Home Blog Page 72

ಇಬ್ಬರು ಪಾಲುದಾರರಿರುವ ಸಂಸ್ಥೆಯಲ್ಲಿ ಒಬ್ಬರು ಮೃತಪಟ್ಟರೆ ಪಾಲುದಾರಿಕೆ ಅಂತ್ಯ; ಮಹತ್ವದ ತೀರ್ಪು ನೀಡಿದ ಹೈಕೋರ್ಟ್

ಬೆಂಗಳೂರು: ಪಾಲುದಾರಿಕೆ ಸಂಸ್ಥೆ ಎಂಬುದು ಕೇವಲ ಒಪ್ಪಂದದ ಆಧಾರದ ಮೇಲೆ ರೂಪುಗೊಳ್ಳುವ ಸಂಬಂಧವಾಗಿದ್ದು, ಅದು ವಂಶಪಾರಂಪರ್ಯವಾಗಿ ವರ್ಗಾವಣೆಯಾಗುವ ಹಕ್ಕಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಬ್ಬರು ಪಾಲುದಾರರನ್ನು ಮಾತ್ರ ಹೊಂದಿರುವ ಸಂಸ್ಥೆಯಲ್ಲಿ ಒಬ್ಬರು ಮೃತಪಟ್ಟರೆ, ಆ ಪಾಲುದಾರಿಕೆ ಸಂಸ್ಥೆ ಸ್ವಯಂಚಾಲಿತವಾಗಿ ವಿಸರ್ಜನೆಗೊಳ್ಳುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪಾಲುದಾರಿಕೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೆಸೆಸ್ ನ್ಯೂ ಪ್ರವೀಣ್ ಟ್ರೇಲರ್ಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಜೊತೆಗೆ, ವಾರಸುದಾರರನ್ನು ಪ್ರತಿವಾದಿಗಳಾಗಿ ಸೇರಿಸಲು ಅನುಮತಿ ನೀಡಿದ್ದ ದಾವಣಗೆರೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.

ನ್ಯಾಯಪೀಠದ ಪ್ರಕಾರ, ಇಬ್ಬರು ಪಾಲುದಾರರಿರುವ ಸಂಸ್ಥೆಯಲ್ಲಿ ಒಬ್ಬರು ಮೃತಪಟ್ಟರೂ ಸಂಸ್ಥೆ ರದ್ದಾಗುವುದಿಲ್ಲ ಹಾಗೂ ಮೃತರ ವಾರಸುದಾರರು ಪಾಲುದಾರರಾಗುತ್ತಾರೆ ಎಂಬ ಷರತ್ತು ಪಾಲುದಾರಿಕೆ ಒಪ್ಪಂದದಲ್ಲಿದ್ದರೂ ಅದು ಭಾರತೀಯ ಪಾಲುದಾರಿಕೆ ಕಾಯ್ದೆ, 1932ರ ಮೂಲ ತತ್ವಗಳಿಗೆ ವಿರುದ್ಧವಾಗಿದೆ.

ಪಾಲುದಾರಿಕೆ ಎಂಬುದು ಕೇವಲ ಒಡಂಬಡಿಕೆಯ ಸಂಬಂಧವಾಗಿದ್ದು, ಅದು ವಂಶಪಾರಂಪರ್ಯವಾಗಿ ವರ್ಗಾವಣೆಯಾಗುವುದಿಲ್ಲ. ಹೀಗಾಗಿ, ಹೊಸ ಒಪ್ಪಂದ ಅಥವಾ ಉಳಿದ ಪಾಲುದಾರರ ಅನುಮತಿಯಿಲ್ಲದೆ ಮೃತ ಪಾಲುದಾರರ ಕಾನೂನುಬದ್ಧ ವಾರಸುದಾರರು ಸ್ವಯಂಚಾಲಿತವಾಗಿ ಪಾಲುದಾರರಾಗಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಸುಪ್ರೀಂಕೋರ್ಟ್ ನೀಡಿರುವ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಇಬ್ಬರು ಪಾಲುದಾರರಿರುವ ಸಂಸ್ಥೆಯಲ್ಲಿ ಒಬ್ಬರ ಮರಣದಿಂದಲೇ ಪಾಲುದಾರಿಕೆ ಸಂಸ್ಥೆ ಕಾನೂನಾತ್ಮಕವಾಗಿ ಅಂತ್ಯಗೊಳ್ಳುತ್ತದೆ ಎಂದು ತಿಳಿಸಿದೆ. ಈ ಕಾನೂನು ತತ್ವವನ್ನು ಪರಿಗಣಿಸದೇ ವಿಚಾರಣಾ ನ್ಯಾಯಾಲಯ ದಾವೆದಾರರ ಮನವಿಯನ್ನು ಅಂಗೀಕರಿಸಿರುವುದು ಸರಿಯಲ್ಲ ಎಂದು ಹೇಳಿ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.

