Home Blog Page 7

ಸಂವಿಧಾನಕ್ಕೆ ಧಕ್ಕೆ ತಂದರೆ ಕ್ಷಮೆ ಇಲ್ಲ: ಶಾಸಕ ಜಿ.ಎಸ್. ಪಾಟೀಲ

ವಿಜಯಸಾಕ್ಷಿ ಸುದ್ದಿ, ‌ನರೇಗಲ್ಲ: “ಭಾರತದ ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು, ಸ್ವಾತಂತ್ರ್ಯ ಮತ್ತು ಸಮಾನತೆಯ ಜೀವನಾಡಿ. ಸಂವಿಧಾನದ ತಂಟೆಗೆ ಬರುವವರಿಗೆ ಜನರೇ ತಕ್ಕ ಉತ್ತರ ನೀಡುತ್ತಾರೆ” ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಎಚ್ಚರಿಕೆ ನೀಡಿದರು.

ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ, ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿ ಬಳಗ ಹಾಗೂ ಜಿ.ಎಸ್. ಪಾಟೀಲ ಅಭಿಮಾನಿ ಬಳಗದ ವತಿಯಿಂದ ನರೇಗಲ್ಲ ಪಟ್ಟಣದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದ ಸಂವಿಧಾನವನ್ನು ಬದಲಿಸುವ ಕುರಿತು ಕೆಲವರು ಮಾತನಾಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದ ಅವರು, “ಏಳು ದಶಕಗಳಿಂದ ದೇಶ ಸಂವಿಧಾನದ ಆಶಯದಂತೆ ಬದುಕುತ್ತಿದೆ. ಮುಂದಿನ ಪೀಳಿಗೆಯೂ ಅದನ್ನು ಕಾಪಾಡುವ ಹೊಣೆ ಹೊತ್ತುಕೊಳ್ಳಬೇಕು” ಎಂದು ಹೇಳಿದರು.

ದಲಿತರು, ಹಿಂದುಳಿದವರು ಎನ್ನುವ ಬದಲು ಎಲ್ಲರೂ ಸಮಾನರು ಎಂಬ ಮನೋಭಾವ ಸಮಾಜದಲ್ಲಿ ಬೆಳೆಬೇಕು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಲೇ ದೇಶದಲ್ಲಿ ಸಮಾನತೆ ಹಾಗೂ ಸಹಬಾಳ್ವೆ ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿಯ ರಾಜ್ಯ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಮೈಲಾರಪ್ಪ ವಿ. ಚಳ್ಳಮರದ ಅವರ ಸಂಘಟನಾ ಶಕ್ತಿಯನ್ನು ಶಾಸಕ ಜಿ.ಎಸ್. ಪಾಟೀಲ ಶ್ಲಾಘಿಸಿದರು.

“ಮೈಲಾರಪ್ಪ ಕಾಂಗ್ರೆಸ್ ಪಕ್ಷಕ್ಕೆ ಬಂದ ಬಳಿಕ ಮತ್ತಷ್ಟು ಚುರುಕುಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲಿದ್ದಾರೆ” ಎಂದು ಭರವಸೆ ನೀಡಿದರು.

ರೋಣ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಜಿ. ಪಾಟೀಲ, “ಸಂವಿಧಾನವೇ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿಗೆ ಸಮಾನ ಬದುಕಿನ ಹಕ್ಕು ನೀಡಿದೆ” ಎಂದು ಹೇಳಿದರು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷಯ ಐ. ಪಾಟೀಲ, “ಭಾರತೀಯ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾದದ್ದು. ಪ್ರಜೆಗಳ ಹಕ್ಕುಗಳ ರಕ್ಷಣೆಗೆ ಸಂವಿಧಾನವೇ ಶಕ್ತಿ” ಎಂದರು.

ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ, “ಭ್ರಾತೃತ್ವ ಮತ್ತು ಸಾಮರಸ್ಯವೇ ಸಂವಿಧಾನದ ಆತ್ಮ” ಎಂದು ಹೇಳಿದರು.

ಬಾಗಲಕೋಟೆಯ ಯುವ ಮುಖಂಡ ವಿನಯ ಆರ್. ತಿಮ್ಮಾಪುರ ಮಾತನಾಡಿದರು.

ರೋಣ ಬೂದೀಶ್ವರಮಠದ ಡಾ. ವಿಶ್ವನಾಥ ಮಹಾಸ್ವಾಮಿಗಳು, ರಹಿಮಾನ ಶಾವಲಿ ದರ್ಗಾದ ಸಯ್ಯದ್ ಮಂಜೂರ ಹುಸೇನ ಶ್ಯಾವಲಿ ಶರಣರು, ಇಟಗಿಯ ಶಿವಶರಣ ಗೆದಿಗೆಪ್ಪಜ್ಜನವರು ಹಾಗೂ ಸೂಡಿ ಮರುಳು ಸಿದ್ದೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ಸರ್ಕಾರಿ ಸೇವೆಯಲ್ಲಿ ಸಾಧನೆ ಮಾಡಿದ ಮಾದಿಗ ಸಮುದಾಯದವರಿಗೆ ಸನ್ಮಾನ ಹಾಗೂ ಎಸ್‌ಎಸ್‌ಎಲ್‌ಸಿ–ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಜಿ.ಎಸ್. ಪಾಟೀಲರಿಗೆ ‘ಜೈ ಭೀಮ್ ರತ್ನ’ ರಾಜ್ಯ ಪ್ರಶಸ್ತಿ

