Home Blog Page 68

ವಿದ್ಯಾರ್ಥಿಗಳೇ ದೇಶದ ಭವಿಷ್ಯದ ಆಧಾರಸ್ತಂಭ: ಎಸ್.ವಿ. ಸಂಕನೂರ

0

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ವಿದ್ಯಾರ್ಥಿಗಳೇ ನಾಳಿನ ದೇಶದ ಆಧಾರಸ್ತಂಭಗಳಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ಪಷ್ಟ ಗುರಿ ಹೊಂದಿ ಅದನ್ನು ಸಾಧಿಸಲು ನಿರಂತರ ಪರಿಶ್ರಮ ಪಡಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ನಗರದ ಆಂಗ್ಲೋ ಉರ್ದು ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ಮತದಾರರ ಸಾಕ್ಷರತಾ ಸಂಘಗಳ ಉದ್ಘಾಟನೆ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೀವನ ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾದರಿಯಾಗಿದ್ದು, ತಾಳ್ಮೆ, ಸತತ ಪರಿಶ್ರಮ, ಸಂಸ್ಕಾರ ಹಾಗೂ ದೃಢ ಇಚ್ಛಾಶಕ್ತಿಯನ್ನು ಬೆಳೆಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಅಚಲವಾದ ನಂಬಿಕೆಯೊಂದಿಗೆ ಸಾಗಬೇಕು ಎಂದು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷ ಸರ್ಫರಾಜ್ ಅಹ್ಮದ್ ಎಸ್. ಉಮಚಿಗಿ ಮಾತನಾಡಿ, ವಿದ್ಯಾರ್ಥಿಗಳು ಭಾಷೆಯನ್ನು ಪ್ರೀತಿಸಿ ಅದರ ಮೇಲೆ ಪಾಂಡಿತ್ಯ ಬೆಳೆಸಿಕೊಳ್ಳಬೇಕು. ಗುಣ-ಅವಗುಣಗಳನ್ನು ಅರಿತು ಅವಗುಣಗಳನ್ನು ತೊರೆದು ಉತ್ತಮ ನಡೆ-ನುಡಿ, ಆಚಾರ-ವಿಚಾರ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು. ಪ್ರಾಮಾಣಿಕ ಪರಿಶ್ರಮದಿಂದ ಉತ್ತಮ ಅಂಕ ಗಳಿಸುವುದರ ಜೊತೆಗೆ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.

ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ಪ್ರೊ. ಎ.ಎಂ. ಮುಲ್ಲಾ ಮಾತನಾಡಿ, ಜೀವನ ಕೇವಲ ಬದುಕುವುದಕ್ಕಲ್ಲ, ಸಾಧನೆ ಮಾಡುವುದಕ್ಕಾಗಿದೆ. ವಿದ್ಯಾರ್ಥಿಗಳು ಗೌರವ, ಪ್ರೀತಿ, ಸ್ವ-ನಿಯಂತ್ರಣ, ನಂಬಿಕೆ, ಏಕಾಗ್ರತೆ, ಸತ್ಯ ಹಾಗೂ ದೃಢ ನಿರ್ಧಾರದಂತಹ ಸದ್ಗುಣಗಳನ್ನು ಬೆಳೆಸಿಕೊಂಡು ಸಮಾಜದ ಆಸ್ತಿಯಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮವು ಕು. ಸನಾ ನದಾಫ ಅವರ ಕುರಾನ್ ಪಠಣದೊಂದಿಗೆ ಆರಂಭವಾಯಿತು. ಕು. ಫಾತಿಮಾ ಗುಳಗುಂದಿ ಹಮ್ದ್ ಹಾಡಿದರೆ, ಕು. ಆಫ್ರೀನ್ ಸಂಕಲಪುರ ಸಾಥ್ ನೀಡಿದರು. ಕು. ಕವಿತಾ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಐ.ಪಿ. ಹಾದಿಮನಿ ಸ್ವಾಗತಿಸಿದರು. ಎಂ.ಎಂ. ಶಿರಹಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಎಸ್.ಎ. ಬಾರೂದವಾಲೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಮತಿ ಎಸ್.ಎಸ್. ಪಾಟೀಲ ವಂದಿಸಿದರು. ಕು. ಮಾರಿಯಾ ಕಿಫ್ತೆ ಎಸ್. ಮಿರ್ಜಿ ಹಾಗೂ ಕು. ಸಮೀನಾ ಆರ್. ಮುಲ್ಲಾ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಹಾಜಿ ಎ.ಎಂ. ಸೌದಾಗರ, ಸದಸ್ಯರಾದ ಜನಾಬ್ ಶಾಹನವಾಜ್ ಎಸ್. ಉಮಚಗಿ, ಹಾಜಿ ರಾಜೇಸಾಬ ಬಾಗಲಕೋಟ, ಜನಾಬ್ ಜೆ.ಬಿ. ಉಮಚಗಿ, ಹಾಜಿ ಎಂ.ಎ. ಹಣಗಿ, ಜನಾಬ್ ಎಸ್.ಎ. ಬಿಜಾಪೂರ ಹಾಗೂ ಅತಿಥಿಯಾಗಿ ಜನಾಬ್ ಶಾಮಾಜ್ ಎಸ್. ಉಮಚಗಿ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

“ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ತಾಳ್ಮೆ, ಪರಿಶ್ರಮ ಮತ್ತು ದೃಢ ಇಚ್ಛಾಶಕ್ತಿಯೇ ಯಶಸ್ಸಿನ ಗುಟ್ಟು.”

– ಎಸ್.ವಿ. ಸಂಕನೂರ, ವಿಧಾನಪರಿಷತ್ ಸದಸ್ಯ

ಮತಗಳ್ಳತನ ತಡೆಯಿರಿ, ಮತದಾರರನ್ನಲ್ಲ!

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಇಡೀ ದೇಶದ ಮತದಾರರ ಪಟ್ಟಿಯನ್ನು ಮರು ತಯಾರಿಸುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಗಡಿಬಿಡಿ ಹಾಗೂ ಗೊಂದಲಮಯ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಆರೋಪಿಸಿದರು.

ತಾಲೂಕಿನ ಕೃಷಿಕ ಸಮಾಜದ ಕಚೇರಿಯಲ್ಲಿ ಜಿಲ್ಲಾ ಮತಗಟ್ಟೆ ಕಾವಲು ಸಮಿತಿಯಿಂದ ರೂಪಿಸಲಾದ ಎಸ್‌ಐಆರ್ ಮಾಹಿತಿ ವೆಬ್‌ಸೈಟ್ ಉದ್ಘಾಟಿಸಿ ಅವರು ಮಾತನಾಡಿದರು.

“ಚುನಾವಣಾ ಆಯೋಗ ತಾನು ಹೇಳಿದ್ದೇ ಅಂತಿಮ ಎಂಬ ಧೋರಣೆಯಲ್ಲಿ ಈ ಪ್ರಕ್ರಿಯೆಯನ್ನು ನಡೆಸುತ್ತಿದೆ. ಇದರ ಹಿಂದಿನ ಉದ್ದೇಶಗಳ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಆ ಚರ್ಚೆಗೆ ನಾವು ಹೋಗುವುದಿಲ್ಲ. ಕಳ್ಳ ಮತಗಳನ್ನು ಪತ್ತೆಹಚ್ಚಬೇಕಾದರೆ, ಅದರ ಬದಲು ಸಾಮಾನ್ಯ ಮತದಾರರನ್ನೇ ಅನುಮಾನಿಸಿ ವಿಚಾರಣೆ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ” ಎಂದು ಹೇಳಿದರು.

ಜಿಲ್ಲಾ ಮತಗಟ್ಟೆ ಕಾವಲು ಸಮಿತಿಯ ಸಂಚಾಲಕ ಹಾಗೂ ಸಮಾಜ ಸೇವಕ ತಿಪ್ಪೇಸ್ವಾಮಿ ವೆಂಕಟೇಶ್ ಮಾತನಾಡಿ, “ನಾಡಿನ ಮತ ನಮ್ಮೆಲ್ಲರ ಹೊಣೆ” ಎಂಬ ಉದ್ದೇಶದಿಂದ ಈ ವೆಬ್‌ಸೈಟ್ ಆರಂಭಿಸಲಾಗಿದೆ. ಪ್ರತಿಯೊಬ್ಬ ಮತದಾರರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಲು ಹಾಗೂ ಮತದಾನದ ಹಕ್ಕು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಈ ವೆಬ್‌ಸೈಟ್ ನೆರವಾಗಲಿದೆ ಎಂದು ತಿಳಿಸಿದರು.

ರೈತ ಸಂಘದ ಉಪಾಧ್ಯಕ್ಷ ತಂಬ್ರಹಳ್ಳಿ ರವಿಕುಮಾರ್ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಹಾಗೂ ಅದರ ಪರಿಣಾಮಗಳ ಕುರಿತು ನಿರಂತರ ಜನಜಾಗೃತಿ ಮೂಡಿಸಬೇಕಿದೆ. ಜನಮಾಧ್ಯಮಗಳ ಮೂಲಕ ಗೊಂದಲ ನಿವಾರಣೆ ಮಾಡುವುದು ಹಾಗೂ ಜನಸಾಂಸ್ಕೃತಿಕ ಮಾಧ್ಯಮಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹುರ್ಕಡ್ಲಿ ಶಿವಕುಮಾರ್, ಯು. ಮಂಜುನಾಥ, ಕೆ. ರೋಶನ್, ಹನುಮೇಶ್ ರಾವ್, ಎ.ಬಿ. ಕೊಟ್ರೇಶ್, ಬಂಗಿ ಕರಿಬಸಪ್ಪ, ಹತ್ತಿ ಪ್ರಶಾಂತ್, ವಿ. ನಜೀರ್, ರಾಮರಾಜ್, ಅನಂತು, ಗಣೇಶಪ್ಪ, ಶ್ರೀಮತಿ ಪುಷ್ಪಾವತಿ, ರಾಜಭಕ್ಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನೀಟ್ ಹಗರಣ ವಿರೋಧಿಸಿ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ನೀಟ್ ಪರೀಕ್ಷೆ ಹಗರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಹಾಗೂ ನೀಟ್ ಪರೀಕ್ಷೆಯಿಂದ ಮಾನಸಿಕವಾಗಿ ನೊಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು ಎಂದು ಸೌಹಾರ್ದ ಕರ್ನಾಟಕ ವೇದಿಕೆ ಆಗ್ರಹಿಸಿತು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶನಿವಾರ ಸೌಹಾರ್ದ ಕರ್ನಾಟಕ ವೇದಿಕೆ ತಾಲೂಕು ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ 20 ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರವಾದಿ ಸೋನಂ ವಾಂಗ್‌ಚುಕ್ ಅವರಿಗೆ ಬೆಂಬಲ ವ್ಯಕ್ತಪಡಿಸಲಾಯಿತು.

