Home Blog Page 7

ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಜೆಡಿಎಸ್ ಸಾಮಾಜಿಕ ಜಾಲತಾಣದ ವಿರುದ್ಧ FIR

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಅವಹೇಳನಕಾರಿ ಹಾಗೂ ಸುಳ್ಳು ಮಾಹಿತಿ ಒಳಗೊಂಡ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಆರೋಪದ ಹಿನ್ನೆಲೆಯಲ್ಲಿ ಜೆಡಿಎಸ್ ಸಾಮಾಜಿಕ ಜಾಲತಾಣ ಘಟಕದ ಆಡ್ಮಿನ್ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಜೆಡಿಎಸ್‌ಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣದ ಪುಟದಲ್ಲಿ ಮುಖ್ಯಮಂತ್ರಿ ವಿರುದ್ಧ ಆಕ್ಷೇಪಾರ್ಹ ಹಾಗೂ ತಪ್ಪು ಮಾಹಿತಿ ಒಳಗೊಂಡ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿತ್ತು.

‘ಹಳೆ ಚಾಳಿ ಮತ್ತೆ ಶುರು, ಸುಟ್ಟರೂ ಹೋಗದ ಹುಟ್ಟುಗುಣ’ ಎಂಬ ಶೀರ್ಷಿಕೆಯಡಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಅದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಅವಹೇಳನಕಾರಿ ಹಾಗೂ ಸುಳ್ಳು ಮಾಹಿತಿಯನ್ನು ಒಳಗೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ‘ಕುಮಾರಸ್ವಾಮಿ ಫಾರ್ ಸಿಎಂ’ ಹಾಗೂ ‘ಜೆಡಿಎಸ್ ಸೆಕ್ಯುಲರ್ ಸೋಷಿಯಲ್ ಮೀಡಿಯಾ’ ಹೆಸರಿನ ಸಾಮಾಜಿಕ ಜಾಲತಾಣ ಪುಟಗಳ ವಿರುದ್ಧ ನೀಡಲಾದ ದೂರಿನ ಆಧಾರದ ಮೇಲೆ ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

7.5% ಮೀಸಲಾತಿ ಸಿಗದಿದ್ದರೆ ರಾಜೀನಾಮೆ ಕೊಡುತ್ತೇನೆ: ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ಬಳ್ಳಾರಿ: 2028ರ ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಆ ಸರ್ಕಾರದಲ್ಲಿ ತಾನೂ ಸಚಿವನಾಗುತ್ತೇನೆ. ಆದರೆ ನಮ್ಮ ಸಮಾಜಕ್ಕೆ ಶೇ.7.5ರಷ್ಟು ಮೀಸಲಾತಿ ಸಿಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಲು ಸಿದ್ಧ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿ ಆಯೋಜಿಸಿದ್ದ ‘ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶ’ದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಾಗೂ ಅದರ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಯಾವುದೇ ಪಕ್ಷವನ್ನು ಅಧಿಕಾರಕ್ಕೆ ತರುವುದು ಅಥವಾ ಅಧಿಕಾರದಿಂದ ಕೆಳಗಿಳಿಸುವ ರಾಜಕೀಯ ಶಕ್ತಿ ನಮ್ಮ ಸಮಾಜಕ್ಕಿದೆ. 1970ರ ದಶಕದಲ್ಲೇ ಕೇವಲ ಮೂರ್ನಾಲ್ಕು ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದೇವೆ. ಈಗ ಮತ್ತಷ್ಟು ಸಂಘಟಿತರಾಗಿ, ಇತರ ಸಣ್ಣ ಸಮುದಾಯಗಳನ್ನು ಕೂಡ ಜೊತೆಯಾಗಿ ಕರೆದುಕೊಂಡು ಸಾಗಿದರೆ ಇನ್ನಷ್ಟು ರಾಜಕೀಯ ಬಲ ಪಡೆಯಬಹುದು ಎಂದು ಹೇಳಿದರು.

