Home Blog Page 5

ಕೆಂಪೇಗೌಡ ಜಯಂತಿಗೆ ಬೆಂಗಳೂರು ಹಸಿರಾಗಿಸಲು ಮಹಾ ಯೋಜನೆ..! BDA ನಿಂದ ಬೃಹತ್ ಅಭಿಯಾನ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಇಂದು ಭರ್ಜರಿ ಹಸಿರು ಅಭಿಯಾನ ಆರಂಭಗೊಂಡಿದ್ದು, ಒಂದೇ ದಿನದಲ್ಲಿ 15 ಲಕ್ಷ ಸಸಿ ನೆಡುವ ಬೃಹತ್ ಗುರಿ ನಿಗದಿಪಡಿಸಲಾಗಿದೆ.

ಗಿಡ ನೆಡುವ ಮೂಲಕ ವಿಶ್ವದಾಖಲೆ ನಿರ್ಮಿಸುವ ಉದ್ದೇಶದೊಂದಿಗೆ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಬೆಂಗಳೂರು ನಗರ ಪುನಶ್ಚೇತನ ಮಿಷನ್ 2026–30ರ ಅಂಗವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈ ಅಭಿಯಾನವನ್ನು ಕೈಗೊಂಡಿದೆ. ಡಾ. ಶಿವರಾಮ ಕಾರಂತ ಬಡಾವಣೆ, ನಾಡಪ್ರಭು ಕೆಂಪೇಗೌಡ ಬಡಾವಣೆ, ಬನಶಂಕರಿ 6ನೇ ಹಂತ, ಕೆರೆ ದಂಡೆಗಳು, ರಾಜಕಾಲುವೆಗಳ ಇಕ್ಕೆಲಗಳು ಹಾಗೂ ಉದ್ಯಾನವನಗಳನ್ನು ಒಳಗೊಂಡಂತೆ ವಿವಿಧ ಪರಿಸರ ವಲಯಗಳಲ್ಲಿ ಸಸಿ ನೆಡುವ ಕಾರ್ಯ ನಡೆಯುತ್ತಿದೆ.

ಒಟ್ಟು 243 ಎಕರೆ ಪ್ರದೇಶವನ್ನು 49 ವಲಯಗಳಾಗಿ ವಿಂಗಡಿಸಲಾಗಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಈ ಹಸಿರು ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಕೇವಲ 12 ಗಂಟೆಗಳ ಅವಧಿಯಲ್ಲಿ 15 ಲಕ್ಷ ಸಸಿ ನೆಡುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಲಾಗಿದೆ.

ಈ ವೇಳೆ ಕೃಷ್ಣಪಥ ರಸ್ತೆಯ ಲೋಕಾರ್ಪಣೆ ಕೂಡ ನಡೆಯಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಂಪೇಗೌಡರ 7 ಪುರಜ್ಯೋತಿಗಳನ್ನು ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಮಾತನಾಡಿ, ಕೆಂಪೇಗೌಡರ ಜಯಂತಿಯ ದಿನವೇ ಈ ಮಹತ್ವಾಕಾಂಕ್ಷಿ ಹಸಿರು ಅಭಿಯಾನ ಆರಂಭವಾಗಿದ್ದು, ಬೆಂಗಳೂರನ್ನು ಹಸಿರಾಗಿಸುವ ದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಇತ್ತ ಸದಾಶಿವನಗರದಲ್ಲಿಯೂ ಕೆಂಪೇಗೌಡ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಶಾಸಕ ಅಶ್ವಥ್ ನಾರಾಯಣ್ ಭಾಗವಹಿಸಿ, ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ..! ಬಿಎಂಆರ್‌ಸಿಎಲ್‌ನಿಂದ ವಿಶೇಷ ಜಾಗೃತಿ ಅಭಿಯಾನ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸಾರ್ವಜನಿಕ ಸಾರಿಗೆಯ ಜೀವನಾಡಿಯಾಗಿರುವ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಹಿನ್ನೆಲೆ ಬಿಎಂಆರ್‌ಸಿಎಲ್ ವಿಶೇಷ ಜಾಗೃತಿ ಅಭಿಯಾನ ಆರಂಭಿಸಿದೆ.

2024ರಿಂದ ಇಲ್ಲಿವರೆಗೆ ಬೆಂಗಳೂರಿನಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಒಟ್ಟು 9 ಘಟನೆಗಳು ವರದಿಯಾಗಿದ್ದು, ಅವುಗಳಲ್ಲಿ ಸುಮಾರು 5 ಮಂದಿ ಸಾವನ್ನಪ್ಪಿದ್ದು, ಉಳಿದವರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಮೆಟ್ರೋ ನಿಲ್ದಾಣಗಳು ಆತ್ಮಹತ್ಯೆ ಪ್ರವೃತ್ತಿಯ “ಹಾಟ್‌ಸ್ಪಾಟ್” ಆಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗುವುದರ ಜೊತೆಗೆ ಪ್ರಯಾಣಿಕರು ಕೂಡ ಗಂಟೆಗಳ ಕಾಲ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪರಿಸ್ಥಿತಿಯನ್ನು ತಡೆಯಲು ಬಿಎಂಆರ್‌ಸಿಎಲ್ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡುತ್ತಿದ್ದು, ಕೆಲವು ನಿಲ್ದಾಣಗಳಲ್ಲಿ ಬ್ಯಾರಿಕೇಡ್ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಜೊತೆಗೆ ಮಾನಸಿಕ ಆರೋಗ್ಯ ಜಾಗೃತಿಗಾಗಿ ನಿಮ್ಹಾನ್ಸ್ ಸಂಸ್ಥೆಯೊಂದಿಗೆ ಕೈಜೋಡಿಸಲಾಗಿದೆ.

