Home Blog Page 69

ನೂತನ ಹೆಚ್ಚುವರಿ ಅಡ್ವೋಕೇಟ್ ಜನರಲ್ ಶ್ರೀಕಾಂತ ಪಾಟೀಲರಿಗೆ ಮಹಾಸಭೆಯಿಂದ ಸನ್ಮಾನ

ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ನೇಮಕಗೊಂಡಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಸಹಪೋಷಕ ಸದಸ್ಯರಾದ ಕೆ. ಶ್ರೀಕಾಂತ ಪಾಟೀಲ ಅವರನ್ನು ಮಹಾಸಭೆಯ ವತಿಯಿಂದ ಸನ್ಮಾನಿಸಲಾಯಿತು.

ಶ್ರೀಕಾಂತ ಪಾಟೀಲ ಅವರು ಮಹಾಸಭೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಕಾರ್ಯದರ್ಶಿಗಳಾದ ಎಚ್.ಎಂ. ರೇಣುಕಪ್ರಸನ್ನ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಹೈಕೋರ್ಟ್ ವಕೀಲರ ಸಂಘದ ಉಪಾಧ್ಯಕ್ಷರಾದ ಚಂದ್ರಕಾಂತ್ ಪಾಟೀಲ್, ಮಹಾಸಭೆಯ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾದ ಶರಣ ವೆಂಕಟ ರೆಡ್ಡಿ ಪಾಟೀಲ ಹಾಗೂ ಟಿ. ನರಸೀಪುರ ತಾಲೂಕು ಘಟಕದ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಮೂರನೇ ಮದುವೆ ಆಸೆಗೆ ಗಂಡನ ಕೊಲೆ: ಕೊನೆಗೂ ಜೈಲು ಸೇರಿದ ಪತ್ನಿ–ಪ್ರಿಯಕರ

0

ತುಮಕೂರು: ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ದಾಸರಹಳ್ಳಿಯಲ್ಲಿ ನಡೆದಿದ್ದ ಪರಮೇಶ್ ಸಾವಿನ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಸತ್ಯ ಬೆಳಕಿಗೆ ಬಂದಿದೆ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿದ್ದ ಘಟನೆ ಈಗ ಕೊಲೆ ಪ್ರಕರಣವೆಂದು ಬಹಿರಂಗವಾಗಿದೆ.

ಪರಮೇಶ್ ಅವರ ಪತ್ನಿ ಆಶಾ ಈಗಾಗಲೇ ಎರಡು ಮದುವೆಯಾಗಿದ್ದು, ಪರಮೇಶ್ ಅವರೊಂದಿಗೆ ಸುಮಾರು 10 ವರ್ಷಗಳ ಕಾಲ ಜೀವನ ನಡೆಸುತ್ತಿದ್ದಳು. ಆದರೆ ಮೂರನೇ ಮದುವೆ ಮಾಡುವ ಆಸೆಯಿಂದ ಆಕೆ ಭೀಕರ ಪ್ಲಾನ್ ರೂಪಿಸಿದ್ದಾಳೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಆಶಾ ತನ್ನ ಪ್ರಿಯಕರ ಚಂದ್ರಪ್ಪ ಜೊತೆಗಿನ ಸಂಬಂಧಕ್ಕಾಗಿ ಗಂಡನನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದಳು. ಜನವರಿ 30ರಂದು ಪರಮೇಶ್ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ, ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಎಲ್ಲರನ್ನು ನಂಬಿಸಿದ್ದಳು.

ಅಷ್ಟೇ ಅಲ್ಲದೆ, ಗಂಡನ ಅಂತ್ಯಕ್ರಿಯೆ ನಡೆದ ಕೆಲವೇ ದಿನಗಳಲ್ಲಿ ಆಶಾ ಚಂದ್ರಪ್ಪನೊಂದಿಗೆ ಮದುವೆಯಾಗಿದ್ದಳು. ಈ ಬೆಳವಣಿಗೆಯಿಂದ ಅನುಮಾನಗೊಂಡ ಪರಮೇಶ್ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ಕೈಗೊಂಡ ಹೆಬ್ಬೂರು ಪೊಲೀಸರು ಪ್ರಕರಣವನ್ನು ಬಯಲಿಗೆಳೆದಿದ್ದು, ಆರೋಪಿಗಳಾದ ಆಶಾ ಮತ್ತು ಚಂದ್ರಪ್ಪರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಪಾರು!

0

ಲಕ್ನೋ: ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಲಕ್ನೋದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.

ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಅವರು ಕೌಶಂಬಿ ಜಿಲ್ಲೆಯತ್ತ ಪ್ರಯಾಣಿಸುತ್ತಿದ್ದರು. ಲಕ್ನೋದಲ್ಲಿರುವ ಲಾ ಮಾರ್ಟಿನಿಯರ್ ಕಾಲೇಜು ಮೈದಾನದ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಟೇಕ್ ಆಫ್ ಆಗಿತ್ತು. ಸ್ವಲ್ಪ ಸಮಯದ ಬಳಿಕ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಹೊಗೆ ಕಾಣಿಸಿಕೊಂಡಿದೆ.

ಇದರಿಂದಾಗಿ ಪೈಲಟ್ ತಕ್ಷಣವೇ ಹೆಲಿಕಾಪ್ಟರ್ ಅನ್ನು ಲಕ್ನೋದಲ್ಲೇ ತುರ್ತು ಲ್ಯಾಂಡಿಂಗ್ ಮಾಡಿಸಿದ್ದಾರೆ.

ಕೌಶಂಬಿಯಲ್ಲಿ ನಡೆಯಲಿದ್ದ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಡಿಸಿಎಂ ತೆರಳುತ್ತಿದ್ದರು. ಈ ವೇಳೆ ಅವರೊಂದಿಗೆ ಸಹಾಯಕ ವಿವೇಕ್ ಹಾಗೂ ಇಬ್ಬರು ಪೈಲಟ್‌ಗಳು ಸೇರಿ ಒಟ್ಟು ಐದು ಮಂದಿ ಹೆಲಿಕಾಪ್ಟರ್‌ನಲ್ಲಿ ಇದ್ದರು ಎಂದು ತಿಳಿದುಬಂದಿದೆ.

ಘಟನೆ ಬಳಿಕ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಸುರಕ್ಷಿತರಾಗಿದ್ದು, ನಂತರ ಮತ್ತೊಂದು ಹೆಲಿಕಾಪ್ಟರ್ ಮೂಲಕ ಕೌಶಂಬಿಗೆ ಪ್ರಯಾಣ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೆಲಿಕಾಪ್ಟರ್‌ನಲ್ಲಿ ಹೊಗೆ ಕಾಣಿಸಿಕೊಂಡಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ತಜ್ಞರ ತಂಡ ಪರಿಶೀಲನೆ ನಡೆಸುತ್ತಿದೆ.

ನಂದಿನಿ ಬೇಡಿಕೆ ಹೆಚ್ಚಳ: ರೈತರಿಗೆ ಪ್ರೋತ್ಸಾಹ ದರ ಹೆಚ್ಚಿಸಿದ ಚಿಮುಲ್

ಚಿಕ್ಕಬಳ್ಳಾಪುರ: ನಂದಿನಿ ಹಾಲು ಉತ್ಪನ್ನಗಳುಗೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ (ಚಿಮುಲ್) ರೈತರಿಗೆ ಹೆಚ್ಚುವರಿ ದರ ಘೋಷಿಸಿದೆ.

ಪ್ರತಿ ಲೀಟರ್ ಹಾಲಿಗೆ 1.50 ರೂ. ಹೆಚ್ಚುವರಿ ಪ್ರೋತ್ಸಾಹ ನೀಡಲು ತೀರ್ಮಾನಿಸಲಾಗಿದ್ದು, ಈ ಯೋಜನೆ ಮೇ ತಿಂಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಚಿಮುಲ್ ಅಧ್ಯಕ್ಷ ಮಂಜುನಾಥ್ ರೆಡ್ಡಿ ತಿಳಿಸಿದ್ದಾರೆ.

ಈಗಾಗಲೇ ಒಕ್ಕೂಟದಿಂದ 36 ರೂ. 90 ಪೈಸೆ ಹಾಗೂ ಸರ್ಕಾರದ ಸಬ್ಸಿಡಿ ಸೇರಿ ಒಟ್ಟು 41 ರೂ. 90 ಪೈಸೆ ರೈತರಿಗೆ ದೊರೆಯುತ್ತಿದೆ. ಈ ನಿರ್ಧಾರದಿಂದ ಜಿಲ್ಲೆಯ ರೈತ ಸಮುದಾಯಕ್ಕೆ ಹೆಚ್ಚಿನ ನೆರವು ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೈಕಮಾಂಡ್ ಅವಕಾಶ ಕೊಟ್ಟರೆ ಇನ್ನೆರಡು ಬಜೆಟ್ ಮಂಡನೆ: ಸಿಎಂ ಸಿದ್ದರಾಮಯ್ಯ

ಮೈಸೂರು: ಹೈಕಮಾಂಡ್ ಅವಕಾಶ ನೀಡಿದರೆ ಇನ್ನೂ ಎರಡು ಬಜೆಟ್ ಮಂಡನೆ ಮಾಡಲು ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳಿಗೆ ಪ್ರತಿಕ್ರಿಯೆ ನೀಡಿದರು. ಯಾರೇ ಏನೇ ಹೇಳಿದರೂ ಅದು ತಮ್ಮಿಗೆ ಮುಖ್ಯವಲ್ಲ, ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ಮುಖ್ಯ ಎಂದು ಹೇಳಿದರು.

ಹೈಕಮಾಂಡ್ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಮೈಸೂರಿನ ಜನ ಮಾತ್ರವಲ್ಲ, ಇಡೀ ರಾಜ್ಯದ ಜನ ನಾನು ಮುಂದುವರಿಯಬೇಕೆಂದು ಬಯಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಕುರಿತು ಅಂತಿಮ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ. ಹೈಕಮಾಂಡ್ ಹೇಳಿದಂತೆ ನಾನು ನಡೆದುಕೊಳ್ಳುತ್ತೇನೆ. ಅವಕಾಶ ನೀಡಿದರೆ ಇನ್ನೆರಡು ಬಜೆಟ್ ಮಂಡನೆ ಮಾಡುತ್ತೇನೆ ಎಂದು ಅವರು ಹೇಳಿದರು.

ಈ ವಿಷಯದಲ್ಲಿ ಎಷ್ಟೇ ಪ್ರಶ್ನೆ ಕೇಳಿದರೂ ನನ್ನ ಉತ್ತರ ಒಂದೇ – ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕಡಿಮೆ ಬೆಲೆಗೆ ಚಿನ್ನದ ಆಸೆ ತೋರಿಸಿ 15 ಲಕ್ಷ ದೋಚಿದ ಪ್ರಕರಣ: ಐವರು ಆರೋಪಿಗಳ ಬಂಧನ

0

ದೇವನಹಳ್ಳಿ: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ಹೇಳಿ 15 ಲಕ್ಷ ರೂಪಾಯಿ ದೋಚಿದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಬಳಿ ಗುರುವಾರ ಸಿನಿಮೀಯ ಶೈಲಿಯಲ್ಲಿ ಈ ದರೋಡೆ ನಡೆದಿತ್ತು.

ಕಡಿಮೆ ಬೆಲೆಗೆ ಚಿನ್ನ ಕೊಡುತ್ತೇವೆ ಎಂದು ನಂಬಿಸಿ ದುಷ್ಕರ್ಮಿಗಳು ಹಣ ಕಸಿದು ಪರಾರಿಯಾಗಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ವಿಜಯಪುರ ಪೊಲೀಸರು ತನಿಖೆ ನಡೆಸಿ ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಗಣೇಶ್ (25), ಸಾಗರ (28), ಮಂಜಪ್ಪ (40), ಷಣ್ಮುಘ (24) ಹಾಗೂ ಷಣ್ಮುಖ (31) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 15 ಲಕ್ಷ ರೂಪಾಯಿ ನಗದು, 4 ಚಿನ್ನದ ನಾಣ್ಯಗಳು, 3 ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ಕ್ರೇಟಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೂ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

ಬಂಧಿತ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಹೆಚ್ಚಿನ ವಿಚಾರಣೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆಯಲು ಮನವಿ ಮಾಡಲಾಗಿದೆ. ಈ ಪ್ರಕರಣವನ್ನು ಶೀಘ್ರದಲ್ಲಿ ಭೇದಿಸಿದ ವಿಜಯಪುರ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಅಮೆರಿಕ–ಇರಾನ್ ಯುದ್ಧದ ಪರಿಣಾಮ: ಕಚ್ಚಾ ತೈಲ ದರ ಭಾರೀ ಏರಿಕೆ

0

ಲಂಡನ್: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಏರಿಕೆ ಕಂಡಿದೆ. ಕೋವಿಡ್-19 ಬಳಿಕ ಮೊದಲ ಬಾರಿಗೆ ಒಂದು ಬ್ಯಾರೆಲ್ ತೈಲದ ಬೆಲೆ 90 ಡಾಲರ್ ಗಡಿ ದಾಟಿದೆ.

ಇರಾನ್ ಸೌದಿ ಅರೇಬಿಯಾ ಹಾಗೂ ಕುವೈತ್‌ನಲ್ಲಿರುವ ತೈಲ ಸಂಸ್ಕರಣಾ ಕೇಂದ್ರಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ತೈಲ ಉತ್ಪಾದನೆ ಕುಸಿತವಾಗಿದೆ. ಇದರ ಪರಿಣಾಮವಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 91.89 ಡಾಲರ್ (ಸುಮಾರು ₹8,440) ತಲುಪಿದೆ.

ಕಳೆದ ಶನಿವಾರ ಯುದ್ಧ ಆರಂಭವಾಗುವ ಮೊದಲು ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 72.50 ಡಾಲರ್ ಇತ್ತು. ಕಳೆದ ಎಂಟು ದಿನಗಳಲ್ಲಿ ಸುಮಾರು 19 ಡಾಲರ್ ಏರಿಕೆಯಾಗಿದೆ.

ಇದೇ ವೇಳೆ ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 90.90 ಡಾಲರ್‌ಗೆ ಏರಿಕೆಯಾಗಿದೆ. ರಷ್ಯಾದ ಉರಲ್ಸ್ ಕಚ್ಚಾ ತೈಲದ ಬೆಲೆ ಕೂಡ ಪ್ರತಿ ಬ್ಯಾರೆಲ್‌ಗೆ 71.97 ಡಾಲರ್ (ಸುಮಾರು ₹6,616) ತಲುಪಿದೆ.

ಫೆಬ್ರವರಿ 27ರಂದು ಉರಲ್ಸ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 57 ಡಾಲರ್ ಇದ್ದು, ಇದೀಗ ಅದರಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.

ಲೈಸೆನ್ಸ್ ನೀಡಲು ಲಂಚ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಅಧಿಕಾರಿ!

ಹುಬ್ಬಳ್ಳಿ: ಲಂಚ ಸ್ವೀಕರಿಸುತ್ತಿದ್ದ ವೇಳೆ ಮಹಿಳಾ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ವಲಯ-1 ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹೀನಾ ಕೌಸರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಮಾಳಪ್ಪ ತಳವಾರ್ ಎಂಬವರಿಂದ 3,500 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ಹಣ ಸಮೇತ ಬಂಧಿಸಿದ್ದಾರೆ. ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ರೊಟ್ಟಿ ಅಂಗಡಿಗೆ ಲೈಸೆನ್ಸ್ ನೀಡಲು ಹೀನಾ ಕೌಸರ್ ಅವರು ಮಾಳಪ್ಪ ಅವರ ಬಳಿ 4,500 ರೂ. ಲಂಚ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಇದರಲ್ಲಿ ಮುಂಗಡವಾಗಿ 1,000 ರೂ. ನೀಡಲಾಗಿತ್ತು. ಉಳಿದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ರಾಜ್ಯ ಬಜೆಟ್ʼನಲ್ಲಿ ರೈತರು, ಬಡವರ ನಿರ್ಲಕ್ಷ್ಯ: ಬಿಜೆಪಿ ಜಿಲ್ಲಾಧ್ಯಕ್ಷ ಸಂಜಿವ್ ರೆಡ್ಡಿ ಟೀಕೆ

ಹಗರಿಬೊಮ್ಮನಹಳ್ಳಿ: ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ರೈತರು ಹಾಗೂ ಬಡವರ ಹಿತಾಸಕ್ತಿಗೆ ಸಹಕಾರಿಯಾಗಿಲ್ಲ ಎಂದು ವಿಜಯನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಿವ್ ರೆಡ್ಡಿ ಟೀಕಿಸಿದರು.

ಈ ಕುರಿತು ವಿಜಯಸಾಕ್ಷಿ ಪತ್ರಿಕೆಗೆ ಮಾಹಿತಿ ನೀಡಿದ ಅವರು, ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ಪ್ರೋತ್ಸಾಹ ಹಾಗೂ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವಂತಹ ಸ್ಪಷ್ಟ ಯೋಜನೆಗಳು ಬಜೆಟ್‌ನಲ್ಲಿ ಕಾಣುತ್ತಿಲ್ಲ ಎಂದು ಹೇಳಿದರು.

ಬಡವರು ಹಾಗೂ ಸಾಮಾನ್ಯ ಜನರಿಗೆ ಉಪಯೋಗವಾಗುವ ಯೋಜನೆಗಳು ಕಡಿಮೆಯಾಗಿರುವುದು ನಿರಾಶೆ ತಂದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸರ್ಕಾರ ರೈತರು ಮತ್ತು ಬಡವರ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಿ, ಅವರ ಹಿತಾಸಕ್ತಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.

ಸಿದ್ದರಾಮಯ್ಯ ಬಜೆಟ್ ನಿರಾಶೆ ತಂದಿದೆ: ಶಾಸಕ ಕೆ. ನೇಮಿರಾಜ ನಾಯ್ಕ ಟೀಕೆ

ಹಗರಿಬೊಮ್ಮನಹಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ ಮಂಡಿಸಿದ ಬಜೆಟ್ ಕುರಿತು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ನೇಮಿರಾಜ ನಾಯ್ಕ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ವಿಜಯಸಾಕ್ಷಿ ಜೊತೆಗೆ ಮಾತನಾಡಿದ ಅವರು, ಕಾರ್ಮಿಕರು ಹಾಗೂ ಗ್ರಾಮೀಣ ಜನತೆಗೆ ಪ್ರಯೋಜನವಾಗುವಂತಹ ಯಾವುದೇ ಪ್ರಮುಖ ಯೋಜನೆಗಳನ್ನು ಬಜೆಟ್‌ನಲ್ಲಿ ಸಮರ್ಪಕವಾಗಿ ನೀಡಿಲ್ಲ ಎಂದು ಆರೋಪಿಸಿದರು.

ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕೃಷಿ ಅಭಿವೃದ್ಧಿ, ನೀರಾವರಿ ಯೋಜನೆಗಳ ಅನುಷ್ಠಾನ, 17 ಕೆರೆಗಳನ್ನು ತುಂಬಿಸುವ ಯೋಜನೆ ಹಾಗೂ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕಾಗಿತ್ತು. ಆದರೆ ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಬಜೆಟ್ ಮಂಡಿಸಿಲ್ಲ ಎಂದು ಅವರು ಹೇಳಿದರು.

ಇದಲ್ಲದೆ ರೈತರ ಸಾಲದ ಸಮಸ್ಯೆ ಪರಿಹಾರ ಹಾಗೂ ಗ್ರಾಮೀಣ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಸ್ಪಷ್ಟ ಯೋಜನೆಗಳನ್ನು ಘೋಷಿಸಬೇಕಾಗಿತ್ತು. ಜನಪರ ಬಜೆಟ್ ಮಂಡಿಸಬೇಕಿದ್ದ ಕಾಂಗ್ರೆಸ್ ಸರ್ಕಾರ ಈ ವಿಷಯದಲ್ಲಿ ವಿಫಲವಾಗಿದೆ ಎಂದು ಶಾಸಕ ಕೆ. ನೇಮಿರಾಜ ನಾಯ್ಕ ಟೀಕಿಸಿದರು.

error: Content is protected !!