Home Blog Page 76

ಬಲ್ಡೋಟ ತೊಲಗಿಸಿ ಹೋರಾಟ 126ನೇ ದಿನಕ್ಕೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನಗರಸಭೆ ಎದುರು ಟೆಂಟ್‌ನಲ್ಲಿ ನಡೆಯುತ್ತಿರುವ ‘ಬಲ್ಡೋಟ ತೊಲಗಿಸಿ’ ಹೋರಾಟ 126ನೇ ದಿನಕ್ಕೆ ತಲುಪಿದೆ. ಮುಂದಿನ ಹೋರಾಟದ ರೂಪುರೇಷೆ ಕುರಿತು ಮಾ.7ರಂದು ಬೆಳಗ್ಗೆ 10 ಗಂಟೆಗೆ ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ‘ಬೆಂಗಳೂರು ಚಲೋ’ ಸಿದ್ಧತಾ ಸಭೆ ಕರೆಯಲಾಗಿದೆ ಎಂದು ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಡೆದ ಧರಣಿ ಮತ್ತು ಬಂದ್ ಹೋರಾಟ ಯಶಸ್ವಿಯಾದ ಹಿನ್ನೆಲೆ ಈ ಸಭೆ ಆಯೋಜಿಸಲಾಗಿದೆ. ಬಂದ್ ಯಶಸ್ವಿಗೊಳಿಸಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಮುಂದಿನ ಹೋರಾಟದ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಬಂದ್ ನಂತರ ಜನಪ್ರತಿನಿಧಿಗಳು ಬಾಧಿತ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ವಿಷಯದಲ್ಲಿ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದರು.

ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಮಾತನಾಡಿ, ಬಜೆಟ್‌ನಲ್ಲಿ ಬಾಧಿತ ಹಳ್ಳಿಗಳ ಆರೋಗ್ಯ ಸಮಸ್ಯೆ, ಪರಿಸರ ಹಾನಿ, ಬೆಳೆ ನಷ್ಟ ಹಾಗೂ ಸಾವುಗಳ ಕುರಿತು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಐಐಎಸ್‌ಸಿ ಮತ್ತು ಎಐಐಎಂಎಸ್ ಮೂಲಕ ಪರಿಸರ ಆರೋಗ್ಯ ಸಮೀಕ್ಷೆ ನಡೆಸಬೇಕು. ತುಂಗಭದ್ರಾ ನದಿ ಮಾಲಿನ್ಯ ನಿಯಂತ್ರಣಕ್ಕಾಗಿ ಶುದ್ಧೀಕರಣ ಯೋಜನೆ ರೂಪಿಸಿ ಅನುದಾನ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಧರಣಿಯಲ್ಲಿ ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್, ಎ.ಎಂ. ಮದರಿ, ಮಂಜುನಾಥ ಜಿ. ಗೊಂಡಬಾಳ, ಶರಣು ಡೊಳ್ಳಿನ, ಸರೋಜಾ ಬಾಕಳೆ, ಮೂಕಪ್ಪ ಮೇಸ್ತಿ, ಶರಣು ಗಡ್ಡಿ, ರುದ್ರಪ್ಪ ಭಂಡಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಬಸನಗೌಡ ಪಾಟೀಲ ಮೂರನೇ ಬಾರಿ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬಸನಗೌಡ (ರಾಜು) ವೆಂಕನಗೌಡ ಪಾಟೀಲ ಅಧ್ಯಕ್ಷರಾಗಿ ಹಾಗೂ ಫಕ್ಕೀರಪ್ಪ ಯಲ್ಲಪ್ಪ ಇಚ್ಚಂಗಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಹಾಗೂ ಚುನಾವಣಾಧಿಕಾರಿ ಪುಷ್ಪಾ ಕಡಿವಾಳ ಘೋಷಿಸಿದರು.

ಆರಂಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಸನಗೌಡ ಪಾಟೀಲ ಹಾಗೂ ನೀಲಪ್ಪ ಹತ್ತಿ, ಉಪಾಧ್ಯಕ್ಷ ಸ್ಥಾನಕ್ಕೆ ಫಕ್ಕೀರಪ್ಪ ಇಚ್ಚಂಗಿ ಮತ್ತು ಮಂಜುನಾಥ ಶಂಕಿನದಾಸರ ಸ್ಪರ್ಧೆ ಇದ್ದು, ಕೊನೆ ಕ್ಷಣದಲ್ಲಿ ರಾಜಕೀಯ ತಂತ್ರಗಾರಿಕೆಯಿಂದ ನೀಲಪ್ಪ ಹತ್ತಿ ಹಾಗೂ ಮಂಜುನಾಥ ದಾಸರ ತಮ್ಮ ನಾಮಪತ್ರಗಳನ್ನು ಹಿಂಪಡೆದ ಕಾರಣ ಬಸನಗೌಡ ಪಾಟೀಲ ಮತ್ತು ಫಕ್ಕೀರಪ್ಪ ಇಚ್ಚಂಗಿ ಅವಿರೋಧವಾಗಿ ಆಯ್ಕೆಯಾದರು.

ಬಸನಗೌಡ ಪಾಟೀಲ ಸತತ ಮೂರನೇ ಬಾರಿ ಅಧ್ಯಕ್ಷರಾಗಿರುವುದು ವಿಶೇಷವಾಗಿದೆ. ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಬ್ಯಾಂಕ್ ಎದುರು ಜಮಾಯಿಸಿದ್ದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಗೃಹಲಕ್ಷ್ಮಿ ಯೋಜನೆಗೆ ಭರ್ಜರಿ ಅನುದಾನ: ಗೃಹಿಣಿಯರಿಗೆ ಬಜೆಟ್ʼನಲ್ಲಿ ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಕರ್ನಾಟಕ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ದಾಖಲೆಯ 17ನೇ ಬಜೆಟ್ ಮಂಡಿಸಿರುವ ಅವರು, ರಾಜ್ಯದ ಅಭಿವೃದ್ಧಿ ಮತ್ತು ಜನಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಜೆಟ್‌ನಲ್ಲಿ ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಮೀಸಲಿರಿಸಲಾಗಿದೆ. ಈ ಯೋಜನೆಯ ಮೂಲಕ ರಾಜ್ಯದ ಲಕ್ಷಾಂತರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಸಿದ್ದರಾಮಯ್ಯ ಹೇಳಿದರು. ಜೊತೆಗೆ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ತಿಳಿಸಿದ್ದಾರೆ.

ಅಸ್ಸಾಂನಲ್ಲಿ ಸುಖೋಯ್ ಯುದ್ಧವಿಮಾನ ಪತನ: ಇಬ್ಬರು ಐಎಎಫ್ ಪೈಲಟ್‌ʼಗಳು ಹುತಾತ್ಮ

0

ದಿಸ್ಪುರ: ಅಸ್ಸಾಂ ರಾಜ್ಯದ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಸುಖೋಯ್ ಸು-30 ಎಂಕೆಐ ಯುದ್ಧ ವಿಮಾನ ಪತನಗೊಂಡ ಪರಿಣಾಮ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳು ಹುತಾತ್ಮರಾಗಿದ್ದಾರೆ.

ಹುತಾತ್ಮರಾದ ಪೈಲಟ್‌ಗಳನ್ನು ಸ್ಕ್ವಾಡ್ರನ್ ಲೀಡರ್ ಅನುಜ್ ಹಾಗೂ ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಎಂದು ಗುರುತಿಸಲಾಗಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ.

Su-30 MKI ಯುದ್ಧ ವಿಮಾನವು ತರಬೇತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಜೋರ್ಹತ್ ವಾಯುನೆಲೆಯಿಂದ ಹಾರಾಟ ಆರಂಭಿಸಿದ ಕೆಲವೇ ಸಮಯದಲ್ಲಿ ವಿಮಾನ ಸಂಪರ್ಕ ಕಡಿತಗೊಂಡಿತ್ತು. ನಂತರ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ದೂರದ ಗುಡ್ಡಗಾಡು ಪ್ರದೇಶದಲ್ಲಿ ಅದು ಪತನಗೊಂಡಿರುವುದು ಪತ್ತೆಯಾಗಿದೆ.

ರಷ್ಯಾ ಮೂಲದ ಈ ಯುದ್ಧ ವಿಮಾನದೊಂದಿಗೆ ರಾತ್ರಿ ಸುಮಾರು 7.42 ಗಂಟೆಗೆ ಸಂವಹನ ಕಳೆದುಹೋಗಿತ್ತು. ಬಳಿಕ ಬೆಟ್ಟ ಪ್ರದೇಶದಲ್ಲಿ ಭಾರಿ ಸ್ಫೋಟದ ಶಬ್ದ ಕೇಳಿಬಂದಿದ್ದು, ಬೆಂಕಿಯ ಉಂಡೆಯಂತೆ ಕಾಣಿಸಿಕೊಂಡುದನ್ನು ಸ್ಥಳೀಯರು ಗಮನಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಭಾರತೀಯ ವಾಯುಪಡೆ ತನಿಖೆ ಆರಂಭಿಸಿದೆ.

ಜನರೇ ಎಚ್ಚರ: ನಿತ್ಯ ನೀವು ಮಾಡುವ ಈ ತಪ್ಪುಗಳಿಂದ ಕಿವಿ ಕೇಳಿಸದಿರಬಹುದು ಹುಷಾರ್!

0

ದೇಹದ ಇತರ ಅಂಗಗಳಂತೆ ಕಿವಿಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ಅತ್ಯಂತ ಮುಖ್ಯ. ಆದರೆ ನಾವು ದಿನನಿತ್ಯ ಮಾಡುವ ಕೆಲವು ಸಣ್ಣ ತಪ್ಪುಗಳು ಕಿವಿಯ ಆರೋಗ್ಯಕ್ಕೆ ಹಾನಿ ಉಂಟುಮಾಡಿ ಕೇಳುವ ಸಾಮರ್ಥ್ಯ ಕಡಿಮೆಯಾಗಲು ಕಾರಣವಾಗಬಹುದು.

ಹಲವರು ಕಿವಿಯಲ್ಲಿ ಉಂಟಾಗುವ ಸಣ್ಣ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಇಂತಹ ನಿರ್ಲಕ್ಷ್ಯವು ಮುಂದಿನ ದಿನಗಳಲ್ಲಿ ಕಿವಿಗೆ ಗಂಭೀರ ತೊಂದರೆಗಳನ್ನುಂಟುಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ಆದ್ದರಿಂದ ಕಿವಿಯ ಆರೈಕೆಯಲ್ಲಿ ಜಾಗರೂಕತೆ ಅಗತ್ಯ.

ಬಹುತೇಕ ಜನರು ಕಿವಿಯಲ್ಲಿ ತುರಿಕೆ ಅಥವಾ ಅಸೌಕರ್ಯ ಕಂಡುಬಂದಾಗ ಕಾಟನ್ ಬಡ್ ಬಳಸಿ ಕಿವಿಯನ್ನು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ಕಿವಿಯೊಳಗೆ ಕಾಟನ್ ಬಡ್ ಹಾಕುವುದು ತಪ್ಪು ಅಭ್ಯಾಸವಾಗಿದೆ. ಇದರಿಂದ ಕಿವಿಯೊಳಗಿನ ಮೇಣ ಹೊರಬರುವ ಬದಲು ಇನ್ನಷ್ಟು ಒಳಗೆ ತಳ್ಳಲ್ಪಟ್ಟು ಕಿವಿಯಲ್ಲಿ ಅಡ್ಡಿಯಾಗುವ ಸಾಧ್ಯತೆ ಇದೆ. ಜೊತೆಗೆ ಕಡ್ಡಿ, ಹೇರ್ ಪಿನ್ ಅಥವಾ ಇತರ ವಸ್ತುಗಳನ್ನು ಕಿವಿಯೊಳಗೆ ಹಾಕುವುದರಿಂದ ಕಿವಿಯ ಒಳಭಾಗಕ್ಕೆ ಗಾಯವಾಗುವ ಅಪಾಯವೂ ಇದೆ. ಆದ್ದರಿಂದ ಕಾಟನ್ ಬಡ್ ಅನ್ನು ಕೇವಲ ಕಿವಿಯ ಹೊರಭಾಗವನ್ನು ಸ್ವಚ್ಛಗೊಳಿಸಲು ಮಾತ್ರ ಬಳಸಬೇಕು. ಕಿವಿಯಲ್ಲಿ ಮೇಣ ಹೆಚ್ಚು ಜಮಾಯಿಸಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ.

ಇನ್ನೂ ಕೆಲವರು ಕಿವಿಯಲ್ಲಿ ಎಣ್ಣೆ ಹಾಕುವುದು ಆರೋಗ್ಯಕರವೆಂದು ನಂಬುತ್ತಾರೆ. ಆದರೆ ವೈದ್ಯರ ಸಲಹೆ ಇಲ್ಲದೆ ಕಿವಿಗೆ ಎಣ್ಣೆ ಅಥವಾ ಯಾವುದೇ ದ್ರವ ಹಾಕುವುದು ಸರಿಯಲ್ಲ. ಇದರಿಂದ ಸೋಂಕು ಉಂಟಾಗುವ ಸಾಧ್ಯತೆ ಇದೆ. ಕೆಲ ಸಂದರ್ಭಗಳಲ್ಲಿ ಬ್ಯಾಕ್ಟೀರಿಯಾ ಅಥವಾ ಹುಳುಗಳ ಸೋಂಕು ಕಾಣಿಸಿಕೊಳ್ಳಬಹುದು. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ಯಾವುದೇ ದ್ರವವನ್ನು ಕಿವಿಗೆ ಹಾಕಬಾರದು ಎಂದು ತಜ್ಞರು ಹೇಳುತ್ತಾರೆ.

ಅದೇ ರೀತಿ ಜೋರಾದ ಶಬ್ದವನ್ನು ಹೆಚ್ಚು ಸಮಯ ಕೇಳುವುದೂ ಕಿವಿಯ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಮದುವೆ ಸಮಾರಂಭಗಳು ಅಥವಾ ಕಾರ್ಯಕ್ರಮಗಳಲ್ಲಿ ಜೋರಾದ ಸಂಗೀತ ಕೇಳುವುದು, ಹೆಡ್‌ಫೋನ್ ಅಥವಾ ಇಯರ್‌ಫೋನ್ ಮೂಲಕ ಹೆಚ್ಚಿನ ಶಬ್ದದಲ್ಲಿ ಹಾಡುಗಳನ್ನು ಕೇಳುವುದು ಕಿವಿಯ ಒಳಭಾಗದ ನರಗಳಿಗೆ ಹಾನಿ ಮಾಡಬಹುದು. ಇಯರ್‌ಫೋನ್ ಬಳಸುವಾಗ ಸಮಯಕ್ಕೆ ವಿರಾಮ ನೀಡುವುದು ಹಾಗೂ ಶಬ್ದದ ಮಟ್ಟವನ್ನು ಕಡಿಮೆ ಇಡುವುದು ಉತ್ತಮ ಅಭ್ಯಾಸವಾಗಿದೆ.

ಕಿವಿಯಲ್ಲಿ ನೋವು, ತುರಿಕೆ, ದ್ರವ ಹೊರಬರುವುದು ಅಥವಾ ಕೇಳುವ ಸಾಮರ್ಥ್ಯ ಕಡಿಮೆಯಾಗುವುದು ಮುಂತಾದ ಸಮಸ್ಯೆಗಳು ಕಂಡುಬಂದರೆ ಸ್ವಯಂ ಔಷಧಿ ಬಳಸಬಾರದು. ಯಾವುದೇ ಔಷಧಿ ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ. ತಲೆ ಸುತ್ತುವುದು ಅಥವಾ ಅಚಾನಕ್ ಕೇಳುವ ಶಕ್ತಿ ಕಡಿಮೆಯಾಗುವುದು ಕಂಡುಬಂದರೆ ಕೂಡಲೇ ತಜ್ಞರನ್ನು ಭೇಟಿ ಮಾಡಬೇಕು. ಒಟ್ಟಿನಲ್ಲಿ, ಕಿವಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಆರೈಕೆ ಮತ್ತು ಜಾಗೃತಿಯೇ ಅತ್ಯಂತ ಮುಖ್ಯವೆಂದು ತಜ್ಞರು ಸೂಚಿಸಿದ್ದಾರೆ.

ಸಿದ್ದರಾಮಯ್ಯರ 17ನೇ ಬಜೆಟ್‌ಗೆ ಕ್ಷಣಗಣನೆ: ಬಸ್ ನಿಲ್ದಾಣಗಳಲ್ಲೂ ನೇರ ಪ್ರಸಾರ!

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 2026–27ನೇ ಸಾಲಿನ ರಾಜ್ಯದ ಆಯವ್ಯಯವನ್ನು ವಿಧಾನಸೌಧದಲ್ಲಿ ಮಂಡಿಸಲಿದ್ದಾರೆ.

ಬೆಳಿಗ್ಗೆ 10.15ಕ್ಕೆ ಆರಂಭವಾಗುವ ಈ ಆಯವ್ಯಯ ಮಂಡನೆ ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ದಾಖಲೆಯ 17ನೇ ಆಯವ್ಯಯವಾಗಿರುವುದು ವಿಶೇಷವಾಗಿದೆ.

ಈ ಬಾರಿ ಆಯವ್ಯಯ ಮಂಡನೆಗೆ ಮತ್ತೊಂದು ವಿಶೇಷತೆಯೂ ಇದೆ. ರಾಜ್ಯದ ಜನತೆಗೆ ಆಯವ್ಯಯ ಭಾಷಣವನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ಮೊದಲ ಬಾರಿಗೆ ರಾಜ್ಯದ ಹಲವು ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಅಳವಡಿಸಲಾದ ಎಲ್‌ಇಡಿ ಹಾಗೂ ದೂರದರ್ಶನ ಪರದೆಗಳ ಮೂಲಕ ನೇರ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ವ್ಯವಸ್ಥೆಯನ್ನು ಕೈಗೊಂಡಿದ್ದು, ಇಂದು ಬೆಳಿಗ್ಗೆ 10.15ರಿಂದ ಆಯವ್ಯಯ ಭಾಷಣದ ನೇರ ಪ್ರಸಾರ ನಡೆಯಲಿದೆ. ಆಯವ್ಯಯ ಮಂಡನೆಯ ಬಳಿಕ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿಯೂ ಇದೇ ಪರದೆಗಳ ಮೂಲಕ ಪ್ರಸಾರವಾಗಲಿದೆ.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆಯ 17ನೇ ಬಾರಿ ಆಯವ್ಯಯ ಮಂಡನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕುತೂಹಲ ಹೆಚ್ಚಾಗಿದೆ. ಈ ನಡುವೆ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಅಭಿಮಾನಿಗಳು ವಿಶಿಷ್ಟವಾಗಿ ಶುಭಾಶಯಗಳನ್ನು ತಿಳಿಸಿದ್ದಾರೆ. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಸುಮಾರು 8 ಸಾವಿರ ಚದರ ಅಡಿ ಪ್ರದೇಶದಲ್ಲಿ ಕಲಾವಿದ ಪುನೀತ್ ಅವರು ಬೃಹತ್ ರಂಗೋಲಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ರಚಿಸಿದ್ದಾರೆ.

ಕರ್ನಾಟಕದ ಭೂಪಟದ ಆಕೃತಿಯನ್ನು ಸೃಷ್ಟಿಸಿ ಅದರೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯವ್ಯಯ ಮುಂಗಡ ಪತ್ರವನ್ನು ಹಿಡಿದಿರುವ ರೀತಿಯಲ್ಲಿ ಚಿತ್ರಣ ಮೂಡಿಸಿರುವುದು ವಿಶೇಷವಾಗಿದೆ. ಒಟ್ಟಿನಲ್ಲಿ ಇಂದು ದಾಖಲೆ ಸೃಷ್ಟಿಸುವ ಆಯವ್ಯಯ ಮಂಡನೆ ನಡೆಯಲಿರುವ ಹಿನ್ನೆಲೆಯಲ್ಲಿ ತವರು ಜಿಲ್ಲೆಯಲ್ಲಿ ಅಭಿಮಾನಿಗಳು ಭರ್ಜರಿ ಬೆಂಬಲ ಸೂಚಿಸಿದ್ದಾರೆ.

 

ಗದಗದಲ್ಲಿ ಭೀಕರ ಅಪಘಾತ: ಕಾರಿಗೆ ಡಿಕ್ಕಿ ಹೊಡೆದ ಬೈಕ್ – ಮೂವರು ಸವಾರರು ಸ್ಥಳದಲ್ಲೇ ಸಾವು

0

ಗದಗ: ಜಿಲ್ಲೆಯ ಮುನ್ಡರಗಿ ತಾಲೂಕಿನ ಮೇವುಂಡಿ ಗ್ರಾಮದ ಸಮೀಪ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಯುವಕರು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಶಿವಪ್ಪ ಪಾಟ್ಲಿ (35), ಮುತ್ತಪ್ಪ ಮುದುಗಣ್ಣವರ್ (32) ಹಾಗೂ ಆನಂದ ಲಕ್ಷ್ಮೇಶ್ವರಮಠ (29) ಎಂದು ಗುರುತಿಸಲಾಗಿದೆ. ಮೂವರೂ ಜಂತ್ಲಿ ಗ್ರಾಮದ ನಿವಾಸಿಗಳಾಗಿದ್ದರು.

ಮುನ್ಡರಗಿ ಪಟ್ಟಣದಿಂದ ಜಂತ್ಲಿ ಗ್ರಾಮಕ್ಕೆ ಒಂದೇ ಬೈಕ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇದೇ ವೇಳೆ ಡೋಣಿ ಗ್ರಾಮದಿಂದ ಮುನ್ಡರಗಿ ಮಾರ್ಗವಾಗಿ ಹಿರೇಹಡಗಲಿ ಕಡೆಗೆ ಕಾರು ತೆರಳುತ್ತಿತ್ತು.

ಬೈಕ್ ಸವಾರರು ಅತಿವೇಗ ಹಾಗೂ ಬೇಜವಾಬ್ದಾರಿ ಚಾಲನೆ ಮಾಡುತ್ತಿದ್ದ ಕಾರಣ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಶಿವಪ್ಪ ಮತ್ತು ಆನಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಮುತ್ತಪ್ಪನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ.

ಘಟನೆಯಲ್ಲಿ ಕಾರು ಚಾಲಕನಿಗೂ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಮುನ್ಡರಗಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಅಮೆರಿಕ ದಾಳಿಯಿಂದ ಮುಳುಗಿದ ಇರಾನ್ ಯುದ್ಧನೌಕೆ: ರಕ್ಷಣೆಗೆ ಧಾವಿಸಿದ ಭಾರತೀಯ ನೌಕಾಪಡೆ

0

ನವದೆಹಲಿ: ಅಮೆರಿಕದ ದಾಳಿಯ ನಂತರ ಹಿಂದೂ ಮಹಾಸಾಗರದಲ್ಲಿ ಮುಳುಗಿದ ಇರಾನ್ ದೇಶದ ಯುದ್ಧ ನೌಕೆಯಲ್ಲಿದ್ದ ಸಿಬ್ಬಂದಿಗೆ ನೆರವು ಒದಗಿಸಲು ಭಾರತೀಯ ನೌಕಾಪಡೆ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.

ಅಮೆರಿಕದ ಜಲಾಂತರ್ಗಾಮಿ ನೌಕೆಯಿಂದ ನಡೆದ ಟಾರ್ಪಿಡೊ ದಾಳಿಯಿಂದ ಇರಾನ್ ದೇಶದ ‘ಐರಿಸ್ ದೇನಾ’ ಎಂಬ ಯುದ್ಧ ನೌಕೆ ಸಂಕಷ್ಟಕ್ಕೀಡಾಗಿ ಮುಳುಗಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಮಾರ್ಚ್ 4ರ ಮುಂಜಾನೆ ಕೊಲಂಬೊದಲ್ಲಿರುವ ಸಾಗರ ರಕ್ಷಣಾ ಸಮನ್ವಯ ಕೇಂದ್ರಕ್ಕೆ ಐರಿಸ್ ದೇನಾ ನೌಕೆಯಿಂದ ಸಂಕಷ್ಟ ಸಂದೇಶ ಬಂದಿದ್ದು, ಆ ನೌಕೆ ಶ್ರೀಲಂಕಾದ ಗ್ಯಾಲೆ ನಗರದಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು 20 ಸಮುದ್ರ ಮೈಲು ದೂರದಲ್ಲಿದ್ದ ಪ್ರದೇಶದಲ್ಲಿ ಮುಳುಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ಪ್ರದೇಶವು ಶ್ರೀಲಂಕಾದ ಜವಾಬ್ದಾರಿಯಲ್ಲಿರುವ ಶೋಧ ಮತ್ತು ರಕ್ಷಣಾ ವ್ಯಾಪ್ತಿಗೆ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿ ದೊರಕುತ್ತಿದ್ದಂತೆಯೇ ಭಾರತೀಯ ನೌಕಾಪಡೆ ತಕ್ಷಣ ಕಾರ್ಯಚಟುವಟಿಕೆ ಆರಂಭಿಸಿತು. ಶ್ರೀಲಂಕಾ ನೌಕಾಪಡೆ ಮುನ್ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ ಬೆಂಬಲ ನೀಡುವ ಉದ್ದೇಶದಿಂದ ದೀರ್ಘ ದೂರದ ಕಡಲ ಗಸ್ತು ವಿಮಾನವನ್ನು ಬೆಳಿಗ್ಗೆ ನಿಯೋಜಿಸಲಾಯಿತು. ಅಗತ್ಯವಿದ್ದಲ್ಲಿ ಗಾಳಿಯಿಂದ ರಕ್ಷಣಾ ದೋಣಿಗಳನ್ನು ಕೆಳಗೆ ಬಿಡಲು ಸಿದ್ಧವಾಗಿದ್ದ ಮತ್ತೊಂದು ವಿಮಾನವನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಇದೇ ವೇಳೆ ಸಮೀಪ ಪ್ರದೇಶದಲ್ಲಿ ತರಬೇತಿ ಕಾರ್ಯದಲ್ಲಿ ತೊಡಗಿದ್ದ ಭಾರತೀಯ ನೌಕಾಪಡೆಯ ತರಬೇತಿ ಹಡಗು ‘ಐಎನ್‌ಎಸ್ ತರಂಗಿಣಿ’ಗೆ ಕೂಡ ಶೋಧ ಕಾರ್ಯದಲ್ಲಿ ಭಾಗವಹಿಸಲು ಸೂಚನೆ ನೀಡಲಾಗಿದ್ದು, ಅದು ಸಂಜೆ ವೇಳೆಗೆ ಘಟನಾ ಸ್ಥಳದ ಸಮೀಪ ತಲುಪಿತು. ಆಗಾಗಲೇ ಶ್ರೀಲಂಕಾ ನೌಕಾಪಡೆ ಮತ್ತು ಇತರ ಸಂಬಂಧಿತ ಸಂಸ್ಥೆಗಳು ಶೋಧ ಹಾಗೂ ರಕ್ಷಣಾ ಕಾರ್ಯವನ್ನು ಆರಂಭಿಸಿತ್ತು.

ಇನ್ನೂ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಮೀಕ್ಷಾ ಹಡಗು ‘ಐಎನ್‌ಎಸ್ ಇಕ್ಷಾಕ್’ ಅನ್ನು ಕೊಚ್ಚಿ ಬಂದರಿನಿಂದ ಕಳುಹಿಸಲಾಗಿದೆ. ಮುಳುಗಿದ ನೌಕೆಯಲ್ಲಿದ್ದ ಸಿಬ್ಬಂದಿಯ ಪತ್ತೆಗಾಗಿ ಸಮುದ್ರದಲ್ಲಿ ಶೋಧ ಕಾರ್ಯ ಮುಂದುವರಿದಿದೆ.

ಮಾರ್ಚ್ 4ರಂದು ಶ್ರೀಲಂಕಾದ ದಕ್ಷಿಣ ಕರಾವಳಿಯ ಗ್ಯಾಲೆ ನಗರದಿಂದ ಸುಮಾರು 40 ಸಮುದ್ರ ಮೈಲು ದೂರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆಯೊಂದು ಇರಾನ್ ದೇಶದ ಐರಿಸ್ ದೇನಾ ಯುದ್ಧ ನೌಕೆಯ ಮೇಲೆ ದಾಳಿ ನಡೆಸಿದ್ದು, ಅದರ ಪರಿಣಾಮವಾಗಿ ನೌಕೆ ಮುಳುಗಿದ ಘಟನೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಮತ್ತು ಶ್ರೀಲಂಕಾ ನೌಕಾಪಡೆಗಳ ನಡುವೆ ಸಮನ್ವಯದಿಂದ ಶೋಧ ಹಾಗೂ ರಕ್ಷಣಾ ಕಾರ್ಯ ಮುಂದುವರಿಯುತ್ತಿದೆ ಎಂದು ತಿಳಿದುಬಂದಿದೆ.

ರಷ್ಯಾ ತೈಲ ಖರೀದಿಗೆ ಭಾರತಕ್ಕೆ 30 ದಿನಗಳ ವಿನಾಯಿತಿ ಕೊಟ್ಟ ಅಮೆರಿಕ

0

ನವದೆಹಲಿ: ಇರಾನ್ ದೇಶದೊಂದಿಗೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ ದೇಶದಿಂದ ಕಚ್ಚಾ ತೈಲ ಖರೀದಿಸಲು ಭಾರತಕ್ಕೆ ಅಮೆರಿಕ ಸರ್ಕಾರ 30 ದಿನಗಳ ವಿನಾಯಿತಿ ನೀಡಿದೆ. ಇದರಿಂದ ಭಾರತದ ಇಂಧನ ಪೂರೈಕೆಗೆ ತಾತ್ಕಾಲಿಕ ನೆರವು ದೊರಕುವ ಸಾಧ್ಯತೆ ಇದೆ.

ಮಾರ್ಚ್ 5, 2026 ರಂದು ಹಡಗುಗಳಲ್ಲಿ ತುಂಬಿಸಲಾದ ರಷ್ಯಾ ಮೂಲದ ಕಚ್ಚಾ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ ಮತ್ತು ಮಾರಾಟಕ್ಕೆ ಅನುಮತಿ ನೀಡುವ ವಿಶೇಷ ಪರವಾನಗಿಯನ್ನು ಅಮೆರಿಕದ ಖಜಾನೆ ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ ನೀಡಿದೆ. ನಿರ್ಬಂಧಕ್ಕೊಳಗಾದ ಹಡಗುಗಳ ಮೂಲಕ ನಡೆದ ವ್ಯವಹಾರಗಳಿಗೂ ಸೇರಿದಂತೆ ಈ ಅನುಮತಿ ಏಪ್ರಿಲ್ 3, 2026ರವರೆಗೆ ಜಾರಿಯಲ್ಲಿರಲಿದೆ ಎಂದು ತಿಳಿಸಲಾಗಿದೆ.

ಮಧ್ಯಪ್ರಾಚ್ಯ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಜಾಗತಿಕ ಇಂಧನ ಮಾರುಕಟ್ಟೆಯನ್ನು ಸ್ಥಿರಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದ್ವಿಪಕ್ಷೀಯ ಸಂಬಂಧಗಳ ಮಹತ್ವವನ್ನು ಒತ್ತಿಹೇಳುತ್ತಾ ಅಮೆರಿಕದ ಅಧಿಕಾರಿಗಳು ಭಾರತವನ್ನು ಪ್ರಮುಖ ಪಾಲುದಾರ ದೇಶವೆಂದು ಹೇಳಿದ್ದಾರೆ.

ಉಕ್ರೇನ್ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ರಷ್ಯಾ ಮೇಲೆ ಒತ್ತಡ ಹೇರುವ ಪ್ರಯತ್ನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ನವೆಂಬರ್‌ನಲ್ಲಿ ರಷ್ಯಾದ ಪ್ರಮುಖ ತೈಲ ಕಂಪನಿಗಳಾದ ಲುಕೋಯಿಲ್ ಮತ್ತು ರೋಸ್‌ನೆಫ್ಟ್ ಮೇಲೆ ನಿರ್ಬಂಧ ವಿಧಿಸಿದ್ದರು.

ಭಾರತಕ್ಕೆ ರಷ್ಯಾದ ಕಚ್ಚಾ ತೈಲ ಆಮದು ಜನವರಿಯಲ್ಲಿ ದಿನಕ್ಕೆ ಸುಮಾರು 1.1 ಮಿಲಿಯನ್ ಬ್ಯಾರೆಲ್ ಮಟ್ಟಕ್ಕೆ ಇಳಿದಿದ್ದು, ಇದು ನವೆಂಬರ್ 2022 ನಂತರದ ಕನಿಷ್ಠ ಮಟ್ಟವಾಗಿದೆ. ಆದರೆ ಫೆಬ್ರವರಿಯಲ್ಲಿ ರಷ್ಯಾದ ತೈಲದ ಪಾಲು ಮತ್ತೆ ಸುಮಾರು 30 ಶೇಕಡಕ್ಕೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಮಧ್ಯಪ್ರಾಚ್ಯದ ಹಲವೆಡೆ ತೈಲ ಉತ್ಪಾದನೆಗೆ ಅಡಚಣೆ ಉಂಟಾಗಿದೆ. ಜಾಗತಿಕ ತೈಲ ಪೂರೈಕೆಯ ಸುಮಾರು 20 ಶೇಕಡ ಸಾಗುವ ಪ್ರಮುಖ ಮಾರ್ಗವಾದ ಸ್ಟ್ರೇಟ್ ಆಫ್ ಹೋರ್ಮುಝ್ ಪ್ರದೇಶವನ್ನು ಇರಾನ್ ದಿಗ್ಬಂಧನಗೊಳಿಸಿರುವುದರಿಂದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿಗರೇ ಅಲರ್ಟ್: ಹೆಚ್ಚಾಯ್ತು ಬಿಸಿಲಿನ ಝಳ! ಇನ್ನೂ ಕೆಲ ದಿನ ಇದೇ ಪರಿಸ್ಥಿತಿ

ಬೆಂಗಳೂರು: ಇಂದು ಬೆಂಗಳೂರಿನಲ್ಲಿ ತಾಪಮಾನದಲ್ಲಿ ಸ್ವಲ್ಪ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನ ಏರಿಕೆಯಾಗುತ್ತಿದ್ದು, ಒಣ ಹವಾಮಾನದ ವಾತಾವರಣ ಮುಂದುವರಿದಿದೆ. ಇಂದಿನಿಂದ ಕೆಲ ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ. ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಇದೇ ಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಹಲವು ದಿನಗಳಿಂದ ಮುಂದುವರಿದಿರುವ ಒಣಹವೆಯ ವಾತಾವರಣ ಇಂದೂ ಮುಂದುವರಿಯಲಿದೆ. ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆ ಕೂಡ ಎಚ್ಚರಿಕೆ ನೀಡಿದೆ.

ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದ್ದು, ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಒಟ್ಟಿನಲ್ಲಿ ಈ ವರ್ಷವೂ ಬೆಂಗಳೂರಿಗರಿಗೆ ಕಠಿಣ ಬೇಸಿಗೆ ಎದುರಾಗುವ ಲಕ್ಷಣಗಳು ಕಂಡುಬರುತ್ತಿವೆ.

error: Content is protected !!