ಪ್ರತಿಭಟನಾಕಾರರು ಮಾತನಾಡಿ, ಸೋನಂ ವಾಂಗ್‌ಚುಕ್ ಅವರು ಕಳೆದ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಅವರೊಂದಿಗೆ ಮಾತುಕತೆ ನಡೆಸದೆ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ದಿನದಿಂದ ದಿನಕ್ಕೆ ಅವರ ಆರೋಗ್ಯ ಹದಗೆಡುತ್ತಿದ್ದು, ಉಪವಾಸ ಸತ್ಯಾಗ್ರಹವು ಪ್ರಜಾಸತ್ತಾತ್ಮಕ ಹೋರಾಟದ ಭಾಗವಾಗಿದೆ. ಸರ್ಕಾರ ಕೂಡಲೇ ಸ್ಪಂದಿಸಿ ಮಾತುಕತೆಗೆ ಮುಂದಾಗುವುದು ತನ್ನ ಪ್ರಜಾಸತ್ತಾತ್ಮಕ ಜವಾಬ್ದಾರಿಯಾಗಿದೆ ಎಂದು ಒತ್ತಾಯಿಸಿದರು.

ಸೋನಂ ವಾಂಗ್‌ಚುಕ್ ಅವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಉಪವಾಸ ನಡೆಸುತ್ತಿಲ್ಲ. ನೀಟ್ ಪರೀಕ್ಷೆಯಿಂದ ಸಂಕಷ್ಟಕ್ಕೊಳಗಾದ ಸಾವಿರಾರು ವಿದ್ಯಾರ್ಥಿಗಳ ಪರವಾಗಿ ಧ್ವನಿಯಾಗಿದ್ದಾರೆ. ಅವರ ಜೀವಕ್ಕೆ ಯಾವುದೇ ಅಪಾಯವಾಗದಂತೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಲು ಸಕಾರಾತ್ಮಕ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.

ದೆಹಲಿ ಹೈಕೋರ್ಟ್ ಕೂಡ ಸೋನಂ ವಾಂಗ್‌ಚುಕ್ ಅವರ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಗಳಿಗೆ ಸೂಚನೆ ನೀಡಿರುವುದನ್ನು ಪ್ರತಿಭಟನಾಕಾರರು ಉಲ್ಲೇಖಿಸಿದರು.

ಪ್ರತಿಭಟನೆಗೆ ಬಿ. ಮಾಳಮ್ಮ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಆರ್.ಎಸ್. ಬಸವರಾಜ್, ಜಗನ್ನಾಥ್, ಕೆ. ಗಾಳೆಪ್ಪ, ಕೆ. ರಮೇಶ್, ಎಸ್‌ಎಫ್‌ಐ ಮುಖಂಡ ಜಯಸೂರ್ಯ, ಪಿ. ಚಾಂದ್ ಬಿ., ಸೈಯದ್, ಇರ್ಫಾನ್ ಸೇರಿದಂತೆ ನೂರಾರು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಒಣಗುತ್ತಿರುವ ಬೆಳೆಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.32.04ರಷ್ಟು ಮಳೆಯ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮಳೆ ಅಭಾವದಿಂದ ಹಾನಿಗೊಳಗಾಗುತ್ತಿರುವ ಬೆಳೆಗಳ ಸ್ಥಿತಿಯನ್ನು ಪರಿಶೀಲಿಸಿದರು.

ನರಗುಂದ ತಾಲೂಕಿನ ಕಲಕೇರಿ ಹಾಗೂ ಹದಲಿ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿದ ಅವರು, ಹೆಸರು, ಉದ್ದು, ಶೇಂಗಾ, ಮೆಕ್ಕೆಜೋಳ, ಈರುಳ್ಳಿ ಹಾಗೂ ಹತ್ತಿ ಬೆಳೆಗಳು ಒಣಗಿ ಬಾಡುತ್ತಿರುವ ಪರಿಸ್ಥಿತಿಯನ್ನು ವೀಕ್ಷಿಸಿ ರೈತರೊಂದಿಗೆ ನೇರವಾಗಿ ಸಂವಾದ ನಡೆಸಿದರು. ಮಳೆ ಕೊರತೆಯಿಂದ ಎದುರಾಗಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ರೈತರಿಗೆ ಧೈರ್ಯ ತುಂಬಿದರು.

ಜಿಲ್ಲೆಯಲ್ಲಿ ಬೆಳೆದ ಬೆಳೆಗಳ ನಿಖರ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಲು ರೈತರು ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಕಡ್ಡಾಯವಾಗಿ ಬೆಳೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದೇ ವೇಳೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ಸಾಲ ಪಡೆದ ರೈತರು ಹೆಸರು (ಮಳೆಆಶ್ರಿತ) ಹಾಗೂ ಹತ್ತಿ (ಮಳೆಆಶ್ರಿತ ಮತ್ತು ನೀರಾವರಿ) ಬೆಳೆಗಳಿಗೆ ಜುಲೈ 22ರವರೆಗೆ ಬೆಳೆ ವಿಮೆ ನೋಂದಾಯಿಸಿಕೊಳ್ಳಲು ಅವಕಾಶವಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪರಿಶೀಲನಾ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು, ಸಿಬ್ಬಂದಿ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

ಮುಂಗಾರು ಪ್ರಗತಿ

  • ಮುಂಗಾರು ಬಿತ್ತನೆ ಗುರಿ: 3,13,719 ಹೆಕ್ಟೇರ್
  • ಇದುವರೆಗೆ ಬಿತ್ತನೆ: 2,57,401 ಹೆಕ್ಟೇರ್
  • ಜೂನ್ 1ರಿಂದ ಜುಲೈ 16ರವರೆಗಿನ ವಾಡಿಕೆ ಮಳೆ: 121.4 ಮಿ.ಮೀ.
  • ದಾಖಲಾದ ವಾಸ್ತವಿಕ ಮಳೆ: 82.50 ಮಿ.ಮೀ.
  • ಮಳೆ ಕೊರತೆ: ಶೇ.32.04

ಪ್ರತಿಯೊಂದು ರೂಪಾಯಿ ಅರ್ಹರಿಗೇ ತಲುಪಲಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರದಿಂದ ಬಿಡುಗಡೆಯಾಗುವ ಪ್ರತಿಯೊಂದು ರೂಪಾಯಿಯೂ ಸಾರ್ವಜನಿಕರ ಹಿತಕ್ಕಾಗಿ ಸಮರ್ಪಕವಾಗಿ ಬಳಕೆಯಾಗಬೇಕು. ಯಾವುದೇ ಕಾರಣಕ್ಕೂ ಅನುದಾನ ದುರ್ಬಳಕೆ ಅಥವಾ ಅಪವ್ಯಯವಾಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ಸರ್ಕಾರದ ಯೋಜನೆಗಳ ಲಾಭ ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ಕೋರ್ಟ್ ಹಾಲ್‌ನಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಪ್ರಸಕ್ತ ಸಾಲಿನ ಜಿಲ್ಲಾ ಪಂಚಾಯತ್ ಅನುದಾನದ ಕ್ರಿಯಾ ಯೋಜನೆ, ಜಿಲ್ಲಾ ವಲಯದಡಿ ವಲಯವಾರು ಅನುದಾನ ಹಂಚಿಕೆ ಹಾಗೂ ವಿವಿಧ ಇಲಾಖೆಗಳ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಜಿಲ್ಲಾ ಪಂಚಾಯತ್‌ನಲ್ಲಿ ಶೇ.60ರಷ್ಟು ಅನುದಾನವನ್ನು ವೇತನಕ್ಕಾಗಿ ಹಾಗೂ ತಾಲೂಕು ಪಂಚಾಯಿತಿಗಳಿಗೆ ನೀಡಿದ ಅನುದಾನದಲ್ಲಿ ಶೇ.95ರಷ್ಟು ಮೊತ್ತವನ್ನು ವೇತನಕ್ಕಾಗಿ ಮೀಸಲಿಡಲು ಸಭೆಯಲ್ಲಿ ಅನುಮೋದನೆ ದೊರೆಯಿತು.

ಇಲಾಖಾವಾರು ರೂಪಿಸಲಾದ ಯೋಜನೆಗಳ ಕುರಿತು ಸುದೀರ್ಘ ಪರಿಶೀಲನೆ ನಡೆಸಿದ ಡಾ. ವೆಂಕಟೇಶ್, ಅಕ್ಷರ ದಾಸೋಹ ಯೋಜನೆಯಡಿ ಶಾಲಾ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆಯಾಗುವಂತೆ ನಿರಂತರ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಭಾರತ್ ಜೋಡೋ ಯುವಕ ಮಂಡಳಗಳ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡುವಂತೆಯೂ ನಿರ್ದೇಶಿಸಿದರು.

ಆರೋಗ್ಯ ಇಲಾಖೆಯ ಕಾರ್ಯವೈಖರಿ ಪರಿಶೀಲಿಸಿದ ಅವರು, ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ, ಅಗತ್ಯ ಔಷಧಗಳ ಸಮರ್ಪಕ ಖರೀದಿ ಹಾಗೂ ಲಭ್ಯತೆ ಖಚಿತಪಡಿಸಿಕೊಳ್ಳಬೇಕು ಎಂದರು. ಚೀನಾ ನಿರ್ಮಿತ ಬೆಡ್‌ಗಳ ಖರೀದಿಯನ್ನು ತಪ್ಪಿಸುವಂತೆ ಸೂಚಿಸಿದ ಅವರು, ಗುಣಮಟ್ಟದ ಔಷಧ ಖರೀದಿಯಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಆಯುಷ್ ಇಲಾಖೆಗೆ ಹಿಂದಿನ ಸಭೆಯಲ್ಲಿ ಔಷಧ ಖರೀದಿಗಾಗಿ ನೀಡಿದ್ದ ಅನುದಾನದ ಬಳಕೆ ಕುರಿತು ಮಾಹಿತಿ ಪಡೆದು, ಅನುದಾನವನ್ನು ಸಮರ್ಪಕವಾಗಿ ಬಳಸುವಂತೆ ಸೂಚಿಸಿದರು. ಜಿಲ್ಲೆಯ ಎಲ್ಲ ಆರ್‌ಒ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನಿರ್ವಹಣೆ ಕೈಗೊಂಡು, ಲಿಂಕ್ ಯೋಜನೆಯ ಉದ್ದೇಶ ಯಶಸ್ವಿಯಾಗಬೇಕು ಎಂದು ಹೇಳಿದರು.

ಸಾಮಾಜಿಕ ಅರಣ್ಯ ಇಲಾಖೆಯ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಆರ್‌ಎಫ್‌ಒಗಳು ವಿಬಿಜಿ ರಾಮ್‌ಜಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಸ್ಥಳೀಯ ಹವಾಮಾನಕ್ಕೆ ಹೊಂದುವ ಗಿಡಗಳನ್ನು ಬೆಳೆಸುವಂತೆ ಸೂಚಿಸಿದರು.

ಪ್ರತಿ ತಾಲೂಕಿನಲ್ಲಿ ಮಿಯಾವಾಕಿ ಅರಣ್ಯ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಬೇಕು. ಶಾಲಾ ಆವರಣಗಳಲ್ಲಿ ಕರಿಬೇವು, ನಿಂಬೆ, ನೆಲ್ಲಿ ಹಾಗೂ ಪಪ್ಪಾಯಿ ಗಿಡಗಳನ್ನು ಕಡ್ಡಾಯವಾಗಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್., ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಡಿಡಿಪಿಐ ಆರ್.ಎಸ್. ಬುರಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

“ಸರ್ಕಾರದ ಯೋಜನೆಗಳು ಕಾಗದದಲ್ಲಷ್ಟೇ ಉಳಿಯಬಾರದು. ಸರ್ಕಾರದ ಪ್ರತಿಯೊಂದು ರೂಪಾಯಿ ಅರ್ಹ ಫಲಾನುಭವಿಗೆ ತಲುಪಬೇಕು. ಅನುದಾನದ ಸದ್ಬಳಕೆ, ಪಾರದರ್ಶಕತೆ ಹಾಗೂ ಗುಣಮಟ್ಟದ ಸೇವೆ ನೀಡುವಲ್ಲಿ ಅಧಿಕಾರಿಗಳು ಯಾವುದೇ ರಾಜಿ ಮಾಡಿಕೊಳ್ಳಬಾರದು. ನಿರ್ಲಕ್ಷ್ಯ ಕಂಡುಬಂದರೆ ಹೊಣೆಗಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.”

– ಡಾ. ಎಂ.ವಿ. ವೆಂಕಟೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

“ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ನೀಡಿರುವ ಎಲ್ಲ ನಿರ್ದೇಶನಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲಾಗುವುದು. ಪ್ರತಿಯೊಂದು ಇಲಾಖೆಯ ಕಾರ್ಯಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿ, ಅನುದಾನದ ಸಮರ್ಪಕ ಬಳಕೆ ಹಾಗೂ ಜನಸೇವೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.”

– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ, ಗದಗ

ಬಿಸಿಎ ಅಂತಿಮ ಸೆಮಿಸ್ಟರ್‌ನಲ್ಲಿ ಮನೋರಮಾ ಕಾಲೇಜು ವಿದ್ಯಾರ್ಥಿಗಳ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮನೋರಮಾ ಮಹಾವಿದ್ಯಾಲಯದ ಬಿಸಿಎ (ಆರನೇ ಸೆಮಿಸ್ಟರ್) ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿ ಸಾಗರ ಅಗಡಿ 540 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದು, ಪಿ. ವಿಜಯಕುಮಾರ 527 ಅಂಕಗಳೊಂದಿಗೆ ದ್ವಿತೀಯ, ಸ್ನೇಹಾ ಮಾಲಶೆಟ್ಟಿ 521 ಅಂಕಗಳೊಂದಿಗೆ ತೃತೀಯ ಹಾಗೂ ಸುಜಾತಾ ಒದ್ಸುಮಠ 519 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎನ್.ಎಂ. ಕುಡತರಕರ, ಪ್ರಾಚಾರ್ಯ ಬಿ.ಎಸ್. ಹಿರೇಮಠ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ನಿರ್ದೇಶಕರಾದ ಮಂಜುನಾಥ ಕುಡತರಕರ, ಸಂಜಯಕುಮಾರ ಕುಡತರಕರ, ಚೇತನ ಕುಡತರಕರ, ಸಂಯೋಜಕಿ ಪ್ರೊ. ಸವಿತಾ ಪೂಜಾರ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿ, ಮುಂದಿನ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದ್ದಾರೆ.

ಗುಂಡಿಗಳ ಗೂಡಾದ ಜಕ್ಕಲಿ–ಅಬ್ಬಿಗೇರಿ ರಸ್ತೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜಕ್ಕಲಿ–ಅಬ್ಬಿಗೇರಿ ಸಂಪರ್ಕ ರಸ್ತೆಯ ದುಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೇವಲ ಐದು ಕಿಲೋಮೀಟರ್ ಕ್ರಮಿಸಲು ಅರ್ಧ ಗಂಟೆ ಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ತಕ್ಷಣ ಮರುಡಾಂಬರೀಕರಣ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಒಂದೊಮ್ಮೆ ಸುಗಮ ಸಂಚಾರಕ್ಕೆ ಅನುಕೂಲವಾಗಿದ್ದ ಈ ಡಾಂಬರು ರಸ್ತೆ ಇದೀಗ ಗುಂಡಿಗಳು, ಜಲ್ಲಿಕಲ್ಲುಗಳು ಹಾಗೂ ಧೂಳಿನ ರಾಶಿಯಿಂದ ಕೂಡಿದೆ. ರಸ್ತೆಯುದ್ದಕ್ಕೂ ಡಾಂಬರು ಕಿತ್ತು ಹೋಗಿದ್ದು, ಅಲ್ಲಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ವಾಹನ ಸವಾರರು ಜೀವ ಭಯದಲ್ಲೇ ಸಂಚರಿಸುವಂತಾಗಿದೆ.

ಜಕ್ಕಲಿ, ಅಬ್ಬಿಗೇರಿ ಸೇರಿದಂತೆ ಯರೇಬೇಲೇರಿ, ಕುರಡಗಿ, ಕಿರಟಗೇರಿ, ಹುಯಿಲಗೋಳ, ಚಿಕ್ಕೊಪ್ಪ, ಹಿರೇಕೊಪ್ಪ ಹಾಗೂ ಗದಗ ನಗರಕ್ಕೆ ತೆರಳುವ ನೂರಾರು ಜನರಿಗೆ ಇದೇ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ವ್ಯಾಪಾರಸ್ಥರು ಹಾಗೂ ಗ್ರಾಮಸ್ಥರು ಪ್ರತಿನಿತ್ಯ ಈ ರಸ್ತೆಯನ್ನೇ ಅವಲಂಬಿಸಿದ್ದು, ರಸ್ತೆ ಹಾಳಾಗಿರುವುದರಿಂದ ಸಂಚಾರ ತೀವ್ರ ಸಮಸ್ಯೆಯಾಗಿದೆ.

ರಸ್ತೆಯ ಅವ್ಯವಸ್ಥೆಯಿಂದ ವಾಹನಗಳ ಬಿಡಿಭಾಗಗಳು ಹಾಳಾಗುತ್ತಿದ್ದು, ವಾಹನ ದುರಸ್ತಿಗೆ ಹೆಚ್ಚುವರಿ ಹಣ ಖರ್ಚು ಮಾಡುವಂತಾಗಿದೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಂತು ಅಪಘಾತಗಳ ಅಪಾಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ವರ್ಷಗಳಿಂದ ರಸ್ತೆ ದುರಸ್ತಿಯಾಗದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನಾದರೂ ನಿರ್ಲಕ್ಷ್ಯ ಬಿಟ್ಟು ಜಕ್ಕಲಿ–ಅಬ್ಬಿಗೇರಿ ರಸ್ತೆಯ ಮರುಡಾಂಬರೀಕರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಿದ್ದುಪಡಿಗಳ ಪಟ್ಟಿ

ರೋಗ ನಿಯಂತ್ರಣಕ್ಕೆ ಬೀಜೋಪಚಾರ ಅತ್ಯಗತ್ಯ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಬೆಳೆಗಳಲ್ಲಿ ರೋಗಬಾಧೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ ಉತ್ತಮ ಇಳುವರಿ ಪಡೆಯಲು ಬಿತ್ತನೆಗೂ ಮುನ್ನ ಬೀಜೋಪಚಾರ ಮಾಡುವುದು ಅತ್ಯಗತ್ಯ ಎಂದು ಕೃಷಿ ವಿಜ್ಞಾನಿ ಡಾ. ಸಿ.ಎಂ. ರಫಿ ಹೇಳಿದರು.

ಪಟ್ಟಣದ ಸಮೀಪದ ಚಿಕ್ಕಹಂದಿಗೋಳ ಹಾಗೂ ಕುರ್ತಕೋಟಿ ಗ್ರಾಮದ ರೈತರ ಜಮೀನುಗಳಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಹಾಗೂ ಗದಗ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಹೆಸರು ಬೆಳೆಯಲ್ಲಿ ಕಾಣಿಸಿಕೊಂಡಿರುವ ಹಳದಿ ರೋಗವನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಪ್ರತಿಯೊಬ್ಬ ರೈತರೂ ಬಿತ್ತನೆಗೂ ಮುನ್ನ ಕಡ್ಡಾಯವಾಗಿ ಬೀಜೋಪಚಾರ ಮಾಡಿ ಬಿತ್ತನೆ ನಡೆಸಬೇಕು. ಇದರಿಂದ ರೋಗಬಾಧೆ ನಿಯಂತ್ರಣವಾಗುವುದರ ಜೊತೆಗೆ ಉತ್ತಮ ಗುಣಮಟ್ಟದ ಇಳುವರಿಯನ್ನೂ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ರೈತರು ಬಿತ್ತನೆ ಆರಂಭಿಸುವ ಮೊದಲು ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೆಳೆ ಸಂರಕ್ಷಣೆ ಹಾಗೂ ಬಿತ್ತನೆ ಪೂರ್ವ ಮುಂಜಾಗ್ರತಾ ಕ್ರಮಗಳ ಕುರಿತು ತಾಂತ್ರಿಕ ಮಾಹಿತಿ ಪಡೆದು ಕೃಷಿ ಚಟುವಟಿಕೆ ಕೈಗೊಂಡರೆ ನಷ್ಟವನ್ನು ತಪ್ಪಿಸಿ ಉತ್ತಮ ಉತ್ಪಾದನೆ ಸಾಧಿಸಬಹುದು ಎಂದು ಸಲಹೆ ನೀಡಿದರು.

ಪರಿಶೀಲನಾ ತಂಡದಲ್ಲಿ ಡಾ. ಸಂಗನಶೆಟ್ಟಿ, ಡಾ. ಪ್ರಭಾವತಿ, ಗದಗ ಕೃಷಿ ಇಲಾಖೆಯ ಉಪನಿರ್ದೇಶಕಿ ಸ್ಪೂರ್ತಿ ಜಿ.ಎಸ್., ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವಣ್ಣವರ, ಎಂ.ಎಸ್. ಕುಲಕರ್ಣಿ, ಕೃಷಿ ಅಧಿಕಾರಿಗಳಾದ ಬಸವರಾಜೇಶ್ವರಿ ಸಜ್ಜನವರ, ರಾಜೇಶ್ವರಿ ಚಿನಿವಾಲರ ಹಾಗೂ ರೈತರು ಉಪಸ್ಥಿತರಿದ್ದರು.

ಪ್ರಜ್ಞಾವಂತರು ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕು: ಕೃಷ್ಣೇಗೌಡ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಪ್ರಜ್ಞಾವಂತ ನಾಗರಿಕರು ಧ್ವನಿಯೆತ್ತುವ ಮನೋಭಾವ ಬೆಳೆಸಿಕೊಳ್ಳಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಪಾರದರ್ಶಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಹಾಗೂ ನಾಗರಿಕರ ಕಲ್ಯಾಣ ಸಾಧ್ಯ ಎಂದು ಕಾಂಗ್ರೆಸ್ ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕೃಷ್ಣೇಗೌಡ ಎಚ್. ಪಾಟೀಲ ಹೇಳಿದರು.

ನಗರದ ಶಾರದ ವಿ.ಡಿ.ಎಸ್.ಟಿ.ಸಿ. ಕಾಲೇಜಿನಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ ಆಯೋಜಿಸಿದ್ದ ಪದವೀಧರ ಮತದಾರರ ನೋಂದಣಿ ಅಭಿಯಾನ ಕುರಿತ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಮಾತನಾಡಿ, ಪಶ್ಚಿಮ ಪದವೀಧರ ಕ್ಷೇತ್ರವು ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಪ್ರತಿಷ್ಠಿತ ಕ್ಷೇತ್ರವಾಗಿದೆ. ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರ ಮತದಾರರಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಹಾಗೂ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ತಮ್ಮನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿದರೆ ಶಿಕ್ಷಕರ ಧ್ವನಿಯಾಗಿ ಕಾರ್ಯನಿರ್ವಹಿಸಿ, ಅವರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದ ಅವರು, ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಬೆಂಬಲಿಸುವಂತೆ ಕೋರಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀನಿವಾಸ್ ಹುಯಿಲಗೋಳ ಮಾತನಾಡಿ, ಸಂಸ್ಥೆಯು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರಿಗೆ ಬೆಂಬಲ ನೀಡಲಾಗುವುದು ಎಂದು ಹೇಳಿದರು. ಈ ಭಾಗದ ಶಾಸಕರಾದ ಎಚ್.ಕೆ. ಪಾಟೀಲ ಹಾಗೂ ಡಿ.ಆರ್. ಪಾಟೀಲ ಅವರು ಸಂಸ್ಥೆಯ ಅಭಿವೃದ್ಧಿಗೆ ನೀಡಿರುವ ಸಹಕಾರವನ್ನು ಸ್ಮರಿಸಿದರು.

ಸಭೆಯಲ್ಲಿ ನಿವೃತ್ತ ಪ್ರಾಚಾರ್ಯ ವಿ.ಎಸ್. ಕೊಳ್ಳಿ, ಉಮೇಶ್ ಹಿರೇಮಠ, ಗದಗ ಜಿಲ್ಲಾ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ ಸೇರಿದಂತೆ ಶಿಕ್ಷಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಬರ ಎದುರಿಸಲು ತುರ್ತು ಕ್ರಮಕ್ಕೆ ಸೂಚನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಗ್ರಾಮೀಣ ಜನರಿಗೆ ಉದ್ಯೋಗದ ಕೊರತೆ ಉಂಟಾಗದಂತೆ ಜಿಲ್ಲಾಡಳಿತ ತುರ್ತು ಮತ್ತು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಗದಗ ಜಿಲ್ಲಾ ಪ್ರಕೃತಿ ವಿಕೋಪ ಮೇಲುಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶನಿವಾರ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಸಚಿವರು, ರಾಜ್ಯದಲ್ಲಿ ಉಂಟಾಗಿರುವ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿ ಭಾನುವಾರ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಲಿದ್ದು, ಗದಗ ಜಿಲ್ಲೆಯ ಸ್ಥಿತಿಯನ್ನು ವಿಶೇಷವಾಗಿ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆಯಾಗಿರುವುದರಿಂದ ಗದಗ ಜಿಲ್ಲೆಯನ್ನು ತಕ್ಷಣ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಶಾಸಕರು ಹಾಗೂ ಜನಪ್ರತಿನಿಧಿಗಳು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪರಿಸ್ಥಿತಿ ಪರಿಶೀಲನೆ ನಡೆಯುತ್ತಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ವರದಿ ಆಧರಿಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು. ಸಮಸ್ಯೆ ಎದುರಾದ ತಕ್ಷಣ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಬರದ ಪರಿಣಾಮವಾಗಿ ಗ್ರಾಮೀಣ ಜನರು ಉದ್ಯೋಗ ಅರಸಿ ವಲಸೆ ಹೋಗದಂತೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ಲಭ್ಯವಿರುವ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸಚಿವರು ಸೂಚಿಸಿದರು.

ಜಲಜೀವನ ಮಿಷನ್ ಹಾಗೂ ವಿಬಿಜಿ ರಾಮ್‌ಜಿ ಯೋಜನೆಯಡಿ ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ಕುಡಿಯುವ ನೀರಿನ ಕಾಮಗಾರಿಗಳನ್ನು ವಿಳಂಬವಿಲ್ಲದೆ ಕೈಗೊಳ್ಳಬೇಕು. ಜನರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮುಂಗಾರು ಪೂರ್ವ ಉತ್ತಮ ಮಳೆಯಿಂದ ಜಿಲ್ಲೆಯಲ್ಲಿ ಶೇ.82ರಷ್ಟು ಬಿತ್ತನೆ ನಡೆದಿದ್ದರೂ ನಂತರ ಮಳೆ ಕೊರತೆಯಿಂದ ಹೆಸರು, ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ಒಣಗುತ್ತಿವೆ. ಇಂತಹ ಸಂದರ್ಭದಲ್ಲಿ ರೈತರಿಗೆ ಬೆಳೆ ವಿಮೆ ಅತ್ಯಗತ್ಯವಾಗಿದ್ದು, ಸಾಲದ ಕಾರಣಕ್ಕೆ ಯಾರೂ ವಿಮೆಯಿಂದ ವಂಚಿತರಾಗಬಾರದು ಎಂದು ಸಚಿವರು ಹೇಳಿದರು.

ಕಟ್ ಬಾಕಿ ಹಾಗೂ ಒನ್‌ಟೈಮ್ ಸೆಟಲ್‌ಮೆಂಟ್ (ಒಟಿಎಸ್) ಮಾಡಿಕೊಂಡಿರುವ ರೈತರಿಗೆ ಹೊಸ ಖಾತೆ ತೆರೆಯುವ ಮೂಲಕ ಬೆಳೆ ವಿಮೆ ಕಂತು ಪಾವತಿಸಲು ಅವಕಾಶ ಕಲ್ಪಿಸುವಂತೆ ಲೀಡ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕ ಎಚ್.ಕೆ. ಪಾಟೀಲ್, ರೈತರು ಬೆಳೆ ಸಾಲ ಮರುಪಾವತಿಸಿಲ್ಲ ಎಂಬ ಕಾರಣಕ್ಕೆ ಬೆಳೆ ವಿಮೆಯಿಂದ ವಂಚಿತರಾಗಬಾರದು ಎಂದು ಆಗ್ರಹಿಸಿದರು. ಶಾಸಕರಾದ ಜಿ.ಎಸ್. ಪಾಟೀಲ್, ಸಿ.ಸಿ. ಪಾಟೀಲ್, ಡಾ. ಚಂದ್ರು ಲಮಾಣಿ ಹಾಗೂ ಎಸ್.ವಿ. ಸಂಕನೂರ ಅವರು ಜಿಲ್ಲೆಯ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾಹಿತಿ ನೀಡಿ, ಜನವರಿಯಿಂದ ಜುಲೈ 17ರವರೆಗೆ ವಾಡಿಕೆ 229.5 ಮಿ.ಮೀ. ಮಳೆಗೆ ವಿರುದ್ಧವಾಗಿ 227.2 ಮಿ.ಮೀ. ಮಳೆಯಾಗಿದ್ದರೂ, ಜುಲೈ 1ರಿಂದ 17ರವರೆಗೆ ವಾಡಿಕೆ 36.4 ಮಿ.ಮೀ. ಮಳೆಗೆ ಕೇವಲ 21.6 ಮಿ.ಮೀ. ಮಳೆಯಾಗಿದ್ದು, ಶೇ.41ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ತಿಳಿಸಿದರು.

2026-27ರ ಮುಂಗಾರು ಹಂಗಾಮಿನಲ್ಲಿ 3,13,719 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 2,57,401 ಹೆಕ್ಟೇರ್ (ಶೇ.82.05) ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 37,059 ಅರ್ಜಿಗಳ ಮೂಲಕ 38,388 ಹೆಕ್ಟೇರ್ ಪ್ರದೇಶ ವಿಮೆಗೆ ಒಳಪಡಿಸಲಾಗಿದೆ ಎಂದರು.

ಪ್ರವಾಹ ಮುನ್ನೆಚ್ಚರಿಕಾ ಕ್ರಮವಾಗಿ ಮಲಪ್ರಭಾ ಹಾಗೂ ತುಂಗಭದ್ರಾ ನದಿ ಪಾತ್ರದ 20 ಗ್ರಾಮಗಳನ್ನು ಸೂಕ್ಷ್ಮ ಪ್ರದೇಶಗಳಾಗಿ ಗುರುತಿಸಿ 43 ಕಾಳಜಿ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ತುರ್ತು ರಕ್ಷಣಾ ಕಾರ್ಯಕ್ಕಾಗಿ 51 ಈಜುಗಾರರನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಮಳೆ ಹಾಗೂ ಸಿಡಿಲಿನಿಂದ ಮೃತಪಟ್ಟ ನಾಲ್ವರು ಸಂತ್ರಸ್ತರ ಕುಟುಂಬಗಳಿಗೆ ತಲಾ ₹5 ಲಕ್ಷದಂತೆ ಒಟ್ಟು ₹20 ಲಕ್ಷ ಪರಿಹಾರ ವಿತರಿಸಲಾಗಿದ್ದು, ಭಾಗಶಃ ಹಾನಿಗೊಳಗಾದ 20 ಮನೆಗಳಿಗೆ ₹1.30 ಲಕ್ಷ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

“ಗದಗ ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು. ಬರದಿಂದ ಜನರು ವಲಸೆ ಹೋಗದಂತೆ ಉದ್ಯೋಗಕ್ಕೂ ಮೊದಲ ಆದ್ಯತೆ ನೀಡಬೇಕು.”

– ಈಶ್ವರ ಬಿ. ಖಂಡ್ರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು

ಗದಗ ಜಿಲ್ಲೆಯ ಬರ ಪರಿಸ್ಥಿತಿ

  • ಜುಲೈ ಮೊದಲ 17 ದಿನಗಳ ಮಳೆ ಕೊರತೆ: ಶೇ.41
  • ಬಿತ್ತನೆ ಪೂರ್ಣ: 2.57 ಲಕ್ಷ ಹೆಕ್ಟೇರ್ (82.05%)
  • ಬೆಳೆ ವಿಮೆ ಅರ್ಜಿಗಳು: 37,059
  • ವಿಮೆ ವ್ಯಾಪ್ತಿ: 38,388 ಹೆಕ್ಟೇರ್
  • ಸೂಕ್ಷ್ಮ ಪ್ರವಾಹ ಗ್ರಾಮಗಳು: 20
  • ಕಾಳಜಿ ಕೇಂದ್ರಗಳು: 43
  • ತುರ್ತು ಕಾರ್ಯಕ್ಕೆ ಸನ್ನದ್ಧ ಈಜುಗಾರರು: 51
  • ಸಿಡಿಲು/ಮಳೆ ಪರಿಹಾರ: 4 ಕುಟುಂಬಗಳಿಗೆ ₹20 ಲಕ್ಷ