Home Blog Page 65

ಹಗರಿಬೊಮ್ಮನಹಳ್ಳಿ ಪುರಸಭೆ ಗದ್ದುಗೆ ಕಾಂಗ್ರೆಸ್ ಕೈಗೆ: ರಾಜಕೀಯ ಲೆಕ್ಕಾಚಾರ ಬದಲಿಸಿದ ಫಲಿತಾಂಶ!

0

ಹಗರಿಬೊಮ್ಮನಹಳ್ಳಿ:- ತೀವ್ರ ಕುತೂಹಲ ಕೆರಳಿಸಿದ್ದ ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದ್ದು, ರೇಷ್ಮಾ ಸಿಕಂದರ್ ಅವರು ಭರ್ಜರಿ ಜಯ ಸಾಧಿಸಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಪುರಸಭೆ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಯಿಂದಲೇ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದವು. ಬಿಸಿಲಿನ ತಾಪವನ್ನೂ ಲೆಕ್ಕಿಸದೆ ಸಾರ್ವಜನಿಕರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ನಾಮಪತ್ರ ಸಲ್ಲಿಕೆ ಸ್ವಲ್ಪ ತಡವಾಗಿ ನಡೆದರೂ, ಬಿಜೆಪಿ ಪರವಾಗಿ ಸುರೇಶ್ ಬಣಕಾರ ಹಾಗೂ ಕಾಂಗ್ರೆಸ್ ಪರವಾಗಿ ರೇಷ್ಮಾ ಸಿಕಂದರ್ ಸ್ಪರ್ಧಿಸಿದರು.

ಚುನಾವಣೆಯಲ್ಲಿ ಬಿಜೆಪಿ ಪರ 11 ಸದಸ್ಯರಲ್ಲಿ 8 ಮಂದಿ ಮಾತ್ರ ಭಾಗವಹಿಸಿದ್ದು, ಶಾಸಕರ ಒಂದು ಮತ ಸೇರಿ ಒಟ್ಟು 9 ಮತಗಳು ಲಭಿಸಿವೆ. ಕಾಂಗ್ರೆಸ್‌ನ 12 ಸದಸ್ಯರು ಹಾಗೂ ಸಂಸದ ಈ. ತುಕಾರಾಂ ಅವರ ಮತ ಸೇರಿ ರೇಷ್ಮಾ ಸಿಕಂದರ್ ಅವರಿಗೆ 13 ಮತಗಳು ಲಭಿಸಿ ಸ್ಪಷ್ಟ ಬಹುಮತದೊಂದಿಗೆ ಜಯ ಸಾಧಿಸಿದರು.

ಸಹಾಯಕ ಆಯುಕ್ತರು ಅಧಿಕೃತವಾಗಿ ಫಲಿತಾಂಶ ಘೋಷಿಸುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿತು. ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಅಧ್ಯಕ್ಷೆಯಾಗಿ ಆಯ್ಕೆಯಾದ ನಂತರ ರೇಷ್ಮಾ ಸಿಕಂದರ್ ಅವರು ಜಗಜ್ಯೋತಿ ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಆಶೀರ್ವಾದ ಪಡೆದರು.

ಉಪಾಧ್ಯಕ್ಷರಾದ ನೇತ್ರಾವತಿ ಹುಚ್ಚಪ್ಪ ಸೇರಿದಂತೆ ಪವಾಡಿ ಹನುಮಂತಪ್ಪ, ಮರಿ ರಾಮಪ್ಪ, ಗಣೇಶ್, ರಾಜೇಶ್ ಬ್ಯಾಡಗಿ, ಅಜೀಜುಲ್ಲಾ, ಖಾಜಾ ಬನ್ನಿ ಅಲ್ಲಾಭಕ್ಷಿ, ಗುಂಡ್ಲು ಸರಸ್ವತಿ, ಮಂಜುಳಾ ಕೃಷ್ಣ ನಾಯ್ಕ, ಅಂಬಿಕಾ ದೇವಿಂದ್ರಪ್ಪ, ಇಸ್ಮಾಯಿಲ್ ಸಾಬ್, ಜೋಗಿ ಹನುಮಂತಪ್ಪ, ಕೆ.ಎಂ. ನವೀನ್ ಕುಮಾರ್, ದೀಪಕ್ ಕಠಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬಿಜೆಪಿ ಸದಸ್ಯರಾದ ಮಲ್ಲೇಶ್ವರಿ ಭರತ್, ಎಚ್.ಎಂ. ಚೆನ್ನಮ್ಮ ವಿಜಯಕುಮಾರ್, ಭೋವಿ ವೀರೇಶ್ ಗೈರಾಗಿದ್ದರು.

ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲಿ ಕಾಂಗ್ರೆಸ್ ಗೆಲುವು ಸ್ಥಳೀಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಗೆ ನಾಂದಿ ಹಾಡಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿ ರಾಜಕಾರಣಕ್ಕೆ ವೇದಿಕೆ ಸಿದ್ಧವಾಗಿದೆ ಎಂಬ ಸಂದೇಶ ನೀಡಿದೆ.