ದಲಿತರ ಅಭಿವೃದ್ಧಿ, ಯುವಕರಿಗೆ ಉದ್ಯೋಗ ಸೃಷ್ಟಿ, ನೆಲ–ಜಲ ಸಂರಕ್ಷಣೆಗೆ ನೀಡಿದ ಕೊಡುಗೆ ಹಾಗೂ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ ಕಾಯ್ದುಕೊಂಡಿದ್ದಕ್ಕಾಗಿ ಶಾಸಕ ಜಿ.ಎಸ್. ಪಾಟೀಲ ಅವರಿಗೆ ‘ಜೈ ಭೀಮ್ ರತ್ನ’ ರಾಜ್ಯ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬೈಲಪ್ಪ ತಳವಾರ, ಬಿ.ವಿ. ಗೌಡರ, ಅರುಣ ಕುಲಕರ್ಣಿ, ವಿ.ಎ. ಕುಂಬಾರ, ಈಶಯ್ಯ ಕಲ್ಲೂರ, ಹನಮಪ್ಪ ಅಬ್ಬಿಗೆರಿ, ಸುರೇಶ ಹಳ್ಳಿಕೇರಿ ಹಾಗೂ ಚಂದ್ರು ಎಂ. ರಾಥೋಡ್ ಅವರನ್ನು ವಿವಿಧ ಕ್ಷೇತ್ರಗಳ ಸೇವೆಗಾಗಿ ಸನ್ಮಾನಿಸಲಾಯಿತು.

“ಸಂವಿಧಾನದ ತಂಟೆಗೆ ಬರುವವರಿಗೆ ಜನರೇ ತಕ್ಕ ಉತ್ತರ ನೀಡುತ್ತಾರೆ. “ಸಮಾನತೆ ಮತ್ತು ಸಹಬಾಳ್ವೆಗೆ ಡಾ. ಅಂಬೇಡ್ಕರ್ ನೀಡಿದ ಸಂವಿಧಾನವೇ ಬಲ.”

ಜಿ.ಎಸ್. ಪಾಟೀಲ, ಶಾಸಕ

“PSI ನೇಮಕ ವಿಳಂಬ… ಸಾರ್ವಜನಿಕರಲ್ಲಿ ಹೆಚ್ಚಿದ ಭೀತಿ!”

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದ ಪೊಲೀಸ್ ಠಾಣೆಗೆ ಕಳೆದ ಒಂದು ತಿಂಗಳಿನಿಂದ ಶಾಶ್ವತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಅಧಿಕಾರಿಯನ್ನು ನೇಮಕ ಮಾಡದಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.

ತಾಲೂಕು ಕೇಂದ್ರವಾಗಿರುವ ಹಗರಿಬೊಮ್ಮನಹಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಮರ್ಥ ಪೊಲೀಸ್ ಅಧಿಕಾರಿಯ ಅಗತ್ಯವಿದೆ. ಆದರೆ ಸರ್ಕಾರ ಇನ್ನೂ ಹೊಸ PSI ನೇಮಕ ಮಾಡದಿರುವುದರಿಂದ ಪಟ್ಟಣದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರು ಆರೋಪಿಸಿದ್ದಾರೆ.

ಸ್ಥಳೀಯರ ಪ್ರಕಾರ, ಅಕ್ರಮ ಮದ್ಯ ಮಾರಾಟ, ಜೂಜಾಟ, ಗಾಂಜಾ ವ್ಯವಹಾರ ಹಾಗೂ ರಾತ್ರಿ ವೇಳೆ ಅನುಮಾನಾಸ್ಪದ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಯುವಜನತೆ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.

“ಪೊಲೀಸ್ ಠಾಣೆಯಲ್ಲಿ ಶಾಶ್ವತ ಅಧಿಕಾರಿಯ ಕೊರತೆಯಿಂದ ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದನೆ ಸಿಗುತ್ತಿಲ್ಲ. ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲೂ ವಿಳಂಬ ಉಂಟಾಗುತ್ತಿದೆ” ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವ್ಯಾಪಾರ, ಶಿಕ್ಷಣ ಹಾಗೂ ಗ್ರಾಮೀಣ ಸಂಪರ್ಕದ ಪ್ರಮುಖ ಕೇಂದ್ರವಾಗಿರುವ ಹಗರಿಬೊಮ್ಮನಹಳ್ಳಿಗೆ ಸದೃಢ ಪೊಲೀಸ್ ಆಡಳಿತ ಅತ್ಯಗತ್ಯವಾಗಿದೆ. ಆದರೆ ತಿಂಗಳಾದರೂ PSI ನೇಮಕವಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸ್ಥಳೀಯ ಸಂಘಟನೆಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ತಕ್ಷಣ ಪ್ರಾಮಾಣಿಕ, ಜನಪರ ಹಾಗೂ ಕಾರ್ಯಕ್ಷಮ PSI ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

“ತಾಯಿಯ ಕಣ್ಣೀರು ಒರೆಸಿದ ನರೇಗಾ ಗುದ್ದಲಿ!”

ವಿಜಯಸಾಕ್ಷಿ ಸುದ್ದಿ, ರೋಣ: ಸಮಾಜದ ಕಣ್ಣಲ್ಲಿ ತೃತೀಯ ಲಿಂಗಿಗಳು ಹಲವೊಮ್ಮೆ ಕೇವಲ ಚಪ್ಪಾಳೆ ತಟ್ಟುವ ಕೈಗಳಾಗಿ, ಭಿಕ್ಷೆ ಬೇಡುವ ಮುಖಗಳಾಗಿ ಅಥವಾ ಹಾಸ್ಯದ ವಸ್ತುವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಆ ತಾರತಮ್ಯದ ಗೋಡೆಯನ್ನೇ ಧ್ವಂಸ ಮಾಡಿ, “ನಾವು ಯಾರ ಮುಂದೆಯೂ ಕೈಯೊಡ್ಡುವುದಿಲ್ಲ… ದುಡಿದು ಬದುಕುತ್ತೇವೆ” ಎಂದು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ ರೋಣ ತಾಲೂಕಿನ ಸವಡಿ ಗ್ರಾಮದ 42 ವರ್ಷದ ತೃತೀಯ ಲಿಂಗಿ ರಮೇಶ ವಿರೂಪಾಕ್ಷಪ್ಪ ಕಂಬಳಿ.

