Home Blog Page 74

‘ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್’ ಸೀರತ್ ಅಭಿಯಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮ ದಿನದ ಪ್ರಯುಕ್ತ ಆ.26ರಿಂದ ಸೆ.6ರವರೆಗೆ ರಾಜ್ಯಾದ್ಯಂತ ‘ಕ್ರಾಂತಿಯ ಜ್ಯೋತಿ–ಪ್ರವಾದಿ ಮುಹಮ್ಮದ್ (ಸ)’ ಎಂಬ ಶೀರ್ಷಿಕೆಯಡಿ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕದ ಗದಗ ಜಿಲ್ಲಾ ಅಧ್ಯಕ್ಷ ಕೆ.ಐ. ಶೇಖ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ (ಸ) ಅವರು ಜಗತ್ತಿಗೆ ಸಾರಿದ ಸಂದೇಶವು ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ, ಮಾನವ ಘನತೆ ಹಾಗೂ ಮಾನವ ಕುಲದ ಏಕತೆಯನ್ನು ಆಧರಿಸಿತ್ತು. ಜನರ ಮನಸ್ಸುಗಳನ್ನು ಸಂಸ್ಕರಿಸಿ, ನೈತಿಕತೆ ಮತ್ತು ಚಾರಿತ್ರ್ಯವನ್ನು ಶುದ್ಧೀಕರಿಸುವ ಮೂಲಕ ವ್ಯಕ್ತಿ ಹಾಗೂ ಸಮಾಜದ ಪರಿವರ್ತನೆಗೆ ಅವರು ಕಾರಣರಾದರು ಎಂದರು.

ಪ್ರವಾದಿ ಮುಹಮ್ಮದ್ (ಸ) ಅವರ ಕ್ರಾಂತಿ ಅಪ್ಪಟ ಮಾನವೀಯ ಕ್ರಾಂತಿಯಾಗಿದ್ದು, ಆಧ್ಯಾತ್ಮಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಆಡಳಿತ ಸೇರಿದಂತೆ ಮಾನವ ಜೀವನದ ವಿವಿಧ ಕ್ಷೇತ್ರಗಳನ್ನು ಒಳಗೊಂಡಿತ್ತು. ಸುಭಿಕ್ಷೆ ಮತ್ತು ನಿರ್ಭಯತ್ವದ ಸಮಾಜ ನಿರ್ಮಾಣವೇ ಅವರ ಗುರಿಯಾಗಿತ್ತು. ಪ್ರವಾದಿ ಮುಹಮ್ಮದ್ (ಸ) ಅವರ ಸಂದೇಶಗಳನ್ನು ಕನ್ನಡಿಗರಿಗೆ ಪರಿಚಯಿಸುವುದು, ಅವರ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡುವುದು ಹಾಗೂ ಪರಸ್ಪರ ಬಾಂಧವ್ಯವನ್ನು ಬಲಪಡಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.

ಅಭಿಯಾನದ ಅಂಗವಾಗಿ ನಗರದ ನೌಕರ ಭವನ, ಶಹಾಪುರ ಪೇಟೆ, ರಾಜೀವಗಾಂಧಿ ನಗರ ಸೇರಿದಂತೆ ವಿವಿಧೆಡೆ ಸೀರತ್ ಅಭಿಯಾನದ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ರಾಜ್ಯದ ವಿವಿಧೆಡೆ ವೈಯಕ್ತಿಕ ಭೇಟಿ, ವಿಚಾರಗೋಷ್ಠಿ, ಸಾರ್ವಜನಿಕ ಸಮಾವೇಶ, ಸಂವಾದ, ಚರ್ಚಾಗೋಷ್ಠಿ, ಸೀರತ್ ಪ್ರವಚನ, ಸೀರತ್ ಪ್ರದರ್ಶನ, ಸಮಾಜಸೇವಾ ಚಟುವಟಿಕೆ ಹಾಗೂ ಸೌಹಾರ್ದ ಸಂದೇಶ ರ‍್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಖ್ಯಾತ ಸಾಹಿತಿ ಹಾಗೂ ಗ್ರಂಥಕರ್ತ ಯೋಗೇಶ್ ಮಾಸ್ಟರ್ ಬರೆದ ‘ಮಾನವ ಮನಸ್ಸಿನ ಕೃಷಿಕ ಮನದೊಡೆಯ ಪ್ರವಾದಿ ಮುಹಮ್ಮದ್ (ಸ)’ ಹಾಗೂ ವಾರ್ತಾ ಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಬರೆದ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್ (ಸ)’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಕೆ.ಎಂ. ಬಿಲ್ಲಿವಾಲೆ, ಜುನೈದ್ ಉಮಚಗಿ, ಮಹಮ್ಮದ್ ಮುಲ್ಲಾ, ಯೂಸುಫ್ ನಮಾಜಿ, ಡಾ. ಪ್ಯಾರಾಅಲಿ, ರಿಯಾಜ್ ಶೇಖ್, ಜಿ.ಬಿ. ಖಾಜಿ, ರಾಜೀಸಾಬ್ ಕಲ್ಮನಿ ಹಾಗೂ ಶಬ್ಬೀರ ಮೌಲಾನಾ ಇದ್ದರು.

ಹರಿಪುರದಲ್ಲಿ ಸಂಭ್ರಮದ ವೀರಭದ್ರೇಶ್ವರ ಅಗ್ನಿಮಹೋತ್ಸವ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸಮೀಪದ ಹರಿಪುರದಲ್ಲಿ ಶ್ರೀ ವೀರಭದ್ರೇಶ್ವರ ದೇವರ 38ನೇ ವರ್ಷದ ಅಗ್ನಿಮಹೋತ್ಸವವು ಶ್ರಾವಣ ಮಾಸದ ದ್ವಾದಶಿ ದಿನವಾದ ಮಂಗಳವಾರ ಸಡಗರ ಸಂಭ್ರಮದಿಂದ ಜರುಗಿತು.

