Home Blog Page 8

ಸಚಿವ ಸಂಪುಟವೋ… ಭ್ರಷ್ಟರ ಸಂಪುಟವೋ: ರಾಜು ಕುರುಡಗಿ ವಾಗ್ದಾಳಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರಿಗೆ ಸಚಿವ ಸ್ಥಾನ ನೀಡಿರುವುದನ್ನು ಖಂಡಿಸಿರುವ ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ತೋಟಪ್ಪ (ರಾಜು) ಕುರುಡಗಿ, “ಇದು ಸಚಿವ ಸಂಪುಟವಲ್ಲ, ಭ್ರಷ್ಟರ ಸಂಪುಟ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣದಲ್ಲಿ ಆರೋಪ ಎದುರಿಸಿದ್ದ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದು ದುರದೃಷ್ಟಕರ ಬೆಳವಣಿಗೆ ಎಂದು ಆರೋಪಿಸಿದರು.

ಭ್ರಷ್ಟಾಚಾರ, ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಆರೋಪಗಳಿರುವ ವ್ಯಕ್ತಿಗಳಿಗೆ ಸಚಿವ ಸ್ಥಾನ ನೀಡಿರುವುದು ಉತ್ತಮ ಆಡಳಿತ ಹಾಗೂ ಸಾರ್ವಜನಿಕ ಜೀವನದ ನೈತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಅವರು ಟೀಕಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಸುಮಾರು ₹187 ಕೋಟಿ ಹಣ ದುರುಪಯೋಗ ಪ್ರಕರಣ ಗಂಭೀರವಾಗಿದ್ದು, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾದ ಸಾರ್ವಜನಿಕ ಹಣ ದುರ್ಬಳಕೆಯಾಗಿರುವ ಆರೋಪದ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಸಚಿವ ಸ್ಥಾನಗಳು ಯಾವುದೇ ಅನುಮಾನ ಅಥವಾ ವಿವಾದಗಳಿಗೆ ಎಡೆಮಾಡಿಕೊಡುವಂತಿರಬಾರದು. ಭ್ರಷ್ಟಾಚಾರವು ಕೇವಲ ಹಣದ ದುರುಪಯೋಗವಲ್ಲ, ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಯುವಕರು ಹಾಗೂ ಪರಿಶಿಷ್ಟ ಜಾತಿ-ಪಂಗಡದ ಜನರ ಹಕ್ಕುಗಳಿಗೆ ಆಗುವ ಅನ್ಯಾಯವಾಗಿದೆ ಎಂದು ಹೇಳಿದರು.

ಸಾರ್ವಜನಿಕರ ತೆರಿಗೆ ಹಣವನ್ನು ಶಿಕ್ಷಣ, ಆರೋಗ್ಯ, ಉದ್ಯೋಗ, ಕೌಶಲಾಭಿವೃದ್ಧಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಬೇಕು. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಚಿವರನ್ನು ಸಂಪುಟದಿಂದ ಕೈಬಿಡಬೇಕು. ಇಲ್ಲದಿದ್ದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮತ್ತು ಪ್ರತಿಭಟನೆ ನಡೆಸಲಿದೆ ಎಂದು ರಾಜು ಕುರುಡಗಿ ಎಚ್ಚರಿಕೆ ನೀಡಿದರು.

ಗದಗ–ಸಿಂಗಾಪುರ ಶಾಲೆಗಳ ವಿದ್ಯಾರ್ಥಿಗಳ ಅಂತರರಾಷ್ಟ್ರೀಯ ಸಂವಾದ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬಾಲ ವಿನಾಯಕ ವಿದ್ಯಾನಿಕೇತನ (ಬಿವಿವಿ) ಶಾಲೆ ಹಾಗೂ ಸಿಂಗಾಪುರದ ಬೆಂಡೆಮಿಯರ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ನಡುವೆ ಆನ್‌ಲೈನ್ ಮೂಲಕ ಅಂತರರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಬಿವಿವಿ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ಶಿಕ್ಷಕರಾಗಿ ಹಾಗೂ ಶಾಲಾ ಆಡಳಿತ ನಿರ್ವಹಿಸುವ ಪದ್ಧತಿ, ‘ಸಂಗಮ’ ಚಟುವಟಿಕೆಗಳ ಮೂಲಕ ನಾಯಕತ್ವ ಕೌಶಲ ಬೆಳೆಸುವ ವಿಧಾನವನ್ನು ಪರಿಚಯಿಸಿದರು. ಈ ಕಾರ್ಯಕ್ರಮಗಳನ್ನು ತಮ್ಮ ಶಾಲೆಯಲ್ಲೂ ಅಳವಡಿಸಿಕೊಳ್ಳುವುದಾಗಿ ಸಿಂಗಾಪುರ ಶಾಲೆಯ ಪ್ರಾಚಾರ್ಯೆ ಟಾನ್ ಲಿಂ ಹಾಗೂ ಶಿಕ್ಷಕರು ಸಂತಸ ವ್ಯಕ್ತಪಡಿಸಿದರು.

ಸಿಂಗಾಪುರದ ವಿದ್ಯಾರ್ಥಿಗಳು ತಮ್ಮ ಶಾಲೆಯ ‘ಬಡಿ ಪೇರಿಂಗ್’ ಪದ್ಧತಿಯ ಕುರಿತು ವಿವರಿಸಿ, ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಶಾಲಾ ಶಿಸ್ತು ಮತ್ತು ಹೊಂದಾಣಿಕೆಯ ಕುರಿತು ಮಾರ್ಗದರ್ಶನ ನೀಡುವ ವಿಧಾನವನ್ನು ಹಂಚಿಕೊಂಡರು.

ಬಿವಿವಿ ಶಾಲೆಯ ನಿರ್ದೇಶಕ ವಿನಾಯಕ ಆರ್. ಕಾರ್ಯಕ್ರಮವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಉಭಯ ಶಾಲೆಗಳ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ಕೊನೆಯಲ್ಲಿ ಪರಸ್ಪರ ಶಾಲಾ ಗೀತೆಗಳಿಗೆ ಗೌರವ ಸಲ್ಲಿಸಿದರು.

ಶಾಲೆಯ ಕಾರ್ಯದರ್ಶಿ ರವಿ ಎಸ್., ಇಎಲ್‌ಸಿ ಅಧ್ಯಕ್ಷೆ ಮಲ್ಲಿಕಾ ಆರ್., ಉಪನಿರ್ದೇಶಕಿ ಗಾಯತ್ರಿ ವಿ., ಪ್ರಾಚಾರ್ಯ ವಿ.ಎಂ. ಅಡ್ನೂರ, ಉಪಪ್ರಾಚಾರ್ಯ ಪಿ.ಜಿ. ಬ್ಯಾಳಿ ಸೇರಿದಂತೆ ಶಿಕ್ಷಕ ವೃಂದ ಕಾರ್ಯಕ್ರಮಕ್ಕೆ ಅಭಿನಂದನೆ ಸಲ್ಲಿಸಿದರು.

ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ತಪ್ಪಿಸಿದ್ದು ಸಮಾಜಕ್ಕೆ ಅನ್ಯಾಯ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ರಾಜ್ಯ ಸಚಿವ ಸಂಪುಟದಲ್ಲಿ ಗಂಗಾಮತ, ಬೆಸ್ತ, ಕೋಲಿ, ಕಬ್ಬಲಿಗ, ಅಂಬಿಗ, ಮೊಗವೀರ ಸೇರಿದಂತೆ 39ಕ್ಕೂ ಹೆಚ್ಚು ಉಪಸಮುದಾಯಗಳ ಏಕೈಕ ಶಾಸಕ ಮಂಕಾಳ ವೈದ್ಯ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದು ಸಮಾಜಕ್ಕೆ ಮಾಡಿರುವ ಅನ್ಯಾಯ ಹಾಗೂ ಅಗೌರವವಾಗಿದೆ ಎಂದು ಮಾಜಿ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ಹಾಗೂ ವಿಜಯನಗರ ಜಿಲ್ಲಾ ಗಂಗಾಮತ-ಬೆಸ್ತ ಸಮಾಜದ ಮಾಜಿ ಅಧ್ಯಕ್ಷ ಅಂಬಾಡಿ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಗಂಗಾಮತ-ಬೆಸ್ತ ಸಮಾಜ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್‌ನ ಆರಂಭಿಕ ಪಟ್ಟಿಯಲ್ಲಿ ಮಂಕಾಳ ವೈದ್ಯ ಅವರ ಹೆಸರು ಇದ್ದರೂ, ಕೊನೆಯ ಕ್ಷಣದಲ್ಲಿ ಕೈಬಿಡಲಾಗಿದೆ ಎಂದು ಆರೋಪಿಸಿದರು.

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮಂಕಾಳ ವೈದ್ಯ ಅವರು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಈ ಬಾರಿಯೂ ಅವರಿಗೆ ಅವಕಾಶ ಸಿಗುವ ವಿಶ್ವಾಸ ಸಮಾಜಕ್ಕಿತ್ತು. ಆದರೆ ಸಚಿವ ಸಂಪುಟದಲ್ಲಿ ನಮ್ಮ ಸಮಾಜಕ್ಕೆ ಯಾವುದೇ ಪ್ರಾತಿನಿಧ್ಯ ಸಿಗದಿರುವುದು ತೀವ್ರ ನಿರಾಸೆ ಉಂಟುಮಾಡಿದೆ ಎಂದು ಹೇಳಿದರು.

ರಾಜ್ಯದ ನಾಯಕತ್ವ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ಮಂಕಾಳ ವೈದ್ಯ ಅಥವಾ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ ಅವರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡುವ ಮೂಲಕ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಗಂಗಾಮತ-ಬೆಸ್ತ ಸಮಾಜದ ನಿಕಟಪೂರ್ವ ಅಧ್ಯಕ್ಷ ಅಂಬಾಡಿ ಮಹೇಶ್, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರ್ದಾರ್ ಯಮನೂರಪ್ಪ, ವೈ. ಯಮುನೇಶ್, ಗೋಣಿಬಸಪ್ಪ, ಸುರೇಶ್, ಯರಿಸ್ವಾಮಿ, ಪ್ರಕಾಶ್, ನಾಗಲಿಂಗಪ್ಪ, ಬಿ. ಸೂರ್ಯನಾರಾಯಣ, ಸರ್ದಾರ್ ಜೀವಪ್ಪ, ಸರ್ದಾರ್ ಸಿದ್ದಪ್ಪ, ಪರಶುರಾಮ ಬಾರಿಕರ, ವೆಂಕಟೇಶ್ ವಲ್ಲಭಾಪುರ, ವಿರೂಪಾಕ್ಷಿ ಮೊರಗೇರಿ, ಅಂಬಿಗರ ಮಂಜುನಾಥ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಒತ್ತಾಯ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣ ಗ್ರಾಮಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರು ಮಾಡುವಂತೆ ಆಗ್ರಹಿಸಿ ಹಂಪಾಪಟ್ಟಣ ಪದವಿಪೂರ್ವ ಕಾಲೇಜು ಹೋರಾಟ ಸಮಿತಿ ಸದಸ್ಯರು ಕ್ಷೇತ್ರದ ಶಾಸಕ ಕೆ. ನೇಮಿರಾಜನಾಯ್ಕ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಸಂಚಾಲಕ ಬುಡ್ಡಿ ಬಸವರಾಜ್ ಮಾತನಾಡಿ, ಹಂಪಾಪಟ್ಟಣ ಗ್ರಾಮವು ಸುತ್ತಮುತ್ತಲಿನ 12ಕ್ಕೂ ಹೆಚ್ಚು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದ್ದು, ಈ ಭಾಗದ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣಕ್ಕಾಗಿ ದೂರದ ಪಟ್ಟಣಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ರೈತರು, ಕೃಷಿ ಕೂಲಿ ಕಾರ್ಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಂಪಾಪಟ್ಟಣದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಆರಂಭಿಸುವುದು ಅಗತ್ಯವಾಗಿದೆ ಎಂದು ಒತ್ತಾಯಿಸಿದರು.

ಆಗಸ್ಟ್ 13ರಿಂದ ಆರಂಭವಾಗಲಿರುವ ವಿಧಾನಸಭಾ ಅಧಿವೇಶನದಲ್ಲಿ ಹಂಪಾಪಟ್ಟಣಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರು ಮಾಡುವ ಕುರಿತು ಪ್ರಸ್ತಾವನೆ ಮಂಡಿಸಿ, ಸರ್ಕಾರದಿಂದ ಶೀಘ್ರ ಅನುಮೋದನೆ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಶಾಸಕ ಕೆ. ನೇಮಿರಾಜನಾಯ್ಕ ಅವರು, ಹಂಪಾಪಟ್ಟಣದ ವಿದ್ಯಾರ್ಥಿಗಳ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಸರ್ಕಾರದ ಗಮನಕ್ಕೆ ವಿಷಯವನ್ನು ತಂದು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ ಕಾಲೇಜು ಮಂಜೂರು ಮಾಡಿಸಲು ಅಗತ್ಯ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪತ್ರಿ ಎಲ್ಲಪ್ಪ, ಉಪಾಧ್ಯಕ್ಷ ಟಿ. ಮಂಜುನಾಥ, ಗ್ರಾಮ ಪಂಚಾಯಿತಿ ಸದಸ್ಯರು, ವಿಎಸ್‌ಎಸ್‌ಎನ್ ಅಧ್ಯಕ್ಷ ಕೆ. ಹುಲುಗಪ್ಪ, ವಿವಿಧ ಮುಖಂಡರು, ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ಹಾಗೂ ಪದವಿಪೂರ್ವ ಕಾಲೇಜು ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ವ್ಯಸನ ತೊರೆದು ಮೌಲ್ಯಯುತ ಬದುಕು ಕಟ್ಟಿಕೊಳ್ಳಿ: ರಮೇಶ ಹುಲಕುಂದ

0

ವಿಜಯಸಾಕ್ಷಿ ಸುದ್ದಿ, ಹುಲಕೋಟಿ: ವ್ಯಸನಮುಕ್ತ ಜೀವನವೇ ನಿಜವಾದ ಸಾಧನೆಯಾಗಿದ್ದು, ಇಲಕಲ್ಲದ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಲಿಂಗೈಕ್ಯ ಡಾ. ಮಹಾಂತ ಶಿವಯೋಗಿ ಸ್ವಾಮೀಜಿಯವರು ‘ಮಹಾಂತ ಜೋಳಿಗೆ’ ಆಂದೋಲನದ ಮೂಲಕ ದುಶ್ಚಟಗಳಿಂದ ಹಾಳಾಗುತ್ತಿದ್ದ ಕುಟುಂಬಗಳನ್ನು ರಕ್ಷಿಸಿ ಸಮಾಜದಲ್ಲಿ ಕ್ರಾಂತಿಕಾರಿ ಜಾಗೃತಿ ಮೂಡಿಸಿದ ಮಹಾನ್ ಸಂತರು ಎಂದು ಸಾಂಸ್ಕೃತಿಕ ಘಟಕದ ಸಂಯೋಜಕ ರಮೇಶ ಹುಲಕುಂದ ಹೇಳಿದರು.

ಹುಲಕೋಟಿಯ ಶ್ರೀ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ವ್ಯಸನಮುಕ್ತ ದಿನಾಚರಣೆ ಹಾಗೂ ವ್ಯಸನಮುಕ್ತ ಪ್ರತಿಜ್ಞಾವಿಧಿ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.

ಸ್ವಾಮೀಜಿಯವರು ಸಾರಿದ ವ್ಯಸನಮುಕ್ತ ಹಾಗೂ ನೈತಿಕ ಸಮಾಜ ನಿರ್ಮಾಣದ ಸಂದೇಶ ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ನೆಮ್ಮದಿಯ ಬದುಕಿನೊಂದಿಗೆ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಅಪ್ಪಣ್ಣ ಹಂಜೆ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವಸ್ತುಗಳು, ಧೂಮಪಾನ, ಮದ್ಯಪಾನ ಹಾಗೂ ಮೊಬೈಲ್ ವ್ಯಸನದಿಂದ ದೂರವಿರಬೇಕು. ದುಶ್ಚಟಗಳು ಆರೋಗ್ಯ, ಶಿಕ್ಷಣ ಹಾಗೂ ಭವಿಷ್ಯವನ್ನು ಹಾಳುಮಾಡುತ್ತವೆ.

ಯುವಜನತೆ ವ್ಯಸನಮುಕ್ತ ಸಮಾಜ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಎನ್‌ಎಸ್‌ಎಸ್ ಘಟಕದ ಸಂಯೋಜಕ ವಿಜಯಕುಮಾರ ಎಸ್. ವಂದಿಸಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವ್ಯಸನಮುಕ್ತ ಪ್ರತಿಜ್ಞೆ ಸ್ವೀಕರಿಸಿದರು.

ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಮುಖ್ಯ ಮಾಹಿತಿ: ಶುಕ್ರವಾರ ರಾತ್ರಿ ಗ್ರೀನ್ ಲೈನ್‌ನಲ್ಲಿ ಬದಲಾವಣೆ!

ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದ ಪ್ರಯಾಣಿಕರಿಗೆ ಮಹತ್ವದ ಮಾಹಿತಿ.

ನಾಳೆ ಹಸಿರು ಮಾರ್ಗದ ರೈಲು ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

ಹಸಿರು ಮಾರ್ಗಕ್ಕೆ ಹೊಸ ಸಿಆರ್‌ಆರ್‌ಸಿ ಸಂಸ್ಥೆಯ ಮೆಟ್ರೋ ರೈಲುಗಳನ್ನು ಸೇರ್ಪಡೆಗೊಳಿಸುವ ಹಿನ್ನೆಲೆಯಲ್ಲಿ ಹಾಗೂ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಪಾಸಣೆಗೆ ಪೂರ್ವಭಾವಿಯಾಗಿ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗುತ್ತಿದೆ.

ಯಶವಂತಪುರದಿಂದ ಮಾದಾವರದವರೆಗಿನ (ಅಪ್ ಲೈನ್) ರೈಲು ಸೇವೆಗಳು ಶುಕ್ರವಾರ ರಾತ್ರಿ 10.30ರಿಂದ 11 ಗಂಟೆಯವರೆಗೆ ಪ್ರತಿ 10 ನಿಮಿಷಗಳ ಬದಲಿಗೆ 20 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ.

ಇನ್ನು ಮಾದಾವರದಿಂದ ರೇಷ್ಮೆ ಸಂಸ್ಥೆಯವರೆಗಿನ (ಡೌನ್ ಲೈನ್) ರೈಲು ಸೇವೆಗಳು ಯಾವುದೇ ಬದಲಾವಣೆ ಇಲ್ಲದೆ ಸಾಮಾನ್ಯ ವೇಳಾಪಟ್ಟಿಯಂತೆ ಮುಂದುವರಿಯಲಿವೆ.

ಬೆಂಗಳೂರು ಮೆಟ್ರೋ ಜಾಲ 96 ಕಿಲೋ ಮೀಟರ್‌ವರೆಗೆ ವಿಸ್ತರಿಸಿದ್ದು, ಪ್ರತಿದಿನ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ರೈಲುಗಳ ಅಗತ್ಯ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಚೀನಾದಲ್ಲಿ ತಯಾರಿಸಲಾದ ಸುಮಾರು 21 ಹೊಸ ಮೆಟ್ರೋ ರೈಲುಗಳು ಹಂತ ಹಂತವಾಗಿ ಸೇರ್ಪಡೆಯಾಗಲಿವೆ.

ಇದರಲ್ಲಿ ಮೂರು ರೈಲುಗಳನ್ನು ಹಸಿರು ಮಾರ್ಗಕ್ಕೆ ಬಳಸಲಾಗುತ್ತಿದ್ದು, ಅದಕ್ಕೂ ಮುನ್ನ ಅಗತ್ಯ ತಪಾಸಣೆಗಳನ್ನು ನಡೆಸಲಾಗುತ್ತಿದೆ. ತಾತ್ಕಾಲಿಕ ಬದಲಾವಣೆಗೆ ಪ್ರಯಾಣಿಕರು ಸಹಕರಿಸುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.

 

ಆ. 9ರಂದು ಚಿಕ್ಕಟ್ಟಿ ಗುರುಗಳ ‘ಶಿವರಾಯ’ ಅಭಿನಂದನಾ ಗ್ರಂಥ ಬಿಡುಗಡೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಹಿನ್ನೆಲೆಯಿಂದ ಬಂದು ಗದಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಶಿಕ್ಷಣ ತಜ್ಞ ಪ್ರೊ. ಎಸ್.ವೈ. ಚಿಕ್ಕಟ್ಟಿ ಅವರ ಜೀವನ ಸಾಧನೆಯನ್ನು ದಾಖಲಿಸುವ ‘ಶಿವರಾಯ’ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವು ಆಗಸ್ಟ್ 9ರಂದು ನಗರದ ಮುಂಡರಗಿ ರಸ್ತೆಯ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ನಡೆಯಲಿದೆ.

ಈ ಕುರಿತು ಗುರುವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಾಹಿತಿ ಐ.ಕೆ. ಕಮ್ಮಾರ, ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಡಿ.ಆರ್. ಪಾಟೀಲ ವಹಿಸಲಿದ್ದು, ಶಾಸಕ ಎಚ್.ಕೆ. ಪಾಟೀಲ ಉದ್ಘಾಟಿಸಲಿದ್ದಾರೆ. ಬಿಜ್ಜರಗಿಯ ಸೋಮಲಿಂಗ ಪಾಟೀಲ ಅವರು ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಪತ್ರಕರ್ತ ರವಿ ಎಸ್., ಸಂತಸಾಯಿ ಶಿಕ್ಷಣ ಸಂಸ್ಥೆ (ಪುಣೆ) ಸಂಸ್ಥಾಪಕ ಎಸ್.ಎನ್. ಢವಳೇಶ್ವರ, ವಿದ್ಯಾದಾನ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಹುಯಿಲಗೋಳ, ವಿಶ್ರಾಂತ ಪ್ರಾಚಾರ್ಯ ಕೆ.ಎಚ್. ಬೇಲೂರು, ಅಡಹಳಟ್ಟಿಯ ಪಿಕೆಪಿಎಸ್ ಅಧ್ಯಕ್ಷ ಘಟಿವಾಳಪ್ಪ ಗುಡ್ಡಾಪುರ, ಅಥಣಿಯ ಬಸವರಾಜ ಉಮ್ರಾಣಿ ಸೇರಿದಂತೆ ಶಿಕ್ಷಣ ಕ್ಷೇತ್ರದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಪ್ರೊ. ಎಸ್.ವೈ. ಚಿಕ್ಕಟ್ಟಿ ಅವರು ತಮ್ಮ ಪರಿಶ್ರಮದಿಂದ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿ ಈ ಭಾಗದ ಶಿಕ್ಷಣ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಶೈಕ್ಷಣಿಕ ಸಾಧನೆ, ಸೇವೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ದಾಖಲಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಅವರ ಶಿಷ್ಯರು ಮತ್ತು ಅಭಿಮಾನಿಗಳು ‘ಶಿವರಾಯ’ ಅಭಿನಂದನಾ ಗ್ರಂಥವನ್ನು ಪ್ರಕಟಿಸಿದ್ದಾರೆ ಎಂದು ಐ.ಕೆ. ಕಮ್ಮಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರೊ. ಶ್ರೀಶೈಲ ಬಡಿಗೇರ, ಕೆ.ಎಚ್. ಬೇಲೂರು, ಎಸ್.ಎಲ್. ಹುಯಿಲಗೋಳ, ವಿ.ಎಂ. ಮುಂದಿನಮನಿ, ಶೋಭಾ ಭಟ್, ಶೋಭಾ ಸ್ಥಾವರಮಠ, ರಿಯಾನಾ ಮುಲ್ಲಾ ಹಾಗೂ ಪುಷ್ಪಲತಾ ಬೆಲೇರಿ ಉಪಸ್ಥಿತರಿದ್ದರು.

₹32.97 ಕೋಟಿ ವೆಚ್ಚದ 100 ಹಾಸಿಗೆ ಆಸ್ಪತ್ರೆ ಉದ್ಘಾಟನೆಗೆ ಸಜ್ಜು

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಪಟ್ಟಣದ ಜನತೆಯ ಬಹುದಿನಗಳ ಕನಸಾಗಿದ್ದ 100 ಹಾಸಿಗೆಗಳ ತಾಲೂಕು ಆಸ್ಪತ್ರೆ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ಉದ್ಘಾಟನೆಗೆ ಸಜ್ಜಾಗಿದೆ. 2024-25ನೇ ಸಾಲಿನ ನಬಾರ್ಡ್ (RIDF) ಯೋಜನೆಯಡಿ ₹32.97 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಆಸ್ಪತ್ರೆ ತಾಲೂಕಿನ ಆರೋಗ್ಯ ಸೇವೆಗೆ ಹೊಸ ಆಯಾಮ ನೀಡಲಿದೆ.

ಈ ಆಸ್ಪತ್ರೆಯಲ್ಲಿ 11 ಮಂದಿ ತಜ್ಞ ವೈದ್ಯರ ಹುದ್ದೆಗಳು, ತುರ್ತು ಚಿಕಿತ್ಸಾ ವಿಭಾಗಕ್ಕೆ ಪ್ರತ್ಯೇಕ ವೈದ್ಯರು, ಮಾಡ್ಯುಲರ್ ಆಪರೇಷನ್ ಥಿಯೇಟರ್, ಸೆಪ್ಟಿಕ್ ಹಾಗೂ ಮೈನರ್ ಓಟಿ, ಡಯಾಲಿಸಿಸ್ ಘಟಕ, ಎಕ್ಸ್-ರೇ, ಪ್ರತಿ ವಿಭಾಗಕ್ಕೂ ಓಪಿಡಿ, ಎನ್‌ಸಿಡಿ ಘಟಕ, ಕಣ್ಣಿನ ಸಲಹಾ ಕೇಂದ್ರ, ಎಚ್‌ಐವಿ ಹಾಗೂ ಕ್ಷಯರೋಗ ಘಟಕ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವೈದ್ಯರು ಮತ್ತು ಸಿಬ್ಬಂದಿಗೆ ಪ್ರತ್ಯೇಕ ವಸತಿ ವ್ಯವಸ್ಥೆಯೂ ಇರಲಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ಎಸ್. ನೀಲಗುಂದ ಪ್ರತಿಕ್ರಿಯಿಸಿ, ಆಸ್ಪತ್ರೆ ಕಟ್ಟಡದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದಾಗಲೇ ಆಸ್ಪತ್ರೆಗೆ ಜಾಗೆ ಗುರುತಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದೆ. ಶಾಸಕನಾದ ಬಳಿಕ ಅನುದಾನ ತಂದು ಕಾಮಗಾರಿಯನ್ನು ಪೂರ್ಣಗೊಳಿಸುವ ಅವಕಾಶ ದೊರೆತಿರುವುದು ನನ್ನ ಸಾರ್ವಜನಿಕ ಜೀವನದ ಸೌಭಾಗ್ಯವಾಗಿದೆ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗದ ಜಿಲ್ಲಾ ಕಾರ್ಯಾಧ್ಯಕ್ಷ ಮಹಾಂತೇಶ ದಶಮನಿ ಮಾತನಾಡಿ, ಶಿರಹಟ್ಟಿ ತಾಲೂಕಿನ ಜನರ ಬಹುದಿನಗಳ ಕನಸು ನನಸಾಗುತ್ತಿದ್ದು, ಆಸ್ಪತ್ರೆಯಲ್ಲಿ ಎಲ್ಲ ಹಂತದ ಆರೋಗ್ಯ ಸೇವೆಗಳು ನಿರಂತರವಾಗಿ ಲಭ್ಯವಾಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಗರಸಭೆ ಸದಸ್ಯರು ರಾಜೀನಾಮೆ ನಿರ್ಧಾರ ಮರುಪರಿಶೀಲಿಸಲಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸಚಿವ ಸಂಪುಟ ವಿಸ್ತರಣೆಯಲ್ಲಿ ಗದಗ ಶಾಸಕ ಹಾಗೂ ಮಾಜಿ ಸಚಿವ ಡಾ. ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ಸಿಗದಿರುವುದು ಜಿಲ್ಲೆಯ ಜನರಲ್ಲಿ ಬೇಸರ ಮೂಡಿಸಿದೆ. ಆದರೆ ಈ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯರು ರಾಜೀನಾಮೆ ನೀಡಿರುವ ನಿರ್ಧಾರವನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಾಮಾಜಿಕ ಚಿಂತಕ ವಿಶ್ವನಾಥ ಶೀರಿ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಚ್.ಕೆ. ಪಾಟೀಲ ಅವರು ಸಚಿವರಾಗದಿದ್ದರೂ ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಹೊಂದಿರುವ ಅನುಭವ, ಪ್ರಭಾವ ಮತ್ತು ಕಾರ್ಯಕ್ಷಮತೆಯಿಂದ ಜಿಲ್ಲೆಯ ಅಭಿವೃದ್ಧಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ನಗರಸಭೆ ಸದಸ್ಯರು ರಾಜೀನಾಮೆ ನೀಡುವ ಬದಲು ತಮ್ಮ ನಾಯಕತ್ವದ ಮಾರ್ಗದರ್ಶನದಲ್ಲಿ ನಗರ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಜನರು ನೀಡಿರುವ ಜನಾದೇಶವನ್ನು ಗೌರವಿಸಿ ಸಾರ್ವಜನಿಕ ಸೇವೆಯನ್ನು ಮುಂದುವರಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪಕ್ಷದ ಸಂಘಟನೆ ಬಲಪಡಿಸಿ, ಮುಂದಿನ ಚುನಾವಣೆಯಲ್ಲಿ ಇನ್ನಷ್ಟು ಬಲಿಷ್ಠವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದು ಸೂಕ್ತ. ಜನರ ವಿಶ್ವಾಸ ಉಳಿಸಿಕೊಂಡು ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಬೇಕು ಎಂದು ಅವರು ತಿಳಿಸಿದ್ದಾರೆ.

“ನಾಯಕನಿಗೆ ಬಲ ತುಂಬುವ ನಿರ್ಧಾರಗಳೇ ಜನಪ್ರತಿನಿಧಿಗಳಿಂದ ಬರಬೇಕು. ರಾಜೀನಾಮೆಗಿಂತ ಅಭಿವೃದ್ಧಿಗೆ ಕೈಜೋಡಿಸುವುದು ಜನಾದೇಶಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ.”
– ವಿಶ್ವನಾಥ ಶೀರಿ, ಸಾಮಾಜಿಕ ಚಿಂತಕ

ಹೊಸ ಬಸ್ ನಿಲ್ದಾಣಕ್ಕೆ ಉಪಲೋಕಾಯುಕ್ತರ ದಿಢೀರ್ ಭೇಟಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಪಣೀಂದ್ರ ಅವರು ಗುರುವಾರ ನಗರದ ಹೊಸ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ, ಅಲ್ಲಿನ ಮೂಲಸೌಕರ್ಯ ಹಾಗೂ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳ ಕುರಿತು ಪರಿಶೀಲನೆ ನಡೆಸಿದರು.

ಈ ವೇಳೆ ಬಸ್ ನಿಲ್ದಾಣದಲ್ಲಿರುವ ಕುಡಿಯುವ ನೀರಿನ ಘಟಕವನ್ನು ಪರಿಶೀಲಿಸಿದ ಅವರು, ಸಾರ್ವಜನಿಕರಿಗೆ ಪೂರೈಕೆಯಾಗುತ್ತಿರುವ ನೀರನ್ನು ತಕ್ಷಣ ಪರೀಕ್ಷೆಗೆ ಒಳಪಡಿಸಿ, ಅದು ಕುಡಿಯಲು ಯೋಗ್ಯವೇ ಎಂಬ ಕುರಿತು ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳಿಕ ಪ್ರಯಾಣಿಕರೊಂದಿಗೆ ನೇರವಾಗಿ ಸಂವಾದ ನಡೆಸಿದ ಉಪಲೋಕಾಯುಕ್ತರು, ಬಸ್ ನಿಲ್ದಾಣದಲ್ಲಿನ ಸ್ವಚ್ಛತೆ, ಕುಡಿಯುವ ನೀರು, ಆಸನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕುರಿತು ಮಾಹಿತಿ ಪಡೆದು, ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಬಸ್‌ಗಳು ನಿಗದಿತ ವೇಳಾಪಟ್ಟಿಯಂತೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸೇವೆಯಲ್ಲಿ ಯಾವುದೇ ರೀತಿಯ ವಿಳಂಬ ಅಥವಾ ನಿರ್ಲಕ್ಷ್ಯ ಕಂಡುಬರಬಾರದು ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

“ಸಾರ್ವಜನಿಕರಿಗೆ ಸುರಕ್ಷಿತ ಕುಡಿಯುವ ನೀರು, ಸ್ವಚ್ಛ ವಾತಾವರಣ ಹಾಗೂ ಸಮಯಕ್ಕೆ ಸೇವೆ ಒದಗಿಸುವುದು ಸಂಬಂಧಪಟ್ಟ ಇಲಾಖೆಯ ಮೊದಲ ಜವಾಬ್ದಾರಿ.”

– ನ್ಯಾ. ಕೆ.ಎನ್. ಪಣೀಂದ್ರ, ಕರ್ನಾಟಕ ಉಪಲೋಕಾಯುಕ್ತ