ಇದು ಕೇವಲ ಒಬ್ಬ ವ್ಯಕ್ತಿಯ ಬದುಕಿನ ಕಥೆಯಲ್ಲ, ನೂರಾರು ಅವಮಾನ, ಕಣ್ಣೀರು ಮತ್ತು ಹಸಿವಿನ ನಡುವೆಯೂ ಮಣ್ಣನ್ನು ನಂಬಿ ಗೌರವದ ಬದುಕು ಕಟ್ಟಿಕೊಂಡ ಹೋರಾಟದ ಜೀವಂತ ಗಾಥೆ.

ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ಹುಟ್ಟಿದ ರಮೇಶ, ಸುಮಾರು 20 ವರ್ಷಗಳ ಹಿಂದೆ ತಾನು ತೃತೀಯ ಲಿಂಗಿ ಎಂಬ ಅರಿವಿಗೆ ಬಂದಾಗ ಸಮಾಜದಿಂದ ಅನೇಕ ಹೀಯಾಳನೆ, ಅವಮಾನಗಳನ್ನು ಎದುರಿಸಬೇಕಾಯಿತು. ತಂದೆಯ ನಿಧನದ ನಂತರ ಕುಟುಂಬದ ಹೊರೆ ಇನ್ನಷ್ಟು ಹೆಚ್ಚಾಯಿತು.

ಆದರೆ ವೃದ್ಧ ತಾಯಿ ಮಾತ್ರ ಮಗುವನ್ನು ಕೈಬಿಡದೆ ಆಸರೆಯಾಗಿ ನಿಂತಳು. ತಾಯಿಯನ್ನು ಸಾಕಲು ಹಾಗೂ ಯಾರಿಗೂ ಹೊರೆಯಾಗಬಾರದು ಎಂಬ ಸಂಕಲ್ಪದಿಂದ ರಮೇಶ ಆರಂಭದಲ್ಲಿ ಕುರಿ ಕಾಯುವ ಕೆಲಸಕ್ಕೆ ಇಳಿದರು.

ಬಿಸಿಲು–ಮಳೆ ಎನ್ನದೆ ಕಾಡು–ಮೇಡು ಅಲೆದು ದುಡಿದರೂ ಆ ಬದುಕಿಗೆ ಭದ್ರತೆ ಇರಲಿಲ್ಲ.

ಬದುಕಿಗೆ ದಾರಿಯಾದ ನರೇಗಾ

ರಮೇಶನ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ).

ಸುಮಾರು ಐದು ವರ್ಷಗಳ ಹಿಂದೆ ಮೊದಲ ಬಾರಿಗೆ ನರೇಗಾ ಕಾಮಗಾರಿಯಲ್ಲಿ ಗುದ್ದಲಿ ಹಿಡಿದ ದಿನ, ಅದು ಕೇವಲ ಕೆಲಸವಲ್ಲ… ಸ್ವಾಭಿಮಾನದ ಹೊಸ ಬದುಕಿನ ಆರಂಭವಾಗಿತ್ತು.

ಜಾಬ್ ಕಾರ್ಡ್ ಸಂಖ್ಯೆ KN-14-004-027-002/1562 ಹೊಂದಿರುವ ರಮೇಶ, ಇಂದು ಕೆರೆ ಹೂಳೆತ್ತುವುದು, ಬದು ನಿರ್ಮಾಣ ಸೇರಿದಂತೆ ಕಠಿಣ ಶ್ರಮದ ಕೆಲಸಗಳನ್ನು ಹಸನ್ಮುಖಿಯಾಗಿ ನಿರ್ವಹಿಸುತ್ತಿದ್ದಾರೆ.

ನರೇಗಾ ಕೆಲಸ ಇಲ್ಲದ ದಿನಗಳಲ್ಲಿ ರೈತರ ಹೊಲಗಳಿಗೆ ಕೂಲಿಗೆ ತೆರಳಿ ದುಡಿಯುತ್ತಾರೆ.

ತಮ್ಮ ಬದುಕಿನ ಬಗ್ಗೆ ಮಾತನಾಡುವಾಗ ರಮೇಶನ ಕಣ್ಣಲ್ಲಿ ನೀರು ತುಂಬುತ್ತದೆ.

“ನನ್ನಂತವರಿಗೆ ಸಮಾಜದಲ್ಲಿ ಬದುಕುವುದು ಎಷ್ಟು ಕಷ್ಟ ಅಂತ ನನಗೆ ಗೊತ್ತು. ನನಗೂ ನಗರಕ್ಕೆ ಹೋಗಿ ಭಿಕ್ಷೆ ಬೇಡಿ ಬದುಕಬಹುದಿತ್ತು. ಆದರೆ ನನಗೆ ನನ್ನ ತಾಯಿಯ ಸಂಸ್ಕಾರ ಮುಖ್ಯ. ಹಳ್ಳಿಯ ಮಣ್ಣಿನಲ್ಲಿ ಬೆವರು ಸುರಿಸಿ ಬರುವ ನೂರು ರೂಪಾಯಿ ಸಾಕು. ನರೇಗಾ ನನಗೆ ಕೆಲಸ ಮಾತ್ರ ಕೊಟ್ಟಿಲ್ಲ… ಸಮಾಜದಲ್ಲಿ ತಲೆಯೆತ್ತಿ ಬದುಕುವ ಗೌರವ ಕೊಟ್ಟಿದೆ” ಎಂದು ಅವರು ಭಾವುಕರಾಗುತ್ತಾರೆ.

ರಮೇಶನ ಬದುಕಿನ ಮತ್ತೊಂದು ವಿಶೇಷವೆಂದರೆ ಸವಡಿ ಗ್ರಾಮದ ಜನರ ಬೆಂಬಲ.