ನಮ್ಮ ಸಮಾಜಕ್ಕೆ ಶೇ.7.5ರಷ್ಟು ಮೀಸಲಾತಿ ದೊರೆಯದಿದ್ದರೆ, ಸಚಿವ ಸ್ಥಾನಕ್ಕಿಂತ ಸಮಾಜದ ಹಿತವೇ ಮುಖ್ಯ. ಅಂತಹ ಪರಿಸ್ಥಿತಿ ಬಂದರೆ ಯಾವುದೇ ಹಿಂಜರಿಕೆಯಿಲ್ಲದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ತಮ್ಮ ಸಹೋದರ ಹಾಗೂ ಹಾಲಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಪರೋಕ್ಷವಾಗಿ ಟೀಕಿಸಿದ ರಮೇಶ್ ಜಾರಕಿಹೊಳಿ, ಸಮಾಜದ ಹಿತದೃಷ್ಟಿಯಿಂದ ಮಾತನಾಡಲು ಕೆಲವರಿಗೆ ಧೈರ್ಯವಿಲ್ಲ. ಅವರ ಸ್ಥಾನದಲ್ಲಿ ತಾನಿದ್ದರೆ ಇಷ್ಟೊತ್ತಿಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ. ಆದರೆ ಅಧಿಕಾರ ತ್ಯಾಗ ಮಾಡುವ ಧೈರ್ಯ ಸತೀಶ್ ಜಾರಕಿಹೊಳಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಸಮಂತಾ ಗರ್ಭಿಣಿ? ಗೆಳತಿ-ನಿರ್ದೇಶಕಿ ನಂದಿನಿ ರೆಡ್ಡಿ ಹೇಳಿಕೆಯಿಂದ ಬಯಲಾಯಿತಾ ಗುಡ್ ನ್ಯೂಸ್!

ಹೈದರಾಬಾದ್: ನಟಿ ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಇದೀಗ ಹೊಸ ತಿರುವು ಸಿಕ್ಕಿದೆ. ಸಮಂತಾ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಗೆ ಅವರ ಆಪ್ತೆ ಹಾಗೂ ನಿರ್ದೇಶಕಿ ನಂದಿನಿ ರೆಡ್ಡಿ ನೀಡಿರುವ ಹೇಳಿಕೆ ಮತ್ತಷ್ಟು ಬಲ ತುಂಬಿದ್ದು, ಸಿನಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ‘ಮಾ ಇಂಟಿ ಬಂಗಾರಂ’ ಚಿತ್ರದ ಯಶಸ್ಸಿನ ಸಂಭ್ರಮದ ನಡುವೆ ಈ ಬೆಳವಣಿಗೆ ನಡೆದಿದೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸಂದರ್ಭದಲ್ಲಿ ನಡೆದ ಸಕ್ಸಸ್ ಮೀಟ್‌ನಲ್ಲಿ ಸಮಂತಾ ಕಾಣಿಸಿಕೊಂಡಿದ್ದರು. ಈ ವೇಳೆ ಅವರ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ವಿಶೇಷವಾಗಿ ಅವರ ದೇಹದ ಬದಲಾವಣೆ ಗಮನಿಸಿದ ಅಭಿಮಾನಿಗಳು, ಸಮಂತಾ ಗರ್ಭಿಣಿಯಾಗಿರಬಹುದೇ ಎಂಬ ಪ್ರಶ್ನೆ ಎತ್ತಿದ್ದರು.

ಈ ನಡುವೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕಿ ನಂದಿನಿ ರೆಡ್ಡಿ, “ಅವಳ ಪ್ರೆಗ್ನೆನ್ಸಿ ಸರಿಯಾದ ಹಾಗೂ ಸುಂದರ ಸಮಯದಲ್ಲಿ ಬಂದಿದೆ. ನಮ್ಮ ಸಿನಿಮಾ ಕೂಡ ಯಶಸ್ಸು ಕಂಡಿದೆ” ಎಂದು ಹೇಳಿರುವುದು ಕುತೂಹಲ ಹೆಚ್ಚಿಸಿದೆ.

ನಾಗ ಚೈತನ್ಯ ಅವರೊಂದಿಗಿನ ವಿಚ್ಛೇದನದ ಬಳಿಕ ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ಸಮಂತಾ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿರಲಿಲ್ಲ.