ಪ್ರಕರಣದ ಹಿನ್ನೆಲೆ

ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿರುವ ಮೆಸೆಸ್ ಶಿವ ಸ್ಟೀಲ್ ಸಪ್ಲೈಸ್ ಸಂಸ್ಥೆ, ಬಾಕಿ ಹಣ ವಸೂಲಾತಿಗಾಗಿ ಮೆಸೆಸ್ ನ್ಯೂ ಪ್ರವೀಣ್ ಟ್ರೇಲರ್ಸ್ ವಿರುದ್ಧ ವಾಣಿಜ್ಯ ದಾವೆ ದಾಖಲಿಸಿತ್ತು. ಪ್ರಕರಣದ ವಿಚಾರಣೆ ನಡೆಯುವ ವೇಳೆ ಪ್ರತಿವಾದಿ ಸಂಸ್ಥೆಯ ಪಾಲುದಾರರಾದ ಶಾಂತರಾಜ್ ಮೃತಪಟ್ಟಿದ್ದರು.

ಇದಾದ ಬಳಿಕ ಮೃತ ಪಾಲುದಾರರ ಸ್ಥಾನಕ್ಕೆ ಅವರ ಕಾನೂನುಬದ್ಧ ವಾರಸುದಾರರನ್ನು ಅಥವಾ ಹೊಸ ಪಾಲುದಾರರನ್ನು ಸೇರಿಸಿಕೊಳ್ಳಲು ಅನುಮತಿ ಕೋರಿ ದಾವೆದಾರರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ದಾವಣಗೆರೆ ನ್ಯಾಯಾಲಯ ಅನುಮೋದಿಸಿತ್ತು.

ಆದರೆ, ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರ ಸಂಸ್ಥೆಯ ಪರವಾಗಿ ತೀರ್ಪು ನೀಡಿರುವ ಹೈಕೋರ್ಟ್, ಇಬ್ಬರು ಪಾಲುದಾರರಿರುವ ಸಂಸ್ಥೆಯಲ್ಲಿ ಒಬ್ಬರು ಮೃತಪಟ್ಟರೆ ಪಾಲುದಾರಿಕೆ ಸಂಸ್ಥೆಯೇ ಅಂತ್ಯಗೊಳ್ಳುತ್ತದೆ ಎಂಬ ಮಹತ್ವದ ಕಾನೂನು ತತ್ವವನ್ನು ಪುನರುಚ್ಚರಿಸಿದೆ.

ಒಂದೇ ಮರಕ್ಕೆ ನೇಣು… ಇಬ್ಬರು ಯುವತಿಯರ ಸಾವಿನ ಹಿಂದಿತ್ತು ಪ್ರೀತಿ! ಪೊಲೀಸರ ತನಿಖೆಯಲ್ಲಿ ಬೆಚ್ಚಿಬೀಳಿಸುವ ಸತ್ಯ ಬಹಿರಂಗ

ಬೆಂಗಳೂರು: ನಗರದ ಹೊರವಲಯದಲ್ಲಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಇಬ್ಬರು ಯುವತಿಯರ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಒಟ್ಟಿಗೆ ಬದುಕಲು ಸಾಧ್ಯವಾಗದ ನೋವಿನಿಂದ ಈ ದುರ್ಘಟನೆಯ ನಿರ್ಧಾರ ಕೈಗೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೃತರನ್ನು 22 ವರ್ಷದ ಸಿರ್ಜನಾ ಹಾಗೂ 23 ವರ್ಷದ ರಿತಾ ಎಂದು ಗುರುತಿಸಲಾಗಿದೆ. ಘಟನೆ ಬೆಳಕಿಗೆ ಬಂದ ತಕ್ಷಣ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದು, ಕುಟುಂಬಸ್ಥರು ಮತ್ತು ಆಪ್ತರನ್ನು ವಿಚಾರಣೆ ನಡೆಸಿದ ಬಳಿಕ ಹಲವು ಮಹತ್ವದ ಮಾಹಿತಿ ಲಭ್ಯವಾಗಿದೆ.

