Home Blog Page 8

ಚಾರ್ಟರ್ಡ್ ಅಕೌಂಟೆಂಟ್ಸ್ ದಿನಕ್ಕೆ ಮಾನವೀಯ ಸ್ಪರ್ಶ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ರಾಷ್ಟ್ರೀಯ ಚಾರ್ಟರ್ಡ್ ಅಕೌಂಟೆನ್ಸಿ ದಿನಾಚರಣೆಯನ್ನು ವಿಜಯನಗರ ಚಾರ್ಟರ್ಡ್ ಅಕೌಂಟೆಂಟ್ಸ್ ಜಿಲ್ಲಾ ಘಟಕವು ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಿತು.

ಪಟ್ಟಣದ ಸಾಧ್ಯಾ ಟ್ರಸ್ಟ್ ಫಾರ್ ಸೋಷಿಯಲ್ ಡೆವಲಪ್‌ಮೆಂಟ್ (ರಿ) ನಡೆಸುತ್ತಿರುವ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಾರ್ಟರ್ಡ್ ಅಕೌಂಟೆಂಟ್ ಸೀನಂ ಭಟ್, ದೇಶದ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳ ಪಾತ್ರ ಮಹತ್ವದ್ದಾಗಿದೆ. ಹಣಕಾಸಿನ ಶಿಸ್ತು, ಪಾರದರ್ಶಕತೆ ಹಾಗೂ ನಿಖರ ಲೆಕ್ಕಪತ್ರ ನಿರ್ವಹಣೆಯ ಮೂಲಕ ಉತ್ತಮ ಆಡಳಿತ ವ್ಯವಸ್ಥೆ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ವಿಶೇಷ ಚೇತನ ಮಕ್ಕಳ ಶಿಕ್ಷಣ, ಆರೈಕೆ, ತರಬೇತಿ ಹಾಗೂ ಸಬಲೀಕರಣಕ್ಕಾಗಿ ಸಾಧ್ಯಾ ಟ್ರಸ್ಟ್ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಗೆ ಶ್ರಮಿಸುವ ಇಂತಹ ಸಂಸ್ಥೆಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಹಣಕಾಸಿನ ಜವಾಬ್ದಾರಿ ಮತ್ತು ಪಾರದರ್ಶಕ ಆಡಳಿತ ಯಾವುದೇ ಸಂಸ್ಥೆಯ ಬೆಳವಣಿಗೆಗೆ ಭದ್ರ ಬುನಾದಿಯಾಗಿದ್ದು, ವಿದ್ಯಾರ್ಥಿಗಳಲ್ಲಿ ಉಳಿತಾಯದ ಮನೋಭಾವ ಹಾಗೂ ಹಣಕಾಸಿನ ಅರಿವನ್ನು ಬಾಲ್ಯದಿಂದಲೇ ಬೆಳೆಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ದಿನಾಚರಣೆಯ ಅಂಗವಾಗಿ ವಿಶೇಷ ಶಾಲೆಗೆ ಎರಡು ನೀರಿನ ಟ್ಯಾಂಕ್‌ಗಳು, ಅಡುಗೆ ಸಾಮಗ್ರಿಗಳು ಹಾಗೂ ಎರಡು ಚಹಾ ಬಾಕ್ಸ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಬಳಿಕ ಚಾರ್ಟರ್ಡ್ ಅಕೌಂಟೆಂಟ್ಸ್ ವಿದ್ಯಾರ್ಥಿಗಳೊಂದಿಗೆ ಬೆರೆತು ಅವರ ಯೋಗಕ್ಷೇಮ ವಿಚಾರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ರವೀಂದ್ರನಾಥ ಗುಪ್ತ, ಸಿಎ ವೀಣಾ, ಸಿಎ ಸರ್ಪಭೂಷಣ, ಜಿ. ಅನಿತಾ, ಶೀಲಾ ರೆಡ್ಡಿ, ಸೋನಿ ಮಹೇಂದ್ರ, ಶ್ರೀಕಾಂತ್, ಜಿ. ವಿನಾಯಕ್, ಗವಿಸಿದ್ದಪ್ಪ, ಮಂಜುನಾಥ್, ಗುಂಡಿ ನಾಗರಾಜ್, ಬೋರಯ್ಯ, ರಾಜೇಶ್, ಶ್ರೀನಿವಾಸ್, ಅನಿಲ್ ಕುಮಾರ್, ಶಾಲೆಯ ಮುಖ್ಯಸ್ಥೆ ಆರತಿ, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

33 ದಿನಗಳ ಶಿವಯೋಗ ಸಮಾಧಿ ಅಂತ್ಯ; ಜುಲೈ 5ರಂದು ರಾಚೋಟೀಶ್ವರ ಶ್ರೀಗಳ ದರ್ಶನ

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಅಂತೂರ–ಬೆಂತೂರ ಗ್ರಾಮದ ಬೂದೀಶ್ವರ ಸಂಸ್ಥಾನಮಠದಲ್ಲಿ ರಾಚೋಟೀಶ್ವರ ಶಿವಾಚಾರ್ಯರ 60ನೇ ಮೌನಾನುಷ್ಠಾನ ಹಾಗೂ 16ನೇ ಶಿವಯೋಗ ಸಮಾಧಿಯ ಮುಕ್ತಾಯ ಮಹಾಮಂಗಳೋತ್ಸವ ಜುಲೈ 5ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಪ್ರವಚನಕಾರ ಮಡಿವಾಳಯ್ಯ ಶಾಸ್ತ್ರಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ, ನೀರು, ಗಾಳಿ ಹಾಗೂ ಬೆಳಕಿಲ್ಲದ ಸ್ಥಳದಲ್ಲಿ 33 ದಿನಗಳ ಕಾಲ ತಪಸ್ಸು ಆಚರಿಸಿರುವ ರಾಚೋಟೀಶ್ವರ ಶ್ರೀಗಳು ಜುಲೈ 5ರಂದು ಬೆಳಿಗ್ಗೆ 9.30ಕ್ಕೆ ಸಮಾಧಿ ಸ್ಥಳದಿಂದ ಹೊರಬಂದು ಭಕ್ತರಿಗೆ ದರ್ಶನ ನೀಡಲಿದ್ದಾರೆ ಎಂದು ಹೇಳಿದರು.