ಈಗ ನಂದಿನಿ ರೆಡ್ಡಿ ಅವರ ಹೇಳಿಕೆಯ ಬೆನ್ನಲ್ಲೇ ಸಮಂತಾ ತಾಯಿ ಆಗಲಿದ್ದಾರೆ ಎಂಬ ಸುದ್ದಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಆದರೆ ನಟಿ ಅಥವಾ ಅವರ ತಂಡದಿಂದ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ.

ಸರ್ಕಾರದ ಕನ್ನಡ ಕಡ್ಡಾಯ ಆದೇಶ ಹರಿದು ಎಂಇಎಸ್ ಪುಂಡಾಟ: ಬೆಳಗಾವಿಯಲ್ಲಿ ಮತ್ತೆ ನಾಡದ್ರೋಹಿ ಘೋಷಣೆಗಳು

0

ಬೆಳಗಾವಿ: ಕನ್ನಡ ಕಡ್ಡಾಯ ಆದೇಶವನ್ನು ವಿರೋಧಿಸುವ ನೆಪದಲ್ಲಿ ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಮತ್ತೆ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲೊಡ್ಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಎಂಇಎಸ್ ಬೆಂಬಲಿಗರು, ರಾಜ್ಯ ಸರ್ಕಾರದ ಆದೇಶದ ಪ್ರತಿಯನ್ನು ಹರಿದು ಹಾಕಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಬಹಿರಂಗ ಉದ್ಧಟತನ ಪ್ರದರ್ಶಿಸಿದರು.

ಪ್ರತಿಭಟನೆಯ ವೇಳೆ ಮರಾಠಿ ಭಾಷೆಯಲ್ಲಿ ಆಡಳಿತಾತ್ಮಕ ಸೇವೆಗಳನ್ನು ನೀಡುವಂತೆ ಒತ್ತಾಯಿಸಿದ ಕಾರ್ಯಕರ್ತರು, ಕರ್ನಾಟಕದ ಗಡಿ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಹಳೆಯ ವಿವಾದಾತ್ಮಕ ಬೇಡಿಕೆಯನ್ನು ಪುನರಾವರ್ತಿಸಿದರು. ಪೊಲೀಸರ ಸಮ್ಮುಖದಲ್ಲೇ ನಡೆದ ಈ ಘಟನೆ ಬೆಳಗಾವಿಯಲ್ಲಿ ಮತ್ತೊಮ್ಮೆ ಭಾಷಾ ವಿವಾದಕ್ಕೆ ಇಂಧನ ನೀಡಿದೆ.

ಇದಕ್ಕೆ ಪ್ರತಿಯಾಗಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು. ನಗರದ ಎಸ್‌ಪಿ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ತಡೆದರು.

ಎಂಇಎಸ್ ಕಾರ್ಯಕರ್ತರು ಸರ್ಕಾರದ ಆದೇಶವನ್ನು ಹರಿದು ಹಾಕಿರುವುದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಕರವೇ ಆರೋಪಿಸಿದ್ದು, ಸಂಬಂಧಪಟ್ಟವರ ವಿರುದ್ಧ ದೇಶದ್ರೋಹ ಸೇರಿದಂತೆ ಕಠಿಣ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದೆ. ಜೊತೆಗೆ ಎಂಇಎಸ್ ಹಾಗೂ ಶಿವಸೇನೆ ಸಂಘಟನೆಗಳನ್ನು ನಿಷೇಧಿಸುವಂತೆ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಪೆರೋಲ್ ಮೇಲೆ ಹೊರಬಂದ ಕುಖ್ಯಾತ ಕ್ರಿಮಿನಲ್ ಎನ್‌ಕೌಂಟರ್‌ನಲ್ಲಿ ಹತ್ಯೆ

0

ಚಂಡೀಗಢ: ಪೆರೋಲ್ ಮೇಲೆ ಬಿಡುಗಡೆಯಾಗಿ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಹರಿಯಾಣದ ಕುಖ್ಯಾತ ಕ್ರಿಮಿನಲ್ ಗೋಪಾಲ್, ಸೋನಿಪತ್ ಜಿಲ್ಲೆಯಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ದೇವೇಂದರ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋನಿಪತ್ ಪೊಲೀಸರಿಗೆ ಗೋಪಾಲ್ ತನ್ನ ಎದುರಾಳಿಯೊಬ್ಬನನ್ನು ಹತ್ಯೆ ಮಾಡಲು ಸಂಚು ರೂಪಿಸಿ ಓಡಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾದ ವೇಳೆ ಗುಂಡಿನ ಚಕಮಕಿ ನಡೆದಿದೆ.

ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಗೋಪಾಲ್ ಪೊಲೀಸರ ಮೇಲೆಯೇ ಮನಬಂದಂತೆ ಗುಂಡು ಹಾರಿಸಿದ್ದಾನೆ. ಆತನಿಂದ ಹಾರಿಸಲಾದ ಎರಡು ಗುಂಡುಗಳು ಪೊಲೀಸ್ ವಾಹನಗಳಿಗೆ ತಗುಲಿದ್ದರೆ, ಮತ್ತೊಂದು ಗುಂಡು ಹೆಡ್ ಕಾನ್‌ಸ್ಟೆಬಲ್ ದೇವೇಂದರ್ ಅವರ ಕೈಗೆ ತಗುಲಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದ್ದು, ಈ ವೇಳೆ ಗೋಪಾಲ್ ಗಂಭೀರವಾಗಿ ಗಾಯಗೊಂಡಿದ್ದಾನೆ.

ತಕ್ಷಣವೇ ಆರೋಪಿಯನ್ನು ಹಾಗೂ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಖಾನ್ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಗೋಪಾಲ್ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಸೋನಿಪತ್ ಜಿಲ್ಲೆಯ ಅಟಾಯಲ್ ಗ್ರಾಮದ ನಿವಾಸಿಯಾಗಿದ್ದ ಗೋಪಾಲ್ ವಿರುದ್ಧ ಹಲವು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿದ್ದವು. 2010ರ ಕೊಲೆ ಪ್ರಕರಣ ಹಾಗೂ 2016ರಲ್ಲಿ ಗನೌರ್ ಪ್ರದೇಶದಲ್ಲಿ ನಡೆದ ಮತ್ತೊಂದು ಕೊಲೆ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಈ ವರ್ಷದ ಫೆಬ್ರವರಿಯಲ್ಲಿ 70 ದಿನಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಗೋಪಾಲ್, ಬಳಿಕ ಮದ್ಯದಂಗಡಿ ಮೇಲೆ ದಾಳಿ, ಬೆಂಕಿ ಹಚ್ಚುವ ಪ್ರಕರಣ, ಬ್ರೆಝಾ ಕಾರು ಕಳ್ಳತನ ಹಾಗೂ ಗುಂಡು ಹಾರಿಸಿ ವ್ಯಕ್ತಿಯ ಹತ್ಯೆಗೆ ಯತ್ನಿಸಿದ ಆರೋಪಗಳಲ್ಲಿ ಭಾಗಿಯಾಗಿದ್ದ. ಪೆರೋಲ್ ಅವಧಿ ಮುಗಿದ ಬಳಿಕವೂ ಆತ ಶರಣಾಗದೇ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಣ್ಯಕಶ್ಯಪುವಿಗೆ ಆದ ಗತಿ ನಿಮಗೂ ಆಗಲಿದೆ: ಬಿ.ಕೆ. ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ ವಿರುದ್ಧ ಈಶ್ವರಪ್ಪ ವಾಗ್ದಾಳಿ

ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳ ವಿರುದ್ಧ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಬ್ಬರೂ ಮಾತನಾಡುತ್ತಿರುವ ರೀತಿಯನ್ನು ನೋಡಿದರೆ ಪುರಾಣದಲ್ಲಿನ ಹಿರಣ್ಯಕಶ್ಯಪುವಿಗೆ ಆದ ಶಿಕ್ಷೆಯೇ ಅವರಿಗೆ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಬಗ್ಗೆ ಮಾತನಾಡಲು ಅಥವಾ ಅದರೊಂದಿಗೆ ಗುರುತಿಸಿಕೊಳ್ಳಲು ನಮಗೆ ಯಾವುದೇ ಭಯವಿಲ್ಲ. ಸಂಸ್ಥೆಯ ನೋಂದಣಿ ಮಾಡಿಸಬೇಕೋ ಬೇಡವೋ ಎಂಬುದು ಆರ್‌ಎಸ್‌ಎಸ್‌ನ ಆಂತರಿಕ ವಿಚಾರ ಎಂದು ಹೇಳಿದರು.

ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಉತ್ತರಿಸಲಿ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಸಂವಿಧಾನದ ಅರಿವಿಲ್ಲದ ಗೃಹಸಚಿವರನ್ನು ರಾಜ್ಯ ಪಡೆದಿರುವುದು ದುರದೃಷ್ಟಕರ ಎಂದು ಈಶ್ವರಪ್ಪ ಟೀಕಿಸಿದರು.

ಸಂವಿಧಾನದ ಬಗ್ಗೆ ಹಿರಿಯ ವಕೀಲರನ್ನೇ ಅವಹೇಳನ ಮಾಡುವ ರೀತಿಯಲ್ಲಿ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ಇಂತಹ ಭಾಷೆಯನ್ನು ರೌಡಿಗಳೂ ಬಳಸುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿ.ಕೆ. ಹರಿಪ್ರಸಾದ್ ಅವರು ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಿದ ಈಶ್ವರಪ್ಪ, ಇದೇ ರೀತಿಯ ಹೇಳಿಕೆಗಳೇ ಕಾಂಗ್ರೆಸ್ ಪಕ್ಷದ ಚುನಾವಣಾ ಸೋಲಿಗೆ ಕಾರಣವಾಗಿವೆ ಎಂದು ಆರೋಪಿಸಿದರು.

ಮುಂಬರುವ ಚುನಾವಣೆಯಲ್ಲೂ ಇದೇ ರೀತಿಯ ರಾಜಕೀಯ ಮುಂದುವರಿಸಿದರೆ ಕಾಂಗ್ರೆಸ್ ಮತ್ತೆ ಸೋಲನ್ನು ಎದುರಿಸಬೇಕಾಗುತ್ತದೆ. ಆರ್‌ಎಸ್‌ಎಸ್ ವಿರುದ್ಧ ಮಾತನಾಡಿದರೆ ಪಕ್ಷದಲ್ಲಿ ಸ್ಥಾನಮಾನ ಸಿಗುತ್ತದೆ ಎಂಬ ಭ್ರಮೆಯಲ್ಲಿ ಕೆಲ ಕಾಂಗ್ರೆಸ್ ನಾಯಕರು ಇದ್ದಾರೆ ಎಂದು ಲೇವಡಿ ಮಾಡಿದರು.

ಮದುವೆ ಮುನ್ನವೇ ಭೀಕರ ದುರಂತ; ಯುವತಿಯ ಫೋಟೋ-ಮೆಸೇಜ್ ವೈರಲ್ ಬೆದರಿಕೆಗೆ ತಂದೆ, ತಾಯಿ, ಮಗಳು ಆತ್ಮಹತ್ಯೆ

0

ಮೈಸೂರು: ಯುವತಿಯೊಬ್ಬಳ ವಿವಾಹಕ್ಕೆ ಕೆಲವೇ ದಿನಗಳು ಬಾಕಿ ಇದ್ದ ವೇಳೆ, ಆಕೆಯ ಹಳೆಯ ಪರಿಚಯವನ್ನು ದುರುಪಯೋಗಪಡಿಸಿಕೊಂಡು ನಿರಂತರ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಟಿ. ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ನಡೆದಿದೆ.

ಶಿವಣ್ಣ, ಅವರ ಪತ್ನಿ ನಾಗರತ್ನ ಹಾಗೂ ಪುತ್ರಿ ರಕ್ಷಿತಾ ಮೃತರು. ಘಟನೆಗೆ ಸಂಬಂಧಿಸಿದಂತೆ ಸ್ಥಳದಲ್ಲಿ ಪತ್ತೆಯಾದ ಡೆತ್‌ನೋಟ್‌ನಲ್ಲಿ ಉಲ್ಲಾಸ್ ಗೌಡ ಎಂಬಾತನ ಹೆಸರು ಉಲ್ಲೇಖವಾಗಿದ್ದು, ಆತನ ಕಿರುಕುಳದಿಂದ ಬದುಕಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿರುವುದು ಬೆಳಕಿಗೆ ಬಂದಿದೆ.

