗೆ ಲೀಗಲ್ ನೋಟಿಸ್

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ನಾಯಕ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಯ ಬಿಜೆಪಿ ಉಸ್ತುವಾರಿ ರಾಮ್ ಮಾಧವ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಕಾನೂನು ನೋಟಿಸ್ ಜಾರಿಯಾಗಿದೆ.

ರಾಮ್ ಮಾಧವ್ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಹಾಗೂ ಅವರ ಸಾರ್ವಜನಿಕ ಪ್ರತಿಷ್ಠೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 356ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಅಲ್ಲದೆ, ತಮ್ಮ ಹೇಳಿಕೆಗೆ ಬೇಷರತ್ ಕ್ಷಮೆಯಾಚಿಸಬೇಕು ಎಂದು ನೋಟಿಸ್‌ನಲ್ಲಿ ಒತ್ತಾಯಿಸಲಾಗಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಬಿ.ಕೆ. ಹರಿಪ್ರಸಾದ್, ರಾಮ್ ಮಾಧವ್ ಅವರು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಕೊಲಂಬೊ ಮತ್ತು ಲಂಡನ್‌ನಲ್ಲಿ ನಾಲ್ಕು ರಹಸ್ಯ ಸಭೆಗಳನ್ನು ನಡೆಸಿದ್ದಾರೆ ಎಂದು ಆರೋಪಿಸಿದ್ದರು.

ಲಂಡನ್‌ನ ಹಿಲ್ಟನ್ ಹೋಟೆಲ್‌ನಲ್ಲಿ ಪಾಕಿಸ್ತಾನದ ಐಎಸ್‌ಐ ಮಾಜಿ ಮೇಜರ್ ಜನರಲ್ ಸೇರಿದಂತೆ ಕೆಲ ಅಧಿಕಾರಿಗಳೊಂದಿಗೆ ರಾಮ್ ಮಾಧವ್ ಸಭೆ ನಡೆಸಿದ್ದು, ಆ ಸಭೆಗಳಲ್ಲಿ ಏನು ಚರ್ಚೆಯಾಯಿತು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದರು.

ಇದೇ ವೇಳೆ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಸೂಚನೆಯ ಮೇರೆಗೆ ಪಾಕಿಸ್ತಾನದೊಂದಿಗೆ ಚರ್ಚೆಗಳು ನಡೆದಿವೆ ಎಂಬ ಆರೋಪವನ್ನೂ ಹರಿಪ್ರಸಾದ್ ಮಾಡಿದ್ದರು.

‘ಆಪರೇಷನ್ ಸಿಂಧೂರ್’ ನಡೆದ ಕೆಲವೇ ತಿಂಗಳಲ್ಲಿ ರಾಮ್ ಮಾಧವ್ ಲಂಡನ್‌ಗೆ ತೆರಳಿ ನಾಲ್ಕು ಸಭೆಗಳನ್ನು ನಡೆಸಿದ್ದಾರೆ. ಅವರು ಯಾವುದೇ ಸಂಸದ, ಶಾಸಕರಾಗಲಿ ಅಥವಾ ವಿದೇಶಾಂಗ ಸಚಿವಾಲಯದ ಸದಸ್ಯರಾಗಲಿ ಅಲ್ಲ. ಕೇವಲ ಆರ್‌ಎಸ್‌ಎಸ್ ಪ್ರಚಾರಕರಾಗಿರುವ ಅವರಿಗೆ ಇಂತಹ ಸಭೆಗಳನ್ನು ನಡೆಸುವ ಅಧಿಕಾರವನ್ನು ಯಾರು ನೀಡಿದರು ಎಂಬುದನ್ನು ದೇಶದ ಮುಂದೆ ಸ್ಪಷ್ಟಪಡಿಸಬೇಕು ಎಂದು ಹರಿಪ್ರಸಾದ್ ಪ್ರಶ್ನಿಸಿದ್ದರು.