ಜೂನ್ 2ರಿಂದ ಆರಂಭಗೊಂಡಿರುವ ಭೀಮಕವಿ ವಿರಚಿತ ಬಸವೇಶ್ವರ ಪುರಾಣ ಪ್ರವಚನ ಜುಲೈ 4ರಂದು ಮಹಾಮಂಗಲದೊಂದಿಗೆ ಮುಕ್ತಾಯಗೊಳ್ಳಲಿದೆ. ಜುಲೈ 1ರಿಂದ 4ರವರೆಗೆ ವಿಶೇಷ ಪೂಜೆ, 775 ಶಿವಲಿಂಗಗಳ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಜುಲೈ 5ರಂದು ಬೂದೀಶ್ವರರ ವಿಗ್ರಹ ಪ್ರತಿಷ್ಠಾಪನೆ ನೆರವೇರಲಿದೆ ಎಂದರು.

ಜುಲೈ 1ರಂದು ಷಟಸ್ಥಲ ಧ್ವಜಾರೋಹಣ ಹಾಗೂ 775 ಶಿವಲಿಂಗ ಪ್ರತಿಷ್ಠಾಪನೆ, ಜುಲೈ 2 ಮತ್ತು 3ರಂದು ಧರ್ಮಸಭೆಗಳು, ಜುಲೈ 4ರಂದು ಬಸವಪುರಾಣ ಮಹಾಮಂಗಲೋತ್ಸವ ನಡೆಯಲಿದೆ. ವಿವಿಧ ದಿನಗಳಲ್ಲಿ ದೇವರಹಿಪ್ಪರಗಿ ಜಡೇಮಠದ ಜಡೇಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿರಹಟ್ಟಿ ಫಕೀರ ಸಿದ್ಧರಾಮ ಸ್ವಾಮೀಜಿ, ಕೊಣ್ಣೂರ ಸಿದ್ಧಲಿಂಗ ಶಿವಾಚಾರ್ಯರು, ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಜುಲೈ 5ರಂದು ನಡೆಯುವ ಶಿವಯೋಗ ಸಮಾಧಿ ಮಹಾಮಂಗಳೋತ್ಸವ ಹಾಗೂ ಬೂದೀಶ್ವರರ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮುಂಡರಗಿ ಅನ್ನದಾನೇಶ್ವರ ಮಠದ ಜಗದ್ಗುರು ಡಾ. ನಾಡೋಜ ಅನ್ನದಾನೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ರಾಚೋಟೀಶ್ವರ ಶಿವಾಚಾರ್ಯರು ನೇತೃತ್ವ ವಹಿಸಲಿದ್ದಾರೆ. ಶಾಸಕ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ದೇವರಹಿಪ್ಪರಗಿ ಜಡೇಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಲೋಕಕಲ್ಯಾಣ, ಯೋಧರು ಹಾಗೂ ರೈತರ ಶ್ರೇಯೋಭಿವೃದ್ಧಿಗಾಗಿ ರಾಚೋಟೀಶ್ವರ ಶ್ರೀಗಳು ಶಿವಯೋಗ ಸಮಾಧಿ ಕೈಗೊಂಡಿದ್ದಾರೆ. ಮುಕ್ತಾಯ ಸಮಾರಂಭಕ್ಕೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದಲೂ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಮಹಾಲಿಂಗಪುರದ ಗುರುಲಿಂಗ ದೇವರು ಮಾತನಾಡಿ, ಜುಲೈ 6ರಂದು ಬೆಳಿಗ್ಗೆ 5 ಗಂಟೆಗೆ “ದುಶ್ಚಟಗಳ ಭಿಕ್ಷೆ–ಸದ್ಗುಣಗಳ ದೀಕ್ಷೆ” ಎಂಬ ಸಂಕಲ್ಪದೊಂದಿಗೆ ಬೂದೀಶ್ವರ ಮಠದಿಂದ ಉಳವಿ ಚನ್ನಬಸವೇಶ್ವರ ದೇವಸ್ಥಾನದವರೆಗೆ ಧರ್ಮಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಕೆ. ಆಲೂರು, ಮಂಜುನಾಥ ಮಜ್ಜಿಗುಡ್ಡ, ಬೂದಪ್ಪ ಜಿಣಿಗಿ ಹಾಗೂ ಮಂಜುನಾಥ ಬಾವಿಕಟ್ಟಿ ಉಪಸ್ಥಿತರಿದ್ದರು.

‘ಆರೋಗ್ಯವೇ ಭಾಗ್ಯ’ ಸಾರಿದ ಕೆಎಲ್‌ಇ ವಿದ್ಯಾರ್ಥಿಗಳ ನಾಟಕ

ವಿಜಯಸಾಕ್ಷಿ ಸುದ್ದಿ, ಗದಗ: ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಸ್ಥಳೀಯ ಕೆಎಲ್‌ಇ ಶಾಲೆಯಲ್ಲಿ ವಿದ್ಯಾರ್ಥಿಗಳೇ ಕೇಂದ್ರಬಿಂದುವಾಗಿ ಅರ್ಥಪೂರ್ಣವಾಗಿ ಆಚರಿಸಿದರು. ಭಾಷಣ, ನಾಟಕ, ನೃತ್ಯ ಹಾಗೂ ಜಾಗೃತಿ ಗೀತೆಗಳ ಮೂಲಕ ಆರೋಗ್ಯದ ಮಹತ್ವವನ್ನು ಸಾರಿದ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ನಗರದ ಹಿರಿಯ ವೈದ್ಯ ಡಾ. ರಾಜಶೇಖರ ಪವಾಡಶೆಟ್ಟರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವುದು ಕಳವಳಕಾರಿ. ವಾಹನ ಸಂಚಾರದಲ್ಲಿ ಎಚ್ಚರಿಕೆ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಅಪಘಾತ ಸಂಭವಿಸಿದಾಗ ಗಾಯಾಳುಗಳಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಸಲಹೆ ನೀಡಿದರು.

