Home Blog Page 80

ರೋಣ ತಾಲೂಕಿನಲ್ಲಿ ಫೆ. 1ರಿಂದ 28ರವರೆಗೆ ಕರವಸೂಲಿ ಮಾಸಾಚರಣೆ

0

ವಿಜಯಸಾಕ್ಷಿ ಸುದ್ದಿ, ರೋಣ: ಆರ್ಥಿಕ ವರ್ಷದ ಅಂತ್ಯಕ್ಕೆ ಕೇವಲ ಎರಡು ತಿಂಗಳು ಮಾತ್ರ ಬಾಕಿಯಿದ್ದು, ರೋಣ ತಾಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ ಫೆಬ್ರವರಿ 1ರಿಂದ 28ರವರೆಗೆ ಒಂದು ತಿಂಗಳ ಕಾಲ ನಿರಂತರ ಕರವಸೂಲಿ ಮಾಸಾಚರಣೆ ಅಭಿಯಾನವನ್ನು ಹಮ್ಮಿಕೊಂಡು ಶೇ. 100ರಷ್ಟು ತೆರಿಗೆ ವಸೂಲಿ ಸಾಧಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಗ್ರಾ.ಪಂ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಕುರಿತು ತಾಲೂಕಿನ ಕಾರ್ಯ ನಿರ್ವಾಹಕ ಕಚೇರಿಯಲ್ಲಿ ಸಿಬ್ಬಂದಿಗಳ ಜೊತೆ ಸಭೆ ನಡೆಸಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಫೆಬ್ರವರಿ ತಿಂಗಳ ಸಂಪೂರ್ಣ ಅವಧಿಯಲ್ಲಿ ತಾಲೂಕಿನ ಎಲ್ಲಾ ಗ್ರಾ.ಪಂಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆಯವರೆಗೂ ತೆರಿಗೆ ವಸೂಲಾತಿ ಕಾರ್ಯವನ್ನು ತೀವ್ರಗೊಳಿಸಬೇಕು ಎಂದು ತಿಳಿಸಿದ್ದಾರೆ.

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಕರವಸೂಲಿಗಾರರು, ಗಣಕಯಂತ್ರ ನಿರ್ವಾಹಕರು, ವಾಟರ್‌ಮನ್‌ಗಳು, ಸಿಪಾಯಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಒಂದೇ ತಂಡವಾಗಿ ಕಾರ್ಯನಿರ್ವಹಿಸಿ ಗರಿಷ್ಠ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡಬೇಕು ಎಂದು ಸೂಚಿಸಿದ್ದಾರೆ.

ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಎಲ್ಲಾ ಆಸ್ತಿ ಮಾಲೀಕರನ್ನು ಗುರುತಿಸಿ ತಕ್ಷಣವೇ ನೋಟೀಸ್ ಜಾರಿ ಮಾಡಬೇಕು. ಪಂಚತಂತ್ರ 2.0 ತಂತ್ರಾಂಶದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಬಾಕಿಯಿರುವ ಸಂಪೂರ್ಣ ತೆರಿಗೆ ಮೊತ್ತವನ್ನು ಫೆಬ್ರವರಿ ತಿಂಗಳೊಳಗೆ ವಸೂಲಿ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.

ಬಾಕಿ ಉಳಿಸಿಕೊಂಡಿರುವ ಕನಿಷ್ಠ 200 ಆಸ್ತಿ ಮಾಲೀಕರಿಗೆ ತಗಾದೆ ನೋಟೀಸ್ ಜಾರಿ ಮಾಡಿ, ಅಭಿಯಾನದ ಅವಧಿಯಲ್ಲೇ ಸಂಪೂರ್ಣ ತೆರಿಗೆ ವಸೂಲಿ ಮಾಡಬೇಕು. ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಮೊಬೈಲ್ ಟವರ್ ಕಂಪನಿಗಳು, ಅಂಗಡಿ ಮಾಲೀಕರು, ಉದ್ಯಮಿಗಳು ಹಾಗೂ ಸರ್ಕಾರಿ ನೌಕರರಿಂದ ಶೇ. 100ರಷ್ಟು ತೆರಿಗೆ ಬಾಕಿ ವಸೂಲಿ ಮಾಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಕರವಸೂಲಿ ಅಭಿಯಾನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಸ್ವಚ್ಛ ವಾಹಿನಿ ಹಾಗೂ ಡಂಗೂರ ಸಾರುವ ಮೂಲಕ ವ್ಯಾಪಕ ಪ್ರಚಾರ ನೀಡಬೇಕು. ಜೊತೆಗೆ ಅಭಿಯಾನದಲ್ಲಿ ಎಲ್ಲಾ ಚುನಾಯಿತ ಪ್ರತಿನಿಧಿಗಳನ್ನು ಸಕ್ರಿಯವಾಗಿ ಭಾಗಿಯಾಗಿಸಿಕೊಂಡು, ವಾರ್ಡ್ವಾರು ಸಾರ್ವಜನಿಕರನ್ನು ಮನವೊಲಿಸಿ ತೆರಿಗೆ ಪಾವತಿಗೆ ಪ್ರೇರೇಪಿಸುವಂತೆ ಸೂಚಿಸಿದ್ದಾರೆ.

ರೋಣ ತಾಲೂಕಿನಲ್ಲಿ ಶೇ. 100ರಷ್ಟು ತೆರಿಗೆ ವಸೂಲಿ ಸಾಧಿಸುವ ಉದ್ದೇಶದಿಂದ ಫೆಬ್ರವರಿ 1ರಿಂದ 28ರವರೆಗೆ ತಾಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ ಕರವಸೂಲಿ ಮಾಸಾಚರಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಗ್ರಾ.ಪಂನ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗಿ ತೆರಿಗೆ ವಸೂಲಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಅಭಿಯಾನದ ವೇಳೆ ಯಾವುದೇ ಸಿಬ್ಬಂದಿಗಳಿಗೆ ರಜೆ ಇರುವುದಿಲ್ಲ. ಅನಧಿಕೃತವಾಗಿ ಗೈರು ಹಾಜರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

  • ಚಂದ್ರಶೇಖರ ಬಿ.ಕಂದಕೂರ.
    ಕಾರ್ಯನಿರ್ವಾಹಕ ಅಧಿಕಾರಿಗಳು,
    ತಾ.ಪಂ-ರೋಣ.

ತಪ್ಪದೇ ರಸ್ತೆ ನಿಯಮಗಳನ್ನು ಪಾಲಿಸಿ: ಭರತ ಯೋಗೇಶ ಕರಗುದರಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮನುಷ್ಯನ ಜೀವ ಅತ್ಯಮೂಲ್ಯವಾಗಿದ್ದು, ವಾಹನ ಚಲಾಯಿಸುವ ಪ್ರತಿಯೊಬ್ಬರೂ ತಪ್ಪದೇ ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ರಸ್ತೆ ಅಪಘಾತ, ಸಾವು-ನೋವು ತಡೆಯುವ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಭರತ ಯೋಗೇಶ ಕರಗುದರಿ ತಿಳಿಸಿದರು.

ಅವರು ಪಟ್ಟಣದಲ್ಲಿ ಶನಿವಾರ ನ್ಯಾಯಾಂಗ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆಗಳ ಸಹಯೋಗದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಅಭಿಯಾನದ ಅಂಗವಾಗಿ ಪಟ್ಟಣದ ಶಾಲಾ ಮಕ್ಕಳ ಮೂಲಕ ರಸ್ತೆ ಸುರಕ್ಷತಾ ಅಭಿಯಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ನಂತರ ಸ್ಕೂಲ್ ಚಂದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಸ್ತೆ ಸುರಕ್ಷತೆಯು ಜೀವಗಳನ್ನು ಉಳಿಸಲು ಮತ್ತು ಅಪಘಾತಗಳನ್ನು ತಡೆಯಲು ಅತ್ಯಗತ್ಯವಾದ ಮುನ್ನೆಚ್ಚರಿಕೆ ಕ್ರಮವಾಗಿದೆ. ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸುವುದು, ಸಂಚಾರ ನಿಯಮಗಳನ್ನು ಪಾಲಿಸುವುದು, ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯುತವಾಗಿ ವರ್ತಿಸುವ ಮೂಲಕ ಸುರಕ್ಷಿತ ರಸ್ತೆ ಸಂಚಾರವನ್ನು ಮಾಡುವ ನಿಟ್ಟಿನಲ್ಲಿ ಮುಂದಾಗಬೇಕು. ಒಬ್ಬ ವ್ಯಕ್ತಿಗೆ ಅಪಘಾತವಾದರೆ ಅವರನ್ನು ಅವಲಂಬಿಸಿದ ಇಡೀ ಕುಟುಂಬಕ್ಕೆ ಹಾನಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಕಿರಿಯ ದಿವಾಣಿ ನ್ಯಾಯಾಧೀಶರಾದ ಸತೀಶ ಎಂ ಮಾತನಾಡಿ, ನಿಷ್ಕಾಳಜಿ ಮತ್ತು ಬೇಜಾವಾಬ್ದಾರಿಯಿಂದ ಅಪಘಾತಗಳು ಹೆಚ್ಚುತ್ತಿವೆ. ಹೆಲ್ಮೆಟ್, ಸೀಟ್ ಬೆಲ್ಟ್ ತಪ್ಪದೇ ಧರಿಸಬೇಕು ಎಂದು ಪೊಲೀಸ್, ಸಾರಿಗೆ ಇಲಾಖೆ ಕಡ್ಡಾಯಗೊಳಿಸುವುದು ನಮ್ಮ ಸುರಕ್ಷತೆಯ ದೃಷ್ಟಿಯಿಂದ ಎನ್ನುವುದನ್ನು ನಾವು ಅರಿತುಕೊಳ್ಳಬೇಕು. ಅಪ್ರಾಪ್ತ ವಯಸ್ಕರು ವಾಹನ ಚಲಾವಣೆ ಮಾಡಿ ಅಪಘಾತಗೊಳಿಸಿದರೆ ಕಾನೂನಿನ ದೃಷ್ಟಿಯಲ್ಲಿ ಅಪರಾಧದ ಜೊತೆಗೆ ದೊಡ್ಡ ಮೊತ್ತವನ್ನು ಪರಿಹಾರ ನೀಡುವ ಪ್ರಸಂಗಗಳು ನಡೆಯುತ್ತವೆ ಎಂದು ಹೇಳಿದರು.

ಸಭೆಯಲ್ಲಿ ಸಿಪಿಐ ಬಿ.ವೈ. ನ್ಯಾಮಗೌಡ, ಪಿಎಸ್‌ಐ ನಾಗರಾಜ ಗಡಾದ ಮಾತನಾಡಿದರು. ಹಿರಿಯ ಮೋಟಾರು ವಾಹನ ನಿರೀಕ್ಷಕ ಅರುಣ ಕಟ್ಟಿಮನಿ, ಪ್ರಾಚಾರ್ಯ ರಾಮು ಜಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಗಂಗಾಧರ, ಅಶ್ವಿನಿ, ಪ್ರಿಯಾಂಕಾ ನಿರೂಪಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಟಿ. ಈಶ್ವರ ಮಾತನಾಡಿ, ರಸ್ತೆ ಅಪಘಾತಗಳು ಸವಾರರ ಅಜಾಗರೂಕತೆಯ ಫಲವಾಗಿರುತ್ತವೆ. ಮಕ್ಕಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಒಮ್ಮೆ ಅರಿವು ಮೂಡಿಸಿದಲ್ಲಿ ಅದು ಕೊನೆಯ ತನಕವೂ ಅನುಷ್ಠಾನದಲ್ಲಿರುತ್ತದೆ. ನಮ್ಮ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ನಿತ್ಯ ವಾಹನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜೊತೆಗೆ ಉಳಿದವರಿಗೆ ಮಾಹಿತಿ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

BREAKING..ಸಿ.ಜೆ.ರಾಯ್‌ ಆತ್ಮಹತ್ಯೆ ಕೇಸ್‌ ತನಿಖೆಗೆ SIT ರಚಿಸಿದ ರಾಜ್ಯ ಸರ್ಕಾರ!

0

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದೆ. ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ಕಾರ್ಯನಿರ್ವಹಿಸಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಎಸ್‌ಐಟಿಯಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕೂಡ ಸೇರಿರುತ್ತಾರೆ. ಇದುವರೆಗೂ ಪ್ರಕರಣದ ತನಿಖೆಯನ್ನು ಅಶೋಕನಗರ ಪೊಲೀಸ್ ಠಾಣೆಯ ಪೊಲೀಸರು ನಡೆಸುತ್ತಿದ್ದರು. ಈಗಿನಿಂದ ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ಎಸ್‌ಐಟಿ ಕೈಗೆತ್ತಿಕೊಳ್ಳಲಿದೆ.

ಅಶೋಕನಗರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್, ಸಾಕ್ಷ್ಯಗಳು ಹಾಗೂ ಇತರ ದಾಖಲೆಗಳನ್ನು ಎಸ್‌ಐಟಿಗೆ ಹಸ್ತಾಂತರಿಸಲಿದ್ದಾರೆ. ಎಸ್‌ಐಟಿ ನೇತೃತ್ವ ವಹಿಸಿರುವ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಅವರು ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತನಿಖೆಯ ವೇಳೆ ಸಿ.ಜೆ. ರಾಯ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಪರಿಸ್ಥಿತಿ ಏನು, ಐಟಿ ಇಲಾಖೆಯ ದಾಳಿಯಿಂದ ಯಾವುದೇ ಒತ್ತಡ ಉಂಟಾಗಿತ್ತೇ, ಹಣಕಾಸಿನ ಸಮಸ್ಯೆ ಅಥವಾ ಬೇರೆ ಯಾರಾದರೂ ಒತ್ತಡ ಹೇರಿದರೇ ಎಂಬುದರ ಬಗ್ಗೆ ವಿವಿಧ ಆಂಗಲ್‌ಗಳಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ. ಪ್ರಕರಣದ ತನಿಖೆಯ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಹೇಳಿದ್ದಾರೆ.

ಲ್ಯಾಂಡ್ ಲಾರ್ಡ್: ಕೇವಲ ಸಿನಿಮಾ ಅಲ್ಲ, ನಮ್ಮ ಬದುಕಿನ ಕಟು ಸತ್ಯಗಳ ಪ್ರತಿಬಿಂಬ

‘ಕಾಟೀರ’ ಚಿತ್ರದ ನಂತರ ನಾನು ಯಾವುದೇ ಚಲನಚಿತ್ರವನ್ನು ನೋಡಿರಲಿಲ್ಲ. ಆದರೆ ಸಮಯಾವಕಾಶ ಸಿಕ್ಕ ಹಿನ್ನೆಲೆಯಲ್ಲಿ, ಅನೇಕ ಪ್ರಗತಿಪರ ಚಿಂತಕರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದ ದುನಿಯಾ ವಿಜಯ್ ಅವರ ‘ಲ್ಯಾಂಡ್ ಲಾರ್ಡ್’ ಚಿತ್ರವನ್ನು ನೋಡಲು ನಿರ್ಧರಿಸಿದೆ.

ಚಿತ್ರ ಆರಂಭವಾದ ಕೆಲವೇ ಕ್ಷಣಗಳಲ್ಲಿ, ನನಗೆ ಪರಿಚಿತವಾಗಿದ್ದ ಒಂದು ಘಟನೆ ಕಣ್ಣಮುಂದೆ ಜೀವಂತವಾಗಿ ನಿಂತಿತು. ಭೂರಹಿತ ದಲಿತನೊಬ್ಬ ಸಾವುಕಾರನ ಹೊಲದಲ್ಲಿ ಹಸಿವಿನಿಂದ ಕಡಲೆ ಗಿಡ ಕಿತ್ತು ತಿಂದಿದ್ದು ತಪ್ಪು ಎಂದು ತೀರ್ಪು ನೀಡಿದ ನ್ಯಾಯ ಪಂಚಾಯ್ತಿ, ಅದೇ ವೇಳೆ “ಕದ್ದು ತಿಂದವನ ಹೆಂಡತಿಯ ಮೇಲೂ ನನಗೆ ಆಸೆ ಇದೆ, ಅದಕ್ಕೂ ಅನುಮತಿ ಕೊಡಿ” ಎಂದು ಸಾವುಕಾರ ಹೇಳಿದ ಆ ಕ್ರೂರ ಮಾತು — ಅದು ಅತ್ಯಾಚಾರದಷ್ಟೇ ಸಮಾನವಾದ ಮನಸ್ಥಿತಿಯ ಪ್ರತೀಕವಾಗಿತ್ತು. ಇಂತಹ ಅನೇಕ ಜೀವಂತ ನಿದರ್ಶನಗಳ ಪ್ರತಿನಿಧಿತ್ವವೇ ‘ಲ್ಯಾಂಡ್ ಲಾರ್ಡ್’.

ಚಿತ್ರವನ್ನು ನೋಡುತ್ತಾ ಹೋದಂತೆ ಹಳ್ಳಿಕೇರಿ, ಹಾಳಕೇರಿ, ರೋಣದ ‘ಭೂಮಿ ಬೇಕು’ ರೈತ ಆಂದೋಲನ, ಇನಾಮವೀರಾಪುರ ಘಟನೆ, ಕಂಬಾಳಪಳ್ಳಿ–ಹಂಗರಹಳ್ಳಿ ಹತ್ಯಾಕಾಂಡಗಳು ಒಂದೊಂದಾಗಿ ಸ್ಮೃತಿ ಪಟಲದಲ್ಲಿ ಪ್ಲೇ ಆದವು. ಇವುಗಳೆಲ್ಲವೂ ಕೇವಲ ಇತಿಹಾಸವಲ್ಲ; ಇನ್ನೂ ಹಸಿಹಸಿಯಾಗಿ ನಮ್ಮ ಸಮಾಜವನ್ನು ಕಾಡುತ್ತಿರುವ ಸತ್ಯಗಳು.

ಬದುಕಲು ಬೇಕಾದ ಅನ್ನಕ್ಕಾಗಿ ಕೈಯೊಡ್ಡಿ ಬೇಡಬೇಕು, ಆದರೆ ಅನ್ನ ಬೆಳೆಯುವ ಭೂಮಿಯ ಮೇಲೆ ಹಕ್ಕು ಇರಬಾರದು ಎಂಬ ಜಮೀನ್ದಾರರ ವಿಕೃತ ಮನಸ್ಸು; ದಲಿತರಿಗೆ ಭೂಮಿ ಒಡೆತನ ಇರಬಾರದೆಂಬ ಕಾರಣಕ್ಕೆ ದೇವರ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ವಿಧಿಸಲಾಗುವ ನಾನಾ ಕಟ್ಟಳೆಗಳು; ದಿನನಿತ್ಯದ ಬದುಕಿನಲ್ಲಿ ಸಹಜವಾಗಿ ಹಾಸುಹೊಕ್ಕಾಗಿರುವ ದೌರ್ಜನ್ಯಗಳು — ಈ ಎಲ್ಲವನ್ನೂ ‘ಲ್ಯಾಂಡ್ ಲಾರ್ಡ್’ ತನ್ನ ಕಥಾಹಂದರದಲ್ಲಿ ಗಂಭೀರವಾಗಿ ಹಿಡಿದಿಟ್ಟಿದೆ. ಅದಕ್ಕೇ ಈ ಚಿತ್ರ ಮನಮುಟ್ಟುತ್ತದೆ.

ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಶೋಷಣೆಯನ್ನು ಎದುರಿಸಲು ಪಾರಂಪರಿಕ ಕಂದಾಚಾರಗಳನ್ನು ಮೀರಿ, ಸಂವಿಧಾನದ ಮಾರ್ಗದ ಮೂಲಕ ಮುಕ್ತಿಯತ್ತ ಸಾಗಬೇಕು ಎಂಬ ಬಲವಾದ ಸಂದೇಶವನ್ನು ಈ ಚಿತ್ರ ನೀಡುತ್ತದೆ. ಶೋಷಣೆಯ ವಿರುದ್ಧ ಸಂವಿಧಾನವೇ ಶಸ್ತ್ರ ಎಂಬ ಅರಿವು ಮೂಡಿಸುತ್ತದೆ.

ನಾನು ಸಂವಿಧಾನದ ಕಾಲಾಳು ಆಗಿ, ಸಂವಿಧಾನ ರಕ್ಷಣೆಗೆ ಸಿದ್ಧವೆಂದು ಸಹಿ ಮಾಡಿರುವ ವ್ಯಕ್ತಿಯಾಗಿ, ಈ ಚಿತ್ರ ನನಗೆ ವಿಶೇಷ ಸಂತಸ ತಂದಿದೆ. ಇಂದಿನ ತುರ್ತು ಅಗತ್ಯವೇನೆಂದರೆ — ಪ್ರತಿ ಮನೆಮನೆಯಲ್ಲೂ ಸಂವಿಧಾನದ ಆಶಯವನ್ನು ತಲುಪಿಸುವ ಚಿಂತನೆ ಮತ್ತು ಚಳವಳಿ.

ಇಂತಹ ಸಾಮಾಜಿಕ ಹೊಣೆಗಾರಿಕೆಯ ಸಿನಿಮಾಗಳು ಇನ್ನಷ್ಟು ಹೆಚ್ಚು ಬರಬೇಕು. ‘ಲ್ಯಾಂಡ್ ಲಾರ್ಡ್’ ಅದಕ್ಕೆ ಒಂದು ಮಹತ್ವದ ಉದಾಹರಣೆ.

-ಬಸವರಾಜ ನಿಂ ಸಂಶಿ, ವಕೀಲರು.

ರಾಮೋದ್ಭವ ಸಹಿಸಲಾಗದ ಹಿಂದೂ ವಿರೋಧಿ ಕಾಂಗ್ರೆಸ್ಸಿಗರು: ಛಲವಾದಿ ನಾರಾಯಣಸ್ವಾಮಿ

0

ಬೆಂಗಳೂರು: ವಿಬಿ ಜಿ ರಾಮ್ ಜಿಯಲ್ಲಿ ರಾಮನ ಉದ್ಭವವನ್ನು ಕಾಂಗ್ರೆಸ್ಸಿಗೆ ಸಹಿಸಲು ಸಾಧ್ಯವಾಗಿಲ್ಲ. ಹಿಂದುತ್ವ, ರಾಮನ ವಿರೋಧ ಕಾಂಗ್ರೆಸ್ಸಿಗೆ ಸಹಜವಾದುದು. ಇದನ್ನು ವಿರೋಧಿಸಲೇಬೇಕೆಂದೇ ವಿಶೇಷ ಅಧಿವೇಶನ ಕರೆದಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಜೋಡಿಸಿದ್ದಲ್ಲ; ವಿಕಸಿತ ಭಾರತ ಗ್ಯಾರಂಟಿ ರೋಜ್‍ಗಾರ್ ಅಜೀವಿಕಾ ಮಿಷನ್ ಎಂಬುದು ರಾಮ್ ಎಂದು ಬಂದಿದೆ. ಯೋಜನೆಯಲ್ಲಿ ಇದೊಂದು ರೀತಿಯ ರಾಮೋದ್ಭವ ಆಗಿದೆ ಎಂದು ತಿಳಿಸಿದರು.

ಸದ್ಯಕ್ಕೆ ಸದನ ಕರೆಯುವ ಅವಶ್ಯಕತೆ ಇರಲಿಲ್ಲ ಎಂದ ಅವರು, ನರೇಗಾ ಯೋಜನೆಯನ್ನು ಇನ್ನಷ್ಟು ಗಟ್ಟಿಗೊಳಿಸಿ ಕಾಯ್ದೆಯನ್ನಾಗಿ ಮಾಡಿ ಕೇಂದ್ರ ಸರಕಾರ ಜಾರಿಗೊಳಿಸಿದ ‘ವಿಬಿ ಜಿ ರಾಮ್ ಜಿ’ ಅಡಿಯಲ್ಲಿ 100 ದಿನಗಳ ಬದಲು 125 ದಿನ ಕೆಲಸ ನೀಡಲಾಗುತ್ತಿದೆ.

ಜನರೇ ಕೆಲಸ ಮಾಡಬೇಕು. ಬಯೋಮೆಟ್ರಿಕ್‍ನಲ್ಲಿ ಹೆಸರು ಬಂದು ಅವರಿಗೆ 370 ರೂ. ಕೂಲಿಯನ್ನು ನೇರವಾಗಿ ಖಾತೆಗೇ ನೀಡುವ ಯೋಜನೆ ಇದಾಗಿದೆ. ಯಂತ್ರಗಳಿಂದ ಕೆಲಸ ಮಾಡಬಾರದು; ಜನರೇ ಕೆಲಸ ಮಾಡಿ, ಗ್ರಾಮೀಣ ಜನರ ಬದುಕು ಕಟ್ಟಿಕೊಡುವ ಯೋಜನೆ ಇದೆಂದು ವಿಶ್ಲೇಷಿಸಿದರು.

ಇದರ ಮೂಲಕ ಆಸ್ತಿ ನಿರ್ಮಾಣದ ಉದ್ದೇಶ ಇದೆ. ಆದರೆ, ಕಾಂಗ್ರೆಸ್ಸಿಗೆ ಅದು ಬೇಕಾಗಿರಲಿಲ್ಲ. ‘ವಿಬಿ ಜಿ ರಾಮ್ ಜಿ’ ಎಂದರೆ ರಾಮನ ಹೆಸರನ್ನು ಇದಕ್ಕೆ ಇಟ್ಟಿದ್ದಾರೆಂದು ಕಾಂಗ್ರೆಸ್ಸಿನವರು ಅಂದುಕೊಂಡಿದ್ದಾರೆ. ನರೇಗಾಗೆ ಮೊದಲು ನೆಹರೂ ಅವರ ಹೆಸರು ಇಡಲಾಗಿತ್ತು. ರೋಜ್‍ಗಾರ್ ಯೋಜನೆ ಎಂದಷ್ಟೇ ಕರೆಯಲಾಗಿತ್ತು. ಇವೆಲ್ಲ ಬಿಟ್ಟು ಕೊನೆಯಲ್ಲಿ ಮಹಾತ್ಮ ಗಾಂಧಿ ಎಂದು ಹೆಸರು ಜೋಡಿಸಿದ್ದರು ಎಂದು ವಿವರಿಸಿದರು.

ಇಡಿ–ಐಟಿ ಬಳಸಿಕೊಂಡು ಉದ್ಯಮಿಗಳಿಗೆ ಕಿರುಕುಳ: ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ಆರೋಪ

0

ಬೆಂಗಳೂರು: ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರದ ಮಾತು ಕೇಳದ ಉದ್ಯಮಿಗಳಿಗೆ ಇಡಿ, ಐಟಿ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳನ್ನು ಬಳಸಿ ಕಿರುಕುಳ ನೀಡಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಉದ್ಯಮಿಗಳ ಮೇಲೆ ಕೇಂದ್ರ ಸರ್ಕಾರದ ದಬ್ಬಾಳಿಕೆ ದೇಶವ್ಯಾಪಿ ನಡೆಯುತ್ತಿದೆ. ಕಳೆದ ಒಂದು ದಶಕದಿಂದ ಇಡಿ, ಐಟಿ ಹಾಗೂ ಜಿಎಸ್ಟಿ ಮೂಲಕ ಉದ್ಯಮಿಗಳಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ನಿಲುವಿಗೆ ತಲೆಬಾಗದ ಉದ್ಯಮಿಗಳೇ ಈ ದಬ್ಬಾಳಿಕೆಗೆ ಗುರಿಯಾಗುತ್ತಿದ್ದಾರೆ ಎಂದು ಹೇಳಿದರು.

ಈ ಕುರಿತು ಸಾಕಷ್ಟು ಉದಾಹರಣೆಗಳಿವೆ ಎಂದು ಹೇಳಿದ ಪ್ರಿಯಾಂಕ್ ಖರ್ಗೆ, ಅಂಬಾನಿ ಹಾಗೂ ಅದಾನಿ ಮುಂತಾದ ಉದ್ಯಮಿಗಳಿಗೆ ಇಡಿ ಅಥವಾ ಐಟಿ ಯಾವುದೇ ತೊಂದರೆ ನೀಡಿಲ್ಲ. ಸರ್ಕಾರ ಅವರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ, ಅವರ ಮೇಲೆ ಎಷ್ಟರ ಮಟ್ಟಿಗೆ ಕಿರುಕುಳ ನೀಡಲಾಗಿರಬಹುದು ಎಂದು ಅರ್ಥ ಮಾಡಿಕೊಳ್ಳಬಹುದು. ಇದೇ ರೀತಿಯ ಕಿರುಕುಳ ಸಾಮಾನ್ಯ ಜನರಿಗೂ ಎದುರಾಗುತ್ತಿದೆ. ಬೇಕಾದರೆ ಸರ್ವೆ ನಡೆಸಿದರೂ ಈ ಸತ್ಯ ಬಹಿರಂಗವಾಗುತ್ತದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಜನರಿಗೆ ತೊಂದರೆ ನೀಡಲು ಹೊಸ ಆಯುಧಗಳನ್ನು ಬಳಸುತ್ತಿದೆ. ಈ ಕಿರುಕುಳದ ಬಗ್ಗೆ ನಾನು ಮಾತ್ರವಲ್ಲ, ರಾಯ್ ಅವರ ಕುಟುಂಬವೂ ಮಾತನಾಡುತ್ತಿದೆ. ಹೀಗಾಗಿ ಈ ವಿಚಾರದ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಲಕ್ಕುಂಡಿಯ ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿಗೆ ₹10 ಕೋಟಿ: ಡಿಸಿ ಸಿ.ಎನ್. ಶ್ರೀಧರ್

0

ಗದಗ: ಲಕ್ಕುಂಡಿಯ ಐತಿಹಾಸಿಕ ದೇವಸ್ಥಾನಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆಗೆ ಒಳಪಡುವ ಪ್ರಮುಖ ದೇವಸ್ಥಾನಗಳನ್ನು ಡಿಸಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಲಕ್ಕುಂಡಿಯ ಐತಿಹಾಸಿಕ ಕುಂಭಾರೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಮನೆಗಳ ಶೀಘ್ರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿ ತಿಳಿಸಿದ್ದಾರೆ. ಈ ಕಾರ್ಯವನ್ನು ಕೇಂದ್ರ ಪುರಾತತ್ವ ಇಲಾಖೆ (ASI) ಮೂಲಕ ನಡೆಸಲಾಗುವುದು. ಈಗಾಗಲೇ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಪರಿಹಾರವನ್ನು ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

“ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ಮನೆಗಳನ್ನು ಖಾಲಿ ಮಾಡಿಸಲಾಗುತ್ತದೆ. ಇದು ಸಂಪೂರ್ಣವಾಗಿ ಕೇಂದ್ರ ಪುರಾತತ್ವ ಇಲಾಖೆಯ ಜವಾಬ್ದಾರಿ” ಎಂದು ಡಿಸಿ ಸಿ.ಎನ್. ಶ್ರೀಧರ್ ಹೇಳಿದರು.

ಇನ್ನೂ, 2025-26ನೇ ಸಾಲಿನಲ್ಲಿ ಲಕ್ಕುಂಡಿಯ ಆರು ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿಗೆ ₹10 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು. ರಾಜ್ಯ ಹಾಗೂ ಕೇಂದ್ರ ಪುರಾತತ್ವ ಅಧಿಕಾರಿಗಳ ವರದಿ ಬಂದ ನಂತರ ಆದ್ಯತೆ ಮೇರೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಒಕ್ಕಲೆಬ್ಬಿಸುವ ಪರಿಸ್ಥಿತಿ ನಿರ್ಮಾಣವಾದಲ್ಲಿ ಸೂಕ್ತ ಪರಿಹಾರ ನೀಡಲಾಗುತ್ತದೆ. ಸ್ಥಳಾಂತರದ ಕುರಿತಂತೆ ಅಂತಿಮ ತೀರ್ಮಾನವನ್ನು ಕಾಲವೇ ನಿರ್ಧರಿಸಲಿದೆ ಎಂದು ಡಿಸಿ ತಿಳಿಸಿದರು.

ಕನಕಪುರದ ಮಕ್ಕಳು ಬೆಳೆದರೆ, ನನ್ನ ಮಕ್ಕಳು ಬೆಳೆದಷ್ಟೇ ಖುಷಿ: ಡಿ.ಕೆ. ಶಿವಕುಮಾರ್

0

ಕನಕಪುರ: ಕನಕಪುರದ ಮಕ್ಕಳು ಬೆಳೆದರೆ, ನನ್ನ ಮಕ್ಕಳು ಬೆಳೆದಷ್ಟೇ ಖುಷಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕನಕಪುರದಲ್ಲಿ ನಡೆಯುತ್ತಿರುವ ಕನಕೋತ್ಸವದಲ್ಲಿ ಶನಿವಾರ ನಡೆದ ಎಸ್ಎಸ್ಎಲ್ ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

ಇಲ್ಲಿರುವ ಮಕ್ಕಳು ಹಾಗೂ ಇವರನ್ನು ತಯಾರು ಮಾಡಿದ ತಂದೆ ತಾಯಿ, ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವು ನಿಮ್ಮ ಮೂಲವನ್ನು ಮರೆತರೆ ಯಶಸ್ಸು ಸಾಧಿಸುವುದಿಲ್ಲ. ವಿದೇಶಿಗರು ಭಾರತವನ್ನು ಬೆಂಗಳೂರು ಮೂಲಕ ನೋಡುತ್ತಿದ್ದಾರೆ. ನಾನು ಇತ್ತೀಚೆಗೆ ದಾವೋಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿ ಮಾತನಾಡಿದೆ. ನಮ್ಮ ಬೆಂಗಳೂರು ಹಾಗೂ ಇಲ್ಲಿನ ಯುವಕರ ಪ್ರತಿಭೆ ಬಗ್ಗೆ ನಾನು ಅಲ್ಲಿ ಮಾತನಾಡಿ ಬಂದಿದ್ದೇನೆ. ನಮ್ಮ ಯುವಕರು ಬಹಳ ಪ್ರತಿಭಾವಂತರು, ನೀವು ನಮ್ಮಲ್ಲಿ ಹೂಡಿಕೆ ಮಾಡಿ ಬನ್ನಿ ಎಂದು ಆಹ್ವಾನ ನೀಡಿದ್ದೇನೆ” ಎಂದು ತಿಳಿಸಿದರು.

“ನಾನು ಓದುವಾಗ ನಮ್ಮ ಗುರುಗಳು ಒಂದು ಮಾತು ಹೇಳುತ್ತಿದ್ದರು. ವಿದ್ಯಾ ದದಾತಿ ವಿನಯಂ, ವಿನಯಾತ್ ಯಾತಿ ಪಾತ್ರತಾಂ, ಪಾತ್ರತ್ವಾತ್ ಧನಂ ಆಪ್ನೋತಿ, ಧನಾತ್ ಧರ್ಮ ತಥಃ ಸುಖಂ. ಅಂದರೆ ವಿದ್ಯೆಯಿಂದ ವಿನಯ, ವಿನಯದಿಂದ ವ್ಯಕ್ತಿತ್ವ, ವ್ಯಕ್ತಿತ್ವದಿಂದ ಹಣ, ಹಣದಿಂದ ಧರ್ಮಕಾರ್ಯಗಳು, ಧರ್ಮ ಕಾರ್ಯಗಳಿಂದ ಸುಖ ಸಿಗುತ್ತದೆ ಎಂದರ್ಥ” ಎಂದರು.

“ನಾನು ಪದವಿ ಪಡೆದಿದ್ದು, ನನ್ನ 47ನೇ ವಯಸ್ಸಿನಲ್ಲಿ. ಅಂದರೆ 2008ರಲ್ಲಿ. ನಾನು ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವಾಗ ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಪಕ್ಷದಿಂದ ಚುನಾವಣೆಗೆ ಟಿಕೆಟ್ ನೀಡಲಾಯಿತು. ನಾನು ಬಂಗಾರಪ್ಪ, ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ಸಚಿವನಾದಾಗಿಂತ ನನಗೆ ಪದವಿ ಪಡೆದಾಗ ಹೆಚ್ಚು ಖುಷಿಯಾಯಿತು. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಸಕ್ತಿಯಲ್ಲಿ ಶಿಕ್ಷಣ ತಜ್ಞ, ಆಸಕ್ತಿಯಲ್ಲಿ ನಾನು ರಾಜಕಾರಣಿ” ಎಂದು ಹೇಳಿದರು.

ಖಾತೆ ಬದಲಾವಣೆಗೆ 4 ಲಕ್ಷ ಲಂಚ: ಶಿವಮೊಗ್ಗದಲ್ಲಿ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

0

ಶಿವಮೊಗ್ಗ: ಜಮೀನು ಖಾತೆ ಬದಲಾವಣೆಗಾಗಿ 4 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, ಅದರಲ್ಲೂ 1 ಲಕ್ಷ ರೂಪಾಯಿ ಮುಂಗಡ ಹಣ ಸ್ವೀಕರಿಸುವ ವೇಳೆ ಚಿಕ್ಕಜಂಬೂರು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಬಂಧಿತ ಆರೋಪಿಯನ್ನು ವಿಠಲ ಎಂದು ಗುರುತಿಸಲಾಗಿದೆ. ಶಿಕಾರಿಪುರ ಪಟ್ಟಣದ ಸರ್ಕಾರಿ ನೌಕರರ ಕ್ಯಾಂಟೀನ್‌ನಲ್ಲಿ 1 ಲಕ್ಷ ರೂಪಾಯಿ ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ  ವಶಕ್ಕೆ ಪಡೆದಿದ್ದಾರೆ.

ಜಂಬೂರು ಗ್ರಾಮದ ಜಿಕ್ರಿಯಾ ಬೇಗ್ ಅವರು ತಮ್ಮ ತಂದೆಯ ವಿಲ್ಪತ್ರದ ಆಧಾರದ ಮೇಲೆ ಜಮೀನಿನ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಖಾತೆ ಬದಲಾವಣೆ ಮಾಡಿಕೊಡಲು ಗ್ರಾಮ ಲೆಕ್ಕಾಧಿಕಾರಿ ವಿಠಲ ಅವರು 4 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಇದರಲ್ಲಿ 1 ಲಕ್ಷ ರೂಪಾಯಿ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ, ಇನ್ಸ್ಪೆಕ್ಟರ್ ಮೈಲಾರ ಹಾಗೂ ಸಿಬ್ಬಂದಿಯವರಿಂದ ಯಶಸ್ವಿಯಾಗಿ ನಡೆಸಲಾಯಿತು.

ಸಿಜೆ ರಾಯ್ ಅವರೇ ಶೂಟ್ ಮಾಡಿಕೊಂಡ್ರಾ ಅಥವಾ ಶೂಟ್ ಮಾಡಿದ್ರಾ? ಪ್ರದೀಪ್ ಈಶ್ವರ್ ಅನುಮಾನ!

0

ರಾಮನಗರ: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ಭಾರಿ ರಾಜಕೀಯ ಸಂಚು ಇರುವ ಸಾಧ್ಯತೆ ಇದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಯ್ ಅವರು ತಾವೇ ಗುಂಡು ಹೊಡೆದುಕೊಂಡರೋ ಅಥವಾ ಯಾರಾದರೂ ಗುಂಡು ಹೊಡೆದ್ರೋ ಎಂಬ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ.

ಕನಕಪುರದಲ್ಲಿ ಮಾತನಾಡಿದ ಅವರು, ಘಟನಾ ಸ್ಥಳದಲ್ಲಿ ಸಿಸಿಟಿವಿ ವ್ಯವಸ್ಥೆಯೇ ಇರಲಿಲ್ಲ. ಸ್ಥಳದಲ್ಲಿ ಇದ್ದವರು ಕೇವಲ ಐಟಿ ಅಧಿಕಾರಿಗಳು ಮಾತ್ರ. ಒಳಗಡೆ ಏನಾಯ್ತು ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ ಎಂದು ಹೇಳಿದರು.

ಬಿಜೆಪಿ ಮುಖಂಡರು ಚುನಾವಣೆಗೆ ನೂರಾರು ಕೋಟಿ ರೂಪಾಯಿ ಹಣ ಕೇಳಿದ್ದಾರೆ. ಹಣ ಕೊಡದ ಕಾರಣ ರಾಯ್ ಅವರನ್ನು ಟಾರ್ಗೆಟ್ ಮಾಡಿ ಐಟಿ ದಾಳಿ ಮೂಲಕ ಕಿರುಕುಳ ನೀಡಲಾಗಿದೆ ಎಂಬುದು ನನ್ನ ಬಳಿ ಇರುವ ಪ್ರಾಥಮಿಕ ಮಾಹಿತಿ ಎಂದು ಪ್ರದೀಪ್ ಈಶ್ವರ್ ಆರೋಪಿಸಿದರು.

ಸಿಜೆ ರಾಯ್ ಒಬ್ಬ ಕಾಮನ್ ಮ್ಯಾನ್ ಅಲ್ಲ. ಅವರಿಗೆ ಸಾಲವೂ ಇರಲಿಲ್ಲ, ಯಾವುದೇ ವೈಯಕ್ತಿಕ ಸಮಸ್ಯೆಯೂ ಇರಲಿಲ್ಲ. ಆದರೂ ಕಳೆದ ಒಂದು ತಿಂಗಳಿನಿಂದ ಐಟಿ ಅಧಿಕಾರಿಗಳಿಂದ ನಿರಂತರ ಕಿರುಕುಳ ಅನುಭವಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವವರೆಗೂ ಇಂತಹ ದೌರ್ಜನ್ಯಗಳು ನಿಲ್ಲುವುದಿಲ್ಲ ಎಂದು ಅವರು ಕಿಡಿಕಾರಿದರು.

ಸಿಬಿಐಗೆ ತನಿಖೆ ನೀಡಿದರೆ ನ್ಯಾಯ ಸಿಗುವುದಿಲ್ಲ. ಸಿಬಿಐ ಕೂಡ ಬಿಜೆಪಿ ಕೈಯಲ್ಲೇ ಇದೆ ಎಂದು ಆರೋಪಿಸಿದ ಅವರು, ಸ್ವತಂತ್ರ ಎಸ್‌ಐಟಿ ತನಿಖೆ ನಡೆಸಬೇಕು. ನಿಜಾಂಶ ಹೊರಬರಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

error: Content is protected !!