ಈ ಹೇಳಿಕೆಗಳ ಬೆನ್ನಲ್ಲೇ ಇದೀಗ ರಾಮ್ ಮಾಧವ್ ಪರವಾಗಿ ಕಾನೂನು ನೋಟಿಸ್ ಜಾರಿಯಾಗಿದ್ದು, ಆರೋಪಗಳನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಲಾಗಿದೆ.

ಸರ್ಕಾರಿ ಶಾಲೆಯ ಗೇಟ್ ಕುಸಿದು ದುರಂತ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ, ಓರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರ

ಬಾಗಲಕೋಟೆ: ಸರ್ಕಾರಿ ಶಾಲೆಯ ಪ್ರವೇಶ ದ್ವಾರದ ಭಾರೀ ಗೇಟ್ ಏಕಾಏಕಿ ಬಿದ್ದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಬಲಕುಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಗಾಯಗೊಂಡ ನಾಲ್ವರಲ್ಲಿ ಮೂರನೇ ತರಗತಿ ವಿದ್ಯಾರ್ಥಿನಿ ನಯನಾಕುಮಾರಿ ಗಂಭೀರವಾಗಿ ಗಾಯಗೊಂಡಿದ್ದು, ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ರಕ್ತಸ್ರಾವವಾಗಿದೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಆಕೆಯನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳು ವಿದ್ಯಾರ್ಥಿಗಳು ಹಾಗೂ ಗಾಯಗೊಂಡ ಆಯಾಗೆ ಇಳಕಲ್ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಶಾಲೆಯ ಗೇಟ್ ತೆರೆಯುವ ವೇಳೆ ಅದರ ಕೊಂಡಿ ಕಳಚಿ, ಸುಮಾರು 5 ಕ್ವಿಂಟಲ್ ತೂಕದ ಕಬ್ಬಿಣದ ಗೇಟ್ ಏಕಾಏಕಿ ಕೆಳಗೆ ಬಿದ್ದಿದೆ. ಇದೇ ವೇಳೆ ಅಲ್ಲಿದ್ದ ಮಕ್ಕಳ ಮೇಲೆ ಗೇಟ್ ಬಿದ್ದ ಪರಿಣಾಮ ಅವಘಡ ಸಂಭವಿಸಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಇಳಕಲ್ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಜಾಸ್ಮಿನ್ ಕಿಲ್ಲೇದಾರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.

ಗಂಭೀರವಾಗಿ ಗಾಯಗೊಂಡ ನಯನಾಕುಮಾರಿಯ ಪೋಷಕರು ಮೂಲತಃ ಉತ್ತರ ಪ್ರದೇಶದವರಾಗಿದ್ದು, ಉದ್ಯೋಗ ನಿಮಿತ್ತ ಬಲಕುಂದಿಗೆ ವಲಸೆ ಬಂದು ನೆಲೆಸಿದ್ದಾರೆ. ವಿದ್ಯಾರ್ಥಿನಿಯ ತಂದೆ ಸ್ಥಳೀಯ ಟೈಲ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಮಗಳು ಶೀಘ್ರ ಗುಣಮುಖಳಾಗಲಿ ಎಂದು ಕುಟುಂಬಸ್ಥರು ಆಶಿಸುತ್ತಿದ್ದಾರೆ.

ಘಟನೆಯ ಬಳಿಕ ಶಾಲೆಯ ಕಟ್ಟಡ ಮತ್ತು ಮೂಲಸೌಕರ್ಯಗಳ ಸುರಕ್ಷತೆ ಕುರಿತು ಪ್ರಶ್ನೆಗಳು ಎದ್ದಿದ್ದು, ಇಂತಹ ಅವಘಡಗಳು ಮರುಕಳಿಸದಂತೆ ಶಾಲೆಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನಮ್ಮ ಸರ್ಕಾರದಂತೆ ಬೇರೆ ಯಾವುದೇ ರಾಜ್ಯದಲ್ಲಿ SIR ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗಕ್ಕೆ ಸಹಕಾರ ನೀಡಿಲ್ಲ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: “ಎಸ್ಐಆರ್ ಪ್ರಕ್ರಿಯೆಗೆ ನಮ್ಮ ವಿರೋಧವಿದ್ದರೂ ಜನರ ಮತದಾನದ ಹಕ್ಕು ರಕ್ಷಣೆಗಾಗಿ ನಮ್ಮ ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಇದು ಚುನಾವಣಾ ಆಯೋಗದ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ.

ಆದರೆ ಬಡವರು ಹಾಗೂ ಅಲ್ಪಸಂಖ್ಯಾತರ ಮತದಾನದ ಹಕ್ಕು ಕಸಿಯುವುದು ವಿರೋಧ ಪಕ್ಷಗಳ ಕುತಂತ್ರ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿರುಗೇಟು ನೀಡಿದರು. ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

ನಮ್ಮಂತೆ ಬೇರೆ ಯಾವುದೇ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಸಹಕಾರ ನೀಡಿಲ್ಲ

ಎಸ್ ಐಆರ್ ವಿಚಾರವಾಗಿ ಕುಮಾರಸ್ವಾಮಿ ಹಾಗೂ ಪ್ರಹ್ಲಾದ್ ಜೋಷಿ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿರುವ ಬಗ್ಗೆ ಕೇಳಿದಾಗ, “ಎಸ್ಐಆರ್ ವಿಚಾರದಲ್ಲಿ ನಮ್ಮದೇ ಆದ ಭಿನ್ನಾಭಿಪ್ರಾಯವಿದೆ. ನಾವು ಕೋರ್ಟ್ ನಲ್ಲಿ ನಮ್ಮ ವಾದ ಸಲ್ಲಿಸಿದ್ದು, ನ್ಯಾಯಾಲಯ ಈ ವಿಚಾರವಾಗಿ ತೀರ್ಪು ನೀಡಿದ್ದಾರೆ. ಈ ಪ್ರಕ್ರಿಯೆ ವೇಳಾಪಟ್ಟಿ ಬಗ್ಗೆ ನಮಗೆ ಅಸಮಾಧಾನವಿದ್ದು,

ಅದರ ವಿರುದ್ಧವೂ ಕೋರ್ಟ್ ಮೊರೆ ಹೋಗುತ್ತೇವೆ. ನಾವು ಎಲ್ಲರಿಗೂ ಮತದಾನದ ಹಕ್ಕು ರಕ್ಷಣೆ ಮಾಡಬೇಕು ಎಂದು ನಮ್ಮ ಸರ್ಕಾರ ಚುನಾವಣಾ ಆಯೋಗದ ಜೊತೆ ಕೈ ಜೋಡಿಸಿದೆ. ನಮ್ಮಂತೆ ಬೇರೆ ಯಾವುದೇ ರಾಜ್ಯದಲ್ಲಿ ಈ ರೀತಿ ಸಹಕಾರ ನೀಡಿಲ್ಲ. ನಿಮ್ಮ ಮತದಾನದ ಹಕ್ಕು, ಬದುಕಿನ ಹಕ್ಕು ಎಂದು ಹೇಳುವ ಮೂಲಕ ಜನರಿಗೆ ಮತದಾನದ ಹಕ್ಕು ಉಳಿಸಿಕೊಳ್ಳಲು ಸರ್ಕಾರ ಜಾಗೃತಿ ಮೂಡಿಸುತ್ತಿದ್ದೇವೆ” ಎಂದು ವಿವರಿಸಿದರು.

ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದನ್ನು ನೋಡಿ ವಿರೋಧ ಪಕ್ಷಗಳಿಗೆ ಭಯ

“ಎಲ್ಲಾ ಪಕ್ಷದವರು ಬಿಎಲ್ಎ2 ನೇಮಕ ಮಾಡಲು ಚುನಾವಣಾ ಆಯೋಗವೇ ಅವಕಾಶ ನೀಡಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜನತಾದಳದವರು ಬಿಎಲ್ಎ ನೇಮಕ ಮಾಡಿದ್ದಾರೆ. ಸಂಘ ಸಂಸ್ಥೆಗಳು ನೆರವು ನೀಡಲು ಅವಕಾಶ ಕಲ್ಪಿಸಲಾಗಿದೆ. ಅಧಿಕಾರಿಗಳು ತಮಗೆ ಆಯೋಗದಿಂದ ಬಂದಿರುವ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದನ್ನು ನೋಡಿ ವಿರೋಧ ಪಕ್ಷಗಳಿಗೆ ಭಯ ಶುರುವಾಗಿದೆ. ಚುನಾವಣಾ ಆಯೋಗದ ಮೇಲೆ ಅವರಿಗೇ ನಂಬಿಕೆ ಇಲ್ಲ ಎಂದು ಅವರು ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ರದ್ದು ಮಾಡಲು ಹೇಳುತ್ತಿದ್ದಾರೆ. ಇದು ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ” ಎಂದು ತಿಳಿಸಿದರು.

ಅವರು ಅಧಿಕಾರದಲ್ಲಿದ್ದಾಗ ಅಕ್ರಮ ವಲಸಿಗರನ್ನು ಯಾಕೆ ಓಡಿಸಲಿಲ್ಲ?

“ರಾಜ್ಯದಲ್ಲಿ ಸುಮಾರು 4.50 ಕೋಟಿ ಜನ ಜಾತಿ ಪ್ರಮಾಣಪತ್ರ ತೆಗೆದುಕೊಂಡಿದ್ದಾರೆ. ಇದನ್ನು ಆನ್ ಲೈನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದೇವೆ. ಇನ್ನು ನಿವಾಸ ದೃಢೀಕರಣ ಪತ್ರ ನೀಡಲು ಉಪ ತಹಶೀಲ್ದಾರ್ ಅವರಿಗೆ ಅಧಿಕಾರ ನೀಡಲಾಗಿದೆ.

2002ನೇ ಮತಪತ್ರ ದಾಖಲೆ ಯಾರ ಬಳಿಯೂ ಇರುವುದಿಲ್ಲ. ಇದನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಸರ್ಕಾರ ಕರ್ನಾಟಕ ಜನರ ಮತದಾನದ ಹಕ್ಕು ಉಳಿಸಿಕೊಳ್ಳಲು ಕರೆ ನೀಡುತ್ತಿದೆ. ವಿರೋಧ ಪಕ್ಷಗಳು ಸುಮ್ಮನೆ ಅಕ್ರಮ ಬಾಂಗ್ಲಾ ವಲಸಿಗರು ಎಂದು ಹೇಳುತ್ತಿದ್ದಾರೆ. ನಿಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ಯಾಕೆ ಅವರನ್ನು ಓಡಿಸಲಿಲ್ಲ? ಆಗ ಯಾರು ತಡೆದಿದ್ದರು?” ಎಂದು ಪ್ರಶ್ನಿಸಿದರು.

ರಾಜಕೀಯ ಮಾಡುವವರು, ಟೀಕೆ ಮಾಡುವವರನ್ನು ಬೇಡ ಎನ್ನಲು ಸಾಧ್ಯವೇ?

“ಮನಮೋಹನ್ ಸಿಂಗ್ ಅವರು ದೇಶದ ಜನರಿಗಾಗಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದರು. ಬಿಜೆಪಿಯವರು ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಮತದಾನದ ಹಕ್ಕು ಇಲ್ಲದವರಿಗೆ ಆಹಾರ ಪೂರೈಕೆ ಮಾಡುವುದಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ನಾವು ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಆಸರೆಯಾಗಲಿ ಎಂದು ಐದು ಗ್ಯಾರಂಟಿ ಯೋಜನೆ ನೀಡಲಾಗಿದೆ.