ಈ ಬಗ್ಗೆ ಸಂಸದ ಈ. ತುಕಾರಾಂ ಮಾತನಾಡಿ, ಕಾಂಗ್ರೆಸ್ ಪಕ್ಷ ಯಾವಾಗಲೂ ಮಾತಿಗಿಂತ ಕೃತಿಗೆ ಆದ್ಯತೆ ನೀಡುತ್ತದೆ. ನಮ್ಮ ಪಕ್ಷ ತನ್ನದೇ ಆದ ಧ್ಯೇಯೋದ್ದೇಶಗಳಂತೆ ನಡೆದುಕೊಳ್ಳುತ್ತದೆ ಎಂದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಸಾಹಿರಾಬಾನು ಮಾತನಾಡಿ, “ಕಾಂಗ್ರೆಸ್ ಪಕ್ಷ ಮಹಿಳೆಯರ ಪರವಾಗಿದೆ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ. ರೇಷ್ಮಾ ಸಿಕಂದರ್ ಅಧ್ಯಕ್ಷೆಯಾಗಲು ಸಂಸದ ತುಕಾರಾಂ ಮತ್ತು ಭೀಮಾನಾಯ್ಕ ಅವರ ಪಾತ್ರ ಮಹತ್ತರವಾಗಿದೆ ಎಂದರು.

ನೂತನ ಅಧ್ಯಕ್ಷೆ ರೇಷ್ಮಾ ಸಿಕಂದರ್ ಮಾತನಾಡಿ, “ನನ್ನನ್ನು ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೆ, ಸಂಸದರು ಹಾಗೂ ಭೀಮಾನಾಯ್ಕ ಅವರಿಗೆ ನಾನು ಚಿರಋಣಿ. ಪುರಸಭೆಯ ಎಲ್ಲಾ ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಎಂ.ಬಿ.ಎ.ಯಲ್ಲಿ ಪ್ರಥಮ ರ‍್ಯಾಂಕ್: ವಾಣಿಶ್ರೀ ಕಲಬುರ್ಗಿಗೆ 5 ಚಿನ್ನದ ಪದಕಗಳು!

0

ಗದಗ: ಕರ್ನಾಟಕ ವಿಶ್ವವಿದ್ಯಾಲಯದ ಪಿ.ಜಿ ಸೆಂಟರ್ ವಿದ್ಯಾರ್ಥಿನಿ ವಾಣಿಶ್ರೀ ಕಲಬುರ್ಗಿ ಅವರು ಎಂ.ಬಿ.ಎ (ನಿರ್ವಹಣಾ ಅಧ್ಯಯನ) ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದು ಐದು ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ 75ನೇ ವಾರ್ಷಿಕ ಘಟಿಕೋತ್ಸವದಲ್ಲಿ ಈ ಗೌರವವನ್ನು ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಅವರು ಪ್ರದಾನ ಮಾಡಿದರು. ಗಾಂಧಿ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಗಣ್ಯರು, ಪ್ರಾಧ್ಯಾಪಕರು ಹಾಗೂ ಪೋಷಕರ ಸಮ್ಮುಖದಲ್ಲಿ ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು.

ನಿರಂತರ ಪರಿಶ್ರಮ, ಶಿಸ್ತು ಮತ್ತು ವಿದ್ಯಾಭ್ಯಾಸದ ಮೇಲಿನ ಬದ್ಧತೆಯಿಂದ ಈ ಸಾಧನೆ ಮಾಡಿದ ವಾಣಿಶ್ರೀ ಅವರು ಗದಗ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಐದು ಚಿನ್ನದ ಪದಕಗಳನ್ನು ಒಂದೇ ಬಾರಿ ಪಡೆಯುವುದು ಅಪರೂಪದ ಸಾಧನೆಯಾಗಿದ್ದು, ಅವರ ಪ್ರತಿಭೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಈ ಸಂದರ್ಭದಲ್ಲಿ ವಾಣಿಶ್ರೀ ಅವರು ತಮ್ಮ ಯಶಸ್ಸಿಗೆ ಕಾರಣವಾದ ಗುರುಗಳು, ಪೋಷಕರು ಹಾಗೂ ಸ್ನೇಹಿತರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ಸಾಧನೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಪರಿಣಮಿಸಿದೆ.

ಬಿಸಿಗಾಳಿ ತೀವ್ರತೆ: ಮಕ್ಕಳಲ್ಲಿ ಡಿಹೈಡ್ರೇಶನ್ ಆಗಿದೆ ಎಂದು ತಿಳಿದುಕೊಳ್ಳುವುದು ಹೇಗೆ?

0

ದೇಶದ ಅನೇಕ ಭಾಗಗಳಲ್ಲಿ ದಿನದಿಂದ ದಿನಕ್ಕೆ ಉಷ್ಣತೆ ಏರಿಕೆಯಾಗುತ್ತಿರುವ ಹಿನ್ನೆಲೆ, ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಕಾಣಿಸಿಕೊಳ್ಳುತ್ತಿದೆ. ವಿಶೇಷವಾಗಿ ಚಿಕ್ಕ ಮಕ್ಕಳಲ್ಲಿ ಡಿಹೈಡ್ರೇಶನ್ ಸಮಸ್ಯೆ ಹೆಚ್ಚುತ್ತಿರುವುದಾಗಿ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಗಾಜಿಯಾಬಾದ್ ಜಿಲ್ಲಾ ಆಸ್ಪತ್ರೆಯ ಪೀಡಿಯಾಟ್ರಿಕ್ ವಿಭಾಗದ ಡಾ. ವಿಪಿನ್ ಚಂದ್ರ ಉಪಾಧ್ಯಾಯ ಅವರ ಪ್ರಕಾರ, ಬೇಸಿಗೆಯಲ್ಲಿ ಮಕ್ಕಳಿಗೆ ಹೆಚ್ಚು ಬೆವರುವುದು ಸಾಮಾನ್ಯವಾಗಿದ್ದು, ಈ ವೇಳೆ ದೇಹದಿಂದ ನೀರು ವೇಗವಾಗಿ ಹೊರಹೋಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿರುವುದು, ಹೆಚ್ಚು ಹೊತ್ತು ಬಿಸಿಲಿನಲ್ಲಿ ಆಟವಾಡುವುದು ಹಾಗೂ ವಾಂತಿ-ಜಲದೋಷದಂತಹ ಸಮಸ್ಯೆಗಳು ಡಿಹೈಡ್ರೇಶನ್‌ಗೆ ಕಾರಣವಾಗುತ್ತವೆ ಎಂದು ತಿಳಿಸಿದ್ದಾರೆ.

ಮಕ್ಕಳಲ್ಲಿ ಡಿಹೈಡ್ರೇಶನ್ ಉಂಟಾದಾಗ ಬಾಯಾರಿಕೆ ಹೆಚ್ಚಾಗುವುದು, ತುಟಿ ಮತ್ತು ಬಾಯಿ ಒಣಗುವುದು ಮೊದಲ ಲಕ್ಷಣಗಳಾಗಿವೆ. ಜೊತೆಗೆ ಮಕ್ಕಳು ಸುಸ್ತಾಗುವುದು, ಕಿರಿಕಿರಿ ತೋರಿಸುವುದು ಹಾಗೂ ಆಟದಲ್ಲಿ ಆಸಕ್ತಿ ಕಡಿಮೆಯಾಗುವುದು ಕಾಣಿಸಬಹುದು. ಮೂತ್ರ ಪ್ರಮಾಣ ಕಡಿಮೆಯಾಗುವುದು ಅಥವಾ ಗಾಢ ಹಳದಿ ಬಣ್ಣದಲ್ಲಿ ಮೂತ್ರ ಹೊರಹೋಗುವುದು ಕೂಡ ಡಿಹೈಡ್ರೇಶನ್ ಸೂಚನೆಗಳಾಗಿವೆ. ಕೆಲ ಸಂದರ್ಭಗಳಲ್ಲಿ ಕಣ್ಣುಗಳು ಒಳಗೆ ಕುಸಿದಂತೆ ಕಾಣಿಸುವುದು ಹಾಗೂ ಅಳುವಾಗ ಕಣ್ಣೀರು ಕಡಿಮೆಯಾಗುವುದು ಕೂಡ ಗಮನಿಸಬಹುದಾಗಿದೆ.

ಈ ಸಮಸ್ಯೆಯನ್ನು ತಪ್ಪಿಸಲು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ನೀರು ಕುಡಿಸುವುದು ಅತ್ಯಂತ ಅಗತ್ಯ. ನೀರಿನ ಜೊತೆಗೆ ಎಳನೀರು, ಮಜ್ಜಿಗೆ ಹಾಗೂ ಮನೆಯಲ್ಲಿ ತಯಾರಿಸಿದ ಓಆರ್‌ಎಸ್ ನೀಡುವುದು ಉಪಯುಕ್ತ. ಬಿಸಿಲಿನಲ್ಲಿ ಹೆಚ್ಚು ಹೊತ್ತು ಆಟವಾಡುವುದನ್ನು ತಪ್ಪಿಸಿ, ಹೊರಗೆ ಹೋಗುವಾಗ ತಲೆಯನ್ನು ಮುಚ್ಚಿಕೊಳ್ಳುವಂತೆ ನೋಡಿಕೊಳ್ಳಬೇಕು. ಹಗುರವಾದ ಹಾಗೂ ಪೌಷ್ಟಿಕ ಆಹಾರ ನೀಡುವುದು ಮತ್ತು ಸ್ವಚ್ಛತೆ ಕಾಪಾಡುವುದು ಕೂಡ ಮುಖ್ಯವಾಗಿದೆ.

