Home Blog Page 64

ಇಟಿಎಫ್ ಸಿಬ್ಬಂದಿಯನ್ನು ಅಟ್ಟಾಡಿಸಿದ ಮದದ ಸಲಗ: ಗಂಗಾವರದಲ್ಲಿ ಗ್ರಾಮಸ್ಥರಲ್ಲಿ ಆತಂಕ

0

ಹಾಸನ: ಮದದಲ್ಲಿದ್ದ ಒಂಟಿ ಸಲಗವೊಂದು ಇಟಿಎಫ್ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಅಟ್ಟಾಡಿಸಿದ ಘಟನೆ ಬೇಲೂರು ತಾಲೂಕಿನ ಗಂಗಾವರ ಗ್ರಾಮದಲ್ಲಿ ನಡೆದಿದೆ. ಕಾಡಾನೆ ರಸ್ತೆ ದಾಟುವ ವೇಳೆ ಇಟಿಎಫ್ ಸಿಬ್ಬಂದಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿಕೊಂಡು ನಿಂತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಸಲಗ ಜನರಿದ್ದ ಕಡೆಗೆ ನುಗ್ಗಿದ್ದು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಯದಿಂದ ಓಡಿ ತಪ್ಪಿಸಿಕೊಂಡಿದ್ದಾರೆ.

ಕಾಡಾನೆ ರಸ್ತೆ ದಾಟುತ್ತಿದ್ದ ವೇಳೆ ಎರಡು ಕಡೆಗಳಲ್ಲಿ ಸಾರಿಗೆ ಬಸ್, ಅರಣ್ಯ ಇಲಾಖೆ ಜೀಪ್ ಸೇರಿದಂತೆ ಹಲವು ವಾಹನಗಳನ್ನು ನಿಲ್ಲಿಸಲಾಗಿತ್ತು. ಜನರು ಸ್ಥಳದಲ್ಲಿದ್ದಾಗಲೇ ಸಲಗ ನುಗ್ಗಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮದ ಶಾಲೆಯ ಮುಂಭಾಗ ಮತ್ತು ಮನೆಗಳ ಬಳಿಯೇ ಕಾಡಾನೆ ಸಂಚರಿಸಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

ಇದೇ ವೇಳೆ ಎರಡು ದೈತ್ಯಾಕಾರದ ಕಾಡಾನೆಗಳು ಮದದಲ್ಲಿರುವುದು ಕಂಡುಬಂದಿದ್ದು, ಅವುಗಳನ್ನು ಕಾಡಿನತ್ತ ಓಡಿಸಲು ಇಟಿಎಫ್ ಸಿಬ್ಬಂದಿ ಪಟಾಕಿ ಸಿಡಿಸುತ್ತಿದ್ದಾರೆ. ಪಟಾಕಿ ಸಿಡಿಸಿದ ಹಿನ್ನೆಲೆಯಲ್ಲಿ ಕಾಡಾನೆಗಳು ಚದುರಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಗಂಗಾವರ ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಕಾಡಾನೆಗಳ ನಿರಂತರ ಹಾವಳಿಯಿಂದ ಗ್ರಾಮಸ್ಥರು ಹಾಗೂ ಕೂಲಿ ಕಾರ್ಮಿಕರು ಭಯಭೀತರಾಗಿದ್ದಾರೆ. ಆನೆಗಳ ಚಲನವಲನದ ಬಗ್ಗೆ ಇಟಿಎಫ್ ಸಿಬ್ಬಂದಿ ಮೈಕ್ ಮೂಲಕ ಅನೌನ್ಸ್ ಮಾಡಿ ಸ್ಥಳೀಯರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

ಬಿಜೆಪಿ ಸಮಾರೋಪ ಸಮಾವೇಶಕ್ಕೆ ಮೈದಾನ ಇಲ್ಲ: ಸರ್ಕಾರದ ಆದೇಶ ಮುಂದಿಟ್ಟು ಅನುಮತಿ ತಿರಸ್ಕಾರ

0

ಬಳ್ಳಾರಿ: ಬಿ.ವೈ. ವಿಜಯೇಂದ್ರ ನೇತೃತ್ವದ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಸಮಾರೋಪ ಸಮಾರಂಭಕ್ಕೆ ಬಳ್ಳಾರಿಯ ಎಕ್ಸ್ ಮುನಿಸಿಪಲ್ ಶಾಲಾ ಮೈದಾನ ಬಳಸಲು ಬಿಜೆಪಿ ಸಲ್ಲಿಸಿದ್ದ ಮನವಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಸೆಪ್ಟೆಂಬರ್ 10ರಂದು ಮಧ್ಯಾಹ್ನ 3ರಿಂದ ರಾತ್ರಿ 8ರವರೆಗೆ ಸಮಾವೇಶ ನಡೆಸಲು ಬಿಜೆಪಿ ಮುಖಂಡರು ಅನುಮತಿ ಕೋರಿದ್ದರು. ಆದರೆ ಶಾಲಾ ಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಮೈದಾನ ಬಳಕೆಗೆ ಒಪ್ಪಿಗೆ ನೀಡಿಲ್ಲ.

ಸರ್ಕಾರಿ ಶಾಲೆ ಮತ್ತು ಕಾಲೇಜುಗಳ ಆವರಣ, ಮೈದಾನ ಹಾಗೂ ಇತರ ಸಾರ್ವಜನಿಕ ಆಸ್ತಿಗಳನ್ನು ಖಾಸಗಿ ಸಂಸ್ಥೆಗಳು ಮತ್ತು ಸಂಘಟನೆಗಳ ಕಾರ್ಯಕ್ರಮಗಳಿಗೆ ನೀಡಬಾರದು ಎಂಬ ಸರ್ಕಾರದ ಆದೇಶದ ಆಧಾರದಲ್ಲಿ ಅನುಮತಿ ನಿರಾಕರಿಸಲಾಗಿದೆ. ಕಳೆದ ವರ್ಷದ ಅಕ್ಟೋಬರ್ 18ರಂದು ಸಚಿವ ಸಂಪುಟ ಕೈಗೊಂಡ ನಿರ್ಧಾರದಂತೆ ಶಾಲೆಗಳು, ಪಿಯು ಕಾಲೇಜುಗಳ ಮೈದಾನ, ಉದ್ಯಾನವನ ಸೇರಿದಂತೆ ಸರ್ಕಾರಿ ಆಸ್ತಿಗಳಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ಸರ್ಕಾರದ ಪೂರ್ವಾನುಮತಿ ಕಡ್ಡಾಯವಾಗಿದೆ.

ಖಾಸಗಿ ಸಂಘ-ಸಂಸ್ಥೆಗಳು ಅಥವಾ ಗುಂಪುಗಳು ಸರ್ಕಾರಿ ಆಸ್ತಿಗಳಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಸಮಾವೇಶ ಆಯೋಜಿಸಬೇಕಾದರೂ ಪೂರ್ವಾನುಮತಿ ಪಡೆಯಬೇಕು ಎಂಬ ಮಾರ್ಗಸೂಚಿಯನ್ನು ಸರ್ಕಾರ ಜಾರಿಗೊಳಿಸಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಳೆದ ಮುಂಗಾರು ಅಧಿವೇಶನದಲ್ಲಿ ‘ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ಮಸೂದೆ-2026’ ಮಂಡಿಸಲು ಮುಂದಾಗಿತ್ತು. ಆದರೆ ವಿರೋಧ ಪಕ್ಷಗಳ ಧರಣಿಯಿಂದಾಗಿ ಮಸೂದೆ ಚರ್ಚೆಗೆ ಬಂದಿರಲಿಲ್ಲ.

ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು, ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈ ಹಿಂದೆ ಆದೇಶಕ್ಕೆ ಮಧ್ಯಂತರ ತಡೆ ನೀಡಿ ವಿಚಾರಣೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇದೇ ನಿಯಮವನ್ನು ಉಲ್ಲೇಖಿಸಿ ಬಿಜೆಪಿ ಸಮಾವೇಶಕ್ಕೆ ಮೈದಾನ ನಿರಾಕರಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಬಳ್ಳಾರಿ ಚಲೋ ಪಾದಯಾತ್ರೆ 8ನೇ ದಿನಕ್ಕೆ ಕಾಲಿಟ್ಟಿದ್ದು, ಸಂಡೂರು ವಿಧಾನಸಭಾ ಕ್ಷೇತ್ರದಿಂದ ಇಂದು ಯಾತ್ರೆ ಆರಂಭವಾಗಿದೆ. ನಾಳೆ ಪಾದಯಾತ್ರೆ ಬಳ್ಳಾರಿ ತಲುಪಲಿದ್ದು, ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ.

ಗೃಹ ಜ್ಯೋತಿ ಸೌಲಭ್ಯ ಪಡೆಯೋರೇ ಗಮನಿಸಿ; ಸೆ.30ರೊಳಗೆ ಪರಿಶೀಲನೆ ಕಡ್ಡಾಯ!

0

ಬೆಂಗಳೂರು: ಕರ್ನಾಟಕ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯ ದುರ್ಬಳಕೆ ತಡೆಯಲು ಹಾಗೂ ಅನರ್ಹ ಫಲಾನುಭವಿಗಳನ್ನು ಗುರುತಿಸುವ ಉದ್ದೇಶದಿಂದ ಇಂಧನ ಇಲಾಖೆ ಕೈಗೊಂಡಿರುವ ಮರುಪರಿಶೀಲನಾ ಕಾರ್ಯ ಭರದಿಂದ ಸಾಗಿದೆ.

ಜುಲೈ 1ರಿಂದ ಆರಂಭವಾಗಿರುವ ಫಲಾನುಭವಿಗಳ ಮರುಪರಿಶೀಲನಾ ಪ್ರಕ್ರಿಯೆ ಸೆಪ್ಟೆಂಬರ್ 30ರವರೆಗೆ ನಡೆಯಲಿದೆ. ರಾಜ್ಯದಲ್ಲಿ ಸುಮಾರು 1.65 ಕೋಟಿ ಗೃಹ ಜ್ಯೋತಿ ಫಲಾನುಭವಿಗಳಿದ್ದು, ಈ ಪೈಕಿ 1.19 ಕೋಟಿ ಫಲಾನುಭವಿಗಳ ಪರಿಶೀಲನೆ ಪೂರ್ಣಗೊಂಡಿದೆ. ಒಟ್ಟು ಫಲಾನುಭವಿಗಳ ಪೈಕಿ ಶೇ.72ರಷ್ಟು ಮಂದಿಯ ಮರುಪರಿಶೀಲನೆ ಮುಗಿದಿದೆ.

ವಿದ್ಯುತ್ ಸರಬರಾಜು ಸಂಸ್ಥೆಗಳ ಸಿಬ್ಬಂದಿ ಮನೆ ಮನೆಗೆ ತೆರಳಿ ಫಲಾನುಭವಿಗಳ ಅಗತ್ಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಆದರೆ ಕೆಲವು ಫಲಾನುಭವಿಗಳು ವಿವಿಧ ಕಾರಣಗಳನ್ನು ನೀಡಿ ಪರಿಶೀಲನೆಗೆ ಅಗತ್ಯ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಪರಿಶೀಲನೆಗೆ ಸಹಕರಿಸದವರ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಎಸ್ಕಾಂಗಳು ಮುಂದಾಗಿವೆ.

ಅನರ್ಹ ಫಲಾನುಭವಿಗಳ ಪತ್ತೆಗೆ ಕ್ರಮ:

ಮರುಪರಿಶೀಲನೆ ವೇಳೆ ಆದಾಯ ತೆರಿಗೆ ಪಾವತಿಸುವವರು ಹಾಗೂ ಇತರೆ ರಾಜ್ಯಗಳ ಮತದಾರರ ಗುರುತಿನ ಚೀಟಿ ಹೊಂದಿರುವವರ ಅರ್ಹತೆಯನ್ನೂ ಪರಿಶೀಲಿಸಲಾಗುತ್ತಿದೆ. ಅರ್ಹತೆ ಇಲ್ಲದವರು ಪತ್ತೆಯಾದಲ್ಲಿ ಅಂತಹ ಫಲಾನುಭವಿಗಳನ್ನು ಗೃಹ ಜ್ಯೋತಿ ಯೋಜನೆಯಿಂದ ಹೊರಗಿಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಯೋಜನೆಯ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಮಾತ್ರ ಮುಂದುವರಿಸುವುದು ಹಾಗೂ ದುರ್ಬಳಕೆಯನ್ನು ತಡೆಯುವುದು ಮರುಪರಿಶೀಲನೆಯ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಬಾಕಿ ಇರುವ ಫಲಾನುಭವಿಗಳ ಪರಿಶೀಲನೆಯನ್ನು ಸೆಪ್ಟೆಂಬರ್ 30ರೊಳಗೆ ಪೂರ್ಣಗೊಳಿಸಲು ಇಲಾಖೆ ಕ್ರಮ ಕೈಗೊಂಡಿದೆ.

45.78 ಲಕ್ಷ ಫಲಾನುಭವಿಗಳ ಪರಿಶೀಲನೆ ಬಾಕಿ:

ಸದ್ಯ ರಾಜ್ಯದ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ 45.78 ಲಕ್ಷ ಫಲಾನುಭವಿಗಳ ಮರುಪರಿಶೀಲನೆ ಇನ್ನೂ ಬಾಕಿ ಇದೆ. ನಿಗದಿತ ಗಡುವಿನೊಳಗೆ ಇವರ ಪರಿಶೀಲನೆ ಪೂರ್ಣಗೊಳ್ಳಬೇಕಿದೆ.

ಒಟ್ಟಾರೆ, ಗೃಹ ಜ್ಯೋತಿ ಯೋಜನೆಯಡಿ ಫಲಾನುಭವಿಗಳ ಅರ್ಹತೆಯನ್ನು ಪರಿಶೀಲಿಸುವ ಪ್ರಕ್ರಿಯೆ ಅಂತಿಮ ಹಂತದತ್ತ ಸಾಗುತ್ತಿದ್ದು, ಪರಿಶೀಲನೆಗೆ ಸಹಕರಿಸದ ಹಾಗೂ ಅರ್ಹತೆ ಹೊಂದಿರದ ಫಲಾನುಭವಿಗಳ ಸೌಲಭ್ಯದ ಬಗ್ಗೆ ಸೆಪ್ಟೆಂಬರ್ 30ರ ಬಳಿಕ ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ.

ಕಾವೇರಿ ನೀರಿನ ಹೈವೋಲ್ಟೇಜ್ ಸಭೆ; : ಇಂದು ಕರ್ನಾಟಕದ ವಾದಕ್ಕೆ ಸಿಗುತ್ತಾ ನ್ಯಾಯ?