ನಮ್ಮ ಯೋಜನೆಯನ್ನು ಬಿಜೆಪಿಯವರು ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. ಚುನಾವಣೆಗೂ ಮುನ್ನ ಐದರಿಂದ ಹತ್ತು ತಿಂಗಳ ಹಣವನ್ನು ಹಾಕುತ್ತಿದ್ದಾರೆ. ಇದು ನನ್ನ ವೈಯಕ್ತಿಕ ವಿಚಾರವಲ್ಲ. ಮೊದಲ ಬಾರಿಗೆ ಪ್ರತಿ ಬೂತ್ ನಲ್ಲಿ ಜನರಿಗಾಗಿ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ. ನಮ್ಮ ಕಾರ್ಯಕ್ಕೆ ಅವರು ಅಭಿನಂದನೆ ಸಲ್ಲಿಸಬೇಕು. ಬರಲಿ ತನಿಖೆ ಮಾಡಲಿ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಎಲ್ಎ ನೇಮಕಾತಿಗೆ ಅವಕಾಶವಿದೆ. ಶಾಸಕರು, ಪರಾಜಿತ ಅಭ್ಯರ್ಥಿಗಳಿಗೆ ಮತಪಟ್ಟಿ ರಕ್ಷಣೆ ಬಗ್ಗೆ ಮಾರ್ಗದರ್ಶನ ನೀಡುವುದು ನಮ್ಮ ಕರ್ತವ್ಯವಲ್ಲವೇ? ರಾಜಕಾರಣ ಮಾಡುವವರಿಗೆ, ಟೀಕೆ ಮಾಡುವವರಿಗೆ ಬೇಡ ಎನ್ನಲು ಸಾಧ್ಯವೇ? ಎಲುಬಿಲ್ಲದ ನಾಲಿಗೆ. ಅವರ ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ. ರಾಜ್ಯದ ಜನರಿಗೆ ಮತದಾನದ ಹಕ್ಕು ನೀಡುವುದು ನಮ್ಮ ಸರ್ಕಾರದ ಗುರಿ. ಈ ಪ್ರಕ್ರಿಯೆಗೆ ನಮ್ಮ ವಿರೋಧವಿದ್ದರೂ ಜನರ ಹಕ್ಕು ರಕ್ಷಣೆಗೆ ನಾವು ಕೆಲಸ ಮಾಡುತ್ತಿದ್ದೇವೆ” ಎಂದು ತಿರುಗೇಟು ನೀಡಿದರು.

“ನಾನು ಪರಮೇಶ್ವರ್ ಅವರು ಬೀದರ್ ಗೆ ಹೋಗುತಿದ್ದು, ಬಸವಣ್ಣನವರ ಅನುಭವ ಮಂಟಪಕ್ಕೆ ಹೋಗುತ್ತಿದ್ದು, ಕಲಬುರ್ಗಿ ವಿಭಾಗದಲ್ಲಿ ಮಳೆ ಕೊರತೆ ಪರಿಸ್ಥಿತಿ ಪರಿಶೀಲನೆ ಮಾಡಲಿದ್ದೇವೆ. ರಾಜ್ಯದ ಕೆಲವು ಭಾಗಗಳಲ್ಲಿ ಈಗ ಮಳೆ ಸುಧಾರಣೆ ಕಾಣುತ್ತಿದೆ. ಆಲಮಟ್ಟಿ ಹಾಗೂ ತುಂಗಭದ್ರಾ ಅಣೆಕಟ್ಟಿನ ಒಳಹರಿವು ಬರುತ್ತಿದೆ. ಕುಡಿಯುವ ನೀರಿಗೆ ಆದ್ಯತೆ ನೀಡುವ ಕೆಲಸ ಮಾಡುತ್ತೇವೆ” ಎಂದು ಹೇಳಿದರು.