Home Blog Page 6

ಕೋತಿಗಳ ದಾಳಿಗೆ ಬೆಚ್ಚಿಬಿದ್ದ ನವವಿವಾಹಿತೆ ಬೆಟ್ಟದಿಂದ ಬಿದ್ದು ಸಾವು: ಪತಿಯ ಕಣ್ಣೆದುರೇ ದುರಂತ

0

ತೂತುಕುಡಿ: ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕಜುಗುಮಲೈನಲ್ಲಿ ಕೋತಿಗಳ ಹಿಂಡಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ನವವಿವಾಹಿತೆಯೊಬ್ಬರು ಬೆಟ್ಟದ ತುದಿಯಿಂದ ಕಂದಕಕ್ಕೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಶನಿವಾರ ನಡೆದಿದೆ.

ದಕ್ಷಿಣ ತಿಟ್ಟಂಕುಳಂ ನಿವಾಸಿ ಅನಿತಾ ಮೃತ ದುರ್ದೈವಿ. ಕಳೆದ ತಿಂಗಳಷ್ಟೇ ವಿದೇಶದಲ್ಲಿ ಉದ್ಯೋಗದಲ್ಲಿರುವ ಸುರೇಶ್ (29) ಅವರೊಂದಿಗೆ ವಿವಾಹವಾಗಿದ್ದ ಅವರು, ಪತಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಲು ಕಜುಗುಮಲೈನ ಪ್ರಸಿದ್ಧ ಕಲುಗಸಲಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಮುಖ್ಯ ದೇವಸ್ಥಾನದಲ್ಲಿ ಪೂಜೆ ಮುಗಿಸಿದ ಬಳಿಕ ದಂಪತಿ ಬೆಟ್ಟದ ಮೇಲಿರುವ ಉಚಿಪಿಳ್ಳಯಾರ್ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿದ್ದ ಕೋತಿಗಳಿಗೆ ಹಣ್ಣು ನೀಡಲು ಮುಂದಾಗಿದ್ದರು. ಹಣ್ಣುಗಳಿಗಾಗಿ ಏಕಾಏಕಿ ಹತ್ತಾರು ಕೋತಿಗಳು ಅನಿತಾ ಅವರನ್ನು ಸುತ್ತುವರೆದಿದ್ದು, ಭಯಗೊಂಡ ಅವರು ಹಿಂದೆ ಸರಿಯುವಾಗ ಕಾಲು ಜಾರಿ ಬೆಟ್ಟದ ತುದಿಯಿಂದ ಆಳವಾದ ಕಂದಕಕ್ಕೆ ಬಿದ್ದಿದ್ದಾರೆ.

ತೀವ್ರವಾಗಿ ಗಾಯಗೊಂಡ ಅನಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿ ಕಣ್ಣೆದುರೇ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದನ್ನು ಕಂಡ ಪತಿ ಸುರೇಶ್ ಆಘಾತಕ್ಕೊಳಗಾಗಿದ್ದು, ಸ್ಥಳದಲ್ಲಿ ಅವರ ಆಕ್ರಂದನ ಮುಗಿಲು ಮುಟ್ಟಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಕಜುಗುಮಲೈ ಅಗ್ನಿಶಾಮಕ ದಳ ಹಾಗೂ ಪೊಲೀಸರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.

ರಾಮಮಂದಿರ ಸ್ಫೋಟ ಸಂಚು: ಹರಿಹರ ಶಂಕಿತ ಉಗ್ರನ ವಿಚಾರಣೆಗೆ ಎನ್‌ಐಎ ಎಂಟ್ರಿ

0

ಬೆಂಗಳೂರು: ಅಯೋಧ್ಯೆಯ ರಾಮಮಂದಿರ ಸ್ಫೋಟ ಸಂಚು ಹಾಗೂ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಬಂಧನಕ್ಕೊಳಗಾಗಿರುವ ಶಂಕಿತ ಉಗ್ರ ಸುಹೇಲ್ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ಶುಕ್ರವಾರ ಹರಿಹರಕ್ಕೆ ಆಗಮಿಸಿದ ಎನ್‌ಐಎ ವಿಶೇಷ ತಂಡವು ಶಂಕಿತ ಉಗ್ರ ಸುಹೇಲ್‌ನನ್ನು ಸುಮಾರು ಒಂದು ಗಂಟೆಗಳ ಕಾಲ ಸುದೀರ್ಘ ವಿಚಾರಣೆಗೆ ಒಳಪಡಿಸಿ, ಆತನ ಉಗ್ರ ಚಟುವಟಿಕೆಗಳು, ಸಂಪರ್ಕ ಜಾಲ ಹಾಗೂ ಆರ್ಥಿಕ ವ್ಯವಹಾರಗಳ ಕುರಿತು ಮಹತ್ವದ ಮಾಹಿತಿ ಕಲೆಹಾಕಿದೆ.

ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೇಖರ್ ಹೆಚ್.ಟಿ. ಮಾಹಿತಿ ನೀಡಿರುವಂತೆ, ವಿಚಾರಣೆ ವೇಳೆ ಸುಹೇಲ್‌ನ ಸಾಮಾಜಿಕ ಜಾಲತಾಣಗಳ ಖಾತೆಗಳು, ಸಂಶಯಾಸ್ಪದ ಇಂಟರ್‌ನೆಟ್ ಚಟುವಟಿಕೆಗಳು, ಬ್ಯಾಂಕ್ ಖಾತೆಗಳ ವಹಿವಾಟು ಹಾಗೂ ಆತನ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಬನ್ನಿಕೋಡು ಗ್ರಾಮದ ಗುಟ್ಯಪ್ಪ ಎಂಬುವವರ ಮನೆಯಲ್ಲಿ ತಂಗಿದ್ದ ಸುಹೇಲ್, ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಪೇಂಟಿಂಗ್ ಕೆಲಸಕ್ಕೆ ಬಂದಿದ್ದ 10 ಮಂದಿಯ ತಂಡದಲ್ಲಿದ್ದ. ಆದರೆ ಆ ತಂಡದಲ್ಲಿ ಆತನೇ ಅತ್ಯಂತ ಸಕ್ರಿಯವಾಗಿ ವರ್ತಿಸುತ್ತಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸ್ಥಳೀಯ ಪೊಲೀಸರು ಹಾಗೂ ಎನ್‌ಐಎ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿತನಾಗಿದ್ದ ಸುಹೇಲ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ನ್ಯಾಯಾಲಯವು 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಪೊಲೀಸ್ ಕಸ್ಟಡಿಯ ಅವಧಿಯಲ್ಲಿ ಸುಹೇಲ್‌ನ ಅಂತಾರಾಷ್ಟ್ರೀಯ ಉಗ್ರ ಸಂಪರ್ಕ, ದೇಶದ್ರೋಹಿ ಸಂಚು, ಹಣಕಾಸು ಮೂಲಗಳು ಹಾಗೂ ಸಹಚರರ ಜಾಲದ ಕುರಿತು ಆಳವಾದ ತನಿಖೆ ಮುಂದುವರಿದಿದೆ. ಈಗಾಗಲೇ ಹಲವು ಮಹತ್ವದ ಹಾಗೂ ರಹಸ್ಯ ಮಾಹಿತಿಗಳು ಅಧಿಕಾರಿಗಳ ಕೈ ಸೇರಿದ್ದು, ಮುಂದಿನ ದಿನಗಳಲ್ಲಿ ಕರಾವಳಿ ಹಾಗೂ ರಾಜ್ಯದ ಇತರ ಭಾಗಗಳಲ್ಲೂ ತನಿಖೆ ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ.

ಗದಗ ಮಠದಲ್ಲಿ ಹೈಡ್ರಾಮಾ: ಶ್ರೀಗಳ ಜೀವ ಬೆದರಿಕೆ ಆರೋಪಕ್ಕೆ ಟ್ರಸ್ಟಿಗಳ ಸ್ಫೋಟಕ ಆರೋಪ

0

ಗದಗ: ವೀರೇಶ್ವರ ಪುಣ್ಯಾಶ್ರಮ ಹಾಗೂ ಪುಟ್ಟರಾಜ ಗವಾಯಿಗಳ ಮಠದಲ್ಲಿ ಪೀಠಾಧಿಪತಿ ಕಲ್ಲಯ್ಯಜ್ಜನವರು ತಮ್ಮ ಜೀವಕ್ಕೆ ಬೆದರಿಕೆ ಇದೆ ಎಂದು ಮಾಡಿದ್ದ ಆರೋಪಕ್ಕೆ ಮಠದ ಟ್ರಸ್ಟಿಗಳು ತೀವ್ರ ತಿರುಗೇಟು ನೀಡಿದ್ದಾರೆ. ಜೀವ ಬೆದರಿಕೆ ಆರೋಪವನ್ನು ಸಂಪೂರ್ಣ ತಳ್ಳಿಹಾಕಿರುವ ಟ್ರಸ್ಟಿಗಳು, ಪೀಠಾಧಿಪತಿಯವರ ವಿರುದ್ಧವೇ ಜಮೀನು ಮಾರಾಟ, ಲಕ್ಷಾಂತರ ರೂಪಾಯಿ ಹಣ ದುರುಪಯೋಗ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಬಹಿರಂಗಪಡಿಸಿದ್ದಾರೆ.