0

ನವದೆಹಲಿ: ಒಂದೆಡೆ ರಾಜ್ಯದಲ್ಲಿ ಮಳೆ ಕೊರತೆ, ಮತ್ತೊಂದೆಡೆ ಜಲಾಶಯಗಳ ನೀರಿನ ಮಟ್ಟ ಕುಸಿತ.. ಇದರ ನಡುವೆಯೇ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ನವದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮಹತ್ವದ ಸಭೆ ನಡೆಯಲಿದೆ.

ಎಸ್, ಈ ಹಿಂದಿನ ಮೂರು ಸಭೆಗಳಲ್ಲೂ ಕರ್ನಾಟಕಕ್ಕೆ ಹಿನ್ನಡೆಯಾಗಿದ್ದು, ಪ್ರಾಧಿಕಾರಗಳ ಆದೇಶದಂತೆ ರಾಜ್ಯ ಸರ್ಕಾರ ಈಗಾಗಲೇ ಮೂರು ಬಾರಿ ಒಟ್ಟು 40 ಟಿಎಂಸಿಗೂ ಅಧಿಕ ನೀರನ್ನು ತಮಿಳುನಾಡಿಗೆ ಹರಿಸಿದೆ. ಪ್ರತಿ ಬಾರಿಯೂ ನೀರು ಬಿಡುವುದಿಲ್ಲ ಎಂದು ಸರ್ಕಾರ ಹೇಳಿದ್ದರೂ, ಅಂತಿಮವಾಗಿ ಪ್ರಾಧಿಕಾರಗಳ ಆದೇಶಕ್ಕೆ ಮಣಿದು ನೀರು ಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದೀಗ ಮತ್ತೊಮ್ಮೆ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಬಂದರೆ ರಾಜ್ಯದ ರೈತರು ಹಾಗೂ ಕುಡಿಯುವ ನೀರಿನ ಪರಿಸ್ಥಿತಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಮಂಡ್ಯ ಜಿಲ್ಲೆಯ ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಬಾರಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುವ ನಿರ್ಧಾರ ಕೈಗೊಳ್ಳಬಾರದು ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಜಲಾಶಯಗಳಲ್ಲಿರುವ ನೀರಿನ ಪ್ರಮಾಣ, ಮಳೆ ಕೊರತೆ, ರೈತರ ಪರಿಸ್ಥಿತಿ ಹಾಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಾಸ್ತವ ಪರಿಸ್ಥಿತಿಯನ್ನು CWRC ಮತ್ತು CWMA ಮುಂದೆ ಸರ್ಕಾರ ಸಮರ್ಥವಾಗಿ ಮಂಡಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕದಿಂದ ರೈತರಿಗೆ ಕಟ್ಟು ಪದ್ಧತಿಯಲ್ಲಿ ನೀರು ಪೂರೈಸಲಾಗುತ್ತಿದೆ. ಆದರೆ ತಮಿಳುನಾಡಿನಲ್ಲಿ ಇದೇ ಕಾವೇರಿ ನೀರನ್ನು ರೈತರ ಬೆಳೆಗಳಿಗೆ ಬಳಸಲಾಗುತ್ತಿದೆ ಎಂದು ಮಂಡ್ಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಕರ್ನಾಟಕದ ರೈತರಿಗೆ ಮಾಡುತ್ತಿರುವ ಅನ್ಯಾಯ ಎಂದು ಆರೋಪಿಸಿದ್ದಾರೆ.

ರಾಜ್ಯದ ರೈತರ ಹಿತವನ್ನು ಬಲಿಕೊಟ್ಟು ಮತ್ತೆ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸರ್ಕಾರ ಮುಂದಾದರೆ, ಯಾವುದೇ ಕಾರಣಕ್ಕೂ ಸುಮ್ಮನಿರಲ್ಲ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ನಿರ್ಧಾರದ ವಿರುದ್ಧ ರಸ್ತೆಗಿಳಿದು ಉಗ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಖಡಕ್ ಸಂದೇಶ ನೀಡಿದ್ದಾರೆ.

ಒಟ್ಟಾರೆ, ಇಂದು ನಡೆಯಲಿರುವ CWRC ಹಾಗೂ CWMA ಸಭೆ ಕರ್ನಾಟಕದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಅಧಿಕಾರಿಗಳು ಯಾವ ರೀತಿ ಪ್ರಾಧಿಕಾರಗಳ ಮುಂದೆ ಮಂಡಿಸುತ್ತಾರೆ, ಈ ಬಾರಿ ಕರ್ನಾಟಕದ ವಾದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಹಾಗೂ ಮತ್ತೆ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಬರುತ್ತಾ ಎಂಬುದೇ ಸದ್ಯದ ಕುತೂಹಲ.

ಯಶವಂತಪುರ ಎಪಿಎಂಸಿಗೆ ಡಿಕೆಶಿ ದಿಢೀರ್ ಭೇಟಿ; ಇಡ್ಲಿ ತಿನ್ನುತ್ತಲೇ ರೈತರ ಸಮಸ್ಯೆ ಕೇಳಿದ CM

0

ಬೆಂಗಳೂರು: ಒಂದೆಡೆ ಮಾರುಕಟ್ಟೆಯ ಸಮಸ್ಯೆಗಳನ್ನು ಪರಿಶೀಲಿಸಲು ಅಧಿಕಾರಿಗಳ ಜೊತೆ ಸಭೆ ನಡೆಸೋದು ಸಾಮಾನ್ಯ.

ಆದ್ರೆ ಇಂದು ಮುಂಜಾನೆ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೂಲಿ ಕಾರ್ಮಿಕರ ಜೊತೆ ಕುಳಿತು ಇಡ್ಲಿ ತಿಂದು ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ಕೂಲಿಕಾರರ ಉಪಹಾರದ ಬಿಲ್‌ ಅನ್ನೂ ತಾವೇ ಪಾವತಿಸಿ ಮಾನವೀಯತೆ ಮೆರೆದಿದ್ದಾರೆ.

ಎಸ್, ಮಂಗಳವಾರ ಮುಂಜಾನೆ 7 ಗಂಟೆಗೆ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ಈರುಳ್ಳಿ ಮಂಡಿಗೆ ತೆರಳಿ ಸ್ಥಳೀಯ ವರ್ತಕರು, ರೈತರು ಹಾಗೂ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಮಾರುಕಟ್ಟೆಯ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದ ವೇಳೆ ರಸ್ತೆ ಬದಿಯ ಸಣ್ಣ ಪೆಟ್ಟಿಗೆ ಹೋಟೆಲ್‌ಗೆ ತೆರಳಿದ ಅವರು, ಅಲ್ಲಿದ್ದ ಕೂಲಿ ಕಾರ್ಮಿಕರ ಜೊತೆ ಕುಳಿತು ಇಡ್ಲಿ ಸೇವಿಸಿದರು.

ಈ ವೇಳೆ ತಮ್ಮ ಜೊತೆ ಕುಳಿತಿದ್ದ ಕೂಲಿ ಕಾರ್ಮಿಕರ ಉಪಹಾರದ ಹಣವನ್ನು ತಾವೇ ಪಾವತಿಸಲು ಮುಂದಾದ ಡಿ.ಕೆ. ಶಿವಕುಮಾರ್, ಹೋಟೆಲ್ ಮಾಲೀಕರಿಗೆ ₹500 ನೀಡಿ ಇವರ ಬಳಿ ಯಾವುದೇ ಹಣ ಪಡೆಯಬೇಡಿ ಎಂದು ಹೇಳಿದ್ದಾರೆ. ಸಿಎಂ ಸಾಮಾನ್ಯರ ಜೊತೆ ಕುಳಿತು ಉಪಹಾರ ಸೇವಿಸಿದ ದೃಶ್ಯ ಇದೀಗ ಗಮನ ಸೆಳೆದಿದೆ.

ಇನ್ನು ಮಾರುಕಟ್ಟೆ ಪರಿಶೀಲನೆ ವೇಳೆ ಎಪಿಎಂಸಿ ಮಾಜಿ ಸದಸ್ಯ ಅರುಣ್ ಪರಮೇಶ್ವರ್ ಸೇರಿದಂತೆ ಸ್ಥಳೀಯರು ಮಾರುಕಟ್ಟೆಯ ಅವ್ಯವಸ್ಥೆಗಳ ಬಗ್ಗೆ ಸಿಎಂ ಗಮನಕ್ಕೆ ತಂದರು. ರೈತರಿಗೆ ಕುಡಿಯುವ ನೀರಿನ ಸೌಲಭ್ಯ ಸಮರ್ಪಕವಾಗಿಲ್ಲ. ಒಂದು ಬಾಟಲಿ ನೀರಿಗೆ ₹20 ನೀಡಿ ಖರೀದಿಸಬೇಕಾದ ಪರಿಸ್ಥಿತಿ ಇದೆ ಎಂದು ದೂರಿದ್ದಾರೆ. ಶೌಚಾಲಯದ ವ್ಯವಸ್ಥೆಯೂ ಸರಿಯಾಗಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಇದರ ಜೊತೆಗೆ ಹಿಂದಿನ ಅಧಿಕಾರಿಗಳ ಅವಧಿಯಲ್ಲಿ ರೈತರಿಗಾಗಿ ನಿರ್ಮಿಸಲಾದ ಮಾರುಕಟ್ಟೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ದಾಖಲೆಗಳನ್ನು ಒದಗಿಸುವುದಾಗಿ ಸ್ಥಳೀಯರು ಸಿಎಂಗೆ ತಿಳಿಸಿದ್ದಾರೆ.

ಮಂಡಿ ವ್ಯಾಪಾರಿಗಳು ಹಾಗೂ ರೈತರ ಜೊತೆಗಿನ ಮಾತುಕತೆಯಲ್ಲಿ ಮಧ್ಯವರ್ತಿಗಳ ಹಾವಳಿ, ಅಧಿಕಾರಿಗಳ ನಿಯಂತ್ರಣದ ಕೊರತೆ ಹಾಗೂ ತೂಕದಲ್ಲಿ ಮೋಸ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಚಿತ್ರದುರ್ಗ ಸೇರಿದಂತೆ ಹೊರ ಜಿಲ್ಲೆಗಳಿಂದ ರೈತರು ಯಶವಂತಪುರ ಮಾರುಕಟ್ಟೆಗೆ ಬರುತ್ತಿದ್ದು, ಇಲ್ಲಿ ಮಧ್ಯವರ್ತಿಗಳ ಸಮಸ್ಯೆ ಹೆಚ್ಚಾಗಿದೆ ಎಂದು ರೈತರು ತಿಳಿಸಿದ್ದಾರೆ.

ಅಷ್ಟೇ ಅಲ್ಲ, 65 ಕೆಜಿ ತೂಕದ ಮೂಟೆಯನ್ನು ಕೇವಲ 50 ಕೆಜಿ ಎಂದು ಲೆಕ್ಕ ಹಾಕಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ರೈತರು ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದಿದ್ದಾರೆ.

ಒಟ್ಟಾರೆ, ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ರೈತರ ಹಾಗೂ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸುವುದರ ಜೊತೆಗೆ, ಅವರ ಜೊತೆ ಕುಳಿತು ಇಡ್ಲಿ ಸೇವಿಸಿ ₹500 ನೀಡಿ ಉಪಹಾರದ ಬಿಲ್ ಪಾವತಿಸಿರುವುದು ಗಮನ ಸೆಳೆದಿದೆ.

3 ದಿನವಾದ್ರೂ ಜ್ವರ ಕಡಿಮೆಯಾಗುತ್ತಿಲ್ಲವಾ? ಈ ಲಕ್ಷಣಗಳು ಕಾಣಿಸಿಕೊಂಡರೆ ತಡ ಮಾಡದೆ ಆಸ್ಪತ್ರೆಗೆ ಹೋಗಿ!

0

ಜ್ವರ ಎನ್ನುವುದು ದೇಹದಲ್ಲಿ ಸೋಂಕು ಅಥವಾ ಇತರ ಆರೋಗ್ಯ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಕಾಣಿಸಿಕೊಳ್ಳುವ ಸಾಮಾನ್ಯ ಲಕ್ಷಣ. ವೈರಲ್‌ ಸೋಂಕಿನಿಂದ ಉಂಟಾಗುವ ಸಾಮಾನ್ಯ ಜ್ವರ ಕೆಲ ದಿನಗಳಲ್ಲಿ ಕಡಿಮೆಯಾಗಬಹುದು. ಆದರೆ 3 ದಿನಗಳಿಗಿಂತ ಹೆಚ್ಚು ಕಾಲ ಜ್ವರ ಮುಂದುವರಿದರೆ ಅಥವಾ ಕಡಿಮೆಯಾಗಿ ಮತ್ತೆ ಮತ್ತೆ ಕಾಣಿಸಿಕೊಂಡರೆ, ಅದನ್ನು ನಿರ್ಲಕ್ಷಿಸದೆ ವೈದ್ಯರ ಸಲಹೆ ಪಡೆಯುವುದು ಮುಖ್ಯ.

ಜ್ವರದ ಹಿಂದೆ ವೈರಲ್‌ ಸೋಂಕು, ಬ್ಯಾಕ್ಟೀರಿಯಾ ಸೋಂಕು ಸೇರಿದಂತೆ ಹಲವು ಕಾರಣಗಳಿರಬಹುದು. ಕೆಲವು ಪ್ರದೇಶಗಳಲ್ಲಿ ಡೆಂಗ್ಯೂ, ಮಲೇರಿಯಾ ಅಥವಾ ಟೈಫಾಯಿಡ್‌ನಂತಹ ಕಾಯಿಲೆಗಳೂ ಕಾರಣವಾಗಬಹುದು. ಆದರೆ ಜ್ವರದ ಲಕ್ಷಣಗಳನ್ನು ಮಾತ್ರ ಆಧರಿಸಿ ಯಾವ ಕಾಯಿಲೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಅಗತ್ಯವಿದ್ದರೆ ವೈದ್ಯರು ರಕ್ತ ಪರೀಕ್ಷೆ ಸೇರಿದಂತೆ ಸೂಕ್ತ ತಪಾಸಣೆ ಮಾಡಿಸಬಹುದು.

ಜ್ವರದ ಜೊತೆಗೆ ಈ ಲಕ್ಷಣಗಳಿದ್ದರೆ ಎಚ್ಚರ

ಉಸಿರಾಟದ ತೊಂದರೆ:
ಜ್ವರದ ಜೊತೆಗೆ ಉಸಿರಾಡಲು ಕಷ್ಟವಾಗುವುದು, ಎದೆ ನೋವು ಅಥವಾ ಉಸಿರಾಟದಲ್ಲಿ ಅಸಹಜತೆ ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಇದು ಗಂಭೀರ ಉಸಿರಾಟದ ಸೋಂಕಿನ ಸೂಚನೆಯಾಗಿರಬಹುದು.

ನಿರಂತರ ವಾಂತಿ ಅಥವಾ ಡಿಹೈಡ್ರೇಶನ್:
ಜ್ವರದ ಜೊತೆಗೆ ಪದೇಪದೆ ವಾಂತಿ ಅಥವಾ ಭೇದಿ ಉಂಟಾದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವ ಅಪಾಯವಿದೆ. ಬಾಯಿ ಒಣಗುವುದು, ಮೂತ್ರದ ಪ್ರಮಾಣ ಕಡಿಮೆಯಾಗುವುದು, ತೀವ್ರ ದೌರ್ಬಲ್ಯ ಅಥವಾ ತಲೆ ಸುತ್ತುವಿಕೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು.

ದದ್ದು ಅಥವಾ ಅಸಹಜ ರಕ್ತಸ್ರಾವ:
ಚರ್ಮದ ಮೇಲೆ ಹೊಸದಾಗಿ ಕೆಂಪು ಚುಕ್ಕೆಗಳು ಅಥವಾ ದದ್ದು ಕಾಣಿಸಿಕೊಳ್ಳುವುದು, ಮೂಗು ಅಥವಾ ವಸಡಿನಿಂದ ರಕ್ತಸ್ರಾವವಾಗುವುದು, ಮೂತ್ರ ಅಥವಾ ಮಲದಲ್ಲಿ ರಕ್ತ ಕಾಣಿಸುವುದು ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ವಿಶೇಷವಾಗಿ ಡೆಂಗ್ಯೂ ಇರುವ ಸಾಧ್ಯತೆಯಿರುವ ಪ್ರದೇಶಗಳಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಮೌಲ್ಯಮಾಪನ ಅಗತ್ಯ.

ತೀವ್ರ ತಲೆನೋವು ಮತ್ತು ಕುತ್ತಿಗೆ ಬಿಗಿತ:
ಜ್ವರದ ಜೊತೆಗೆ ತೀವ್ರ ತಲೆನೋವು, ಕುತ್ತಿಗೆ ಬಿಗಿತ, ಬೆಳಕನ್ನು ಸಹಿಸಲಾಗದಿರುವುದು ಅಥವಾ ನಿರಂತರ ವಾಂತಿ ಇದ್ದರೆ ತುರ್ತು ವೈದ್ಯಕೀಯ ತಪಾಸಣೆ ಅಗತ್ಯ. ಇಂತಹ ಲಕ್ಷಣಗಳು ಗಂಭೀರ ಸೋಂಕಿನ ಸೂಚನೆಯಾಗಿರಬಹುದು.

ಗೊಂದಲ ಅಥವಾ ಪ್ರಜ್ಞೆಯ ಬದಲಾವಣೆ:
ಜ್ವರದ ಜೊತೆಗೆ ಅತಿಯಾದ ನಿದ್ರೆ, ಗೊಂದಲ, ತೀವ್ರ ತಲೆಸುತ್ತುವಿಕೆ, ಅಸಹಜ ವರ್ತನೆ ಅಥವಾ ಪ್ರಜ್ಞೆ ತಪ್ಪುವಂತಹ ಲಕ್ಷಣಗಳು ಕಂಡುಬಂದರೆ ತಡ ಮಾಡದೆ ತುರ್ತು ವೈದ್ಯಕೀಯ ನೆರವು ಪಡೆಯಬೇಕು.

ಮಕ್ಕಳು ಮತ್ತು ವಯೋವೃದ್ಧರಲ್ಲಿ ಹೆಚ್ಚು ಎಚ್ಚರಿಕೆ

ಚಿಕ್ಕ ಮಕ್ಕಳು, ವಯೋವೃದ್ಧರು ಹಾಗೂ ಈಗಾಗಲೇ ಮಧುಮೇಹ ಅಥವಾ ಇತರ ದೀರ್ಘಕಾಲದ ಕಾಯಿಲೆಗಳನ್ನು ಹೊಂದಿರುವವರು ಸೋಂಕಿನಿಂದ ಹೆಚ್ಚು ತೊಂದರೆಗೆ ಒಳಗಾಗುವ ಸಾಧ್ಯತೆ ಇರುವುದರಿಂದ ಜ್ವರವನ್ನು ನಿರ್ಲಕ್ಷಿಸಬಾರದು.

ವಿಶೇಷವಾಗಿ ಚಿಕ್ಕ ಮಗುವಿನಲ್ಲಿ ಜ್ವರದ ಜೊತೆಗೆ ನೀರು ಕುಡಿಯದಿರುವುದು, ಅತಿಯಾದ ನಿದ್ರೆ, ಉಸಿರಾಟದ ತೊಂದರೆ, ನಿರಂತರ ವಾಂತಿ, ಸೆಳೆತ ಅಥವಾ ಪ್ರತಿಕ್ರಿಯೆ ಕಡಿಮೆಯಾಗುವುದು ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು.

ಮನೆಯಲ್ಲಿ ಏನು ಮಾಡಬಹುದು?

ಜ್ವರ ಇರುವ ಸಂದರ್ಭದಲ್ಲಿ ಸಾಕಷ್ಟು ನೀರು ಮತ್ತು ದ್ರವ ಪದಾರ್ಥಗಳನ್ನು ಸೇವಿಸುವುದು, ದೇಹಕ್ಕೆ ಅಗತ್ಯವಾದ ವಿಶ್ರಾಂತಿ ನೀಡುವುದು ಮುಖ್ಯ. ವೈದ್ಯರು ಸೂಚಿಸಿದಂತೆ ಜ್ವರ ಕಡಿಮೆ ಮಾಡುವ ಔಷಧಿಯನ್ನು ಬಳಸಬಹುದು.

ಆದರೆ ವೈದ್ಯರ ಸಲಹೆಯಿಲ್ಲದೆ ಆಂಟಿಬಯಾಟಿಕ್‌ಗಳನ್ನು ತೆಗೆದುಕೊಳ್ಳಬಾರದು. ಪ್ರತಿಯೊಂದು ಜ್ವರವೂ ಬ್ಯಾಕ್ಟೀರಿಯಾ ಸೋಂಕಿನಿಂದ ಉಂಟಾಗುವುದಿಲ್ಲ.

ಜ್ವರ 3 ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ಪದೇಪದೆ ಮರಳುತ್ತಿದ್ದರೆ ಅಥವಾ ಮೇಲಿನ ಯಾವುದೇ ಅಪಾಯಕಾರಿ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ತಪಾಸಣೆ ಮಾಡಿಸಿಕೊಳ್ಳಿ. ಜ್ವರದ ತೀವ್ರತೆ ಮಾತ್ರವಲ್ಲದೆ, ಅದರ ಜೊತೆಗೆ ಕಾಣಿಸಿಕೊಳ್ಳುವ ಇತರ ಲಕ್ಷಣಗಳಿಗೂ ಗಮನ ನೀಡುವುದು ಅತ್ಯಂತ ಮುಖ್ಯ.

ಅಪಘಾತದಲ್ಲಿ ಗಾಯಗೊಂಡ ಚಿರತೆ ಸೆರೆ ಹಿಡಿಯುವಾಗ ಅರಣ್ಯ ಸಿಬ್ಬಂದಿ ಮೇಲೆ ದಾಳಿ!

0

ದಾವಣಗೆರೆ: ಅಪಘಾತದಲ್ಲಿ ಗಾಯಗೊಂಡಿದ್ದ ಚಿರತೆಯನ್ನು ರಕ್ಷಿಸುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಅನಗೋಡು ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ರಾತ್ರಿ 11 ಗಂಟೆ ಸುಮಾರಿಗೆ ರಸ್ತೆ ದಾಟುತ್ತಿದ್ದ ಚಿರತೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಗಾಯಗೊಂಡ ಚಿರತೆ ರಸ್ತೆ ಬದಿಯ ಚರಂಡಿಯಲ್ಲಿ ಬಿದ್ದು ನರಳಾಡುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಚಿಕಿತ್ಸೆಗಾಗಿ ಚಿರತೆಯನ್ನು ಸೆರೆ ಹಿಡಿಯಲು ಮುಂದಾದಾಗ ಅದು ಏಕಾಏಕಿ ದಾಳಿ ನಡೆಸಿದೆ. ದಾಳಿಯಲ್ಲಿ ಅರಣ್ಯ ಇಲಾಖೆಯ ಹೋಮ್‌ಗಾರ್ಡ್ ಒಬ್ಬರ ಕೈಗೆ ಗಾಯವಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೊಸಪೇಟೆಯಿಂದ ಆಗಮಿಸಿದ ವನ್ಯಜೀವಿ ಪಶುವೈದ್ಯರು ಗಾಯಗೊಂಡ ಚಿರತೆಗೆ ಅರವಳಿಕೆ ನೀಡಿದರು. ಚಿರತೆ ಪ್ರಜ್ಞೆ ತಪ್ಪಿದ ಬಳಿಕ ಅರಣ್ಯ ಸಿಬ್ಬಂದಿ ಬಲೆ ಹಾಕಿ ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.

ಗಾಯಗೊಂಡಿರುವ ಚಿರತೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ತ್ಯಾವರೆಕೊಪ್ಪಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಪಪ್ಪಾಯಿ ಹಣ್ಣು ಎಲ್ಲರೂ ತಿನ್ನಬಹುದೇ? ಈ ಆರೋಗ್ಯ ಸಮಸ್ಯೆ ಇದ್ದವರು ಎಚ್ಚರ!

0

ಪಪ್ಪಾಯಿ ಅಥವಾ ಪರಂಗಿ ಹಣ್ಣು ರುಚಿಕರವಾಗಿರುವುದಷ್ಟೇ ಅಲ್ಲದೆ, ಕಡಿಮೆ ಕ್ಯಾಲೊರಿ, ನಾರಿನಂಶ, ವಿಟಮಿನ್‌ಗಳು ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುವ ಪೌಷ್ಟಿಕ ಹಣ್ಣು.

ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಹಾಗೂ ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳನ್ನು ಪಪ್ಪಾಯಿ ಒದಗಿಸುತ್ತದೆ.

ಪಪ್ಪಾಯಿ ತೂಕ ನಿಯಂತ್ರಣಕ್ಕೂ ಸಹಾಯಕವಾಗಬಹುದು. ಕಡಿಮೆ ಕ್ಯಾಲೊರಿ ಹಾಗೂ ನಾರಿನಂಶ ಇರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಆದರೆ ಪಪ್ಪಾಯಿ ಮಾತ್ರ ಸೇವಿಸುವುದರಿಂದ ತೂಕ ಇಳಿಯುವುದಿಲ್ಲ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಹಾಗೂ ಉತ್ತಮ ನಿದ್ರೆ ಕೂಡ ಅಗತ್ಯ.

ಗರ್ಭಿಣಿಯರು ಪಪ್ಪಾಯಿ ತಿನ್ನಬಹುದೇ?

ಗರ್ಭಾವಸ್ಥೆಯಲ್ಲಿ ಪಕ್ವವಾದ ಪಪ್ಪಾಯಿಯನ್ನು ಸಾಮಾನ್ಯ ಆಹಾರದ ಪ್ರಮಾಣದಲ್ಲಿ ಸೇವಿಸುವುದರಿಂದ ಅಪಾಯವಿದೆ ಎಂಬುದಕ್ಕೆ ದೃಢವಾದ ಸಾಕ್ಷ್ಯವಿಲ್ಲ. ಆದರೆ ಕಚ್ಚಾ ಅಥವಾ ಅರ್ಧಪಕ್ವ ಪಪ್ಪಾಯಿಯಲ್ಲಿ ಲ್ಯಾಟೆಕ್ಸ್ ಪ್ರಮಾಣ ಹೆಚ್ಚಿರಬಹುದಾದ ಕಾರಣ ಗರ್ಭಿಣಿಯರು ಇಂತಹ ಪಪ್ಪಾಯಿಯನ್ನು ತಪ್ಪಿಸುವುದು ಸುರಕ್ಷಿತ. ಅನುಮಾನವಿದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಮಧುಮೇಹ ಇರುವವರು ಸೇವಿಸಬಹುದೇ?

ಮಧುಮೇಹ ಇರುವವರು ಪಪ್ಪಾಯಿಯನ್ನು ಸಂಪೂರ್ಣವಾಗಿ ತಪ್ಪಿಸಬೇಕೆಂದಿಲ್ಲ. ಆದರೆ ಸೇವಿಸುವ ಪ್ರಮಾಣದ ಬಗ್ಗೆ ಎಚ್ಚರಿಕೆ ಅಗತ್ಯ. ಮಧುಮೇಹದ ಔಷಧಿ ಅಥವಾ ಇನ್ಸುಲಿನ್ ಬಳಸುತ್ತಿರುವವರು ಆಹಾರದಲ್ಲಿ ಬದಲಾವಣೆ ಮಾಡುವಾಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಮನಿಸುವುದು ಹಾಗೂ ವೈದ್ಯರು ಅಥವಾ ಡಯಟಿಷಿಯನ್ ಸಲಹೆ ಪಡೆಯುವುದು ಉತ್ತಮ.

ರಕ್ತ ತೆಳುವಾಗಿಸುವ ಔಷಧಿ ಸೇವಿಸುವವರು ಎಚ್ಚರ:

ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಸಮಸ್ಯೆ ಇರುವವರು ಅಥವಾ ರಕ್ತ ತೆಳುವಾಗಿಸುವ ಔಷಧಿ ಸೇವಿಸುತ್ತಿರುವವರು ಆಹಾರದಲ್ಲಿ ದೊಡ್ಡ ಬದಲಾವಣೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಪಪ್ಪಾಯಿ ಎಲ್ಲರಿಗೂ ಅಪಾಯಕಾರಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಔಷಧಿ ಹಾಗೂ ವ್ಯಕ್ತಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವೈದ್ಯರು ಸಲಹೆ ನೀಡಬಹುದು.

ಪಪ್ಪಾಯಿಯನ್ನು ಹೇಗೆ ಸೇವಿಸಬೇಕು?

ತಾಜಾ ಪಪ್ಪಾಯಿಯನ್ನು ಮಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಜ್ಯೂಸ್ ಮಾಡುವ ಬದಲು ಹಣ್ಣನ್ನು ನೇರವಾಗಿ ತಿನ್ನುವುದರಿಂದ ನಾರಿನಂಶವನ್ನು ಪಡೆಯಬಹುದು. ಒಂದೇ ಹಣ್ಣನ್ನು ಅತಿಯಾಗಿ ಸೇವಿಸುವ ಬದಲು ವಿವಿಧ ಹಣ್ಣುಗಳು, ತರಕಾರಿಗಳು, ಸೊಪ್ಪುಗಳು ಹಾಗೂ ಪ್ರೋಟೀನ್‌ಯುಕ್ತ ಆಹಾರಗಳನ್ನು ಒಳಗೊಂಡ ಸಮತೋಲಿತ ಆಹಾರ ಪದ್ಧತಿ ಅನುಸರಿಸುವುದು ಉತ್ತಮ.

ಮುಖ್ಯವಾಗಿ: ಪಪ್ಪಾಯಿ ಆರೋಗ್ಯಕರ ಆಹಾರದ ಭಾಗವಾಗಬಹುದು. ಆದರೆ ಪಪ್ಪಾಯಿ ಕ್ಯಾನ್ಸರ್, ಹೃದ್ರೋಗ, ಕಾಮಾಲೆ ಅಥವಾ ಮಧುಮೇಹವನ್ನು ಗುಣಪಡಿಸುತ್ತದೆ ಎಂಬುದಕ್ಕೆ ಸಾಕಷ್ಟು ವೈದ್ಯಕೀಯ ಸಾಕ್ಷ್ಯವಿಲ್ಲ. ಯಾವುದೇ ಆರೋಗ್ಯ ಸಮಸ್ಯೆ ಅಥವಾ ನಿಯಮಿತ ಔಷಧಿ ಸೇವನೆ ಇದ್ದರೆ ವೈದ್ಯರ ಸಲಹೆಯೊಂದಿಗೆ ಆಹಾರದಲ್ಲಿ ಬದಲಾವಣೆ ಮಾಡುವುದು ಸೂಕ್ತ.

ಕದಡಿಯಲ್ಲಿ ನೀಲಾಂಬಿಕಾ ದೇವಿ ಜಾತ್ರಾ ವೈಭವ

0

ಗದಗ: ತಾಲೂಕಿನ ಕದಡಿ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ಗ್ರಾಮದ ಆರಾಧ್ಯ ದೇವತೆ ಶ್ರೀ ನೀಲಾಂಬಿಕಾ ದೇವಿ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ ಸೋಮವಾರ ಸಂಜೆ 6.15ಕ್ಕೆ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಗ್ರಾಮದ ಸದ್ಭಕ್ತ ಮಂಡಳಿ ಹಾಗೂ ಗುರು-ಹಿರಿಯರ ಮಾರ್ಗದರ್ಶನದಲ್ಲಿ ನಡೆದ ರಥೋತ್ಸವದಲ್ಲಿ ಡೊಳ್ಳು, ಜಾಗಟೆ ಸೇರಿದಂತೆ ವಿವಿಧ ವಾದ್ಯಗಳ ಸದ್ದಿಗೆ ಭಕ್ತರು ಜಯಘೋಷ ಮೊಳಗಿಸಿದರು. ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಗೆ ವಿಶೇಷ ನೈವೇದ್ಯವಾಗಿ ಹೋಳಿಗೆ ಸಮರ್ಪಿಸಿ, ದಾಸೋಹದಲ್ಲಿ ಪಾಲ್ಗೊಂಡರು.

ಜಾತ್ರೆಯ ಅಂಗವಾಗಿ ನೀಲಾಂಬಿಕಾ ನಾಟ್ಯ ಸಂಘದ ವತಿಯಿಂದ ‘ಬರ್ಕೋ ಪದ ಬರ್ಕೋ’ ಆಧ್ಯಾತ್ಮಿಕ ನಾಟಕ ಹಾಗೂ ಬುಧವಾರ ನಡೆಯುವ ಕಡುಬಿನ ಕಾಳಗದ ಸಂದರ್ಭದಲ್ಲಿ ಶ್ರೀ ಶಂಕರ ಸೇವಾ ನಾಟ್ಯ ಸಂಘದ ವತಿಯಿಂದ ‘ಗೌರಿ ಗೆದ್ದಳು’ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.

ನಾಟಕ, ಭಜನೆ ಹಾಗೂ ಕಲಾಮೇಳಗಳ ಮೂಲಕ ಜಾತ್ರೆಯು ಗ್ರಾಮೀಣ ಸೊಗಡು, ಕಲೆ-ಸಂಸ್ಕೃತಿ ಹಾಗೂ ಭಾವೈಕ್ಯತೆಯನ್ನು ಸಾರುವ ವೇದಿಕೆಯಾಗಿ ಗಮನ ಸೆಳೆಯುತ್ತಿದೆ.

ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಗುರುತಿಸಿ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರು ಶ್ರಮಿಸಲಿ: ಶ್ರೀ ಮುಕ್ತಿಮುನಿ ಶಿವಾಚಾರ್ಯರು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ, ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅವರ ಭವಿಷ್ಯ ರೂಪಿಸುವುದರ ಜತೆಗೆ ದೇಶದ ಸತ್ಪ್ರಜೆಗಳನ್ನು ನಿರ್ಮಿಸುವ ಮಹತ್ತರ ಜವಾಬ್ದಾರಿ ಹೊಂದಿರುವ ರಾಷ್ಟ್ರ ನಿರ್ಮಾತೃಗಳು ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು ಹೇಳಿದರು.

ಪಟ್ಟಣದ ಶ್ರೀ ವೀರ ಗಂಗಾಧರ ಕಲ್ಯಾಣ ಮಂಟಪದಲ್ಲಿ ಜಿಪಂ, ತಾಲೂಕಾಡಳಿತ ಹಾಗೂ ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 138ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಲಕ್ಷ್ಮೇಶ್ವರ-ಶಿರಹಟ್ಟಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಹಿಂದೆ ಶಾಲೆಗಳನ್ನು ‘ಸಾಲಿಗುಡಿ’ ಎಂದು ಗೌರವಿಸಲಾಗುತ್ತಿತ್ತು. ಆ ಪರಂಪರೆಯ ಮಹತ್ವವನ್ನು ಅರಿತು ಶಿಕ್ಷಕರು ಕಾರ್ಯನಿರ್ವಹಿಸಬೇಕು. ಸಮಾಜದಲ್ಲಿನ ಮೌಢ್ಯ, ಅಂಧಕಾರ ಹಾಗೂ ಮೂಢನಂಬಿಕೆಗಳನ್ನು ಹೋಗಲಾಡಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ಶ್ರಮಿಸಬೇಕು. ಮಕ್ಕಳು ಹಾಗೂ ಸಮಾಜ ನೀಡುವ ಗೌರವವೇ ಶಿಕ್ಷಕರಿಗೆ ದೊರೆಯುವ ಶ್ರೇಷ್ಠ ಪ್ರಶಸ್ತಿ ಎಂದರು.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕ, ತತ್ವಜ್ಞಾನಿ ಹಾಗೂ ರಾಜಕಾರಣಿಯಾಗಿ ದೇಶಕ್ಕೆ ಮಾದರಿಯಾಗಿದ್ದರು. ನಮ್ಮ ನೆಲದಲ್ಲಿ ನಡೆದಾಡಿದ ದೇವರೆಂದೇ ಗೌರವಿಸಲ್ಪಟ್ಟ ಲಿಂ. ವೀರ ಗಂಗಾಧರ ಜಗದ್ಗುರುಗಳು ಡಾ. ರಾಧಾಕೃಷ್ಣನ್ ಅವರನ್ನು ರಾಷ್ಟ್ರಪತಿ ಭವನದಲ್ಲಿಈ ಗೌರವಿಸಿದ್ದು ನಮ್ಮ ನೆಲದ ಹೆಮ್ಮೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಶಿಕ್ಷಕರ ಕೊರತೆ ಹಾಗೂ ಸೀಮಿತ ಸೌಲಭ್ಯಗಳ ನಡುವೆಯೂ ಶಿರಹಟ್ಟಿ ಮತಕ್ಷೇತ್ರದಲ್ಲಿ ಶಿಕ್ಷಕರ ಪ್ರಾಮಾಣಿಕ ಸೇವೆಯಿಂದ ಉತ್ತಮ ಶೈಕ್ಷಣಿಕ ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.

