Home Blog Page 56

SIR ಪ್ರಕ್ರಿಯೆ ಬುಡಮೇಲು ಮಾಡಲು ಷಡ್ಯಂತ್ರ ನಡೆಯುತ್ತಿದೆ: ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ–ಜೆಡಿಎಸ್ ನಿಯೋಗ ದೂರು

ಬೆಂಗಳೂರು: ನ್ಯಾಯಸಮ್ಮತವಾಗಿ ನಡೆಯಬೇಕಾದ ಎಸ್‍ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬುಡಮೇಲು ಮಾಡುವ ಬಹುದೊಡ್ಡ ಷಡ್ಯಂತ್ರವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಆರೋಪಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ, ಜೆಡಿಎಸ್ ನಿಯೋಗದಿಂದ ದೂರು ಸಲ್ಲಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಎಸ್‍ಐಆರ್‍ನಲ್ಲಿ ಅಕ್ರಮ ಮಾಡಲಾಗುತ್ತಿದೆ. ಇದರ ವಿರುದ್ಧ ಪ್ರತಿಭಟಿಸಿ ಮನವಿ ನೀಡಲಾಗಿದೆ ಎಂದರು.

ಅಕ್ರಮವಾಗಿ ವಾಟ್ಸ್ ಅಪ್ ಗ್ರೂಪ್ ರಚನೆ…

ಎಸ್‍ಐಆರ್ ಸಂಬಂಧ ಅಕ್ರಮವಾಗಿ ವಾಟ್ಸ್ ಅಪ್ ಗ್ರೂಪ್ ಮಾಡಿ ಮಾಹಿತಿ ರವಾನೆ ಮಾಡಲಾಗುತ್ತಿದೆ. ತಮಗೆ ಬೇಕಾದ ಪ್ರದೇಶ, ಮದರಸಾ ಹಾಗೂ ಮಸೀದಿಗಳಲ್ಲಿ ಎಸ್‍ಐಆರ್ ನಡೆಸಲಾಗುತ್ತಿದೆ. ಬಹುತೇಕ ಕಡೆ ಹಿಂದಿನ ಚುನಾವಣಾ ಪ್ರತಿನಿಧಿಗಳ ಮನೆಯಲ್ಲಿ ಒಂದೇ ಒಂದು ಸಮುದಾಯ ವಿಶೇಷವಾಗಿ ಮುಸ್ಲಿಂ ಮುಖಂಡರ ಕೈಲಿ ಓಣಿಯಲ್ಲಿ ಹಾಗೂ ಬೂತ್ ನಲ್ಲಿ ಅವರೇ ಹೋಗಿ ಎಸ್‍ಐಆರ್ ಮಾಡಿಕೊಂಡು ಬರುವ ಹಾಗೆ ಮಾಡಲಾಗುತ್ತಿದೆ. ಬಿಎಲ್‍ಎಗಳಿಗೆ ಬಿಎಲ್‍ಒಗಳು ಮಾಹಿತಿ ನೀಡುತ್ತಿಲ್ಲ. ಅನೇಕ ಕಡೆ ಮಾಹಿತಿ ನೀಡಲು ಆಗಲ್ಲ ಅಂತ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಈ ಮೊದಲು ನಾವು ಬೇರೆ ಬೇರೆ ವೇಳೆ ದೂರು ನೀಡಿದ್ದೇವೆ. ಈಗ ಉನ್ನತ ಮಟ್ಟದ ನಿಯೋಗದಿಂದ ದೂರು ನೀಡಿ ತೀವ್ರ ಆಗ್ರಹ ಮಾಡಿದ್ದೇವೆ. ಆದರೂ ಯಾವುದೇ ಕ್ರಮ ಆಗಿಲ್ಲ. ಸ್ಥಳೀಯ ಶಾಸಕರ ಚಿತ್ರವನ್ನು ಬಿಎಲ್‍ಒಗಳೇ ಹಾಕಿ ಪ್ರಚಾರ ಮಾಡ್ತ ಇದ್ದಾರೆ. ಇಂತಹವರ ವಿರುದ್ಧ ಕ್ರಮವಾಗಬೇಕು. ಎಲ್ಲೆಲ್ಲಿ ಅಕ್ರಮವಾಗಿ ಎಸ್‍ಐಆರ್ ಆಗಿದೆ ಅದನ್ನು ರದ್ದು ಮಾಡಿ ಮತ್ತೆ ಎಸ್‍ಐಆರ್ ಆಗಬೇಕು ಎಂದು ಒತ್ತಾಯಿಸಿದರು.

ಬಾಂಗ್ಲಾ ನುಸುಳುಕೋರರನ್ನು ಸೇರಿಸುವ ಹುನ್ನಾರ…

ಎಸ್‍ಐಆರ್ ಉದ್ದೇಶವನ್ನು ಬದಿಗಿಟ್ಟು ಬಾಂಗ್ಲಾದೇಶದ ಅಕ್ರಮ ನುಸುಳುಕೋರರನ್ನು ಮತಪಟ್ಟಿಗೆ ಸೇರಿಸುವ ಹುನ್ನಾರವನ್ನು ಸರ್ಕಾರ ನಡೆಸಿದೆ. ಪಶ್ಚಿಮ ಬಂಗಾಳದಲ್ಲಿ ಎಸ್‍ಐಆರ್ ನಂತರ ರಾಜ್ಯಕ್ಕೆ ಓಡಿ ಬಂದ ಬಾಂಗ್ಲಾದೇಶದವರನ್ನು ಇಲ್ಲಿ ಸೇರಿಸುವ ಸಂಚು ಮಾಡಲಾಗುತ್ತಿದೆ ಎಂದರು.

ಎಸ್‍ಐಆರ್ ನಲ್ಲಿ ಮ್ಯಾಪಿಂಗ್ ಮಾಡುವಾಗ ತಂದೆ ತಾಯಿ ಹೀಗೆ ಕೆಲವರ ಸಂಬಂಧ ಮಾತ್ರ ಇರಬೇಕು. ಆದರೆ ಬೇರೆ ಬೇರೆ ಸಂಬಂಧಿಗಳನ್ನು ಸೇರಿಸಲಾಗುತ್ತಿದೆ. ಇದು ನಡೆಯಬಾರದು. ಮೋಸದಿಂದ ಎಸ್‍ಐಆರ್ ನಡೆದರೆ ದೇಶದ ಭದ್ರತೆಗೆ ಧಕ್ಕೆಯಾಗಲಿದೆ. ಎಸ್‍ಐಆರ್‍ನಲ್ಲಿ ಹೆಸರು ತೆಗೆದುಹಾಕಿದರೆ ಗ್ಯಾರಂಟಿ ಕೊಡಲ್ಲ ಅಂತ ಮುಖ್ಯಮಂತ್ರಿಗಳು ಬೇಕೆಂತಲೇ ಹೇಳಿದ್ದಾರೆ. ಇದರ ಉದ್ದೇಶ ಏನು ಎಂದು ತಿಳಿಯಬೇಕು. ಇದನ್ನು ಈಗ ಏಕೆ ಘೋಷಣೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ಜನರನ್ನು ಹಿಂಡು ಹಿಂಡಾಗಿ ಸೇರಿಸಿ ಅರ್ಜಿ ತುಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದಲ್ಲದೆ ಜಿಬಿಎಯ ಕೆಲವು ವಾರ್ಡ್‍ಗಳಲ್ಲಿ ಸಮಾನಾಂತರ ಎಸ್‍ಐಆರ್ ಅನ್ನು ಸಹ ನಡೆಸಲಾಗುತ್ತಿದೆ. ಇದು ನಿಲ್ಲಬೇಕು ಎಂದರು. ಚುನಾವಣಾ ಆಯೋಗ ಕತ್ತೆ ಕಾಯುತ್ತಿಲ್ಲ. ಕತ್ತೆ ಕಾಯಲು ಯೋಗ್ಯತೆ ಇಲ್ಲದ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಎಸ್‍ಐಆರ್ ಅನ್ನು ಬುಡಮೇಲು ಮಾಡುತ್ತಿದೆ ಎಂದು ದೂರಿದರು.

ಬೆಂಗಳೂರಲ್ಲಿ ನೀರಿನ ಸಮರ್ಪಕ ಬಳಕೆಗೆ ಜಲಮಂಡಳಿಯ 3 ಹೊಸ ನಿಯಮ ಜಾರಿ: ಉಲ್ಲಂಘಿಸಿದ್ರೆ ₹5,000 ದಂಡ

ಬೆಂಗಳೂರು: ಮುಂಗಾರು ಮಳೆಯ ಕೊರತೆಯಿಂದ ರಾಜಧಾನಿಯಲ್ಲಿ ನೀರಿನ ಅಭಾವ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮೂರು ಮಹತ್ವದ ಆದೇಶಗಳನ್ನು ಜಾರಿಗೊಳಿಸಿದೆ ಎಂದು ಜಲಮಂಡಳಿ ಅಧ್ಯಕ್ಷೆ ಡಾ. ಮಂಜುಳಾ ತಿಳಿಸಿದ್ದಾರೆ.

ನಗರದಲ್ಲಿ ನೀರಿನ ಸಮರ್ಪಕ ನಿರ್ವಹಣೆ, ಮಿತವ್ಯಯದ ಬಳಕೆ ಹಾಗೂ ದೀರ್ಘಾವಧಿಯ ಜಲ ಭದ್ರತೆಯನ್ನು ಖಚಿತಪಡಿಸುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಏರೇಟರ್ ಅಳವಡಿಕೆ ಕಡ್ಡಾಯ

ಮನೆಗಳು, ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಕಟ್ಟಡಗಳು, ಸರ್ಕಾರಿ ಕಚೇರಿಗಳು, ಹೋಟೆಲ್‌ಗಳು ಹಾಗೂ ಕೈಗಾರಿಕೆಗಳು ಸೇರಿದಂತೆ ನೀರು ಬಳಸುವ ಎಲ್ಲಾ ಕಟ್ಟಡಗಳಲ್ಲಿ ಏರೇಟರ್ (Flow Restrictor/Aerator) ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಏರೇಟರ್ ಬಳಕೆಯಿಂದ ನೀರಿನ ಬಳಕೆ ಶೇ.30ರಿಂದ 50ರವರೆಗೆ ಕಡಿಮೆಯಾಗಲಿದ್ದು, ಬಳಕೆದಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಜಲಮಂಡಳಿ ತಿಳಿಸಿದೆ.

ಕುಡಿಯುವ ನೀರಿನ ದುರ್ಬಳಕೆಗೆ ನಿರ್ಬಂಧ

ವಾಹನ ತೊಳೆಯುವುದು, ಉದ್ಯಾನಗಳಿಗೆ ನೀರು ಹಾಯಿಸುವುದು, ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಸ್ವಚ್ಛತೆ, ಕಟ್ಟಡ ನಿರ್ಮಾಣ ಕಾಮಗಾರಿಗಳು ಸೇರಿದಂತೆ ಕುಡಿಯುವ ನೀರಲ್ಲದ ಉದ್ದೇಶಗಳಿಗೆ ಶುದ್ಧ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಇಂತಹ ಅಗತ್ಯಗಳಿಗೆ ಕಡ್ಡಾಯವಾಗಿ ಸಂಸ್ಕರಿತ ನೀರನ್ನು ಬಳಸುವಂತೆ ಸೂಚಿಸಲಾಗಿದೆ.