ಸಂಪ್ರದಾಯದಂತೆ ಬೆಳಿಗ್ಗೆ 6 ಗಂಟೆಗೆ ಶ್ರೀ ಶಂಕರಲಿಂಗೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ದೇವರಿಗೆ ಎಲೆಪೂಜೆ, ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಬಳಿಕ ಬೆಳಿಗ್ಗೆ 8 ಗಂಟೆಗೆ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವವು ನಂದಿಧ್ವಜ, ಸಮ್ಮಾಳಗಳು, ಮುತ್ತೈದೆಯರು ಹಾಗೂ ವಿವಿಧ ವಾದ್ಯಗೋಷ್ಠಿಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭದಲ್ಲಿ ಪುರವಂತರು ವೀರಭದ್ರದೇವರ ಒಡಪುಗಳನ್ನು ಹೇಳುತ್ತಾ, ಶಸ್ತ್ರಗಳನ್ನು ಧರಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು. ಮಧ್ಯಾಹ್ನ 1 ಗಂಟೆಯ ಬಳಿಕ ದೇವಸ್ಥಾನದ ಮುಂಭಾಗದಲ್ಲಿ ಏರ್ಪಡಿಸಿದ್ದ ಅಗ್ನಿಕುಂಡದಲ್ಲಿ ಅಪಾರ ಸಂಖ್ಯೆಯ ಭಕ್ತರು ಅಗ್ನಿಹಾಯ್ದು ಭಕ್ತಿ ಸಮರ್ಪಿಸಿದರು. ಈ ವೇಳೆ ಮೊಳಗಿದ ‘ಹರ ಹರ ಮಹಾದೇವ’ ಘೋಷ ಮುಗಿಲು ಮುಟ್ಟಿತು. ನಂತರ ಮಹಾಪ್ರಸಾದ ವಿತರಿಸಲಾಯಿತು.

ಅಗ್ನಿಮಹೋತ್ಸವದ ನೇತೃತ್ವವನ್ನು ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಸಮಿತಿ ಅಧ್ಯಕ್ಷ ಶಂಕ್ರಪ್ಪ ಕಾಳಗಿ, ಚಂದ್ರಶೇಖರ ಕಾಳಗಿ, ಬಸವರಾಜ ದೇಸಾಯಿಪಟ್ಟಿ, ಶಂಭು ಕಾಳಗಿ, ಬಸವರಾಜ ಮೂರಶಿಳ್ಳಿ, ವಿಜಯಕುಮಾರ ದೇಸಾಯಿಪಟ್ಟಿ, ಪ್ರಸನ್ನ ಮೂರಶಿಳ್ಳಿ, ದೇವಪ್ಪ ಗದಗಿನ, ನೀಲಕಂಠಪ್ಪ ಕಾಳಗಿ, ಮಂಜುನಾಥ ಸೊಂಟನೂರ, ವೀರೇಶ ದೇಸಾಯಿಪಟ್ಟಿ, ಗಂಗಪ್ಪ ದೇಸಾಯಿಪಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಿಗಳೂರು ಅಪಘಾತ: ಮೃತಪಟ್ಟ, ಗಾಯಗೊಂಡ ಕುಟುಂಬಗಳಿಗೆ ₹14 ಲಕ್ಷ ಪರಿಹಾರ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಜಿಗಳೂರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರಿಗೆ ಪರಿಹಾರವಾಗಿ ರಾಜ್ಯ ಸರ್ಕಾರ ₹14 ಲಕ್ಷ ಮಂಜೂರು ಮಾಡಿ ಗದಗ ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಮಾಡಿರುವುದನ್ನು ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಸ್ವಾಗತಿಸಿದೆ. ಸರ್ಕಾರ ಹಾಗೂ ಸ್ಥಳೀಯ ಶಾಸಕರಿಗೆ ಅಭಿನಂದನೆ ಸಲ್ಲಿಸಿರುವ ಸಂಘ, ಪರಿಹಾರದ ಮೊತ್ತವನ್ನು ಸಂತ್ರಸ್ತ ಕುಟುಂಬಗಳಿಗೆ ತ್ವರಿತವಾಗಿ ತಲುಪಿಸುವಂತೆ ಆಗ್ರಹಿಸಿದೆ.

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳು ಹಾಗೂ ಗಾಯಗೊಂಡವರ ಕುಟುಂಬಗಳು ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕೆಲವರು ಚಿಕಿತ್ಸೆಗಾಗಿ ಹಣ ಹೊಂದಿಸಲು ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮಂಜೂರು ಮಾಡಿರುವ ಪರಿಹಾರದ ಮೊತ್ತವು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಉಳಿಯದೆ, ಅರ್ಹ ಫಲಾನುಭವಿಗಳ ವೈಯಕ್ತಿಕ ಖಾತೆಗಳಿಗೆ ಶೀಘ್ರವಾಗಿ ಜಮೆಯಾಗಬೇಕಾಗಿದೆ ಎಂದು ಸಂಘ ತಿಳಿಸಿದೆ.

ಪರಿಹಾರ ಬಿಡುಗಡೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ತ್ವರಿತಗೊಳಿಸಿ, ಯಾವುದೇ ಕಾರಣಕ್ಕೂ ಅನಗತ್ಯ ವಿಳಂಬ ಮಾಡಬಾರದು. ಪರಿಹಾರದ ಹಣ ಸಂತ್ರಸ್ತ ಕುಟುಂಬಗಳಿಗೆ ತಕ್ಷಣ ಲಭ್ಯವಾದರೆ, ಚಿಕಿತ್ಸಾ ವೆಚ್ಚ ಹಾಗೂ ಕುಟುಂಬದ ತುರ್ತು ಅಗತ್ಯಗಳನ್ನು ಪೂರೈಸಲು ಅನುಕೂಲವಾಗಲಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.

ಸರ್ಕಾರ ಈಗಾಗಲೇ ಪರಿಹಾರ ಮಂಜೂರು ಮಾಡಿರುವುದರಿಂದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುವ ಅಗತ್ಯವಿಲ್ಲ. ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ಅರ್ಹ ಎಲ್ಲ ಕುಟುಂಬಗಳ ಖಾತೆಗೆ ಪರಿಹಾರದ ಮೊತ್ತ ಜಮೆಯಾಗುವಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಆಗ್ರಹಿಸಿದೆ.