ವೈದ್ಯರು ತಮ್ಮ ಜ್ಞಾನ, ಕೌಶಲ್ಯ ಮತ್ತು ಮಾನವೀಯತೆಯ ಮೂಲಕ ಸಮಾಜದ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳು ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಅವರ ಸೇವೆ ಅತ್ಯಂತ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲೆ ಕಲ್ಪನಾ ಚಚಡಿ ಮಾತನಾಡಿ, ಪ್ರಕೃತಿಯು ನೀಡಿರುವ ಗಾಳಿ, ನೀರು, ಬೆಳಕು ಹಾಗೂ ಆಹಾರವೇ ಆರೋಗ್ಯದ ಮೂಲ. ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ವೈದ್ಯರು ಸಲ್ಲಿಸಿದ ಸೇವೆ ಸದಾ ಸ್ಮರಣೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 3 ಮತ್ತು 4ನೇ ತರಗತಿ ವಿದ್ಯಾರ್ಥಿಗಳು “ಆರೋಗ್ಯವೇ ಭಾಗ್ಯ” ಎಂಬ ಜಾಗೃತಿ ನಾಟಕ ಪ್ರದರ್ಶಿಸಿ ಆರೋಗ್ಯಕರ ಜೀವನಶೈಲಿಯ ಸಂದೇಶ ನೀಡಿದರು. 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳು ದೈನಂದಿನ ಬದುಕಿನಲ್ಲಿ ಆರೋಗ್ಯದ ಕಾಳಜಿ ಕುರಿತು ಅಣಕು ಪ್ರದರ್ಶನ ನಡೆಸಿ ಮೆಚ್ಚುಗೆ ಗಳಿಸಿದರು.

ವೇದಿಕೆಯಲ್ಲಿ ಹಿರಿಯ ಶಿಕ್ಷಕ ವಿರೇಂದ್ರ ಗಂಗಲ್ ಉಪಸ್ಥಿತರಿದ್ದರು. ವಿಜ್ಞಾನ ವಿಭಾಗದ ಮುಖ್ಯಸ್ಥೆ ಸುರೇಖಾ ಕದಂ, ಶಿಕ್ಷಕರಾದ ಮಹಾಂತೇಶ ಕಟಗಿ ಹಾಗೂ ಶಿಕ್ಷಕಿಯರಾದ ಸೀತಾ ನಾಮಧಾರಿ, ವಿಜಯಾ ಕಬ್ಬಕ್ಕಿ, ಸೋನಲ್ ಶಹಾ, ಸೋನಿಯಾ ಉಣಚಗೇರಿ, ನಮ್ರತಾ, ಸಮ್ರಿನ್ ತಾಜ್, ಬೃಂದಾ ಕೆ. ಮತ್ತು ಪ್ರೇಮಾಂಜಲಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ವಂದನಾರ್ಪಣೆ ಹಾಗೂ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಕರ್ತವ್ಯನಿಷ್ಠ ಚಾಲಕನಿಗೆ ಗೌರವ: ಬಸವರಾಜ ಅಂಗಡಿ ಅವರಿಗೆ ಕೆಎಸ್‌ಆರ್‌ಟಿಸಿ ಸನ್ಮಾನ

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಕೆಎಸ್‌ಆರ್‌ಟಿಸಿಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿ ನಿವೃತ್ತರಾದ ಬಸ್ ಚಾಲಕ ಬಸವರಾಜ ಅಂಗಡಿ ಅವರಿಗೆ ಗಜೇಂದ್ರಗಡ ಬಸ್ ಘಟಕದಲ್ಲಿ ಆತ್ಮೀಯ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

31 ವರ್ಷಗಳ ಕಾಲ ಸಂಸ್ಥೆಯ ವಿವಿಧ ಘಟಕಗಳಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿದ ಬಸವರಾಜ ಅಂಗಡಿ, ಶಿಸ್ತು, ಸಮಯಪಾಲನೆ ಮತ್ತು ಸುರಕ್ಷಿತ ಚಾಲನೆಯ ಮೂಲಕ ಸಹೋದ್ಯೋಗಿಗಳು ಹಾಗೂ ಪ್ರಯಾಣಿಕರ ವಿಶ್ವಾಸ ಗಳಿಸಿದ್ದರು. 2005ರಲ್ಲಿ ಉತ್ತಮ ಚಾಲಕ ಪ್ರಶಸ್ತಿ ಪಡೆದಿದ್ದ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಘಟಕದ ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿ ಅಭಿನಂದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, ಬಸವರಾಜ ಅಂಗಡಿ ಅವರು ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಮತ್ತು ವಿನಯಶೀಲತೆಯಿಂದ ಸಂಸ್ಥೆಯ ಗೌರವ ಹೆಚ್ಚಿಸಿದ ಸಿಬ್ಬಂದಿಯಾಗಿದ್ದು, ಅವರ ಸೇವೆ ಯುವ ಚಾಲಕರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ವಿ. ಮೈತ್ರಿ, ಗಜೇಂದ್ರಗಡ ಘಟಕ ವ್ಯವಸ್ಥಾಪಕ ಕೆ.ಎಸ್. ಜಿಗಳೂರ, ಸಿಬ್ಬಂದಿಗಳಾದ ಎಸ್.ಜಿ. ಜೇಡ್ರಾಮಕುಂಟಿ, ಡಿ.ವೈ. ನಾಲಬಂದ, ಮುಖಂಡರಾದ ಉಮೇಶ ಮೇಣಸಗಿ, ದೊಡ್ಡಬಸವರಾಜ ಅಂಗಡಿ ಸೇರಿದಂತೆ ಹಲವರು ಉಪಸ್ಥಿತರಿದ್ದು, ನಿವೃತ್ತ ಜೀವನ ಸುಖ, ಆರೋಗ್ಯ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