ಮೂಲಗಳ ಪ್ರಕಾರ, ರಕ್ಷಿತಾಳ ವಿವಾಹ ಇದೇ ತಿಂಗಳ 23 ಹಾಗೂ 24ರಂದು ನಡೆಯಬೇಕಿತ್ತು. ಆದರೆ, ಉಲ್ಲಾಸ್ ಗೌಡ ಎಂಬಾತ ಆಕೆಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿ ಮದುವೆ ನಿಲ್ಲಿಸಲು ಯತ್ನಿಸಿದ್ದ. ಈ ಸಂಬಂಧ ಗ್ರಾಮದಲ್ಲಿ ಹಿರಿಯರ ಸಮ್ಮುಖದಲ್ಲಿ ಪಂಚಾಯತಿಯೂ ನಡೆದಿತ್ತು.

ಆದರೂ ಆತ ತನ್ನ ಕೃತ್ಯ ನಿಲ್ಲಿಸದೇ, ರಕ್ಷಿತಾಳೊಂದಿಗೆ ಈ ಹಿಂದೆ ನಡೆದಿದ್ದ ಖಾಸಗಿ ಸಂಭಾಷಣೆಗಳ ಮೆಸೇಜ್‌ಗಳು ಹಾಗೂ ಫೋಟೋಗಳನ್ನು ಆಧಾರವನ್ನಾಗಿ ಮಾಡಿಕೊಂಡು ಆಕೆಗೆ ನಿರಂತರ ಮಾನಸಿಕ ಒತ್ತಡ ಹೇರಿದ್ದ ಎನ್ನಲಾಗಿದೆ. ಅಲ್ಲದೆ, ವಿವಾಹ ನಿಶ್ಚಯವಾಗಿದ್ದ ಯುವಕನಿಗೂ ಆ ಮಾಹಿತಿ ಕಳುಹಿಸಿದ್ದರಿಂದ ಕುಟುಂಬ ಮಾನಸಿಕವಾಗಿ ಕುಸಿದಿತ್ತು.

ತೀವ್ರ ಅವಮಾನ ಮತ್ತು ಒತ್ತಡದಿಂದ ನೊಂದ ಕುಟುಂಬದ ಮೂವರು ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸುದ್ದಿ ತಿಳಿಯುತ್ತಿದ್ದಂತೆ ವರುಣಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡೆತ್‌ನೋಟ್ ಆಧರಿಸಿ ತನಿಖೆ ಆರಂಭಿಸಿದ್ದು, ಆರೋಪಿತನ ಪಾತ್ರದ ಬಗ್ಗೆ ಸಮಗ್ರ ಪರಿಶೀಲನೆ ನಡೆಸುತ್ತಿದ್ದಾರೆ.

ನೀಟ್ ಪರೀಕ್ಷೆ ವಿಚಾರದಲ್ಲಿ ತೇಜಸ್ವಿ ಸೂರ್ಯ ಸುಳ್ಳು ಮಾಹಿತಿ ಹರಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಆರೋಪ

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಸಮಾರಂಭದಿಂದಾಗಿ ನೀಟ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಿದ್ದರೆ ವೈಯಕ್ತಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನೀಟ್ ಪರೀಕ್ಷೆಯ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಸಮಾವೇಶದಿಂದ ತೊಂದರೆಯಾಗಿದೆ ಎಂದು ಆರೋಪಿಸಿರುವ ಬಿಜೆಪಿ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ಬಿಜೆಪಿ ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಸರಣಿ ತಪ್ಪು ಮಾಹಿತಿಗಳನ್ನು ಹರಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ಹರಿಪ್ರಸಾದ್ ಆರೋಪಿಸಿದರು.

ಸಂಕಲ್ಪ ಸಮಾವೇಶದ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು ನಿಜ. ಇದರಿಂದ ಸಾರ್ವಜನಿಕರಿಗೆ ಕೆಲಮಟ್ಟಿನ ತೊಂದರೆಯಾಗಿರಬಹುದು. ನಮ್ಮ ಕಾರ್ಯಕ್ರಮದಿಂದಾಗಿ ನೀಟ್ ಪರೀಕ್ಷಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗಿದ್ದರೆ ಅದಕ್ಕೆ ವೈಯಕ್ತಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಈ ವಿಚಾರದಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದಾರೆ. ನೀಟ್ ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ಆರಂಭವಾಗಿದ್ದರೆ, ನಮ್ಮ ಸಮಾವೇಶಕ್ಕೆ ಆಗಮಿಸಿದ್ದ ಎಲ್ಲಾ ಬಸ್‌ಗಳು ಬೆಳಿಗ್ಗೆ 10 ಗಂಟೆಯೊಳಗೆ ಅರಮನೆ ಮೈದಾನದ ಆವರಣ ಪ್ರವೇಶಿಸಿದ್ದವು. ಹೀಗಿರುವಾಗ ಕಾಂಗ್ರೆಸ್ ಕಾರ್ಯಕ್ರಮದಿಂದಲೇ ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದರು.

ಪಕ್ಷದಲ್ಲಿ ನಾಯಕತ್ವ ಬಿಕ್ಕಟ್ಟು: ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಕೀರ್ ಸ್ಟಾರ್ಮರ್ ರಾಜೀನಾಮೆ!

0

ಲಂಡನ್: ಬ್ರಿಟನ್ ಪ್ರಧಾನಿ ಹಾಗೂ ಆಡಳಿತಾರೂಢ ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಪಕ್ಷದೊಳಗಿನ ತೀವ್ರ ಅಸಮಾಧಾನ, ಇತ್ತೀಚಿನ ಚುನಾವಣಾ ಹಿನ್ನಡೆ ಹಾಗೂ ನಾಯಕತ್ವದ ಮೇಲಿನ ವಿಶ್ವಾಸ ಕುಸಿದ ಹಿನ್ನೆಲೆ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಹೊಸ ನಾಯಕನ ಆಯ್ಕೆಯಾಗುವವರೆಗೆ ಅವರು ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಲೇಬರ್ ಪಕ್ಷ ಭಾರೀ ಹಿನ್ನಡೆ ಅನುಭವಿಸಿತ್ತು. ಪಕ್ಷದ ಸಾಂಪ್ರದಾಯಿಕ ಭದ್ರಕೋಟೆಗಳಲ್ಲಿಯೂ ಮತದಾರರು ದೂರವಾಗಿದ್ದು, ಅನೇಕ ಸಂಸದರು ಸ್ಟಾರ್ಮರ್ ನಾಯಕತ್ವದ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ನಡುವೆಯೇ ಆಂಡಿ ಬರ್ನ್‌ಹ್ಯಾಮ್ ಅವರ ರಾಜಕೀಯ ಪ್ರಭಾವ ಹೆಚ್ಚಾಗಿದ್ದು, ಅವರು ಮುಂದಿನ ನಾಯಕತ್ವದ ಪ್ರಮುಖ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.

ವಲಸೆ ನೀತಿ, ಆರ್ಥಿಕ ಸವಾಲುಗಳು, ಸರ್ಕಾರದ ಕೆಲವು ವಿವಾದಾತ್ಮಕ ನಿರ್ಧಾರಗಳು ಹಾಗೂ ಸಚಿವ ಸಂಪುಟದೊಳಗಿನ ರಾಜೀನಾಮೆಗಳ ಸರಣಿಯಿಂದ ಸ್ಟಾರ್ಮರ್ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿತ್ತು. ರಕ್ಷಣಾ ವೆಚ್ಚ ಸೇರಿದಂತೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದವು.

2024ರ ಜುಲೈ 5ರಂದು ಭಾರೀ ಬಹುಮತದೊಂದಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಸ್ಟಾರ್ಮರ್ ಅವರು ಎರಡು ವರ್ಷಕ್ಕೂ ಮುನ್ನವೇ ನಾಯಕತ್ವ ತ್ಯಜಿಸುವ ಪರಿಸ್ಥಿತಿ ಎದುರಿಸಿದ್ದಾರೆ. ಲೇಬರ್ ಪಕ್ಷವು 2024ರ ಸಾರ್ವತ್ರಿಕ ಚುನಾವಣೆಯಲ್ಲಿ 650 ಸ್ಥಾನಗಳ ಪೈಕಿ 410ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಐತಿಹಾಸಿಕ ವಿಜಯ ಸಾಧಿಸಿತ್ತು.

ಬ್ರಿಟನ್‌ನಲ್ಲಿ ಈಗ ಹೊಸ ಲೇಬರ್ ನಾಯಕನ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದ್ದು, ಸಂಸತ್ತು ಸೆಪ್ಟೆಂಬರ್‌ನಲ್ಲಿ ಪುನರಾರಂಭವಾಗುವ ವೇಳೆಗೆ ಹೊಸ ಪ್ರಧಾನಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.

ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದು ಕಾಂಗ್ರೆಸ್: ಸಿ.ಟಿ. ರವಿ ಆರೋಪ

ಬೆಂಗಳೂರು: ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಕಾಂಗ್ರೆಸ್ ನಾಯಕರು ಇದೀಗ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವುದು ವಿಪರ್ಯಾಸ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿ.ಕೆ. ಹರಿಪ್ರಸಾದ್ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ. ಆದರೆ ಸಂವಿಧಾನಕ್ಕೆ ನಿಜವಾದ ಧಕ್ಕೆ ತಂದಿರುವುದು ಕಾಂಗ್ರೆಸ್ ಪಕ್ಷವೇ ಎಂದು ಹೇಳಿದರು.

ಸಂವಿಧಾನಕ್ಕೆ ಇದುವರೆಗೆ 106 ತಿದ್ದುಪಡಿಗಳು ನಡೆದಿದ್ದು, ಅವುಗಳಲ್ಲಿ 76 ತಿದ್ದುಪಡಿಗಳನ್ನು ಕಾಂಗ್ರೆಸ್ ಸರ್ಕಾರಗಳೇ ಮಾಡಿವೆ. ಈ ತಿದ್ದುಪಡಿಗಳ ಬಹುಪಾಲು ಅಧಿಕಾರ ದುರುಪಯೋಗ ಮತ್ತು ರಾಜಕೀಯ ಸ್ವಾರ್ಥಕ್ಕಾಗಿ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದು ಕಾಂಗ್ರೆಸ್. ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸಿ, ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸಿದ್ದೂ ಇದೇ ಕಾಂಗ್ರೆಸ್ ಎಂದು ಸಿ.ಟಿ. ರವಿ ಟೀಕಿಸಿದರು.

ಇದೀಗ ಸಂವಿಧಾನದ ರಕ್ಷಕರಂತೆ ಮಾತನಾಡುತ್ತಿರುವ ಕಾಂಗ್ರೆಸ್, ಯಾವುದೇ ವ್ಯಾಪಕ ಚರ್ಚೆಯಿಲ್ಲದೆ ಸಂವಿಧಾನದ ಮುನ್ನುಡಿಗೆ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಎಂಬ ಪದಗಳನ್ನು ಸೇರಿಸಿತ್ತು. ಈ ಕ್ರಮವನ್ನು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಹ ಒಪ್ಪಿರಲಿಲ್ಲ ಎಂದು ಅವರು ಹೇಳಿದರು.

“ಅಂಬೇಡ್ಕರ್ ಅವರ ವಿಚಾರಗಳಿಗೆ ವಿರುದ್ಧವಾಗಿ ನಡೆದುಕೊಂಡವರು ಇಂದು ಬಿಜೆಪಿ ಮೇಲೆ ಆರೋಪ ಮಾಡುತ್ತಿರುವುದು ಎಷ್ಟು ನ್ಯಾಯ?” ಎಂದು ಪ್ರಶ್ನಿಸಿದ ಸಿ.ಟಿ. ರವಿ, ಕಾಂಗ್ರೆಸ್ ತನ್ನ ಇತಿಹಾಸವನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

error: Content is protected !!