“ಅವನು ನಮ್ಮ ಊರಿನ ಮಗ… ನಮ್ಮಂತೆಯೇ ದುಡಿದು ಬದುಕುತ್ತಿದ್ದಾನೆ” ಎಂದು ಗ್ರಾಮಸ್ಥರು ರಮೇಶನನ್ನು ಸಮಾನವಾಗಿ ಕಾಣುವುದು ಈ ಕಥೆಯ ಅತ್ಯಂತ ಹೃದಯಸ್ಪರ್ಶಿ ಸಂಗತಿ.

ಒಂದು ಎಕರೆ ಒಣ ಜಮೀನು ಹಾಗೂ ಪುಟ್ಟ ಮನೆಯಲ್ಲೇ ತಾಯಿಯ ಜೊತೆ ವಾಸವಿರುವ ರಮೇಶ, ಕಾಯಕವೇ ಬದುಕಿನ ದಾರಿ ಎಂಬ ನಂಬಿಕೆಯಿಂದ ಬದುಕು ಸಾಗಿಸುತ್ತಿದ್ದಾರೆ.

‘ಮೈತ್ರಿ’ ಯೋಜನೆಯ ಮಾಸಾಶನದಿಂದ ತಾಯಿಯ ಔಷಧ ವೆಚ್ಚ ನಿರ್ವಹಿಸುತ್ತಿರುವ ರಮೇಶ, ತಮ್ಮ ಬದುಕು ಇನ್ನಷ್ಟು ಸ್ವಾವಲಂಬಿಯಾಗಲು ಸರ್ಕಾರದಿಂದ ವಿಶೇಷ ನೆರವು ನಿರೀಕ್ಷಿಸುತ್ತಿದ್ದಾರೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿ ಸೇರಿದಂತೆ ವಿವಿಧ ಯೋಜನೆಗಳಡಿ ವೈಯಕ್ತಿಕ ಸೌಲಭ್ಯಗಳು ದೊರೆತರೆ ಬದುಕು ಇನ್ನಷ್ಟು ಬಲವಾಗುತ್ತದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.

“ನರೇಗಾ ನನಗೆ ಕೆಲಸ ಮಾತ್ರ ಕೊಡಲಿಲ್ಲ, ಸಮಾಜದಲ್ಲಿ ತಲೆಯೆತ್ತಿ ಬದುಕುವ ಗೌರವವನ್ನೂ ಕೊಟ್ಟಿದೆ.”

ರಮೇಶ ವಿರೂಪಾಕ್ಷಪ್ಪ ಕಂಬಳಿ

“ಭಿಕ್ಷಾಟನೆ ಮೆಟ್ಟಿ ನಿಂತು ಸ್ವಾವಲಂಬಿಯಾಗಿ ಬದುಕುತ್ತಿರುವ ರಮೇಶ ಇಡೀ ತಾಲೂಕಿಗೆ ಮಾದರಿ.”
— ಚಂದ್ರಶೇಖರ ಬಿ. ಕಂದಕೂರ

ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ. ರೋಣ

“ಕೊನೆಯ ಸ್ತರದ ವ್ಯಕ್ತಿಗೂ ಆರ್ಥಿಕ ಭದ್ರತೆ ನೀಡುವುದೇ ನರೇಗಾ ಯೋಜನೆಯ ನಿಜವಾದ ಉದ್ದೇಶ.”
 ಸಿ.ಆರ್. ಮುಂಡರಗಿ,

ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಗದಗ

ಎಸಿ ಹಾಕಿಕೊಂಡು ಮಲಗಿದ್ದ ಕ್ಯಾಬ್ ಚಾಲಕ ಸಾವು! ಹೃದಯಾಘಾತ ಶಂಕೆ?

ಬೆಂಗಳೂರು: ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಗೆದರಹಳ್ಳಿ ಬಳಿ ಕ್ಯಾಬ್ ಚಾಲಕನೊಬ್ಬ ಕಾರಿನೊಳಗೆ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ಚಾಲಕ ಎಸಿ ಹಾಕಿಕೊಂಡು ಕಾರಿನ ಗ್ಲಾಸ್ ಏರಿಸಿ ನಿದ್ರಿಸುತ್ತಿದ್ದಾಗಲೇ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಬೆಳಗ್ಗೆ ಸುಮಾರು 10 ಗಂಟೆಗೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕ್ಯಾಬ್ ದೀರ್ಘ ಸಮಯದಿಂದ ಚಲನೆಯಿಲ್ಲದೆ ನಿಂತಿದ್ದನ್ನು ಗಮನಿಸಿದ ಸ್ಥಳೀಯರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಕಾರಿನ ಬಳಿ ಹೋದಾಗ ಚಾಲಕ ಒಳಗೆ ಮಲಗಿರುವ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.

ಡೋರ್ ತೆರೆಯಲು ಪ್ರಯತ್ನಿಸಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಕಲ್ಲಿನಿಂದ ಗಾಜು ಒಡೆದು ಕಾರನ್ನು ತೆರೆಯಲಾಗಿದೆ. ಈ ವೇಳೆ ಚಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದು, ತಕ್ಷಣವೇ ಸ್ಥಳೀಯರು ಮತ್ತು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಅವರು ಮೃತಪಟ್ಟಿರುವುದು ದೃಢಪಟ್ಟಿದೆ.

ಹೃದಯಾಘಾತದಿಂದ ಸಾವು ಸಂಭವಿಸಿರುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮೃತರು ಖಾಸಗಿ ಕಂಪನಿಯ ಕ್ಯಾಬ್ ಚಾಲಕರಾಗಿದ್ದು, ಅವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಘಟನೆ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (UDR) ಪ್ರಕರಣ ದಾಖಲಾಗಿದೆ.