ಈಜುಕೊಳಗಳಿಗೆ ಕುಡಿಯುವ ನೀರು ನಿಷೇಧ

ನಗರದ ಖಾಸಗಿ ಹಾಗೂ ಸಾರ್ವಜನಿಕ ಈಜುಕೊಳಗಳನ್ನು ಕುಡಿಯುವ ನೀರಿನಿಂದ ತುಂಬಿಸುವುದಕ್ಕೂ ನಿರ್ಬಂಧ ಹೇರಲಾಗಿದೆ. ಈಜುಕೊಳಗಳಿಗೆ ಅಗತ್ಯವಿರುವ ನೀರನ್ನು ಸಂಸ್ಕರಿತ ನೀರು ಅಥವಾ ಇತರೆ ಪರ್ಯಾಯ ಮೂಲಗಳಿಂದಲೇ ಪಡೆಯಬೇಕು ಎಂದು ಆದೇಶಿಸಲಾಗಿದೆ.

ನಿಯಮ ಉಲ್ಲಂಘಿಸಿದರೆ ದಂಡ

ಈ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ–1964ರ ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಜಲಮಂಡಳಿ ಸರಬರಾಜು ಮಾಡುತ್ತಿರುವ ನೀರಿನ ಪ್ರಮಾಣದಲ್ಲಿ ಶೇ.50ರವರೆಗೆ ಕಡಿತಗೊಳಿಸುವುದರ ಜೊತೆಗೆ ₹5,000 ದಂಡ ವಿಧಿಸಲಾಗುತ್ತದೆ. ಉಲ್ಲಂಘನೆ ಮುಂದುವರಿದರೆ ಪ್ರತಿದಿನ ₹500 ಹೆಚ್ಚುವರಿ ದಂಡ ವಿಧಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಡಾ. ಮಂಜುಳಾ, “ಕುಡಿಯುವ ನೀರು ಪ್ರತಿಯೊಬ್ಬರಿಗೂ ಸೇರಿದ ಅಮೂಲ್ಯ ನೈಸರ್ಗಿಕ ಸಂಪತ್ತು. ಅದರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು, ಏರೇಟರ್ ಅಳವಡಿಸಬೇಕು ಹಾಗೂ ಕುಡಿಯುವ ನೀರಿನ ದುರ್ಬಳಕೆ ತಪ್ಪಿಸಿ ಜಲ ಸಂರಕ್ಷಣೆಯ ಜನಾಂದೋಲನಕ್ಕೆ ಕೈಜೋಡಿಸಬೇಕು” ಎಂದು ಮನವಿ ಮಾಡಿದ್ದಾರೆ.

ಆಸ್ತಿ ವ್ಯವಹಾರ ರದ್ದಾದರೆ ಮುದ್ರಾಂಕ, ನೋಂದಣಿ ಶುಲ್ಕ ಮರುಪಾವತಿಸಬೇಕು: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಖರೀದಿ ವ್ಯವಹಾರ ರದ್ದಾದರೆ, ಮುಂಗಡವಾಗಿ ಪಾವತಿಸಿರುವ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಮರುಪಾವತಿಗೆ ಸಲ್ಲಿಸಿದ ಅರ್ಜಿಯನ್ನು ಕೇವಲ ವಿಳಂಬದ ನೆಪದಲ್ಲಿ ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಬೆಳಗಾವಿಯ ಗೋಪಾಲರಾವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ, ವಿಳಂಬದ ಕಾರಣ ನೀಡಿ ಮರುಪಾವತಿ ಅರ್ಜಿಯನ್ನು ತಿರಸ್ಕರಿಸಿದ್ದ ಜಿಲ್ಲಾ ನೋಂದಣಾಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ, ಅರ್ಜಿದಾರರ ಮನವಿಯನ್ನು ಎಂಟು ವಾರಗಳೊಳಗೆ ಹೊಸದಾಗಿ ಪರಿಶೀಲಿಸಿ ಸೂಕ್ತ ಆದೇಶ ಹೊರಡಿಸುವಂತೆ ನಿರ್ದೇಶನ ನೀಡಿದೆ.

ತೀರ್ಪಿನಲ್ಲಿ, ಕರ್ನಾಟಕ ಮುದ್ರಾಂಕ ಕಾಯ್ದೆ–1957ರ ಸೆಕ್ಷನ್ 52ಎ ಅಡಿಯಲ್ಲಿ ಮುದ್ರಾಂಕ ಶುಲ್ಕ ಮರುಪಾವತಿಗೆ ಯಾವುದೇ ನಿರ್ದಿಷ್ಟ ಕಾಲಮಿತಿಯನ್ನು ಕಾನೂನು ವಿಧಿಸಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಯಾವುದೇ ಕಾನೂನು ಅಥವಾ ಸುತ್ತೋಲೆಯ ಆಧಾರವಿಲ್ಲದೆ ಅಧಿಕಾರಿಗಳು ಒಂದು ವರ್ಷದ ಕಾಲಮಿತಿಯನ್ನು ಹೇರಿರುವುದು ಕಾನೂನುಬಾಹಿರ ಎಂದು ಹೇಳಿದೆ.

ಇದಲ್ಲದೆ, ಕರ್ನಾಟಕ ನೋಂದಣಿ ನಿಯಮಗಳು–1965ರ ನಿಯಮ 193ರ ಪ್ರಕಾರ ನೋಂದಣಿ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಳ್ಳುವ ಮುನ್ನ ದಾಖಲೆಗಳನ್ನು ಹಿಂಪಡೆಯುವ ಹಕ್ಕು ಅರ್ಜಿದಾರರಿಗೆ ಇದೆ. ವ್ಯವಹಾರವೇ ರದ್ದಾದ ಸಂದರ್ಭದಲ್ಲಿ ಸಾರ್ವಜನಿಕರ ಹಣವನ್ನು ಸರ್ಕಾರ ತನ್ನ ಬಳಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನಿಯಮಾನುಸಾರ ನಕಲು ವೆಚ್ಚ ಹಾಗೂ ನೋಂದಣಿ ಶುಲ್ಕದ ಅರ್ಧದಷ್ಟನ್ನು ಕಡಿತಗೊಳಿಸಿ ಉಳಿದ ಮೊತ್ತವನ್ನು ಖರೀದಿದಾರರಿಗೆ ಮರುಪಾವತಿಸಬೇಕು. ಉದ್ದೇಶಿತ ಆಸ್ತಿ ವ್ಯವಹಾರ ಮಧ್ಯದಲ್ಲೇ ಕೈಬಿಟ್ಟರೆ ಸಾರ್ವಜನಿಕರಿಗೆ ನ್ಯಾಯಸಮ್ಮತ ಪರಿಹಾರ ಒದಗಿಸುವುದೇ ಕಾನೂನಿನ ಆಶಯ ಎಂದು ಹೈಕೋರ್ಟ್ ತಿಳಿಸಿದೆ.