ಮಗು ಹೆಚ್ಚು ಸುಸ್ತಾಗಿದ್ದರೆ, ಪದೇ ಪದೇ ವಾಂತಿ ಮಾಡುತ್ತಿದ್ದರೆ ಅಥವಾ ಮೂತ್ರ ಪ್ರಮಾಣ ಬಹಳ ಕಡಿಮೆಯಾಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆತರೆ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಹಿಜಾಬ್, ಜನಿವಾರ ಗೊಂದಲಕ್ಕೆ ಪರಿಹಾರ: ಪರೀಕ್ಷಾರ್ಥಿಗಳಿಗೆ ಮರುಪರೀಕ್ಷೆ ನಡೆಸಲು ಎಂ.ಸಿ. ಸುಧಾಕರ್ ಸೂಚನೆ

ಬೆಂಗಳೂರು: ಸಿಟಿಇ ಪರೀಕ್ಷೆಯ ವೇಳೆ ವಸ್ತ್ರಸಂಹಿತೆ ಸಂಬಂಧ ಉಂಟಾದ ಗೊಂದಲದಿಂದ ತೊಂದರೆಗೊಳಗಾದ ಪರೀಕ್ಷಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಲ್ವರು ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಸಮಸ್ಯೆ ಎದುರಿಸಿದ್ದು, ಅವರಿಗೆ ಮಾತ್ರ ಮರು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಜನಿವಾರ ಹಾಗೂ ಹಿಜಾಬ್ ಸಂಬಂಧ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷಾರ್ಥಿಗಳು ಮರು ಪರೀಕ್ಷೆಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ತೊಂದರೆ ಅನುಭವಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುವಂತೆ ಮರು ಪರೀಕ್ಷೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಪರೀಕ್ಷಾ ಗೊಂದಲಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡುವುದು ಸಮಂಜಸವಲ್ಲ. ಹೀಗಾಗಿ ಮರು ಪರೀಕ್ಷೆ ನಡೆಸುವುದು ಸೂಕ್ತ ಕ್ರಮ ಎಂದು ಸರ್ಕಾರ ನಿರ್ಧರಿಸಿದೆ ಎಂದರು.

ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಕಳೆದ ಬಾರಿಯೂ ಇಂತಹ ಗೊಂದಲ ಉಂಟಾಗಿತ್ತು. ಈ ಬಾರಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮರು ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಸಚಿವ ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

ಗಂಡನ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ: ಪತಿ ವಿರುದ್ಧ ಕೊಲೆ ಆರೋಪ ದಾಖಲು

0

ಚಿಕ್ಕೋಡಿ: ಗಂಡನ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಂಕರಮಠ ಗಲ್ಲಿಯಲ್ಲಿ ನಡೆದಿದೆ.

ಸಂಗೀತಾ ಗಾಡಿವಡ್ಡರ (35) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ಎಂದು ಗುರುತಿಸಲಾಗಿದೆ.  ಮಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಂಗೀತಾ ಸುಮಾರು 15 ವರ್ಷಗಳ ಹಿಂದೆ ವೆಂಕಟೇಶ್ ಗಾಡಿವಡ್ಡರ್ ಅವರನ್ನು ವಿವಾಹವಾಗಿದ್ದರು. ಕಳೆದ ಕೆಲವು ವರ್ಷಗಳಿಂದ ದಂಪತಿಯ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದು, ಕೌಟುಂಬಿಕ ಕಲಹ ತೀವ್ರಗೊಂಡಿತ್ತು ಎನ್ನಲಾಗಿದೆ.

ಮಂಗಳವಾರ ರಾತ್ರಿ ಗಂಡನ ಕಿರುಕುಳವನ್ನು ತಾಳಲಾರದೆ ಸಂಗೀತಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತಳ ತಾಯಿ ನೀಡಿರುವ ದೂರಿನ ಪ್ರಕಾರ, ಮನೆ ಕಟ್ಟಿಕೊಳ್ಳಲು 2 ಲಕ್ಷ ರೂಪಾಯಿ ತವರು ಮನೆಯಿಂದ ತಂದುಕೊಡುವಂತೆ ವೆಂಕಟೇಶ್ ನಿರಂತರವಾಗಿ ಒತ್ತಡ ಹೇರುತ್ತಿದ್ದನು. ಹಣ ನೀಡದ ಹಿನ್ನೆಲೆಯಲ್ಲಿ ಸಂಗೀತಾಳಿಗೆ ಹಲ್ಲೆ ನಡೆಸಿ ಬಳಿಕ ನೇಣು ಹಾಕಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಘಟನೆ ಮಾಹಿತಿ ತಿಳಿದು ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ನಗರದ ಗುಂಡಿಗಳನ್ನು ಮುಚ್ಚಲು ಕೂಡಲೇ ಕ್ರಮ ವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

ಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದು ಏಳು ಜನರ ಸಾವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಾರ್ಯಪಾಲಕ ಇಂಜಿನಿಯರ್ ಅವರನ್ನು ಅಮಾನತುಗೊಳಿಸಿ, ನೋಟೀಸು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಭಾರಿ ಮಳೆಯಿಂದ ಬೌರಿಂಗ್ ಆಸ್ಪತ್ರೆ ದುರಂತದ ಹಿನ್ನೆಲೆಯಲ್ಲಿ ಇಂದು ಅವರ ಅಧ್ಯಕ್ಷತೆಯಲ್ಲಿ ಜಿಬಿಎ ಆಯುಕ್ತರುಗಳ ಸಭೆ ಜರುಗಿತು.