ಪೊಲೀಸರ ಪ್ರಕಾರ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಿ ಒಟ್ಟಿಗೆ ಬದುಕುವ ಆಸೆ ಹೊಂದಿದ್ದರು. ಆದರೆ ತಮ್ಮ ಸಂಬಂಧವನ್ನು ಕುಟುಂಬ ಹಾಗೂ ಸಮಾಜ ಒಪ್ಪಿಕೊಳ್ಳುವುದಿಲ್ಲ ಎಂಬ ಆತಂಕ ಅವರಲ್ಲಿತ್ತು. ಇದೇ ಮಾನಸಿಕ ಒತ್ತಡದಿಂದ ಇಬ್ಬರೂ ಒಟ್ಟಿಗೆ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಸಿರ್ಜನಾ ಮತ್ತು ರಿತಾ ಸಂಬಂಧಿಕರಾಗಿದ್ದು, ನೇಪಾಳದಲ್ಲಿ ಒಟ್ಟಿಗೆ ಓದಿ ಬೆಳೆದಿದ್ದರು. ಬಾಲ್ಯದಿಂದಲೇ ಆತ್ಮೀಯರಾಗಿದ್ದ ಅವರು, ಸದಾ ಒಟ್ಟಿಗೇ ಇರುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಕಾರಣದಿಂದ ಊರಿನಲ್ಲಿ ಮಾತುಕತೆಗಳು ಆರಂಭವಾಗಿದ್ದ ಹಿನ್ನೆಲೆಯಲ್ಲಿ ಸಂಬಂಧಿಕರು ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು.

ಬೆಂಗಳೂರುಗೆ ಬಂದ ಬಳಿಕವೂ ಇಬ್ಬರೂ ಬೇರೆ ಬೇರೆ ಪ್ರದೇಶಗಳಲ್ಲಿ ವಾಸವಾಗಿದ್ದರೂ ವಾರದಲ್ಲಿ ಹಲವು ಬಾರಿ ಭೇಟಿಯಾಗುತ್ತಿದ್ದರು. ರಿತಾ ಫ್ರೇಜರ್ ಟೌನ್‌ನಲ್ಲಿ ಹಾಗೂ ಸಿರ್ಜನಾ ಜಕ್ಕೂರಿನಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ಘಟನೆ ನಡೆದ ದಿನ ಇಬ್ಬರೂ ಸಂಬಂಧಿಕರ ಮನೆಗೆ ಊಟಕ್ಕೆ ಹೋಗಿದ್ದರು. ಈ ವೇಳೆ ಕುಟುಂಬದವರ ನಡುವೆ ಮದುವೆ ವಿಚಾರ ಪ್ರಸ್ತಾಪವಾಗಿತ್ತು. ನಂತರ ‘ಸಮಾಜ ನಮ್ಮನ್ನು ಒಟ್ಟಿಗೆ ಬದುಕಲು ಬಿಡುವುದಿಲ್ಲ’ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ. ಇದೇ ಭಾವನಾತ್ಮಕ ಒತ್ತಡ ಆತ್ಮಹತ್ಯೆಯ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪೊಲೀಸರು ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.

ಹಾರ್ಮುಜ್ ಜಲಸಂಧಿ ಉದ್ವಿಗ್ನತೆ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇ.1ರಷ್ಟು ಏರಿಕೆ

0

ಟೆಹ್ರಾನ್: ಹಾರ್ಮುಜ್ ಜಲಸಂಧಿ ಮೂಲಕ ತೈಲ ಸಾಗಣೆ ಕುರಿತು ಉಂಟಾಗಿರುವ ಅನಿಶ್ಚಿತತೆಯ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ.