ಬಿಎಂಆರ್‌ಸಿಎಲ್ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಡಿಜಿಟಲ್ ಡಿಸ್ಪ್ಲೇಗಳು ಮತ್ತು ಸೈನ್‌ಬೋರ್ಡ್‌ಗಳನ್ನು ಅಳವಡಿಸಿದ್ದು, “ಯೋಚನೆ ಬೇಡ, ಚಿಂತೆ ಬಿಡಿ, ಮಾತಾಡಿ, ದಣಿವಾಗುವುದು ಸಹಜ, ಸಹಾಯ ಕೇಳುವುದು ಸಹಜ” ಎಂಬ ಸಂದೇಶಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಅದೇ ವೇಳೆ ಸಹಾಯವಾಣಿ ಸಂಖ್ಯೆಗಳನ್ನೂ ಪ್ರಕಟಿಸಲಾಗಿದ್ದು, ಮಾನಸಿಕ ಒತ್ತಡದಲ್ಲಿರುವವರು ಅಥವಾ ದುಡುಕಿನ ನಿರ್ಧಾರಗಳ ಆಲೋಚನೆ ಹೊಂದಿರುವವರು ತಕ್ಷಣ ಸಂಪರ್ಕಿಸಿ ಉಚಿತ ಸಮಾಲೋಚನೆ ಹಾಗೂ ನೆರವು ಪಡೆಯುವಂತೆ ಮನವಿ ಮಾಡಲಾಗಿದೆ.

ಪ್ರಯಾಣಿಕರ ಸುರಕ್ಷತೆ ಹಾಗೂ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇಂತಹ ಘಟನೆಗಳನ್ನು ತಡೆಯಲು ಸಮಗ್ರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಗದಗದಲ್ಲಿ ಮೀಟರ್ ಬಡ್ಡಿ ದಂಧೆ ಅಟ್ಟಹಾಸ..! ಸಾಲದ ಹಣ ಕೊಡಲಿಲ್ಲವೆಂದು ಮಹಿಳೆಯರನ್ನು ಕೂಡಿ ಹಾಕಿ ಹಲ್ಲೆ?

0

ಗದಗ: ಗದಗ ಜಿಲ್ಲೆಯಲ್ಲಿ ಅಕ್ರಮ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ ಮತ್ತೆ ಬೆಳಕಿಗೆ ಬಂದಿದೆ.

ಸಾಲದ ವಾರದ ಬಡ್ಡಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಮಹಿಳೆಯರನ್ನು ಮನೆಯೊಳಗೆ ಕೂಡಿ ಹಾಕಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ನರಗುಂದ ತಾಲೂಕಿನ ಶಿರೋಳ ಗ್ರಾಮದ ಘಟನೆ ಇದಾಗಿದ್ದು, ಸಂತ್ರಸ್ತ ಮಹಿಳೆಯರಾದ ಬಸವಣ್ಣೆಮ್ಮ ಅಂಗಡಿ ಮತ್ತು ಮಹಾದೇವಿ ಮಠದ ಅವರು ನ್ಯಾಯಕ್ಕಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಕಣ್ಣೀರು ಸುರಿಸಿದ್ದಾರೆ.

ಆರೋಪಗಳ ಪ್ರಕಾರ, ಅದೇ ಗ್ರಾಮದ ಸಿದ್ದಯ್ಯ ಹೊಸಮನಿ ಹಾಗೂ ಆತನ ಪುತ್ರ ವಿನೋದ್ ಹೊಸಮನಿ ಎಂಬವರು ಈ ಅಕ್ರಮ ಬಡ್ಡಿ ದಂಧೆಯಲ್ಲಿ ತೊಡಗಿದ್ದು, ಮಹಾದೇವಿ ಮಠದ ಅವರಿಗೆ ₹1.50 ಲಕ್ಷ ಸಾಲ ನೀಡಿ ವಾರಕ್ಕೆ ₹4,500 ಬಡ್ಡಿ ವಸೂಲಿ ಮಾಡುತ್ತಿದ್ದರೆ, ಬಸವಣ್ಣೆಮ್ಮ ಅವರಿಗೆ ₹3 ಲಕ್ಷ ಸಾಲ ನೀಡಿ ವಾರಕ್ಕೆ ₹9,000 ಬಡ್ಡಿ ವಸೂಲಿ ಮಾಡುತ್ತಿದ್ದರೆಂದು ಹೇಳಲಾಗಿದೆ.

ಕಳೆದ ಕೆಲವು ತಿಂಗಳಿಂದ ಆರ್ಥಿಕ ಸಂಕಷ್ಟದಿಂದಾಗಿ ಬಡ್ಡಿ ಹಣ ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಹಿಳೆಯರನ್ನು ಮನೆಯೊಳಗೆ ಎಳೆದುಕೊಂಡು ಹೋಗಿ, ಬಾಗಿಲು ಹಾಕಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಘಟನೆಯ ಬಳಿಕ ಮಹಿಳೆಯರು ನರಗುಂದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾದರೂ, ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಬಳಿಕ ಅವರು ಗದಗ ಎಸ್ಪಿ ಕಚೇರಿಗೆ ತೆರಳಿ ರಕ್ಷಣೆ ಮತ್ತು ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.

ಇತ್ತ ಗದಗ ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆ ವಿರುದ್ಧ ಈ ಹಿಂದೆಯೂ ಹಲವು ದಾಳಿಗಳು ನಡೆದಿದ್ದರೂ ಗ್ರಾಮೀಣ ಭಾಗಗಳಲ್ಲಿ ಇಂತಹ ದಂಧೆಗಳು ಮುಂದುವರಿಯುತ್ತಿವೆ ಎಂಬ ಆತಂಕ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

ಸದ್ಯ ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ಬೆಂಗಳೂರು ಜನತೆಗೆ ಬಿಗ್ ಶಾಕ್..! ತರಕಾರಿ–ಹಣ್ಣುಗಳ ದರ ಭಾರೀ ಏರಿಕೆ

ಬೆಂಗಳೂರು: ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಮತ್ತೊಂದು ಆಘಾತ ಎದುರಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ತರಕಾರಿ ಹಾಗೂ ಹಣ್ಣುಗಳ ದರಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕುಟುಂಬಗಳ ಮಾಸಿಕ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ.

ಹವಾಮಾನ ವೈಪರೀತ್ಯ ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ತರಕಾರಿಗಳ ಇಳುವರಿ ಕಡಿಮೆಯಾಗಿರುವುದೇ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಳೆ ಕೊರತೆ ಮುಂದುವರಿದರೆ ಇನ್ನಷ್ಟು ಬೆಲೆ ಏರಿಕೆಯ ಸಾಧ್ಯತೆ ಇರುವುದಾಗಿ ಅಂದಾಜಿಸಲಾಗಿದೆ.

ಹಾಪ್‌ಕಾಮ್ಸ್ ಮಾರುಕಟ್ಟೆ ದರಗಳ ಪ್ರಕಾರ ಹಲವಾರು ತರಕಾರಿಗಳ ಬೆಲೆ ಕೆಜಿಗೆ 90ರಿಂದ 200 ರೂಪಾಯಿವರೆಗೂ ಏರಿಕೆಯಾಗಿದೆ. ಬೆಳ್ಳುಳ್ಳಿ ದರ ₹270, ಬಟಾಣಿ ಕಾಳು ₹200, ಡಬಲ್ ಬೀನ್ಸ್ ₹160, ಮೆಂತ್ಯೆ ಸೊಪ್ಪು ಕಟ್ಟಿಗೆ ₹30 ಸೇರಿದಂತೆ ಹಲವು ತರಕಾರಿಗಳು ಸಾಮಾನ್ಯ ಜನರಿಗೆ ಭಾರೀ ಹೊರೆ ಆಗಿವೆ.

ಹಣ್ಣುಗಳ ದರದಲ್ಲೂ ಏರಿಕೆ ಕಂಡುಬಂದಿದ್ದು, ಸೇಬು ₹325, ಗಾಲ ಸೇಬು ₹350, ಕಿವಿ ಫ್ರೂಟ್ ₹800ರಿಂದ ₹1000, ಲಿಚ್ಚಿ ₹500, ಮೂಸಂಬಿ ₹160, ಸಪೋಟ ₹190 ರೂಪಾಯಿವರೆಗೆ ಮಾರಾಟವಾಗುತ್ತಿದೆ.

ಬೆಲೆ ಏರಿಕೆಯ ಪರಿಣಾಮವಾಗಿ ಮಧ್ಯಮ ವರ್ಗ ಹಾಗೂ ಸಾಮಾನ್ಯ ಕುಟುಂಬಗಳ ಖರ್ಚು ಹೆಚ್ಚಾಗಿದ್ದು, ಅಗತ್ಯ ವಸ್ತುಗಳ ಖರೀದಿ ಮೇಲೂ ಪ್ರಭಾವ ಬೀರುತ್ತಿದೆ.

ವ್ಯಾಪಾರಿಗಳು ಮಳೆ ಉತ್ತಮವಾಗಿ ಸುರಿದರೆ ಮುಂದಿನ ವಾರಗಳಲ್ಲಿ ದರಗಳು ಸ್ಥಿರವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ವಾಣಿಜ್ಯ LPG ಬಳಕೆದಾರರಿಗೆ ಭಾರೀ ರಿಲೀಫ್..! ಕೋಟಾ ವ್ಯವಸ್ಥೆ ಸಂಪೂರ್ಣ ರದ್ದುಪಡಿಸಿದ ಕೇಂದ್ರ ಸರ್ಕಾರ

0

ನವದೆಹಲಿ: ಪಶ್ಚಿಮ ಏಷ್ಯಾ ಬಿಕ್ಕಟ್ಟು ತಣ್ಣಗಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರವು ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆಯ ಎಲ್‌ಪಿಜಿ (LPG) ಗ್ರಾಹಕರಿಗೆ ಮಹತ್ವದ ರಿಲೀಫ್ ನೀಡಿದೆ.

ಹೋಟೆಲ್, ರೆಸ್ಟೋರೆಂಟ್ ಹಾಗೂ ಫ್ಯಾಕ್ಟರಿಗಳಿಗೆ ನೀಡಲಾಗುತ್ತಿದ್ದ ವಾಣಿಜ್ಯ ಸಿಲಿಂಡರ್ ಪೂರೈಕೆ ಮೇಲಿದ್ದ ಎಲ್ಲ ವಲಯವಾರು ನಿಯಂತ್ರಣ ಹಾಗೂ ಕೋಟಾ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ರದ್ದುಗೊಳಿಸಿದೆ.

ದೇಶೀಯವಾಗಿ ಗ್ಯಾಸ್ ಉತ್ಪಾದನೆ ಹಾಗೂ ಪೂರೈಕೆ ಸ್ಥಿತಿ ಸುಧಾರಿಸಿರುವುದರಿಂದ ಪರಿಸ್ಥಿತಿಯನ್ನು ಯುದ್ಧಪೂರ್ವ ಸ್ಥಿತಿಗೆ ಮರುಸ್ಥಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ನಿರ್ಧಾರದಿಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ಲಭ್ಯತೆ ಸುಲಭವಾಗುವ ನಿರೀಕ್ಷೆಯಿದೆ. ಆದರೆ ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ನಿರ್ಧಾರವನ್ನು ಹೋಟೆಲ್ ಸಂಘ ಸ್ವಾಗತಿಸಿದ್ದು, ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯಮಕ್ಕೆ ಇದು ದೊಡ್ಡ ರಿಲೀಫ್ ಆಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಮಂತ್ರಾಲಯಕ್ಕೆ ತೆರಳುತ್ತಿದ್ದ ಭಕ್ತರಿಗೆ ವಿಧಿಯ ಆಘಾತ..! ಮೂವರು ಸ್ಥಳದಲ್ಲೇ ಸಾವು

ಕೊಪ್ಪಳ: ಮಂತ್ರಾಲಯಕ್ಕೆ ತೆರಳುತ್ತಿದ್ದ ಭಕ್ತರಿದ್ದ ಓಮಿನಿ ವಾಹನಕ್ಕೆ ಅಶೋಕ್ ಲೇಲ್ಯಾಂಡ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರ ಸಮೀಪದ ರಾಷ್ಟ್ರೀಯ ಹೆದ್ದಾರಿ-63ರಲ್ಲಿ ಇಂದು ಮುಂಜಾನೆ ನಡೆದಿದೆ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಬ್ಬಾರ್ ಗ್ರಾಮದ ನಿವಾಸಿಗಳು ಓಮಿನಿ ವಾಹನದಲ್ಲಿ ಮಂತ್ರಾಲಯಕ್ಕೆ ತೆರಳುತ್ತಿದ್ದರು. ಈ ವೇಳೆ ಪಕ್ಕದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಅಶೋಕ್ ಲೇಲ್ಯಾಂಡ್ ವಾಹನ ನಿಯಂತ್ರಣ ತಪ್ಪಿ ಏಕಾಏಕಿ ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಓಮಿನಿ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಓಮಿನಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಕೆಂಚಮ್ಮ ಬಾಳೆಕಾಯಿ (35), ಅಮೃತಾ ಕೋಟ್ಯಾಳ್ (25) ಹಾಗೂ ರಮೇಶ್ ಬಳ್ಳಾರಿ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಉಳಿದ ಆರು ಮಂದಿಯನ್ನು ತಕ್ಷಣವೇ ರಕ್ಷಿಸಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಕುಕನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ.

KSRTC ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಗೆ ಬಿಗ್ ಶಾಕ್..! ಒಂದೇ ತಿಂಗಳಲ್ಲಿ ₹8.94 ಲಕ್ಷ ದಂಡ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸುವವರ ವಿರುದ್ಧ ಮೇ ತಿಂಗಳಿನಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸಿದ್ದು, ಟಿಕೆಟ್ ರಹಿತ ಪ್ರಯಾಣಿಕರಿಂದ ಒಟ್ಟು 8.94 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಕೆಎಸ್‌ಆರ್‌ಟಿಸಿ ಜಾಗೃತ ದಳದ ಸಿಬ್ಬಂದಿ ಕರ್ನಾಟಕ ಹಾಗೂ ನೆರೆಯ ರಾಜ್ಯಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ದಿಢೀರ್ ತಪಾಸಣೆ ನಡೆಸಿದ್ದರು. ಈ ವೇಳೆ ಒಟ್ಟು 42,518 ಬಸ್‌ಗಳನ್ನು ಪರಿಶೀಲನೆ ನಡೆಸಲಾಗಿದ್ದು, 4,353 ಪ್ರಕರಣಗಳು ಪತ್ತೆಯಾಗಿವೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ 4,476 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ.

ಈ ಕಾರ್ಯಾಚರಣೆಯಿಂದ ಸುಮಾರು 1.52 ಲಕ್ಷ ರೂಪಾಯಿ ಮೌಲ್ಯದ ಆದಾಯ ಸೋರಿಕೆ ತಡೆಗಟ್ಟಲಾಗಿದ್ದು, ದಂಡದ ರೂಪದಲ್ಲಿ ಒಟ್ಟು 8.94 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಇದರೊಂದಿಗೆ, ಟಿಕೆಟ್ ವಿತರಣೆ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿಯ ವಿರುದ್ಧವೂ ಸಂಸ್ಥೆ ಶಿಸ್ತು ಕ್ರಮ ಕೈಗೊಂಡಿದೆ. ಅಕ್ರಮಗಳಿಗೆ ಕಾರಣರಾದ ಸಿಬ್ಬಂದಿಗಳ ವಿರುದ್ಧ ಇಲಾಖಾ ಮಟ್ಟದಲ್ಲಿ ಅಗತ್ಯ ಕ್ರಮ ಜರುಗಿಸಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಮುಂದಿನ ದಿನಗಳಲ್ಲಿಯೂ ಟಿಕೆಟ್ ರಹಿತ ಪ್ರಯಾಣಿಕರ ವಿರುದ್ಧ ವಿಶೇಷ ತಪಾಸಣೆ ಮುಂದುವರಿಯಲಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಎಚ್ಚರಿಕೆ ನೀಡಿದೆ.

ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಟಿಕೆಟ್ ಅಥವಾ ಮಾನ್ಯ ಪಾಸ್‌ಗಳನ್ನು ಪಡೆದು, ಸಂಸ್ಥೆಯೊಂದಿಗೆ ಸಹಕರಿಸುವಂತೆ ಕೆಎಸ್‌ಆರ್‌ಟಿಸಿ ಮನವಿ ಮಾಡಿದೆ.

ರಾಮಮಂದಿರ ಟ್ರಸ್ಟ್‌ನಲ್ಲಿ ಆರೋಪ ಸತ್ಯವಾದರೆ ಕಠಿಣ ಕ್ರಮ ಅನಿವಾರ್ಯ: ಪೇಜಾವರ ಶ್ರೀ!

ಉಡುಪಿ: ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಕುರಿತು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಜುಲೈ 11ರಂದು ನಡೆಯಲಿರುವ ಟ್ರಸ್ಟ್ ಸಭೆಯಲ್ಲಿ ವಿಷಯ ಚರ್ಚೆಗೆ ಬರಲಿದ್ದು, ಸಂಪೂರ್ಣ ಮಾಹಿತಿ ಪಡೆದ ಬಳಿಕವೇ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ್ದಾರೆ.

ರಾಮಮಂದಿರ ಟ್ರಸ್ಟ್‌ನ ಸದಸ್ಯರಾಗಿರುವ ಶ್ರೀಗಳು, ಕೇವಲ ಮಾಧ್ಯಮ ವರದಿಗಳ ಆಧಾರದ ಮೇಲೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ. ಸಭೆಯಲ್ಲಿ ವಿಷಯದ ಸತ್ಯಾಸತ್ಯತೆ ತಿಳಿದುಕೊಂಡ ನಂತರವೇ ಸೂಕ್ತ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.

ಸಿಂಧಿ ಸಮುದಾಯವು 200 ಕೆ.ಜಿ. ಬೆಳ್ಳಿ ದೇಣಿಗೆ ನೀಡಿದ್ದರೂ ಗೌರವ ನೀಡಿಲ್ಲ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ದೇಣಿಗೆ ನೀಡುವಾಗ ಕಡ್ಡಾಯವಾಗಿ ರಶೀದಿ ಪಡೆಯಬೇಕು. ರಶೀದಿ ನೀಡದಿರುವುದು ಗಂಭೀರ ತಪ್ಪಾಗಿದ್ದು, ಬಾಯಿಮಾತಿಗಿಂತ ದಾಖಲೆಗಳಿಗೆ ಹೆಚ್ಚಿನ ಮಹತ್ವವಿದೆ ಎಂದು ಹೇಳಿದರು.

ಅವ್ಯವಹಾರ ಆರೋಪಗಳ ತನಿಖೆಗೆ ಎಸ್‌ಐಟಿ ರಚಿಸಿರುವುದನ್ನು ಸ್ವಾಗತಿಸಿದ ಶ್ರೀಗಳು, ಆರೋಪಗಳಲ್ಲಿ ಸತ್ಯಾಂಶ ಇದ್ದರೆ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ದೇಶ-ವಿದೇಶದ ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರವಾಗಿರುವ ರಾಮಮಂದಿರದಲ್ಲಿ ಇಂತಹ ಆರೋಪಗಳು ಕೇಳಿಬರಬಾರದು ಎಂದರು.

ಟ್ರಸ್ಟ್ ಸದಸ್ಯನಾಗಿ ತಾವು ಹಲವು ಸಲಹೆಗಳನ್ನು ನೀಡಿದ್ದಾಗಿ ತಿಳಿಸಿದ ಶ್ರೀಗಳು, ಟ್ರಸ್ಟ್‌ನ ಜವಾಬ್ದಾರಿ ಹೊಂದಿರುವವರು ವಿಶ್ವಾಸಾರ್ಹವಾಗಿ ನಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಸೇವಾ ಪಟ್ಟಿ ಪ್ರಕಟಿಸದಿರುವ ಕುರಿತು ಈಗಾಗಲೇ ಟ್ರಸ್ಟ್‌ನಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು ಎಂದೂ ಸ್ಪಷ್ಟಪಡಿಸಿದರು.

ಇದೇ ವೇಳೆ, ರಾಮಮಂದಿರಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡುವುದಕ್ಕಿಂತ ಬಡವರಿಗೆ ಮನೆ ನಿರ್ಮಿಸಿಕೊಡುವಂತಹ ಸಮಾಜಸೇವೆ ಮಾಡುವುದೇ ನಿಜವಾದ ರಾಮಸೇವೆ ಎಂದು ಕರೆ ನೀಡಿದ ಅವರು, ರಾಜ್ಯ ಸರ್ಕಾರದ ತನಿಖೆಯ ಮೇಲೆ ವಿಶ್ವಾಸವಿದೆ ಎಂದು ಹೇಳಿದರು.

ಆರ್‌ಎಸ್‌ಎಸ್ ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಸಂಘಟನೆಯನ್ನು ನೋಂದಣಿ ಮಾಡಿದರೆ ಅನಗತ್ಯ ಆರೋಪಗಳಿಗೆ ಅವಕಾಶ ಇರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ತ್ಯಾಗದ ನೆನಪು… ಸೌಹಾರ್ದದ ಸಂಭ್ರಮ!

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಜರತ್ ಹಸನ್ ಮತ್ತು ಹಜರತ್ ಹುಸೈನ್ ಅವರ ತ್ಯಾಗ, ಬಲಿದಾನ ಹಾಗೂ ನ್ಯಾಯಕ್ಕಾಗಿ ನಡೆದ ಹೋರಾಟವನ್ನು ಸ್ಮರಿಸುವ ಮೊಹರಂ ಹಬ್ಬವನ್ನು ಗದಗ–ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ಧೆ, ಭಕ್ತಿ ಹಾಗೂ ಧಾರ್ಮಿಕ ಸೌಹಾರ್ದದ ವಾತಾವರಣದಲ್ಲಿ ಆಚರಿಸಲಾಯಿತು.

ಜಿಲ್ಲೆಯಾದ್ಯಂತ ಪ್ರತಿಷ್ಠಾಪಿಸಲಾಗಿದ್ದ ಪುಷ್ಪಾಲಂಕೃತ ಪಾಂಜಾಗಳು, ಡೋಲಿಗಳು ಹಾಗೂ ಅಲಾಯಿ ದೇವರುಗಳ ಭವ್ಯ ಮೆರವಣಿಗೆಗಳು ಜನರ ಗಮನ ಸೆಳೆದವು. ಹಬ್ಬದಲ್ಲಿ ಹಿಂದೂ–ಮುಸ್ಲಿಂ ಬಾಂಧವರು ಜಾತಿ–ಧರ್ಮದ ಬೇಧ ಮರೆತು ಒಂದಾಗಿ ಪಾಲ್ಗೊಂಡು ಭಾವೈಕ್ಯತೆಯ ಸಂದೇಶ ಸಾರಿದರು.

ಗದಗ ನಗರದಲ್ಲಿ ಮಾಬುಸುಬಾನಿ ಕಟ್ಟೆ, ಜಾಮೀಯಾ ಮಸೀದಿ, ದಖನಿ ಗಲ್ಲಿ, ಒಕ್ಕಲಗೇರಿ ಓಣಿ, ಖಾನ್‌ತೋಟ, ಮುಕ್ತುಮ್ ಗರಡಿ, ಹಳೇ ಕಚೇರಿ, ಹನುಮಂತ ಗರಡಿ ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಪಾಂಜಾ ದೇವರು ಹಾಗೂ ಡೋಲಿಗಳ ಮೆರವಣಿಗೆಗಳು ಶ್ರದ್ಧಾಭಕ್ತಿಯಿಂದ ನಡೆದವು. ನಗರದ ಕಾಗದಗೇರಿ ಓಣಿಯ ಬಾವಿ ಹಾಗೂ ಮುಕ್ತುಮ್ ಬಾವಡಿಯಲ್ಲಿ ಹತ್ತಾರು ಪವಿತ್ರ ತಾಬೂತ್‌ಗಳು ಸೇರಿ, ಬಳಿಕ ಸಂಪ್ರದಾಯದಂತೆ ಹೊಳೆಗೆ ಕಳುಹಿಸಲಾಯಿತು.

ಲಕ್ಷ್ಮೇಶ್ವರ ಪಟ್ಟಣದಲ್ಲಿ 12 ಮಸೀದಿಗಳ ಪಾಂಜಾಗಳು ಮುಖ್ಯ ಬಜಾರ್ ರಸ್ತೆ, ಸೋಮೇಶ್ವರ ಪಾದಗಟ್ಟಿ, ಪುರಸಭೆ ಮುಂಭಾಗ ಹಾಗೂ ಶಿಗ್ಲಿ ಕ್ರಾಸ್ ಮೂಲಕ ಛೋಟೆ ಲಂಕಾಪತಿ ಮಸೀದಿವರೆಗೆ ಮೆರವಣಿಗೆ ನಡೆಸಿ ನಂತರ ತಮ್ಮ ಮೂಲ ಸ್ಥಳಗಳಿಗೆ ಮರಳಿದವು. ಸಂಜೆ ಸಂಪ್ರದಾಯದಂತೆ ಪಾಂಜಾಗಳನ್ನು ಹೊಳೆಗೆ ಕೊಂಡೊಯ್ಯಲಾಯಿತು.

ಶಿಗ್ಲಿ, ರಾಮಗೇರಿ, ಸೂರಣಗಿ, ಬಾಲೆಹೊಸೂರ, ಹುಲ್ಲೂರು, ಬಟ್ಟೂರು, ಬಡ್ನಿ, ಯಳವತ್ತಿ, ಗೊಜನೂರು, ಮಂಜಲಾಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿಯೂ ಮೊಹರಂ ಆಚರಣೆ ವಿಜೃಂಭಣೆಯಿಂದ ನಡೆಯಿತು. ವಿಶೇಷವೆಂದರೆ ಮುಸ್ಲಿಂ ಕುಟುಂಬಗಳೇ ಇಲ್ಲದ ಅಡರಕಟ್ಟಿ ಹಾಗೂ ಒಡೆಯರ ಮಲ್ಲಾಪುರ ಗ್ರಾಮಗಳಲ್ಲಿಯೂ ಸಂಪ್ರದಾಯದಂತೆ ಮೊಹರಂ ಆಚರಿಸಿ ಧಾರ್ಮಿಕ ಸೌಹಾರ್ದಕ್ಕೆ ಮತ್ತೊಮ್ಮೆ ಸಾಕ್ಷಿಯಾದವು.

ಹುಲಿವೇಷ, ಫಕೀರರ ವೇಷ, ಅಳ್ಳೊಳ್ಳಿ ಬಾವಾಗಳ ವೇಷಧಾರಿಗಳು, ಅಲಾಯಿ ಕುಣಿತ, ಹೆಜ್ಜೆ ಮೇಳ, ಶಸ್ತ್ರಸೇವೆ, ಬಾರಕೋಲು ಸೇವೆ, ಕೆಂಡ ಹಾಯುವುದು ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಚರಣೆಗಳು ಹಬ್ಬದ ಮೆರುಗನ್ನು ಹೆಚ್ಚಿಸಿದವು. ಹರಕೆ ಹೊತ್ತಿದ್ದ ಹಿಂದೂ ಹಾಗೂ ಮುಸ್ಲಿಂ ಭಕ್ತರು ಪಾಂಜಾ ದೇವರಿಗೆ ಸಕ್ಕರೆ ಓದು ಹಾಕಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಕಳೆದ ಐದು ದಿನಗಳಿಂದ ಹಜರತ್ ಹಸನ್–ಹುಸೈನ್ ಅವರ ತ್ಯಾಗವನ್ನು ಸ್ಮರಿಸಿ ಧಾರ್ಮಿಕ ಕಾರ್ಯಕ್ರಮಗಳು, ಪ್ರಾರ್ಥನೆ ಹಾಗೂ ಶೋಕಾಚರಣೆಗಳು ನಡೆದವು. ಗದಗದ ಇರಾನಿ ಕಾಲೋನಿಯ ಶಿಯಾ ಮುಸ್ಲಿಂ ಸಮುದಾಯದವರು ಕರ್ಬಲಾ ಘಟನೆಯನ್ನು ಸ್ಮರಿಸಿ ಸಂಪ್ರದಾಯದಂತೆ ಮಾತಂ (ಎದೆ ಬಡಿದುಕೊಂಡು ಶೋಕ ವ್ಯಕ್ತಪಡಿಸುವುದು) ಆಚರಿಸಿ ಶೋಕ ಮೆರವಣಿಗೆ ನಡೆಸಿದರು. ಶೋಕಗೀತೆಗಳ ನಡುವೆ ಕಣ್ಣೀರು ಸುರಿಸುತ್ತ ಭಕ್ತರು ತ್ಯಾಗದ ಸಂದೇಶವನ್ನು ಸ್ಮರಿಸಿದರು.

ಬರಗಾಲದ ನಡುವೆ ಮಂಕಾದ ಸಂಭ್ರಮ

ಈ ಬಾರಿ ಬರಗಾಲ ಹಾಗೂ ಕೃಷಿ ಸಂಕಷ್ಟದ ಪರಿಣಾಮ ಮೊಹರಂ ಹಬ್ಬದ ಸಂಭ್ರಮದ ಮೇಲೂ ಕಂಡುಬಂದಿತು. ಹಿಂದಿನ ವರ್ಷಗಳಂತೆ ರಾತ್ರಿಯಿಡೀ ಹೆಜ್ಜೆ ಮೇಳ, ಹಾಡು, ನೃತ್ಯ ಹಾಗೂ ಜನಸಾಗರ ಕಾಣಿಸದಿದ್ದರೂ, “ಸಂಪ್ರದಾಯ ಬಿಡಬಾರದು” ಎಂಬ ಭಾವನೆಯೊಂದಿಗೆ ಭಕ್ತರು ಎಲ್ಲ ಧಾರ್ಮಿಕ ವಿಧಿವಿಧಾನಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಕೃಷಿಯನ್ನೇ ಜೀವನವಾಗಿಸಿಕೊಂಡಿರುವ ಅನೇಕ ಕುಟುಂಬಗಳಲ್ಲಿ ಸಂಕಷ್ಟದ ಛಾಯೆ ಕಂಡರೂ, ಭಕ್ತಿ ಮತ್ತು ಭಾವೈಕ್ಯ ಮಾತ್ರ ಮಂಕಾಗಲಿಲ್ಲ.

ತ್ಯಾಗದ ಸಂಕೇತ ಮೊಹರಂ

ಮೊಹರಂ ಹಬ್ಬವು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ, ಅನ್ಯಾಯದ ವಿರುದ್ಧದ ಹೋರಾಟ, ಸತ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹಜರತ್ ಹಸನ್ ಮತ್ತು ಹಜರತ್ ಹುಸೈನ್ ಅವರ ಆದರ್ಶವನ್ನು ನೆನಪಿಸುವ ಪವಿತ್ರ ಹಬ್ಬವಾಗಿದೆ. ಈ ಹಬ್ಬವು ವರ್ಷದಿಂದ ವರ್ಷಕ್ಕೆ ಗದಗ ಜಿಲ್ಲೆಯಲ್ಲಿ ಹಿಂದೂ–ಮುಸ್ಲಿಂ ಸೌಹಾರ್ದದ ಜೀವಂತ ಸಂಕೇತವಾಗಿ ಆಚರಿಸಲ್ಪಡುತ್ತಿದ್ದು, ಧರ್ಮಕ್ಕಿಂತ ಮಾನವೀಯತೆಯೇ ಶ್ರೇಷ್ಠ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುತ್ತಿದೆ.

ಮೆಟ್ರೋ ಪಿಲ್ಲರ್‌ಗೆ ಲೈಟಿಂಗ್ ಅಳವಡಿಸುವಾಗ ವಿದ್ಯುತ್ ಶಾಕ್: ಕಾರ್ಮಿಕ ಸಾವು!

ಬೆಂಗಳೂರು: ನಮ್ಮ ಮೆಟ್ರೋ ಪಿಲ್ಲರ್‌ಗೆ ಲೈಟಿಂಗ್ ಅಳವಡಿಸುವ ಕಾಮಗಾರಿ ವೇಳೆ ವಿದ್ಯುತ್ ಪ್ರವಹಿಸಿ ಕಾರ್ಮಿಕನೊಬ್ಬ ಮೃತಪಟ್ಟಿರುವ ದುರ್ಘಟನೆ ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣದ ಸಮೀಪ ಸಂಭವಿಸಿದೆ.

ಮೃತ ಕಾರ್ಮಿಕನನ್ನು ಗುರಪ್ಪ (70) ಎಂದು ಗುರುತಿಸಲಾಗಿದೆ. ವೈಟ್‌ಫೀಲ್ಡ್–ಚಲ್ಲಘಟ್ಟ ನೇರಳೆ ಮಾರ್ಗದ ಟ್ರಿನಿಟಿ ಮೆಟ್ರೋ ನಿಲ್ದಾಣದ 153ನೇ ಪಿಲ್ಲರ್ ಸಮೀಪ ಈ ಅವಘಡ ನಡೆದಿದೆ.

ಬಿಎಂಆರ್‌ಸಿಎಲ್‌ನಿಂದ ಲೈಟಿಂಗ್ ಅಳವಡಿಸುವ ಕಾಮಗಾರಿಯ ಗುತ್ತಿಗೆಯನ್ನು ಎಂಆರ್ ಎಲೆಕ್ಟ್ರಿಕಲ್ಸ್ ಸಂಸ್ಥೆ ಪಡೆದಿತ್ತು. ಅದರಂತೆ ಗುರಪ್ಪ ಅವರು ಪಿಲ್ಲರ್‌ಗೆ ಲೈಟಿಂಗ್ ಅಳವಡಿಸುವ ಕೆಲಸದಲ್ಲಿ ನಿರತರಾಗಿದ್ದರು.

ಲೈಟಿಂಗ್ ವ್ಯವಸ್ಥೆಗಾಗಿ ಅರ್ಥಿಂಗ್ ಗುಂಡಿ ಅಗೆಯುವ ವೇಳೆ ಡ್ರಿಲ್ಲಿಂಗ್ ಯಂತ್ರವು ನೆಲದಡಿಯಲ್ಲಿದ್ದ ವಿದ್ಯುತ್ ಕೇಬಲ್‌ಗೆ ತಾಗಿದ ಪರಿಣಾಮ ವಿದ್ಯುತ್ ಪ್ರವಹಿಸಿ ಗುರಪ್ಪ ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ.

ಸ್ಥಳದಲ್ಲಿದ್ದವರು ತಕ್ಷಣ ಅವರನ್ನು ನಗರದ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಘಟನೆ ಗುರುವಾರ ಸಂಜೆ ಸುಮಾರು 4 ಗಂಟೆ ಸುಮಾರಿಗೆ ನಡೆದಿದ್ದು, ಪ್ರಕರಣ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವಘಡದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.