ಬೆಂಗಳೂರಿನಲ್ಲಿ ಮಳೆಯಿಂದ ಉಂಟಾಗಿರುವ ಹಾನಿ ಹಾಗೂ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತದಿಂದ ನಿನ್ನೆ ಏಳು ಜನ ಮೃತಪಟ್ಟಿರುವ ಕುರಿತಂತೆ ಜಿಬಿಎ ಆಯುಕ್ತರೊಂದಿಗೆ ಚರ್ಚಿಸಿದ ಮುಖ್ಯಮಂತ್ರಿಗಳು ಗೋಡೆಗೆ ಹಾನಿ ಆಗಲಿದೆ ಎಂದು ತಿಳಿದಿದ್ದರೂ ಕಾಮಗಾರಿ ನಡೆಯುವಾಗ ಮಣ್ಣು ಸುರಿದದ್ದು ಏಕೆ ಎಂದು ಪ್ರಶ್ನಿಸಿದರು.

ಗೋಡೆಗೆ ಹಾನಿಯಾಗುವಂತೆ ಮಣ್ಣು ಸುರಿದದ್ದು ನೀವು ಏಕೆ ನೋಡಿಕೊಳ್ಳಲಿಲ್ಲ ಎಂದು ಆಸ್ಪತ್ರೆ ಮುಖ್ಯಸ್ಥರನ್ನು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಬೌರಿಂಗ್ ಆಸ್ಪತ್ರೆ ಮುಖ್ಯಸ್ಥರಿಗೆ ನೋಟಿಸ್ ನೀಡಲು ಸೂಚಿಸಿದ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಗುಂಡಿಗಳನ್ನು ಮುಚ್ಚಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.

ನಿನ್ನೆ ಬೆಂಗಳೂರಿನಲ್ಲಿ ಉಂಟಾದ ಮಳೆಯಲ್ಲಿ ಸಾಕಷ್ಟು ಹಾನಿಯಾಗಿದ್ದು, 250 ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಏಳು ಜನ ಸಾವನ್ನಪ್ಪಿದ್ದಾರೆ. ಈಗಾಗಲೇ ಸತ್ತವರ ಕುಟುಂಬದವರಿಗೆ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ.
ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡುವಂತೆ ಸೂಚಿಸಿದರು.

ಮುಂಗಾರು ಮಳೆ ಪ್ರಾರಂಭವಾಗುವ ಮೊದಲೇ ಸಿದ್ಧತೆ ಕೈಗೊಳ್ಳಿ

ಮುಂಗಾರು ಮಳೆ ಪ್ರಾರಂಭವಾಗುವ ಮೊದಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಬೆಂಗಳೂರಿನ ಐದೂ ವಲಯಗಳ ಆಯುಕ್ತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು . ಒಣಗಿರುವ ಅಪಾಯಕಾರಿ ಮರಗಳ ರೆಂಬೆಗಳನ್ನು ಕತ್ತರಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು ರಾಜಕಾಲುವೆಗಳಲ್ಲಿ ಹೂಳು ತೆಗೆಯುವುದು, ಪ್ರವಾಹ ಉಂಟಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದರು. ಮಳೆಯಿಂದ ರಸ್ತೆಯಲ್ಲಿ ಬಿದ್ದಿರುವ ಕಸ, ರೆಂಬೆಗಳನ್ನು ಕೂಡಲೇ ತೆರವು ಮಾಡಲು ಸೂಚಿಸಿದರು. ಅಂಡರ್ ಪಾಸ್ ಗಳಲ್ಲಿ ಮಳೆ ನೀರು ನಿಲ್ಲದಂತೆ ಹಾಗೂ ಜನ ಅಂಡರ್ ಪಾಸ್ ಬಳಸದಂತೆ ಕೂಡಲೇ ಬ್ಯಾರಿಕೇಡ್ ಹಾಕಿ ಎಂದು ಅವರು ಸೂಚಿಸಿದರು.

ವೆಂಕಟೇಶ ಕುರುಬರ್ ಹತ್ಯೆ ಕೇಸ್: 6 ಆರೋಪಿಗಳಿಗೆ ಗಲ್ಲು ಶಿಕ್ಷೆ, ತಲಾ 3 ಲಕ್ಷ ದಂಡ

0

ಕೊಪ್ಪಳ: ಜಿಲ್ಲೆಯ ಗಂಗಾವತಿನಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ ಕುರುಬರ್ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯ ಗಂಭೀರ ತೀರ್ಪು ನೀಡಿದೆ.

ಗಂಗಾವತಿ ಹೆಚ್ಚುವರಿ ಸತ್ರ ನ್ಯಾಯಾಲಯ ಆರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ್ದು, ಪ್ರತಿಯೊಬ್ಬರಿಗೂ 3 ಲಕ್ಷ ರೂ. ದಂಡ ವಿಧಿಸಿದೆ.

ಮಾರುತಿ ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಕಾರಣಕ್ಕೆ ವೆಂಕಟೇಶನನ್ನು ಗುರಿಯಾಗಿಸಿ ಪೂರ್ವ ಯೋಜಿತವಾಗಿ ಹತ್ಯೆ ಮಾಡಲಾಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಸಿಸಿಟಿವಿ ಸಾಕ್ಷ್ಯಗಳು ಹಾಗೂ ಆರೋಪಿಗಳ ಹಿಂದಿನ ಅಪರಾಧ ಚರಿತ್ರೆ ತೀರ್ಪಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಅಕ್ಟೋಬರ್ 8ರ ರಾತ್ರಿ ಕಾರಿನಲ್ಲಿ ಹಿಂಬಾಲಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದ ಬಳಿಕ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ವೆಂಕಟೇಶನನ್ನು ಕೊಲೆ ಮಾಡಲಾಗಿತ್ತು.

ಈ ಪ್ರಕರಣವನ್ನು ಸವಾಲಿನ ಪ್ರಕರಣವೆಂದು ಪರಿಗಣಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ಇದೀಗ ಕೋರ್ಟ್ ತೀರ್ಪಿನಿಂದ ಪ್ರಕರಣಕ್ಕೆ ತಿರುವು ಸಿಕ್ಕಿದೆ.

ಆಸ್ತಿ ವಿವಾದ; ದೆಹಲಿ ಹೈಕೋರ್ಟ್​ನಿಂದ ಕರಿಷ್ಮಾ ಕಪೂರ್ ಮಕ್ಕಳಿಗೆ ಬಿಗ್ ರಿಲೀಫ್

ಉದ್ಯಮಿ ಸಂಜಯ್ ಕಪೂರ್ ಅವರ ಆಸ್ತಿ ಹಂಚಿಕೆ ಕುರಿತ ಕುಟುಂಬ ಕಲಹ ಗಂಭೀರ ಹಂತ ತಲುಪಿದ್ದು, ದೆಹಲಿ ಹೈಕೋರ್ಟ್ ಆಸ್ತಿಗಳನ್ನು ಫ್ರೀಜ್ ಮಾಡಲು ಆದೇಶಿಸಿದೆ.

ಕರಿಷ್ಮಾ ಕಪೂರ್ ಅವರ ಮಕ್ಕಳಾದ ಕಿಯಾನ್ ಮತ್ತು ಸಮೈರಾ, ಪ್ರಿಯಾ ಸಚ್‌ದೇವ ಕಪೂರ್ ಸಲ್ಲಿಸಿದ ವಿಲ್ ಹಾಗೂ ಆಸ್ತಿ ವಿವರಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹಲವು ಸ್ಥಿರಾಸ್ತಿಗಳು ಮತ್ತು ಅಮೂಲ್ಯ ವರ್ಣಚಿತ್ರಗಳನ್ನು ಪಟ್ಟಿಯಿಂದ ಹೊರಗಿಟ್ಟಿರುವ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಕೋರ್ಟ್, ಎಲ್ಲಾ ಆಸ್ತಿಗಳನ್ನು ಸಂರಕ್ಷಿಸಲು ಹಾಗೂ ಯಾವುದೇ ರೀತಿಯ ವ್ಯವಹಾರಗಳನ್ನು ನಿಲ್ಲಿಸಲು ಸೂಚಿಸಿದೆ. ಜೊತೆಗೆ ವಿದೇಶಿ ಬ್ಯಾಂಕ್ ಖಾತೆಗಳು ಮತ್ತು ಕ್ರಿಪ್ಟೋಕರೆನ್ಸಿ ಹೂಡಿಕೆಗಳ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಆದೇಶಿಸಲಾಗಿದೆ.

ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ಆಸ್ತಿಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಮುಂದುವರಿಯಲಿದೆ.

ಅತ್ಯಾಚಾರ ಪ್ರಕರಣದಲ್ಲಿ 20 ವಾರ ಮೀರಿದ ಗರ್ಭಪಾತಕ್ಕೆ ಅವಕಾಶ ನೀಡಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಕಠಿಣ ತರಾಟೆ

0

ನವದೆಹಲಿ: ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಸಂಬಂಧಿಸಿದ ಅಂತಿಮ ನಿರ್ಧಾರವನ್ನು ಸಂತ್ರಸ್ತೆ ಮತ್ತು ಆಕೆಯ ಪೋಷಕರೇ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಇದೇ ವೇಳೆ 20 ವಾರಗಳಿಗಿಂತ ಹೆಚ್ಚಿನ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಅನುಮತಿ ನೀಡುವ ಕಾನೂನು ತಿದ್ದುಪಡಿ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿಳಂಬವನ್ನು ಕೋರ್ಟ್ ತೀವ್ರವಾಗಿ ಪ್ರಶ್ನಿಸಿದೆ.