ಶುಕ್ರವಾರ ತೈಲ ಬೆಲೆಯಲ್ಲಿ ಶೇ.1ರಷ್ಟು ಏರಿಕೆ ದಾಖಲಾಗಿದೆ. ಭಾರತೀಯ ಕಾಲಮಾನ ಬೆಳಗ್ಗೆ 7.25ರ ವೇಳೆಗೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 84 ಸೆಂಟ್‌ಗಳಷ್ಟು ಏರಿಕೆಯಾಗಿದ್ದು, 83.33 ಡಾಲರ್‌ಗೆ ತಲುಪಿದೆ.

ಅದೇ ರೀತಿ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 69 ಸೆಂಟ್‌ಗಳಷ್ಟು ಏರಿಕೆಯಾಗಿ 77.98 ಡಾಲರ್‌ಗೆ ತಲುಪಿದೆ.

ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ತೈಲ ಸಾಗಣೆ ಜಾಗತಿಕ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಈ ಮಾರ್ಗದ ಕುರಿತು ಉಂಟಾಗಿರುವ ಆತಂಕವೇ ತೈಲ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಇದರ ನಡುವೆ ಇರಾನ್ ಮತ್ತು ಓಮನ್ ದೇಶಗಳು ಹೊಸ ಸಾರಿಗೆ ವ್ಯವಸ್ಥೆಗಳ ಕುರಿತು ಚರ್ಚೆ ನಡೆಸಿವೆ. ಆದರೆ, ತಮ್ಮ ವಿರುದ್ಧವೆಂದು ಪರಿಗಣಿಸುವ ಹಡಗುಗಳ ವಿರುದ್ಧ ಕ್ರಮಗಳನ್ನು ಮುಂದುವರಿಸಿರುವುದರಿಂದ ಸಾಗಣೆ ಕ್ಷೇತ್ರದಲ್ಲಿ ಅನಿಶ್ಚಿತತೆ ಮುಂದುವರಿದಿದೆ.

ತೈಲ ಬೆಲೆಗಳ ಏರಿಕೆ ಮುಂದುವರಿದರೆ ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಭಾರತ ಸೇರಿದಂತೆ ತೈಲ ಆಮದು ಅವಲಂಬಿತ ರಾಷ್ಟ್ರಗಳ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.

ಕ್ಯಾಲಿಫೋರ್ನಿಯಾದಲ್ಲಿ ದುರಂತ ಅಂತ್ಯ: ಏಕಾಂಗಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ

0

ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದ ಬಿಗ್ ಪೈನ್ ಲೇಕ್ಸ್ ಪ್ರದೇಶದಲ್ಲಿ ಏಕಾಂಗಿ ಪಾದಯಾತ್ರೆಗೆ ತೆರಳಿ ಕಾಣೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬರ ಮೃತದೇಹ ಪತ್ತೆಯಾಗಿದೆ.

ಮೃತರನ್ನು ವಿಕ್ರಮ್ ಮುಬಾಯಿ ಎಂದು ಗುರುತಿಸಲಾಗಿದ್ದು, ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಾಂತಾ ಬಾರ್ಬರಾಯ ರಾಸಾಯನಿಕ ಎಂಜಿನಿಯರಿಂಗ್ ವಿಭಾಗದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದರು.

ವಾರಾಂತ್ಯದಲ್ಲಿ ಪಾದಯಾತ್ರೆಗೆ ತೆರಳಿದ್ದ ವಿಕ್ರಮ್ ಅವರು ಕೊನೆಯದಾಗಿ ಆಗಸ್ಟ್ 1ರಂದು ರಾತ್ರಿ ಸುಮಾರು 8.30ಕ್ಕೆ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದರು. ಬಳಿಕ ನಿಗದಿತ ಸಮಯಕ್ಕೆ ಮನೆಗೆ ವಾಪಸ್ ಆಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.

