Home Blog Page 79

ಹಿಂದೂ ಸಮಾಜದಲ್ಲಿ ಗಟ್ಟಿತನ ಬೇಕು: ಕೃಷ್ಣಜೀ ಜೋಶಿ

ವಿಜಯಸಾಕ್ಷಿ ಸುದ್ದಿ, ಗದಗ: ಸಂಗೀತದಲ್ಲಿ ದೃಷ್ಟಿ, ಜೀವನ ನೀಡಿದ ಕ್ಷೇತ್ರ ಗದಗ. ಸಂಸ್ಕೃತಿ ಬಿಂಬಿಸುವ ನಗರದಲ್ಲಿ ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ನಡೆಯುತ್ತಿರುವುದು ಸ್ವಾಗತಾರ್ಹ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಹಿಂದೂ ಸಮಾಜ ಜಾಗೃತವಾಗಿರಬೇಕು ಎಂಬ ಉದ್ದೇಶದಿಂದ ಈ ಯಾತ್ರೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ಉತ್ತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರ ಪ್ರಮುಖ ಕೃಷ್ಣಜೀ ಜೋಶಿ ಹೇಳಿದರು.

ಗದಗಿನ ಕಿತ್ತೂರು ರಾಣಿ ಚೆನ್ನಮ್ಮ ನಗರದಲ್ಲಿ ಶನಿವಾರ ಸಂಜೆ ಜರುಗಿದ ಹಿಂದೂ ಸಮಾಜೋತ್ಸವ, ಶೋಭಾಯಾತ್ರೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಹಿಂದೂಗಳು ಸಂವಿಧಾನ ಹಕ್ಕಿನ ಜೊತೆಗೆ ಕರ್ತವ್ಯಗಳನ್ನು ಪಾಲಿಸಬೇಕು. ಅದರಲ್ಲಿ ನಾಗರಿಕ ಕರ್ತವ್ಯ ಮುಖ್ಯವಾಗಿದೆ ಎಂದರು.

ವಿಶ್ವದಲ್ಲಿ ನಾಗರಿಕತೆ ಇಲ್ಲದ ಸಂದರ್ಭದಲ್ಲಿ ಭಾರತದಲ್ಲಿ ನಾಗರಿಕ ಸಂಸ್ಕೃತಿ ಉಚ್ಚಾಯ ಸ್ಥಿತಿಯಲ್ಲಿತ್ತು. ಹಿಂದೂ ಸಮಾಜದಿಂದ ಭಾರತ ಜಗತ್ತಿಗೇ ಗುರುವಾಗಿತ್ತು. ಆದರೆ, 1093ರಲ್ಲಿ ಪೃಥ್ವಿರಾಜ ಚವ್ಹಾಣನನ್ನು ಸೋಲಿಸಿ ಮಹಮ್ಮದ ಘೋರಿ ದೆಹಲಿಯಲ್ಲಿ ಆಳ್ವಿಕೆ ಮಾಡಿದ. ಆದರೆ ಪೃಥ್ವಿರಾಜ ಚವ್ಹಾಣ ಸೋಲುವುದಕ್ಕೆ ಅವನ ಮಾವ ಜಯಚಂದನೇ ಕಾರಣ. ಅದೇ ರೀತಿ ಕಿತ್ತೂರು ಸಂಸ್ಥಾನದ ಆಳ್ವಿಕೆಯೂ ಕೊನೆಗೊಂಡಿತು. ಇತಿಹಾಸದಲ್ಲಿ ನಮ್ಮ ಅಧಃಪತನಕ್ಕೆ ಹಿಂದೂಗಳೇ ಕಾರಣ. ನಾವು ಹಿಂದೂ, ನಾವೆಲ್ಲ ಒಂದು ಎನ್ನುವುದು ಯಾವಾಗ ಎಂದು ಪ್ರಶ್ನಿಸಿದರಲ್ಲದೆ, ನಮ್ಮ ಸಮಾಜದಲ್ಲಿ ಗಟ್ಟಿತನ ಬೇಕು. ಗಟ್ಟಿತನವೇ ನಾವು ಭವಿಷ್ಯದಲ್ಲಿ ಹಿಂದೂಗಳಾಗಿ ಉಳಿಯಲು ಕಾರಣವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ತಾಯಿ ಮತ್ತು ಭೂಮಿಗೆ ಗೌರವ ನೀಡಬೇಕು. ಭರತ ಖಂಡಕ್ಕೆ ಅಗೌರವ ತೋರಿದರೆ ತಾಯಿಗೆ ಅಗೌರವ ತೋರಿದಂತೆ ಎಂದರು.

ಮುಕ್ಕಣ್ಣೆಶ್ವರ ಮಠದ ಶಂಕರಾನಂದ ಶ್ರೀಗಳು, ಅಡ್ನೂರು ಮಠದ ಪಂಚಾಕ್ಷರಿ ಶಿವಾಚಾರ್ಯ ಶ್ರೀಗಳು, ಹಿಂದೂ ಸಮಾಜೋತ್ಸವ ಅಧ್ಯಕ್ಷ ಬಸವರಾಜ ಬಿಂಗಿ, ಹಿಂದೂ ಸಮಾಜೋತ್ಸವ ಸಮಿತಿ ಉಪಾಧ್ಯಕ್ಷ ಕೇಶವರಾಮ್ ಕೊಳ್ಳಿ, ಸಂಘಟನಾ ಕಾರ್ಯದರ್ಶಿ ಜಗದೀಶ್ ಎಸ್.ಪಿ, ಚಿನ್ಮಯಾನಂದ ಟೆಂಗಿನಕಾಯಿ, ಶಶಿಧರ ದಿಂಡೂರ, ರಘುನಾಥಸಾ ಮೆರವಾಡೆ, ರಾಜಣ್ಣ ಮಲ್ಲಾಡದ, ಮಂಜುನಾಥ ಕೊಟ್ನೆಕಲ್, ಚಂದ್ರಕಾಂತ ಚವ್ಹಾಣ, ಪ್ರೇಮಾ ಕಡೆಮನಿ, ಕಾರ್ಯದರ್ಶಿ ಪ್ರಕಾಶ ಉಗಲಾಟದ, ಶೈಲೇಶ್ ಬಾಗಮಾರ, ಹರೀಶ ಪೂಜಾರ, ರಾಜಶೇಖರ ಕುಂಬಿ, ನಾಗವೇಣಿ ಕಟ್ಟಿಮನಿ, ಡಾ. ಉಮೇಶ ಹಾದಿ, ಚಿನ್ಮಯಾನಂದ ಟೆಂಗಿನಕಾಯಿ ಮುಂತಾದವರಿದ್ದರು.

ಬೃಹತ್ ಹಿಂದೂ ಸಮ್ಮೇಳನದ ಶೋಭಾಯಾತ್ರೆಗೆ ವೀರೇಶ್ವರ ಪುಣ್ಯಾಶ್ರಮದ ಪಿಠಾಧಿಪತಿ ಡಾ.ಕಲ್ಲಯ್ಯಜ್ಜನವರು ಚಾಲನೆ ನೀಡಿದರು. ನಗರದ ವೀರೇಶ್ವರ ಪುಣ್ಯಾಶ್ರಮ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಮಠದಿಂದ ಶೋಭಾಯಾತ್ರೆ ಆರಂಭವಾಗಿ ವೆಂಕಟೇಶ ಟಾಕೀಸ್ ರಸ್ತೆ, ಟ್ಯಾಗೋರ್ ರಸ್ತೆ, ಕಿತ್ತೂರಾಣಿ ಚೆನ್ನಮ್ಮ ರಸ್ತೆ, ಹಾತಲಗೇರಿ ನಾಕಾ, ಸಾಯಿಬಾಬಾ ದೇವಸ್ಥಾನದಿಂದ ಮಾಳೇಕೊಪ್ಪಮಠ ಅವರ ಬಯಲು ಜಾಗವರೆಗೆ ಸಂಚರಿಸಿತು. ದೇಶಭಕ್ತಿಗೀತೆಗಳೊಂದಿಗೆ ರಾಷ್ಟ್ರ ಭಕ್ತರ ಭವ್ಯ ಭಾವಚಿತ್ರದ ಮೆರವಣಿಗೆ ರೋಮಾಂಚನ ತರಿಸಿತು. ಸಮ್ಮೇಳನದ ಹಿನ್ನೆಲೆಯಲ್ಲಿ ಇಡೀ ನಗರದಾದ್ಯಂತ ಭಗವಾಧ್ವಜಗಳು, ಬ್ಯಾನರ್‌ಗಳಿಂದ ನಗರಕ್ಕೆ ನಗರವೇ ಕೇಸರಿ ಬಣ್ಣದಲ್ಲಿ ಕಂಗೊಳಿಸಿತು. ಅವಳಿ ನಗರದ ವಿವಿಧ ಕಡೆ ಶೋಭಾಯಾತ್ರೆಯನ್ನು ಸಂಭ್ರಮದಿಂದ ಸ್ವಾಗತಿಸಿದರು.

 ಫೆ. 1ರಂದು ರಾಜ್ಯ ಮಟ್ಟದ ವಧು-ವರರ ಸಮಾವೇಶ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಫೆ. 1ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾ ಚೆನ್ನದಾಸರ ಸಮಾಜದಿಂದ ಜಿಲ್ಲಾ ಚೆನ್ನದಾಸರ ಸಮಾಜದ ನೂತನ ಸಂಘದ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ, ರಾಜ್ಯ ಮಟ್ಟದ ವಧು-ವರರ ಸಮಾವೇಶ ಮತ್ತು ಜಿಲ್ಲಾ ಚೆನ್ನದಾಸರ ಭವನ ನಿರ್ಮಾಣದ ಜಾಗ ಖರೀದಿಸಲು ದೇಣಿಗೆ ನೀಡುವ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಚೆನ್ನದಾಸರ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಹೆಬ್ಬಳ್ಳಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಓಂಕಾರೇಶ್ವರಗಿರಿಯ ಫಕೀರೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಚೆನ್ನದಾಸರ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಹೆಬ್ಬಳ್ಳಿ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಶಾಸಕ ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ಬಿ.ಆರ್. ಯಾವಗಲ್ಲ, ಕೃಷ್ಣಗೌಡ ಪಾಟೀಲ, ಯಮನೂರಪ್ಪ ದಂಡಗಿದಾಸರ, ಗಂಗಾಧರಪ್ಪ, ಬಸವರಾಜ ನಾರಾಯಣಕರ, ಬಿ.ಎಚ್. ಮಂಜುನಾಥ, ನಂದಾ ಹಣಬರಹಟ್ಟಿ, ಗೋವಿಂದರಾಜ ದಾಸರಿ, ಉಷಾ ದಾಸರ ಮುಂತಾದವರು ಭಾಗವಹಿಸುವರು ಎಂದರು.

ರಾಜ್ಯ ಮಟ್ಟದ ವಧು-ವರರ ಸಮಾವೇಶದಲ್ಲಿ ಸಮಾಜದ ಅವಿವಾಹಿತ ಯುವಕ-ಯುವತಿಯರು ತಮ್ಮ ಹೆಸರನ್ನು ನೋಂದಾಯಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹೇಮಂತ ದಾಸರ, ಭೀಮಪ್ಪ ಬೇವೂರ, ಮಾರುತಿ ದಂಡಗಿದಾಸರ, ಕೃಷ್ಣಾ ದಾಸರ, ಮಹೇಶ ದಾಸರ, ಚಿದಾನಂದಪ್ಪ ಕಟ್ಟಿಮನಿ, ವಾಸುದೇವ ಚೆನ್ನದಾಸರ, ಗೋವಿಂದರಾಜ ದಾಸರ, ಎಚ್.ಎಲ್. ದಾಸರ, ರವಿ ಕಪ್ಪಲಿ ಮುಂತಾದವರು ಇದ್ದರು.

ಸ್ಥಳೀಯ ಆಡಳಿತ ಜನರಿಗೆ ಹತ್ತಿರವಾಗಬೇಕು: ಡಿ.ಆರ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದಲೇ ರೂಪಿಸಿದ ಯೋಜನೆಯನ್ವಯ ರಾಜ್ಯದ ಆಯವ್ಯಯ ತಯಾರಾಗಬೇಕು. ಆ ಮೂಲಕ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕು ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಆಶಿಸಿದರು.

ಅವರು ಶನಿವಾರ ಪಟ್ಟಣದ ತಾ.ಪಂ ಸಭಾಭವನದಲ್ಲಿ 2027-28ನೇ ಸಾಲಿನ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯನ್ನು ಜನಪರ ಯೋಜನೆಯನ್ನಾಗಿಸುವ ಕುರಿತು ಜಿ.ಪಂ, ತಾ.ಪಂ, ಗ್ರಾ.ಪಂ ಹಾಗೂ ತಾಲೂಕು ಯೋಜನಾ ಮತ್ತು ಅಭಿವೃದ್ಧಿ ಸಮಿತಿ ಇವರ ಸಹಯೋಗದಲ್ಲಿ ನಡೆಸಿದ ತಾಲೂಕು ಮಟ್ಟದ ಚಿಂತನ-ಮಂಥನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಧಿಕಾರ ವಿಕೇಂದ್ರೀಕರಣ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮತ್ತು ಬಲವರ್ಧನೆಯಾಗಬೇಕು ಮತ್ತು ಆ ಮೂಲಕ ಸ್ಥಳೀಯ ಆಡಳಿತ ವ್ಯವಸ್ಥೆ ಜನರಿಗೆ ಹತ್ತಿರವಾಗಬೇಕು. ಸಂವಿಧಾನದಡಿ ಪ್ರತಿಯೊಬ್ಬರಿಗೂ ಇರುವ ಸಮಾನ ನ್ಯಾಯ, ಸ್ಥಾನಮಾನ, ಅವಕಾಶ, ಹಕ್ಕುಗಳನ್ನರಿತು ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸಾಕಾರಕ್ಕೆ ಕೈ ಜೋಡಿಬೇಕು. ಪಂಚಾಯತ್ ರಾಜ್ ವ್ಯವಸ್ಥೆಯ ಯೋಜನೆಗಳು ಸರ್ವಜನರ ಹಿತ ಮತ್ತು ಅವಶ್ಯಕತೆಗನುಗುಣವಾಗಿ ತಳಮಟ್ಟದಿಂದಲೇ ರೂಪಿತವಾಗಬೇಕು ಎಂಬ ಆಶಯದಿಂದ 2027-28ರ ಬಜೆಟ್‌ಗೆ ಪೂರ್ವಕವಾಗಿ ಜನಾಭಿಪ್ರಾಯ, ಚಿಂತನ-ಮಂಥನಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ ಎಂದರು.

ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಸುಜಾತಾ ದೊಡ್ಡಮನಿ ಮಾತನಾಡಿದರು. ಜಿಲ್ಲಾ ಯೋಜನಾ ಅಧಿಕಾರಿ ಎ.ಎ. ಕಂಬಾಳಿಮಠ ಪ್ರಾಸ್ತಾವಿಕ ನುಡಿದರು. ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಒಂದಾಗೋಣ ಎಂಬ ಪ್ರತಿಜ್ಞಾವಿಧಿ ಬೋಧಿಸಿದರು. ತಾ.ಪಂ ಆಡಳಿತಾಧಿಕಾರಿ ಎಂ.ವಿ. ಚಳಗೇರಿ, ತಾ.ಪಂ ಇಓ ಧರ್ಮರ ಕೃಷ್ಣಪ್ಪ, ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ಆನಂದಸ್ವಾಮಿ ಗಡ್ಡದೇವರಮಠ, ಚನ್ನಪ್ಪ ಜಗಲಿ, ವಿ.ಜಿ. ಪಡಗೇರಿ, ವೀರಯ್ಯ ಮಠಪತಿ, ಪ್ರವೀಣ ಬಾಳಿಕಾಯಿ, ರಾಮಣ್ಣ ಲಮಾಣಿ(ಶಿಗ್ಲಿ), ಜಯಕ್ಕ ಕಳ್ಳಿ, ಶಶಿಕಲಾ ಬಡಿಗೇರ, ಕಲ್ಲಪ್ಪ ಗಂಗಣ್ಣವರ, ಶಿವರಾಜಗೌಡ ಪಾಟೀಲ, ರಫೀಕ ಕಲಬುರ್ಗಿ, ಯಲ್ಲಪ್ಪ ತಳವಾರ, ಪರಮೇಶ ಲಮಾಣಿ, ಅಂಬರೀಶ ತೆಂಬದಮನಿ, ಫಕ್ಕೀರೇಶ ಮ್ಯಾಟಣ್ಣವರ, ಫಿರ್ದೋಸ್ ಆಡೂರ, ಯಲ್ಲವ್ವ ದುರಗಣ್ಣವರ, ಸಂತೋಷ ತಾಂದಳೆ, ರಾಜು ಓಲೇಕಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರು, ಸಾರ್ವಜನಿಕರು ಇದ್ದರು. ಈಶ್ವರ ಮೆಡ್ಲೇರಿ ನಿರೂಪಿಸಿದರು.

ದೇಶದ ಅಭಿವೃದ್ಧಿಗೆ ಗ್ರಾಮಗಳ ಅಭಿವೃದ್ಧಿ ಪೂರಕವಾಗಿದೆ. ಗ್ರಾಮ ಸಭೆಗಳಲ್ಲಿಯೂ ಬಜೆಟ್ ಬಗ್ಗೆ ಚರ್ಚೆ ಆಗಬೇಕು. 2027-28ರ ಆರ್ಥಿಕ ವರ್ಷದ ಅಭಿವೃದ್ಧಿ ಯೋಜನೆಗಳನ್ನು ಜನರ ಅಪೇಕ್ಷೆಯಂತೆ ರೂಪಿಸಬೇಕು. ಸ್ಥಳೀಯ ಸಂಸ್ಥೆಗಳು ಸ್ಥಳೀಯ ಸರ್ಕಾರವೇ ಆಗಿದ್ದು, ಅವಕ್ಕೆ ಪ್ರತ್ಯೇಕ ಅನುದಾನ ಸಿಗಬೇಕು. ಜನರ, ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯವಂತಾಗಿ ಗ್ರಾಮಗಳು ಸ್ವಾವಲಂಬಿಯಾಗಿ ಬೆಳೆಯಬೇಕು ಎಂದು ಡಿ.ಆರ್. ಪಾಟೀಲ ಹೇಳಿದರು.

ರೋಣ ತಾಲೂಕಿನಲ್ಲಿ ಫೆ. 1ರಿಂದ 28ರವರೆಗೆ ಕರವಸೂಲಿ ಮಾಸಾಚರಣೆ

0

ವಿಜಯಸಾಕ್ಷಿ ಸುದ್ದಿ, ರೋಣ: ಆರ್ಥಿಕ ವರ್ಷದ ಅಂತ್ಯಕ್ಕೆ ಕೇವಲ ಎರಡು ತಿಂಗಳು ಮಾತ್ರ ಬಾಕಿಯಿದ್ದು, ರೋಣ ತಾಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ ಫೆಬ್ರವರಿ 1ರಿಂದ 28ರವರೆಗೆ ಒಂದು ತಿಂಗಳ ಕಾಲ ನಿರಂತರ ಕರವಸೂಲಿ ಮಾಸಾಚರಣೆ ಅಭಿಯಾನವನ್ನು ಹಮ್ಮಿಕೊಂಡು ಶೇ. 100ರಷ್ಟು ತೆರಿಗೆ ವಸೂಲಿ ಸಾಧಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಗ್ರಾ.ಪಂ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಕುರಿತು ತಾಲೂಕಿನ ಕಾರ್ಯ ನಿರ್ವಾಹಕ ಕಚೇರಿಯಲ್ಲಿ ಸಿಬ್ಬಂದಿಗಳ ಜೊತೆ ಸಭೆ ನಡೆಸಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಫೆಬ್ರವರಿ ತಿಂಗಳ ಸಂಪೂರ್ಣ ಅವಧಿಯಲ್ಲಿ ತಾಲೂಕಿನ ಎಲ್ಲಾ ಗ್ರಾ.ಪಂಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆಯವರೆಗೂ ತೆರಿಗೆ ವಸೂಲಾತಿ ಕಾರ್ಯವನ್ನು ತೀವ್ರಗೊಳಿಸಬೇಕು ಎಂದು ತಿಳಿಸಿದ್ದಾರೆ.

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಕರವಸೂಲಿಗಾರರು, ಗಣಕಯಂತ್ರ ನಿರ್ವಾಹಕರು, ವಾಟರ್‌ಮನ್‌ಗಳು, ಸಿಪಾಯಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಒಂದೇ ತಂಡವಾಗಿ ಕಾರ್ಯನಿರ್ವಹಿಸಿ ಗರಿಷ್ಠ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡಬೇಕು ಎಂದು ಸೂಚಿಸಿದ್ದಾರೆ.

ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಎಲ್ಲಾ ಆಸ್ತಿ ಮಾಲೀಕರನ್ನು ಗುರುತಿಸಿ ತಕ್ಷಣವೇ ನೋಟೀಸ್ ಜಾರಿ ಮಾಡಬೇಕು. ಪಂಚತಂತ್ರ 2.0 ತಂತ್ರಾಂಶದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಬಾಕಿಯಿರುವ ಸಂಪೂರ್ಣ ತೆರಿಗೆ ಮೊತ್ತವನ್ನು ಫೆಬ್ರವರಿ ತಿಂಗಳೊಳಗೆ ವಸೂಲಿ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.

ಬಾಕಿ ಉಳಿಸಿಕೊಂಡಿರುವ ಕನಿಷ್ಠ 200 ಆಸ್ತಿ ಮಾಲೀಕರಿಗೆ ತಗಾದೆ ನೋಟೀಸ್ ಜಾರಿ ಮಾಡಿ, ಅಭಿಯಾನದ ಅವಧಿಯಲ್ಲೇ ಸಂಪೂರ್ಣ ತೆರಿಗೆ ವಸೂಲಿ ಮಾಡಬೇಕು. ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಮೊಬೈಲ್ ಟವರ್ ಕಂಪನಿಗಳು, ಅಂಗಡಿ ಮಾಲೀಕರು, ಉದ್ಯಮಿಗಳು ಹಾಗೂ ಸರ್ಕಾರಿ ನೌಕರರಿಂದ ಶೇ. 100ರಷ್ಟು ತೆರಿಗೆ ಬಾಕಿ ವಸೂಲಿ ಮಾಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಕರವಸೂಲಿ ಅಭಿಯಾನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಸ್ವಚ್ಛ ವಾಹಿನಿ ಹಾಗೂ ಡಂಗೂರ ಸಾರುವ ಮೂಲಕ ವ್ಯಾಪಕ ಪ್ರಚಾರ ನೀಡಬೇಕು. ಜೊತೆಗೆ ಅಭಿಯಾನದಲ್ಲಿ ಎಲ್ಲಾ ಚುನಾಯಿತ ಪ್ರತಿನಿಧಿಗಳನ್ನು ಸಕ್ರಿಯವಾಗಿ ಭಾಗಿಯಾಗಿಸಿಕೊಂಡು, ವಾರ್ಡ್ವಾರು ಸಾರ್ವಜನಿಕರನ್ನು ಮನವೊಲಿಸಿ ತೆರಿಗೆ ಪಾವತಿಗೆ ಪ್ರೇರೇಪಿಸುವಂತೆ ಸೂಚಿಸಿದ್ದಾರೆ.

ರೋಣ ತಾಲೂಕಿನಲ್ಲಿ ಶೇ. 100ರಷ್ಟು ತೆರಿಗೆ ವಸೂಲಿ ಸಾಧಿಸುವ ಉದ್ದೇಶದಿಂದ ಫೆಬ್ರವರಿ 1ರಿಂದ 28ರವರೆಗೆ ತಾಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ ಕರವಸೂಲಿ ಮಾಸಾಚರಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಗ್ರಾ.ಪಂನ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗಿ ತೆರಿಗೆ ವಸೂಲಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಅಭಿಯಾನದ ವೇಳೆ ಯಾವುದೇ ಸಿಬ್ಬಂದಿಗಳಿಗೆ ರಜೆ ಇರುವುದಿಲ್ಲ. ಅನಧಿಕೃತವಾಗಿ ಗೈರು ಹಾಜರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

  • ಚಂದ್ರಶೇಖರ ಬಿ.ಕಂದಕೂರ.
    ಕಾರ್ಯನಿರ್ವಾಹಕ ಅಧಿಕಾರಿಗಳು,
    ತಾ.ಪಂ-ರೋಣ.

ತಪ್ಪದೇ ರಸ್ತೆ ನಿಯಮಗಳನ್ನು ಪಾಲಿಸಿ: ಭರತ ಯೋಗೇಶ ಕರಗುದರಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮನುಷ್ಯನ ಜೀವ ಅತ್ಯಮೂಲ್ಯವಾಗಿದ್ದು, ವಾಹನ ಚಲಾಯಿಸುವ ಪ್ರತಿಯೊಬ್ಬರೂ ತಪ್ಪದೇ ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ರಸ್ತೆ ಅಪಘಾತ, ಸಾವು-ನೋವು ತಡೆಯುವ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಭರತ ಯೋಗೇಶ ಕರಗುದರಿ ತಿಳಿಸಿದರು.

ಅವರು ಪಟ್ಟಣದಲ್ಲಿ ಶನಿವಾರ ನ್ಯಾಯಾಂಗ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆಗಳ ಸಹಯೋಗದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಅಭಿಯಾನದ ಅಂಗವಾಗಿ ಪಟ್ಟಣದ ಶಾಲಾ ಮಕ್ಕಳ ಮೂಲಕ ರಸ್ತೆ ಸುರಕ್ಷತಾ ಅಭಿಯಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ನಂತರ ಸ್ಕೂಲ್ ಚಂದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಸ್ತೆ ಸುರಕ್ಷತೆಯು ಜೀವಗಳನ್ನು ಉಳಿಸಲು ಮತ್ತು ಅಪಘಾತಗಳನ್ನು ತಡೆಯಲು ಅತ್ಯಗತ್ಯವಾದ ಮುನ್ನೆಚ್ಚರಿಕೆ ಕ್ರಮವಾಗಿದೆ. ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸುವುದು, ಸಂಚಾರ ನಿಯಮಗಳನ್ನು ಪಾಲಿಸುವುದು, ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯುತವಾಗಿ ವರ್ತಿಸುವ ಮೂಲಕ ಸುರಕ್ಷಿತ ರಸ್ತೆ ಸಂಚಾರವನ್ನು ಮಾಡುವ ನಿಟ್ಟಿನಲ್ಲಿ ಮುಂದಾಗಬೇಕು. ಒಬ್ಬ ವ್ಯಕ್ತಿಗೆ ಅಪಘಾತವಾದರೆ ಅವರನ್ನು ಅವಲಂಬಿಸಿದ ಇಡೀ ಕುಟುಂಬಕ್ಕೆ ಹಾನಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಕಿರಿಯ ದಿವಾಣಿ ನ್ಯಾಯಾಧೀಶರಾದ ಸತೀಶ ಎಂ ಮಾತನಾಡಿ, ನಿಷ್ಕಾಳಜಿ ಮತ್ತು ಬೇಜಾವಾಬ್ದಾರಿಯಿಂದ ಅಪಘಾತಗಳು ಹೆಚ್ಚುತ್ತಿವೆ. ಹೆಲ್ಮೆಟ್, ಸೀಟ್ ಬೆಲ್ಟ್ ತಪ್ಪದೇ ಧರಿಸಬೇಕು ಎಂದು ಪೊಲೀಸ್, ಸಾರಿಗೆ ಇಲಾಖೆ ಕಡ್ಡಾಯಗೊಳಿಸುವುದು ನಮ್ಮ ಸುರಕ್ಷತೆಯ ದೃಷ್ಟಿಯಿಂದ ಎನ್ನುವುದನ್ನು ನಾವು ಅರಿತುಕೊಳ್ಳಬೇಕು. ಅಪ್ರಾಪ್ತ ವಯಸ್ಕರು ವಾಹನ ಚಲಾವಣೆ ಮಾಡಿ ಅಪಘಾತಗೊಳಿಸಿದರೆ ಕಾನೂನಿನ ದೃಷ್ಟಿಯಲ್ಲಿ ಅಪರಾಧದ ಜೊತೆಗೆ ದೊಡ್ಡ ಮೊತ್ತವನ್ನು ಪರಿಹಾರ ನೀಡುವ ಪ್ರಸಂಗಗಳು ನಡೆಯುತ್ತವೆ ಎಂದು ಹೇಳಿದರು.

ಸಭೆಯಲ್ಲಿ ಸಿಪಿಐ ಬಿ.ವೈ. ನ್ಯಾಮಗೌಡ, ಪಿಎಸ್‌ಐ ನಾಗರಾಜ ಗಡಾದ ಮಾತನಾಡಿದರು. ಹಿರಿಯ ಮೋಟಾರು ವಾಹನ ನಿರೀಕ್ಷಕ ಅರುಣ ಕಟ್ಟಿಮನಿ, ಪ್ರಾಚಾರ್ಯ ರಾಮು ಜಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಗಂಗಾಧರ, ಅಶ್ವಿನಿ, ಪ್ರಿಯಾಂಕಾ ನಿರೂಪಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಟಿ. ಈಶ್ವರ ಮಾತನಾಡಿ, ರಸ್ತೆ ಅಪಘಾತಗಳು ಸವಾರರ ಅಜಾಗರೂಕತೆಯ ಫಲವಾಗಿರುತ್ತವೆ. ಮಕ್ಕಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಒಮ್ಮೆ ಅರಿವು ಮೂಡಿಸಿದಲ್ಲಿ ಅದು ಕೊನೆಯ ತನಕವೂ ಅನುಷ್ಠಾನದಲ್ಲಿರುತ್ತದೆ. ನಮ್ಮ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ನಿತ್ಯ ವಾಹನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜೊತೆಗೆ ಉಳಿದವರಿಗೆ ಮಾಹಿತಿ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

BREAKING..ಸಿ.ಜೆ.ರಾಯ್‌ ಆತ್ಮಹತ್ಯೆ ಕೇಸ್‌ ತನಿಖೆಗೆ SIT ರಚಿಸಿದ ರಾಜ್ಯ ಸರ್ಕಾರ!

0

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದೆ. ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ಕಾರ್ಯನಿರ್ವಹಿಸಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಎಸ್‌ಐಟಿಯಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕೂಡ ಸೇರಿರುತ್ತಾರೆ. ಇದುವರೆಗೂ ಪ್ರಕರಣದ ತನಿಖೆಯನ್ನು ಅಶೋಕನಗರ ಪೊಲೀಸ್ ಠಾಣೆಯ ಪೊಲೀಸರು ನಡೆಸುತ್ತಿದ್ದರು. ಈಗಿನಿಂದ ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ಎಸ್‌ಐಟಿ ಕೈಗೆತ್ತಿಕೊಳ್ಳಲಿದೆ.

ಅಶೋಕನಗರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್, ಸಾಕ್ಷ್ಯಗಳು ಹಾಗೂ ಇತರ ದಾಖಲೆಗಳನ್ನು ಎಸ್‌ಐಟಿಗೆ ಹಸ್ತಾಂತರಿಸಲಿದ್ದಾರೆ. ಎಸ್‌ಐಟಿ ನೇತೃತ್ವ ವಹಿಸಿರುವ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಅವರು ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತನಿಖೆಯ ವೇಳೆ ಸಿ.ಜೆ. ರಾಯ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಪರಿಸ್ಥಿತಿ ಏನು, ಐಟಿ ಇಲಾಖೆಯ ದಾಳಿಯಿಂದ ಯಾವುದೇ ಒತ್ತಡ ಉಂಟಾಗಿತ್ತೇ, ಹಣಕಾಸಿನ ಸಮಸ್ಯೆ ಅಥವಾ ಬೇರೆ ಯಾರಾದರೂ ಒತ್ತಡ ಹೇರಿದರೇ ಎಂಬುದರ ಬಗ್ಗೆ ವಿವಿಧ ಆಂಗಲ್‌ಗಳಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ. ಪ್ರಕರಣದ ತನಿಖೆಯ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಹೇಳಿದ್ದಾರೆ.

ಲ್ಯಾಂಡ್ ಲಾರ್ಡ್: ಕೇವಲ ಸಿನಿಮಾ ಅಲ್ಲ, ನಮ್ಮ ಬದುಕಿನ ಕಟು ಸತ್ಯಗಳ ಪ್ರತಿಬಿಂಬ

‘ಕಾಟೀರ’ ಚಿತ್ರದ ನಂತರ ನಾನು ಯಾವುದೇ ಚಲನಚಿತ್ರವನ್ನು ನೋಡಿರಲಿಲ್ಲ. ಆದರೆ ಸಮಯಾವಕಾಶ ಸಿಕ್ಕ ಹಿನ್ನೆಲೆಯಲ್ಲಿ, ಅನೇಕ ಪ್ರಗತಿಪರ ಚಿಂತಕರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದ ದುನಿಯಾ ವಿಜಯ್ ಅವರ ‘ಲ್ಯಾಂಡ್ ಲಾರ್ಡ್’ ಚಿತ್ರವನ್ನು ನೋಡಲು ನಿರ್ಧರಿಸಿದೆ.

ಚಿತ್ರ ಆರಂಭವಾದ ಕೆಲವೇ ಕ್ಷಣಗಳಲ್ಲಿ, ನನಗೆ ಪರಿಚಿತವಾಗಿದ್ದ ಒಂದು ಘಟನೆ ಕಣ್ಣಮುಂದೆ ಜೀವಂತವಾಗಿ ನಿಂತಿತು. ಭೂರಹಿತ ದಲಿತನೊಬ್ಬ ಸಾವುಕಾರನ ಹೊಲದಲ್ಲಿ ಹಸಿವಿನಿಂದ ಕಡಲೆ ಗಿಡ ಕಿತ್ತು ತಿಂದಿದ್ದು ತಪ್ಪು ಎಂದು ತೀರ್ಪು ನೀಡಿದ ನ್ಯಾಯ ಪಂಚಾಯ್ತಿ, ಅದೇ ವೇಳೆ “ಕದ್ದು ತಿಂದವನ ಹೆಂಡತಿಯ ಮೇಲೂ ನನಗೆ ಆಸೆ ಇದೆ, ಅದಕ್ಕೂ ಅನುಮತಿ ಕೊಡಿ” ಎಂದು ಸಾವುಕಾರ ಹೇಳಿದ ಆ ಕ್ರೂರ ಮಾತು — ಅದು ಅತ್ಯಾಚಾರದಷ್ಟೇ ಸಮಾನವಾದ ಮನಸ್ಥಿತಿಯ ಪ್ರತೀಕವಾಗಿತ್ತು. ಇಂತಹ ಅನೇಕ ಜೀವಂತ ನಿದರ್ಶನಗಳ ಪ್ರತಿನಿಧಿತ್ವವೇ ‘ಲ್ಯಾಂಡ್ ಲಾರ್ಡ್’.

ಚಿತ್ರವನ್ನು ನೋಡುತ್ತಾ ಹೋದಂತೆ ಹಳ್ಳಿಕೇರಿ, ಹಾಳಕೇರಿ, ರೋಣದ ‘ಭೂಮಿ ಬೇಕು’ ರೈತ ಆಂದೋಲನ, ಇನಾಮವೀರಾಪುರ ಘಟನೆ, ಕಂಬಾಳಪಳ್ಳಿ–ಹಂಗರಹಳ್ಳಿ ಹತ್ಯಾಕಾಂಡಗಳು ಒಂದೊಂದಾಗಿ ಸ್ಮೃತಿ ಪಟಲದಲ್ಲಿ ಪ್ಲೇ ಆದವು. ಇವುಗಳೆಲ್ಲವೂ ಕೇವಲ ಇತಿಹಾಸವಲ್ಲ; ಇನ್ನೂ ಹಸಿಹಸಿಯಾಗಿ ನಮ್ಮ ಸಮಾಜವನ್ನು ಕಾಡುತ್ತಿರುವ ಸತ್ಯಗಳು.

ಬದುಕಲು ಬೇಕಾದ ಅನ್ನಕ್ಕಾಗಿ ಕೈಯೊಡ್ಡಿ ಬೇಡಬೇಕು, ಆದರೆ ಅನ್ನ ಬೆಳೆಯುವ ಭೂಮಿಯ ಮೇಲೆ ಹಕ್ಕು ಇರಬಾರದು ಎಂಬ ಜಮೀನ್ದಾರರ ವಿಕೃತ ಮನಸ್ಸು; ದಲಿತರಿಗೆ ಭೂಮಿ ಒಡೆತನ ಇರಬಾರದೆಂಬ ಕಾರಣಕ್ಕೆ ದೇವರ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ವಿಧಿಸಲಾಗುವ ನಾನಾ ಕಟ್ಟಳೆಗಳು; ದಿನನಿತ್ಯದ ಬದುಕಿನಲ್ಲಿ ಸಹಜವಾಗಿ ಹಾಸುಹೊಕ್ಕಾಗಿರುವ ದೌರ್ಜನ್ಯಗಳು — ಈ ಎಲ್ಲವನ್ನೂ ‘ಲ್ಯಾಂಡ್ ಲಾರ್ಡ್’ ತನ್ನ ಕಥಾಹಂದರದಲ್ಲಿ ಗಂಭೀರವಾಗಿ ಹಿಡಿದಿಟ್ಟಿದೆ. ಅದಕ್ಕೇ ಈ ಚಿತ್ರ ಮನಮುಟ್ಟುತ್ತದೆ.

ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಶೋಷಣೆಯನ್ನು ಎದುರಿಸಲು ಪಾರಂಪರಿಕ ಕಂದಾಚಾರಗಳನ್ನು ಮೀರಿ, ಸಂವಿಧಾನದ ಮಾರ್ಗದ ಮೂಲಕ ಮುಕ್ತಿಯತ್ತ ಸಾಗಬೇಕು ಎಂಬ ಬಲವಾದ ಸಂದೇಶವನ್ನು ಈ ಚಿತ್ರ ನೀಡುತ್ತದೆ. ಶೋಷಣೆಯ ವಿರುದ್ಧ ಸಂವಿಧಾನವೇ ಶಸ್ತ್ರ ಎಂಬ ಅರಿವು ಮೂಡಿಸುತ್ತದೆ.

ನಾನು ಸಂವಿಧಾನದ ಕಾಲಾಳು ಆಗಿ, ಸಂವಿಧಾನ ರಕ್ಷಣೆಗೆ ಸಿದ್ಧವೆಂದು ಸಹಿ ಮಾಡಿರುವ ವ್ಯಕ್ತಿಯಾಗಿ, ಈ ಚಿತ್ರ ನನಗೆ ವಿಶೇಷ ಸಂತಸ ತಂದಿದೆ. ಇಂದಿನ ತುರ್ತು ಅಗತ್ಯವೇನೆಂದರೆ — ಪ್ರತಿ ಮನೆಮನೆಯಲ್ಲೂ ಸಂವಿಧಾನದ ಆಶಯವನ್ನು ತಲುಪಿಸುವ ಚಿಂತನೆ ಮತ್ತು ಚಳವಳಿ.

ಇಂತಹ ಸಾಮಾಜಿಕ ಹೊಣೆಗಾರಿಕೆಯ ಸಿನಿಮಾಗಳು ಇನ್ನಷ್ಟು ಹೆಚ್ಚು ಬರಬೇಕು. ‘ಲ್ಯಾಂಡ್ ಲಾರ್ಡ್’ ಅದಕ್ಕೆ ಒಂದು ಮಹತ್ವದ ಉದಾಹರಣೆ.

-ಬಸವರಾಜ ನಿಂ ಸಂಶಿ, ವಕೀಲರು.

ರಾಮೋದ್ಭವ ಸಹಿಸಲಾಗದ ಹಿಂದೂ ವಿರೋಧಿ ಕಾಂಗ್ರೆಸ್ಸಿಗರು: ಛಲವಾದಿ ನಾರಾಯಣಸ್ವಾಮಿ

0

ಬೆಂಗಳೂರು: ವಿಬಿ ಜಿ ರಾಮ್ ಜಿಯಲ್ಲಿ ರಾಮನ ಉದ್ಭವವನ್ನು ಕಾಂಗ್ರೆಸ್ಸಿಗೆ ಸಹಿಸಲು ಸಾಧ್ಯವಾಗಿಲ್ಲ. ಹಿಂದುತ್ವ, ರಾಮನ ವಿರೋಧ ಕಾಂಗ್ರೆಸ್ಸಿಗೆ ಸಹಜವಾದುದು. ಇದನ್ನು ವಿರೋಧಿಸಲೇಬೇಕೆಂದೇ ವಿಶೇಷ ಅಧಿವೇಶನ ಕರೆದಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಜೋಡಿಸಿದ್ದಲ್ಲ; ವಿಕಸಿತ ಭಾರತ ಗ್ಯಾರಂಟಿ ರೋಜ್‍ಗಾರ್ ಅಜೀವಿಕಾ ಮಿಷನ್ ಎಂಬುದು ರಾಮ್ ಎಂದು ಬಂದಿದೆ. ಯೋಜನೆಯಲ್ಲಿ ಇದೊಂದು ರೀತಿಯ ರಾಮೋದ್ಭವ ಆಗಿದೆ ಎಂದು ತಿಳಿಸಿದರು.

ಸದ್ಯಕ್ಕೆ ಸದನ ಕರೆಯುವ ಅವಶ್ಯಕತೆ ಇರಲಿಲ್ಲ ಎಂದ ಅವರು, ನರೇಗಾ ಯೋಜನೆಯನ್ನು ಇನ್ನಷ್ಟು ಗಟ್ಟಿಗೊಳಿಸಿ ಕಾಯ್ದೆಯನ್ನಾಗಿ ಮಾಡಿ ಕೇಂದ್ರ ಸರಕಾರ ಜಾರಿಗೊಳಿಸಿದ ‘ವಿಬಿ ಜಿ ರಾಮ್ ಜಿ’ ಅಡಿಯಲ್ಲಿ 100 ದಿನಗಳ ಬದಲು 125 ದಿನ ಕೆಲಸ ನೀಡಲಾಗುತ್ತಿದೆ.

ಜನರೇ ಕೆಲಸ ಮಾಡಬೇಕು. ಬಯೋಮೆಟ್ರಿಕ್‍ನಲ್ಲಿ ಹೆಸರು ಬಂದು ಅವರಿಗೆ 370 ರೂ. ಕೂಲಿಯನ್ನು ನೇರವಾಗಿ ಖಾತೆಗೇ ನೀಡುವ ಯೋಜನೆ ಇದಾಗಿದೆ. ಯಂತ್ರಗಳಿಂದ ಕೆಲಸ ಮಾಡಬಾರದು; ಜನರೇ ಕೆಲಸ ಮಾಡಿ, ಗ್ರಾಮೀಣ ಜನರ ಬದುಕು ಕಟ್ಟಿಕೊಡುವ ಯೋಜನೆ ಇದೆಂದು ವಿಶ್ಲೇಷಿಸಿದರು.

ಇದರ ಮೂಲಕ ಆಸ್ತಿ ನಿರ್ಮಾಣದ ಉದ್ದೇಶ ಇದೆ. ಆದರೆ, ಕಾಂಗ್ರೆಸ್ಸಿಗೆ ಅದು ಬೇಕಾಗಿರಲಿಲ್ಲ. ‘ವಿಬಿ ಜಿ ರಾಮ್ ಜಿ’ ಎಂದರೆ ರಾಮನ ಹೆಸರನ್ನು ಇದಕ್ಕೆ ಇಟ್ಟಿದ್ದಾರೆಂದು ಕಾಂಗ್ರೆಸ್ಸಿನವರು ಅಂದುಕೊಂಡಿದ್ದಾರೆ. ನರೇಗಾಗೆ ಮೊದಲು ನೆಹರೂ ಅವರ ಹೆಸರು ಇಡಲಾಗಿತ್ತು. ರೋಜ್‍ಗಾರ್ ಯೋಜನೆ ಎಂದಷ್ಟೇ ಕರೆಯಲಾಗಿತ್ತು. ಇವೆಲ್ಲ ಬಿಟ್ಟು ಕೊನೆಯಲ್ಲಿ ಮಹಾತ್ಮ ಗಾಂಧಿ ಎಂದು ಹೆಸರು ಜೋಡಿಸಿದ್ದರು ಎಂದು ವಿವರಿಸಿದರು.

ಇಡಿ–ಐಟಿ ಬಳಸಿಕೊಂಡು ಉದ್ಯಮಿಗಳಿಗೆ ಕಿರುಕುಳ: ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ಆರೋಪ

0

ಬೆಂಗಳೂರು: ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರದ ಮಾತು ಕೇಳದ ಉದ್ಯಮಿಗಳಿಗೆ ಇಡಿ, ಐಟಿ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳನ್ನು ಬಳಸಿ ಕಿರುಕುಳ ನೀಡಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಉದ್ಯಮಿಗಳ ಮೇಲೆ ಕೇಂದ್ರ ಸರ್ಕಾರದ ದಬ್ಬಾಳಿಕೆ ದೇಶವ್ಯಾಪಿ ನಡೆಯುತ್ತಿದೆ. ಕಳೆದ ಒಂದು ದಶಕದಿಂದ ಇಡಿ, ಐಟಿ ಹಾಗೂ ಜಿಎಸ್ಟಿ ಮೂಲಕ ಉದ್ಯಮಿಗಳಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ನಿಲುವಿಗೆ ತಲೆಬಾಗದ ಉದ್ಯಮಿಗಳೇ ಈ ದಬ್ಬಾಳಿಕೆಗೆ ಗುರಿಯಾಗುತ್ತಿದ್ದಾರೆ ಎಂದು ಹೇಳಿದರು.

ಈ ಕುರಿತು ಸಾಕಷ್ಟು ಉದಾಹರಣೆಗಳಿವೆ ಎಂದು ಹೇಳಿದ ಪ್ರಿಯಾಂಕ್ ಖರ್ಗೆ, ಅಂಬಾನಿ ಹಾಗೂ ಅದಾನಿ ಮುಂತಾದ ಉದ್ಯಮಿಗಳಿಗೆ ಇಡಿ ಅಥವಾ ಐಟಿ ಯಾವುದೇ ತೊಂದರೆ ನೀಡಿಲ್ಲ. ಸರ್ಕಾರ ಅವರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ, ಅವರ ಮೇಲೆ ಎಷ್ಟರ ಮಟ್ಟಿಗೆ ಕಿರುಕುಳ ನೀಡಲಾಗಿರಬಹುದು ಎಂದು ಅರ್ಥ ಮಾಡಿಕೊಳ್ಳಬಹುದು. ಇದೇ ರೀತಿಯ ಕಿರುಕುಳ ಸಾಮಾನ್ಯ ಜನರಿಗೂ ಎದುರಾಗುತ್ತಿದೆ. ಬೇಕಾದರೆ ಸರ್ವೆ ನಡೆಸಿದರೂ ಈ ಸತ್ಯ ಬಹಿರಂಗವಾಗುತ್ತದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಜನರಿಗೆ ತೊಂದರೆ ನೀಡಲು ಹೊಸ ಆಯುಧಗಳನ್ನು ಬಳಸುತ್ತಿದೆ. ಈ ಕಿರುಕುಳದ ಬಗ್ಗೆ ನಾನು ಮಾತ್ರವಲ್ಲ, ರಾಯ್ ಅವರ ಕುಟುಂಬವೂ ಮಾತನಾಡುತ್ತಿದೆ. ಹೀಗಾಗಿ ಈ ವಿಚಾರದ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಲಕ್ಕುಂಡಿಯ ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿಗೆ ₹10 ಕೋಟಿ: ಡಿಸಿ ಸಿ.ಎನ್. ಶ್ರೀಧರ್

0

ಗದಗ: ಲಕ್ಕುಂಡಿಯ ಐತಿಹಾಸಿಕ ದೇವಸ್ಥಾನಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆಗೆ ಒಳಪಡುವ ಪ್ರಮುಖ ದೇವಸ್ಥಾನಗಳನ್ನು ಡಿಸಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಲಕ್ಕುಂಡಿಯ ಐತಿಹಾಸಿಕ ಕುಂಭಾರೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಮನೆಗಳ ಶೀಘ್ರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿ ತಿಳಿಸಿದ್ದಾರೆ. ಈ ಕಾರ್ಯವನ್ನು ಕೇಂದ್ರ ಪುರಾತತ್ವ ಇಲಾಖೆ (ASI) ಮೂಲಕ ನಡೆಸಲಾಗುವುದು. ಈಗಾಗಲೇ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಪರಿಹಾರವನ್ನು ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

“ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ಮನೆಗಳನ್ನು ಖಾಲಿ ಮಾಡಿಸಲಾಗುತ್ತದೆ. ಇದು ಸಂಪೂರ್ಣವಾಗಿ ಕೇಂದ್ರ ಪುರಾತತ್ವ ಇಲಾಖೆಯ ಜವಾಬ್ದಾರಿ” ಎಂದು ಡಿಸಿ ಸಿ.ಎನ್. ಶ್ರೀಧರ್ ಹೇಳಿದರು.

ಇನ್ನೂ, 2025-26ನೇ ಸಾಲಿನಲ್ಲಿ ಲಕ್ಕುಂಡಿಯ ಆರು ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿಗೆ ₹10 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು. ರಾಜ್ಯ ಹಾಗೂ ಕೇಂದ್ರ ಪುರಾತತ್ವ ಅಧಿಕಾರಿಗಳ ವರದಿ ಬಂದ ನಂತರ ಆದ್ಯತೆ ಮೇರೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಒಕ್ಕಲೆಬ್ಬಿಸುವ ಪರಿಸ್ಥಿತಿ ನಿರ್ಮಾಣವಾದಲ್ಲಿ ಸೂಕ್ತ ಪರಿಹಾರ ನೀಡಲಾಗುತ್ತದೆ. ಸ್ಥಳಾಂತರದ ಕುರಿತಂತೆ ಅಂತಿಮ ತೀರ್ಮಾನವನ್ನು ಕಾಲವೇ ನಿರ್ಧರಿಸಲಿದೆ ಎಂದು ಡಿಸಿ ತಿಳಿಸಿದರು.

error: Content is protected !!