Home Blog Page 78

ನ್ಯೂಜಿಲ್ಯಾಂಡ್ ವಿರುದ್ಧ 5ನೇ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ! 4-1ರಲ್ಲಿ ಸರಣಿ ಗೆದ್ದ ಟೀಮ್ ಇಂಡಿಯಾ

0

2026ರ ಟಿ20 ವಿಶ್ವಕಪ್‌ಗೆ ಮುನ್ನ ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಟಿ20 ಸರಣಿಯನ್ನು ಆಡಿದ ಟೀಂ ಇಂಡಿಯಾ, ಐದು ಪಂದ್ಯಗಳ ಸರಣಿಯನ್ನು 4–1 ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಮೊದಲ ಮೂರು ಪಂದ್ಯಗಳನ್ನು ಸತತವಾಗಿ ಗೆದ್ದು ಸರಣಿಯನ್ನು ಈಗಾಗಲೇ ತನ್ನದಾಗಿಸಿಕೊಂಡಿದ್ದ ಭಾರತ, ಐದನೇ ಪಂದ್ಯದಲ್ಲೂ ಏಕಪಕ್ಷೀಯ ಗೆಲುವು ದಾಖಲಿಸುವ ಮೂಲಕ ಆತ್ಮವಿಶ್ವಾಸದೊಂದಿಗೆ ವಿಶ್ವಕಪ್‌ಗೆ ಕಾಲಿಟ್ಟಿದೆ.

ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐದನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ, 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 271 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕರಾಗಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಕ್ರೀಸ್‌ಗೆ ಬಂದರೂ, ಇಬ್ಬರೂ 42 ರನ್‌ಗಳೊಳಗೆ ಔಟಾದರು.

ಅನಂತರ ಕ್ರೀಸ್‌ಗೆ ಬಂದ ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 43 ಎಸೆತಗಳಲ್ಲಿ 6 ಬೌಂಡರಿ ಮತ್ತು 10 ಸಿಕ್ಸರ್‌ಗಳೊಂದಿಗೆ 103 ರನ್‌ಗಳ ಸಿಡಿಲಬ್ಬರದ ಶತಕ ಸಿಡಿಸಿದರು. ನಾಯಕ ಸೂರ್ಯಕುಮಾರ್ ಯಾದವ್ 30 ಎಸೆತಗಳಲ್ಲಿ 63 ರನ್‌ಗಳ ಸ್ಪೋಟಕ ಇನ್ನಿಂಗ್ಸ್ ಆಡಿದರೆ, ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 42 ರನ್‌ಗಳ ನಿರ್ಣಾಯಕ ಕೊಡುಗೆ ನೀಡಿದರು. ನ್ಯೂಜಿಲೆಂಡ್ ಪರ ಲಾಕಿ ಫರ್ಗುಸನ್ ಮತ್ತು ಕೈಲ್ ಜೇಮಿಸನ್ ತಲಾ ಎರಡು ವಿಕೆಟ್ ಪಡೆದರೂ, ಭಾರತೀಯ ಬ್ಯಾಟ್ಸ್‌ಮನ್‌ಗಳ ರನ್‌ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.

271 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಉತ್ತಮ ಆರಂಭ ಪಡೆದಿತು. ಆರಂಭಿಕ ಫಿನ್ ಅಲೆನ್ 38 ಎಸೆತಗಳಲ್ಲಿ 80 ರನ್ ಗಳಿಸಿ ತಂಡಕ್ಕೆ ಚುರುಕು ಆರಂಭ ನೀಡಿದರು. ರಚಿನ್ ರವೀಂದ್ರ 17 ಎಸೆತಗಳಲ್ಲಿ 30 ರನ್‌ಗಳ ಕಾಣಿಕೆ ನೀಡಿದರು. ಇವರಿಬ್ಬರು ಎರಡನೇ ವಿಕೆಟ್‌ಗೆ 100 ರನ್‌ಗಳ ಜೊತೆಯಾಟ ನಿರ್ಮಿಸಿದರು.

ಆದರೆ ಆ ಬಳಿಕ ಭಾರತೀಯ ಬೌಲರ್‌ಗಳು ಪಂದ್ಯದ ಹಣೆಬರಹ ಬದಲಿಸಿದರು. ಅರ್ಷದೀಪ್ ಸಿಂಗ್ ಐದು ವಿಕೆಟ್‌ಗಳನ್ನು ಕಬಳಿಸಿ ಕಿವೀಸ್ ಬ್ಯಾಟಿಂಗ್ ಲೈನ್‌ಅಪ್‌ನ್ನು ಕುಸಿತಕ್ಕೆ ತಳ್ಳಿದರು. ಅಕ್ಷರ್ ಪಟೇಲ್ ಮೂರು ಹಾಗೂ ವರುಣ್ ಚಕ್ರವರ್ತಿ ಒಂದು ವಿಕೆಟ್ ಪಡೆದು ಬೆಂಬಲ ನೀಡಿದರು. ಪರಿಣಾಮವಾಗಿ ನ್ಯೂಜಿಲೆಂಡ್ 19.4 ಓವರ್‌ಗಳಲ್ಲಿ 225 ರನ್‌ಗಳಿಗೆ ಆಲೌಟ್ ಆಯಿತು. ಭಾರತ 46 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.

Gold-Silver Price: ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ..!

0

ನವದೆಹಲಿ: ಕೇಂದ್ರ ಬಜೆಟ್ 2026ರ ಮಂಡನೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಸತತ ಏರಿಕೆಯ ಬಳಿಕ, ಚಿನ್ನ ಹಾಗೂ ಬೆಳ್ಳಿ ದರಗಳು ಸತತ ಎರಡನೇ ದಿನವೂ ತೀವ್ರ ಕುಸಿತ ದಾಖಲಿಸಿವೆ.

ಚಿನ್ನದ ಬೆಲೆ 10 ಗ್ರಾಂಗೆ ₹8,620 ಇಳಿಕೆಯಾಗಿದ್ದು, ಬೆಳ್ಳಿ ಬೆಲೆ ಪ್ರತಿ ಕಿಲೋಗ್ರಾಂಗೆ ₹45,000 ಕುಸಿತ ಕಂಡಿದೆ. ಇದರಿಂದಾಗಿ ಕೇವಲ ಎರಡು ದಿನಗಳಲ್ಲಿ ಚಿನ್ನದ ದರದಲ್ಲಿ ಒಟ್ಟು ₹18,000 ಮತ್ತು ಬೆಳ್ಳಿಯಲ್ಲಿ ₹60,000ರಷ್ಟು ಇಳಿಕೆ ದಾಖಲಾಗಿದೆ.

ಬೆಂಗಳೂರಿನಲ್ಲಿ, 22 ಕ್ಯಾರಟ್ ಚಿನ್ನ 10 ಗ್ರಾಂಗೆ ₹7,900 ಕುಸಿದು ₹1,47,200ಕ್ಕೆ ತಲುಪಿದೆ. 24 ಕ್ಯಾರಟ್ ಚಿನ್ನ 10 ಗ್ರಾಂಗೆ ₹8,620 ಇಳಿದು ₹1,60,580ಕ್ಕೆ ಇಳಿದಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ₹45,000ರ ಭಾರೀ ಕುಸಿತದೊಂದಿಗೆ ₹3.50 ಲಕ್ಷಕ್ಕೆ ಇಳಿದಿದೆ.

ದೆಹಲಿಯಲ್ಲಿ, 99.9 ಶುದ್ಧತೆಯ ಚಿನ್ನ 10 ಗ್ರಾಂಗೆ ₹3,500 ಕುಸಿದು ₹1,65,500ಕ್ಕೆ ತಲುಪಿದೆ. ಬೆಳ್ಳಿ ಬೆಲೆ ₹72,500 ಇಳಿಕೆಯೊಂದಿಗೆ ₹3.12 ಲಕ್ಷಕ್ಕೆ ಕುಸಿದಿದೆ.

ಮಾರುಕಟ್ಟೆ ತಜ್ಞರ ಪ್ರಕಾರ, ಚಿನ್ನ ಮತ್ತು ಬೆಳ್ಳಿ ದರಗಳು ಇತ್ತೀಚೆಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ ಹಿನ್ನೆಲೆಯಲ್ಲಿ ಹೂಡಿಕೆದಾರರು ಲಾಭ ಹಿಂತೆಗೆದುಕೊಳ್ಳುತ್ತಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಜೊತೆಗೆ, ಅಮೆರಿಕದ ಕೇಂದ್ರ ಬ್ಯಾಂಕ್‌ನ ನೂತನ ಮುಖ್ಯಸ್ಥರಾಗಿ ಹಣದುಬ್ಬರ ನಿಯಂತ್ರಣಕ್ಕೆ ಒಲವು ಹೊಂದಿರುವ ಕೆವಿನ್ ನೇಮಕ,

ಶಾರ್ಟ್‌ಸೆಲ್ಲರ್‌ಗಳಿಗೆ ಮಾರಾಟದ ಗಡುವು ಸಮೀಪಿಸಿರುವುದು ಹಾಗೂ ಬೆಳ್ಳಿಯ ಮೇಲೆ ಹಿಡಿತ ಕಡಿಮೆ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾರುಕಟ್ಟೆಯಲ್ಲಿ ನಡೆಸುತ್ತಿರುವ ತಂತ್ರಗಳು ಕೂಡ ದರ ಕುಸಿತಕ್ಕೆ ಕಾರಣವಾಗಿರಬಹುದು ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

Cylinder Price Hike: ಕೇಂದ್ರ ಬಜೆಟ್ ದಿನವೇ ಸಿಲಿಂಡರ್ ಬೆಲೆ ಹೆಚ್ಚಳ! ನೂತನ ದರ ಹೀಗಿದೆ

0

ನವದೆಹಲಿ: ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ಎಲ್‌ಪಿಜಿ ಗ್ರಾಹಕರಿಗೆ ಹೊಡೆತ ಎದುರಾಗಿದ್ದು, ತೈಲ ಮಾರುಕಟ್ಟೆ ಕಂಪನಿಗಳು ಭಾನುವಾರ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ₹50 ಹೆಚ್ಚಿಸಿವೆ. ವಾಣಿಜ್ಯ ಹಾಗೂ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಹೊಸ ದರಗಳು ಫೆಬ್ರವರಿ 1, 2026ರಿಂದ ಜಾರಿಗೆ ಬಂದಿವೆ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ರಸ್ತೆಬದಿಯ ತಿನಿಸು ಅಂಗಡಿಗಳು (ಧಾಬಾಗಳು) ಸೇರಿದಂತೆ ವಿವಿಧ ವಾಣಿಜ್ಯ ಸಂಸ್ಥೆಗಳು ಬಳಸುತ್ತವೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಸಿಲಿಂಡರ್ ದರಗಳನ್ನು ಪರಿಷ್ಕರಿಸುತ್ತವೆ. ಜನವರಿ ತಿಂಗಳಲ್ಲಿ ಈಗಾಗಲೇ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ₹111 ಹೆಚ್ಚಿಸಲಾಗಿತ್ತು.

  • ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ₹1,691.50ರಿಂದ ₹1,740.50ಗೆ ಏರಿಕೆಯಾಗಿದೆ.
  • ಕೋಲ್ಕತ್ತಾದಲ್ಲಿ ಬೆಲೆ ₹1,844.50 ಆಗಿದೆ.
  • ಮುಂಬೈನಲ್ಲಿ ₹1,642.50ರಿದ್ದ ಬೆಲೆ ಇದೀಗ ₹1,692 ಆಗಿದೆ.

ಈ ವರ್ಷದ ಜನವರಿ ಮತ್ತು ಫೆಬ್ರವರಿಯಲ್ಲಿ ಬೆಲೆ ಏರಿಕೆಯಾದರೂ, ಕಳೆದ ವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ದರ ಕಡಿತ ಮಾಡಲಾಗಿತ್ತು. ನವೆಂಬರ್‌ನಲ್ಲಿ ₹5 ಮತ್ತು ಡಿಸೆಂಬರ್‌ನಲ್ಲಿ ₹10ರಷ್ಟು ಕಡಿತ ನೀಡಲಾಗಿತ್ತು.

ಅದಕ್ಕೂ ಮೊದಲು, ಅಕ್ಟೋಬರ್ 1ರಂದು ಕೇವಲ ₹15.50ರಷ್ಟು ಅಲ್ಪ ಏರಿಕೆ ಕಂಡುಬಂದಿತ್ತು. ಅಕ್ಟೋಬರ್‌ಗೂ ಮೊದಲು, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಸತತ ಆರು ತಿಂಗಳುಗಳ ಕಾಲ ಇಳಿಕೆಯಾಗಿದ್ದವು.ಇಂಡಿಯನ್ ಆಯಿಲ್ ಪ್ರಕಟಿಸಿದ ಮಾಹಿತಿಯಂತೆ, ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

  • ದೆಹಲಿಯಲ್ಲಿ 14.2 ಕೆಜಿ ದೇಶೀಯ ಸಿಲಿಂಡರ್ ಬೆಲೆ ₹853,
  • ಉತ್ತರ ಪ್ರದೇಶದಲ್ಲಿ ₹850.50,
  • ಪಾಟ್ನಾದಲ್ಲಿ ₹951,
  • ಮುಂಬೈನಲ್ಲಿ ₹852.50,
  • ಲಕ್ನೋದಲ್ಲಿ ₹890.50 ಆಗಿದೆ.

ಕಳೆದ ಬಜೆಟ್ ದಿನವಾದ ಫೆಬ್ರವರಿ 1, 2025ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ₹6.50 ಕಡಿಮೆ ಮಾಡಲಾಗಿತ್ತು, ಆದರೆ ಗೃಹಬಳಕೆಯ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ.

ವರದಕ್ಷಿಣೆ ಕಿರುಕುಳ ಆರೋಪ: ಹಾಸನದಲ್ಲಿ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ!

0

ಹಾಸನ: ವರದಕ್ಷಿಣೆಗಾಗಿ ನೀಡುತ್ತಿದ್ದ ಕಿರುಕುಳ ಹಾಗೂ ನಿರಂತರ ಸಂದೇಹ ಸಹಿಸಲಾಗದೇ ಯುವ ಗೃಹಿಣಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹೆಚ್. ಮೈಲಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತಳನ್ನು ಐ. ಹುಣಸೆಕೆರೆ ಗ್ರಾಮದ ಹೆಚ್. ಎಲ್. ಇಂದ್ರ (24) ಎಂದು ಗುರುತಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ಇಂದ್ರ ಅವರ ವಿವಾಹ ಹೆಚ್. ಮೈಲಳ್ಳಿ ಗ್ರಾಮದ ಎಂ. ಹೆಚ್. ಸ್ವಾಮಿ ಅವರೊಂದಿಗೆ ನಡೆದಿತ್ತು.

ವಿವಾಹದ ವೇಳೆ ವರದಕ್ಷಿಣೆಯಾಗಿ 60 ಗ್ರಾಂ ಚಿನ್ನ ಹಾಗೂ 1.30 ಲಕ್ಷ ರೂಪಾಯಿ ನಗದು ಹಣವನ್ನು ಇಂದ್ರ  ಪೋಷಕರು ನೀಡಿದ್ದರು ಎನ್ನಲಾಗಿದೆ. ಪತಿ ಸ್ವಾಮಿ ಬೇಕರಿ ನಡೆಸುತ್ತಿದ್ದು, ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಬಳಿಕ ಗ್ರಾಮಕ್ಕೆ ಬಂದು ನೆಲೆಸಿದ್ದರು. ಈ ಹಿನ್ನೆಲೆ ವರದಕ್ಷಿಣೆಗಾಗಿ ಹಣ ತರಬೇಕು ಎಂದು ಇಂದ್ರ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದ ಹಾಗೂ ಅವಳ ಮೇಲೆ ಅನಾವಶ್ಯಕ ಸಂದೇಹ ಪಡುತ್ತಿದ್ದ ಎಂದು ಆರೋಪಿಸಲಾಗಿದೆ.

ಇನ್ನೂ ವಿವಾಹವಾಗಿ ನಾಲ್ಕು ವರ್ಷಗಳಾದರೂ ದಂಪತಿಗೆ ಮಕ್ಕಳಿರಲಿಲ್ಲ. ಈ ವಿಚಾರವೂ ಮನಸ್ತಾಪಕ್ಕೆ ಕಾರಣವಾಗಿದ್ದು, ಈ ಸಂಬಂಧ ಒಂದೆರಡು ಬಾರಿ ರಾಜಿ ಪಂಚಾಯಿತಿಯೂ ನಡೆದಿತ್ತು. ಆದರೆ ಸಮಸ್ಯೆ ಪರಿಹಾರವಾಗಿರಲಿಲ್ಲ ಎಂದು ಹೇಳಲಾಗಿದೆ.

ನಿನ್ನೆ (ಜ.31) ಪತಿ-ಪತ್ನಿ ನಡುವೆ ಜಗಳ ನಡೆದಿದ್ದು, ಮನಸ್ತಾಪ ತೀವ್ರಗೊಂಡ ಹಿನ್ನೆಲೆ ಇಂದ್ರ ವಿಷ ಸೇವಿಸಿದ್ದಾಳೆ. ತಕ್ಷಣ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಈ ಕುರಿತು ಇಂದ್ರ ಪೋಷಕರು ದುದ್ದ ಪೊಲೀಸ್ ಠಾಣೆಯಲ್ಲಿ ಪತಿ ಸ್ವಾಮಿ, ಅತ್ತೆ ಶಂಕ್ರಮ್ಮ ಹಾಗೂ ಅತ್ತಿಗೆ ಪುಟ್ಟಿ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

75 ವರ್ಷದ ಸಂಪ್ರದಾಯ ಮುರಿಯುವ ಕೇಂದ್ರ ಬಜೆಟ್: ಭಾಗ ‘B’ ಮೂಲಕ ಆರ್ಥಿಕ ಭವಿಷ್ಯ ಅನಾವರಣ

0

ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್ 75 ವರ್ಷಗಳ ಸಂಪ್ರದಾಯವನ್ನು ಮುರಿಯುವ ಸಾಧ್ಯತೆ ಇದೆ. ಭಾರತದ ಆರ್ಥಿಕ ಭವಿಷ್ಯಕ್ಕೆ ಸಂಬಂಧಿಸಿದ ವಿವರವಾದ ದೃಷ್ಟಿಕೋನವನ್ನು ಅನಾವರಣಗೊಳಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದ ‘ಭಾಗ B’ಯನ್ನು ಪ್ರಮುಖವಾಗಿ ಬಳಸುವ ನಿರೀಕ್ಷೆ ವ್ಯಕ್ತವಾಗಿದೆ.

ಈ ಬಾರಿ ಕೇಂದ್ರ ಬಜೆಟ್ ಅನ್ನು ಭಾಗ ‘A’ ಮತ್ತು ಭಾಗ ‘B’ ಎಂದು ವಿಭಜಿಸಿ ಮಂಡಿಸುವ ಸಾಧ್ಯತೆ ಇದೆ. ಹಿಂದಿನ ಬಜೆಟ್‌ಗಳಲ್ಲಿ ಹೆಚ್ಚಿನ ವಿಷಯಗಳು ಭಾಗ ‘A’ಯಲ್ಲೇ ಒಳಗೊಂಡಿದ್ದರೆ, ಭಾಗ ‘B’ ಸಾಮಾನ್ಯವಾಗಿ ತೆರಿಗೆ ಮತ್ತು ನೀತಿ ಘೋಷಣೆಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಬಾರಿ ಭಾಗ ‘B’ ಅಲ್ಪಾವಧಿಯ ಆದ್ಯತೆಗಳು ಹಾಗೂ ದೀರ್ಘಾವಧಿಯ ಆರ್ಥಿಕ ಗುರಿಗಳನ್ನು ರೂಪಿಸುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆ ಇದೆ.

ಭಾರತ 21ನೇ ಶತಮಾನದ ಎರಡನೇ ತ್ರೈಮಾಸಿಕಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ, ದೇಶದ ಸ್ಥಳೀಯ ಸಾಮರ್ಥ್ಯಗಳು ಹಾಗೂ ಜಾಗತಿಕ ಮಹತ್ವಾಕಾಂಕ್ಷೆಗಳನ್ನು ಬಜೆಟ್ ಮೂಲಕ ಎತ್ತಿ ತೋರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ನಿಯಮಿತ ತೆರಿಗೆ ಬದಲಾವಣೆಗಳನ್ನು ಮೀರಿದ ದೀರ್ಘಾವಧಿಯ ಮಾರ್ಗಸೂಚಿಗೆ ದೇಶಿ ಹಾಗೂ ವಿದೇಶಿ ಅರ್ಥಶಾಸ್ತ್ರಜ್ಞರು ಕಾತರದಿಂದ ಕಾಯುತ್ತಿದ್ದಾರೆ.

ಇದು ನಿರ್ಮಲಾ ಸೀತಾರಾಮನ್ ಅವರ ಒಂಬತ್ತನೇ ಕೇಂದ್ರ ಬಜೆಟ್ ಆಗಿದೆ. 2019ರಲ್ಲಿ ತಮ್ಮ ಮೊದಲ ಬಜೆಟ್‌ನಲ್ಲಿ ದಶಕಗಳ ಕಾಲ ಬಳಸಲಾಗುತ್ತಿದ್ದ ಚರ್ಮದ ಬ್ರೀಫ್‌ಕೇಸ್ ಪದ್ಧತಿಯನ್ನು ಕೈಬಿಟ್ಟು, ಕೆಂಪು ಬಟ್ಟೆಯಲ್ಲಿ ಸುತ್ತಿದ ಸಾಂಪ್ರದಾಯಿಕ ‘ಬಹಿ-ಖಾತಾ’ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಕಳೆದ ನಾಲ್ಕು ವರ್ಷಗಳಂತೆ ಈ ಬಾರಿಯೂ ಬಜೆಟ್ ಸಂಪೂರ್ಣವಾಗಿ ಕಾಗದರಹಿತ ರೂಪದಲ್ಲೇ ಮಂಡನೆಯಾಗಲಿದೆ.

2026ರ ಆರ್ಥಿಕ ವರ್ಷದಲ್ಲಿ ಜಿಡಿಪಿಯ ಶೇಕಡಾ 4.5ಕ್ಕಿಂತ ಕಡಿಮೆ ಹಣಕಾಸು ಕೊರತೆಯ ಗುರಿ ಸಾಧಿಸಿದ ಬಳಿಕ, 2027ರ ಬಜೆಟ್‌ನಲ್ಲಿ ಸಾಲ–ಜಿಡಿಪಿ ಅನುಪಾತ ಕಡಿತಕ್ಕೆ ಸಂಬಂಧಿಸಿದ ಸ್ಪಷ್ಟ ಮಾರ್ಗಸೂಚಿ ದೊರಕುವ ನಿರೀಕ್ಷೆ ಮಾರುಕಟ್ಟೆಗಳಲ್ಲಿ ಇದೆ. ಮುಂದಿನ ಹಣಕಾಸು ವರ್ಷಕ್ಕೆ ಸರ್ಕಾರ ನಿರ್ದಿಷ್ಟ ಹಣಕಾಸು ಕೊರತೆ ಗುರಿಯನ್ನು ಘೋಷಿಸಬಹುದೇ ಎಂಬುದರ ಮೇಲೂ ಕುತೂಹಲವಿದೆ.

ಈ ಹಣಕಾಸು ವರ್ಷದಲ್ಲಿ ಸರ್ಕಾರದ ಯೋಜಿತ ಬಂಡವಾಳ ವೆಚ್ಚವನ್ನು 11.2 ಲಕ್ಷ ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಖಾಸಗಿ ವಲಯ ಹೂಡಿಕೆ ಬಗ್ಗೆ ಎಚ್ಚರಿಕೆಯಿಂದಿರುವ ಹಿನ್ನೆಲೆ, ಸರ್ಕಾರ ಬಂಡವಾಳ ವೆಚ್ಚದ ಮೇಲೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಪ್ರಸ್ತುತ ಮಟ್ಟದಿಂದ ಶೇಕಡಾ 10ರಿಂದ 15ರಷ್ಟು ಬಂಡವಾಳ ವೆಚ್ಚ ಹೆಚ್ಚಳವಾಗುವ ನಿರೀಕ್ಷೆ ಇದೆ.

ಇನ್ನು 2027ರ ಹಣಕಾಸು ವರ್ಷದ ನಾಮಮಾತ್ರ ಜಿಡಿಪಿ ಬೆಳವಣಿಗೆ ಮುನ್ಸೂಚನೆಗಳು ಹಣದುಬ್ಬರದ ಭವಿಷ್ಯ ದಿಕ್ಕಿನ ಕುರಿತು ಸುಳಿವು ನೀಡಲಿವೆ. ಸರ್ಕಾರವು ಮುಂದಿನ ಹಣಕಾಸು ವರ್ಷಕ್ಕೆ ಶೇ.10.5 ರಿಂದ 11ರ ನಡುವೆ ನಾಮಮಾತ್ರ ಜಿಡಿಪಿ ಬೆಳವಣಿಗೆಯನ್ನು ಘೋಷಿಸಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಜಿ ರಾಮ್ ಜಿ ಸೇರಿದಂತೆ ಪ್ರಮುಖ ಯೋಜನೆಗಳು, ಆರೋಗ್ಯ ಮತ್ತು ಶಿಕ್ಷಣದಂತಹ ಮೂಲಭೂತ ಕ್ಷೇತ್ರಗಳ ಮೇಲಿನ ವೆಚ್ಚಕ್ಕೂ ಬಜೆಟ್‌ನಲ್ಲಿ ಹೆಚ್ಚಿನ ಗಮನ ಹರಿಸುವ ಸಾಧ್ಯತೆ ಇದೆ.

ಸಮಿತಿ ಸಭೆ ಚರಿತ್ರೆ ಸೃಷ್ಟಿಸಲಿ

ಕರ್ನಾಟಕ ರಾಜ್ಯ ಸರಕಾರಿ ಸಂಘವು ಶತಮಾನ ಪೂರೈಸಿದ ಅತಿದೊಡ್ಡ ಸಂಘಟನೆಯಾಗಿದೆ. ರಾಜ್ಯ ಸರಕಾರಿ ನೌಕರರ ವಿವಿಧ ನೂರಾರು ವೃಂದ ಸಂಘಟನೆಗಳಿಗೆ ಮಾತೃಸ್ಥಾನದಲ್ಲಿದ್ದು, ಪೋಷಿಸಿ ಬೆಳೆಸಿದೆ. 105 ವರ್ಷಗಳ ಇತಿಹಾಸದಲ್ಲಿ ಸಂಘವು ಕೆಲವು ಐತಿಹಾಸಿಕ ನಿರ್ಣಯಗಳ ಮೂಲಕ ನೌಕರರ ಹಿತರಕ್ಷಣೆ ಕಾಪಾಡಿರುವದನ್ನು ಕಾಣುತ್ತೇವೆ. ನೌಕರ ಮತ್ತು ನೌಕರ ಕುಟುಂಬದವರ ಆರ್ಥಿಕ, ಸಾಮಾಜಿಕ, ಸೇವಾಭದ್ರತೆ, ಕಾಲ ಕಾಲಕ್ಕೆ ವೇತನ ಪರಿಷ್ಕರಣೆ, ತುಟ್ಟಿಭತ್ಯೆ, ಮನೆ ಬಾಡಿಗೆ, ವೈದ್ಯಕೀಯ ಭತ್ಯೆ ಸೌಲಭ್ಯಗಳನ್ನು ಸಾಂಘಿಕ ಹೋರಾಟದಿಂದ ಕೊಡಿಸುವ ಮೂಲಕ ನೌಕರರ ಬದುಕನ್ನು ಹಸನಾಗಿಸಿದೆ.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಸಿ.ಎಸ್. ಷಡಾಕ್ಷರಿ ಅವರು ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು 24*7 ಕಾರ್ಯನಿರ್ವಹಿಸುವ ಮೂಲಕ ಸಂಘಕ್ಕೆ ಒಂದು ಹೊಸ ಆಯಾಮ ತಂದು ಕೊಟ್ಟರು. ಸೀಮಿತ ಕ್ಷೇತ್ರಕ್ಕೆ ತನ್ನ ಕಾರ್ಯವ್ಯಾಪ್ತಿಯೊಂದಿಗೆ ಅಪರಿಚಿತವಾಗಿದ್ದ ಸಂಘಟನೆಯನ್ನು ರಾಜ್ಯದ ಮೂಲೆ ಮೂಲೆಗಳಿಗೆ ಪ್ರವಾಸ ಕೈಗೊಂಡು ಎಲ್ಲ ಸ್ತರದ ನೌಕರರನ್ನು ಭೇಟಿ ಮಾಡಿ ಜಿಲ್ಲಾ ಮಟ್ಟದಲ್ಲಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಹಬ್ಬ, ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರದಂತಹ ವಿನೂತನ ಕಾರ್ಯಕ್ರಮಗಳ ಮುಖೇನ ರಾಜ್ಯದ ಉದ್ದಗಲಕ್ಕೂ ಸಂಘದ ವ್ಯಾಪ್ತಿಯನ್ನು ವಿಸ್ತರಿಸಿದರು.

ಜಿಲ್ಲಾ, ತಾಲೂಕು, ಹೋಬಳಿ ಹಂತದಲ್ಲಿ ಜರುಗುತ್ತಿರುವ ಸಂಘದ ಕಾರ್ಯಕ್ರಮಕ್ಕೆ ತಮ್ಮ ಒತ್ತಡದ ಕಾರ್ಯಗಳ ನಡುವೆಯೂ ಆಗಮಿಸಿ ಸಂಘಟನೆಗೊಂದು ಬಲವಾದ ಶಕ್ತಿಯನ್ನು ತರುವ ಮೂಲಕ ಅಪರೂಪದ ಅಧ್ಯಕ್ಷರಾಗಿ ರಾಜ್ಯದ ಲಕ್ಷಾಂತರ ನೌಕರರ ಮನದಾಳದಲ್ಲಿ ಜನಮಾನಸರಾಗಿ ನಮ್ಮೆಲ್ಲರ ಅಭಿಮಾನದ ಹೆಮ್ಮೆಯ ಅಧ್ಯಕ್ಷರಾಗಿದ್ದಾರೆ ಷಡಾಕ್ಷರಿಯವರು. ಸದಾ ಪಾದರಸದಂತೆ ಕೆಲಸದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು ವೈಯಕ್ತಿಕವಾದ ಹಸನಾದ ಬದುಕಿನ ಮೂಲಕ ನಮಗೆಲ್ಲಾ ರೋಲ್ ಮಾಡೆಲ್ ಆಗಿದ್ದಾರೆ. ಒಬ್ಬ ದಕ್ಷ ಮತ್ತು ಸಮರ್ಥ ನಾಯಕತ್ವದಲ್ಲಿ ಸಂಘ ಮುನ್ನಡೆದರೆ ಏನೆಲ್ಲಾ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

• ಶೇಕಡಾ 27.50ರಷ್ಟು ಫಿಟ್‌ಮಂಟ್‌ನೊಂದಿಗೆ 7ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿರುವದು.
• ಸರಕಾರಿ ನೌಕರರ ಮೇಲೆ ಅನಾಮಧೇಯ ದೂರುಗಳು ಬಂದಲ್ಲಿ ತನಿಖೆ ಅಗತ್ಯವಿಲ್ಲವೆಂಬ ಸರಕಾರದ ಆದೇಶ.
• ರಾಜ್ಯ ಸರಕಾರಿ ನೌಕರರ ಹಬ್ಬದ ಮುಂಗಡ (ಎಫ್‌ಎ) ಮೊತ್ತವನ್ನು 10 ಸಾವಿರದಿಂದ 25 ಸಾವಿರ ರೂಗಳಿಗೆ ಹೆಚ್ಚಳ.
• ಮಹಿಳಾ ಸರಕಾರಿ ನೌಕರರಿಗೆ ಮಕ್ಕಳ ಆರೈಕೆಗಾಗಿ 6 ತಿಂಗಳ ಶಿಶುಪಾಲನಾ ರಜೆಯ ಆದೇಶ.
• ರಾಜ್ಯದ ಮಹಿಳಾ ಸರಕಾರಿ ನೌಕರರಿಗೆ ಋತುಚಕ್ರ ರಜೆ ಮಂಜೂರು.
• ಪ್ರತಿವರ್ಷ ಏಪ್ರಿಲ್ 21ರಂದು ರಾಜ್ಯ ಸರಕಾರಿ ನೌಕರರ ದಿನಾಚರಣೆ ಆದೇಶ.
• ಸರಕಾರಿ ನೌಕರರು ಹಾಗೂ ಕುಟುಂಬದ ಅವಲಂಬಿತ ಸದಸ್ಯರಿಗೆ ಸಂಪೂರ್ಣ ನಗದುರಹಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್‌ಎಸ್) ಜಾರಿ.
• ಸರಕಾರಿ ನೌಕರರಿಗೆ ಡಯಾಲಿಸಿಸ್ ಚಿಕಿತ್ಸೆಗಾಗಿ 6 ತಿಂಗಳ ವಿಶೇಷ ಸಾಂದರ್ಭಿಕ ರಜೆ ಆದೇಶ.
• ಸರಕಾರಿ ನೌಕರರು ಸ್ಥಿರಾಸ್ಥಿ ಮತ್ತು ಚರಾಸ್ಥಿಯನ್ನು ಸರಕಾರದ ಅನುಮತಿ ಇಲ್ಲದೆ ಖರೀದಿಸಲು ಆದೇಶ.
• ಸ್ಯಾಲರಿ ಪ್ಯಾಕೇಜ್ ಯೋಜನೆಯಡಿಯಲ್ಲಿ ಅಪಘಾತದಲ್ಲಿ ಮರಣ ಹೊಂದಿದ ನೌಕರರ ಕುಟುಂಬಕ್ಕೆ 1 ಕೋಟಿ ರೂ ವಿಮಾ ಯೋಜನೆ ಜಾರಿ.
• ಕಳೆದ 5 ವರ್ಷಗಳಿಂದ ರಾಜ್ಯ ಮಟ್ಟದ ನೌಕರರ ಕ್ರೀಡಾಕೂಟಗಳ ಯಶಸ್ವಿ ಆಯೋಜನೆ.
• ಸರಕಾರಿ ನೌಕರರ ಕುಂದು-ಕೊರತೆಗಳನ್ನು ಆಲಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜೆಸಿಎಮ್ ಸಮಿತಿ ರಚನೆ ಆದೇಶ.

ಹೀಗೆ ನೂರಾರು ಸೌಲಭ್ಯಗಳನ್ನು ನೌಕರ ಬಾಂಧವರಿಗೆ ಕೊಡಿಸುವ ಮೂಲಕ ನೌಕರರು ಇಂದು ಸಂತಸ, ನೆಮ್ಮದಿಯಿಂದ ಜೀವನ ಸಾಗಿಸಲು ಕಾರಣರಾಗಿದ್ದಾರೆ. ಗದಗ ಜಿಲ್ಲೆಯಾಗಿ 29 ವರ್ಷಗಳ ತರುವಾಯ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಡೆಸಲು ಪ್ರಥಮ ಬಾರಿಗೆ ಅವಕಾಶ ಮಾಡಿಕೊಡುವ ಮೂಲಕ ಪ್ರಾದೇಶಿಕ ಸಮಾನತೆಗೆ ಆದ್ಯತೆ ನೀಡಿರುವದನ್ನು ಕಾಣಬಹುದಾಗಿದೆ. ಗಂಡು ಮೆಟ್ಟಿನ ನಮ್ಮ ಮಾತೃನೆಲದಲಿ ಜರುಗುವ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಓಪಿಎಸ್ ಜಾರಿಯಂತಹ ಐತಿಹಾಸಿಕ ನಿರ್ಣಯಗಳ ಮೂಲಕ ಚರಿತ್ರೆಯ ಪುಟ ಸೇರಲೆಂದು ಸಮಸ್ತ ನೌಕರ ಬಾಂಧವರ ಆಶಯವಾಗಿದೆ.

  • ವಿಶ್ವನಾಥ ಯ.ಕಮ್ಮಾರ.
    ನಿರ್ದೇಶಕರು, ಕರ್ನಾಟಕ ರಾಜ್ಯ
    ಸರಕಾರಿ ನೌಕರರ ಸಂಘ, ಗದಗ ಜಿಲ್ಲಾ ಶಾಖೆ.

ಬಾಲಲೀಲಾ ಮಾಹಾಂತ ಶಿವಯೋಗಿಗಳು ವೈರಾಗ್ಯ ಮೂರ್ತಿ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಬಾಲಲೀಲಾ ಮಾಹಾಂತ ಶಿವಯೋಗಿಗಳು ವೈರಾಗ್ಯನಿಧಿಯಾಗಿದ್ದರು ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ದ ರಾಜಯೋಗೀಂದ್ರ ಮಾಹಾಸ್ವಾಮಿಗಳು ಹೇಳಿದರು.

ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿಗಳ 167ನೇ ಜಾತ್ರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಮೈಸೂರು ಮುಮ್ಮಡಿ ಕೃಷ್ಣರಾಜ ಒಡೆಯರ ರೋಗಭಾದೆಯನ್ನು ದೂರ ಮಾಡಿದಾಗ ಶಿವಯೋಗಿಗಳಿಗೆ ಮುತ್ತು-ರತ್ನಗಳನ್ನು ನೀಡಿದಾಗ ಅದನ್ನು ಸ್ವೀಕರಿಸದೇ ಕೇವಲ ಕುಂಬಳಕಾಯಿಯನ್ನು ಮಾತ್ರ ಪಡೆದ ಮಹಾ ತಪಸ್ವಿ, ವೈರಾಗ್ಯ ಮೂರ್ತಿ, ವೈರಾಗ್ಯನಿಧಿಯಾಗಿದ್ದಾರೆ. ಇಂತಹ ಪುಣ್ಯಾತ್ಮರ ಪುಣ್ಯ ಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಧನ್ಯರು ಎಂದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಇಂದು ಶ್ರೇಷ್ಠ ರಾಜಕಾರಣಿಯಾಗಬೇಕು ಎಂದರೆ, 12ನೇ ಶತಮಾನದ ಸಂತರು ಮಾಹಾಂತರು, ಶ್ರೀ ಬಾಲಲೀಲಾ ಮಾಹಾಂತ ಶಿವಯೋಗಿಗಳ ದಾರಿಯಲ್ಲಿ ಸಾಗಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದರು.

ಶ್ವೇತಾ ದೊಟಿಕಲ್ ಹಾಗೂ ವಿಜಯಲಕ್ಷ್ಮೀ ಹಿರೇಮಠ ವಚನ ಸಂಗೀತ ಹಾಡಿದರೆ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮವನ್ನು ರಮಜಾನ್ ದರ್ಗಾ ಉದ್ಘಾಟಿಸಿದರು. ಸಮ್ಮುಖವನ್ನು ಶಿವಮೊಗ್ಗ ಜಿಲ್ಲೆಯ ಜಡೆ ಸಂಸ್ಥಾನಮಠದ ಡಾ. ಮಾಹಾಂತ ಮಾಹಾಸ್ವಾಮಿಗಳು ವಹಿಸಿದ್ದರು. ಶಿವಮೊಗ್ಗ ಅಲ್ಲಮಪ್ರಭು ಹೊಳೆಮಠ ನಾಗಭೂಷಣ ಮಾಹಾಸ್ವಾಮಿಗಳು, ಗುಡ್ಡದನ್ವೇರಿಯ ಶಿವಯೋಗೀಶ್ವರ ಮಾಹಾಸ್ವಾಮೀಜಿ, ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು, ಗುರಣ್ಣಾ ಬಳಗಾನೂರ, ಪ್ರೊ. ಡಿ.ಎಂ. ಹಿರೇಮಠ, ಜಾತ್ರಾ ಸಮಿತಿ ಅಧ್ಯಕ್ಷ ಗಂಗಪ್ಪ ಸುಂಕಾಪೂರ ಇದ್ದರು.

ಹಿಂದೂ ಸಮಾಜದಲ್ಲಿ ಗಟ್ಟಿತನ ಬೇಕು: ಕೃಷ್ಣಜೀ ಜೋಶಿ

ವಿಜಯಸಾಕ್ಷಿ ಸುದ್ದಿ, ಗದಗ: ಸಂಗೀತದಲ್ಲಿ ದೃಷ್ಟಿ, ಜೀವನ ನೀಡಿದ ಕ್ಷೇತ್ರ ಗದಗ. ಸಂಸ್ಕೃತಿ ಬಿಂಬಿಸುವ ನಗರದಲ್ಲಿ ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ನಡೆಯುತ್ತಿರುವುದು ಸ್ವಾಗತಾರ್ಹ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಹಿಂದೂ ಸಮಾಜ ಜಾಗೃತವಾಗಿರಬೇಕು ಎಂಬ ಉದ್ದೇಶದಿಂದ ಈ ಯಾತ್ರೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ಉತ್ತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರ ಪ್ರಮುಖ ಕೃಷ್ಣಜೀ ಜೋಶಿ ಹೇಳಿದರು.

ಗದಗಿನ ಕಿತ್ತೂರು ರಾಣಿ ಚೆನ್ನಮ್ಮ ನಗರದಲ್ಲಿ ಶನಿವಾರ ಸಂಜೆ ಜರುಗಿದ ಹಿಂದೂ ಸಮಾಜೋತ್ಸವ, ಶೋಭಾಯಾತ್ರೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಹಿಂದೂಗಳು ಸಂವಿಧಾನ ಹಕ್ಕಿನ ಜೊತೆಗೆ ಕರ್ತವ್ಯಗಳನ್ನು ಪಾಲಿಸಬೇಕು. ಅದರಲ್ಲಿ ನಾಗರಿಕ ಕರ್ತವ್ಯ ಮುಖ್ಯವಾಗಿದೆ ಎಂದರು.

ವಿಶ್ವದಲ್ಲಿ ನಾಗರಿಕತೆ ಇಲ್ಲದ ಸಂದರ್ಭದಲ್ಲಿ ಭಾರತದಲ್ಲಿ ನಾಗರಿಕ ಸಂಸ್ಕೃತಿ ಉಚ್ಚಾಯ ಸ್ಥಿತಿಯಲ್ಲಿತ್ತು. ಹಿಂದೂ ಸಮಾಜದಿಂದ ಭಾರತ ಜಗತ್ತಿಗೇ ಗುರುವಾಗಿತ್ತು. ಆದರೆ, 1093ರಲ್ಲಿ ಪೃಥ್ವಿರಾಜ ಚವ್ಹಾಣನನ್ನು ಸೋಲಿಸಿ ಮಹಮ್ಮದ ಘೋರಿ ದೆಹಲಿಯಲ್ಲಿ ಆಳ್ವಿಕೆ ಮಾಡಿದ. ಆದರೆ ಪೃಥ್ವಿರಾಜ ಚವ್ಹಾಣ ಸೋಲುವುದಕ್ಕೆ ಅವನ ಮಾವ ಜಯಚಂದನೇ ಕಾರಣ. ಅದೇ ರೀತಿ ಕಿತ್ತೂರು ಸಂಸ್ಥಾನದ ಆಳ್ವಿಕೆಯೂ ಕೊನೆಗೊಂಡಿತು. ಇತಿಹಾಸದಲ್ಲಿ ನಮ್ಮ ಅಧಃಪತನಕ್ಕೆ ಹಿಂದೂಗಳೇ ಕಾರಣ. ನಾವು ಹಿಂದೂ, ನಾವೆಲ್ಲ ಒಂದು ಎನ್ನುವುದು ಯಾವಾಗ ಎಂದು ಪ್ರಶ್ನಿಸಿದರಲ್ಲದೆ, ನಮ್ಮ ಸಮಾಜದಲ್ಲಿ ಗಟ್ಟಿತನ ಬೇಕು. ಗಟ್ಟಿತನವೇ ನಾವು ಭವಿಷ್ಯದಲ್ಲಿ ಹಿಂದೂಗಳಾಗಿ ಉಳಿಯಲು ಕಾರಣವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ತಾಯಿ ಮತ್ತು ಭೂಮಿಗೆ ಗೌರವ ನೀಡಬೇಕು. ಭರತ ಖಂಡಕ್ಕೆ ಅಗೌರವ ತೋರಿದರೆ ತಾಯಿಗೆ ಅಗೌರವ ತೋರಿದಂತೆ ಎಂದರು.

ಮುಕ್ಕಣ್ಣೆಶ್ವರ ಮಠದ ಶಂಕರಾನಂದ ಶ್ರೀಗಳು, ಅಡ್ನೂರು ಮಠದ ಪಂಚಾಕ್ಷರಿ ಶಿವಾಚಾರ್ಯ ಶ್ರೀಗಳು, ಹಿಂದೂ ಸಮಾಜೋತ್ಸವ ಅಧ್ಯಕ್ಷ ಬಸವರಾಜ ಬಿಂಗಿ, ಹಿಂದೂ ಸಮಾಜೋತ್ಸವ ಸಮಿತಿ ಉಪಾಧ್ಯಕ್ಷ ಕೇಶವರಾಮ್ ಕೊಳ್ಳಿ, ಸಂಘಟನಾ ಕಾರ್ಯದರ್ಶಿ ಜಗದೀಶ್ ಎಸ್.ಪಿ, ಚಿನ್ಮಯಾನಂದ ಟೆಂಗಿನಕಾಯಿ, ಶಶಿಧರ ದಿಂಡೂರ, ರಘುನಾಥಸಾ ಮೆರವಾಡೆ, ರಾಜಣ್ಣ ಮಲ್ಲಾಡದ, ಮಂಜುನಾಥ ಕೊಟ್ನೆಕಲ್, ಚಂದ್ರಕಾಂತ ಚವ್ಹಾಣ, ಪ್ರೇಮಾ ಕಡೆಮನಿ, ಕಾರ್ಯದರ್ಶಿ ಪ್ರಕಾಶ ಉಗಲಾಟದ, ಶೈಲೇಶ್ ಬಾಗಮಾರ, ಹರೀಶ ಪೂಜಾರ, ರಾಜಶೇಖರ ಕುಂಬಿ, ನಾಗವೇಣಿ ಕಟ್ಟಿಮನಿ, ಡಾ. ಉಮೇಶ ಹಾದಿ, ಚಿನ್ಮಯಾನಂದ ಟೆಂಗಿನಕಾಯಿ ಮುಂತಾದವರಿದ್ದರು.

ಬೃಹತ್ ಹಿಂದೂ ಸಮ್ಮೇಳನದ ಶೋಭಾಯಾತ್ರೆಗೆ ವೀರೇಶ್ವರ ಪುಣ್ಯಾಶ್ರಮದ ಪಿಠಾಧಿಪತಿ ಡಾ.ಕಲ್ಲಯ್ಯಜ್ಜನವರು ಚಾಲನೆ ನೀಡಿದರು. ನಗರದ ವೀರೇಶ್ವರ ಪುಣ್ಯಾಶ್ರಮ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಮಠದಿಂದ ಶೋಭಾಯಾತ್ರೆ ಆರಂಭವಾಗಿ ವೆಂಕಟೇಶ ಟಾಕೀಸ್ ರಸ್ತೆ, ಟ್ಯಾಗೋರ್ ರಸ್ತೆ, ಕಿತ್ತೂರಾಣಿ ಚೆನ್ನಮ್ಮ ರಸ್ತೆ, ಹಾತಲಗೇರಿ ನಾಕಾ, ಸಾಯಿಬಾಬಾ ದೇವಸ್ಥಾನದಿಂದ ಮಾಳೇಕೊಪ್ಪಮಠ ಅವರ ಬಯಲು ಜಾಗವರೆಗೆ ಸಂಚರಿಸಿತು. ದೇಶಭಕ್ತಿಗೀತೆಗಳೊಂದಿಗೆ ರಾಷ್ಟ್ರ ಭಕ್ತರ ಭವ್ಯ ಭಾವಚಿತ್ರದ ಮೆರವಣಿಗೆ ರೋಮಾಂಚನ ತರಿಸಿತು. ಸಮ್ಮೇಳನದ ಹಿನ್ನೆಲೆಯಲ್ಲಿ ಇಡೀ ನಗರದಾದ್ಯಂತ ಭಗವಾಧ್ವಜಗಳು, ಬ್ಯಾನರ್‌ಗಳಿಂದ ನಗರಕ್ಕೆ ನಗರವೇ ಕೇಸರಿ ಬಣ್ಣದಲ್ಲಿ ಕಂಗೊಳಿಸಿತು. ಅವಳಿ ನಗರದ ವಿವಿಧ ಕಡೆ ಶೋಭಾಯಾತ್ರೆಯನ್ನು ಸಂಭ್ರಮದಿಂದ ಸ್ವಾಗತಿಸಿದರು.

 ಫೆ. 1ರಂದು ರಾಜ್ಯ ಮಟ್ಟದ ವಧು-ವರರ ಸಮಾವೇಶ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಫೆ. 1ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾ ಚೆನ್ನದಾಸರ ಸಮಾಜದಿಂದ ಜಿಲ್ಲಾ ಚೆನ್ನದಾಸರ ಸಮಾಜದ ನೂತನ ಸಂಘದ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ, ರಾಜ್ಯ ಮಟ್ಟದ ವಧು-ವರರ ಸಮಾವೇಶ ಮತ್ತು ಜಿಲ್ಲಾ ಚೆನ್ನದಾಸರ ಭವನ ನಿರ್ಮಾಣದ ಜಾಗ ಖರೀದಿಸಲು ದೇಣಿಗೆ ನೀಡುವ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಚೆನ್ನದಾಸರ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಹೆಬ್ಬಳ್ಳಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಓಂಕಾರೇಶ್ವರಗಿರಿಯ ಫಕೀರೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಚೆನ್ನದಾಸರ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಹೆಬ್ಬಳ್ಳಿ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಶಾಸಕ ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ಬಿ.ಆರ್. ಯಾವಗಲ್ಲ, ಕೃಷ್ಣಗೌಡ ಪಾಟೀಲ, ಯಮನೂರಪ್ಪ ದಂಡಗಿದಾಸರ, ಗಂಗಾಧರಪ್ಪ, ಬಸವರಾಜ ನಾರಾಯಣಕರ, ಬಿ.ಎಚ್. ಮಂಜುನಾಥ, ನಂದಾ ಹಣಬರಹಟ್ಟಿ, ಗೋವಿಂದರಾಜ ದಾಸರಿ, ಉಷಾ ದಾಸರ ಮುಂತಾದವರು ಭಾಗವಹಿಸುವರು ಎಂದರು.

ರಾಜ್ಯ ಮಟ್ಟದ ವಧು-ವರರ ಸಮಾವೇಶದಲ್ಲಿ ಸಮಾಜದ ಅವಿವಾಹಿತ ಯುವಕ-ಯುವತಿಯರು ತಮ್ಮ ಹೆಸರನ್ನು ನೋಂದಾಯಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹೇಮಂತ ದಾಸರ, ಭೀಮಪ್ಪ ಬೇವೂರ, ಮಾರುತಿ ದಂಡಗಿದಾಸರ, ಕೃಷ್ಣಾ ದಾಸರ, ಮಹೇಶ ದಾಸರ, ಚಿದಾನಂದಪ್ಪ ಕಟ್ಟಿಮನಿ, ವಾಸುದೇವ ಚೆನ್ನದಾಸರ, ಗೋವಿಂದರಾಜ ದಾಸರ, ಎಚ್.ಎಲ್. ದಾಸರ, ರವಿ ಕಪ್ಪಲಿ ಮುಂತಾದವರು ಇದ್ದರು.

ಸ್ಥಳೀಯ ಆಡಳಿತ ಜನರಿಗೆ ಹತ್ತಿರವಾಗಬೇಕು: ಡಿ.ಆರ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದಲೇ ರೂಪಿಸಿದ ಯೋಜನೆಯನ್ವಯ ರಾಜ್ಯದ ಆಯವ್ಯಯ ತಯಾರಾಗಬೇಕು. ಆ ಮೂಲಕ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕು ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಆಶಿಸಿದರು.

ಅವರು ಶನಿವಾರ ಪಟ್ಟಣದ ತಾ.ಪಂ ಸಭಾಭವನದಲ್ಲಿ 2027-28ನೇ ಸಾಲಿನ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯನ್ನು ಜನಪರ ಯೋಜನೆಯನ್ನಾಗಿಸುವ ಕುರಿತು ಜಿ.ಪಂ, ತಾ.ಪಂ, ಗ್ರಾ.ಪಂ ಹಾಗೂ ತಾಲೂಕು ಯೋಜನಾ ಮತ್ತು ಅಭಿವೃದ್ಧಿ ಸಮಿತಿ ಇವರ ಸಹಯೋಗದಲ್ಲಿ ನಡೆಸಿದ ತಾಲೂಕು ಮಟ್ಟದ ಚಿಂತನ-ಮಂಥನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಧಿಕಾರ ವಿಕೇಂದ್ರೀಕರಣ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮತ್ತು ಬಲವರ್ಧನೆಯಾಗಬೇಕು ಮತ್ತು ಆ ಮೂಲಕ ಸ್ಥಳೀಯ ಆಡಳಿತ ವ್ಯವಸ್ಥೆ ಜನರಿಗೆ ಹತ್ತಿರವಾಗಬೇಕು. ಸಂವಿಧಾನದಡಿ ಪ್ರತಿಯೊಬ್ಬರಿಗೂ ಇರುವ ಸಮಾನ ನ್ಯಾಯ, ಸ್ಥಾನಮಾನ, ಅವಕಾಶ, ಹಕ್ಕುಗಳನ್ನರಿತು ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸಾಕಾರಕ್ಕೆ ಕೈ ಜೋಡಿಬೇಕು. ಪಂಚಾಯತ್ ರಾಜ್ ವ್ಯವಸ್ಥೆಯ ಯೋಜನೆಗಳು ಸರ್ವಜನರ ಹಿತ ಮತ್ತು ಅವಶ್ಯಕತೆಗನುಗುಣವಾಗಿ ತಳಮಟ್ಟದಿಂದಲೇ ರೂಪಿತವಾಗಬೇಕು ಎಂಬ ಆಶಯದಿಂದ 2027-28ರ ಬಜೆಟ್‌ಗೆ ಪೂರ್ವಕವಾಗಿ ಜನಾಭಿಪ್ರಾಯ, ಚಿಂತನ-ಮಂಥನಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ ಎಂದರು.

ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಸುಜಾತಾ ದೊಡ್ಡಮನಿ ಮಾತನಾಡಿದರು. ಜಿಲ್ಲಾ ಯೋಜನಾ ಅಧಿಕಾರಿ ಎ.ಎ. ಕಂಬಾಳಿಮಠ ಪ್ರಾಸ್ತಾವಿಕ ನುಡಿದರು. ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಒಂದಾಗೋಣ ಎಂಬ ಪ್ರತಿಜ್ಞಾವಿಧಿ ಬೋಧಿಸಿದರು. ತಾ.ಪಂ ಆಡಳಿತಾಧಿಕಾರಿ ಎಂ.ವಿ. ಚಳಗೇರಿ, ತಾ.ಪಂ ಇಓ ಧರ್ಮರ ಕೃಷ್ಣಪ್ಪ, ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ಆನಂದಸ್ವಾಮಿ ಗಡ್ಡದೇವರಮಠ, ಚನ್ನಪ್ಪ ಜಗಲಿ, ವಿ.ಜಿ. ಪಡಗೇರಿ, ವೀರಯ್ಯ ಮಠಪತಿ, ಪ್ರವೀಣ ಬಾಳಿಕಾಯಿ, ರಾಮಣ್ಣ ಲಮಾಣಿ(ಶಿಗ್ಲಿ), ಜಯಕ್ಕ ಕಳ್ಳಿ, ಶಶಿಕಲಾ ಬಡಿಗೇರ, ಕಲ್ಲಪ್ಪ ಗಂಗಣ್ಣವರ, ಶಿವರಾಜಗೌಡ ಪಾಟೀಲ, ರಫೀಕ ಕಲಬುರ್ಗಿ, ಯಲ್ಲಪ್ಪ ತಳವಾರ, ಪರಮೇಶ ಲಮಾಣಿ, ಅಂಬರೀಶ ತೆಂಬದಮನಿ, ಫಕ್ಕೀರೇಶ ಮ್ಯಾಟಣ್ಣವರ, ಫಿರ್ದೋಸ್ ಆಡೂರ, ಯಲ್ಲವ್ವ ದುರಗಣ್ಣವರ, ಸಂತೋಷ ತಾಂದಳೆ, ರಾಜು ಓಲೇಕಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರು, ಸಾರ್ವಜನಿಕರು ಇದ್ದರು. ಈಶ್ವರ ಮೆಡ್ಲೇರಿ ನಿರೂಪಿಸಿದರು.

ದೇಶದ ಅಭಿವೃದ್ಧಿಗೆ ಗ್ರಾಮಗಳ ಅಭಿವೃದ್ಧಿ ಪೂರಕವಾಗಿದೆ. ಗ್ರಾಮ ಸಭೆಗಳಲ್ಲಿಯೂ ಬಜೆಟ್ ಬಗ್ಗೆ ಚರ್ಚೆ ಆಗಬೇಕು. 2027-28ರ ಆರ್ಥಿಕ ವರ್ಷದ ಅಭಿವೃದ್ಧಿ ಯೋಜನೆಗಳನ್ನು ಜನರ ಅಪೇಕ್ಷೆಯಂತೆ ರೂಪಿಸಬೇಕು. ಸ್ಥಳೀಯ ಸಂಸ್ಥೆಗಳು ಸ್ಥಳೀಯ ಸರ್ಕಾರವೇ ಆಗಿದ್ದು, ಅವಕ್ಕೆ ಪ್ರತ್ಯೇಕ ಅನುದಾನ ಸಿಗಬೇಕು. ಜನರ, ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯವಂತಾಗಿ ಗ್ರಾಮಗಳು ಸ್ವಾವಲಂಬಿಯಾಗಿ ಬೆಳೆಯಬೇಕು ಎಂದು ಡಿ.ಆರ್. ಪಾಟೀಲ ಹೇಳಿದರು.

error: Content is protected !!