ಮಾಹಿತಿ ಪಡೆದ ಕ್ಯಾಲಿಫೋರ್ನಿಯಾ ಹೆದ್ದಾರಿ ಪೆಟ್ರೋಲ್ ಹಾಗೂ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಆಗಸ್ಟ್ 3ರಂದು ಸಂಜೆ ಇನ್ಯೊ ರಾಷ್ಟ್ರೀಯ ಅರಣ್ಯ ಪ್ರದೇಶದಲ್ಲಿ ವಿಕ್ರಮ್ ಅವರ ಮೃತದೇಹ ಪತ್ತೆಯಾಗಿದೆ.

ವಿಕ್ರಮ್ ಅವರ ಸಾವಿಗೆ ನಿಖರ ಕಾರಣ ಏನು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ತನಿಖಾಧಿಕಾರಿಗಳು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಕಡೆಯ ಆಷಾಢ ಶುಕ್ರವಾರ: ಲಕ್ಷ್ಮಿ ಅಲಂಕಾರದಲ್ಲಿ ದರ್ಶನ ನೀಡಿದ ತಾಯಿ ಚಾಮುಂಡಿ!

ಮೈಸೂರು: ಆಷಾಢ ಮಾಸದ ಕಡೆಯ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಹಾಗೂ ಅಲಂಕಾರ ನೆರವೇರಿಸಲಾಗಿದೆ.

ಇಂದು ತಾಯಿ ಚಾಮುಂಡೇಶ್ವರಿ ಲಕ್ಷ್ಮಿ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ.

ಕಡೆಯ ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಬ್ರಾಹ್ಮಿ ಮುಹೂರ್ತದಿಂದಲೇ ಭಕ್ತರು ರಸ್ತೆ ಮಾರ್ಗ ಹಾಗೂ ಮೆಟ್ಟಿಲುಗಳ ಮೂಲಕ ಬೆಟ್ಟ ಏರಿ ತಾಯಿಯ ದರ್ಶನ ಪಡೆಯುತ್ತಿದ್ದಾರೆ.

ದೇವಾಲಯದ ಒಳಾಂಗಣವನ್ನು ಚೆಂಡು ಹೂ, ಗುಲಾಬಿ ಸೇರಿದಂತೆ ವಿವಿಧ ಬಗೆಯ ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಕರ್ಪೂರ, ಗಂಧ ಹಾಗೂ ಧೂಪದ ಪರಿಮಳದ ನಡುವೆ ಬೆಳಗ್ಗೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಿದ್ದಾರೆ.

ಆಷಾಢ ಮಾಸದ ಮೊದಲ ಶುಕ್ರವಾರದಂದು ತಾಯಿಗೆ ನಾಗಲಕ್ಷ್ಮೀ ಅಲಂಕಾರ ಮಾಡಲಾಗಿತ್ತು. ಎರಡನೇ ಹಾಗೂ ಮೂರನೇ ಶುಕ್ರವಾರದಂದು ಲಕ್ಷ್ಮಿ ಅಲಂಕಾರ ನೆರವೇರಿಸಲಾಗಿತ್ತು. ಇದೀಗ ಕಡೆಯ ಶುಕ್ರವಾರವೂ ಲಕ್ಷ್ಮಿ ದೇವಿಯ ಅಲಂಕಾರದಲ್ಲಿ ಚಾಮುಂಡೇಶ್ವರಿ ಕಂಗೊಳಿಸುತ್ತಿದ್ದಾಳೆ.

ಭಕ್ತರ ಅನುಕೂಲಕ್ಕಾಗಿ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ₹2 ಸಾವಿರ ಮೌಲ್ಯದ ಟಿಕೆಟ್ ಪಡೆದವರಿಗೆ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಭಿಷೇಕ, ಕುಂಕುಮಾರ್ಚನೆ ಹಾಗೂ ಮಹಾಮಂಗಳಾರತಿ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 5.30ರಿಂದ 10 ಗಂಟೆಯವರೆಗೆ ವಿವಿಐಪಿ ದರ್ಶನ ವ್ಯವಸ್ಥೆ ಮಾಡಲಾಗಿದೆ.

ಕೊಡಗಿನಲ್ಲಿ ಕಾಡುಪ್ರಾಣಿಗಳ ಹಾವಳಿ: ಹಾಡಹಗಲೇ ಕಾಫಿ ತೋಟದಲ್ಲಿ ರೈತ ಮಹಿಳೆ ಮೇಲೆ ಚಿರತೆ ದಾಳಿ

ಕೊಡಗು: ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದ ಬಳಿ ಹಾಡಹಗಲೇ ರೈತ ಮಹಿಳೆಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ನಡೆದಿದೆ.

ದಾಳಿಯಲ್ಲಿ 60 ವರ್ಷದ ಲೀಲಾ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾಫಿ ತೋಟದಲ್ಲಿ ಕಾರ್ಮಿಕರ ಕೆಲಸವನ್ನು ಪರಿಶೀಲಿಸುತ್ತಿದ್ದ ವೇಳೆ ಏಕಾಏಕಿ ಬಂದ ಚಿರತೆ ಮಹಿಳೆಯ ಮೇಲೆ ದಾಳಿ ಮಾಡಿದೆ. ಚಿರತೆ ದಾಳಿಯಿಂದ ಲೀಲಾ ಅವರ ಎಡ ಕಿವಿ ಹಾಗೂ ದವಡೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ.

ಮಹಿಳೆಯ ಕಿರುಚಾಟ ಕೇಳಿದ ತೋಟದ ಕಾರ್ಮಿಕರು ಕೂಡಲೇ ಧಾವಿಸಿ ಚಿರತೆಯನ್ನು ಓಡಿಸಿ, ಗಾಯಾಳುವನ್ನು ರಕ್ಷಿಸಿದ್ದಾರೆ. ಬಳಿಕ ಅವರನ್ನು ಗೋಣಿಕೊಪ್ಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಲೀಲಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯಿಂದ ಮಾಲ್ದಾರೆ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಉಪವಲಯ ಅರಣ್ಯಾಧಿಕಾರಿ ಶಶಿ ಪಿ.ಟಿ. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ.

ಕಾಡಾನೆ, ಹುಲಿ ಹಾಗೂ ಚಿರತೆಗಳ ಹಾವಳಿಯಿಂದ ಗ್ರಾಮಸ್ಥರು ಹಾಗೂ ಕಾರ್ಮಿಕರಲ್ಲಿ ಭೀತಿ ಹೆಚ್ಚಾಗಿದ್ದು, ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಇದೀಗ ಅರಣ್ಯ ಇಲಾಖೆ ಚಿರತೆಯ ಸೆರೆಗೆ ಕಾರ್ಯಾಚರಣೆ ಆರಂಭಿಸಿದೆ. ಕಾಫಿ ತೋಟದಲ್ಲಿ ಚಿರತೆಯ ಚಲನವಲನ ಪತ್ತೆಹಚ್ಚಲು ಬೋನು ಹಾಗೂ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ದಾಳಿ ನಡೆಸಿದ ಚಿರತೆಗೆ ಗಾಯವಾಗಿರುವ ಶಂಕೆ ವ್ಯಕ್ತವಾಗಿದ್ದು, ಗ್ರಾಮಸ್ಥರು ಗಾಯಗೊಂಡ ಚಿರತೆಯನ್ನು ನೋಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಗ್ರಾಮಸ್ಥರ ಬೇಡಿಕೆಯ ಮೇರೆಗೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಸಾಕಾನೆಗಳ ನೆರವಿನೊಂದಿಗೆ ವಿಶೇಷ ಕಾರ್ಯಾಚರಣೆ ನಡೆಸಲು ಮುಂದಾಗಿದೆ. ವನ್ಯಜೀವಿ ವೈದ್ಯಾಧಿಕಾರಿ ಡಾ. ರಮೇಶ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗೂಡಲೂರಿನಲ್ಲಿ ಕಾಡಾನೆಗಳ ಹಾವಳಿ: ಎಳನೀರು ಕುಡಿದು ತೆಂಗಿನ ಮರ ಹೊತ್ತೊಯ್ದ ಆನೆಗಳು!

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗೂಡಲೂರಿನಲ್ಲಿ ಕಾಡಾನೆಗಳ ಹಿಂಡು ರೈತರ ಜಮೀನಿಗೆ ನುಗ್ಗಿ ಭಾರಿ ಹಾನಿ ಮಾಡಿವೆ.

ಆಹಾರ ಅರಸಿ ಬಂದ ಆನೆಗಳು ತೆಂಗಿನ ತೋಟಕ್ಕೆ ನುಗ್ಗಿ ತೆಂಗಿನ ಮರಗಳನ್ನು ಬುಡಸಮೇತ ಕಿತ್ತು ಹಾಕಿವೆ. ಎಳನೀರು ಇರುವ ತೆಂಗಿನ ಮರಗಳನ್ನು ಕಿತ್ತು, ಗೋನೆ ಸಮೇತ ಹೊತ್ತೊಯ್ದ ದೃಶ್ಯಗಳು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಕೆಲವು ಆನೆಗಳು ಎಳನೀರನ್ನು ಕಾಲಿನಿಂದ ತುಳಿದು ಕುಡಿದ ಬಳಿಕ ತೆಂಗಿನ ಮರವನ್ನು ಹೊತ್ತು ಸಾಗಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗೂಡಲೂರು ಸೇರಿದಂತೆ ಗಡಿ ಭಾಗಗಳಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಬಾಳೆ ಹಾಗೂ ತೆಂಗು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನಷ್ಟದಿಂದ ಕಂಗೆಟ್ಟಿರುವ ರೈತರು ಆನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿ ಮುಂಗಾರು ಅಬ್ಬರ: ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ, ಯೆಲ್ಲೋ ಅಲರ್ಟ್ ಘೋಷಣೆ!

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಇಂದು ಕರಾವಳಿ ಕರ್ನಾಟಕ ಹಾಗೂ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಭಾರೀ ಮಳೆಯೊಂದಿಗೆ ಗಂಟೆಗೆ 30ರಿಂದ 40 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಗಂಟೆಗೆ 40ರಿಂದ 50 ಕಿ.ಮೀ ವೇಗದ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಗೂ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ.

ಉತ್ತರ ಕರ್ನಾಟಕದಲ್ಲೂ ಮಳೆ ಸಾಧ್ಯತೆ:

ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಲ್ಲಿ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಧಾರವಾಡ, ಹಾವೇರಿ ಹಾಗೂ ಯಾದಗಿರಿ ಜಿಲ್ಲೆಗಳ ಹಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಕೊಡಗು, ಹಾಸನ, ತುಮಕೂರು, ಕೋಲಾರ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗಗಳಲ್ಲೂ ಗಂಟೆಗೆ 40ರಿಂದ 50 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮುಂಗಾರು ಸಾಮಾನ್ಯವಾಗಿದ್ದರೆ, ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿದೆ ಎಂದು IMD ಮಾಹಿತಿ ನೀಡಿದೆ. ಕರಾವಳಿ ಕರ್ನಾಟಕದ ಬಹುತೇಕ ಕಡೆ ಹಾಗೂ ಒಳನಾಡಿನ ಹಲವು ಪ್ರದೇಶಗಳಲ್ಲಿ ಮಳೆ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 9 ಸೆಂ.ಮೀ ಮಳೆಯಾಗಿದ್ದು, ಆಗಸ್ಟ್ 8ರಂದು ಕೂಡ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕೊಪ್ಪಳದ ಹುಲಗೆಮ್ಮ ದೇವಸ್ಥಾನದ ಹುಂಡಿ ಎಣಿಕೆ: 46 ದಿನಗಳಲ್ಲಿ 86.71 ಲಕ್ಷ ರೂ. ನಗದು ಸಂಗ್ರಹ!

ಕೊಪ್ಪಳ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹುಲಗಿಯ ಶ್ರೀ ಹುಲಗೆಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಶುಕ್ರವಾರ ನಡೆಯಿತು.

ಕಳೆದ 46 ದಿನಗಳಲ್ಲಿ ದೇವಸ್ಥಾನದ ಹುಂಡಿಯಲ್ಲಿ ಒಟ್ಟು ₹86,71,195 ನಗದು ಸಂಗ್ರಹವಾಗಿದೆ.

ಕಳೆದ ಜೂನ್ 20ರಂದು ಕೊನೆಯ ಬಾರಿ ಹುಂಡಿ ಎಣಿಕೆ ನಡೆಸಲಾಗಿತ್ತು. ಆ ಬಳಿಕ ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಕಾಣಿಕೆ ಸಲ್ಲಿಸಿದ್ದು, ಈ ಬಾರಿ ಭಕ್ತರು ನಗದಿನೊಂದಿಗೆ 146 ಗ್ರಾಂ ಬಂಗಾರ ಹಾಗೂ 3 ಕೆಜಿ 900 ಗ್ರಾಂ ಬೆಳ್ಳಿಯನ್ನೂ ಅರ್ಪಿಸಿದ್ದಾರೆ.

ದೇವಸ್ಥಾನದ ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಭಕ್ತರ ಅಪಾರ ಭಕ್ತಿಯಿಂದ ಈ ಬಾರಿ ಗಣನೀಯ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಾಖಂಡದಲ್ಲಿ ಮಳೆ ಆರ್ಭಟ: ಬಂಡೆ ಕುಸಿತದಿಂದ ಬದರಿನಾಥ್ ಹೆದ್ದಾರಿ ತಾತ್ಕಾಲಿಕ ಬಂದ್

0

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಬೆಟ್ಟ ಪ್ರದೇಶಗಳಲ್ಲಿ ಸಮಸ್ಯೆಗಳು ಹೆಚ್ಚಾಗಿವೆ.

ನಿರಂತರ ಮಳೆಯ ಪರಿಣಾಮ ಚಮೋಲಿ ಜಿಲ್ಲೆಯ ಹೆಲಾಂಗ್ ಬಳಿ ಹೆದ್ದಾರಿಯ ಮೇಲೆ ದೊಡ್ಡ ಬಂಡೆಗಳು ಉರುಳಿ ಬಿದ್ದಿದ್ದು, ಬದರಿನಾಥ್‌ ಯಾತ್ರಾ ಮಾರ್ಗವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಹೆಲಾಂಗ್ ಪ್ರದೇಶದಲ್ಲಿ ಹೆದ್ದಾರಿಯ ಮೇಲೆ ಶಿಲಾಖಂಡಗಳು ಮತ್ತು ಬಂಡೆಗಳು ಬಿದ್ದ ಕಾರಣ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳು ಈ ಮಾರ್ಗದಲ್ಲಿ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ.

ರಸ್ತೆಯ ಮೇಲಿರುವ ಬಂಡೆಗಳು ಹಾಗೂ ಮಣ್ಣು ತೆರವುಗೊಳಿಸಲು ಜೆಸಿಬಿ ಯಂತ್ರಗಳನ್ನು ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ರಸ್ತೆ ತೆರವುಗೊಳಿಸಿ ಸಂಚಾರವನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಪರಿಸ್ಥಿತಿಯನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರಸ್ತೆ ಸಂಪೂರ್ಣ ಸುರಕ್ಷಿತ ಎಂದು ಘೋಷಿಸುವವರೆಗೆ ಯಾತ್ರಿಕರು, ಪ್ರವಾಸಿಗರು ಹಾಗೂ ಸ್ಥಳೀಯರು ಈ ಮಾರ್ಗದಲ್ಲಿ ಅನಗತ್ಯ ಪ್ರಯಾಣ ಮಾಡದಂತೆ ಸರ್ಕಾರ ಮನವಿ ಮಾಡಿದೆ.

ಪ್ರಯಾಣಿಕರು ಅಧಿಕೃತ ಸಂಚಾರ ಮಾಹಿತಿ ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ಗಮನಿಸಿ ಪ್ರಯಾಣ ಯೋಜನೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಇದೇ ವೇಳೆ ಉತ್ತರಾಖಂಡದ ಚಮೋಲಿ, ರುದ್ರಪ್ರಯಾಗ, ಉತ್ತರಕಾಶಿ, ಪಿಥೋರಗಢ ಮತ್ತು ಬಾಗೇಶ್ವರ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಭಾರೀ ಮಳೆಯ ಎಚ್ಚರಿಕೆ ನೀಡಿದೆ.

ಮಲೆನಾಡು ಪ್ರದೇಶಗಳಲ್ಲಿ ಮಳೆ ಮುಂದುವರಿದರೆ ಮತ್ತಷ್ಟು ಭೂಕುಸಿತ ಹಾಗೂ ರಸ್ತೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.