ಈ ಕುರಿತು ಸಂಘದ ಕಾರ್ಯದರ್ಶಿ ಎಂ.ಎಸ್. ಹಡಪದ ಹಾಗೂ ಮುಖಂಡರಾದ ಬಾಲು ರಾಠೋಡ, ಪೀರು ರಾಠೋಡ, ಫಯಾಜ್ ತೋಟದ, ದಾವಲಸಾಬ ತಾಳಿಕೋಟಿ, ರಾಜಪ್ಪ ಹೊಸಮನಿ, ಮೆಹಬೂಬ್ ಹುನಗುಂದ, ರಾಜಣ್ಣ ಕೇಶಣ್ಣವರ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಶಿಕ್ಷಣ ಪ್ರೇಮಿಗಳ ಆಕ್ರೋಶಕ್ಕೆ ಎಚ್ಚೆತ್ತ ಇಲಾಖೆ: ಬೀಗ ಹಾಕಿದ್ದ ಸರ್ಕಾರಿ ಶಾಲೆ ಮತ್ತೆ ಆರಂಭ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಕ್ಕಳ ಸಂಖ್ಯೆ ಕುಸಿದ ಹಿನ್ನೆಲೆಯಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಬೀಗ ಹಾಕಿದ್ದ ಪಟ್ಟಣದ ಕೆಂಚಲಾಪುರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಗಿಲು ಕೊನೆಗೂ ಮಂಗಳವಾರ ತೆರೆದು, ಮತ್ತೆ ಮಕ್ಕಳ ಕಲರವ ಮೊಳಗಿತು. ಶಾಲೆ ಮುಚ್ಚುವ ಹಂತ ತಲುಪಿರುವ ಕುರಿತು ಶಿಕ್ಷಣ ಪ್ರೇಮಿಗಳು ಹಾಗೂ ಪೋಷಕರು ಸೋಮವಾರ ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು, ಮಕ್ಕಳನ್ನು ಬೇರೆ ಶಾಲೆಗಳಿಗೆ ವರ್ಗಾಯಿಸಿದ್ದ ಪಾಲಕರ ಮನೆಗಳಿಗೆ ತೆರಳಿ ಮನವೊಲಿಸುವ ಮೂಲಕ ಐವರು ಮಕ್ಕಳನ್ನು ಮರಳಿ ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಮೂರು ದಶಕಗಳಿಂದ ಕೆಂಚಲಾಪುರ ಬಡಾವಣೆಯ ಮಕ್ಕಳಿಗೆ ಶಿಕ್ಷಣದ ಬೆಳಕು ನೀಡುತ್ತಿದ್ದ ಈ ಶಾಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ದಾಖಲಾತಿ ಸಂಖ್ಯೆ ನಿರಂತರವಾಗಿ ಕುಸಿಯುತ್ತ ಬಂದಿದೆ. ಕಳೆದ ವರ್ಷ 1ರಿಂದ 7ನೇ ತರಗತಿವರೆಗೆ ಒಟ್ಟು 26 ಮಕ್ಕಳು ದಾಖಲಾಗಿದ್ದರೆ, 2026-27ನೇ ಸಾಲಿನಲ್ಲಿ ಈ ಸಂಖ್ಯೆ ಕೇವಲ 11ಕ್ಕೆ ಇಳಿದಿತ್ತು. ಈ ಪೈಕಿ ಕೆಲವರು ಬೇರೆ ಶಾಲೆಗಳಿಗೆ ವರ್ಗಾವಣೆಯಾಗಿದ್ದರಿಂದ ಶಾಲೆಯ ಭವಿಷ್ಯದ ಬಗ್ಗೆಯೇ ಆತಂಕ ಎದುರಾಗಿತ್ತು.

ಶಿಕ್ಷಕರ ಕೊರತೆಯೂ ಶಾಲೆ ಖಾಲಿಯಾಗಲು ಕಾರಣ

ಶಾಲೆಯಲ್ಲಿದ್ದ ಇಬ್ಬರು ಶಿಕ್ಷಕರನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಎಸ್‌ಐಆರ್‌ ಕಾರ್ಯಕ್ಕೆ ನಿಯೋಜಿಸಿದ್ದರಿಂದ ಬೋಧನಾ ಚಟುವಟಿಕೆಗಳಿಗೆ ತೊಂದರೆಯಾಗಿತ್ತು. ಮಕ್ಕಳಿಗೆ ಸಮರ್ಪಕ ಶಿಕ್ಷಣ ದೊರೆಯುತ್ತಿಲ್ಲ ಎಂಬ ಕಾರಣ ನೀಡಿ ಕೆಲವು ಪಾಲಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ದಾಖಲಿಸಿದ್ದರು. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಮತ್ತಷ್ಟು ಕುಸಿದು, ಶಾಲೆಯೇ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆ ಅಧಿಕಾರಿಗಳು ಮಂಗಳವಾರ ಶಾಲೆಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಬಳಿಕ ಬೇರೆ ಶಾಲೆಗಳಿಗೆ ಮಕ್ಕಳನ್ನು ವರ್ಗಾಯಿಸಿದ್ದ ಪಾಲಕರ ಮನೆಗಳಿಗೆ ತೆರಳಿ, ಮಕ್ಕಳನ್ನು ಇದೇ ಶಾಲೆಯಲ್ಲಿ ಮುಂದುವರಿಸುವಂತೆ ಮನವಿ ಮಾಡಿದರು.

ಅಧಿಕಾರಿಗಳ ಮನವಿಗೆ ಸ್ಪಂದಿಸಿದ ಪಾಲಕರಿಂದ ಐವರು ಮಕ್ಕಳು ಮಂಗಳವಾರವೇ ಶಾಲೆಗೆ ಮರಳಿದ್ದು, ತರಗತಿಗಳು ಪುನರಾರಂಭಗೊಂಡವು.

ಎರಡು ದಿನದಲ್ಲಿ ಪರಿಣಿತ ಶಿಕ್ಷಕರ ನಿಯೋಜನೆ

ಶಾಲೆಯ ಬೋಧನಾ ಗುಣಮಟ್ಟದ ಕುರಿತು ಪಾಲಕರು ಆತಂಕಪಡುವ ಅಗತ್ಯವಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸೀಮಿಕೇರಿ ಭರವಸೆ ನೀಡಿದರು.

ಶಾಲೆಯ ಪುನರಾರಂಭದ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಕೆ. ಹವಾಲ್ದಾರ, ಶಿಕ್ಷಣ ಸಂಯೋಜಕ ಆರ್.ಬಿ. ಜೋಶಿ, ಸಿಆರ್‌ಪಿಗಳಾದ ಉಮೇಶ ನೇಕಾರ, ಎನ್.ಎ. ಮುಲ್ಲಾ, ಎಸ್.ಎಚ್. ಮತ್ತೂರ, ಎಸ್‌ಡಿಎಂಸಿ ಅಧ್ಯಕ್ಷ ಸುಲೇಮಾನ್ ಮುಜಾವರ್, ಹೇಮಣ್ಣ ಬುರಡಿ, ತಿಪ್ಪಣ್ಣ ರೊಟ್ಟಿಗವಾಡ ಸೇರಿದಂತೆ ಶಿಕ್ಷಣ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸರ್ಕಾರಿ ಶಾಲೆಗಳನ್ನು ಬಂದ್ ಮಾಡುವ ಯಾವುದೇ ಉದ್ದೇಶ ಶಿಕ್ಷಣ ಇಲಾಖೆಗೆ ಇಲ್ಲ. ಪಾಲಕರು ಆತಂಕಪಡುವ ಅಗತ್ಯವಿಲ್ಲ. ಎರಡು ದಿನಗಳಲ್ಲಿ ಓರ್ವ ಪರಿಣಿತ ಶಿಕ್ಷಕರನ್ನು ಶಾಲೆಗೆ ನಿಯೋಜಿಸಲಾಗುವುದು. ಇಂದಿನಿಂದ ಶಾಲೆ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಉಳಿದ ಮಕ್ಕಳನ್ನೂ ಮರಳಿ ಶಾಲೆಗೆ ಕರೆತರಲು ಕ್ರಮ ಕೈಗೊಳ್ಳಲಾಗುವುದು. ಪಾಲಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಸಾರ್ವಜನಿಕರನ್ನು ಒಳಗೊಂಡ ಸಭೆ ನಡೆಸಿ, ಶಾಲೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಪಡೆಯಲಾಗುವುದು.

— ಶಿವರಾಜ ಸೀಮಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ

KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು; ರಾಜ್ಯಪಾಲರಿಂದ ಆದೇಶ!

0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆ ನಡೆಸಿ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಲು ಅಧಿಕೃತವಾಗಿ ಶಿಫಾರಸು ಮಾಡಿತ್ತು. ಈ ಶಿಫಾರಸಿನ ಆಧಾರದ ಮೇಲೆ ರಾಜ್ಯಪಾಲರು ಇದೀಗ ಅಮಾನತು ಆದೇಶ ಹೊರಡಿಸಿದ್ದಾರೆ.

ಶಿವಶಂಕರಪ್ಪ ಸಾಹುಕಾರ್ ಅವರನ್ನು ರಾಜ್ಯಪಾಲರು ಅಮಾನತುಗೊಳಿಸಿರುವುದು ಇದು ಎರಡನೇ ಬಾರಿಯಾಗಿದೆ. ರಾಷ್ಟ್ರಪತಿಗಳು ಮುಂದಿನ ಆದೇಶ ಹೊರಡಿಸುವವರೆಗೆ ಅಮಾನತು ಆದೇಶ ಜಾರಿಯಲ್ಲಿರಲಿದೆ.

ರಾಜ್ಯ ಸಚಿವ ಸಂಪುಟದ ಅನುಮತಿ ಪಡೆಯದೆ ಕೆಪಿಎಸ್‌ಸಿ ಅಧ್ಯಕ್ಷರನ್ನು ಅಮಾನತುಗೊಳಿಸುವುದು ಕಾನೂನುಬಾಹಿರ ಎಂದು ಹೈಕೋರ್ಟ್ ಈ ಹಿಂದೆ ಅಭಿಪ್ರಾಯಪಟ್ಟಿತ್ತು. ಹೈಕೋರ್ಟ್ ಸೂಚನೆಯ ಹಿನ್ನೆಲೆಯಲ್ಲಿ ಸರ್ಕಾರ ಮತ್ತೊಮ್ಮೆ ಸಚಿವ ಸಂಪುಟದ ಅನುಮತಿ ಪಡೆದು ಅಮಾನತಿಗೆ ಶಿಫಾರಸು ಮಾಡಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಆಗಸ್ಟ್ 21ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಶಿವಶಂಕರಪ್ಪ ಸಾಹುಕಾರ್ ಅವರ ಅಮಾನತಿಗೆ ಅನುಮೋದನೆ ನೀಡಲಾಗಿತ್ತು. ಇದೀಗ ರಾಜ್ಯಪಾಲರ ಆದೇಶದೊಂದಿಗೆ ಅಮಾನತು ಪ್ರಕ್ರಿಯೆ ಜಾರಿಗೊಂಡಿದೆ.

ಜಮಖಂಡಿಯಲ್ಲಿ ಗ್ಯಾಸ್ ಸೋರಿಕೆಯಿಂದ ಮನೆಗೆ ಬೆಂಕಿ; 67 ವರ್ಷದ ವೃದ್ಧೆಗೆ ಗಾಯ

0

ಬಾಗಲಕೋಟೆ: ಅಡುಗೆ ಅನಿಲ ಸೋರಿಕೆಯಾಗಿ ಮನೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ 67 ವರ್ಷದ ವೃದ್ಧೆಯೊಬ್ಬರು ಗಾಯಗೊಂಡಿರುವ ಘಟನೆ ಜಮಖಂಡಿಯ ಚೌಡಯ್ಯನಗರದ ಮಾವಿನ ಮಸಾರಿ ಬಡಾವಣೆಯಲ್ಲಿ ನಡೆದಿದೆ.

ಲಕ್ಷ್ಮೀಬಾಯಿ ಪತ್ತಾರ (67) ಗಾಯಗೊಂಡವರು. ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿದ್ದು, ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಮನೆಯಲ್ಲಿದ್ದ ಲಕ್ಷ್ಮೀಬಾಯಿ ಅವರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ.

ಘಟನೆ ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಜಮಖಂಡಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಬಳಿಕ ಗಾಯಗೊಂಡ ಲಕ್ಷ್ಮೀಬಾಯಿ ಅವರನ್ನು ರಕ್ಷಿಸಿ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಮನೆಯ ಇತರೆ ಭಾಗಗಳಿಗೆ ಹರಡುವ ಮುನ್ನವೇ ನಿಯಂತ್ರಣಕ್ಕೆ ಬಂದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ಹೈಹೀಲ್ಸ್ ಪ್ರಿಯರೇ ಗಮನಿಸಿ! ಹೆಚ್ಚು ಹೊತ್ತು ಧರಿಸಿದರೆ ಎದುರಾಗಬಹುದು ಈ ಸಮಸ್ಯೆಗಳು

0

ಹೈಹೀಲ್ಸ್‌ ಎಂದರೆ ಫ್ಯಾಷನ್, ಸ್ಟೈಲ್ ಹಾಗೂ ಆತ್ಮವಿಶ್ವಾಸದ ಸಂಕೇತ.

ಆದರೆ ಸುಂದರವಾಗಿ ಕಾಣಲು ಪ್ರತಿದಿನ ಅಥವಾ ದೀರ್ಘಕಾಲ ಹೈಹೀಲ್ಸ್ ಧರಿಸುವುದು ಪಾದಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ತಜ್ಞರ ಪ್ರಕಾರ, ಅತಿ ಎತ್ತರದ ಹೀಲ್ಸ್‌ಗಳನ್ನು ಹೆಚ್ಚು ಸಮಯ ಧರಿಸುವುದರಿಂದ ಪಾದಗಳು ಮಾತ್ರವಲ್ಲದೆ ಮಣಿಕಟ್ಟು, ಮೊಣಕಾಲು, ಸೊಂಟ ಮತ್ತು ಬೆನ್ನುಮೂಳೆಯ ಮೇಲೂ ಹೆಚ್ಚುವರಿ ಒತ್ತಡ ಬೀಳಬಹುದು.

ಹೈಹೀಲ್ಸ್ ಧರಿಸಿದಾಗ ದೇಹದ ತೂಕ ಪಾದದ ಮುಂಭಾಗದ ಭಾಗದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬೀಳುತ್ತದೆ. ದೇಹದ ಸಮತೋಲನ ಕಾಪಾಡಿಕೊಳ್ಳಲು ಸ್ನಾಯುಗಳು ಹೆಚ್ಚುವರಿಯಾಗಿ ಕೆಲಸ ಮಾಡಬೇಕಾಗುತ್ತದೆ. ಇದರಿಂದ ನೋವು ಹಾಗೂ ಆಯಾಸ ಉಂಟಾಗುವ ಸಾಧ್ಯತೆಯಿದೆ.

ಪಾದ ನೋವು, ಸ್ನಾಯುಗಳ ಆಯಾಸ:

ಹೀಲ್ಸ್‌ನ ಎತ್ತರ ಹೆಚ್ಚಾದಂತೆ ಪಾದದ ಕೆಲವು ಭಾಗಗಳ ಮೇಲೆ ಒತ್ತಡವೂ ಹೆಚ್ಚಾಗಬಹುದು. ಇದರಿಂದ ಪಾದದ ಮುಂಭಾಗದಲ್ಲಿ ನೋವು, ಸ್ನಾಯುಗಳ ಆಯಾಸ, ಮಣಿಕಟ್ಟು ನೋವು ಹಾಗೂ ನಡೆಯುವಾಗ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು.

ಸ್ನಾಯುಗಳಲ್ಲಿ ಬಿಗಿತ:

ಹೈಹೀಲ್ಸ್ ಧರಿಸಿ ನಡೆಯುವಾಗ ಪಾದ ಮತ್ತು ಕಾಲಿನ ಸ್ನಾಯುಗಳು ಸಾಮಾನ್ಯಕ್ಕಿಂತ ವಿಭಿನ್ನ ರೀತಿಯಲ್ಲಿ ಕೆಲಸ ಮಾಡುತ್ತವೆ. ಪ್ರತಿದಿನ ಹಲವು ಗಂಟೆಗಳ ಕಾಲ ಹೀಲ್ಸ್ ಧರಿಸುವ ಅಭ್ಯಾಸವಿದ್ದರೆ ಸ್ನಾಯುಗಳಲ್ಲಿ ಬಿಗಿತ ಹಾಗೂ ಆಯಾಸ ಉಂಟಾಗಬಹುದು.

ಸೊಂಟ, ಬೆನ್ನು ನೋವಿಗೂ ಕಾರಣವಾಗಬಹುದು:

ಹೈಹೀಲ್ಸ್ ಧರಿಸಿದಾಗ ದೇಹದ ಭಂಗಿಯಲ್ಲಿ ಬದಲಾವಣೆಯಾಗುತ್ತದೆ. ಸಮತೋಲನ ಕಾಪಾಡಿಕೊಳ್ಳಲು ಸೊಂಟ ಮತ್ತು ಬೆನ್ನುಮೂಳೆಯ ಮೇಲೆ ಹೆಚ್ಚುವರಿ ಒತ್ತಡ ಬೀಳಬಹುದು. ಇದರಿಂದ ಕೆಳಬೆನ್ನು ನೋವು, ಸೊಂಟ ನೋವು ಹಾಗೂ ಸ್ನಾಯುಗಳ ಬಿಗಿತ ಉಂಟಾಗುವ ಸಾಧ್ಯತೆಯಿದೆ.

ದೀರ್ಘಕಾಲ ನಿಂತುಕೊಳ್ಳಬೇಕಾದ ಸಂದರ್ಭಗಳಲ್ಲಿ ಈ ಸಮಸ್ಯೆ ಮತ್ತಷ್ಟು ಕಾಡಬಹುದು. ಹೀಲ್ಸ್ ಎತ್ತರವಾಗಿದ್ದಷ್ಟೂ ದೇಹದ ಸ್ಥಿರತೆ ಕಾಪಾಡಿಕೊಳ್ಳುವುದು ಕಷ್ಟವಾಗಬಹುದು.

ಎಡವಿ ಬೀಳುವ ಅಪಾಯ:

ಹೈಹೀಲ್ಸ್ ಧರಿಸಿ ಅಸಮತಟ್ಟಾದ ನೆಲದಲ್ಲಿ ನಡೆಯುವಾಗ ಅಥವಾ ಮೆಟ್ಟಿಲು ಹತ್ತುವಾಗ ಮಣಿಕಟ್ಟು ತಿರುಗುವುದು, ಎಡವಿ ಬೀಳುವುದು ಹಾಗೂ ಪಾದಕ್ಕೆ ಗಾಯವಾಗುವ ಅಪಾಯ ಹೆಚ್ಚಾಗಬಹುದು. ಹೀಗಾಗಿ ಹೀಲ್ಸ್ ಧರಿಸಿ ವೇಗವಾಗಿ ನಡೆಯುವುದು ಅಥವಾ ಓಡುವುದನ್ನು ತಪ್ಪಿಸುವುದು ಉತ್ತಮ.

ಹೈಹೀಲ್ಸ್ ಧರಿಸುವವರು ಈ ಮುನ್ನೆಚ್ಚರಿಕೆ ವಹಿಸಿ:

  • ಸಾಧ್ಯವಾದಷ್ಟು ಕಡಿಮೆ ಎತ್ತರದ ಹೀಲ್ಸ್ ಆಯ್ಕೆ ಮಾಡಿ.
  • ಸುಮಾರು 1–1.5 ಇಂಚಿನ ಹೀಲ್ಸ್ ಹೆಚ್ಚು ಆರಾಮದಾಯಕವಾಗಿರಬಹುದು.
  • ನಿರಂತರವಾಗಿ ಹಲವು ಗಂಟೆಗಳ ಕಾಲ ಹೈಹೀಲ್ಸ್ ಧರಿಸಬೇಡಿ.
  • ಪಾದಕ್ಕೆ ಸರಿಯಾಗಿ ಹೊಂದಿಕೊಳ್ಳುವ ಹಾಗೂ ಮುಂಭಾಗದಲ್ಲಿ ಸಾಕಷ್ಟು ಅಗಲವಿರುವ ಶೂ ಆಯ್ಕೆ ಮಾಡಿ.
  • ಹೀಲ್ಸ್ ತೆಗೆದ ಬಳಿಕ ಪಾದಗಳಿಗೆ ವಿಶ್ರಾಂತಿ ನೀಡಿ.
  • ನಿಯಮಿತವಾಗಿ ವಾಕಿಂಗ್, ಸ್ಟ್ರೆಚಿಂಗ್ ಹಾಗೂ ಸೂಕ್ತ ವ್ಯಾಯಾಮ ಮಾಡಿ.
  • ಪಾದ ಅಥವಾ ಬೆನ್ನು ನೋವು ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸದೆ ಹೀಲ್ಸ್ ಬಳಕೆಯನ್ನು ಕಡಿಮೆ ಮಾಡಿ.

ಗಮನಿಸಿ: ಹೈಹೀಲ್ಸ್‌ಗಳ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ನಿರಂತರ ಅಥವಾ ತೀವ್ರ ನೋವು ಕಂಡುಬಂದರೆ ವೈದ್ಯರು ಅಥವಾ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

ಅನಧಿಕೃತ ಶೆಡ್, ಅಂಗಡಿ, ಬೋರ್ಡ್ ತೆರವು; ಅವೆನ್ಯೂ ರಸ್ತೆ ಸ್ವಚ್ಛಗೊಳಿಸಿದ ಪಾಲಿಕೆ!

0

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶವಾದ ಅವೆನ್ಯೂ ರಸ್ತೆಯಲ್ಲಿ ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ ವತಿಯಿಂದ ನಡೆದ ಕಾರ್ಯಾಚರಣೆಯಲ್ಲಿ ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗಿದ್ದ ಅನಧಿಕೃತ ಅಂಗಡಿಗಳು, ತಾತ್ಕಾಲಿಕ ಶೆಡ್‌ಗಳು, ಜಾಹೀರಾತು ಫಲಕಗಳು ಹಾಗೂ ರಸ್ತೆ ಬದಿಯ ವಿವಿಧ ಅಡೆತಡೆಗಳನ್ನು ತೆರವುಗೊಳಿಸಲಾಯಿತು.

ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್‌ಗಳು ಒತ್ತುವರಿಯಾಗಿದ್ದರಿಂದ ಪಾದಚಾರಿಗಳು ಮುಖ್ಯ ರಸ್ತೆಯಲ್ಲೇ ಸಂಚರಿಸುವಂತಾಗಿತ್ತು. ಇದರಿಂದ ಅಪಘಾತದ ಆತಂಕ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಪಾದಚಾರಿಗಳ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಕಾರ್ಯಾಚರಣೆ ವೇಳೆ ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿದ್ದ ಅಂಗಡಿಕಾರರ ಅನಧಿಕೃತ ವಸ್ತುಗಳನ್ನು ತೆರವುಗೊಳಿಸಿ, ಪಾದಚಾರಿಗಳಿಗೆ ಮುಕ್ತವಾಗಿ ಸಂಚರಿಸಲು ಮಾರ್ಗ ಕಲ್ಪಿಸಲಾಯಿತು.

ಮುಂದಿನ ದಿನಗಳಲ್ಲಿ ಮತ್ತೆ ಫುಟ್‌ಪಾತ್ ಅತಿಕ್ರಮಣ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದರ ಜೊತೆಗೆ ದಂಡ ವಿಧಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮನಕಲಕುವ ಘಟನೆ: ಇಬ್ಬರು ಹೆಣ್ಣು ಮಕ್ಕಳನ್ನು ತುಂಗಾ ನದಿಗೆ ಎಸೆದ ತಾಯಿ, ಕಂದಮ್ಮಗಳಿಗಾಗಿ ತೀವ್ರ ಶೋಧ

0

ಶಿವಮೊಗ್ಗ: ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆಯೊಬ್ಬರು ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ತುಂಗಾ ನದಿಗೆ ಎಸೆದು, ಬಳಿಕ 11 ತಿಂಗಳ ಗಂಡು ಮಗುವಿನೊಂದಿಗೆ ತಾನೂ ನದಿಗೆ ಹಾರಿದ ದಾರುಣ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಸ್ಥಳೀಯ ಯುವಕರ ಸಮಯಪ್ರಜ್ಞೆ ಹಾಗೂ ಸಾಹಸದಿಂದ ಮಹಿಳೆ ಮತ್ತು 11 ತಿಂಗಳ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ 6 ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳು ನದಿ ಪಾಲಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಚಿತ್ರದುರ್ಗ ಜಿಲ್ಲೆಯ ಹೊಸೂರು ಗ್ರಾಮದ ಭವಾನಿ ಎಂಬ ಮಹಿಳೆ ಈ ಕೃತ್ಯಕ್ಕೆ ಮುಂದಾದವರು ಎಂದು ಗುರುತಿಸಲಾಗಿದೆ. ಪತಿ ದುಗ್ಗಪ್ಪ ಅವರೊಂದಿಗೆ ನಡೆದ ಕೌಟುಂಬಿಕ ಗಲಾಟೆಯಿಂದ ಮನನೊಂದು ಮಕ್ಕಳೊಂದಿಗೆ ಶಿವಮೊಗ್ಗಕ್ಕೆ ಬಂದಿದ್ದರು ಎನ್ನಲಾಗಿದೆ.

ಭವಾನಿ ತನ್ನ 6 ವರ್ಷದ ಮಗಳು ಸಾನ್ವಿಕಾ ಹಾಗೂ 4 ವರ್ಷದ ಮಗಳು ತನ್ವಿಕಾಳನ್ನು ರೈಲ್ವೆ ಸೇತುವೆಯಿಂದ ತುಂಗಾ ನದಿಗೆ ಎಸೆದ ಬಳಿಕ, 11 ತಿಂಗಳ ಗಂಡು ಮಗುವಿನೊಂದಿಗೆ ತಾನೂ ನದಿಗೆ ಹಾರಿದ್ದಾರೆ ಎನ್ನಲಾಗಿದೆ.

ಘಟನೆಯನ್ನು ಗಮನಿಸಿದ ನವೀನ್, ದಾದಾಪೀರ್ ಸೇರಿದಂತೆ ಸ್ಥಳೀಯ ನಾಲ್ಕೈದು ಯುವಕರು ತಕ್ಷಣ ನದಿಗೆ ಹಾರಿ, ಭವಾನಿ ಹಾಗೂ 11 ತಿಂಗಳ ಮಗುವನ್ನು ರಕ್ಷಿಸಿದ್ದಾರೆ. ಬಳಿಕ ಇಬ್ಬರನ್ನೂ ಶಿವಮೊಗ್ಗ ಜಿಲ್ಲಾಸ್ಪತ್ರೆಯ ಐಸಿಯು ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತ ನದಿ ಪಾಲಾಗಿರುವ ಇಬ್ಬರು ಮಕ್ಕಳಿಗಾಗಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಬೋಟ್‌ಗಳು ಮತ್ತು ತೆಪ್ಪಗಳ ಮೂಲಕ ಸುಮಾರು 15ರಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಧಾವಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭವಾನಿ ಮೌನಕ್ಕೆ ಶರಣಾಗಿರುವ ಹಿನ್ನೆಲೆಯಲ್ಲಿ ಆತ್ಮಹತ್ಯೆ ಯತ್ನದ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಕಣ್ಣೆದುರೇ ಜಾನುವಾರುಗಳ ಸಾವು; ಮುನಿಯಾನ ತಾಂಡಾದಲ್ಲಿ ಮಾಲೀಕರ ಕಣ್ಣೀರು!

0

ಲಕ್ಷ್ಮೇಶ್ವರ: ಬೆಳಗಾಗುವಷ್ಟರಲ್ಲಿ ಮನೆಯ ಮುಂದೆ ಒಂದೊಂದೇ ಜಾನುವಾರುಗಳು ಉಸಿರು ಚೆಲ್ಲಿದ್ದವು. ಇನ್ನೂ ಕೆಲವು ಜಾನುವಾರುಗಳು ಬದುಕಿಗಾಗಿ ಹೋರಾಡುತ್ತಿದ್ದವು.

ನಿತ್ಯದ ಬದುಕಿಗೆ ಆಸರೆಯಾಗಿದ್ದ ಮೂಕ ಪ್ರಾಣಿಗಳನ್ನು ಕಣ್ಣೆದುರೇ ಕಳೆದುಕೊಂಡ ಮಾಲೀಕರ ಆಕ್ರಂದನ ಮುನಿಯಾನ ತಾಂಡಾದಲ್ಲಿ ಮಂಗಳವಾರ ಮನಕಲಕುವ ದೃಶ್ಯ ಸೃಷ್ಟಿಸಿತು.

ತಾಲೂಕಿನ ಮುನಿಯಾನ ತಾಂಡಾದಲ್ಲಿ ಕ್ರಿಮಿನಾಶಕ ಸಿಂಪಡಿಸಿದ ಹುಲ್ಲು ಅಥವಾ ಗೋವಿನ ಜೋಳದ ಬೆಳೆಯನ್ನು ಸೇವಿಸಿದ ಶಂಕೆಯಲ್ಲಿ ಎಂಟಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿದ್ದು, 10ಕ್ಕೂ ಅಧಿಕ ಜಾನುವಾರುಗಳು ಸಾವು-ಬದುಕಿನ ನಡುವೆ ಹೋರಾಡುತ್ತಿವೆ. ಜಾನುವಾರುಗಳ ಸರಣಿ ಸಾವು ತಾಂಡಾದ ಹೈನುಗಾರಿಕೆ ಕುಟುಂಬಗಳಲ್ಲಿ ಆತಂಕ ಮೂಡಿಸಿದೆ.

ಸುಮಾರು 30–35 ಮನೆಗಳಿರುವ ತಾಂಡಾದಲ್ಲಿ 300ಕ್ಕೂ ಹೆಚ್ಚು ದೇಶಿ ದನ ಹಾಗೂ ಎಮ್ಮೆಗಳಿವೆ. ಬಹುತೇಕ ಕುಟುಂಬಗಳ ಜೀವನ ಹೈನುಗಾರಿಕೆಯನ್ನೇ ಅವಲಂಬಿಸಿದೆ. ಒಂದೊಂದು ಕುಟುಂಬ 10ರಿಂದ 30ರವರೆಗೆ ಜಾನುವಾರುಗಳನ್ನು ಸಾಕಿಕೊಂಡಿದ್ದು, ಹಾಲು, ಮೊಸರು, ತುಪ್ಪ ಮಾರಾಟ ಹಾಗೂ ಸೆಗಣಿ ಗೊಬ್ಬರದಿಂದ ಬಂದ ಆದಾಯದಿಂದ ಜೀವನ ನಡೆಸುತ್ತಿವೆ.

ಸೋಮವಾರ ಸಂಜೆ ಎಂದಿನಂತೆ ತಾಂಡಾದ ಸುತ್ತಮುತ್ತಲಿನ ಜಮೀನುಗಳಲ್ಲಿ ಮೇಯಲು ತೆರಳಿದ್ದ ಜಾನುವಾರುಗಳು ರಾತ್ರಿ ಮನೆಗಳಿಗೆ ಮರಳಿದ್ದವು. ಎಲ್ಲವೂ ಸಹಜವಾಗಿಯೇ ಇತ್ತು. ಆದರೆ ಮಧ್ಯರಾತ್ರಿ ವೇಳೆಗೆ ಕೆಲ ಜಾನುವಾರುಗಳು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಉಸಿರಾಡಲು ಪರದಾಡತೊಡಗಿದವು. ಏನಾಗುತ್ತಿದೆ ಎಂಬುದು ತಿಳಿಯುವಷ್ಟರಲ್ಲಿ ಪರಿಸ್ಥಿತಿ ಕೈಮೀರಿತ್ತು.

ಗಾಬರಿಗೊಂಡ ಗ್ರಾಮಸ್ಥರು ನಸುಕಿನ ಜಾವ ಪಶುವೈದ್ಯಕೀಯ ಇಲಾಖೆಗೆ ಮಾಹಿತಿ ನೀಡಿದರು. ಕೂಡಲೇ ವೈದ್ಯರು, ಸಿಬ್ಬಂದಿ ಹಾಗೂ ಅಂಬುಲೆನ್ಸ್‌ ಸಹಿತ ತಾಂಡಾಕ್ಕೆ ತೆರಳಿ ಅಸ್ವಸ್ಥ ಜಾನುವಾರುಗಳಿಗೆ ಚಿಕಿತ್ಸೆ ಆರಂಭಿಸಿದರು. ರೋಗನಿರೋಧಕ ಚುಚ್ಚುಮದ್ದು ಹಾಗೂ ಸಲೈನ್ ನೀಡಿದರೂ ಕೆಲವು ಜಾನುವಾರುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಮಧ್ಯಾಹ್ನದ ವೇಳೆಗೆ ನಾಲ್ಕು ಆಕಳು, ಎರಡು ಎಮ್ಮೆ ಹಾಗೂ ಎರಡು ಎತ್ತು ಸೇರಿದಂತೆ ಎಂಟಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿದ್ದವು. ಮತ್ತೊಂದೆಡೆ 10ಕ್ಕೂ ಅಧಿಕ ಜಾನುವಾರುಗಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದವು. ತಮ್ಮ ಮನೆಯ ಸದಸ್ಯರಂತೆಯೇ ಸಾಕಿದ್ದ ಜಾನುವಾರುಗಳನ್ನು ಕಳೆದುಕೊಂಡ ಮಾಲೀಕರ ಕಣ್ಣೀರು ತಾಂಡಾದ ನೋವಿನ ಚಿತ್ರಣವಾಗಿತ್ತು.

ಸಕ್ರವ್ವ ಲಮಾಣಿ, ಮಂಗಲಪ್ಪ ಲಾಲಪ್ಪ ಲಮಾಣಿ, ಸೋಮಣ್ಣ ಲಮಾಣಿ, ಜಾನಪ್ಪ ಲಮಾಣಿ, ರಾಮಣ್ಣ ಲಮಾಣಿ, ಶಿವಪ್ಪ ಲಮಾಣಿ, ಜೇಮ್ಲಪ್ಪ ಲಮಾಣಿ ಸೇರಿದಂತೆ ಹಲವು ಮಾಲೀಕರು ಮೃತಪಟ್ಟ ಜಾನುವಾರುಗಳ ಬಳಿ ಕುಳಿತು ಕಣ್ಣೀರಿಟ್ಟರು. ವರ್ಷಗಳ ಕಾಲ ಸಾಕಿ, ಕುಟುಂಬದ ದುಡಿಮೆಗೆ ಆಸರೆಯಾಗಿದ್ದ ಜಾನುವಾರುಗಳು ಕೆಲವೇ ಗಂಟೆಗಳಲ್ಲಿ ಕಣ್ಮುಂದೆ ಇಲ್ಲವಾಗಿರುವ ನೋವು ಕುಟುಂಬಗಳನ್ನು ಕಂಗೆಡಿಸಿದೆ.

ಜಾನುವಾರುಗಳ ಸರಣಿ ಸಾವಿಗೆ ಕ್ರಿಮಿನಾಶಕ ಸೇವನೆಯೇ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸೋಮವಾರ ಮೇಯಲು ತೆರಳಿದ್ದ ಜಾನುವಾರುಗಳು ಕ್ರಿಮಿನಾಶಕ ಸಿಂಪಡಿಸಿದ ಹುಲ್ಲು ಅಥವಾ ಗೋವಿನ ಜೋಳದ ಬೆಳೆಯನ್ನು ತಿಂದಿರುವ ಸಾಧ್ಯತೆ ಇದೆ. ಆದರೆ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ.

ಮುನಿಯಾನ ತಾಂಡಾದಲ್ಲಿ ಜಾನುವಾರುಗಳು ಸಾವನ್ನಪ್ಪುತ್ತಿರುವ ಮಾಹಿತಿ ಲಭ್ಯವಾಗಿದೆ. ಬಹುತೇಕ ಜಾನುವಾರುಗಳು ಕ್ರಿಮಿನಾಶಕ ಸಿಂಪಡಿಸಿದ ಹುಲ್ಲು ಅಥವಾ ಗೋವಿನ ಜೋಳದ ಬೆಳೆಯನ್ನು ತಿಂದಿರುವ ಶಂಕೆ ಇದೆ. ಮೃತಪಟ್ಟ ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರವೇ ನಿಖರ ಕಾರಣ ತಿಳಿಯಲಿದೆ. ಅಸ್ವಸ್ಥ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ನಿಖರ ಮಾಹಿತಿಗಾಗಿ ಜಾನುವಾರುಗಳ ಹೊಟ್ಟೆಯ ಅಂಶದ ಮಾದರಿಯನ್ನು ಬಾಗಲಕೋಟೆಯ ಪ್ರಾಣಿ ರೋಗ ತಪಾಸಣಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಶಿರಹಟ್ಟಿ ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಿಂಗಪ್ಪ ಓಲೆಕಾರ ತಿಳಿಸಿದ್ದಾರೆ.

ಜಾನುವಾರುಗಳನ್ನೇ ನಂಬಿ ಬದುಕುತ್ತಿರುವ ಕುಟುಂಬಗಳಿಗೆ ಈ ಸಾವು ದೊಡ್ಡ ಆರ್ಥಿಕ ಹೊಡೆತ ನೀಡಿದೆ. ಒಂದು ಜಾನುವಾರು ಕಳೆದುಕೊಂಡರೂ ಕುಟುಂಬದ ದಿನನಿತ್ಯದ ಆದಾಯಕ್ಕೆ ಹೊಡೆತ ಬೀಳುವ ಪರಿಸ್ಥಿತಿಯಲ್ಲಿ, ಒಂದೇ ತಾಂಡಾದಲ್ಲಿ ಹಲವು ಜಾನುವಾರುಗಳನ್ನು ಕಳೆದುಕೊಂಡಿರುವುದು ಕುಟುಂಬಗಳ ಮುಂದಿನ ಬದುಕಿನ ಬಗ್ಗೆಯೂ ಪ್ರಶ್ನೆ ಮೂಡಿಸಿದೆ.

ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಕುಟುಂಬಗಳ ಜೀವನಾಧಾರವೇ ಕಳೆದುಹೋಗಿದೆ. ಸರ್ಕಾರ ತಕ್ಷಣ ಸ್ಪಂದಿಸಿ ಮೃತಪಟ್ಟ ಪ್ರತಿ ಜಾನುವಾರಿಗೆ ಕನಿಷ್ಠ ₹30 ಸಾವಿರ ಪರಿಹಾರ ನೀಡಬೇಕು ಎಂದು ಮುಖಂಡ ನೂರಪ್ಪ ಲಮಾಣಿ ಆಗ್ರಹಿಸಿದ್ದಾರೆ.

ಮುನಿಯಾನ ತಾಂಡಾದಲ್ಲಿ ಈಗ ಒಂದೇ ಬೇಡಿಕೆ—ಮೂಕ ಪ್ರಾಣಿಗಳ ಸಾವಿಗೆ ಕಾರಣವೇನು ಎಂಬುದು ಬೇಗ ಬಹಿರಂಗವಾಗಬೇಕು. ಅಸ್ವಸ್ಥ ಜಾನುವಾರುಗಳು ಬದುಕುಳಿಯಬೇಕು. ಜಾನುವಾರುಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರ ನೆರವಿನ ಹಸ್ತ ಚಾಚಬೇಕು. ಕಣ್ಣೀರಿನಲ್ಲಿ ಮುಳುಗಿರುವ ತಾಂಡಾದ ಕುಟುಂಬಗಳು ಈಗ ಸರ್ಕಾರದ ಸ್ಪಂದನೆಯತ್ತ ಎದುರು ನೋಡುತ್ತಿವೆ.