ವಚನ ಸಾಮ್ರಾಜ್ಯ ಉಳಿಸಿದ ಮಹಾತ್ಮ ಫ.ಗು. ಹಳಕಟ್ಟಿ: ಎಸ್.ವಿ. ಸಂಕನೂರ

ವಿಜಯಸಾಕ್ಷಿ ಸುದ್ದಿ, ಗದಗ: ಕೇವಲ ವಚನಗಳನ್ನು ಸಂಗ್ರಹಿಸಿದ ವ್ಯಕ್ತಿಯಾಗಿ ಅಲ್ಲ, ನಶಿಸಿಹೋಗುತ್ತಿದ್ದ ವಚನ ಸಾಹಿತ್ಯಕ್ಕೆ ಹೊಸ ಜೀವ ತುಂಬಿದ ಮಹಾನ್ ಸಂಶೋಧಕರಾಗಿ ಡಾ. ಫ.ಗು. ಹಳಕಟ್ಟಿಯವರನ್ನು ಸಮಾಜ ಸದಾ ಸ್ಮರಿಸಬೇಕು. ಅವರ ಆದರ್ಶಗಳು ಮತ್ತು ವಚನಗಳ ಸಂದೇಶಗಳು ಪ್ರತಿಯೊಬ್ಬರ ಬದುಕಿನ ದಾರಿದೀಪವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಗುರುವಾರ ಆಯೋಜಿಸಿದ್ದ ‘ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ–2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಶರಣರು ತಾಳೆಗರಿ ಮತ್ತು ಓಲೆಗರಿಗಳಲ್ಲಿ ಬರೆದಿಟ್ಟಿದ್ದ ವಚನಗಳು ಕಾಲಗರ್ಭದಲ್ಲಿ ಕಣ್ಮರೆಯಾಗುವ ಸ್ಥಿತಿಯಲ್ಲಿದ್ದಾಗ, ಊರೂರು ಅಲೆದು ಅವುಗಳನ್ನು ಸಂಗ್ರಹಿಸಿ ಉಳಿಸಿದ ಶ್ರೇಯಸ್ಸು ಹಳಕಟ್ಟಿಯವರಿಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ಅವರನ್ನು ‘ವಚನ ಪಿತಾಮಹ’ ಎಂದು ಗೌರವಿಸಲಾಗುತ್ತಿದೆ. ವಕೀಲಿ ವೃತ್ತಿಯನ್ನೇ ತ್ಯಜಿಸಿ ಸೈಕಲ್‌ನಲ್ಲಿ ಹಳ್ಳಿಹಳ್ಳಿಗೆ ಸಂಚರಿಸಿ ಸಾವಿರಾರು ವಚನಗಳನ್ನು ಸಂಗ್ರಹಿಸಿದ ಅವರು, ಸ್ವಂತ ಮುದ್ರಣಾಲಯ ಸ್ಥಾಪಿಸಿ ವಚನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ ಮಹಾನ್ ಸಾಧಕರು ಎಂದು ಸಂಕನೂರ ಸ್ಮರಿಸಿದರು.

ಹಳಕಟ್ಟಿಯವರು ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತರಾಗಿರಲಿಲ್ಲ. ವಿಜಯಪುರದಲ್ಲಿ ಲಿಂಗಾಯತ ವಿದ್ಯಾವರ್ಧಕ ಸಂಘ (ಬಿಎಲ್‌ಡಿಇ), ಸಿದ್ದೇಶ್ವರ ಬ್ಯಾಂಕ್ ಸೇರಿದಂತೆ ಹಲವು ಶೈಕ್ಷಣಿಕ, ಸಹಕಾರಿ ಸಂಸ್ಥೆಗಳನ್ನು ಕಟ್ಟುವ ಮೂಲಕ ಸಮಾಜದ ಅಭಿವೃದ್ಧಿಗೂ ಅಪಾರ ಕೊಡುಗೆ ನೀಡಿದ್ದಾರೆ. ಇಂದಿನ ಯುವಜನರು ವಚನಗಳನ್ನು ಓದುವುದಷ್ಟೇ ಅಲ್ಲ, ಬದುಕಿನಲ್ಲೂ ಅಳವಡಿಸಿಕೊಳ್ಳಬೇಕು. ‘ಕಳಬೇಡ, ಕೊಲಬೇಡ, ಮುನಿಯಬೇಡ…’ ಎಂಬ ಒಂದೇ ವಚನವನ್ನು ಜೀವನದಲ್ಲಿ ಪಾಲಿಸಿದರೂ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಶರಣ ತತ್ವ ಚಿಂತಕ ಅಶೋಕ ಬರಗುಂಡಿ ಮಾತನಾಡಿ, ನಶಿಸಿಹೋಗುತ್ತಿದ್ದ ವಚನ ಸಾಹಿತ್ಯವನ್ನು ಉಳಿಸಲು ಡಾ. ಫ.ಗು. ಹಳಕಟ್ಟಿಯವರು ನಡೆಸಿದ ಹೋರಾಟ ಅಪರೂಪದದ್ದು ಎಂದು ಬಣ್ಣಿಸಿದರು.

ಬಸವಣ್ಣ, ಅಲ್ಲಮಪ್ರಭು ಸೇರಿದಂತೆ ಶರಣರ ವಚನಗಳು ಚದುರಿಹೋಗಿದ್ದ ಸಂದರ್ಭದಲ್ಲಿ ಅವುಗಳನ್ನು ಸಂಗ್ರಹಿಸಿ, ವೈಜ್ಞಾನಿಕವಾಗಿ ವರ್ಗೀಕರಿಸಿ ಸಮಾಜಕ್ಕೆ ಮರಳಿ ನೀಡಿದ ಪುಣ್ಯಾತ್ಮ ಹಳಕಟ್ಟಿಯವರು. ಅವರ ಅಸಾಧಾರಣ ಪರಿಶ್ರಮದ ಫಲವಾಗಿ 15 ಸಂಪುಟಗಳು ಹಾಗೂ ಶಿವಾನುಭವದ 35 ಸಂಪುಟಗಳು ಪ್ರಕಟವಾಗಿವೆ ಎಂದು ಹೇಳಿದರು.

1880ರ ಜುಲೈ 2ರಂದು ಜನಿಸಿದ ಹಳಕಟ್ಟಿಯವರು ವಿದ್ಯಾರ್ಥಿ ಜೀವನದಿಂದಲೇ ಲಿಂಗಾಯತ ಧರ್ಮದ ಇತಿಹಾಸ ಮತ್ತು ವಚನ ಸಾಹಿತ್ಯದ ಕುರಿತು ಅಪಾರ ಆಸಕ್ತಿ ಹೊಂದಿದ್ದರು. ವಕೀಲರಾಗಿ ಲಕ್ಷಾಂತರ ರೂಪಾಯಿ ಸಂಪಾದಿಸುವ ಅವಕಾಶವಿದ್ದರೂ ಅದನ್ನು ತ್ಯಜಿಸಿ ವಚನಗಳ ಹುಡುಕಾಟಕ್ಕೆ ಜೀವನವನ್ನೇ ಮೀಸಲಿಟ್ಟರು ಎಂದು ವಿವರಿಸಿದರು.

ಹಾಲಭಾವಿ ವೀರಭದ್ರಪ್ಪ ತಂದ ಪ್ರಭುಲಿಂಗಲೀಲೆ ಹಾಗೂ ಗಣಭಾಷಿತ ರತ್ನಮಾಲೆ ಗ್ರಂಥಗಳ ಮೂಲಕ ವಚನಗಳತ್ತ ಆಕರ್ಷಿತರಾದ ಹಳಕಟ್ಟಿಯವರು ನಂತರ ಸಾವಿರಾರು ತಾಳೆಗರಿಗಳನ್ನು ಸಂಗ್ರಹಿಸಿ, ವಚನಗಳನ್ನು ವೈಜ್ಞಾನಿಕವಾಗಿ ವರ್ಗೀಕರಿಸಿದರು. ಸುಮಾರು 2,665 ವಚನಗಳನ್ನು 232 ಶೀರ್ಷಿಕೆಗಳಡಿ ಜೋಡಿಸಲು ಹತ್ತು ವರ್ಷಗಳ ಕಾಲ ನಿರಂತರ ಶ್ರಮಿಸಿದರು ಎಂದು ಹೇಳಿದರು.

ಮುದ್ರಣಕ್ಕೆ ಹಣದ ಕೊರತೆ ಎದುರಾದಾಗ ಸ್ವಂತ ಮನೆಯನ್ನೇ ಮಾರಾಟ ಮಾಡಿ ‘ಹಿತಚಿಂತಕ’ ಮುದ್ರಣಾಲಯ ಆರಂಭಿಸಿದರು. ನವಕರ್ನಾಟಕ ವಾರಪತ್ರಿಕೆಯ ಮೂಲಕ 25 ವರ್ಷಗಳ ಕಾಲ ಶರಣ ತತ್ವಗಳನ್ನು ಜನರಿಗೆ ತಲುಪಿಸಿದರು. ಮಗನನ್ನು ಕಳೆದುಕೊಂಡ ನೋವು, ಕಡು ಬಡತನ, ಅನಾರೋಗ್ಯ ಸೇರಿದಂತೆ ಅನೇಕ ಸಂಕಷ್ಟಗಳ ನಡುವೆಯೂ ವಚನ ಸಂಶೋಧನೆಯಿಂದ ಹಿಂದೆ ಸರಿಯಲಿಲ್ಲ. ಸುಮಾರು 25 ಸಾವಿರ ಪುಟಗಳಷ್ಟು ವಚನ ಸಾಹಿತ್ಯವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಮಹಾತ್ಮ ಅವರು ಎಂದು ಬರಗುಂಡಿ ಭಾವುಕರಾಗಿ ಸ್ಮರಿಸಿದರು.

“ನನ್ನನ್ನು ಹೊಗಳಬೇಡಿ, ನನ್ನನ್ನು ನೆನೆಯಬೇಡಿ, ನನ್ನನ್ನು ಹೊಗಳುವ ಬದಲು ವಚನಗಳಂತೆ ಬದುಕಿ” ಎಂಬ ಹಳಕಟ್ಟಿಯವರ ಕೊನೆಯ ಸಂದೇಶವೇ ಅವರ ಬದುಕಿನ ಸಾರವಾಗಿದೆ. ಸಮಾಜದ ಪ್ರತಿಯೊಬ್ಬರೂ ಆ ಆದರ್ಶವನ್ನು ಪಾಲಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಅಂಗವಾಗಿ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮೃತ್ಯುಂಜಯ ಹಿರೇಮಠ ಮತ್ತು ತಂಡ ನಾಡಗೀತೆ ಪ್ರಸ್ತುತಪಡಿಸಿದರು.

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ವಿ. ಬಳ್ಳಾರಿ, ಶರಣ ಸಾಹಿತ್ಯ ಚಿಂತಕ ಬಳಿಗಾರ, ಕರ್ನಾಟಕ ಜನಪದ ಅಕಾಡೆಮಿಯ ಸದಸ್ಯ ಶಂಕರಣ್ಣ ಸಂಕಣ್ಣನವರ, ಎಸ್.ಎನ್. ಬಳ್ಳಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

“ವಚನ ಸಾಹಿತ್ಯ ಉಳಿಸಲು ಡಾ. ಫ.ಗು. ಹಳಕಟ್ಟಿ ತಮ್ಮ ಇಡೀ ಬದುಕನ್ನೇ ಮುಡಿಪಾಗಿಟ್ಟಿದ್ದರು. ಅವರನ್ನು ಸ್ಮರಿಸುವುದಕ್ಕಿಂತ ಅವರ ಆದರ್ಶ ಮತ್ತು ವಚನಗಳ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಗೌರವ.” –

ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯ

ಕುಡಿಯುವ ನೀರಿನ ವಿಚಾರದಲ್ಲಿ ರಾಜಿಯಿಲ್ಲ: ಭುವನೇಶ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಗ್ರಾಮೀಣ ಭಾಗದ ಜನರಿಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರು ಒದಗಿಸುವುದು ಅಧಿಕಾರಿಗಳ ಮೊದಲ ಆದ್ಯತೆಯಾಗಬೇಕು. ನೀರಿನ ಗುಣಮಟ್ಟ ಪರಿಶೀಲನೆಯಲ್ಲಿ ಯಾವುದೇ ನಿರ್ಲಕ್ಷ್ಯ ಕಂಡುಬಂದರೂ ಅಥವಾ ಕಲುಷಿತ ನೀರು ಪೂರೈಕೆಯಾದರೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ ಹಾಗೂ ಜಿಲ್ಲಾ ತಾಂತ್ರಿಕ ಅನುಮೋದನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಜನರು ಬಳಸುವ ಕುಡಿಯುವ ನೀರಿನ ಗುಣಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷಿಸಬೇಕು. ಬೋರ್‌ವೆಲ್ ನೀರನ್ನು ಕುಡಿಯಲು ಬಳಸುವ ಕಡೆಗಳಲ್ಲಿ ಅಗತ್ಯ ಸೂಚನಾ ಫಲಕ ಅಳವಡಿಸಬೇಕು. ಶಾಲೆಗಳು, ಅಂಗನವಾಡಿಗಳು ಹಾಗೂ ಮನೆಗಳಿಗೆ ಸಮರ್ಪಕ ಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಈ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಈಗಾಗಲೇ ದುರಸ್ತಿ ಕಾರ್ಯ ನಡೆಯುತ್ತಿರುವ ಘಟಕಗಳ ಕಾಮಗಾರಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸಬೇಕು. ಗಡುವಿನೊಳಗೆ ಕೆಲಸ ಮುಗಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಲ ಜೀವನ್ ಮಿಷನ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಯನ್ನು ಅಧಿಕಾರಿಗಳು ನಿರಂತರವಾಗಿ ಪರಾಮರ್ಶಿಸಬೇಕು. ಗ್ರಾಮಗಳಲ್ಲಿರುವ ಮೇಲ್ಮಟ್ಟದ ನೀರಿನ ಟ್ಯಾಂಕ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ, ಜನರಿಗೆ ಗುಣಮಟ್ಟದ ಕುಡಿಯುವ ನೀರು ತಲುಪುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ತಾಲೂಕು ಮಟ್ಟದ ಸಭೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಮುಂದಿನ ಸಭೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮಗ್ರ ಮಾಹಿತಿ ಹಾಗೂ ಪ್ರಗತಿ ವರದಿಯೊಂದಿಗೆ ಹಾಜರಾಗಬೇಕು ಎಂದು ಭುವನೇಶ ಪಾಟೀಲ ನಿರ್ದೇಶನ ನೀಡಿದರು.

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಜಗದೀಶ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪರಶುರಾಮ ಎಫ್.ಕೆ., ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ. ಕಮಲಾ ಬೈಲೂರು, ಎಲ್ಲ ತಾಲೂಕು ಪಂಚಾಯತ್‌ಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

“ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಸರ್ಕಾರದ ಯೋಜನೆ ಮಾತ್ರವಲ್ಲ, ಅಧಿಕಾರಿಗಳ ಹೊಣೆಗಾರಿಕೆಯೂ ಹೌದು. ನಿರ್ಲಕ್ಷ್ಯಕ್ಕೆ ಯಾವುದೇ ಕ್ಷಮೆ ಇಲ್ಲ.”

ಭುವನೇಶ ಪಾಟೀಲ, ಸಿಇಒ, ಜಿಲ್ಲಾ ಪಂಚಾಯತ್ ಧಾರವಾಡ

ಸಾಧನೆಗೆ ಅಂಗವೈಕಲ್ಯ ಎಂದಿಗೂ ಅಡ್ಡಿಯಲ್ಲ..!

ವಿಜಯಸಾಕ್ಷಿ ಸುದ್ದಿ, ಡಂಬಳ: ಅಂಗವೈಕಲ್ಯವನ್ನು ಸೋಲಿಸಿ, ಕಾಯಕವನ್ನೇ ಕೈಲಾಸವೆಂದು ನಂಬಿ ಮೂರು ದಶಕಗಳ ಕಾಲ ಶಿಕ್ಷಣ ಸಂಸ್ಥೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಮಲ್ಲಪ್ಪ ಕೆಂಚಮ್ಮ ಹರಿಜನ ಅವರಿಗೆ ಡಂಬಳದ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದಲ್ಲಿ ಭಾವಪೂರ್ಣ ಬೀಳ್ಕೊಡುಗೆ ನೀಡಲಾಯಿತು.

ತೋಂಟದಾರ್ಯ ವಿದ್ಯಾಪೀಠದ ಬಾಲಕಿಯರ ಹಾಗೂ ಬಾಲಕರ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮಲ್ಲಪ್ಪ ಹರಿಜನ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ, ಅಂಗವೈಕಲ್ಯವು ವ್ಯಕ್ತಿಯ ದೇಹಕ್ಕೆ ಮಾತ್ರ ಸೀಮಿತವಾಗಿರಬಹುದು. ಆದರೆ ಆತ್ಮವಿಶ್ವಾಸ, ಧೈರ್ಯ, ಪರಿಶ್ರಮ ಮತ್ತು ಕರ್ತವ್ಯನಿಷ್ಠೆಗೆ ಅದು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಮಲ್ಲಪ್ಪ ತಮ್ಮ ಜೀವನದ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.