ಪ್ರಕರಣದ ಹಿನ್ನೆಲೆ:

ಅರ್ಜಿದಾರ ಗೋಪಾಲರಾವ್ ಅವರು ಬೆಳಗಾವಿಯಲ್ಲಿ ವಸತಿ ನಿವೇಶನ ಖರೀದಿಸಲು ಮುಂದಾಗಿ, ಮುದ್ರಾಂಕ ಮತ್ತು ನೋಂದಣಿ ಶುಲ್ಕ ಸೇರಿ ಒಟ್ಟು 5,88,112 ರೂಪಾಯಿಯನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಿದ್ದರು.

ಆದರೆ ನೋಂದಣಿ ಪ್ರಕ್ರಿಯೆ ವೇಳೆ ಉಪನೋಂದಣಾಧಿಕಾರಿಗಳು ಆಸ್ತಿಯ ಮಾರುಕಟ್ಟೆ ಮೌಲ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪ್ರಕರಣವನ್ನು ಪ್ರಾದೇಶಿಕ ಆಯುಕ್ತರಿಗೆ ಕಳುಹಿಸಿದ್ದರು. ಬಳಿಕ ಹೆಚ್ಚಿದ ಮೌಲ್ಯದಿಂದ ವ್ಯವಹಾರ ಆರ್ಥಿಕವಾಗಿ ಲಾಭದಾಯಕವಲ್ಲ ಎಂದು ತಿಳಿದ ಗೋಪಾಲರಾವ್, ಖರೀದಿಯಿಂದ ಹಿಂದೆ ಸರಿದು ನೋಂದಣಿ ಪ್ರಕ್ರಿಯೆಯನ್ನು ಹಿಂಪಡೆದಿದ್ದರು.

ನಂತರ ಪಾವತಿಸಿದ ಹಣವನ್ನು ಮರುಪಾವತಿಸುವಂತೆ ಅರ್ಜಿ ಸಲ್ಲಿಸಿದ್ದರೂ, ದಾಖಲೆ ಸಲ್ಲಿಕೆಯಾದ ಒಂದು ವರ್ಷದ ಬಳಿಕ ಅರ್ಜಿ ನೀಡಲಾಗಿದೆ ಎಂಬ ತಾಂತ್ರಿಕ ಕಾರಣ ನೀಡಿ ಅಧಿಕಾರಿಗಳು ಮನವಿಯನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದು, ಇದೀಗ ನ್ಯಾಯಾಲಯ ಅವರ ಪರವಾಗಿ ಮಹತ್ವದ ಆದೇಶ ನೀಡಿದೆ.

ಇನ್ಮುಂದೆ ರಾಜ್ಯದಲ್ಲಿ RSS ಪಥಸಂಚಲನಕ್ಕೆ ಅನುಮತಿ ಕಡ್ಡಾಯ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ನಡೆಸುವ ಪಥಸಂಚಲನಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆಯೊಂದಿಗೆ ಆರ್‌ಎಸ್‌ಎಸ್‌ ಮತ್ತು ರಾಜ್ಯ ಸರ್ಕಾರದ ನಡುವಿನ ಭಿನ್ನಾಭಿಪ್ರಾಯ ಮತ್ತೊಮ್ಮೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, “ನಾನು ಗೃಹ ಸಚಿವನಾಗಿ ಇರುವವರೆಗೂ ರಾಜ್ಯದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ಕಡ್ಡಾಯ. ಈ ಕುರಿತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಈಗಾಗಲೇ ಪತ್ರ ಬರೆದಿದ್ದೇನೆ” ಎಂದು ತಿಳಿಸಿದ್ದಾರೆ.

“100 ವರ್ಷಗಳ ಇತಿಹಾಸವಿರುವ ಸಂಘಟನೆ ಎಂದು ಹೇಳಿಕೊಳ್ಳುವ ಆರ್‌ಎಸ್‌ಎಸ್‌ನ ದಾಖಲೆಗಳು ಎಲ್ಲೋ ಇರುತ್ತವೆ. ಅವುಗಳನ್ನು ಹುಡುಕಿ ತರುವಂತೆ ಕೇಳಿದ್ದೇವೆ. ಇಷ್ಟಕ್ಕೆ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ಕಲೆಹಾಕಲು ಆರಂಭಿಸಿದ್ದಾರೆ. ನಾನು ಯಾರನ್ನು ಮದುವೆಯಾಗಿದ್ದೇನೆ, ನನ್ನ ಮಕ್ಕಳು ಯಾರು, ನಾನು ಕಪ್ಪಾಗಿದ್ದೇನಾ, ಬೆಳ್ಳಗಿದ್ದೇನಾ ಎಂಬುದನ್ನೂ ಹುಡುಕುತ್ತಿದ್ದಾರೆ. ಆದರೆ ಇಂತಹ ವಿಚಾರಗಳಿಗೆ ನಾನು ಹೆದರುವ ವ್ಯಕ್ತಿಯಲ್ಲ” ಎಂದು ಅವರು ವಾಗ್ದಾಳಿ ನಡೆಸಿದರು.

ಗಮನಾರ್ಹವಾಗಿ, ಈ ಹಿಂದೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ಹಾಗೂ ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಸಂಘದ ನಡುವೆ ತೀವ್ರ ವಿವಾದ ಉಂಟಾಗಿದ್ದು, ಈ ವಿಚಾರ ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು.

ಆರ್‌ಎಸ್‌ಎಸ್‌ನ ಆರ್ಥಿಕ ವ್ಯವಹಾರಗಳ ಕುರಿತೂ ಪ್ರಶ್ನೆ ಎತ್ತಿದ ಪ್ರಿಯಾಂಕ್ ಖರ್ಗೆ, “ಆರ್‌ಎಸ್‌ಎಸ್‌ ಧ್ವಜದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುತ್ತದೆ. ಹಾಗಾದರೆ ಆ ದೇಣಿಗೆಯ ಲೆಕ್ಕವನ್ನು ಕೇಳಬಾರದಾ? ಯಾರ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ ಎಂಬುದಕ್ಕೂ ಉತ್ತರ ಇರಬೇಕು” ಎಂದು ಹೇಳಿದರು.

“ನಾಳೆ ಯಾರಾದರೂ ಒಂದು ಧ್ವಜದ ಹೆಸರಿನಲ್ಲಿ ಸಂಘಟನೆ ಆರಂಭಿಸಿ ಚಂದಾ ಸಂಗ್ರಹಿಸಿದರೆ ಆದಾಯ ತೆರಿಗೆ ಇಲಾಖೆ (ಐಟಿ) ಅಥವಾ ಜಾರಿ ನಿರ್ದೇಶನಾಲಯ (ಇಡಿ) ಸುಮ್ಮನೆ ಕೂರುತ್ತದೆಯೇ? ಎಲ್ಲರಿಗೂ ಒಂದೇ ರೀತಿಯ ನಿಯಮ ಅನ್ವಯವಾಗಬೇಕು” ಎಂದು ಗೃಹ ಸಚಿವರು ಅಭಿಪ್ರಾಯಪಟ್ಟರು.

ರಾಮನ ಹುಂಡಿ ಹಣ ಕದ್ದು ಐಷಾರಾಮಿ ಜೀವನ; ಗರ್ಲ್ ಫ್ರೆಂಡ್ ಗೆ ಲಕ್ಷಾಂತರ ಹಣ, ಐಫೋನ್ ಗಿಫ್ಟ್ ನೀಡಿದ ಆರೋಪಿ

ಅಯೋಧ್ಯೆ: ರಾಮಮಂದಿರದ ಹುಂಡಿ ಹಣ ದುರುಪಯೋಗ ಪ್ರಕರಣದ ತನಿಖೆಯಲ್ಲಿ ಬೆಚ್ಚಿಬೀಳಿಸುವ ಸಂಗತಿಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಪ್ರಮುಖ ಆರೋಪಿ ಅವಿನಾಶ್ ಶುಕ್ಲಾ ಕದ್ದ ಹಣದಿಂದ ಐಷಾರಾಮಿ ಜೀವನ ನಡೆಸಿದ್ದು, ತನ್ನ ಗರ್ಲ್‌ಫ್ರೆಂಡ್‌ಗೆ ಲಕ್ಷಾಂತರ ರೂಪಾಯಿ ವರ್ಗಾವಣೆ ಮಾಡಿ ದುಬಾರಿ ಐಫೋನ್ ಉಡುಗೊರೆಯಾಗಿ ನೀಡಿದ್ದಾನೆ ಎಂಬುದು ವಿಶೇಷ ತನಿಖಾ ತಂಡ (SIT) ತನಿಖೆಯಲ್ಲಿ ಬಹಿರಂಗವಾಗಿದೆ.

ತಿಂಗಳಿಗೆ ಕೇವಲ 15 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ ಅವಿನಾಶ್, ರಾಮಮಂದಿರದ ದೇಣಿಗೆ ಹಣ ಕದ್ದು ಅದರಿಂದ ಹೊಸ ಮನೆ ನಿರ್ಮಿಸಿ, ಕಾರು ಖರೀದಿಸಿದ್ದಾನೆ. ಅನುಮಾನ ಬರದಂತೆ ಕಾರನ್ನು ತನ್ನ ಸಹೋದರ ಅಭಿಷೇಕ್ ಹೆಸರಿನಲ್ಲಿ ನೋಂದಾಯಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಆರೋಪಿಯ ಬ್ಯಾಂಕ್ ಖಾತೆಯ ವಹಿವಾಟು ಪರಿಶೀಲಿಸಿದ ಅಧಿಕಾರಿಗಳಿಗೆ ಆತನ ಆದಾಯಕ್ಕೆ ಮೀರಿದ ವೆಚ್ಚ ಕಂಡುಬಂದಿತ್ತು. ಇದೇ ಅನುಮಾನದ ಮೇರೆಗೆ ತನಿಖೆ ತೀವ್ರಗೊಳಿಸಿದಾಗ ದೇಣಿಗೆ ಹಣ ದುರುಪಯೋಗದ ಜಾಲ ಪತ್ತೆಯಾಗಿದೆ.

ತನಿಖೆಯ ವೇಳೆ ಅವಿನಾಶ್, ಸುಮಾರು 19 ಲಕ್ಷ ರೂಪಾಯಿಯನ್ನು ಕುಟುಂಬಸ್ಥರು ಮತ್ತು ಸ್ನೇಹಿತರ ಐಷಾರಾಮಿ ಜೀವನಕ್ಕಾಗಿ ಖರ್ಚು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ತನ್ನೊಬ್ಬ ಸಹೋದರನ ಮದುವೆಗೆ ಸುಮಾರು 6 ಲಕ್ಷ ರೂಪಾಯಿ ಹಾಗೂ ಮತ್ತೊಬ್ಬ ಸಹೋದರನಿಗೆ 5ರಿಂದ 6 ಲಕ್ಷ ರೂಪಾಯಿ ನಗದು ಉಡುಗೊರೆಯಾಗಿ ನೀಡಿದ್ದಾನೆ. ಪರಿಚಯಸ್ಥರಿಗೂ ಹಣ ಹಂಚಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಹಿಂದೆ ಪೊಲೀಸರು ಆರೋಪಿಯಿಂದ 20.39 ಲಕ್ಷ ರೂಪಾಯಿ ನಗದು, 1,121 ಅಮೆರಿಕನ್ ಡಾಲರ್, ಚಿನ್ನ-ಬೆಳ್ಳಿ ಆಭರಣಗಳು ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