ಆಧಾರ್ ಬಳಕೆದಾರರಿಗೆ ಸಿಹಿ ಸುದ್ದಿ: ಉಚಿತ ಡಾಕ್ಯುಮೆಂಟ್ ಅಪ್‌ಡೇಟ್ ಗಡುವು ಮತ್ತೊಮ್ಮೆ ವಿಸ್ತರಣೆ!

ನವದೆಹಲಿ: ಕೋಟಿಗಟ್ಟಲೆ ಆಧಾರ್ ಕಾರ್ಡ್ ಬಳಕೆದಾರರಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಸಿಹಿ ಸುದ್ದಿ ನೀಡಿದೆ.

ಮೈಆಧಾರ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಉಚಿತವಾಗಿ ಆಧಾರ್ ದಾಖಲೆಗಳನ್ನು ನವೀಕರಿಸಲು ನೀಡಲಾಗಿದ್ದ ಗಡುವನ್ನು ಮತ್ತೊಮ್ಮೆ ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ.

ಯುಐಡಿಎಐ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯ ಪ್ರಕಾರ, ಮೈಆಧಾರ್ ಪೋರ್ಟಲ್ ಮೂಲಕ ಲಕ್ಷಾಂತರ ನಾಗರಿಕರು ತಮ್ಮ ವಿವರಗಳನ್ನು ಯಶಸ್ವಿಯಾಗಿ ಅಪ್‌ಡೇಟ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಇನ್ನಷ್ಟು ಜನರಿಗೆ ಅವಕಾಶ ನೀಡಲು ಗಡುವು ವಿಸ್ತರಿಸಲಾಗಿದೆ ಎಂದು ತಿಳಿಸಲಾಗಿದೆ.

ವಿಶೇಷವಾಗಿ 10 ವರ್ಷಗಳ ಹಿಂದೆ ಆಧಾರ್ ಪಡೆದು ಇದುವರೆಗೆ ದಾಖಲೆಗಳನ್ನು ನವೀಕರಿಸದವರು ತಮ್ಮ ಗುರುತಿನ ಪುರಾವೆ ಹಾಗೂ ವಿಳಾಸದ ಪುರಾವೆ ಅನ್ನು ಅಪ್‌ಡೇಟ್ ಮಾಡುವುದು ಅಗತ್ಯವಾಗಿದೆ ಎಂದು ಯುಐಡಿಎಐ ಸೂಚಿಸಿದೆ.

ಆನ್‌ಲೈನ್ ಮೂಲಕ myAadhaar ಪೋರ್ಟಲ್‌ನಲ್ಲಿ (myaadhaar.uidai.gov.in/) ಈ ಸೇವೆಯನ್ನು ಉಚಿತವಾಗಿ ಬಳಸಬಹುದು. ಆದರೆ ಆಧಾರ್ ಸೇವಾ ಕೇಂದ್ರಗಳು ಅಥವಾ ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ದಾಖಲೆಗಳನ್ನು ನವೀಕರಿಸಿದರೆ ₹75 ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ.

ಆಧಾರ್ ಡೇಟಾಬೇಸ್‌ನ ನಿಖರತೆ ಹಾಗೂ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸಾರ್ವಜನಿಕರು ತಮ್ಮ ವಿವರಗಳನ್ನು ನವೀಕರಿಸಿಕೊಳ್ಳಬೇಕು ಎಂದು ಯುಐಡಿಎಐ ಮನವಿ ಮಾಡಿದೆ.

ರಾಜ್ಯದಲ್ಲಿ ನಾಳೆ ಭಾರೀ ಮಳೆ ಎಚ್ಚರಿಕೆ: ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ

ಬೆಂಗಳೂರು: ಕರ್ನಾಟಕದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಭಾರೀ ಮಳೆ, ಗುಡುಗು-ಮಿಂಚು ಹಾಗೂ ಬಿರುಗಾಳಿಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಮೇ 19ರಂದು ಬೀದರ್ ಮತ್ತು ಕಲಬುರಗಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕೊಪ್ಪಳ, ಧಾರವಾಡ, ಗದಗ, ವಿಜಯನಗರ, ಹಾವೇರಿ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳು ಆರೆಂಜ್ ಅಲರ್ಟ್ ವ್ಯಾಪ್ತಿಯಲ್ಲಿ ಸೇರಿವೆ.

ಉಳಿದಂತೆ ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಹಾಗೂ ಇತರ ಜಿಲ್ಲೆಗಳಲ್ಲಿ ಕೂಡ ಮಳೆಯ ಮುನ್ಸೂಚನೆ ಇದೆ.

ಉತ್ತರ ಒಳನಾಡಿನಲ್ಲಿ ಮೇ 21ರವರೆಗೆ ಮಳೆಯ ಚಟುವಟಿಕೆ ಮುಂದುವರಿಯುವ ನಿರೀಕ್ಷೆ ಇದ್ದು, ನಂತರ ಹವಾಮಾನದಲ್ಲಿ ಸ್ವಲ್ಪ ಸುಧಾರಣೆ ಕಾಣಬಹುದು ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಕೆಲವೆಡೆ ಗುಡುಗು-ಮಿಂಚು ಸಹಿತ ಭಾರೀ ಮಳೆಯ ಸಾಧ್ಯತೆ ಇದೆ.

ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಧ್ಯಾಹ್ನದ ಬಳಿಕ ಮೋಡಗಟ್ಟುವಿಕೆ ಹಾಗೂ ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸ್ನೇಹಿತರಿಗೆ ನಷ್ಟ ತಪ್ಪಿಸಲು ಜನರ ಮೇಲೆ ಪ್ರಧಾನಿ ಹೊರೆ: ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್

ಬೆಂಗಳೂರು: ಸಮೃದ್ಧವಾಗಿದ್ದ, ಶಕ್ತಿಯುತವಾಗಿದ್ದ ಇಡೀ ವಿಶ್ವದಲ್ಲೇ ಬಲಿಷ್ಠವಾದ ಆರ್ಥಿಕ ವ್ಯವಸ್ಥೆ ಹಾಳಾಗಿದೆ ಅಂದರೆ ಅದಕ್ಕೆ ಪ್ರಧಾನ ಮಂತ್ರಿಗಳೇ ಕಾರಣ. ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ಸ್ಪಷ್ಟನೆ ನೀಡಬೇಕು ಹಾಗೂ ಈ ದೇಶದ ಜನರ ಕ್ಷಮೆ ಯಾಚನೆ ಮಾಡಬೇಕು” ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಅವರು ಆಗ್ರಹಿಸಿದರು. ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಸೋಮವಾರ ಮಾತನಾಡಿದರು.

ನಿರಂತರ ಯುದ್ಧಗಳು ಮತ್ತು ಜಾಗತಿಕ ಅಸ್ಥಿರತೆಯು ದಶಕಗಳ ಅಭಿವೃದ್ಧಿಯನ್ನು ಹಿಮ್ಮೆಟ್ಟಿಸಬಹುದು ಮತ್ತು ದೊಡ್ಡ ಜನಸಂಖ್ಯೆಯನ್ನು ಮತ್ತೆ ಬಡತನಕ್ಕೆ ತಳ್ಳಬಹುದು ಎನ್ನುವ ಬಗ್ಗೆ ಪ್ರಧಾನಿ ನರೇಂದ್ರ ಅವರು ಸ್ಪಷ್ಟನೆ ನೀಡಬೇಕು. ಪ್ರಧಾನ ಮಂತ್ರಿಗಳು ಯಾವ ಅರ್ಥದಲ್ಲಿಬಡತನದ ಬಗ್ಗೆ ಹೇಳಿದ್ದಾರೆ. ಹಾಗೂ ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಮಾಹಿತಿ ಕೊಡಬೇಕು ಎಂದು ಒತ್ತಾಯಿಸುತ್ತೇನೆ” ಎಂದರು.

“ದೇಶದ ಚುಕ್ಕಾಣಿಯನ್ನು ಪ್ರಧಾನಿ ಮೋದಿಯವರು ಹಿಡಿದು ಹನ್ನೆರಡು ವರ್ಷವಾಗಿದೆ. ಈ ಹಿಂದಿನ ಆಡಳಿತಕ್ಕೆ ಹೋಲಿಸಿದಾಗ ಇಲ್ಲಿಯವರೆಗೆ ಹೆಚ್ಚುವರಿಯಾಗಿ ಸುಮಾರು 45 ಲಕ್ಷ ಕೋಟಿ ಹಣವನ್ನು ಪೆಟ್ರೋಲ್ ಮತ್ತು ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಿಂದ ಪಡೆದಿದ್ದಾರೆ” ಎಂದರು.

ಒಂದೆರಡು ಮೂರು ಕಂಪನಿಗಳಿಗೆ ರಕ್ಷಣೆ ಕೊಡಬೇಕು ಎಂದು ಬೆಲೆ ಏರಿಕೆ ಮಾಡಿದ್ದಾರೆ. ಜನರು ಎಚ್ಚೆತ್ತುಕೊಂಡಿಲ್ಲ. ನೀವು ಬಡತನದ ದವಡೆಗೆ ಸಿಲುಕುವಿರಿ ಎನ್ನುವ ಸಂದೇಶ ನೀಡಿರುವುದು ನೋಡಿದರೆ ನಾವೆಲ್ಲರೂ ಕೂಡ ತಲೆ ತಗ್ಗಿಸುವಂತಹ ವಿಚಾರ ಎಂದು ಹೇಳಿದರು.

ರಾಹುಲ್ ಗಾಂಧಿ ವಿದೇಶದಲ್ಲಿ ಮಾತನಾಡಿದಾಗ ದೇಶದ್ರೋಹಿ ಎನ್ನುತ್ತಾರೆ. ಸ್ವತಃ ಪ್ರಧಾನಮಂತ್ರಿಗಳೇ ವಿದೇಶಿ ನೆಲದಲ್ಲಿ ನಿಂತು ಬಡತನ ಎದುರಾಗಿದೆ ಅಂತ ಮಾತನಾಡಿದ್ದಾರೆ ಎಂದಾಗ, ಯಾವ ದೃಷ್ಟಿಕೋನದಲ್ಲಿ ಅವರು ಹೇಳಿದ್ದಾರೆ ಅನ್ನೋದನ್ನ ಸ್ಪಷ್ಟೀಕರಣ ಕೊಡಬೇಕು. ಅವರು ನೆದರ್ಲ್ಯಾಂಡ್ಸ್ ಅವರನ್ನ ಉದ್ದೇಶಿಸಿ ಮಾತಾಡಿದ್ರಾ? ಅಥವಾ ಭಾರತೀಯರಿಗೆ ಅಲ್ಲಿಂದ ಒಂದು ಸಂದೇಶ ಕೊಟ್ಟರೇ? ಅದನ್ನೂ ಹೇಳಬೇಕು ಎಂದು ತಿರುಗೇಟು ನೀಡಿದರು.

