ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳು ಕಲಿಕೆಯಲ್ಲಿ ಶ್ರದ್ಧೆ, ಶಿಸ್ತು, ಸಂಯಮ, ಬದ್ಧತೆಯನ್ನು ರೂಢಿಸಿಕೊಂಡು ಏಕಾಗ್ರತೆಯಿಂದ ಅಭ್ಯಾಸ ಮಾಡಿದಲ್ಲಿ ಜೀವನದಲ್ಲಿ ಉನ್ನತ ಹಂತವನ್ನು ತಲುಪಲು ಸಾಧ್ಯವಿದೆ ಎಂದು ಡಾ. ರೇಣುಕಾ ಬಿನ್ನಾಳ ಹೇಳಿದರು.
ಅವರು ಬುಧವಾರ ಗದಗ ತಾಲೂಕಿನ ಬೆಳಹೋಡ ಗ್ರಾಮದ ಪುರದಪ್ಪ ವೀರಪ್ಪ ಹೊಸಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿಯಲ್ಲಿ ಮೊದಲ 5 ಸ್ಥಾನಗಳನ್ನು ಪಡೆದುಕೊಂಡ ಗದಗ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಹಿಂದೆ ಗುರು, ಮುಂದೆ ಗುರಿಯನ್ನು ಇಟ್ಟುಕೊಂಡು ಪರಿಶ್ರಮದೊಂದಿಗೆ ಮುನ್ನಡೆದಲ್ಲಿ ಆದರ್ಶ ವ್ಯಕ್ತಿಯಾಗಿ, ಸಾಧಕರಾಗಿ ಹೊರಹೊಮ್ಮಬಲ್ಲರು. ಇಂದು ನೀವು ಪ್ರತಿಷ್ಠಾನದಿಂದ ನಗದು ಪುರಸ್ಕಾರವನ್ನು ಪಡೆದುಕೊಂಡಿದ್ದೀರಿ ಮುಂದಿನ ದಿನಗಳಲ್ಲಿ ನೀವೂ ಪುರಸ್ಕಾರ ನೀಡುವಂತಾಗಬೇಕು ಎಂದರು.
ಮುಖ್ಯ ಅತಿಥಿ, ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಪ್ರತಿಷ್ಠಾನದ ಧ್ಯೇಯೋದ್ದೇಶಗಳನ್ನು ವಿವರಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಶಾಲೆಯ ವಿದ್ಯಾರ್ಥಿಗಳಾದ ಸೌಭಾಗ್ಯ ಹೊಸಳ್ಳಿ, ದೇವಮ್ಮ ಹುಲಕೋಟಿ, ರಕ್ಷಿತಾ ಹುಬ್ಬಳ್ಳಿ, ರೋಶನ್ ನದಾಫ್, ಸಾಗರ್ ಹುಬ್ಬಳ್ಳಿ ಅವರಿಗೆ ನಗದು ಪುರಸ್ಕಾರದ ಚೆಕ್, ಪ್ರಮಾಣ ಪತ್ರ, ಕಾಲೇಜ್ ಬ್ಯಾಗ್ ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಬಿ.ವ್ಹಿ. ಮಲ್ಲನಗೌಡ್ರ ವಹಿಸಿದ್ದರು. ಸಮಾರಂಭದಲ್ಲಿ ಜಿ.ಬಿ. ಕಮಡೊಳ್ಳಿ, ಎಸ್.ಬಿ. ಭಜಂತ್ರಿ, ಎಸ್.ಸಿ. ಲಮಾಣಿ ಸೇರಿದಂತೆ ಪ್ರತಿಷ್ಠಾನದ ಶಿವಾನಂದ ಕತ್ತಿ, ಸುಭಾಸ ಬೆಟದೂರ, ಭಾರತಿ ಪಾಟೀಲ, ರವಿ ದಂಡಿನ, ಸಿದ್ಧಣ್ಣ ಕವಲೂರ, ಎಸ್.ಜಿ. ಫಿರಂಗಿ, ನೇಹಾ ಖಟವಟೆ, ಸುಧಾರಾಣಿ, ಶಹಬಾಜ್ ಮುಂತಾದವರಿದ್ದರು.
ಶ್ಯಾಗೋಟಿಯಲ್ಲಿ: ಶ್ಯಾಗೋಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನಿರ್ಮಲಾ ನೀಲಿ, ಸುರೇಖಾ ಪೂಜಾರಿ, ಮೇಘಾ ನೀಲಿ, ಸುಧಾ ಆಡಕರ, ಭುವನೇಶ್ವರಿ ಹಳ್ಳಿ ಅವರಿಗೆ ಶಾಲೆಯಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯೆ ಸುಧಾ ಮನ್ನಾಪೂರ ವಹಿಸಿದ್ದರು. ಎಸ್ಡಿಎಂಸಿ ಅಧ್ಯಕ್ಷ ಶಂಕರಗೌಡ ಪಾಟೀಲ, ಡಾ.ರೇಣುಕಾ ಬಿನ್ನಾಳ, ಶಿಕ್ಷಕರಾದ ರಾಜು ಪವಾರ, ಸಿ.ಬಿ. ಪಾಟೀಲ, ನಿವೃತ್ತ ಶಿಕ್ಷಕ ಎಂ.ಎಚ್. ಮರಿಗೌಡ್ರ, ಪ್ರತಿಷ್ಠಾನದ ಪದಾಧಿಕಾರಿಗಳಿದ್ದರು.
ಹಿರೇಹಂದಿಗೋಳದಲ್ಲಿ
ಹಿರೇಹಂದಿಗೋಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಲ್ಲನಗೌಡ ಹುಲ್ಲೂರ, ಕವಿತಾ ಕುರ್ತಕೋಟಿ, ಗೀತಾ ನವಲಗುಂದ, ಭಾಗ್ಯಶ್ರೀ ಹಲಗಿ, ಸಂಜನಾ ನರೆಣ್ಣವರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ವ್ಹಿ.ಎಚ್. ಗುಡ್ಲಾನೂರ ವಹಿಸಿದ್ದರು. ಶಾಲೆಯ ಶಿಕ್ಷಕರಾದ ವ್ಹಿ.ಎಲ್. ಪೂಜಾರ, ಯು.ವ್ಹಿ. ಮಟ್ಟಿ, ಎಸ್.ಎಸ್. ಪಾಟೀಲ ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳಿದ್ದರು.