ಬಾಲ್ಯದಿಂದಲೇ ಹಲವು ಸವಾಲುಗಳನ್ನು ಎದುರಿಸಿದ ಮಲ್ಲಪ್ಪ ಹರಿಜನ, ತಾಯಿಯ ಹಾಗೂ ಸಹೋದರನ ಪ್ರೋತ್ಸಾಹದಿಂದ ಉನ್ನತ ಶಿಕ್ಷಣ ಪಡೆದು, ಲಿಂ. ತೋಂಟದ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಮತ್ತು ಸಂಸ್ಥೆಯ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಅವರ ಪ್ರೇರಣೆಯಿಂದ ವಿದ್ಯಾಪೀಠದಲ್ಲಿ ಸೇವೆ ಆರಂಭಿಸಿದರು. ಮೂರು ದಶಕಗಳ ಕಾಲ ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸಿರುವ ಅವರು ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಎ.ಬಿ. ಬೇವಿನಕಟ್ಟಿ ಹಾಗೂ ಬಾಲಕರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎ.ವಿ. ಹಿರೇಮಠ ಮಾತನಾಡಿ, ಇಚ್ಛಾಶಕ್ತಿ ಇದ್ದರೆ ಯಾವುದೇ ಅಡೆತಡೆಯೂ ಸಾಧನೆಯ ಹಾದಿಯನ್ನು ತಡೆಯಲಾರದು ಎಂಬುದನ್ನು ಮಲ್ಲಪ್ಪ ಹರಿಜನ ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ. ನಿವೃತ್ತಿ ಎಂದರೆ ಸೇವೆಯ ಅಂತ್ಯವಲ್ಲ, ಬದುಕಿನ ಹೊಸ ಅಧ್ಯಾಯ. ಮುಂದಿನ ದಿನಗಳಲ್ಲಿ ಅವರು ಆರೋಗ್ಯ, ನೆಮ್ಮದಿ ಮತ್ತು ಸಂತೋಷದಿಂದ ಜೀವನ ಸಾಗಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಮಲ್ಲಪ್ಪ ಹರಿಜನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತೋಂಟದಾರ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಬಿ. ಮಡಿವಾಳರ, ಬಸವೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಗೌಡರ, ಮುಖಂಡ ಮರಿಯಪ್ಪ ಸಿದ್ದಣ್ಣವರ, ಶಾಲೆಯ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

“ಕರ್ತವ್ಯದ ಮೇಲಿನ ಪ್ರೀತಿ ಮತ್ತು ಆತ್ಮವಿಶ್ವಾಸ ಇದ್ದರೆ ದೈಹಿಕ ನ್ಯೂನತೆಗಳು ಸಾಧನೆಯ ಮುಂದೆ ತಲೆಬಾಗುತ್ತವೆ.” 

ಜಿ.ವಿ. ಹಿರೇಮಠ, ವ್ಯವಸ್ಥಾಪಕ, ತೋಂಟದಾರ್ಯ ಮಠ

ಗಾಂಜಾ ಮಾರಾಟಕ್ಕೆ ಅಡ್ಡಿಯಾದ ಅಜ್ಜಿಯನ್ನೇ ಕಲ್ಲೆತ್ತಿ ಕೊಂದ ಮೊಮ್ಮಗ

ಶಿವಮೊಗ್ಗ: ಗಾಂಜಾ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಅಜ್ಜಿಯನ್ನೇ ಮೊಮ್ಮಗ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ ಬೆಚ್ಚಿಬೀಳಿಸುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಹತ್ಯೆಯ ಬಳಿಕ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಶಿವಮೊಗ್ಗ ನಗರದ ಮಿಳಘಟ್ಟ ವಾರ್ಡ್‌ನ ಆನಂದರಾವ್ ಬಡಾವಣೆಯ ತಖ್ವಾ ಮಸೀದಿ ಎದುರಿನ ರಸ್ತೆಯಲ್ಲಿ ಈ ಭೀಕರ ಕೃತ್ಯ ನಡೆದಿದ್ದು, ಸುಶೀಲಮ್ಮ (55) ಕೊಲೆಯಾದ ವೃದ್ಧೆ. ಕಿಶೋರ್ (26) ಕೊಲೆ ಆರೋಪಿ.

ಪ್ರಾಥಮಿಕ ಮಾಹಿತಿಯಂತೆ, ಆರೋಪಿ ಕಿಶೋರ್ ತನ್ನ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ. ಇದಕ್ಕೆ ಅಜ್ಜಿ ಸುಶೀಲಮ್ಮ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಬುಧವಾರ ಸಂಜೆ ಗಾಂಜಾ ನಶೆಯಲ್ಲಿದ್ದ ಕಿಶೋರ್ ಮತ್ತೊಮ್ಮೆ ಅಜ್ಜಿಯೊಂದಿಗೆ ಗಲಾಟೆ ನಡೆಸಿದ್ದಾನೆ.

ಬಳಿಕ ಪೊಲೀಸರಿಗೆ ದೂರು ನೀಡಲು ಮನೆಯಿಂದ ಹೊರಟಿದ್ದ ಸುಶೀಲಮ್ಮ ಅವರ ಮೇಲೆ ಹಿಂಬದಿಯಿಂದ ದಾಳಿ ನಡೆಸಿದ ಆರೋಪಿ, ಅವರನ್ನು ತಳ್ಳಿಹಾಕಿದ್ದಾನೆ. ನೆಲಕ್ಕೆ ಬಿದ್ದ ತಕ್ಷಣ ತಲೆಯ ಮೇಲೆ ಬೃಹತ್ ಕಲ್ಲು ಎತ್ತಿಹಾಕಿ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದಾನೆ.

ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆ ಶವಗಾರಕ್ಕೆ ರವಾನಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕಾಗಿ ಎರಡು ವಿಶೇಷ ಪೊಲೀಸ್ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.

ಮೊಟ್ಟೆ ಖರೀದಿ ವಿಚಾರಕ್ಕೆ ಕಿರಿಕ್! ನೆಲಕ್ಕೆ ಕೆಡವಿ 55ರ ವ್ಯಕ್ತಿಯನ್ನು ಕೊಲೆಗೈದ ಕಿಡಿಗೇಡಿಗಳು, ಮೂವರು ಅರೆಸ್ಟ್!