ರಾಹುಲ್ ಗಾಂಧಿಯವರು ಏನೇ ಮಾತಾಡಿದ್ರು ಕೂಡ ಆರೋಪಗಳನ್ನ ಮಾಡ್ತಾರೆ. ಭಾರತೀಯರ ಪರಿಸ್ಥಿತಿ ಇಂತಹ ಶೋಚನೀಯ ಸ್ಥಿತಿಗೆ ಹೋಗಿದೆಯೇ ಅನ್ನೋದನ್ನು ಕೂಡ ನಾವು ಚಿಂತನೆ ಮಾಡಬೇಕಾಗಿದೆ. ನನ್ನ ಪ್ರಕಾರ ಶೋಚನೀಯ ಪರಿಸ್ಥಿತಿಗೆ ನಾವ್ಯಾರು ಕೂಡ ಹೋಗಿಲ್ಲ. ಅವರು ಕೊರೋನಾ ಸಂದರ್ಭದಲ್ಲಿ ಪ್ರಧಾನಿ ಕೊಟ್ಟ ಕರೆಗೆ ಈ ರಾಷ್ಟ್ರದ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

ಈಗ ಏಕಾಏಕಿ ಒಂದಷ್ಟು ಕಠಿಣ ಕ್ರಮಗಳನ್ನ, ಒಂದಷ್ಟು ಶಿಸ್ತು ಪಾಲನೆಯನ್ನ ಮಾಡಿ ಎಂದು ಮನವಿ ಮಾಡಿದ್ದಾರೆ. ಅವರು ಯುದ್ಧ ಪ್ರಾರಂಭ ಆದ ದಿನವೇ ಎಚ್ಚರಿಕೆ ವಹಿಸಬೇಕಾಗಿತ್ತು. ಅವತ್ತಿಂದ ಎಚ್ಚರಿಕೆಯನ್ನ ವಹಿಸದೆ ಈಗ ಹೇಳುತ್ತಿರುವುದು ಅನುಮಾನಗಳನ್ನ ಹುಟ್ಟು ಹಾಕಿದೆ. ಅವರ ಸ್ನೇಹಿತರಿಗೆ, ಹಿತೈಷಿ ಕಂಪೆನಿಗಳಿಗೆ ನಷ್ಟವಾಗುತ್ತೆ ಅಂತ ಹೇಳಿ ಭಾರತೀಯರ ಮೇಲೆ ಹೊರೆ ಹಾಕ್ತಾ ಇದ್ದಾರೆ ಎಂದು ತಿವಿದರು.

ಹರ್ ಕಿ ಪೌರಿ ಘಾಟ್ ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ: ಆರೋಪಿ ಅರೆಸ್ಟ್

ಹರಿದ್ವಾರ: ಉತ್ತರಾಖಂಡದ ಪವಿತ್ರ ನಗರ ಹರಿದ್ವಾರದಲ್ಲಿ ಭಾನುವಾರ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪ್ರಸಿದ್ಧ ಹರ್ ಕಿ ಪೌರಿ ಘಾಟ್ ಸೇರಿದಂತೆ ಹಲವು ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ದೂರವಾಣಿ ಮೂಲಕ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಮದ್ಯಪಾನದ ಅಮಲಿನಲ್ಲಿ ಇದ್ದ ಯುವಕ 112 ತುರ್ತು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ಹರ್ ಕಿ ಪೌರಿ ಸೇರಿದಂತೆ ಇತರ ಪ್ರದೇಶಗಳಲ್ಲಿ ನಾಲ್ಕು ದಿನಗಳೊಳಗೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಕರೆ ಬಂದ ತಕ್ಷಣ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿತು.

ಘಟನೆಯ ಬಳಿಕ ವಿಶೇಷ ತಂಡಗಳನ್ನು ರಚಿಸಿ ಕರೆ ಮಾಡಿದ ಮೊಬೈಲ್ ಸಂಖ್ಯೆಯ ಸ್ಥಳವನ್ನು ಟ್ರೇಸ್ ಮಾಡಲಾಯಿತು. ತನಿಖೆ ವೇಳೆ ಪೌರಿ ಜಿಲ್ಲೆಯ ಯಮ್ಕೇಶ್ವರ್ ನಿವಾಸಿ 30 ವರ್ಷದ ಸೋಹನ್ ಸಿಂಗ್ ರಾವತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆತ ಮದ್ಯಪಾನದ ಸ್ಥಿತಿಯಲ್ಲಿ ಬೆದರಿಕೆ ಕರೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಹರಿದ್ವಾರ ನಗರ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹರ್ ಕಿ ಪೌರಿ ಹರಿದ್ವಾರದ ಅತ್ಯಂತ ಪವಿತ್ರ ಮತ್ತು ಪ್ರಸಿದ್ಧ ಘಾಟ್‌ಗಳಲ್ಲಿ ಒಂದಾಗಿದೆ. ಪ್ರತಿದಿನ ಲಕ್ಷಾಂತರ ಭಕ್ತರು ಇಲ್ಲಿ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ವಿಷ್ಣುವಿನ ಪಾದಚಿಹ್ನೆಗಳೊಂದಿಗೆ ಈ ಸ್ಥಳಕ್ಕೆ ಪೌರಾಣಿಕ ಸಂಬಂಧವಿದೆ ಎಂಬ ನಂಬಿಕೆ ಇದೆ. ಪ್ರತಿದಿನ ಸಂಜೆ ನಡೆಯುವ ಗಂಗಾ ಆರತಿ ದೇಶ-ವಿದೇಶದ ಭಕ್ತರನ್ನು ಆಕರ್ಷಿಸುತ್ತದೆ. ಜೊತೆಗೆ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳ ಹಾಗೂ 6 ವರ್ಷಕ್ಕೊಮ್ಮೆ ನಡೆಯುವ ಅರ್ಧ ಕುಂಭಮೇಳದಿಂದ ಹರಿದ್ವಾರ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ.

ದೇವೇಗೌಡರ ರಾಜ್ಯಸಭೆ ಮರು ಆಯ್ಕೆ ಬಿಜೆಪಿ ತೀರ್ಮಾನಕ್ಕೆ ಬಿಟ್ಟದ್ದು: ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ರಾಜ್ಯಸಭೆಗೆ ಮರು ಆಯ್ಕೆ ಮಾಡುವ ವಿಚಾರ ಬಿಜೆಪಿ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟದ್ದು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ದೇವೇಗೌಡರ ಜನ್ಮದಿನದ ಅಂಗವಾಗಿ ಕುಟುಂಬ ಸಮೇತವಾಗಿ ಶುಭಾಶಯ ಕೋರಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವೇಗೌಡರ ರಾಜ್ಯಸಭೆ ಅವಧಿ ಈಗಾಗಲೇ ಮುಕ್ತಾಯಗೊಂಡಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯ ವೇಳೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಾಗ ಯಾವುದೇ ಷರತ್ತುಗಳನ್ನು ನಾವು ವಿಧಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರಿಗೆ ವಿಶೇಷ ಗೌರವ ನೀಡುತ್ತಾರೆ. ಹೀಗಾಗಿ ರಾಜ್ಯಸಭೆ ಮರು ಆಯ್ಕೆ ಕುರಿತ ಅಂತಿಮ ತೀರ್ಮಾನ ಬಿಜೆಪಿ ಹೈಕಮಾಂಡ್ ಕೈಯಲ್ಲಿದೆ ಎಂದು ಅವರು ತಿಳಿಸಿದರು.

ಈ ವಿಷಯದಲ್ಲಿ ನಮ್ಮಿಂದ ಯಾವುದೇ ಒತ್ತಾಯ ಇಲ್ಲ. ಬಿಜೆಪಿ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಲಿ” ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಇನ್ನೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಸಮಾವೇಶದ ಕುರಿತು ಪ್ರತಿಕ್ರಿಯಿಸಿದ ಅವರು, ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್‌ನ ಪ್ರಮುಖ ಕ್ಷೇತ್ರವಾಗಿದ್ದು, ಇದೇ ಕಾರಣಕ್ಕೆ ಸಮಾವೇಶ ಆಯೋಜಿಸಲಾಗಿತ್ತು ಎಂದರು.

ಸಮಾವೇಶದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭಾಗವಹಿಸಿದ್ದರು. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಜನರು ಭಾಗವಹಿಸಿದ್ದರು. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಜಿಟಿ ದೇವೇಗೌಡರ ವಿಚಾರವಾಗಿ ಮಾತನಾಡಲು ನಿರಾಕರಿಸಿದ ನಿಖಿಲ್, ಆ ಕುರಿತು ಪಕ್ಷದ ವರಿಷ್ಠರಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಹೆಚ್.ಡಿ. ದೇವೇಗೌಡರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಜೂನ್ 15ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಮೊದಲ ಸಂಪುಟ ಸಭೆಯಲ್ಲೇ ಕೇರಳ CM ಘೋಷಣೆ

ತಿರುವನಂತಪುರಂ: ಕೇರಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ವಿ.ಡಿ. ಸತೀಶನ್ ನೇತೃತ್ವದ ಸರ್ಕಾರ, ಅಧಿಕಾರ ಸ್ವೀಕರಿಸಿದ ತಕ್ಷಣವೇ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪಂಚ ಗ್ಯಾರಂಟಿಗಳ ಪೈಕಿ ಎರಡು ಮಹತ್ವದ ಭರವಸೆಗಳನ್ನು ಜಾರಿಗೆ ತರುವ ನಿರ್ಧಾರ ಕೈಗೊಂಡಿದೆ.

ರಾಜ್ಯದ ಎಲ್ಲಾ ಮಹಿಳೆಯರಿಗೆ ಜೂನ್ 15ರಿಂದ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಘೋಷಿಸಿದ್ದಾರೆ. ಈ ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಇದರ ಜೊತೆಗೆ ವೃದ್ಧರ ಕಲ್ಯಾಣಕ್ಕಾಗಿ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ವೃದ್ಧರಿಗಾಗಿ ಪ್ರತ್ಯೇಕ ಇಲಾಖೆಯನ್ನು ರಚಿಸುತ್ತಿರುವುದು ದೇಶದಲ್ಲೇ ಇದೇ ಮೊದಲು ಎಂಬುದಾಗಿ ಮುಖ್ಯಮಂತ್ರಿ ಹರ್ಷ ವ್ಯಕ್ತಪಡಿಸಿದ್ದಾರೆ.

ಮಹಿಳಾ ಹಾಗೂ ಕಾರ್ಮಿಕ ವರ್ಗದ ಕಲ್ಯಾಣಕ್ಕೆ ಒತ್ತು ನೀಡಿರುವ ಸರ್ಕಾರ, ಆಶಾ ಕಾರ್ಯಕರ್ತೆಯರ ಗೌರವಧನವನ್ನು ಮೊದಲ ಹಂತದಲ್ಲಿ 3,000 ರೂಪಾಯಿ ಹೆಚ್ಚಳ ಮಾಡಿದೆ. ಇದರಿಂದ ಅವರ ಒಟ್ಟು ಮಾಸಿಕ ವೇತನ 9,000 ರೂಪಾಯಿಯಿಂದ 12,000 ರೂಪಾಯಿಗೆ ಏರಿಕೆಯಾಗಲಿದೆ.

ಇದೇ ವೇಳೆ ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಸಿಬ್ಬಂದಿ, ಪೂರ್ವ ಪ್ರಾಥಮಿಕ ಶಿಕ್ಷಕರು ಹಾಗೂ ಆಯಾಗಳ ವೇತನವನ್ನು ತಲಾ 1,000 ರೂಪಾಯಿ ಹೆಚ್ಚಿಸುವುದಾಗಿ ಘೋಷಿಸಲಾಗಿದೆ.

ಚುನಾವಣಾ ಭರವಸೆಗಳನ್ನು ಹಂತ ಹಂತವಾಗಿ ಜಾರಿಗೊಳಿಸುವ ದಿಸೆಯಲ್ಲಿ ಸರ್ಕಾರ ಮೊದಲ ಹೆಜ್ಜೆ ಇಟ್ಟಿದ್ದು, ಜನಪರ ಆಡಳಿತಕ್ಕೆ ಆದ್ಯತೆ ನೀಡುವುದಾಗಿ ಮುಖ್ಯಮಂತ್ರಿ ಸತೀಶನ್ ತಿಳಿಸಿದ್ದಾರೆ.

error: Content is protected !!