ಟ್ರಸ್ಟಿಗಳಾದ ವಸಂತಗೌಡ, ಶಿವರುದ್ರಪ್ಪ ಇಟಗಿ ಹಾಗೂ ಪ್ರಕಾಶ್ ಬಸರಿಗಿಡದ ಮಾತನಾಡಿ, ನಾವು ಗೂಂಡಾಗಳಲ್ಲ, ರೌಡಿಗಳಲ್ಲ. ನಾಲ್ಕು ದಶಕಗಳಿಂದ ಮಠಕ್ಕೆ ಸೇವೆ ಸಲ್ಲಿಸಿರುವ ಭಕ್ತರು. ಶ್ರೀಗಳು ಯಾರದ್ದೋ ಒತ್ತಡಕ್ಕೆ ಒಳಗಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಟ್ರಸ್ಟಿ ಶಿವರುದ್ರಪ್ಪ ಇಟಗಿ, ನಾನು ಶ್ರೀಗಳಿಂದ 10 ಲಕ್ಷ ರೂಪಾಯಿ ಹಣ ಕೇಳಿಲ್ಲ. ಬದಲಿಗೆ ನಾನೇ ಮಠಕ್ಕೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದೇನೆ. ಮಠದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಪ್ರಶ್ನಿಸಿದ್ದಕ್ಕೆ ನನ್ನ ಧ್ವನಿ ಅಡಗಿಸುವ ಉದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಪೀಠಾಧಿಪತಿ ಕಲ್ಲಯ್ಯಜ್ಜನವರು, ತಾವು ಅಧಿಕಾರ ವಹಿಸಿಕೊಂಡಾಗ ಮಠಕ್ಕೆ 59 ಲಕ್ಷ ರೂಪಾಯಿ ಸಾಲವಿತ್ತು. ಅದನ್ನು ತೀರಿಸಿ ನಾಲ್ಕು ಕೋಟಿ ರೂಪಾಯಿ ಬ್ಯಾಂಕ್ ಠೇವಣಿ ನಿರ್ಮಿಸಿದ್ದೇನೆ. ಮಠದ ಪ್ರತಿಯೊಂದು ರೂಪಾಯಿಗೂ ಲೆಕ್ಕವಿದ್ದರೂ ಟ್ರಸ್ಟಿಗಳು ಅಪಪ್ರಚಾರ ನಡೆಸಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದರು.

 

ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಸ್ಟಿಗಳು, ಮಠದ ಶಿಕ್ಷಣ ಸಂಸ್ಥೆಗೆ ಸೇರಿದ 11 ಗುಂಟೆ ಬೆಲೆಬಾಳುವ ಜಮೀನನ್ನು ಶ್ರೀಗಳೇ ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಸಂಸ್ಥೆಯ ಲಕ್ಷಾಂತರ ರೂಪಾಯಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಕುರಿತು ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಸತ್ಯ ಸಾಬೀತುಪಡಿಸಲು ಗದ್ದಿಗೆ ಮುಟ್ಟಿ ಆಣೆ ಮಾಡಲು ಸಿದ್ಧ ಎಂದು ತಿಳಿಸಿದ್ದಾರೆ.

ಟ್ರಸ್ಟಿ ಪ್ರಕಾಶ್ ಬಸರಿಗಿಡದ ಮಾತನಾಡಿ, ನಮ್ಮ ಕುಟುಂಬವೇ ಮಠಕ್ಕೆ ಜಮೀನು ದಾನ ಮಾಡಿದೆ. ನಮ್ಮ ಅಜ್ಜನ ಗದ್ದುಗೆ ಬಳಿ ಬಾವಿ ನಿರ್ಮಿಸಲು ಯತ್ನಿಸಿದ್ದನ್ನು ವಿರೋಧಿಸಿದ್ದಕ್ಕೆ ನಮ್ಮ ವಿರುದ್ಧ ದೂರು ನೀಡಲಾಗಿದೆ. ವಾಸ್ತವವಾಗಿ ಶ್ರೀಗಳಿಂದಲೇ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ.

ಪೀಠಾಧಿಪತಿ ಮತ್ತು ಟ್ರಸ್ಟಿಗಳ ನಡುವಿನ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ವೀರೇಶ್ವರ ಮಠದ ಆಡಳಿತ ವಿವಾದ ಇದೀಗ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

ಕೆಂಪೇಗೌಡ ಜಯಂತಿಗೆ ಬೆಂಗಳೂರು ಹಸಿರಾಗಿಸಲು ಮಹಾ ಯೋಜನೆ..! BDA ನಿಂದ ಬೃಹತ್ ಅಭಿಯಾನ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಇಂದು ಭರ್ಜರಿ ಹಸಿರು ಅಭಿಯಾನ ಆರಂಭಗೊಂಡಿದ್ದು, ಒಂದೇ ದಿನದಲ್ಲಿ 15 ಲಕ್ಷ ಸಸಿ ನೆಡುವ ಬೃಹತ್ ಗುರಿ ನಿಗದಿಪಡಿಸಲಾಗಿದೆ.

ಗಿಡ ನೆಡುವ ಮೂಲಕ ವಿಶ್ವದಾಖಲೆ ನಿರ್ಮಿಸುವ ಉದ್ದೇಶದೊಂದಿಗೆ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಬೆಂಗಳೂರು ನಗರ ಪುನಶ್ಚೇತನ ಮಿಷನ್ 2026–30ರ ಅಂಗವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈ ಅಭಿಯಾನವನ್ನು ಕೈಗೊಂಡಿದೆ. ಡಾ. ಶಿವರಾಮ ಕಾರಂತ ಬಡಾವಣೆ, ನಾಡಪ್ರಭು ಕೆಂಪೇಗೌಡ ಬಡಾವಣೆ, ಬನಶಂಕರಿ 6ನೇ ಹಂತ, ಕೆರೆ ದಂಡೆಗಳು, ರಾಜಕಾಲುವೆಗಳ ಇಕ್ಕೆಲಗಳು ಹಾಗೂ ಉದ್ಯಾನವನಗಳನ್ನು ಒಳಗೊಂಡಂತೆ ವಿವಿಧ ಪರಿಸರ ವಲಯಗಳಲ್ಲಿ ಸಸಿ ನೆಡುವ ಕಾರ್ಯ ನಡೆಯುತ್ತಿದೆ.

ಒಟ್ಟು 243 ಎಕರೆ ಪ್ರದೇಶವನ್ನು 49 ವಲಯಗಳಾಗಿ ವಿಂಗಡಿಸಲಾಗಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಈ ಹಸಿರು ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಕೇವಲ 12 ಗಂಟೆಗಳ ಅವಧಿಯಲ್ಲಿ 15 ಲಕ್ಷ ಸಸಿ ನೆಡುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಲಾಗಿದೆ.

ಈ ವೇಳೆ ಕೃಷ್ಣಪಥ ರಸ್ತೆಯ ಲೋಕಾರ್ಪಣೆ ಕೂಡ ನಡೆಯಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಂಪೇಗೌಡರ 7 ಪುರಜ್ಯೋತಿಗಳನ್ನು ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಮಾತನಾಡಿ, ಕೆಂಪೇಗೌಡರ ಜಯಂತಿಯ ದಿನವೇ ಈ ಮಹತ್ವಾಕಾಂಕ್ಷಿ ಹಸಿರು ಅಭಿಯಾನ ಆರಂಭವಾಗಿದ್ದು, ಬೆಂಗಳೂರನ್ನು ಹಸಿರಾಗಿಸುವ ದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಇತ್ತ ಸದಾಶಿವನಗರದಲ್ಲಿಯೂ ಕೆಂಪೇಗೌಡ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಶಾಸಕ ಅಶ್ವಥ್ ನಾರಾಯಣ್ ಭಾಗವಹಿಸಿ, ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ..! ಬಿಎಂಆರ್‌ಸಿಎಲ್‌ನಿಂದ ವಿಶೇಷ ಜಾಗೃತಿ ಅಭಿಯಾನ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸಾರ್ವಜನಿಕ ಸಾರಿಗೆಯ ಜೀವನಾಡಿಯಾಗಿರುವ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಹಿನ್ನೆಲೆ ಬಿಎಂಆರ್‌ಸಿಎಲ್ ವಿಶೇಷ ಜಾಗೃತಿ ಅಭಿಯಾನ ಆರಂಭಿಸಿದೆ.

2024ರಿಂದ ಇಲ್ಲಿವರೆಗೆ ಬೆಂಗಳೂರಿನಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಒಟ್ಟು 9 ಘಟನೆಗಳು ವರದಿಯಾಗಿದ್ದು, ಅವುಗಳಲ್ಲಿ ಸುಮಾರು 5 ಮಂದಿ ಸಾವನ್ನಪ್ಪಿದ್ದು, ಉಳಿದವರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಮೆಟ್ರೋ ನಿಲ್ದಾಣಗಳು ಆತ್ಮಹತ್ಯೆ ಪ್ರವೃತ್ತಿಯ “ಹಾಟ್‌ಸ್ಪಾಟ್” ಆಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗುವುದರ ಜೊತೆಗೆ ಪ್ರಯಾಣಿಕರು ಕೂಡ ಗಂಟೆಗಳ ಕಾಲ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪರಿಸ್ಥಿತಿಯನ್ನು ತಡೆಯಲು ಬಿಎಂಆರ್‌ಸಿಎಲ್ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡುತ್ತಿದ್ದು, ಕೆಲವು ನಿಲ್ದಾಣಗಳಲ್ಲಿ ಬ್ಯಾರಿಕೇಡ್ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಜೊತೆಗೆ ಮಾನಸಿಕ ಆರೋಗ್ಯ ಜಾಗೃತಿಗಾಗಿ ನಿಮ್ಹಾನ್ಸ್ ಸಂಸ್ಥೆಯೊಂದಿಗೆ ಕೈಜೋಡಿಸಲಾಗಿದೆ.

ಬಿಎಂಆರ್‌ಸಿಎಲ್ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಡಿಜಿಟಲ್ ಡಿಸ್ಪ್ಲೇಗಳು ಮತ್ತು ಸೈನ್‌ಬೋರ್ಡ್‌ಗಳನ್ನು ಅಳವಡಿಸಿದ್ದು, “ಯೋಚನೆ ಬೇಡ, ಚಿಂತೆ ಬಿಡಿ, ಮಾತಾಡಿ, ದಣಿವಾಗುವುದು ಸಹಜ, ಸಹಾಯ ಕೇಳುವುದು ಸಹಜ” ಎಂಬ ಸಂದೇಶಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಅದೇ ವೇಳೆ ಸಹಾಯವಾಣಿ ಸಂಖ್ಯೆಗಳನ್ನೂ ಪ್ರಕಟಿಸಲಾಗಿದ್ದು, ಮಾನಸಿಕ ಒತ್ತಡದಲ್ಲಿರುವವರು ಅಥವಾ ದುಡುಕಿನ ನಿರ್ಧಾರಗಳ ಆಲೋಚನೆ ಹೊಂದಿರುವವರು ತಕ್ಷಣ ಸಂಪರ್ಕಿಸಿ ಉಚಿತ ಸಮಾಲೋಚನೆ ಹಾಗೂ ನೆರವು ಪಡೆಯುವಂತೆ ಮನವಿ ಮಾಡಲಾಗಿದೆ.

ಪ್ರಯಾಣಿಕರ ಸುರಕ್ಷತೆ ಹಾಗೂ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇಂತಹ ಘಟನೆಗಳನ್ನು ತಡೆಯಲು ಸಮಗ್ರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಗದಗದಲ್ಲಿ ಮೀಟರ್ ಬಡ್ಡಿ ದಂಧೆ ಅಟ್ಟಹಾಸ..! ಸಾಲದ ಹಣ ಕೊಡಲಿಲ್ಲವೆಂದು ಮಹಿಳೆಯರನ್ನು ಕೂಡಿ ಹಾಕಿ ಹಲ್ಲೆ?

0

ಗದಗ: ಗದಗ ಜಿಲ್ಲೆಯಲ್ಲಿ ಅಕ್ರಮ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ ಮತ್ತೆ ಬೆಳಕಿಗೆ ಬಂದಿದೆ.

ಸಾಲದ ವಾರದ ಬಡ್ಡಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಮಹಿಳೆಯರನ್ನು ಮನೆಯೊಳಗೆ ಕೂಡಿ ಹಾಕಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ನರಗುಂದ ತಾಲೂಕಿನ ಶಿರೋಳ ಗ್ರಾಮದ ಘಟನೆ ಇದಾಗಿದ್ದು, ಸಂತ್ರಸ್ತ ಮಹಿಳೆಯರಾದ ಬಸವಣ್ಣೆಮ್ಮ ಅಂಗಡಿ ಮತ್ತು ಮಹಾದೇವಿ ಮಠದ ಅವರು ನ್ಯಾಯಕ್ಕಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಕಣ್ಣೀರು ಸುರಿಸಿದ್ದಾರೆ.

ಆರೋಪಗಳ ಪ್ರಕಾರ, ಅದೇ ಗ್ರಾಮದ ಸಿದ್ದಯ್ಯ ಹೊಸಮನಿ ಹಾಗೂ ಆತನ ಪುತ್ರ ವಿನೋದ್ ಹೊಸಮನಿ ಎಂಬವರು ಈ ಅಕ್ರಮ ಬಡ್ಡಿ ದಂಧೆಯಲ್ಲಿ ತೊಡಗಿದ್ದು, ಮಹಾದೇವಿ ಮಠದ ಅವರಿಗೆ ₹1.50 ಲಕ್ಷ ಸಾಲ ನೀಡಿ ವಾರಕ್ಕೆ ₹4,500 ಬಡ್ಡಿ ವಸೂಲಿ ಮಾಡುತ್ತಿದ್ದರೆ, ಬಸವಣ್ಣೆಮ್ಮ ಅವರಿಗೆ ₹3 ಲಕ್ಷ ಸಾಲ ನೀಡಿ ವಾರಕ್ಕೆ ₹9,000 ಬಡ್ಡಿ ವಸೂಲಿ ಮಾಡುತ್ತಿದ್ದರೆಂದು ಹೇಳಲಾಗಿದೆ.

ಕಳೆದ ಕೆಲವು ತಿಂಗಳಿಂದ ಆರ್ಥಿಕ ಸಂಕಷ್ಟದಿಂದಾಗಿ ಬಡ್ಡಿ ಹಣ ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಹಿಳೆಯರನ್ನು ಮನೆಯೊಳಗೆ ಎಳೆದುಕೊಂಡು ಹೋಗಿ, ಬಾಗಿಲು ಹಾಕಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಘಟನೆಯ ಬಳಿಕ ಮಹಿಳೆಯರು ನರಗುಂದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾದರೂ, ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಬಳಿಕ ಅವರು ಗದಗ ಎಸ್ಪಿ ಕಚೇರಿಗೆ ತೆರಳಿ ರಕ್ಷಣೆ ಮತ್ತು ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.

ಇತ್ತ ಗದಗ ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆ ವಿರುದ್ಧ ಈ ಹಿಂದೆಯೂ ಹಲವು ದಾಳಿಗಳು ನಡೆದಿದ್ದರೂ ಗ್ರಾಮೀಣ ಭಾಗಗಳಲ್ಲಿ ಇಂತಹ ದಂಧೆಗಳು ಮುಂದುವರಿಯುತ್ತಿವೆ ಎಂಬ ಆತಂಕ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

ಸದ್ಯ ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ಬೆಂಗಳೂರು ಜನತೆಗೆ ಬಿಗ್ ಶಾಕ್..! ತರಕಾರಿ–ಹಣ್ಣುಗಳ ದರ ಭಾರೀ ಏರಿಕೆ

ಬೆಂಗಳೂರು: ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಮತ್ತೊಂದು ಆಘಾತ ಎದುರಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ತರಕಾರಿ ಹಾಗೂ ಹಣ್ಣುಗಳ ದರಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕುಟುಂಬಗಳ ಮಾಸಿಕ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ.

ಹವಾಮಾನ ವೈಪರೀತ್ಯ ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ತರಕಾರಿಗಳ ಇಳುವರಿ ಕಡಿಮೆಯಾಗಿರುವುದೇ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಳೆ ಕೊರತೆ ಮುಂದುವರಿದರೆ ಇನ್ನಷ್ಟು ಬೆಲೆ ಏರಿಕೆಯ ಸಾಧ್ಯತೆ ಇರುವುದಾಗಿ ಅಂದಾಜಿಸಲಾಗಿದೆ.

ಹಾಪ್‌ಕಾಮ್ಸ್ ಮಾರುಕಟ್ಟೆ ದರಗಳ ಪ್ರಕಾರ ಹಲವಾರು ತರಕಾರಿಗಳ ಬೆಲೆ ಕೆಜಿಗೆ 90ರಿಂದ 200 ರೂಪಾಯಿವರೆಗೂ ಏರಿಕೆಯಾಗಿದೆ. ಬೆಳ್ಳುಳ್ಳಿ ದರ ₹270, ಬಟಾಣಿ ಕಾಳು ₹200, ಡಬಲ್ ಬೀನ್ಸ್ ₹160, ಮೆಂತ್ಯೆ ಸೊಪ್ಪು ಕಟ್ಟಿಗೆ ₹30 ಸೇರಿದಂತೆ ಹಲವು ತರಕಾರಿಗಳು ಸಾಮಾನ್ಯ ಜನರಿಗೆ ಭಾರೀ ಹೊರೆ ಆಗಿವೆ.

ಹಣ್ಣುಗಳ ದರದಲ್ಲೂ ಏರಿಕೆ ಕಂಡುಬಂದಿದ್ದು, ಸೇಬು ₹325, ಗಾಲ ಸೇಬು ₹350, ಕಿವಿ ಫ್ರೂಟ್ ₹800ರಿಂದ ₹1000, ಲಿಚ್ಚಿ ₹500, ಮೂಸಂಬಿ ₹160, ಸಪೋಟ ₹190 ರೂಪಾಯಿವರೆಗೆ ಮಾರಾಟವಾಗುತ್ತಿದೆ.

ಬೆಲೆ ಏರಿಕೆಯ ಪರಿಣಾಮವಾಗಿ ಮಧ್ಯಮ ವರ್ಗ ಹಾಗೂ ಸಾಮಾನ್ಯ ಕುಟುಂಬಗಳ ಖರ್ಚು ಹೆಚ್ಚಾಗಿದ್ದು, ಅಗತ್ಯ ವಸ್ತುಗಳ ಖರೀದಿ ಮೇಲೂ ಪ್ರಭಾವ ಬೀರುತ್ತಿದೆ.

ವ್ಯಾಪಾರಿಗಳು ಮಳೆ ಉತ್ತಮವಾಗಿ ಸುರಿದರೆ ಮುಂದಿನ ವಾರಗಳಲ್ಲಿ ದರಗಳು ಸ್ಥಿರವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ವಾಣಿಜ್ಯ LPG ಬಳಕೆದಾರರಿಗೆ ಭಾರೀ ರಿಲೀಫ್..! ಕೋಟಾ ವ್ಯವಸ್ಥೆ ಸಂಪೂರ್ಣ ರದ್ದುಪಡಿಸಿದ ಕೇಂದ್ರ ಸರ್ಕಾರ

0

ನವದೆಹಲಿ: ಪಶ್ಚಿಮ ಏಷ್ಯಾ ಬಿಕ್ಕಟ್ಟು ತಣ್ಣಗಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರವು ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆಯ ಎಲ್‌ಪಿಜಿ (LPG) ಗ್ರಾಹಕರಿಗೆ ಮಹತ್ವದ ರಿಲೀಫ್ ನೀಡಿದೆ.

ಹೋಟೆಲ್, ರೆಸ್ಟೋರೆಂಟ್ ಹಾಗೂ ಫ್ಯಾಕ್ಟರಿಗಳಿಗೆ ನೀಡಲಾಗುತ್ತಿದ್ದ ವಾಣಿಜ್ಯ ಸಿಲಿಂಡರ್ ಪೂರೈಕೆ ಮೇಲಿದ್ದ ಎಲ್ಲ ವಲಯವಾರು ನಿಯಂತ್ರಣ ಹಾಗೂ ಕೋಟಾ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ರದ್ದುಗೊಳಿಸಿದೆ.

ದೇಶೀಯವಾಗಿ ಗ್ಯಾಸ್ ಉತ್ಪಾದನೆ ಹಾಗೂ ಪೂರೈಕೆ ಸ್ಥಿತಿ ಸುಧಾರಿಸಿರುವುದರಿಂದ ಪರಿಸ್ಥಿತಿಯನ್ನು ಯುದ್ಧಪೂರ್ವ ಸ್ಥಿತಿಗೆ ಮರುಸ್ಥಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ನಿರ್ಧಾರದಿಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ಲಭ್ಯತೆ ಸುಲಭವಾಗುವ ನಿರೀಕ್ಷೆಯಿದೆ. ಆದರೆ ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ನಿರ್ಧಾರವನ್ನು ಹೋಟೆಲ್ ಸಂಘ ಸ್ವಾಗತಿಸಿದ್ದು, ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯಮಕ್ಕೆ ಇದು ದೊಡ್ಡ ರಿಲೀಫ್ ಆಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಮಂತ್ರಾಲಯಕ್ಕೆ ತೆರಳುತ್ತಿದ್ದ ಭಕ್ತರಿಗೆ ವಿಧಿಯ ಆಘಾತ..! ಮೂವರು ಸ್ಥಳದಲ್ಲೇ ಸಾವು

ಕೊಪ್ಪಳ: ಮಂತ್ರಾಲಯಕ್ಕೆ ತೆರಳುತ್ತಿದ್ದ ಭಕ್ತರಿದ್ದ ಓಮಿನಿ ವಾಹನಕ್ಕೆ ಅಶೋಕ್ ಲೇಲ್ಯಾಂಡ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರ ಸಮೀಪದ ರಾಷ್ಟ್ರೀಯ ಹೆದ್ದಾರಿ-63ರಲ್ಲಿ ಇಂದು ಮುಂಜಾನೆ ನಡೆದಿದೆ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಬ್ಬಾರ್ ಗ್ರಾಮದ ನಿವಾಸಿಗಳು ಓಮಿನಿ ವಾಹನದಲ್ಲಿ ಮಂತ್ರಾಲಯಕ್ಕೆ ತೆರಳುತ್ತಿದ್ದರು. ಈ ವೇಳೆ ಪಕ್ಕದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಅಶೋಕ್ ಲೇಲ್ಯಾಂಡ್ ವಾಹನ ನಿಯಂತ್ರಣ ತಪ್ಪಿ ಏಕಾಏಕಿ ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಓಮಿನಿ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಓಮಿನಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಕೆಂಚಮ್ಮ ಬಾಳೆಕಾಯಿ (35), ಅಮೃತಾ ಕೋಟ್ಯಾಳ್ (25) ಹಾಗೂ ರಮೇಶ್ ಬಳ್ಳಾರಿ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಉಳಿದ ಆರು ಮಂದಿಯನ್ನು ತಕ್ಷಣವೇ ರಕ್ಷಿಸಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಕುಕನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ.

KSRTC ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಗೆ ಬಿಗ್ ಶಾಕ್..! ಒಂದೇ ತಿಂಗಳಲ್ಲಿ ₹8.94 ಲಕ್ಷ ದಂಡ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸುವವರ ವಿರುದ್ಧ ಮೇ ತಿಂಗಳಿನಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸಿದ್ದು, ಟಿಕೆಟ್ ರಹಿತ ಪ್ರಯಾಣಿಕರಿಂದ ಒಟ್ಟು 8.94 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಕೆಎಸ್‌ಆರ್‌ಟಿಸಿ ಜಾಗೃತ ದಳದ ಸಿಬ್ಬಂದಿ ಕರ್ನಾಟಕ ಹಾಗೂ ನೆರೆಯ ರಾಜ್ಯಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ದಿಢೀರ್ ತಪಾಸಣೆ ನಡೆಸಿದ್ದರು. ಈ ವೇಳೆ ಒಟ್ಟು 42,518 ಬಸ್‌ಗಳನ್ನು ಪರಿಶೀಲನೆ ನಡೆಸಲಾಗಿದ್ದು, 4,353 ಪ್ರಕರಣಗಳು ಪತ್ತೆಯಾಗಿವೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ 4,476 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ.

ಈ ಕಾರ್ಯಾಚರಣೆಯಿಂದ ಸುಮಾರು 1.52 ಲಕ್ಷ ರೂಪಾಯಿ ಮೌಲ್ಯದ ಆದಾಯ ಸೋರಿಕೆ ತಡೆಗಟ್ಟಲಾಗಿದ್ದು, ದಂಡದ ರೂಪದಲ್ಲಿ ಒಟ್ಟು 8.94 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಇದರೊಂದಿಗೆ, ಟಿಕೆಟ್ ವಿತರಣೆ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿಯ ವಿರುದ್ಧವೂ ಸಂಸ್ಥೆ ಶಿಸ್ತು ಕ್ರಮ ಕೈಗೊಂಡಿದೆ. ಅಕ್ರಮಗಳಿಗೆ ಕಾರಣರಾದ ಸಿಬ್ಬಂದಿಗಳ ವಿರುದ್ಧ ಇಲಾಖಾ ಮಟ್ಟದಲ್ಲಿ ಅಗತ್ಯ ಕ್ರಮ ಜರುಗಿಸಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಮುಂದಿನ ದಿನಗಳಲ್ಲಿಯೂ ಟಿಕೆಟ್ ರಹಿತ ಪ್ರಯಾಣಿಕರ ವಿರುದ್ಧ ವಿಶೇಷ ತಪಾಸಣೆ ಮುಂದುವರಿಯಲಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಎಚ್ಚರಿಕೆ ನೀಡಿದೆ.

ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಟಿಕೆಟ್ ಅಥವಾ ಮಾನ್ಯ ಪಾಸ್‌ಗಳನ್ನು ಪಡೆದು, ಸಂಸ್ಥೆಯೊಂದಿಗೆ ಸಹಕರಿಸುವಂತೆ ಕೆಎಸ್‌ಆರ್‌ಟಿಸಿ ಮನವಿ ಮಾಡಿದೆ.