Home Blog Page 8

Crime News: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ ಬರ್ಬರ ಕೊಲೆ!

0

ಮಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಗಳೂರು ಹೊರವಲಯದ ತೊಕ್ಕೊಟ್ಟು ಫೈಓವರ್ ಮೇಲೆ ಜರುಗಿದೆ.

ಆರಿಫ್ @ ಟಾಬ್ಲೆಟ್ ಆರಿಫ್ ಕೊಲೆಯಾದ ರೌಡಶೀಟರ್. ಈತ ಮುಳ್ಳುಗುಡ್ಡೆ ಹೌಸ್ ತಲಪಾಡಿ ನಿವಾಸಿ. ಇಂದು ಬೆಳ್ಳಂಬೆಳ್ಳಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

ಆರೋಪಿಗಳು ಕಾರಿನಲ್ಲಿ ಬಂದು ಹಿಬ್ಬಂದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ರೌಡಿಶೀಟರ್ ರಸ್ತೆಗೆ ಬಿದ್ದಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ನಂತರ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಘಟನೆಗೆ ಗ್ಯಾಂಗ್ ವಾರ್ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೈಸೂರು: 45 ಜಾತಿಯ ಮರಗಳನ್ನು ಅಕ್ರಮವಾಗಿ ಕಡಿದ ಆರೋಪಿ ಬಂಧನ!

ಮೈಸೂರು: ನಂಜನಗೂಡಿನ ಕಪಿಲಾ ನದಿಯ ದಡದಲ್ಲಿ ಅರಣ್ಯ ಇಲಾಖೆ ಬೆಳೆಸಿದ್ದ 45 ವಿಭಿನ್ನ ಜಾತಿಯ ಮರಗಳನ್ನು ಯಾವುದೇ ಅನುಮತಿ ಪಡೆಯದೆ ಕಡಿದುಹಾಕಿದ ಆರೋಪಿಯನ್ನು ಬಂಧಿಸಲಾಗಿದೆ.

ಆಲತ್ತೂರು ಗ್ರಾಮದ ಕೃಷ್ಣ (45) ಆರೋಪಿ ಎಂದು ಗುರುತಿಸಲಾಗಿದೆ.

ಮಾರ್ಚ್ 8ರಂದು ನಡೆದ ಈ  ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾಗಿ ಚರ್ಚೆಗೆ ಗುರಿಯಾಗಿತ್ತು. ಪ್ರಕರಣ ನಡೆದು ಹಲವು ದಿನಗಳಾದರೂ ಅರಣ್ಯ ಇಲಾಖೆಯು ಯಾವುದೇ ಕ್ರಮ ಕೈಗೊಳ್ಳದೆ ಇರಲು ಚುನಾವಣಾ ಆಲೋಚನೆಗಳಾಗಿತ್ತು. ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾರ್ಚ್ 10ರಂದು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳುವಂತೆ ಖಡಕ್ ವಾರ್ನಿಂಗ್ ನೀಡಿದ್ದರು.

ಘಟನೆ ನಡೆದು 17 ದಿನಗಳ ನಂತರ ಎಚ್ಚೆತ್ತ ಅಧಿಕಾರಿಗಳು ಓರ್ವನನ್ನು ಬಂಧಿಸಿದ್ದಾರೆ.

ಕರ್ನಾಟಕದ ಈ ಭಾಗಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ: ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!

ಬೆಂಗಳೂರು: ರಾಜ್ಯದ ಹಲವೆಡೆ ಕಳೆದ ಮೂರು-ನಾಲ್ಕು ದಿನಗಳಿಂದ ಗುಡುಗು ಸಹಿತ ಮಳೆಯಾಗಿದೆ. ಇಂದೂ ಹಲವು ಪ್ರದೇಶಗಳಲ್ಲಿ ಮಳೆಯ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಶೇಷವಾಗಿ ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಗುಡುಗು-ಆಲಿಕಲ್ಲು ಸಹಿತ ಮಳೆಯ ಸಾಧ್ಯತೆ ಇದ್ದುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೀದರ್, ಯಾದಗಿರಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ನೀಡಲಾಗಿದೆ.

ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಗುಡುಗು-ಮಳೆಯ ಸಂಭವ ಇದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದ್ದು, ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಇರಲಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಮೈಸೂರಿನಲ್ಲಿ ಕೂಡ ಗುಡುಗು ಸಹಿತ ಮಳೆಯ ಸಂಭವ ಇದೆ.

ಜನರನ್ನು ಸುರಕ್ಷಿತವಾಗಿರಲು ಹಾಗೂ ಮುಂಗಡ ಕ್ರಮ ಕೈಗೊಳ್ಳಲು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ವಿಜಯಪುರ| ಕಳ್ಳತನ, ದರೋಡೆ ಸೇರಿ 42 ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸ್!

ವಿಜಯಪುರ; ಜಿಲ್ಲೆಯಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 42 ಆರೋಪಿಗಳನ್ನು ಬಂಧಿಸಿ 1.20 ಕೋಟಿ ರೂ.ಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಇಂಡಿ ಉಪವಿಭಾಗ ವ್ಯಾಪ್ತಿಯಲ್ಲಿ 2024ರಿಂದ 2026ರವರೆಗೆ ದಾಖಲಾಗಿದ್ದ 20ಕ್ಕೂ ಹೆಚ್ಚು ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಸರಣಿ ಕಳ್ಳತನ, ದೇವಸ್ಥಾನ ದರೋಡೆ, ಲಾರಿ ತಡೆದು ನಡೆಸಿದ ದರೋಡೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸುವ ಮೂಲಕ ದೊಡ್ಡ ಜಾಲವನ್ನು ಬಯಲಿಗೆಳೆದಿದ್ದಾರೆ.

ಪೊಲೀಸರ ಕಾರ್ಯಾಚರಣೆಯಲ್ಲಿ ಕಳ್ಳತನವಾಗಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು, ಜೆಸಿಬಿ, ಪಿಕಪ್ ವ್ಯಾನ್, ಸ್ಕಾರ್ಪಿಯೋ, ಟ್ರ್ಯಾಕ್ಟರ್‌ಗಳು, ಮೋಟಾರ್ ಸೈಕಲ್‌ಗಳು ಮತ್ತು ನೀರಿನ ಪಂಪ್ ಸೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಚಡಚಣ ದೇವಸ್ಥಾನ ಕಳ್ಳತನ, ಆಲಮೇಲ ಪ್ರದೇಶದ ಫೈನಾನ್ಸ್ ಕಳ್ಳತನ ಮತ್ತು ಹೊರ್ತಿ ಠಾಣೆ ವ್ಯಾಪ್ತಿಯ ದರೋಡೆ ಪ್ರಕರಣಗಳನ್ನು ಒಳಗೊಂಡಂತೆ ಹಲವು ಪ್ರಕರಣಗಳನ್ನು ಭೇದಿಸಿ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದು, ಇಂತಹ ಕೃತ್ಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ತಾಂತ್ರಿಕ ದೋಷ: ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್

0

ನವದೆಹಲಿ: ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷದ ಹಿನ್ನೆಲೆ ದೆಹಲಿಗೆ ಹಿಂತಿರುಗಿದೆ.

ದೆಹಲಿಯಿಂದ ಬೆಳಗ್ಗೆ 6 ಗಂಟೆಗೆ ಹೊರಟಿದ್ದ AI111 ವಿಮಾನವು ಸುಮಾರು 7 ಗಂಟೆಗಳ ಕಾಲ ಹಾರಾಟ ನಡೆಸಿದ ಬಳಿಕ ಸುರಕ್ಷತಾ ಕಾರಣಗಳಿಂದ ವಾಪಸ್ ದೆಹಲಿಗೆ ಮರಳಿತು. ಸೌದಿ ಅರೇಬಿಯಾ ಆಕಾಶದ ಮೇಲೆ ಹಾರುತ್ತಿರುವ ವೇಳೆ ವಿಮಾನದಲ್ಲಿ ಅಸಾಮಾನ್ಯ ಶಬ್ದ ಕೇಳಿಸಿಕೊಂಡ ಹಿನ್ನೆಲೆಯಲ್ಲಿ ಪೈಲಟ್ ಮುನ್ನೆಚ್ಚರಿಕಾ ಕ್ರಮವಾಗಿ ಹಿಂದಿರುಗುವ ನಿರ್ಧಾರ ಕೈಗೊಂಡರು.

ಮಧ್ಯಾಹ್ನ ಸುಮಾರು 12:30ಕ್ಕೆ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ. ಏರ್‌ಬಸ್ A350-900 ಮಾದರಿಯ ಈ ವಿಮಾನದಲ್ಲಿ ಒಂದೇ ತಿಂಗಳಲ್ಲಿ ಎರಡನೇ ಬಾರಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ಗಮನಾರ್ಹವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಏರ್ ಇಂಡಿಯಾ ವಕ್ತಾರರು, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನವನ್ನು ಹಿಂತಿರುಗಿಸಲಾಗಿದೆ. ಪ್ರಸ್ತುತ ವಿಮಾನವನ್ನು ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗಿದ್ದು, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿರುವ ಸಂಸ್ಥೆ, ಅವರನ್ನು ಲಂಡನ್‌ಗೆ ಕಳುಹಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮಧ್ಯಪ್ರಾಚ್ಯ ಯುದ್ಧ ಜಾಗತಿಕ ಸಂಕಷ್ಟಕ್ಕೆ ಕಾರಣವಾಗಬಹುದು: ಪುಟಿನ್ ಎಚ್ಚರಿಕೆ!

0

ಮಾಸ್ಕೋ: ಮಧ್ಯಪ್ರಾಚ್ಯದಲ್ಲಿನ ನಡೆಯುತ್ತಿರುವ ಸಂಘರ್ಷವು ಜಾಗತಿಕ ಮಟ್ಟದಲ್ಲಿ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ.

ಈ ಸಂಘರ್ಷವು ಕೋವಿಡ್ ಮಹಾಮಾರಿಯಂತೆಯೇ ವಿಶ್ವದ ಆರ್ಥಿಕತೆ ಮತ್ತು ಪೂರೈಕೆ ವ್ಯವಸ್ಥೆಗಳ ಮೇಲೆ ದೊಡ್ಡ ಹೊಡೆತ ನೀಡಬಹುದು. ಈಗಾಗಲೇ ಅಂತಾರಾಷ್ಟ್ರೀಯ ಲಾಜಿಸ್ಟಿಕ್ಸ್, ಉತ್ಪಾದನೆ ಮತ್ತು ಪೂರೈಕೆ ಸರಪಳಿಗಳು ಅಸ್ತವ್ಯಸ್ತಗೊಂಡಿದ್ದು, ಹೈಡ್ರೋಕಾರ್ಬನ್, ಲೋಹಗಳು ಮತ್ತು ರಸಗೊಬ್ಬರ ಕ್ಷೇತ್ರಗಳು ಭಾರೀ ಒತ್ತಡಕ್ಕೆ ಒಳಗಾಗಿವೆ ಎಂದಿದ್ದಾರೆ.

ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಈ ಬಿಕ್ಕಟ್ಟು ಶೀಘ್ರದಲ್ಲೇ ಬಗೆಹರಿಯುವ ಸಾಧ್ಯತೆ ಕಡಿಮೆ ಎಂದು ಪುಟಿನ್ ಅಭಿಪ್ರಾಯಪಟ್ಟಿದ್ದಾರೆ. ಯುದ್ಧ ಯಾವಾಗ ಅಂತ್ಯವಾಗುತ್ತದೆ ಎಂಬುದು ಯಾರಿಗೂ ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.

ಇದೀಗ ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷವು ಕೇವಲ ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗದೆ, ಅನೇಕ ರಾಷ್ಟ್ರಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಫೆಬ್ರವರಿ 28ರಿಂದ ಆರಂಭವಾದ ಈ ಯುದ್ಧದಲ್ಲಿ ರಷ್ಯಾ ಇರಾನ್‌ಗೆ ಪರೋಕ್ಷ ಬೆಂಬಲ ನೀಡುತ್ತಿರುವುದು ಗಮನಾರ್ಹವಾಗಿದೆ. ಈ ನಡುವೆ ಹಾರ್ಮುಜ್ ಜಲಸಂಧಿ ಬಳಿ ನಡೆದ ದಾಳಿಯಲ್ಲಿ ಇರಾನ್ ನೌಕಾಪಡೆಯ ಪ್ರಮುಖ ಕಮಾಂಡರ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಉದ್ವಿಗ್ನಗೊಳಿಸಿದೆ.

ಈ ಬೆಳವಣಿಗೆಗಳ ನಡುವೆ, ಇರಾನ್ ತನ್ನ ಉನ್ನತ ಸೇನಾ ಅಧಿಕಾರಿಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಸಾಧ್ಯತೆ ಇದ್ದು, ಇದರಿಂದ ಗಲ್ಫ್ ರಾಷ್ಟ್ರಗಳು ಹಾಗೂ ಅಂತಾರಾಷ್ಟ್ರೀಯ ಜಲಮಾರ್ಗಗಳ ಭದ್ರತೆಗೆ ಮತ್ತಷ್ಟು ಸವಾಲು ಎದುರಾಗುವ ಸಾಧ್ಯತೆ ಇದೆ.

ಗಂಡು ದೆವ್ವದ ಕಾಟ: ವಿಚಿತ್ರವಾಗಿ ವರ್ತಿಸಿ ಮಹಿಳೆ ಸಾವು!

ಚಿಕ್ಕಬಳ್ಳಾಪುರ: ದೆವ್ವ ಕಾಟವಿದೆ ಎಂಬ ಭಯದಿಂದ ಮಾನಸಿಕವಾಗಿ ಅಸ್ವಸ್ಥಳಾಗಿ ವರ್ತಿಸುತ್ತಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ತೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುಳಾ (36) ಮೃತ ಮಹಿಳೆ.

ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದ ಮಂಜುಳಾರನ್ನು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಕುರಿತು ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಜುಳಾ ಅವರು ದೊಡ್ಡಬಳ್ಳಾಪುರ ತಾಲೂಕಿನ ಸೋತೇನಹಳ್ಳಿ ಗ್ರಾಮದವರು. 16 ವರ್ಷಗಳ ಹಿಂದೆ ತೌಡನಹಳ್ಳಿ ಗ್ರಾಮದ ರಮೇಶ್ ಅವರನ್ನು ವಿವಾಹವಾಗಿದ್ದು, ದಂಪತಿಗಳ ನಡುವೆ ಯಾವುದೇ ಗೃಹ ಕಲಹ ಇರಲಿಲ್ಲವೆಂದು ತಿಳಿದುಬಂದಿದೆ. ಇತ್ತೀಚೆಗೆ ತವರು ಮನೆಗೆ ತೆರಳಿ, ಮಾವನ ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದ ನಂತರ ಅವರು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದ್ದರು ಎನ್ನಲಾಗಿದೆ.

ತಮ್ಮ ಮುಂದೆ ಯಾರೋ ಕಾಣಿಸಿಕೊಂಡು ಕಾಡುತ್ತಿರುವ ಅನುಭವವಾಗುತ್ತಿದೆ ಎಂದು ಮಂಜುಳಾ ಹೇಳುತ್ತಿದ್ದರೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದರಿಂದ ಭಯಗೊಂಡ ಪತಿ ರಮೇಶ್ ಕೆಲಸ ಕಾರ್ಯಗಳನ್ನು ಬಿಟ್ಟು ದೇವಾಲಯಗಳು ಮತ್ತು ಮಂತ್ರ ಚಿಕಿತ್ಸಕರನ್ನು ಸಂಪರ್ಕಿಸಿ ಪರಿಹಾರ ಹುಡುಕಲು ಪ್ರಯತ್ನಿಸಿದ್ದರು. ಮೇಲೂರಿನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲೂ ಪೂಜೆ ಮಾಡಿಸಿ ತಾಯತ ಕಟ್ಟಿಸಿದ್ದರೂ ಯಾವುದೇ ಬದಲಾವಣೆ ಕಾಣಿಸಲಿಲ್ಲ.

ನಂತರ ವೈದ್ಯರ ಬಳಿ ತೋರಿಸಿದರೂ ಆರೋಗ್ಯದಲ್ಲಿ ಸುಧಾರಣೆ ಆಗದೇ, ಮಂಜುಳಾ ವಿಚಿತ್ರವಾಗಿ ವರ್ತಿಸುತ್ತಲೇ ಕೊನೆಗೆ ಮೃತಪಟ್ಟಿದ್ದಾರೆ. ಘಟನೆ ಕುರಿತಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಂದೇ ಭಾರತ್ ರೈಲಿನಲ್ಲಿ ಹುಳುಗಳಿರುವ ಮೊಸರು: ಐಆರ್‌ಸಿಟಿಸಿಗೆ 10 ಲಕ್ಷ ದಂಡ!

0

ಪಾಟ್ನಾ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಿದ ಮೊಸರಿನಲ್ಲಿ ಹುಳುಗಳು ಪತ್ತೆಯಾದ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯವು ಐಆರ್‌ಸಿಟಿಸಿಗೆ 10 ಲಕ್ಷ ರೂ. ದಂಡ ವಿಧಿಸಿದೆ.

ಮಾರ್ಚ್ 15ರಂದು ಪಾಟ್ನಾ-ಟಾಟಾನಗರ ಮಾರ್ಗದ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರಿತೇಶ್ ಕುಮಾರ್ ಸಿಂಗ್ ಅವರಿಗೆ ರಾತ್ರಿ ಊಟದ ವೇಳೆ ನೀಡಿದ ಮೊಸರಿನಲ್ಲಿ ಜೀವಂತ ಹುಳುಗಳು ಕಂಡುಬಂದಿವೆ. ಇದನ್ನು ಗಮನಿಸಿದ ಪ್ರಯಾಣಿಕರು ತಕ್ಷಣವೇ ರೈಲು ಸಿಬ್ಬಂದಿಯನ್ನು ಪ್ರಶ್ನಿಸಿದರೂ, ಸಿಬ್ಬಂದಿ ಅದನ್ನು ನಿರಾಕರಿಸಿ ‘ಕೇಸರಿ’ ಎಂದು ನಂಬಿಸಲು ಪ್ರಯತ್ನಿಸಿದ್ದಾರೆ

ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ನಂತರ ನಡೆದ ಪರಿಶೀಲನೆಯಲ್ಲಿ ಆ ಮೊಸರು ಅವಧಿ ಮೀರಿರುವುದೂ ಪತ್ತೆಯಾಗಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೆ ಸಚಿವಾಲಯ, ಆಹಾರದ ಗುಣಮಟ್ಟದಲ್ಲಿ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಐಆರ್‌ಸಿಟಿಸಿಗೆ 10 ಲಕ್ಷ ರೂ. ದಂಡ ವಿಧಿಸಿದೆ. ಜೊತೆಗೆ, ಆಹಾರ ಸರಬರಾಜು ಮಾಡುತ್ತಿದ್ದ ಖಾಸಗಿ ಸಂಸ್ಥೆಗೆ 50 ಲಕ್ಷ ರೂ. ದಂಡ ವಿಧಿಸಿ, ಅದರ ಒಪ್ಪಂದವನ್ನು ತಕ್ಷಣದಿಂದಲೇ ರದ್ದುಪಡಿಸಲು ಆದೇಶಿಸಿದೆ.

ಪ್ರಯಾಣಿಕರ ಸುರಕ್ಷತೆ ಮತ್ತು ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ರೈಲ್ವೆ ಇಲಾಖೆ ಪುನರುಚ್ಚರಿಸಿದೆ.

1 ಲಕ್ಷಕ್ಕೆ 2 ಲಕ್ಷ ಖೋಟಾ ನೋಟು! ಬೆಳಗಾವಿಯಲ್ಲಿ ಗ್ಯಾಂಗ್ ಅರೆಸ್ಟ್

ಬೆಳಗಾವಿ: ಬೆಳಗಾವಿ ಮಾರ್ಕೆಟ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಖೋಟಾ ನೋಟು ದಂಧೆಯನ್ನು ಭೇದಿಸಿದ್ದಾರೆ.

ಗೋವಾ ಮೂಲದ ಗ್ಯಾಂಗ್ ಬೆಳಗಾವಿಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ವೇಳೆ ನಾಲ್ವರನ್ನು ಬಂಧಿಸಲಾಗಿದೆ.

ಬಂಧಿತರನ್ನು ಮೊಹಮ್ಮದ್ ಅರ್ಬಾಜ್ (21), ರೂಪೇಶ್ ವಾಕೋಡೆ (26), ಮೊಹಮ್ಮದ್ ಹುಸೇನ್ ಭಕ್ಷಿ (23) ಹಾಗೂ ಶ್ರವಣಕುಮಾರ (25) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಒಂದು ಕಾರು, 2.40 ಲಕ್ಷ ರೂ ಮುಖಬೆಲೆಯ ಖೋಟಾ ನೋಟುಗಳು ಮತ್ತು ನಾಲ್ಕು ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ತನಿಖೆ ಪ್ರಕಾರ, ಆರೋಪಿಗಳು 1 ಲಕ್ಷ ರೂ ಅಸಲಿ ಹಣಕ್ಕೆ 2 ಲಕ್ಷ ರೂ ಖೋಟಾ ನೋಟುಗಳನ್ನು ನೀಡುವ ಮೂಲಕ ದಂಧೆ ನಡೆಸುತ್ತಿದ್ದರು. ಬೆಳಗಾವಿಯ ಖಡೇಬಜಾರ್‌ನ ಅಂಗಡಿಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನಿಸಿದ ವೇಳೆ ಅಂಗಡಿ ಮಾಲೀಕನಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನು ಪ್ರಕರಣದ ಹಿನ್ನಲೆಯಲ್ಲಿ ದೊಡ್ಡ ಜಾಲವಿರುವುದು ಬೆಳಕಿಗೆ ಬಂದಿದೆ. ಗೋವಾದಲ್ಲಿ ಜೈಲಿನಲ್ಲಿರುವ ಮೊಹಮ್ಮದ್ ಸರ್ಫರಾಜ್ ಈ ದಂಧೆಯ ಪ್ರಮುಖ ಸೂತ್ರಧಾರ ಎಂದು ತಿಳಿದುಬಂದಿದೆ. ಆತ ಜೈಲಿನಿಂದಲೇ ಫೋನ್ ಮೂಲಕ ದಂಧೆಯನ್ನು ನಿಯಂತ್ರಿಸುತ್ತಿದ್ದನೆಂಬ ಶಂಕೆ ವ್ಯಕ್ತವಾಗಿದೆ. ಬಂಧಿತ ಅರ್ಬಾಜ್ ತನ್ನ ಅಣ್ಣ ಸರ್ಫರಾಜ್ ಸೂಚನೆಯಂತೆ ಖೋಟಾ ನೋಟುಗಳನ್ನು ತರಿಸಿಕೊಂಡು ವಿತರಣೆ ಮಾಡುತ್ತಿದ್ದನೆಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಅಪರಿಚಿತ ವ್ಯಕ್ತಿಯಿಂದ ಖೋಟಾ ನೋಟು ಪೂರೈಕೆ ನಡೆದಿರುವ ಸುಳಿವು ಸಿಕ್ಕಿದ್ದು, ಆತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಇರಾನ್‌ನಿಂದ ಕಚ್ಚಾ ತೈಲ ಖರೀದಿಸಿಲ್ಲ: ಸುಳ್ಳು ವದಂತಿಗಳ ವಿರುದ್ದ ರಿಲಯನ್ಸ್ ಕಿಡಿ!

0

ಮುಂಬೈ: ಇರಾನ್‌ನಿಂದ ಕಚ್ಚಾ ತೈಲ ಖರೀದಿಸಿದ ಬಗ್ಗೆ ಹೊರಬಿದ್ದ ಸುದ್ದಿಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಸಂಪೂರ್ಣವಾಗಿ ತಳ್ಳಿಹಾಕಿದೆ.

ಕಂಪನಿಯು ತನ್ನ ಅಧಿಕೃತ ಹೇಳಿಕೆಯಲ್ಲಿ, ಇಂತಹ ವರದಿಗಳು ಆಧಾರರಹಿತವಾಗಿದ್ದು ದಾರಿತಪ್ಪಿಸುವಂತಿವೆ ಎಂದು ಸ್ಪಷ್ಟಪಡಿಸಿದೆ.

ಕೆಲವು ಮಾಧ್ಯಮಗಳಲ್ಲಿ, ಅಮೆರಿಕ ತೈಲ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸಿದ ಬಳಿಕ ಇರಾನ್‌ ಮೂಲದ ಸುಮಾರು 5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ರಿಲಯನ್ಸ್ ಖರೀದಿಸಿದೆ ಎಂಬ ವರದಿಗಳು ಪ್ರಸಾರವಾಗಿದ್ದವು. ಆದರೆ ಈ ಆರೋಪಗಳನ್ನು ಕಂಪನಿ ಖಂಡಿಸಿದ್ದು, ಯಾವುದೇ ರೀತಿಯ ವ್ಯವಹಾರ ನಡೆದಿಲ್ಲ ಎಂದು ತಿಳಿಸಿದೆ.

ಇದೇ ವೇಳೆ, ಕಂಪನಿಯ ವಿರುದ್ಧ ಹರಿದಾಡುತ್ತಿರುವ ತಪ್ಪು ಮಾಹಿತಿಗಳು ಗೊಂದಲ ಸೃಷ್ಟಿಸುವುದರ ಜೊತೆಗೆ ಜನರನ್ನು ದಾರಿ ತಪ್ಪಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ರಿಲಯನ್ಸ್ ಸಂಸ್ಥೆಯು ತನ್ನ ವ್ಯವಹಾರಗಳು ಕಾನೂನುಬದ್ಧವಾಗಿ ಹಾಗೂ ಅಂತರರಾಷ್ಟ್ರೀಯ ನಿಯಮಾವಳಿಗಳ ಪ್ರಕಾರವೇ ನಡೆಯುತ್ತವೆ ಎಂದು ಸ್ಪಷ್ಟಪಡಿಸಿದೆ.

error: Content is protected !!