ಸದ್ಯ ಕಳವುಗೊಂಡ ಹಣವನ್ನು ಎಲ್ಲೆಲ್ಲಿ ಖರ್ಚು ಮಾಡಲಾಗಿದೆ, ಯಾರ್ಯಾರಿಗೆ ವರ್ಗಾವಣೆ ಮಾಡಲಾಗಿದೆ ಎಂಬುದರ ಕುರಿತು ಎಸ್‌ಐಟಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದು, ಹಣ ಪಡೆದಿರುವ ಶಂಕಿತ ವ್ಯಕ್ತಿಗಳನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಬಸ್ ನಿಲ್ದಾಣದಲ್ಲೇ ವಿದ್ಯಾರ್ಥಿನಿ ಮೇಲೆ ಚೂರಿ ದಾಳಿ: ಬಂಟ್ವಾಳದಲ್ಲಿ ಬೆಚ್ಚಿಬೀಳಿಸಿದ ಕೊಲೆ ಯತ್ನ, ಆರೋಪಿ ಪೊಲೀಸರಿಗೆ ಶರಣು

ಬಂಟ್ವಾಳ (ದಕ್ಷಿಣ ಕನ್ನಡ): ಕಾಲೇಜಿಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಬಸ್ ನಿಲ್ದಾಣದಲ್ಲೇ ಚೂರಿಯಿಂದ ದಾಳಿ ನಡೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಬಂಟ್ವಾಳ ತಾಲೂಕಿನ ಮೋಂತಿಮಾರು ಪಡ್ಪು ಬಸ್ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದೆ.

ಪ್ರಕರಣದಲ್ಲಿ ಮಂಚಿ ನಿವಾಸಿ ಹಾಗೂ ದಿನಸಿ ಅಂಗಡಿ ವ್ಯಾಪಾರಿ ಮೊಹಮ್ಮದ್ ಜವ್ವಾರ್ (28) ಎಂಬಾತನ ವಿರುದ್ಧ ಕೊಲೆ ಯತ್ನದ ಆರೋಪ ಕೇಳಿಬಂದಿದೆ. ಬಸ್‌ಗಾಗಿ ಕಾಯುತ್ತಿದ್ದ 17 ವರ್ಷದ ವಿದ್ಯಾರ್ಥಿನಿಯ ತಲೆ ಮತ್ತು ಕೈ ಭಾಗಕ್ಕೆ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ನಡೆಯುತ್ತಿದ್ದಂತೆ ಅಲ್ಲಿದ್ದ ಸಾರ್ವಜನಿಕರು ಜೋರಾಗಿ ಕಿರುಚಿ ಆತಂಕ ವ್ಯಕ್ತಪಡಿಸಿದ್ದು, ಇದರಿಂದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ನೇರವಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಆಸ್ಪತ್ರೆಗೆ ತೆರಳಿ ಗಾಯಾಳು ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ವಿದ್ಯಾರ್ಥಿನಿಯನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ದಾಳಿಯ ಹಿಂದಿನ ಉದ್ದೇಶ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆಯ ನಂತರವೇ ಘಟನೆಯ ನಿಖರ ಕಾರಣ ಬಹಿರಂಗವಾಗಲಿದೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.

ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ವಿಶೇಷ ದರ್ಶನಕ್ಕೆ 2000 ರೂ ನಿಗದಿ: ಸರ್ಕಾರ ವಿರುದ್ಧ ಧ್ವನಿ ಎತ್ತಿದ ಕರ್ನಾಟಕ ಸೇನೆ ಪಡೆ

0

ಮೈಸೂರು: ಚಾಮುಂಡೇಶ್ವರಿ ದೇವರ ಆಷಾಢ ಶುಕ್ರವಾರ ವಿಶೇಷ ದರ್ಶನಕ್ಕೆ 2000 ರೂ. ಶುಲ್ಕ ವಿಧಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಭಾರೀ ವಿರೋಧಕ್ಕೆ ಗುರಿಯಾಗಿದೆ. ಈ ಕ್ರಮವನ್ನು ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.

ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕರ್ನಾಟಕ ಸೇನೆ ಪಡೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಧಾರ್ಮಿಕ ಕ್ಷೇತ್ರವನ್ನು ವ್ಯಾಪಾರೀಕರಣ ಮಾಡಲಾಗುತ್ತಿದೆ ಮತ್ತು ಭಕ್ತರ ಭಾವನೆಗಳನ್ನು ಲೆಕ್ಕಿಸದೇ ಹಣ ವಸೂಲಿ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನಾಕಾರರು ಆಷಾಢ ಮಾಸದಲ್ಲಿ ದೇವಿಯ ದರ್ಶನಕ್ಕೆ ಬರುವ ಭಕ್ತರನ್ನು ಕಡೆಗಣಿಸಿ, 2000 ರೂ. ಟಿಕೆಟ್ ಮೂಲಕ ಪ್ರವೇಶವನ್ನು ನಿಯಂತ್ರಿಸುವುದು ಅನ್ಯಾಯ ಎಂದು ಹೇಳಿದ್ದಾರೆ. ಹಿಂದಿನ 50 ರೂ. ಹಾಗೂ 300 ರೂ. ದರ್ಶನ ವ್ಯವಸ್ಥೆಯನ್ನು ರದ್ದುಪಡಿಸಿರುವುದು ಸಾಮಾನ್ಯ ಭಕ್ತರಿಗೆ ದೊಡ್ಡ ಹೊಡೆತವಾಗಿದೆ ಎಂದು ದೂರಿದ್ದಾರೆ.

ಚಾಮುಂಡಿ ಬೆಟ್ಟವು ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಸ್ಥಳವಾಗಿದ್ದು, ಇದನ್ನು ವ್ಯಾಪಾರ ಕೇಂದ್ರವನ್ನಾಗಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. “ತಿರುಪತಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಲ್ಲೂ ಇಂತಹ ಭಾರಿ ಶುಲ್ಕ ಇಲ್ಲ” ಎಂದು ಪ್ರತಿಭಟನಾಕಾರರು ಹೋಲಿಕೆ ಮಾಡಿದ್ದಾರೆ.

ಸರ್ಕಾರ ತಕ್ಷಣ 2000 ರೂ. ವಿಶೇಷ ದರ್ಶನ ಶುಲ್ಕವನ್ನು ಹಿಂಪಡೆಯಬೇಕು ಮತ್ತು ಹಿಂದಿನ ದರ ವ್ಯವಸ್ಥೆಯನ್ನು ಪುನಃ ಜಾರಿಗೆ ತರಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಗಿದೆ.

ಮುಡಾ ಹಗರಣಕ್ಕೆ ಹೊಸ ಟ್ವಿಸ್ಟ್! ಯತೀಂದ್ರ ಖಾತೆ ಬದಲಾಯಿಸಿ; ಡಿಕೆ ಶಿವಕುಮಾರ್‌ಗೆ ಪತ್ರ ಬರೆದ ಹೋರಾಟಗಾರರು

ಬೆಂಗಳೂರು: ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣ ಮತ್ತೆ ರಾಜಕೀಯ ಕಾವು ಪಡೆದುಕೊಂಡಿದೆ. ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಂದ ನಗರಾಭಿವೃದ್ಧಿ ಖಾತೆಯನ್ನು ತಕ್ಷಣವೇ ಹಿಂಪಡೆದು ಬದಲಿ ಇಲಾಖೆ ನೀಡುವಂತೆ ಆಗ್ರಹಿಸಿ ‘ನೈಜ ಹೋರಾಟಗಾರರ ವೇದಿಕೆ’ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದೆ.

ವೇದಿಕೆಯ ಪರ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್.ಎಂ. ವೆಂಕಟೇಶ್ ಸಲ್ಲಿಸಿರುವ ಪತ್ರದಲ್ಲಿ, ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಾರ್ವತಿ ಆರೋಪಿಗಳಾಗಿರುವ ಹಿನ್ನೆಲೆಯಲ್ಲಿ, ಅವರ ಪುತ್ರರಾಗಿರುವ ಯತೀಂದ್ರ ಅದೇ ಇಲಾಖೆಯ ಸಚಿವರಾಗಿರುವುದು ‘ಹಿತಾಸಕ್ತಿ ಸಂಘರ್ಷ’ಕ್ಕೆ ಕಾರಣವಾಗುತ್ತದೆ ಎಂದು ಆರೋಪಿಸಲಾಗಿದೆ.

ಪ್ರಕರಣ ಈಗಾಗಲೇ ಮೈಸೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಿಮಿನಲ್ ಪ್ರಕರಣ, ಕರ್ನಾಟಕ ಹೈಕೋರ್ಟ್ ಹಾಗೂ ಜಾರಿ ನಿರ್ದೇಶನಾಲಯದ ತನಿಖೆಯ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ನಗರಾಭಿವೃದ್ಧಿ ಇಲಾಖೆಯ ಮೇಲಿನ ಅಧಿಕಾರ ನಿಷ್ಪಕ್ಷಪಾತ ತನಿಖೆಯ ಕುರಿತು ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪಾರದರ್ಶಕ ಆಡಳಿತ ಹಾಗೂ ನಿಷ್ಪಕ್ಷಪಾತ ತನಿಖೆ ದೃಷ್ಟಿಯಿಂದ ಯತೀಂದ್ರ ಅವರಿಗೆ ನಗರಾಭಿವೃದ್ಧಿ ಖಾತೆಯ ಬದಲು ಮತ್ತೊಂದು ಇಲಾಖೆ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವೇದಿಕೆ ಒತ್ತಾಯಿಸಿದೆ.

15 ದಿನದ ನವಜಾತ ಹೆಣ್ಣು ಮಗುವನ್ನು ಕೈಚೀಲದಲ್ಲಿ ಕಟ್ಟಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದ ದುಷ್ಟರು

ಶಿವಮೊಗ್ಗ: ಹೊಸನಗರ ತಾಲೂಕಿನ ಗವಟೂರು ಹೊಳೆ ಬಳಿ ಹೃದಯ ಕಲಕುವ ಘಟನೆ ನಡೆದಿದೆ. ಕೇವಲ 10ರಿಂದ 15 ದಿನಗಳ ನವಜಾತ ಹೆಣ್ಣು ಮಗುವನ್ನು ಕೈಚೀಲದಲ್ಲಿ ಹಾಕಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.

ಬಿಳಿ ಬಟ್ಟೆಯಲ್ಲಿ ಸುತ್ತಿದ ಮಗುವನ್ನು ರಸ್ತೆ ಬದಿಯ ಬಸ್ ನಿಲ್ದಾಣದಲ್ಲಿ ನೇತು ಹಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ರಾತ್ರಿ ವೇಳೆ ಮಗುವಿನ ಅಳುವ ಶಬ್ದ ಕೇಳಿದ ಸ್ಥಳೀಯ ನಿವಾಸಿ ಸ್ಥಳ ಪರಿಶೀಲಿಸಿದಾಗ ಚೀಲದೊಳಗೆ ನವಜಾತ ಶಿಶು ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಮಾಹಿತಿ ಪಡೆದ ರಿಪ್ಪನ್‌ಪೇಟೆ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ. ಆರೋಗ್ಯ ತಪಾಸಣೆಯಲ್ಲಿ 1.6 ಕೆ.ಜಿ ತೂಕವಿರುವ ಮಗು ಆರೋಗ್ಯವಾಗಿರುವುದು ತಿಳಿದುಬಂದಿದ್ದು, ಹೆಚ್ಚಿನ ಆರೈಕೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

ಸದ್ಯ ಮಗು ಶಿಶು ಆರೈಕೆ ಕೇಂದ್ರದಲ್ಲಿ ಸುರಕ್ಷಿತವಾಗಿದ್ದು, ನವಜಾತ ಶಿಶುವನ್ನು ಬಿಟ್ಟು ಹೋದವರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬ್ರೆಜಿಲ್ ವಿಶ್ವಕಪ್ ಕನಸು ಭಗ್ನ: ನಾರ್ವೆ ಕ್ವಾರ್ಟರ್ ಫೈನಲ್ʼಗೆ, ಕಣ್ಣೀರಿನೊಂದಿಗೆ ನಿವೃತ್ತಿ ಘೋಷಿಸಿದ ನೇಮರ್

ನ್ಯೂಯಾರ್ಕ್: 2026ರ ಫಿಫಾ ವಿಶ್ವಕಪ್ ಪ್ರೀ-ಕ್ವಾರ್ಟರ್ ಫೈನಲ್‌ನಲ್ಲಿ ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡಕ್ಕೆ ನಾರ್ವೆ ವಿರುದ್ಧ ಆಘಾತಕಾರಿ ಸೋಲು ಎದುರಾಗಿದ್ದು, ಈ ಸೋಲಿನ ಬೆನ್ನಲ್ಲೇ ಬ್ರೆಜಿಲ್‌ನ ಸ್ಟಾರ್ ಫುಟ್ಬಾಲ್ ಆಟಗಾರ ನೇಮರ್ ತಮ್ಮ ಅಂತಾರಾಷ್ಟ್ರೀಯ ಫುಟ್ಬಾಲ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದಾರೆ.

ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ನಾರ್ವೆ 2-1 ಗೋಲುಗಳ ಅಂತರದಲ್ಲಿ ಬ್ರೆಜಿಲ್‌ನ್ನು ಮಣಿಸಿ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿತು. ನಾರ್ವೆ ಪರ ಯುವ ಸ್ಟಾರ್ ಎರ್ಲಿಂಗ್ ಹಾಲೆಂಡ್ ಎರಡು ಗೋಲುಗಳನ್ನು ದಾಖಲಿಸಿ ತಂಡದ ಐತಿಹಾಸಿಕ ಗೆಲುವಿನ ರೂವಾರಿಯಾದರು.

1990ರ ಬಳಿಕ ಬ್ರೆಜಿಲ್ ತಂಡವು ವಿಶ್ವಕಪ್‌ನಿಂದ ಇಷ್ಟು ಆರಂಭಿಕ ಹಂತದಲ್ಲೇ ಹೊರಬಿದ್ದಿರುವುದು ಇದೇ ಮೊದಲ ಬಾರಿ. ಈ ಸೋಲು ಬ್ರೆಜಿಲ್ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದ್ದು, ತಂಡದ ವಿಶ್ವಕಪ್ ಅಭಿಯಾನಕ್ಕೆ ಅಕಾಲಿಕ ತೆರೆ ಬಿದ್ದಿದೆ.

ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ನೇಮರ್ ಪಂದ್ಯದುದ್ದಕ್ಕೂ ಹೋರಾಟ ನಡೆಸಿ, ಇಂಜುರಿ ಟೈಮ್‌ನ 90+10ನೇ ನಿಮಿಷದಲ್ಲಿ ಬ್ರೆಜಿಲ್ ಪರ ಏಕೈಕ ಗೋಲು ದಾಖಲಿಸಿದರು. ಆದರೆ ಆ ಗೋಲು ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಕಾಗಲಿಲ್ಲ.

ಪಂದ್ಯದ ಬಳಿಕ ಭಾವುಕರಾಗಿ ಮಾತನಾಡಿದ ನೇಮರ್, ತಮ್ಮ 16 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಫುಟ್ಬಾಲ್ ಪಯಣಕ್ಕೆ ವಿದಾಯ ಹೇಳುತ್ತಿರುವುದಾಗಿ ಘೋಷಿಸಿದರು.

“ನಾನು ಸಾಕಷ್ಟು ಪ್ರಯತ್ನಿಸಿದ್ದೇನೆ. ಆದರೆ ಈಗ ಎಲ್ಲವೂ ಮುಗಿದಿದೆ. ನಾನು ಎಲ್ಲಿಂದ ನನ್ನ ವೃತ್ತಿಜೀವನ ಆರಂಭಿಸಿದ್ದೆನೋ, ಇಂದು ಅಲ್ಲಿಯೇ ಅದಕ್ಕೆ ತೆರೆ ಎಳೆಯುತ್ತಿದ್ದೇನೆ,” ಎಂದು ನೇಮರ್ ಕಣ್ಣೀರಿನೊಂದಿಗೆ ಹೇಳಿದರು.

ಈ ಪಂದ್ಯದಲ್ಲಿ ದಾಖಲಿಸಿದ ಗೋಲಿನೊಂದಿಗೆ ನೇಮರ್ ಬ್ರೆಜಿಲ್ ಪರ 130 ಪಂದ್ಯಗಳಲ್ಲಿ 80 ಗೋಲು ಹಾಗೂ 59 ಅಸಿಸ್ಟ್‌ಗಳನ್ನು ದಾಖಲಿಸಿದ್ದಾರೆ. ಈ ಮೂಲಕ ಮಾಜಿ ದಿಗ್ಗಜ ಪೆಲೆ ಅವರ ದಾಖಲೆಯನ್ನು ಹಿಂದಿಕ್ಕಿ, ಬ್ರೆಜಿಲ್ ಪರ ಸಾರ್ವಕಾಲಿಕ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಒಂದೆಡೆ ನಾರ್ವೆ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವಕಪ್ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟು ಸಂಭ್ರಮಿಸಿದರೆ, ಮತ್ತೊಂದೆಡೆ ಬ್ರೆಜಿಲ್‌ಗೆ ಸೋಲಿನ ಆಘಾತದೊಂದಿಗೆ ಫುಟ್ಬಾಲ್ ದಿಗ್ಗಜ ನೇಮರ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೂ ಭಾವನಾತ್ಮಕ ತೆರೆ ಬಿದ್ದಿದೆ.