ಶಿಕ್ಷಕರು ಕರ್ತವ್ಯಪ್ರಜ್ಞೆ, ನಿರಂತರ ಅಧ್ಯಯನಶೀಲತೆ ಹಾಗೂ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪರಿಣಾಮಕಾರಿ ಬೋಧನೆಗೆ ಮುಂದಾಗಬೇಕು. ಮಕ್ಕಳ ಭವಿಷ್ಯದ ಜತೆಗೆ ದೇಶದ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ. ಕ್ಷೇತ್ರದ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಪ್ರತಿವರ್ಷ ಶಿಕ್ಷಕರ ದಿನಾಚರಣೆಯಂದೇ ನಿವೃತ್ತ ಶಿಕ್ಷಕರಿಗೆ ಸನ್ಮಾನದ ಜತೆಗೆ ಪಿಂಚಣಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಒಪಿಎಸ್ ಜಾರಿ ಸೇರಿದಂತೆ ಶಿಕ್ಷಕರ ವಿವಿಧ ಸಮಸ್ಯೆಗಳ ಪರಿಹಾರ ಹಾಗೂ ನ್ಯಾಯಯುತ ಬೇಡಿಕೆಗಳಿಗೆ ಧ್ವನಿಯಾಗಿ ನಿಲ್ಲುವುದಾಗಿ ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಶಿಕ್ಷಕರು ತಮ್ಮ ವೃತ್ತಿಪರ ಪ್ರಾಮಾಣಿಕತೆಯ ಆತ್ಮಾವಲೋಕನ ಮಾಡಿಕೊಂಡು ನಿರಂತರ ಅಧ್ಯಯನಶೀಲ, ಅನುಕರಣೀಯ ಹಾಗೂ ಕೌಶಲ್ಯವಂತರಾಗಬೇಕು. ದೇಶದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ಸರ್ಕಾರದ ಕೆಲ ನೀತಿಗಳು ಮಾರಕವಾಗಿ ಪರಿಣಮಿಸುತ್ತಿವೆ ಎಂದರು.

ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದರೆ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಸರ್ಕಾರಿ ಶಾಲೆಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂದರು.

ಬಿಇಒ ಶಿವರಾಜ ಶಿಮಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಗಡಿ ಫೌಂಡೇಶನ್ ವತಿಯಿಂದ ಲಕ್ಷ್ಮೇಶ್ವರದ ಸರ್ಕಾರಿ ಶಾಲೆ ನಂ.1ರ ಮೂಲಸೌಕರ್ಯ ಅಭಿವೃದ್ಧಿಗೆ ₹50 ಲಕ್ಷ ದೇಣಿಗೆ ನೀಡಿರುವುದನ್ನು ಸ್ಮರಿಸಿದರು. ಹರಿಹರದ ಹಿರಿಯ ಸಾಹಿತಿ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಉಪನ್ಯಾಸ ನೀಡಿದರು.

ಮಾಜಿ ಶಾಸಕ ರಾಮಣ್ಣ ಲಮಾಣಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ವೀರಯ್ಯ ಮಠಪತಿ ಹಾಗೂ ನಾಗರಾಜ ಮಡಿವಾಳರ ಮಾತನಾಡಿದರು.

ಸಮಾರಂಭದಲ್ಲಿ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ 50ಕ್ಕೂ ಹೆಚ್ಚು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿಧನರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೇದಿಕಾ ಭರತನಾಟ್ಯ ಶಾಲೆಯ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿದರು.

ಒಡೆಯರ ಮಲ್ಲಾಪುರ ಎಂಡಿಆರ್‌ಎಸ್ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ, ಮಲ್ಲು ಕಳಸಾಪುರ ರೈತಗೀತೆ ಹಾಡಿದರು.

ಶಿಕ್ಷಣ ಸಂಯೋಜಕ ಆರ್.ಬಿ. ಜೋಶಿ, ನೌಕರರ ಸಂಘದ ಅಧ್ಯಕ್ಷ ಗುರುರಾಜ ಹವಳದ, ಹೆಚ್.ಎಸ್. ರಾಮನಗೌಡ್ರ, ಎಸ್.ಕೆ. ಹವಾಲ್ದಾರ, ಮಂಜುನಾಥ ಕೊಕ್ಕರಗುಂದಿ, ನಾಗರಾಜ ಲಕ್ಕುಂಡಿ, ಬಿ.ಎಂ. ಕುಂಬಾರ, ಉಮೇಶ ನೇಕಾರ, ಶ್ರೀಕಾಂತ ನಂದೆಣ್ಣವರ, ಹೆಚ್.ಎಂ. ಸೊಪ್ಪಿನ, ಎಸ್.ಎಫ್. ಮಠದ, ಪರಪ್ಪ ಕರಿಗಾರ, ಜಿ.ಎನ್. ಕೋಡಬಾಳ, ಮೋಹನ ಮಾಂಡ್ರೆ, ಸುನಂದಾ ಹಿರೇಮಠ, ಮುತ್ತಣ್ಣ ಹುಬ್ಬಳ್ಳಿ, ಗೀತಾ ಹಳ್ಳಯಾಳ, ಎಸ್.ಎಫ್. ತಳವಾರ, ನವೀನ ಅಂಗಡಿ, ವಾಸು ದೀಪಾಲಿ, ಶ್ರೀನಿವಾಸ ಮತ್ತೂರ, ಎಲ್.ಎಸ್. ಅರಳಹಳ್ಳಿ ಸೇರಿದಂತೆ ಎರಡೂ ತಾಲೂಕಿನ ಶಿಕ್ಷಕರು, ವಿವಿಧ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಶಿಕ್ಷಕರ ಸಂಘದ ಎಂ.ಎನ್. ಭರಮಗೌಡ್ರ ಸ್ವಾಗತಿಸಿದರು. ಶಿಕ್ಷಕರಾದ ಎಚ್.ಡಿ. ನಿಂಗರಡ್ಡಿ, ರತ್ನಾ ಕುಂಬಾರ, ಎನ್.ಎನ್. ಶಿಗ್ಲಿ ಹಾಗೂ ಶ್ರೀಪಾಲ್ ಘೋಂಗಡಿ ನಿರೂಪಿಸಿದರು. ಶರಣಬಸವಗೌಡ ಪಾಟೀಲ ವಂದಿಸಿದರು.

ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ, ವಿದ್ಯಾರ್ಥಿಗಳಲ್ಲಿರುವ ಸುಪ್ತ ಶಕ್ತಿಯನ್ನು ಗುರುತಿಸಿ, ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಮೂಲಕ ರಾಷ್ಟ್ರದ ಭವಿಷ್ಯ ಕಟ್ಟುವ ಮಹಾನ್ ಶಿಲ್ಪಿಗಳು.

— ಶ್ರೀ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು