Home Blog Page 76

ಜೂ.30ರಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಆರಂಭ

0
ವಿಜಯಸಾಕ್ಷಿ ಸುದ್ದಿ, ಧಾರವಾಡ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಧಾರವಾಡ ಜಿಲ್ಲೆಯಲ್ಲಿ ಜೂನ್ 30ರಿಂದ ಅಕ್ಟೋಬರ್ 7ರವರೆಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ–2026 ಕಾರ್ಯ ನಡೆಯಲಿದ್ದು, ಈ ಪ್ರಕ್ರಿಯೆ ಯಶಸ್ವಿಯಾಗಿ ಜರುಗಲು ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳು ಸಹಕಾರ ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯ ಸಮಗ್ರತೆ ಕಾಪಾಡಿಕೊಳ್ಳುವುದು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅತ್ಯಗತ್ಯ ಎಂದರು.
“ಜಿಲ್ಲೆಯಲ್ಲಿ ಮತದಾರರ ಮ್ಯಾಪಿಂಗ್ ಕಾರ್ಯ ಈಗಾಗಲೇ ಶೇ.89.94ರಷ್ಟು ಪೂರ್ಣಗೊಂಡಿದ್ದು, ಶೇ.100 ಸಾಧಿಸುವ ಗುರಿ ಹೊಂದಲಾಗಿದೆ. ಮತಗಟ್ಟೆ ಮಟ್ಟದ ಏಜೆಂಟರು (ಬಿಎಲ್‌ಎ) ಹಾಗೂ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ಸಮನ್ವಯದಿಂದ ಕಾರ್ಯನಿರ್ವಹಿಸಬೇಕು” ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಡಿಸಿ ಗೀತಾ ಸಿ.ಡಿ., ಚುನಾವಣಾ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಪರಿಷ್ಕರಣೆ ವೇಳಾಪಟ್ಟಿ ಪ್ರಕಟ
ಭಾರತ ಚುನಾವಣಾ ಆಯೋಗ ಪ್ರಕಟಿಸಿದ ವೇಳಾಪಟ್ಟಿಯಂತೆ ಜೂನ್ 20ರಿಂದ 29ರವರೆಗೆ ಪೂರ್ವ ಸಿದ್ಧತೆ, ತರಬೇತಿ ಮತ್ತು ಮುದ್ರಣ ಕಾರ್ಯ, ಜೂನ್ 30ರಿಂದ ಜುಲೈ 29ರವರೆಗೆ ಮನೆಮನೆಗೆ ಭೇಟಿ, ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟ, ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ,
ಸೆಪ್ಟೆಂಬರ್ 5ರಿಂದ ಅಕ್ಟೋಬರ್ 3ರವರೆಗೆ ಅರ್ಜಿಗಳ ವಿಲೇವಾರಿ, ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ
“20 ವರ್ಷಗಳ ಬಳಿಕ ಸಮಗ್ರ ಪರಿಷ್ಕರಣೆ”
“2002-04ರ ನಂತರ ಇದೀಗ 20 ವರ್ಷಗಳ ಬಳಿಕ ಸಮಗ್ರ ಪರಿಷ್ಕರಣೆ ನಡೆಯುತ್ತಿದೆ. ಪುನರಾವರ್ತಿತ ಹೆಸರುಗಳು, ಮೃತರ ಹೆಸರುಗಳು ಹಾಗೂ ವಲಸೆಯಿಂದ ಉಂಟಾಗಿರುವ ದೋಷಗಳನ್ನು ಸರಿಪಡಿಸಲು ಈ ಪ್ರಕ್ರಿಯೆ ಸಹಕಾರಿಯಾಗಲಿದೆ” ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,665 ಮತಗಟ್ಟೆಗಳಿದ್ದು, ಮೇ 19ರ ವೇಳೆಗೆ ಒಟ್ಟು 16,23,933 ಮತದಾರರಿದ್ದಾರೆ. ಇದರಲ್ಲಿ 8,06,478 ಪುರುಷರು, 8,17,358 ಮಹಿಳೆಯರು ಹಾಗೂ 97 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿದ್ದಾರೆ.

‘ಹಿಂದೂ ಸಮಾವೇಶ’ಕ್ಕೆ ತೀವ್ರ ಪ್ರತಿರೋಧ

ವಿಜಯಸಾಕ್ಷಿ ಸುದ್ದಿ, ಗದಗ: “ಕೋಮುದ್ವೇಷ ಬಿತ್ತುವ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಇದೇ ತಿಂಗಳ ೩೧ರಂದು ನಗರದಲ್ಲಿ ಆಯೋಜಿಸಿರುವ ‘ಹಿಂದೂ ಸಮಾವೇಶ’ವು ಬಸವಾದಿ ಶರಣ ಪರಂಪರೆಯನ್ನು ನಾಶಗೊಳಿಸುವ ಹುನ್ನಾರವಾಗಿದೆ” ಎಂದು ಆರೋಪಿಸಿ, ಸಮಾನ ಮನಸ್ಕರು, ಬಸವಾದಿ ಶರಣರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು, “ಹಿಂದೂ ಸಮಾವೇಶ”ಕ್ಕೆ ಸಂಘಟಿತ ಪ್ರತಿರೋಧ ವ್ಯಕ್ತಪಡಿಸುವ ನಿರ್ಧಾರ ಕೈಗೊಂಡರು.
ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡ ಅಶೋಕ ಬರಗುಂಡಿ ಮಾತನಾಡಿ, “ಸಮತೆಯ ಬದುಕು ಕಟ್ಟಿಕೊಟ್ಟ ಶರಣರು ಇಷ್ಟಲಿಂಗದಲ್ಲಿ ಬೆರೆತು ಎಲ್ಲರೂ ಒಂದೇ ಎನ್ನುವ ಭಾವದಲ್ಲಿ ಬದುಕಿದರು. ಇದನ್ನು ಸಹಿಸದ ಮನುವಾದಿಗಳು ಹಾಗೂ ವೈದಿಕ ಮನಸ್ಥಿತಿಯವರು ಶರಣ ಪರಂಪರೆಯನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಗದಗದಲ್ಲಿ ಹಿಂದೂ ಸಮಾವೇಶ ನಡೆಸುವ ಮೂಲಕ ಬಸವಣ್ಣನವರ ವಿಚಾರಧಾರೆಗೆ ನುಗ್ಗುವ ಯತ್ನ ನಡೆಯುತ್ತಿದೆ. ಇದನ್ನು ನಾವೆಲ್ಲರೂ ಖಂಡಿಸಬೇಕು” ಎಂದು ಹೇಳಿದರು.
“ಗದಗದಲ್ಲಿ ಪ್ರತಿರೋಧ ವ್ಯಕ್ತವಾಗುವುದಿಲ್ಲವೆಂದು ಭಾವಿಸಿ ಆರ್‌ಎಸ್‌ಎಸ್ ಹಾಗೂ ಮನುವಾದಿ ಶಕ್ತಿಗಳು ಸಮಾವೇಶ ಹಮ್ಮಿಕೊಂಡಿವೆ. ಇದಕ್ಕೆ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಬೇಕು” ಎಂದು ಅವರು ಕರೆ ನೀಡಿದರು.
ದಲಿತ ಹೋರಾಟಗಾರ ಶರೀಫ್ ಬಿಳೆಯಲಿ ಮಾತನಾಡಿ, “ಒಂದು ವರ್ಷದ ಹಿಂದೆ ಆರ್‌ಎಸ್‌ಎಸ್ ಹಾಗೂ ಹಿಂದೂ ಸಂಘಟನೆಗಳು ಮಹಾಯಜ್ಞ, ಕುಂಭಮೇಳ ನಡೆಸಿದ್ದವು. ಈಗ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶ ನಡೆಸಲು ಮುಂದಾಗಿವೆ. ಬಸವಣ್ಣನವರ ವಚನಗಳನ್ನು ಮಾತ್ರವಲ್ಲ, ಇಡೀ ಶೋಷಿತ ವರ್ಗದ ಚಿಂತನೆಗಳನ್ನೇ ನಾಶಗೊಳಿಸುವ ಪ್ರಯತ್ನ ಇದಾಗಿದೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಲೇಬೇಕು” ಎಂದು ಹೇಳಿದರು.
ದಲಿತ ಮುಖಂಡ ಮುತ್ತು ಬಿಳೆಯಲಿ ಮಾತನಾಡಿ, “ಆರ್‌ಎಸ್‌ಎಸ್ ಪ್ರಚಾರಕರಾದ ಕನ್ಹೇರಿ ಸ್ವಾಮೀಜಿ ಎಲ್ಲೆಡೆ ಅಶ್ಲೀಲ ಹಾಗೂ ಪ್ರಚೋದನಕಾರಿ ಭಾಷಣಗಳ ಮೂಲಕ ಕೋಮುದ್ವೇಷ ಹರಡುತ್ತಿದ್ದಾರೆ. ಈಗ ಗದಗದ ಸೌಹಾರ್ದತೆಯನ್ನೇ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ” ಎಂದು ಆರೋಪಿಸಿದರು.
“ಈ ಹಿಂದೆ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಗದಗದಲ್ಲೂ ಜಿಲ್ಲೆಗೆ ಪ್ರವೇಶಿಸದಂತೆ ನೋಡಿಕೊಳ್ಳಬೇಕು. ವಚನ ದರ್ಶನ ಕಾರ್ಯಕ್ರಮದ ಸಂದರ್ಭದಲ್ಲಿಯೇ ನಾವು ಪ್ರತಿರೋಧ ವ್ಯಕ್ತಪಡಿಸಿದ್ದೆವು. ಇಂತಹ ಕೋಮುವಾದಿಗಳ ವಿರುದ್ಧ ಜಿಲ್ಲಾವ್ಯಾಪಿ ಹೋರಾಟ ನಡೆಸಬೇಕು” ಎಂದು ಹೇಳಿದರು.
“ಮಠಗಳ ನಿಲುವುಗಳ ಬಗ್ಗೆ ಆತ್ಮಾವಲೋಕನ ಅಗತ್ಯ”
ಬಂಡಾಯ ಸಾಹಿತಿ ಬಸವರಾಜ ಸೂಳಿಬಾವಿ ಮಾತನಾಡಿ, “ನಾವು ಭಾವನಾತ್ಮಕ ಹಾಗೂ ವೈಚಾರಿಕವಾಗಿ ಬಸವಣ್ಣನವರ ಆಶಯಗಳನ್ನು ಒಪ್ಪಿಕೊಂಡವರು. ಆದರೆ ಕೆಲವು ಮಠಗಳು ಲಿಂಗಾಯತ ಹಾಗೂ ಶರಣ ಸಂಸ್ಕೃತಿಯಂತೆ ನಡೆದುಕೊಳ್ಳುತ್ತಿಲ್ಲ. ಇಡೀ ಜಿಲ್ಲೆಯ ವಾತಾವರಣವೇ ಬೇರೆಯಾಗಬಹುದಾಗಿತ್ತು” ಎಂದು ಬೇಸರ ವ್ಯಕ್ತಪಡಿಸಿದರು.
ದಲಿತ ಹಿರಿಯ ಮುಖಂಡರಾದ ಎಸ್.ಎನ್. ಬಳ್ಳಾರಿ ಅವರು ಮಾತನಾಡಿ, “ತಿಳಿದವರೇ, ಅರಿವಿರುವವರೇ ಆಮಿಷಗಳಿಗೆ ಒಳಗಾಗಿ ಹಿಂದೂ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಇದು ದುಃಖಕರ ಸಂಗತಿ. ಆದ್ದರಿಂದ ಮನೆ ಮನೆಗೆ, ವಾರ್ಡ್ ವಾರ್ಡ್‌ಗೆ ತೆರಳಿ ಜಾಗೃತಿ ಮೂಡಿಸುವ ಮೂಲಕ ಸಮಾವೇಶದ ವಿರುದ್ಧ ಜನಾಭಿಪ್ರಾಯ ನಿರ್ಮಿಸಬೇಕು” ಎಂದು ಹೇಳಿದರು.
ಸಭೆಯಲ್ಲಿ ಬಸವರಾಜ ಎಂ. ಕಡೇಮನಿ, ಎಚ್.ಎಸ್. ಸೊಂಪೂರ, ಕೊಟ್ರಬಸಪ್ಪ ಚಟ್ಟಿ, ವಿ.ಕೆ. ಕರೇಗೌಡ್ರ, ದಿಲೀಪಕುಮಾರ ಹಲವಾಗಲಿ, ಪ್ರಕಾಶ ಅಸುಂಡಿ, ಮಂಜುನಾಥ ಹಗೇದಾಳ, ಎಸ್.ಐ. ಪವಾಡಗೌಡ್ರ, ಆನಂದ ಶಿಂಗಾಡಿ, ನಾಗಭೂಷಣ ಬಡಗನ್ನವರ, ಸುವರ್ಣ ಗಾಳಪ್ಪನವರ, ಸುಜಾತಾ ವಾರದ, ಮಂಗಳಾ ನಾಲವಾಡ, ಬಾಲರಾಜ ಅರಬರ, ಶಿವಾನಂದ ತಮ್ಮಣ್ಣವರ, ಪರಶು ಕಾಳೆ, ಅನಿಲ್ ಕಾಳೆ, ಬಸೂ ಬಿಳೆಯಲಿ, ಮಂಜುನಾಥ ಹಗೇದಾಳ ಸೇರಿದಂತೆ ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ಬಸವದಳ, ಮೇ ಸಾಹಿತ್ಯ ಮೇಳ, ದಲಿತ ಕಲಾ ಮಂಡಳಿ, ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಪೂರ್ವಭಾವಿ ಸಭೆಯ ಪ್ರಮುಖ ತೀರ್ಮಾನಗಳು
  • ಸಭೆಯಲ್ಲಿ ಚರ್ಚಿಸಿ ಈ ಕೆಳಗಿನ ತೀರ್ಮಾನಗಳನ್ನು ಕೈಗೊಳ್ಳಲಾಯಿತು
  • ನಿಜ ಶರಣರ ಸಮಾವೇಶ ಆಯೋಜಿಸಿ ವಚನ ಚಳುವಳಿಯನ್ನು ಮನೆಮನೆಗೂ ತಲುಪಿಸುವುದು
  • ಕೋಮುದ್ವೇಷ ಬಿತ್ತುತ್ತಿದ್ದಾರೆ ಎನ್ನಲಾದ ಕನ್ಹೇರಿ ಮಠದ ಸ್ವಾಮೀಜಿಗೆ ಗದಗ ಜಿಲ್ಲೆ ಪ್ರವೇಶ ನಿರ್ಬಂಧಿಸಲು ಆಗ್ರಹಿಸುವುದು
  • ಜಿಲ್ಲೆಯಾದ್ಯಂತ ಜಾಗೃತಿ ಅಭಿಯಾನ ನಡೆಸುವುದು
  • ಹಿಂದೂ ಸಮಾವೇಶಕ್ಕೆ ಸಂಘಟಿತ ರೀತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸುವುದು
“ ತೋಂಟದಾರ್ಯ ಮಠದ ಜಾತ್ರಾ ಸಮಿತಿಯ ಅಧ್ಯಕ್ಷರೇ ಈ ಹಿಂದೂ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ ಎಂದರೆ, ಆ ಮಠದ ಆಯ್ಕೆಗಳ ಬಗ್ಗೆ ಯೋಚನೆ ಮಾಡಬೇಕಿದೆ. ಇದು ಆರೋಪದ ಭಾಷೆಯಲ್ಲ, ಒಳಸಂಕಟದಿಂದ ಹೇಳುತ್ತಿರುವ ಮಾತು. ನಡೆಯಲಿರುವ ಹಿಂದೂ ಸಮಾವೇಶವನ್ನು ನಾವೆಲ್ಲರೂ ಪ್ರತಿಭಟಿಸಬೇಕಿದೆ”
ಬಸವರಾಜ ಸೂಳಿಬಾವಿ
ಬಂಡಾಯ ಸಾಹಿತಿ

ಶಾಂತಿ-ಸೌಹಾರ್ದತೆಯಿಂದ ಬಕ್ರೀದ್ ಆಚರಿಸಿ: ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪೂರಮಠ

ವಿಜಯಸಾಕ್ಷಿ ಸುದ್ದಿ, ಮುಳಗುಂದ: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸುವುದರ ಜೊತೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪೂರಮಠ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, “ಮುಳಗುಂದ ಪಟ್ಟಣವು ಶಾಂತಿ ಮತ್ತು ಸೌಹಾರ್ದತೆಗೆ ಹೆಸರಾಗಿದ್ದು, ಇಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಎಲ್ಲಾ ಹಬ್ಬ ಹರಿದಿನಗಳನ್ನು ಪರಸ್ಪರ ಸಹಕಾರದಿಂದ ಆಚರಿಸುತ್ತಿದ್ದಾರೆ” ಎಂದು ಹೇಳಿದರು.
“ಗೋವುಗಳ ಹತ್ಯೆ ಅಥವಾ ಅಕ್ರಮ ಸಾಗಾಟ ಕಂಡು ಬಂದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಅಪರಾಧ ಪ್ರಕರಣ ದಾಖಲಾಗುತ್ತದೆ. ತಪ್ಪಿತಸ್ಥರು ಶಿಕ್ಷೆಗೆ ಗುರಿಯಾಗುತ್ತಾರೆ. ಆದ್ದರಿಂದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದರ ಜೊತೆಗೆ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು” ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಪಿಎಸ್‌ಐ ಡಿ.ಎಂ. ಮುಲ್ಲಾ, ಸುಧಾ ಹಲಕಿ, ಮುಖಂಡರಾದ ಎ.ಡಿ. ಮುಜಾವಾರ, ದಾವಲಸಾಬ ಲಕ್ಷ್ಮೇಶ್ವರ, ದಾವೂದ್ ಜಮಾಲಸಾಬನವರ, ಲಾಲಾಸಾಬಪೀರ ಮಕಾಂದಾರ, ಮುನ್ನಾ ಡಾಲಾಯತ, ಎಂ.ಎ. ನದ್ದಿಮುಲ್ಲಾ, ಇಸಾಕ್ ಹೊಸಮನಿ, ರಾಜೇಸಾಬ ಸೈಯದಬಡೆ, ಜಾಫರ್ ಭದ್ರಾಪೂರ, ಖಲಂದರ ಗಾಡಿ ಹಾಗೂ ರಮೇಶ್ ಮ್ಯಾಗೇರಿ ಉಪಸ್ಥಿತರಿದ್ದರು.

IPL 2026: ಆರ್‌ಸಿಬಿಗೆ ಬಿಗ್ ರಿಲೀಫ್; ತಂಡಕ್ಕೆ ಸ್ಟಾರ್‌ ಆಟಗಾರ ರಿಟರ್ನ್‌!

ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಪ್ರಮುಖ ಆರಂಭಿಕ ಆಟಗಾರ ಫಿಲ್ ಸಾಲ್ಟ್ ವಾಪಸ್ಸಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಎಡಗೈ ಬೆರಳಿನ ಗಾಯಕ್ಕೆ ಒಳಗಾಗಿ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಅವರು ಇದೀಗ ಚೇತರಿಸಿಕೊಂಡಿದ್ದು, ಈ ವಾರಾಂತ್ಯದಲ್ಲಿ ತಂಡಕ್ಕೆ ಮರಳಲಿದ್ದಾರೆ ಎನ್ನಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಬೌಂಡರಿ ತಡೆಯಲು ಹೋಗಿ ಫಿಲ್ ಸಾಲ್ಟ್ ಗಾಯಕ್ಕೆ ತುತ್ತಾಗಿದ್ದರು. ಗಾಯದ ನಂತರ ಅವರು ಇಂಗ್ಲೆಂಡ್‌ಗೆ ಮರಳಿದ್ದರೆ, ಅವರ ಸ್ಥಾನಕ್ಕೆ ಜಾಕೋಬ್ ಬೆಥೆಲ್ ತಂಡದಲ್ಲಿ ಅವಕಾಶ ಪಡೆದಿದ್ದರು.

ಈಗ ಸಾಲ್ಟ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಭಾರತಕ್ಕೆ ವಾಪಸ್ ಆಗುವುದು ಖಚಿತವಾಗಿದೆ. ಆದರೆ ಶುಕ್ರವಾರ ಹೈದರಾಬಾದ್ (SRH) ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ತಂಡದ ಮೂಲಗಳು ತಿಳಿಸಿವೆ.

ಸಾಲ್ಟ್ ಗಾಯಕ್ಕಿಂತ ಮುನ್ನ 6 ಪಂದ್ಯಗಳಲ್ಲಿ ಆಡಿದ್ದು, 168.33ರ ಸ್ಟ್ರೈಕ್ ರೇಟ್‌ನಲ್ಲಿ 202 ರನ್ ಕಲೆಹಾಕಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 36 ಎಸೆತಗಳಲ್ಲಿ 78 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದು, ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಪಾತ್ರರಾಗಿದ್ದರು.

ಇದೇ ವೇಳೆ ಅಂಕಪಟ್ಟಿಯಲ್ಲಿ 18 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿರುವ ಆರ್‌ಸಿಬಿ, ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿದರೆ ಕ್ವಾಲಿಫೈಯರ್-1 ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಉತ್ತಮ ನೆಟ್ ರನ್‌ರೇಟ್ ಕಾಯ್ದುಕೊಳ್ಳುವುದು ಕೂಡ ತಂಡಕ್ಕೆ ಮುಖ್ಯವಾಗಿದೆ.

ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ಕೂಡ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯ ತೀವ್ರ ಪೈಪೋಟಿಯ ನಿರೀಕ್ಷೆ ಹುಟ್ಟಿಸಿದೆ.

ಮಳೆಯ ಅಬ್ಬರಕ್ಕೆ ಚಿಕ್ಕಮಗಳೂರು ತತ್ತರ: ನೀರಿನಿಂದ ಮುಳುಗಿದ ರಸ್ತೆ–ಅಂಡರ್‌ಪಾಸ್!

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭಾರಿ ಮಳೆಯ ಪರಿಣಾಮ ಹಲವು ಕಡೆ ಅವಾಂತರಗಳು ಸಂಭವಿಸಿರುವ ಘಟನೆ ವರದಿಯಾಗಿದೆ.

ಕಡೂರು ಮತ್ತು ಬೀರೂರು ಭಾಗಗಳಲ್ಲಿ ಸುರಿದ ನಿರಂತರ ಮಳೆಯಿಂದ ರಸ್ತೆಗಳು ಹಾಗೂ ರೈಲ್ವೆ ಅಂಡರ್‌ಪಾಸ್‌ಗಳು ಜಲಾವೃತಗೊಂಡು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ.

ಕಡೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಇದೇ ವೇಳೆ ಬಸವೇಶ್ವರ ಸರ್ಕಲ್ ಪ್ರದೇಶ ಕೆರೆಯಂತಾಗಿ ಮಾರ್ಪಟ್ಟಿದ್ದು, ಸ್ಥಳೀಯರಿಗೆ ಓಡಾಟ ಕಷ್ಟಕರವಾಗಿದೆ.

ಇನ್ನು ಕಡೂರು–ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ 173ರ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಂಡ ಪರಿಣಾಮ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಅನೇಕ ವಾಹನಗಳು ನೀರಿನಲ್ಲಿ ಸಿಲುಕಿಕೊಂಡು ಸವಾರರು ಪರದಾಡಿದ ಘಟನೆ ನಡೆದಿದೆ.

ಸ್ಥಳೀಯರು ತಕ್ಷಣ ನೀರು ತೆರವುಗೊಳಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದು, ಮುಂದಿನ ಮಳೆ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಆತಂಕ ವ್ಯಕ್ತವಾಗಿದೆ.

“ಹೆಸ್ಕಾಂ ಅಧಿಕಾರಿ ವಿರುದ್ಧ ಗುತ್ತಿಗೆದಾರರ ಆಕ್ರೋಶ!”

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗ ಕಚೇರಿಯಲ್ಲಿ ತಾಂತ್ರಿಕ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಗುರುರಾಜ್ ಸಿ. ಅವರನ್ನು ತಕ್ಷಣ ಬೇರಡೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕು ಸಂಘದ ಸದಸ್ಯರು ಸೋಮವಾರ ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಕಲ್ಯಾಣಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಸೂರಣಗಿ ಮಾತನಾಡಿ, ಗ್ರಾಹಕರು ವಿದ್ಯುತ್ ಸಂಪರ್ಕಕ್ಕಾಗಿ ಸಲ್ಲಿಸುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಮಂಜೂರಾತಿಗೆ ಕಳುಹಿಸುವ ಬದಲು ತಾಂತ್ರಿಕ ಸಹಾಯಕ ಗುರುರಾಜ್ ಸಿ. ಅವರು ಮೇಲಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಧಿಕೃತ ವಿದ್ಯುತ್ ಗುತ್ತಿಗೆದಾರರಾದ ನಮಗೆ ಹಾಗೂ ಗ್ರಾಹಕರಿಗೆ ವಿನಾಕಾರಣ ತೊಂದರೆ ನೀಡಿ ಕಡತಗಳನ್ನು ತಿರಸ್ಕರಿಸಲಾಗುತ್ತಿದೆ. ಸಣ್ಣಪುಟ್ಟ ನೆಪ ಹೇಳಿ ಕೆಲಸ ವಿಳಂಬ ಮಾಡುತ್ತಿರುವುದರಿಂದ ಗುತ್ತಿಗೆದಾರರ ಬದುಕೇ ಸಂಕಷ್ಟಕ್ಕೆ ಸಿಲುಕಿದೆ ಎಂದು ದೂರಿದರು.

ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಸುಮಾರು 20 ಅಧಿಕೃತ ಗುತ್ತಿಗೆದಾರರು ಕೆಇಆರ್‌ಸಿ ನಿಯಮಾನುಸಾರ ಸೇವೆ ಸಲ್ಲಿಸುತ್ತಿದ್ದು, ತಾಂತ್ರಿಕ ಪರಿಶೀಲನೆಗಾಗಿ ಸಲ್ಲಿಸುವ ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಲಾಗುತ್ತಿದೆ ಎಂದು ಆರೋಪಿಸಿದರು.

“ಇಂತಹ ಅಧಿಕಾರಿಯಿಂದ ನಮಗೆ ಕೆಲಸ ಸಾಧ್ಯವಾಗುತ್ತಿಲ್ಲ. ಅವರನ್ನು ತಕ್ಷಣ ಬೇರಡೆ ವರ್ಗಾವಣೆ ಮಾಡಿದರೆ ಮಾತ್ರ ಮುಂದಿನ ಕಾರ್ಯ ಮುಂದುವರಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿದ ಕಾರ್ಯನಿರ್ವಾಹಕ ಎಂಜಿನಿಯರ್ ಕಲ್ಯಾಣಶೆಟ್ಟಿ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಬಳಿಕ ಗುತ್ತಿಗೆದಾರರು ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ಭೇಟಿ ಮಾಡಿ, ಗುತ್ತಿಗೆದಾರರು ಹಾಗೂ ಗ್ರಾಹಕರಿಗೆ ತೊಂದರೆ ನೀಡುತ್ತಿರುವ ಅಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ. ಆಂಜಿನಪ್ಪ, ಸಂಘದ ಉಪಾಧ್ಯಕ್ಷ ಜಗನ್ನಾಥ ಕುಲಕರ್ಣಿ, ಕಾರ್ಯದರ್ಶಿ ಸಂತೋಷ ವಸ್ತ್ರದ, ಚಂದ್ರು ನಾವಿ, ಮೆಹಬೂಬಖಾನ್ ಪಠಾಣ, ದುಂಡಪ್ಪ ಸವಣೂರ, ಅಪ್ಪಣ್ಣ ಕುಬೇರ, ದಾದಾಪೀರ್ ಮಿರ್ಜಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಗ್ರಾಹಕರಿಗೆ ಸೇವೆ ನೀಡಬೇಕಾದ ಕಚೇರಿಯೇ ವಿಳಂಬದ ಕೇಂದ್ರವಾಗಬಾರದು.”

ಶರಣಪ್ಪ ಸೂರಣಗಿ

ಜಿಲ್ಲಾ ಘಟಕದ ಉಪಾಧ್ಯಕ್ಷ

ದೇವಾಲಯದ ವಾತಾವರಣದಿಂದ ಒತ್ತಡ ಕಡಿಮೆಯಾಗುತ್ತದೆಯೇ? ಇಲ್ಲಿವೆ ಕಾರಣಗಳು

ಹಿಂದೂ ಧರ್ಮದಲ್ಲಿ ಪೂಜೆಗೆ ವಿಶೇಷ ಮಹತ್ವವಿದ್ದು, ಅನೇಕರು ಪ್ರತಿನಿತ್ಯ ಮನೆ ಹಾಗೂ ದೇವಾಲಯಗಳಲ್ಲಿ ಪೂಜೆ, ಧಾರ್ಮಿಕ ಕೈಂಕರ್ಯಗಳಲ್ಲಿ ಭಾಗವಹಿಸುತ್ತಾರೆ.

ಕೆಲವರು ಸಂಕಷ್ಟದ ಸಮಯದಲ್ಲಿ ದೇವರನ್ನು ಆಶ್ರಯಿಸುವರೆಂದರೆ, ಇನ್ನೂ ಕೆಲವರು ದಿನನಿತ್ಯ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ದೇವಾಲಯಕ್ಕೆ ಹೋಗುವುದು ಕೇವಲ ಧಾರ್ಮಿಕ ಚಟುವಟಿಕೆಯಾಗಿರದೆ, ಮಾನಸಿಕ ಮತ್ತು ದೈಹಿಕವಾಗಿ ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎಂದು ನಂಬಲಾಗುತ್ತದೆ. ದೇವಾಲಯದ ಶಾಂತ ವಾತಾವರಣ, ಮಂತ್ರ ಪಠಣೆ, ಶಂಖ ಹಾಗೂ ಗಂಟೆಯ ಧ್ವನಿ ಮನಸ್ಸಿಗೆ ಸಕಾರಾತ್ಮಕ ಶಕ್ತಿ ನೀಡುತ್ತದೆ.

ದೇವಾಲಯಕ್ಕೆ ಭೇಟಿ ನೀಡುವುದರಿಂದ ಲಭಿಸುವ ಪ್ರಯೋಜನಗಳು:

ಮನಸ್ಸಿಗೆ ಶಾಂತಿ ನೀಡುತ್ತದೆ:

ದೇವಾಲಯಗಳಲ್ಲಿ ಧೂಪದ್ರವ್ಯ, ದೀಪ ಬೆಳಕು, ಮಂತ್ರ ಪಠಣೆ ಮತ್ತು ಶಂಖ-ಗಂಟೆಯ ಶಬ್ದಗಳು ವಾತಾವರಣವನ್ನು ಶುದ್ಧಗೊಳಿಸಿ ಮನಸ್ಸಿಗೆ ಶಾಂತಿ ನೀಡುತ್ತವೆ. ಇದರಿಂದ ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗುತ್ತವೆ.

ಒತ್ತಡ ಕಡಿಮೆ ಮಾಡುತ್ತದೆ:

ಮಂತ್ರ ಪಠಣೆ ಮತ್ತು ಧಾರ್ಮಿಕ ಧ್ವನಿಗಳು ಮನಸ್ಸನ್ನು ಶಾಂತಗೊಳಿಸಿ ದಿನನಿತ್ಯದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಏಕಾಗ್ರತೆ ಹೆಚ್ಚಿಸುತ್ತದೆ:

ದೇವರ ದರ್ಶನ, ಧ್ಯಾನ ಮತ್ತು ತಿಲಕ ಧಾರಣೆ ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸಲು ಸಹಕಾರಿ ಎಂದು ನಂಬಲಾಗುತ್ತದೆ.

ದೈಹಿಕ ಚಟುವಟಿಕೆ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ:

ದೇವಾಲಯಗಳಲ್ಲಿ ಬರಿಗಾಲಿನಲ್ಲಿ ನಡೆಯುವುದು ಮತ್ತು ಪ್ರದಕ್ಷಿಣೆ ಹಾಕುವುದು ಪಾದಗಳ ಒತ್ತಡ ಬಿಂದುಗಳನ್ನು ಸಕ್ರಿಯಗೊಳಿಸಿ ರಕ್ತಸಂಚಾರಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಶಕ್ತಿಯ ಮಟ್ಟ ಹೆಚ್ಚಿಸುತ್ತದೆ:

ಗಂಟೆಯ ಶಬ್ದ ಮತ್ತು ಧಾರ್ಮಿಕ ವಾತಾವರಣ ದೇಹದ ಶಕ್ತಿಯನ್ನು ಉತ್ತೇಜಿಸುತ್ತದೆ ಎಂದು ನಂಬಿಕೆ ಇದೆ.

ಸಕಾರಾತ್ಮಕ ಚಿಂತನೆ ಬೆಳೆಯುತ್ತದೆ:

ದೇವಾಲಯದ ಶಾಂತ ವಾತಾವರಣ ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡಿ ಸಕಾರಾತ್ಮಕ ಭಾವನೆಗಳನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಮಕ್ಕಳನ್ನು ದೇವಾಲಯಕ್ಕೆ ಕರೆದುಕೊಂಡು ಹೋಗುವುದರಿಂದ ಅವರು ಸಂಸ್ಕೃತಿ ಮತ್ತು ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಲಾಗುತ್ತದೆ.

ಮೋದಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಕಾಯುತ್ತಿದ್ದಾರೆ: ಶರದ್ ಪವಾರ್ ಮೆಚ್ಚುಗೆ

ಮುಂಬೈ: ರಾಜಕೀಯವಾಗಿ ಭಿನ್ನಾಭಿಪ್ರಾಯಗಳು ಇದ್ದರೂ ಪ್ರಧಾನಿ ನರೇಂದ್ರ ಮೋದಿ ದೇಶದ ಗೌರವವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಪಾಡಲು ಶ್ರಮಿಸುತ್ತಿದ್ದಾರೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಭಿನ್ನಾಭಿಪ್ರಾಯಗಳು ಸಹಜವಾಗಿವೆ. ಆದರೆ ದೇಶದ ಗೌರವದ ವಿಚಾರದಲ್ಲಿ ರಾಜಕೀಯವನ್ನು ತರಬಾರದು ಎಂದು ಹೇಳಿದರು. ಪ್ರಧಾನಿ ಮೋದಿ ವಿದೇಶಗಳಲ್ಲಿ ಭಾರತದ ಪ್ರತಿಷ್ಠೆಯನ್ನು ಉಳಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ಪಿ.ವಿ. ನರಸಿಂಹರಾವ್ ಹಾಗೂ ಮನಮೋಹನ್ ಸಿಂಗ್ ಅವರು ಸಹ ದೇಶದ ಭವಿಷ್ಯ ಮತ್ತು ಗೌರವಕ್ಕೆ ಆದ್ಯತೆ ನೀಡಿದ್ದರು ಎಂದು ಪವಾರ್ ಸ್ಮರಿಸಿದರು. ದೇಶದ ಹಿತಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ಅವಕಾಶ ಬಂದಾಗ ಎಲ್ಲರೂ ಒಂದೇ ಉದ್ದೇಶದಿಂದ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ತಮ್ಮ ರಾಜಕೀಯ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡ ಪವಾರ್, 1958ರಲ್ಲಿ ಬರಾಮತಿಯಿಂದ ಪುಣೆಗೆ ಬಂದ ಅನುಭವ ಹಾಗೂ ಯುವ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದ ಸಂದರ್ಭಗಳನ್ನು ಹಂಚಿಕೊಂಡರು. ಇದೇ ವೇಳೆ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಅವರನ್ನು ಭೇಟಿಯಾದ ಕ್ಷಣವನ್ನೂ ಅವರು ಸ್ಮರಿಸಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತು ಮಾತನಾಡಿದ ಪವಾರ್, ವಿದೇಶ ಪ್ರವಾಸದ ವೇಳೆ ಭಾರತದ ಗೌರವಕ್ಕೆ ಧಕ್ಕೆಯಾಗುವ ಯಾವುದೇ ವರ್ತನೆಯನ್ನು ಅವರು ಒಪ್ಪಿಕೊಳ್ಳುತ್ತಿರಲಿಲ್ಲ ಎಂದು ಹೇಳಿದರು.

ಸಫಾರಿಗಳಲ್ಲಿ ಇನ್ಮುಂದೆ ತೆರೆದ ವಾಹನಗಳಿಗೆ ಅವಕಾಶ ಇಲ್ಲ: ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ವನ್ಯಜೀವಿಧಾಮಗಳಲ್ಲಿ ನಡೆಯುವ ಸಫಾರಿಗಳಲ್ಲಿ ಇನ್ಮುಂದೆ ತೆರೆದ ಕ್ಯಾಂಪರ್ ವಾಹನಗಳ ಬದಲಿಗೆ ಸುರಕ್ಷಿತ ಬಸ್‌ಗಳನ್ನು ಬಳಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ದುಬಾರೆ ಆನೆ ಶಿಬಿರದಲ್ಲಿ ಎರಡು ಸಾಕಾನೆಗಳ ಕಾಳಗದ ವೇಳೆ ಪ್ರವಾಸಿ ಮಹಿಳೆ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಸಫಾರಿಗಳಲ್ಲಿ ಪ್ರವಾಸಿಗರ ಸುರಕ್ಷತೆ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅರಣ್ಯ ಸಚಿವರು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ನಿರ್ದೇಶನ ನೀಡಿದ್ದಾರೆ.

ರಾಜ್ಯದ ಬಂಡೀಪುರ, ನಾಗರಹೊಳೆ, ಕಾಳಿ, ಬಿಳಿಗಿರಿರಂಗನಬೆಟ್ಟ ಹಾಗೂ ಭದ್ರಾ ಹುಲಿ ಸಂರಕ್ಷಿತ ಪ್ರದೇಶಗಳ ಜೊತೆಗೆ ಮಲೆ ಮಹದೇಶ್ವರ ಬೆಟ್ಟ, ದಾಂಡೇಲಿ, ಕೆ.ಗುಡಿ ಸೇರಿದಂತೆ ವಿವಿಧ ವನ್ಯಜೀವಿಧಾಮಗಳಲ್ಲಿ ಸಫಾರಿ ವ್ಯವಸ್ಥೆ ಇದೆ. ಈ ಸ್ಥಳಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ದೇಶ-ವಿದೇಶಗಳಿಂದಲೂ ಪ್ರವಾಸಿಗರು ಹಾಗೂ ವನ್ಯಜೀವಿ ಪ್ರಿಯರು ಭೇಟಿ ನೀಡುತ್ತಾರೆ.

ಇದುವರೆಗೆ ಸಫಾರಿ ವೇಳೆ ಆನೆ, ಹುಲಿ ಸೇರಿದಂತೆ ಯಾವುದೇ ವನ್ಯಮೃಗಗಳು ವಾಹನಗಳ ಮೇಲೆ ದಾಳಿ ನಡೆಸಿ ಜೀವಹಾನಿ ಮಾಡಿದ ಘಟನೆಗಳು ವರದಿಯಾಗಿಲ್ಲ. ಆದರೂ ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಸಚಿವರು ತಿಳಿಸಿದ್ದಾರೆ.

ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇನ್ಮುಂದೆ ಸಂಪೂರ್ಣ ಸುರಕ್ಷಿತ ಬಸ್ ಸಫಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ. ಪ್ರಸ್ತುತ ಬಳಕೆಯಲ್ಲಿರುವ ಕ್ಯಾಂಪರ್ ವಾಹನಗಳಿಗೆ ಕಬ್ಬಿಣದ ಜಾಲರಿ ಅಥವಾ ಒಡೆಯಲಾಗದ ಗಾಜು ಅಳವಡಿಸಿ ಸುರಕ್ಷತಾ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಅದೇ ರೀತಿ ಯಾವುದೇ ಪ್ರವಾಸಿಗರು ಅರಣ್ಯದೊಳಗೆ ವಾಹನದಿಂದ ಇಳಿಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ಸಫಾರಿ ವಾಹನದಲ್ಲೂ ಪ್ರಥಮ ಚಿಕಿತ್ಸಾ ಕಿಟ್ ಇರಬೇಕು ಹಾಗೂ ಸಫಾರಿ ಕೇಂದ್ರಗಳ ಸಮೀಪ ಅಂಬುಲೆನ್ಸ್ ವ್ಯವಸ್ಥೆ ಕಡ್ಡಾಯವಾಗಿರಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

ಎಬೋಲಾಗೆ 136 ಮಂದಿ ಬಲಿ: ಮಾರಕ ಸೋಂಕಿನ ಬಗ್ಗೆ WHO ಕಳವಳ

ಕಿನ್ಶಾಸ: ಆಫ್ರಿಕಾ ಖಂಡದ ಕಾಂಗೋ ದೇಶದಲ್ಲಿ ಎಬೋಲಾ ಸೋಂಕಿನ ಭೀತಿ ಮತ್ತಷ್ಟು ಹೆಚ್ಚಾಗಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 136ಕ್ಕೆ ಏರಿಕೆಯಾಗಿದೆ. ಸೋಂಕಿನ ವೇಗದ ಹರಡುವಿಕೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತೀವ್ರ ಕಳವಳ ವ್ಯಕ್ತಪಡಿಸಿದೆ.

ಈ ಕುರಿತು ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಎಬೋಲಾ ಸೋಂಕನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಲಾಗುವುದಿಲ್ಲ. ಸೋಂಕಿನ ಹರಡುವಿಕೆ ಪ್ರಮಾಣ ಮತ್ತು ವೇಗ ಆತಂಕಕಾರಿ ಮಟ್ಟದಲ್ಲಿದೆ ಎಂದು ತಿಳಿಸಿದ್ದಾರೆ.

2014ರಿಂದ 2016ರ ಅವಧಿಯಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ಜೈರ್ ತಳಿಯ ವೈರಸ್‌ನಿಗಿಂತ ಭಿನ್ನ ಸ್ವರೂಪದ ಸೋಂಕು ಇದಾಗಿದ್ದು, ಸದ್ಯಕ್ಕೆ ಇದಕ್ಕೆ ಯಾವುದೇ ಲಸಿಕೆ ಲಭ್ಯವಿಲ್ಲ ಎಂದು ಹೇಳಲಾಗಿದೆ.

ಮೊದಲಿಗೆ ಇಟುರಿ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿದ್ದ ಸೋಂಕು ಈಗ ನೆರೆಯ ಉತ್ತರ ಕಿವು ಪ್ರಾಂತ್ಯಕ್ಕೂ ವ್ಯಾಪಿಸಿದೆ. ಸೋಂಕಿನ ಭೀತಿಯಿಂದಾಗಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎನ್ನಲಾಗಿದೆ.

ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ನೆರೆಯ ರಾಷ್ಟ್ರಗಳಾದ ರುವಾಂಡಾ, ಬರುಂಡಿ ಹಾಗೂ ಟಾಂಜಾನಿಯಾ ದೇಶಗಳು ಗಡಿ ತಪಾಸಣೆ, ಆರೋಗ್ಯ ಕಣ್ಗಾವಲು ಮತ್ತು ತುರ್ತು ಸಿದ್ಧತಾ ಕ್ರಮಗಳನ್ನು ಬಿಗಿಗೊಳಿಸಿವೆ.

ಆಫ್ರಿಕಾ ರೋಗ ನಿಯಂತ್ರಣ ಕೇಂದ್ರಗಳು ಈ ಪರಿಸ್ಥಿತಿಯನ್ನು ಖಂಡದ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿವೆ. ಲಸಿಕೆ ಲಭ್ಯವಿಲ್ಲದಿರುವ ಕಾರಣ ವೈರಸ್ ಹರಡುವಿಕೆ ತಡೆಯಲು ಕಾಂಗೋ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಟೆಡ್ರೊಸ್ ತಿಳಿಸಿದ್ದಾರೆ.

ಕಾಂಗೋ ಆರೋಗ್ಯ ಸಚಿವ ರೋಜರ್ ಕಂಬಾ ಮಾಹಿತಿ ನೀಡಿದ್ದು, ದೇಶಾದ್ಯಂತ 543 ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ 32 ಪ್ರಕರಣಗಳು ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢಪಟ್ಟಿವೆ. ಪ್ರಸ್ತುತ 69 ಮಂದಿ ಎಬೋಲಾ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

error: Content is protected !!