15 ವರ್ಷದ ಬಾಲಕಿಯೊಬ್ಬಳಿಗೆ 30 ವಾರಗಳ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ನೀಡಿದ್ದ ಅನುಮತಿಯನ್ನು ರದ್ದುಗೊಳಿಸುವಂತೆ ಏಮ್ಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠ, ಅತ್ಯಾಚಾರದಿಂದ ಸಂಭವಿಸಿದ ಗರ್ಭಧಾರಣೆಗೆ ಯಾವುದೇ ಕಠಿಣ ಕಾಲಮಿತಿಯಿರಬಾರದು ಎಂದು ಅಭಿಪ್ರಾಯಪಟ್ಟಿದೆ.

ಕಾಲಾನುಗುಣವಾಗಿ ಕಾನೂನು ಬದಲಾಗಬೇಕು ಎಂದು ಹೇಳಿದ ನ್ಯಾಯಪೀಠ, ಈ ಪ್ರಕರಣದಲ್ಲಿ ಅಂತಿಮ ತೀರ್ಮಾನವು ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಮೇಲಿದೆ ಎಂದು ಸ್ಪಷ್ಟಪಡಿಸಿದೆ. ಜೊತೆಗೆ, ಸೂಕ್ತ ಸಮಾಲೋಚನೆ ನೀಡುವಂತೆ ಏಮ್ಸ್‌ಗೆ ನಿರ್ದೇಶನ ನೀಡಿದೆ.

ಇದು ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣವಾಗಿದ್ದು, ಗರ್ಭಪಾತಕ್ಕೆ ಅವಕಾಶ ನೀಡದಿದ್ದರೆ ಸಂತ್ರಸ್ತೆ ಜೀವಿತಾವಧಿಯ ಮಾನಸಿಕ ಆಘಾತ ಅನುಭವಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ. ತಾಯಿಯ ಆರೋಗ್ಯಕ್ಕೆ ಶಾಶ್ವತ ಹಾನಿಯಾಗದ ಪರಿಸ್ಥಿತಿಯಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ.

ವಿಚಾರಣೆ ವೇಳೆ ನ್ಯಾಯಪೀಠ, ದೇಶದಲ್ಲಿ ದತ್ತು ಪಡೆಯಲು ಅನೇಕ ಮಕ್ಕಳಿದ್ದು, ಅನಗತ್ಯ ಗರ್ಭಧಾರಣೆಯನ್ನು ಯಾರ ಮೇಲೂ ಹೇರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. “ಅವಳು ಇನ್ನೂ ಮಗು. ಅವಳು ಶಿಕ್ಷಣ ಪಡೆಯಬೇಕಾದ ವಯಸ್ಸಿನಲ್ಲಿ ತಾಯಿಯಾಗುವಂತೆ ಒತ್ತಾಯಿಸಲಾಗುತ್ತಿದೆ. ಅವಳು ಅನುಭವಿಸಿದ ನೋವು ಮತ್ತು ಅವಮಾನವನ್ನು ಊಹಿಸಿ,” ಎಂದು ಕೋರ್ಟ್ ತೀವ್ರವಾಗಿ ಹೇಳಿದೆ.

ಏಮ್ಸ್ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, 30 ವಾರಗಳ ಹಂತದಲ್ಲಿ ಗರ್ಭಪಾತ ವೈದ್ಯಕೀಯವಾಗಿ ಅಪಾಯಕಾರಿ ಆಗಬಹುದು ಎಂದು ತಿಳಿಸಿದರು. ಭ್ರೂಣ ಈಗಾಗಲೇ ಜೀವಂತ ಮಗುವಿನ ಹಂತ ತಲುಪಿರುವುದರಿಂದ ಗರ್ಭಪಾತದಿಂದ ಅಪ್ರಾಪ್ತೆಯ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ವಾದಿಸಿದರು. ಜನನದ ಬಳಿಕ ಮಗುವನ್ನು ದತ್ತು ನೀಡಬಹುದೆಂದೂ ಅವರು ಹೇಳಿದರು.

ಆದರೆ, ಗರ್ಭಾವಸ್ಥೆ ಮುಂದುವರಿಸುವುದೇ ಅಥವಾ ಅಂತ್ಯಗೊಳಿಸುವುದೇ ಎಂಬ ನಿರ್ಧಾರ ಸಂತ್ರಸ್ತೆ ಹಾಗೂ ಆಕೆಯ ಪೋಷಕರ ಇಚ್ಛೆಗೆ ಅವಲಂಬಿತವಾಗಿದೆ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿತು.

ಯಾವುದೇ ನ್ಯಾಯಾಲಯವು ಯಾವುದೇ ಮಹಿಳೆಯನ್ನು, ವಿಶೇಷವಾಗಿ ಅಪ್ರಾಪ್ತ ವಯಸ್ಕಳನ್ನು, ಆಕೆಯ ಇಚ್ಛೆಗೆ ವಿರುದ್ಧವಾಗಿ ಗರ್ಭಧಾರಣೆಯನ್ನು ಮುಂದುವರಿಸಲು ಒತ್ತಾಯಿಸಲು ಸಾಧ್ಯವಿಲ್ಲ. ಇದು ಆಕೆಯ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದ್ದು, ಗಂಭೀರ ಮಾನಸಿಕ, ಭಾವನಾತ್ಮಕ ಹಾಗೂ ದೈಹಿಕ ಆಘಾತ ಉಂಟುಮಾಡುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಕಲ್ಲಿದ್ದಲು ಹಗರಣ ಪ್ರಕರಣ: ಐ-ಪಿಎಸಿ ನಿರ್ದೇಶಕ ವಿನೇಶ್ ಚಾಂಡೆಲ್ʼಗೆ ಜಾಮೀನು

0

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಐ-ಪಿಎಸಿ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ನಿರ್ದೇಶಕ ವಿನೇಶ್ ಚಾಂಡೆಲ್ ಅವರಿಗೆ ನವದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಚಾಂಡೆಲ್ ಸಲ್ಲಿಸಿದ್ದ ಜಾಮೀನು ಅರ್ಜಿಗೆ ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯ (ಇಡಿ) ವಿರೋಧ ವ್ಯಕ್ತಪಡಿಸದ ಹಿನ್ನೆಲೆ ನ್ಯಾಯಾಲಯ ಈ ಮಹತ್ವದ ಆದೇಶ ಹೊರಡಿಸಿದೆ. ತನಿಖಾ ಪ್ರಕ್ರಿಯೆಗೂ ಚಾಂಡೆಲ್ ಇದುವರೆಗೆ ಸಂಪೂರ್ಣ ಸಹಕಾರ ನೀಡಿರುವುದನ್ನು ನ್ಯಾಯಾಲಯ ಪರಿಗಣಿಸಿದ್ದು, ಅಗತ್ಯವಿದ್ದಾಗಲೆಲ್ಲಾ ತನಿಖಾ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ. ಈ ಕಾರಣದಿಂದ ಜಾಮೀನು ನಿರಾಕರಿಸಲು ಯಾವುದೇ ಬಲವಾದ ಆಧಾರಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಜಾಮೀನು ಅರ್ಜಿಯಲ್ಲಿ ತಮ್ಮ ತಾಯಿ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು, ಅವರ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮಾನವೀಯ ಆಧಾರದ ಮೇಲೆ ಮಧ್ಯಂತರ ಪರಿಹಾರ ನೀಡುವಂತೆ ಚಾಂಡೆಲ್ ಮನವಿ ಮಾಡಿದ್ದರು.

ಆದರೆ ಜಾಮೀನು ನೀಡುವ ವೇಳೆ ನ್ಯಾಯಾಲಯ ಹಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ತಿರುಚಬಾರದು, ಸಾಕ್ಷಿಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವಂತಿಲ್ಲ, ತನಿಖೆಗೆ ಮುಂದುವರಿದು ಸಂಪೂರ್ಣ ಸಹಕರಿಸಬೇಕು ಹಾಗೂ ಅಗತ್ಯವಿದ್ದಾಗ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಎಂದು ಸೂಚಿಸಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು, ಏಪ್ರಿಲ್ 13ರಂದು ಚಾಂಡೆಲ್ ಅವರನ್ನು ಬಂಧಿಸಲಾಗಿತ್ತು.

ಪ್ರಕರಣದ ಹಿನ್ನೆಲೆ:
ಪಶ್ಚಿಮ ಬಂಗಾಳದ ಅಸನ್ಸೋಲ್ ಸುತ್ತಮುತ್ತಲಿನ ಕುನುಸ್ಟೋರಿಯಾ ಮತ್ತು ಕಜೋರಾ ಪ್ರದೇಶಗಳ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ ಗಣಿಗಳಿಗೆ ಸಂಬಂಧಿಸಿದ ಬಹುಕೋಟಿ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) 2020ರ ನವೆಂಬರ್‌ನಲ್ಲಿ ಎಫ್‌ಐಆರ್ ದಾಖಲಿಸಿತ್ತು. ಇದೇ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿತ್ತು.

ತನಿಖೆ ವೇಳೆ ಕಲ್ಲಿದ್ದಲು ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದ ಹವಾಲಾ ನಿರ್ವಾಹಕನೊಬ್ಬ, ಐ-ಪಿಎಸಿ ನೋಂದಾಯಿತ ಘಟಕವಾದ ‘ಇಂಡಿಯನ್ ಪಿಎಸಿ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್’ಗೆ ಹತ್ತಾರು ಕೋಟಿ ರೂಪಾಯಿ ವರ್ಗಾವಣೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ಅಕ್ರಮ ಹಣ ವರ್ಗಾವಣೆ ಜಾಲದಲ್ಲಿ ಐ-ಪಿಎಸಿಗೂ ಸಂಪರ್ಕವಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

error: Content is protected !!