ಹಾವೇರಿ: ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳ ವ್ಯಕ್ತಿಯೋರ್ವರ ಕೊಲೆಯಲ್ಲಿ ಅಂತ್ಯವಾಗಿದೆ.

ಗೂಡಂಗಡಿ ಮಾಲೀಕರಾಗಿದ್ದ 55 ವರ್ಷದ ಶಿವಾಜಿರಾವ್ ಬೈರೋಜಿ ಮೃತ ವ್ಯಕ್ತಿ. ಮೊಟ್ಟೆ ಖರೀದಿ ವೇಳೆ ಹಣದ ವಿಚಾರವಾಗಿ ಉಂಟಾದ ವಾಗ್ವಾದ ತೀವ್ರಗೊಂಡು ತಳ್ಳಾಟ ಮತ್ತು ಹಲ್ಲೆಗೆ ತಿರುಗಿದೆ. ಈ ವೇಳೆ ಮಧ್ಯಪ್ರವೇಶಿಸಿದ ಶಿವಾಜಿರಾವ್ ಅವರನ್ನು ಆರೋಪಿಗಳು ನೆಲಕ್ಕೆ ಕೆಡವಿ ಕಾಲಿನಿಂದ ತುಳಿದಿದ್ದಾರೆ ಎನ್ನಲಾಗಿದೆ. ನಂತರ ಅವರು ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದು, ಆಸ್ಪತ್ರೆಗೆ ಸಾಗಿಸಿದರೂ ದುರಾದಷ್ಟವಶಾತ್ ಮೃತಪಟ್ಟಿದ್ದಾರೆ.

ಘಟನೆ ಮಂಗಳವಾರ ಸಂಜೆ ಜನತಾ ಪ್ಲಾಟ್ ಪ್ರದೇಶದಲ್ಲಿ ನಡೆದಿದೆ. ಶಿವಾಜಿರಾವ್ ತಮ್ಮ ಪುತ್ರ ಭರತ್ ಜೊತೆ ಗೂಡಂಗಡಿ ನಡೆಸುತ್ತಿದ್ದರು. ಹಣದ ವಿಚಾರಕ್ಕೆ ಆರಂಭವಾದ ಜಗಳದಲ್ಲಿ ಭರತ್ ಮೇಲೂ ಹಲ್ಲೆ ನಡೆದಿದ್ದು, ಅವರು ಗಾಯಗೊಂಡಿದ್ದಾರೆ.

ಘಟನೆ ನಂತರ ನಾಲ್ವರು ಆರೋಪಿಗಳು ಪರಾರಿಯಾಗಿದ್ದರು. ಪೊಲೀಸರ ತನಿಖೆಯ ನಂತರ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ರಟ್ಟಿಹಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಬೆಳಗಾವಿಯಲ್ಲಿ ಆರ್‌ಎಸ್‌ಎಸ್‌ ರಾಷ್ಟ್ರೀಯ ಮಹಾಸಭೆ: ಜುಲೈ 6ಕ್ಕೆ ಮೋಹನ್ ಭಾಗವತ್‌ ಆಗಮನ

0

ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಶತಮಾನೋತ್ಸವದ ಅಂಗವಾಗಿ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ಜುಲೈ 10ರಿಂದ 12ರವರೆಗೆ ಬೆಳಗಾವಿಯಲ್ಲಿ ನಡೆಯಲಿದೆ. ದೇಶದಾದ್ಯಂತ ಸಂಘದ ಮುಂದಿನ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ನಡೆಯಲಿರುವ ಈ ಸಭೆಗೆ ಸಂಘದ ಅತ್ಯುನ್ನತ ನಾಯಕತ್ವ ಸಮೇತ ವಿವಿಧ ರಾಜ್ಯಗಳ ಪ್ರಮುಖ ಪದಾಧಿಕಾರಿಗಳು ಆಗಮಿಸುತ್ತಿದ್ದಾರೆ.

ಸಭೆಯಲ್ಲಿ ದೇಶದ 46 ಪ್ರಾಂತಗಳ ಪ್ರಾಂತ ಹಾಗೂ ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಮತ್ತು ಸಹ ಕ್ಷೇತ್ರ ಪ್ರಚಾರಕರು, ಸಂಘಟನಾ ವ್ಯವಸ್ಥೆಯ 11 ಕ್ಷೇತ್ರಗಳ ಪ್ರಮುಖ ಪ್ರಚಾರಕರು ಹಾಗೂ ಸಂಘ ಪ್ರೇರಿತ 32 ವಿವಿಧ ಸಂಘಟನೆಗಳ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ.

ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್ ಭಾಗವತ್ ಜುಲೈ 6ರಿಂದಲೇ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಲಿದ್ದು, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ರಾಷ್ಟ್ರೀಯ ಮಟ್ಟದ ನಾಯಕರು ಸಭೆಯ ನೇತೃತ್ವ ವಹಿಸಲಿದ್ದಾರೆ. ಶತಮಾನೋತ್ಸವ ವರ್ಷದಲ್ಲಿ ಶಾಖೆಗಳ ವಿಸ್ತರಣೆ, ಸಂಘಟನಾ ಬಲವರ್ಧನೆ ಹಾಗೂ ದೇಶವ್ಯಾಪಿ ಕಾರ್ಯಯೋಜನೆಗಳ ಕುರಿತು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ರಾಷ್ಟ್ರೀಯ ಮಟ್ಟದ ನಾಯಕರು ಭಾಗವಹಿಸುವ ಹಿನ್ನೆಲೆಯಲ್ಲಿ ಬೆಳಗಾವಿ ನಗರವನ್ನು ಹೈ ಸೆಕ್ಯುರಿಟಿ ವಲಯವನ್ನಾಗಿ ಪರಿವರ್ತಿಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬಹುಹಂತದ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದೆ.