Home Blog Page 81

ಲಕ್ಕುಂಡಿಯ ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿಗೆ ₹10 ಕೋಟಿ: ಡಿಸಿ ಸಿ.ಎನ್. ಶ್ರೀಧರ್

0

ಗದಗ: ಲಕ್ಕುಂಡಿಯ ಐತಿಹಾಸಿಕ ದೇವಸ್ಥಾನಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆಗೆ ಒಳಪಡುವ ಪ್ರಮುಖ ದೇವಸ್ಥಾನಗಳನ್ನು ಡಿಸಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಲಕ್ಕುಂಡಿಯ ಐತಿಹಾಸಿಕ ಕುಂಭಾರೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಮನೆಗಳ ಶೀಘ್ರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿ ತಿಳಿಸಿದ್ದಾರೆ. ಈ ಕಾರ್ಯವನ್ನು ಕೇಂದ್ರ ಪುರಾತತ್ವ ಇಲಾಖೆ (ASI) ಮೂಲಕ ನಡೆಸಲಾಗುವುದು. ಈಗಾಗಲೇ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಪರಿಹಾರವನ್ನು ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

“ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ಮನೆಗಳನ್ನು ಖಾಲಿ ಮಾಡಿಸಲಾಗುತ್ತದೆ. ಇದು ಸಂಪೂರ್ಣವಾಗಿ ಕೇಂದ್ರ ಪುರಾತತ್ವ ಇಲಾಖೆಯ ಜವಾಬ್ದಾರಿ” ಎಂದು ಡಿಸಿ ಸಿ.ಎನ್. ಶ್ರೀಧರ್ ಹೇಳಿದರು.

ಇನ್ನೂ, 2025-26ನೇ ಸಾಲಿನಲ್ಲಿ ಲಕ್ಕುಂಡಿಯ ಆರು ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿಗೆ ₹10 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು. ರಾಜ್ಯ ಹಾಗೂ ಕೇಂದ್ರ ಪುರಾತತ್ವ ಅಧಿಕಾರಿಗಳ ವರದಿ ಬಂದ ನಂತರ ಆದ್ಯತೆ ಮೇರೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಒಕ್ಕಲೆಬ್ಬಿಸುವ ಪರಿಸ್ಥಿತಿ ನಿರ್ಮಾಣವಾದಲ್ಲಿ ಸೂಕ್ತ ಪರಿಹಾರ ನೀಡಲಾಗುತ್ತದೆ. ಸ್ಥಳಾಂತರದ ಕುರಿತಂತೆ ಅಂತಿಮ ತೀರ್ಮಾನವನ್ನು ಕಾಲವೇ ನಿರ್ಧರಿಸಲಿದೆ ಎಂದು ಡಿಸಿ ತಿಳಿಸಿದರು.

ಕನಕಪುರದ ಮಕ್ಕಳು ಬೆಳೆದರೆ, ನನ್ನ ಮಕ್ಕಳು ಬೆಳೆದಷ್ಟೇ ಖುಷಿ: ಡಿ.ಕೆ. ಶಿವಕುಮಾರ್

0

ಕನಕಪುರ: ಕನಕಪುರದ ಮಕ್ಕಳು ಬೆಳೆದರೆ, ನನ್ನ ಮಕ್ಕಳು ಬೆಳೆದಷ್ಟೇ ಖುಷಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕನಕಪುರದಲ್ಲಿ ನಡೆಯುತ್ತಿರುವ ಕನಕೋತ್ಸವದಲ್ಲಿ ಶನಿವಾರ ನಡೆದ ಎಸ್ಎಸ್ಎಲ್ ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

ಇಲ್ಲಿರುವ ಮಕ್ಕಳು ಹಾಗೂ ಇವರನ್ನು ತಯಾರು ಮಾಡಿದ ತಂದೆ ತಾಯಿ, ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವು ನಿಮ್ಮ ಮೂಲವನ್ನು ಮರೆತರೆ ಯಶಸ್ಸು ಸಾಧಿಸುವುದಿಲ್ಲ. ವಿದೇಶಿಗರು ಭಾರತವನ್ನು ಬೆಂಗಳೂರು ಮೂಲಕ ನೋಡುತ್ತಿದ್ದಾರೆ. ನಾನು ಇತ್ತೀಚೆಗೆ ದಾವೋಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿ ಮಾತನಾಡಿದೆ. ನಮ್ಮ ಬೆಂಗಳೂರು ಹಾಗೂ ಇಲ್ಲಿನ ಯುವಕರ ಪ್ರತಿಭೆ ಬಗ್ಗೆ ನಾನು ಅಲ್ಲಿ ಮಾತನಾಡಿ ಬಂದಿದ್ದೇನೆ. ನಮ್ಮ ಯುವಕರು ಬಹಳ ಪ್ರತಿಭಾವಂತರು, ನೀವು ನಮ್ಮಲ್ಲಿ ಹೂಡಿಕೆ ಮಾಡಿ ಬನ್ನಿ ಎಂದು ಆಹ್ವಾನ ನೀಡಿದ್ದೇನೆ” ಎಂದು ತಿಳಿಸಿದರು.

“ನಾನು ಓದುವಾಗ ನಮ್ಮ ಗುರುಗಳು ಒಂದು ಮಾತು ಹೇಳುತ್ತಿದ್ದರು. ವಿದ್ಯಾ ದದಾತಿ ವಿನಯಂ, ವಿನಯಾತ್ ಯಾತಿ ಪಾತ್ರತಾಂ, ಪಾತ್ರತ್ವಾತ್ ಧನಂ ಆಪ್ನೋತಿ, ಧನಾತ್ ಧರ್ಮ ತಥಃ ಸುಖಂ. ಅಂದರೆ ವಿದ್ಯೆಯಿಂದ ವಿನಯ, ವಿನಯದಿಂದ ವ್ಯಕ್ತಿತ್ವ, ವ್ಯಕ್ತಿತ್ವದಿಂದ ಹಣ, ಹಣದಿಂದ ಧರ್ಮಕಾರ್ಯಗಳು, ಧರ್ಮ ಕಾರ್ಯಗಳಿಂದ ಸುಖ ಸಿಗುತ್ತದೆ ಎಂದರ್ಥ” ಎಂದರು.

“ನಾನು ಪದವಿ ಪಡೆದಿದ್ದು, ನನ್ನ 47ನೇ ವಯಸ್ಸಿನಲ್ಲಿ. ಅಂದರೆ 2008ರಲ್ಲಿ. ನಾನು ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವಾಗ ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಪಕ್ಷದಿಂದ ಚುನಾವಣೆಗೆ ಟಿಕೆಟ್ ನೀಡಲಾಯಿತು. ನಾನು ಬಂಗಾರಪ್ಪ, ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ಸಚಿವನಾದಾಗಿಂತ ನನಗೆ ಪದವಿ ಪಡೆದಾಗ ಹೆಚ್ಚು ಖುಷಿಯಾಯಿತು. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಸಕ್ತಿಯಲ್ಲಿ ಶಿಕ್ಷಣ ತಜ್ಞ, ಆಸಕ್ತಿಯಲ್ಲಿ ನಾನು ರಾಜಕಾರಣಿ” ಎಂದು ಹೇಳಿದರು.

ಖಾತೆ ಬದಲಾವಣೆಗೆ 4 ಲಕ್ಷ ಲಂಚ: ಶಿವಮೊಗ್ಗದಲ್ಲಿ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

0

ಶಿವಮೊಗ್ಗ: ಜಮೀನು ಖಾತೆ ಬದಲಾವಣೆಗಾಗಿ 4 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, ಅದರಲ್ಲೂ 1 ಲಕ್ಷ ರೂಪಾಯಿ ಮುಂಗಡ ಹಣ ಸ್ವೀಕರಿಸುವ ವೇಳೆ ಚಿಕ್ಕಜಂಬೂರು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಬಂಧಿತ ಆರೋಪಿಯನ್ನು ವಿಠಲ ಎಂದು ಗುರುತಿಸಲಾಗಿದೆ. ಶಿಕಾರಿಪುರ ಪಟ್ಟಣದ ಸರ್ಕಾರಿ ನೌಕರರ ಕ್ಯಾಂಟೀನ್‌ನಲ್ಲಿ 1 ಲಕ್ಷ ರೂಪಾಯಿ ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ  ವಶಕ್ಕೆ ಪಡೆದಿದ್ದಾರೆ.

ಜಂಬೂರು ಗ್ರಾಮದ ಜಿಕ್ರಿಯಾ ಬೇಗ್ ಅವರು ತಮ್ಮ ತಂದೆಯ ವಿಲ್ಪತ್ರದ ಆಧಾರದ ಮೇಲೆ ಜಮೀನಿನ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಖಾತೆ ಬದಲಾವಣೆ ಮಾಡಿಕೊಡಲು ಗ್ರಾಮ ಲೆಕ್ಕಾಧಿಕಾರಿ ವಿಠಲ ಅವರು 4 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಇದರಲ್ಲಿ 1 ಲಕ್ಷ ರೂಪಾಯಿ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ, ಇನ್ಸ್ಪೆಕ್ಟರ್ ಮೈಲಾರ ಹಾಗೂ ಸಿಬ್ಬಂದಿಯವರಿಂದ ಯಶಸ್ವಿಯಾಗಿ ನಡೆಸಲಾಯಿತು.

ಸಿಜೆ ರಾಯ್ ಅವರೇ ಶೂಟ್ ಮಾಡಿಕೊಂಡ್ರಾ ಅಥವಾ ಶೂಟ್ ಮಾಡಿದ್ರಾ? ಪ್ರದೀಪ್ ಈಶ್ವರ್ ಅನುಮಾನ!

0

ರಾಮನಗರ: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ಭಾರಿ ರಾಜಕೀಯ ಸಂಚು ಇರುವ ಸಾಧ್ಯತೆ ಇದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಯ್ ಅವರು ತಾವೇ ಗುಂಡು ಹೊಡೆದುಕೊಂಡರೋ ಅಥವಾ ಯಾರಾದರೂ ಗುಂಡು ಹೊಡೆದ್ರೋ ಎಂಬ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ.

ಕನಕಪುರದಲ್ಲಿ ಮಾತನಾಡಿದ ಅವರು, ಘಟನಾ ಸ್ಥಳದಲ್ಲಿ ಸಿಸಿಟಿವಿ ವ್ಯವಸ್ಥೆಯೇ ಇರಲಿಲ್ಲ. ಸ್ಥಳದಲ್ಲಿ ಇದ್ದವರು ಕೇವಲ ಐಟಿ ಅಧಿಕಾರಿಗಳು ಮಾತ್ರ. ಒಳಗಡೆ ಏನಾಯ್ತು ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ ಎಂದು ಹೇಳಿದರು.

ಬಿಜೆಪಿ ಮುಖಂಡರು ಚುನಾವಣೆಗೆ ನೂರಾರು ಕೋಟಿ ರೂಪಾಯಿ ಹಣ ಕೇಳಿದ್ದಾರೆ. ಹಣ ಕೊಡದ ಕಾರಣ ರಾಯ್ ಅವರನ್ನು ಟಾರ್ಗೆಟ್ ಮಾಡಿ ಐಟಿ ದಾಳಿ ಮೂಲಕ ಕಿರುಕುಳ ನೀಡಲಾಗಿದೆ ಎಂಬುದು ನನ್ನ ಬಳಿ ಇರುವ ಪ್ರಾಥಮಿಕ ಮಾಹಿತಿ ಎಂದು ಪ್ರದೀಪ್ ಈಶ್ವರ್ ಆರೋಪಿಸಿದರು.

ಸಿಜೆ ರಾಯ್ ಒಬ್ಬ ಕಾಮನ್ ಮ್ಯಾನ್ ಅಲ್ಲ. ಅವರಿಗೆ ಸಾಲವೂ ಇರಲಿಲ್ಲ, ಯಾವುದೇ ವೈಯಕ್ತಿಕ ಸಮಸ್ಯೆಯೂ ಇರಲಿಲ್ಲ. ಆದರೂ ಕಳೆದ ಒಂದು ತಿಂಗಳಿನಿಂದ ಐಟಿ ಅಧಿಕಾರಿಗಳಿಂದ ನಿರಂತರ ಕಿರುಕುಳ ಅನುಭವಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವವರೆಗೂ ಇಂತಹ ದೌರ್ಜನ್ಯಗಳು ನಿಲ್ಲುವುದಿಲ್ಲ ಎಂದು ಅವರು ಕಿಡಿಕಾರಿದರು.

ಸಿಬಿಐಗೆ ತನಿಖೆ ನೀಡಿದರೆ ನ್ಯಾಯ ಸಿಗುವುದಿಲ್ಲ. ಸಿಬಿಐ ಕೂಡ ಬಿಜೆಪಿ ಕೈಯಲ್ಲೇ ಇದೆ ಎಂದು ಆರೋಪಿಸಿದ ಅವರು, ಸ್ವತಂತ್ರ ಎಸ್‌ಐಟಿ ತನಿಖೆ ನಡೆಸಬೇಕು. ನಿಜಾಂಶ ಹೊರಬರಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಬಜೆಟ್ ವೀಕ್ಷಣೆಗೆ ಬಿಜೆಪಿ ಸಿದ್ಧತೆ: ರಾಜ್ಯಾದ್ಯಂತ LED ಸ್ಕ್ರೀನ್ ವ್ಯವಸ್ಥೆ – ಅಶ್ವತ್ ನಾರಾಯಣ್

0

ಬೆಂಗಳೂರು: ನಾಳೆ (ಫೆ.1) ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕಾರ್ಯಾಲಯಗಳಲ್ಲಿ ಬಜೆಟ್ ನೇರ ವೀಕ್ಷಣೆಗೆ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆಯುವ ಬಜೆಟ್ ವೀಕ್ಷಣಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ರಾಜ್ಯ ಕೋರ್ ಕಮಿಟಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಶಿವಮೊಗ್ಗದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಕಾರ್ಯಕರ್ತರೊಂದಿಗೆ ಬಜೆಟ್ ವೀಕ್ಷಣೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಹುಮ್ನಾಬಾದ್ ಸ್ಫೋಟ ಪ್ರಕರಣ: ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

0

ಬೀದರ್: ಹುಮ್ನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ನಡೆದ ಅನುಮಾನಾಸ್ಪದ ಸ್ಫೋಟ ಪ್ರಕರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ ಆರು ಮಂದಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸಮಗ್ರ ಹಾಗೂ ವೈಜ್ಞಾನಿಕ ತನಿಖೆಗೆ ಅವರು ಆದೇಶಿಸಿದ್ದಾರೆ.

ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಬೇಕು ಹಾಗೂ ಚಿಕಿತ್ಸೆಗೆ ಬೇಕಾದ ಸಂಪೂರ್ಣ ವೆಚ್ಚವನ್ನು ಜಿಲ್ಲಾಡಳಿತವೇ ಭರಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ. ಅಲ್ಲದೇ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸ್ಫೋಟಕ ತಜ್ಞರು ಮತ್ತು ತನಿಖಾ ತಂಡವನ್ನು ಕಳುಹಿಸಿ, ಸ್ಫೋಟಕ ವಸ್ತುವಿನ ಮಾದರಿಗಳನ್ನು ಸಂಗ್ರಹಿಸಿ ತಕ್ಷಣ ತನಿಖೆ ಆರಂಭಿಸುವಂತೆ ಸೂಚಿಸಲಾಗಿದೆ.

ಸ್ಫೋಟಕ್ಕೆ ಕಾರಣವಾದ ವಸ್ತು ಯಾವುದು? ಅದು ಸ್ಫೋಟಕವೇ ಅಥವಾ ಬೇರೆ ವಸ್ತುವೇ? ಆ ವಸ್ತು ಅಲ್ಲಿಗೆ ಹೇಗೆ ತಲುಪಿತು? ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು? ಎಂಬ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುವಂತೆ ತನಿಖೆ ನಡೆಯಬೇಕು ಎಂದು ಖಂಡ್ರೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಘಟನೆಗೆ ಕಾರಣರಾದವರ ವಿರುದ್ಧ ಯಾವುದೇ ಸಡಿಲತೆ ಇಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಚಿವರು ಹೇಳಿದ್ದಾರೆ. ಪದೇಪದೇ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಎಚ್ಚರಿಸಿದ್ದಾರೆ.

ಊಟಕ್ಕೂ ಜಾತಿ ಟ್ಯಾಗ್? – ‘ನನ್ನ ಆಹಾರ ನನ್ನ ಚಾಯ್ಸ್’ ಎಂದು ಕಿಡಿಕಾರಿದ ಡಾಲಿ ಧನಂಜಯ್

ಬೆಂಗಳೂರು: ನಟ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವಿಸಿದ್ದ ವಿಚಾರವನ್ನು ವಿವಾದವನ್ನಾಗಿ ಮಾಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಆಹಾರ ನನ್ನ ಆಯ್ಕೆ. ಆದರೆ ಅದರಲ್ಲಿ ಸಮುದಾಯ, ಜಾತಿ, ಬೇರೆ ಕಲಾವಿದರನ್ನು ಎಳೆದು ತರುವ ಪ್ರಯತ್ನ ಬಹಳ ಬೇಸರ ತಂದಿದೆ ಎಂದು ಹೇಳಿದರು.

ನಾನು ನಾನ್‌ವೆಜ್ ತಿನ್ನುತ್ತೇನೆ, ಸೀ-ಫುಡ್ ನನಗೆ ಇಷ್ಟ. ಇದು ನನ್ನ ವೈಯಕ್ತಿಕ ಬದುಕಿನ ಭಾಗ. ಇದನ್ನು ಚರ್ಚೆಯ ವಿಷಯವಾಗಿಸುವುದು ತಪ್ಪು. ನಾನು ಹಿಂದೆ ಪಾರ್ಟಿ ಮಾಡುತ್ತಿದ್ದೆ, ಸ್ಮೋಕಿಂಗ್ ಮಾಡುತ್ತಿದ್ದೆ, ಈಗ ಎಲ್ಲವನ್ನೂ ನಿಲ್ಲಿಸಿದ್ದೀನಿ. ಆದರೆ ನನ್ನ ಊಟದ ವಿಚಾರ ಮಾತ್ರ ದೊಡ್ಡ ವಿಷಯವಾಗಿಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಬಹಳ ಇನೋಸೆಂಟ್ ಆಗಿ ಗೆಳೆಯನ ಹೋಟೆಲ್‌ಗೆ ಹೋಗಿ ಊಟ ಮಾಡಿ ಬಂದೆ. ನಾನು ಈಗಾಗಲೇ 10–15 ಬಿರಿಯಾನಿ ಶಾಪ್‌ಗಳನ್ನು ಓಪನ್ ಮಾಡಿದ್ದೇನೆ. ಈ ಥರದ ವಿಷಯ ಇಷ್ಟೊಂದು ಡಿಸ್ಕಷನ್ ಆಗುತ್ತೆ ಅಂತ ಗೊತ್ತಿರಲಿಲ್ಲ. ಅದನ್ನು ನೋಡಿ ಶಾಕ್ ಆಯ್ತು ಎಂದು ಧನಂಜಯ್ ಹೇಳಿದರು.

ನಾನು ಎಲ್ಲಿ ಮಾಂಸ ತಿಂದೆ ಎಂದು ಹೇಳೋಕೆ ಹೋಗಲ್ಲ. ಚರ್ಚೆ ಶುರು ಮಾಡಿದವರಿಗೆ ಉತ್ತರ ಕೊಟ್ಟಂತೆ ಆಗುತ್ತೆ. ನಾನು ಯಾವತ್ತೂ ಲಿಂಗ ಹಾಕಿಕೊಂಡು ಊಟ ಮಾಡಲ್ಲ. ನಾನು ಏನೇ ಮಾಡಿದರೂ ಪ್ರಶ್ನೆಗಳು ಬರುತ್ತವೆ. ಆದರೆ ನಾನು ಚಿತ್ರರಂಗಕ್ಕಾಗಿ ಮಾಡುತ್ತಿರುವ ಕೆಲಸದ ಬಗ್ಗೆ ಯಾಕೆ ಚರ್ಚೆ ಆಗುತ್ತಿಲ್ಲ? ಎಂದು ಪ್ರಶ್ನಿಸಿದರು.

‘ಬಡವರ ಮಕ್ಕಳು ಬೆಳೆಯಬೇಕು’ ಅನ್ನೋದನ್ನ ಅವರವರ ಅರ್ಥಕ್ಕೆ ತಿರುಗಿಸಿ ಮಾತನಾಡಲಾಗುತ್ತಿದೆ. ಸಂಬಂಧಗಳನ್ನು ಸೆಲೆಬ್ರೇಟ್ ಮಾಡೋಣ ಅನ್ನೋದನ್ನ ನಾನು ಎಲ್ಲೆಡೆ ಹೇಳಿದ್ದೇನೆ ಅಷ್ಟೇ. ಸಿನಿಮಾ ನಟರು ಅಂದ್ರೆ ಒಂದೇ ವಿಚಾರದ ಬಗ್ಗೆ ಮಾತನಾಡಬೇಕು ಅಂತಿಲ್ಲ. ನಾನು ಊಟ ಮಾಡಿದ ವಿಚಾರವನ್ನೇ ದೊಡ್ಡ ವಿಷಯ ಮಾಡುವುದು ತಪ್ಪಲ್ಲವೇ? ಎಂದು ಧನಂಜಯ್ ಕಿಡಿಕಾರಿದರು.

ಅಕ್ರಮ ಮರಳು ಗಣಿಗಾರಿಕೆ ಪ್ರಕರಣ: ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ದಾಖಲು, ಸರ್ಕಾರಕ್ಕೆ ನೋಟಿಸ್

0

ಬೆಂಗಳೂರು: ರಾಜ್ಯದ ಎಲ್ಲ ರಾಜಕೀಯ ಪಕ್ಷಗಳಲ್ಲಿನ ಪ್ರಭಾವಿ ವ್ಯಕ್ತಿಗಳು ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ವಿಧಾನಸಭಾ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಅಕ್ರಮ ಮರಳು ಗಣಿಗಾರಿಕೆ ಆರೋಪ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ದಾಖಲಿಸಿಕೊಂಡಿದೆ.

ಮರಳು ಮಾಫಿಯಾಗಳ ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ಸರ್ಕಾರ ಅಸಹಾಯಕತೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಈ ಪ್ರಕರಣವನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ತಾರಾ ವಿತಾಸ್ತ ಗಂಜು ಅವರನ್ನೊಳಗೊಂಡ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡು, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಮೂರು ವಾರಗಳೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.

ಇದೇ ವೇಳೆ, ಅರ್ಜಿಯ ವಿಚಾರಣೆಯನ್ನು ಸೂಕ್ತ ನ್ಯಾಯಪೀಠದ ಮುಂದೆ ನಿಯೋಜಿಸುವಂತೆ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದೆ.

ನ್ಯಾಯಪೀಠ ತನ್ನ ಆದೇಶದಲ್ಲಿ, 2026ರ ಜನವರಿ 27ರಂದು ನಡೆದ ವಿಧಾನಸಭಾ ಕಲಾಪದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದೆ. ಅಕ್ರಮ ಮರಳು ಗಣಿಗಾರಿಕೆ ದೊಡ್ಡ ದಂಧೆಯಾಗಿದೆ. ಈ ಪ್ರಕರಣದಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸುವುದಿಲ್ಲ, ಯಾರನ್ನೂ ನೇರವಾಗಿ ದೂಷಿಸುವುದಿಲ್ಲ. ಇದು ಅತ್ಯಂತ ಮುಜುಗರದ ವಿಷಯವಾಗಿದ್ದು, ಅನೇಕ ಪ್ರಭಾವಿ ವ್ಯಕ್ತಿಗಳು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸಚಿವರು ಹೇಳಿರುವುದನ್ನು ನ್ಯಾಯಾಲಯ ಗಮನಿಸಿದೆ. ಈ ಹೇಳಿಕೆಗಳು ಜನವರಿ 28ರಂದು ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿವೆ ಎಂದು ನ್ಯಾಯಪೀಠ ತಿಳಿಸಿದೆ.

ಅಲ್ಲದೆ, ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ರಾತ್ರಿ ವೇಳೆ ನಿರಂತರವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಕುರಿತು ಮಾಧ್ಯಮ ವರದಿಗಳನ್ನು ನ್ಯಾಯಾಲಯ ಉಲ್ಲೇಖಿಸಿದೆ. ಗಣಿಗಾರಿಕೆಯಿಂದ ಉಂಟಾಗುವ ಧೂಳಿನಿಂದ ಈ ಭಾಗದ ರೈತರು ಬೆಳೆಯುವ ಬೆಳೆಗಳಿಗೆ ತೀವ್ರ ಹಾನಿಯಾಗುತ್ತಿದೆ ಎಂಬ ಆರೋಪಗಳನ್ನು ರೈತರು ಮಾಡಿರುವುದನ್ನೂ ನ್ಯಾಯಪೀಠ ದಾಖಲಿಸಿದೆ.

ಈ ಹಿನ್ನೆಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಮೌನ ಮನೆ ಹಿಂದೆ ಡ್ರಗ್ಸ್ ಸಂಚು! ರಾತ್ರಿ ಮಾತ್ರ ತೆರೆಯುತ್ತಿದ್ದ ಗೋಡೌನ್ ಮೇಲೆ ಪೊಲೀಸ್ ದಾಳಿ- ಉತ್ತರ ಪ್ರದೇಶ ಮೂಲದ ದಂಪತಿ ಬಂಧನ

0
ಮೈಸೂರು: ನಗರದ ಹೊರವಲಯದ ಯಾಂಡಳ್ಳಿ ಪ್ರದೇಶದಲ್ಲಿದ್ದ ಶಾಂತ ಹಾಗೂ ನಿರ್ಜನ ಮನೆಯೊಂದರೊಳಗೆ ಭಾರೀ ಡ್ರಗ್ಸ್ ತಯಾರಿಕಾ ಸಂಚು ರೂಪುಗೊಂಡಿದ್ದದ್ದು ಇದೀಗ ಬಯಲಾಗಿದೆ. ಉತ್ತರ ಪ್ರದೇಶ ಮೂಲದ ದಂಪತಿಯು ಮನೆ ಕೆಳ ಅಂತಸ್ತಿನಲ್ಲಿ ಗೋಡೌನ್ ಸ್ಥಾಪಿಸಿ, ಡ್ರಗ್ಸ್ ತಯಾರಿಕೆಗೆ ಬೇಕಾದ ಅಪಾರ ಪ್ರಮಾಣದ ಕೆಮಿಕಲ್ಸ್ ಸಂಗ್ರಹಿಸಿದ್ದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ನಾಲ್ಕು ತಿಂಗಳ ಹಿಂದೆ ದಂಪತಿ ಎರಡು ಮನೆಗಳನ್ನು ಬಾಡಿಗೆ ಪಡೆದಿದ್ದು, ಕೇವಲ ಇಬ್ಬರಿದ್ದರೂ ಎರಡು ಮನೆ ಬೇಕೆಂದು ಹೇಳಿಕೊಂಡಿದ್ದದ್ದು ಸ್ಥಳೀಯರಲ್ಲಿ ಮೊದಲಿನಿಂದಲೇ ಅನುಮಾನ ಹುಟ್ಟಿಸಿತ್ತು. ರಾತ್ರಿ ಸಮಯದಲ್ಲಿ ಮಾತ್ರ ಗೋಡೌನ್ ಬಾಗಿಲು ತೆರೆಯುತ್ತಿದ್ದು, ದಿನದ ವೇಳೆಯಲ್ಲಿ ಸಂಪೂರ್ಣ ಮೌನ ವಹಿಸುತ್ತಿದ್ದರು. ಮಾತನಾಡಲು ಪ್ರಯತ್ನಿಸಿದಾಗ ಕೈ ಸನ್ನೆಯಲ್ಲೇ ತಪ್ಪಿಸಿಕೊಳ್ಳುತ್ತಿದ್ದರು ಎಂಬುದು ಸ್ಥಳೀಯರ ಹೇಳಿಕೆ.

ಗೋಡೌನ್ ಒಳಗೆ ಡ್ರಗ್ಸ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಬ್ಯಾರೆಲ್‌ಗಳಲ್ಲಿ ಸಂಗ್ರಹಿಸಿದ್ದು, ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿದ್ದುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಡೆದ ದಾಳಿಯಿಂದ ಭಾರೀ ಅನಾಹುತ ತಪ್ಪಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇನ್ನು ಎರಡು ತಿಂಗಳ ಹಿಂದೆ ಇದೇ ಮನೆಯಲ್ಲಿ ನಡೆದ 17 ಲಕ್ಷ ರೂ. ಕಳ್ಳತನ ಪ್ರಕರಣದಲ್ಲಿಯೂ ದಂಪತಿ ಪೊಲೀಸರನ್ನು ಸಂಪರ್ಕಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ದೆಹಲಿ ನೋಂದಣಿಯ ಕಾರು ಬಳಕೆ, ಸ್ಥಳೀಯರೊಂದಿಗೆ ಸಂಪರ್ಕ ಕಡಿತ — ಇವೆಲ್ಲವೂ ಡ್ರಗ್ಸ್ ಜಾಲದ ಗಂಭೀರತೆಯನ್ನು ಸೂಚಿಸುತ್ತಿವೆ.

ಮೈಸೂರಿನ ರಿಂಗ್ ರಸ್ತೆಯಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಡ್ರಗ್ಸ್ ಜಾಲದ ಪ್ರಕರಣದ ಬಳಿಕ, ಇದೀಗ ಯಾಂಡಳ್ಳಿಯಲ್ಲಿ ನಡೆದ ಈ ದಾಳಿ ನಗರ ಸುತ್ತಮುತ್ತ ಮಾದಕ ವಸ್ತು ಮಾಫಿಯಾ ಬೇರೂರಿರುವ ಭೀತಿ ಹೆಚ್ಚಿಸಿದೆ. ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದು, ಡ್ರಗ್ಸ್ ಜಾಲದ ಹಿಂದಿರುವ ಲಿಂಕ್‌ಗಳ ಬಗ್ಗೆ ಆಳವಾದ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಹೆಚ್ಚಾಯ್ತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ: ಪುಷ್ಪಾ-ದೇವರಾಜ್ ಮಧ್ಯೆ ವಾಗ್ವಾದ

ಹಾಸನ: ನಟ ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ಮನೆ ಸಮೀಪದ ನಿವೇಶನಕ್ಕೆ ಸಂಬಂಧಿಸಿದ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹಾಸನ ನಗರದ ವಿದ್ಯಾನಗರದಲ್ಲಿ ಇರುವ ಪುಷ್ಪಾ ಅವರ ಮನೆ ಬಳಿಯ ಸೈಟ್‌ನಲ್ಲಿ ಕಾಂಪೌಂಡ್ ವಿಚಾರವಾಗಿ ಪುಷ್ಪಾ ಮತ್ತು ಮೂಲ ಮಾಲೀಕ ದೇವರಾಜು ನಡುವೆ ವಾಗ್ವಾದ ನಡೆದಿದೆ.

ಸೈಟ್ ಬಳಿ ಪುಷ್ಪಾ ಆಗಮಿಸಿ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದಾಗ ದೇವರಾಜು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ದಾಖಲೆಗಳನ್ನು ತೋರಿಸುವಂತೆ ಪುಷ್ಪಾ ಕೇಳಿದ್ದಾರೆ. “ಸೆಲೆಬ್ರಿಟಿ ನನ್ನ ಮಗ, ನಾನಲ್ಲ. ನಾನು ಇಲ್ಲಿ ಹುಟ್ಟಿ ಬೆಳೆದವಳು” ಎಂದು ಪುಷ್ಪಾ ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ದೇವರಾಜು ಆಕ್ಷೇಪ ವ್ಯಕ್ತಪಡಿಸಿದ್ದು, ಮಾತಿನ ಚಕಮಕಿ ನಡೆದಿದೆ.

ಪುಷ್ಪಾ ಅವರು ದೇವರಾಜು ವಿರುದ್ಧ ಗಂಭೀರ ಆರೋಪ ಮಾಡುತ್ತಾ, “ರೌಡಿಗಳನ್ನು ಕರೆದುಕೊಂಡು ಬಂದು ರೌಡಿಸಂ ಮಾಡ್ತೀಯಾ? ನಾನು ಎಸ್ಪಿಗೆ ದೂರು ಕೊಡ್ತೀನಿ. ಮತ್ತೆ ಇಲ್ಲಿಗೆ ಕಾಲಿಟ್ಟರೆ ಸುಮ್ಮನಿರಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಏನಿದು ಪ್ರಕರಣ?

ಈ ಹಿಂದೆ ಅಕ್ರಮ ಕಾಂಪೌಂಡ್ ನಿರ್ಮಾಣ ಆರೋಪ ಸಂಬಂಧ ಯಶ್ ತಾಯಿ ಪುಷ್ಪಾ ಅವರಿಗೆ ಕೋರ್ಟ್‌ನಿಂದ ದೊಡ್ಡ ಶಾಕ್ ಎದುರಾಗಿತ್ತು. ಸುಮಾರು 1,500 ಚದರ ಅಡಿ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಕೋರ್ಟ್ ಅನುಮತಿಯ ಮೇರೆಗೆ ಕಾಂಪೌಂಡ್ ಅನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಗಿತ್ತು. ಮೂಲ ಮಾಲೀಕ ದೇವರಾಜು ಈ ಕಾಂಪೌಂಡ್ ತೆರವುಗೊಳಿಸಿದ್ದರು.

ಈ ಪ್ರಕರಣ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದು, ಇತ್ತೀಚಿನ ವಾಗ್ವಾದದಿಂದ ಮತ್ತೆ ಸಾರ್ವಜನಿಕ ಗಮನ ಸೆಳೆದಿದೆ.

error: Content is protected !!