Home Blog Page 81

AI ಶಿಕ್ಷಣ ಮತ್ತು ಸಂಶೋಧನೆಗೆ ಹೊಸ ಹೆಜ್ಜೆ; ‘ನಿಪುಣ ಕರ್ನಾಟಕ’ ಯೋಜನೆಗೆ ₹300 ಕೋಟಿ ಮೀಸಲು ಎಂದ ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಸ್ಥಾಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಡಲಿದೆ ಎಂದು ಗೃಹ ಹಾಗೂ ಐಟಿ-ಬಿಟಿ, ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿರುವ ವೋಲ್ವರ್‌ಹ್ಯಾಂಪ್ಟನ್-ಬೆಂಗಳೂರು ಸಂಶೋಧನೆ ಮತ್ತು ಅನ್ವೇಷಣೆ ಕೇಂದ್ರ ಹಾಗೂ ಇಂಗ್ಲೆಂಡ್‌ನ ವೋಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಮುನ್ನಡೆಸಲು ಕೃತಕ ಬುದ್ಧಿಮತ್ತೆಯ ಬಳಕೆ’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಭವಿಷ್ಯದ ಉದ್ಯೋಗ ಅವಕಾಶಗಳಿಗೆ ಅಗತ್ಯ ಕೌಶಲ್ಯಗಳನ್ನು ಒದಗಿಸುವ ಉದ್ದೇಶದಿಂದ ‘ಸ್ಥಳೀಯ ಕೌಶಲಾಭಿವೃದ್ಧಿ ಮತ್ತು ಜಾಗತಿಕ ಉದ್ಯೋಗ ನಿರ್ವಹಣೆ’ ಪರಿಕಲ್ಪನೆಯಡಿ ‘ನಿಪುಣ ಕರ್ನಾಟಕ’ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಗೆ ಮೂಲಸೌಕರ್ಯ ಹಾಗೂ ಮಾರ್ಗದರ್ಶನ ಒದಗಿಸಲು ₹300 ಕೋಟಿಗೂ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಕೃತಕ ಬುದ್ಧಿಮತ್ತೆ ಆಧಾರಿತ ಪರ್ಸನಲ್ ಕಂಪ್ಯೂಟರ್‌ಗಳನ್ನು ಬಳಕೆಗೆ ತಂದ ವಿಶ್ವದ ಮೊದಲ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಇದರಿಂದ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಿವೆ ಎಂದು ಅವರು ಹೇಳಿದರು.

ಸ್ಟಾರ್ಟಪ್ ಕಂಪನಿಗಳಿಗೆ ನೀಡಲಾಗುತ್ತಿರುವ ಪ್ರೋತ್ಸಾಹಧನವನ್ನು ಮುಂದಿನ ವರ್ಷದಿಂದ ₹1 ಕೋಟಿಗೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ ಸಚಿವರು, ಕೃಷಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ AI ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ರಾಜ್ಯದ ಇ-ಆಡಳಿತ ವ್ಯವಸ್ಥೆಯನ್ನು ಐ-ಆಡಳಿತ (Intelligent Governance) ಹಂತಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ ಎಂದರು.

2015ರಲ್ಲಿ ವಿಶ್ವದ 193 ದೇಶಗಳು ಒಪ್ಪಿಕೊಂಡಿರುವ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು 2030ರ ವೇಳೆಗೆ ಸಾಧಿಸುವ ಸವಾಲು ಎದುರಾಗಿದೆ. ಪರಿಸರ ಸ್ನೇಹಿ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ ಮತ್ತು ವಿವೇಚನಾತ್ಮಕವಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

ಭೀಕರ ರಸ್ತೆ ಅಪಘಾತದಲ್ಲಿ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಪುತ್ರ ಸೇರಿ ಮೂವರ ದುರ್ಮರಣ..!

0

ಲಕ್ನೋ: ಉತ್ತರ ಪ್ರದೇಶದ ಮಾಜಿ ರಾಜಕಾರಣಿ ಹಾಗೂ ಮಾಫಿಯಾ ಡಾನ್ ಆಗಿದ್ದ ಅತೀಕ್ ಅಹ್ಮದ್ ಅವರ ಕಿರಿಯ ಪುತ್ರ ಆಬಾನ್ ಅಹ್ಮದ್ ಸೇರಿದಂತೆ ಮೂವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಝಾನ್ಸಿಯ ಪುಂಚ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಆಬಾನ್ ಅಹ್ಮದ್ ಪ್ರಯಾಣಿಸುತ್ತಿದ್ದ ಕಾರು ಅತಿವೇಗದಲ್ಲಿ ಬಂದು ರಸ್ತೆ ವಿಭಜಕಕ್ಕೆ (ಡಿವೈಡರ್) ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಘಟನೆಯಲ್ಲಿ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿ ಪ್ರಕಾರ, ಮೃತರು ಪ್ರಯಾಗ್‌ರಾಜ್‌ನಿಂದ ಝಾನ್ಸಿ ಜೈಲಿನಲ್ಲಿರುವ ಅತೀಕ್ ಅಹ್ಮದ್ ಅವರ ಮತ್ತೊಬ್ಬ ಪುತ್ರ ಅಲಿ ಅಹ್ಮದ್ ಅವರನ್ನು ಭೇಟಿಯಾಗಲು ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಅಪಘಾತ ಸಂಭವಿಸಿದೆ.

ಅತೀಕ್ ಅಹ್ಮದ್ ಹಿನ್ನೆಲೆ

ಅತೀಕ್ ಅಹ್ಮದ್ ಉತ್ತರ ಪ್ರದೇಶದ ಅತ್ಯಂತ ವಿವಾದಾತ್ಮಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಸುಮಾರು ನಾಲ್ಕು ದಶಕಗಳ ಕಾಲ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರ ವಿರುದ್ಧ ಕೊಲೆ, ಅಪಹರಣ, ಸುಲಿಗೆ ಸೇರಿದಂತೆ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.

ಅಪರಾಧ ಹಿನ್ನೆಲೆಯ ನಡುವೆಯೂ ಅವರು ರಾಜಕೀಯ ಪ್ರವೇಶಿಸಿ, ಉತ್ತರ ಪ್ರದೇಶದಲ್ಲಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲದೆ ಸಮಾಜವಾದಿ ಪಕ್ಷದ ಸಂಸದರಾಗಿ ಕೂಡ ಕಾರ್ಯನಿರ್ವಹಿಸಿದ್ದರು.

2005ರಲ್ಲಿ ನಡೆದ ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರನ್ನು 2023ರ ಫೆಬ್ರವರಿಯಲ್ಲಿ ಅತೀಕ್ ಅಹ್ಮದ್ ಗ್ಯಾಂಗ್ ಹತ್ಯೆ ಮಾಡಿತ್ತು ಎಂದು ಆರೋಪಿಸಲಾಗಿತ್ತು.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಅತೀಕ್ ಅಹ್ಮದ್ ಪುತ್ರ ಅಸದ್ ಅಹ್ಮದ್ ಅವರನ್ನು ಉತ್ತರ ಪ್ರದೇಶ ಪೊಲೀಸರು 2023ರ ಏಪ್ರಿಲ್ 13ರಂದು ಝಾನ್ಸಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದರು.

ಅಸದ್ ಎನ್‌ಕೌಂಟರ್ ನಡೆದ ಎರಡು ದಿನಗಳ ಬಳಿಕ, 2023ರ ಏಪ್ರಿಲ್ 15ರಂದು ಪೊಲೀಸ್ ಭದ್ರತೆಯಲ್ಲಿ ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದ ವೇಳೆ ಅತೀಕ್ ಅಹ್ಮದ್ ಹಾಗೂ ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಮಾಧ್ಯಮ ಪ್ರತಿನಿಧಿಗಳ ವೇಷದಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಚಿನ್ನದ ಹೆಸರಿನಲ್ಲಿ ಉದ್ಯಮಿಯಿಂದ 1.5 ಕೋಟಿ ರೂ. ಪಡೆದು ಮೋಸ ಮಾಡಿದ ಬ್ಯಾಂಕ್ ಸಿಬ್ಬಂದಿ ಅರೆಸ್ಟ್!

0

ಬೆಂಗಳೂರು: ನಕಲಿ ಚಿನ್ನವನ್ನು ಅಡಮಾನ ಇಟ್ಟು ಬ್ಯಾಂಕ್‌ಗೆ ವಂಚನೆ ಎಸಗಿದ್ದ ಬ್ಯಾಂಕ್ ಅಪ್ರೈಸರ್, ಬಳಿಕ ಅದೇ ಪ್ರಕರಣದಿಂದ ಪಾರಾಗಲು ಉದ್ಯಮಿಯೊಬ್ಬರಿಗೆ ₹1.53 ಕೋಟಿ ವಂಚಿಸಿರುವ ಘಟನೆ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬಂಧಿತನನ್ನು ಪೀಣ್ಯದ ಖಾಸಗಿ ಬ್ಯಾಂಕ್ ಶಾಖೆಯೊಂದರಲ್ಲಿ ಅಪ್ರೈಸರ್ ಆಗಿ ಕೆಲಸ ಮಾಡುತ್ತಿದ್ದ ನಾಗೇಶ್ ಎಂದು ಗುರುತಿಸಲಾಗಿದೆ. ಆರೋಪಿ ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ, ಸುಮಾರು 15 ಖಾತೆಗಳ ಮೂಲಕ ನಕಲಿ ಚಿನ್ನವನ್ನು ಅಡಮಾನ ಇಟ್ಟು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಸಾಲ ಪಡೆದಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ನಾಗೇಶ್ ತನ್ನ ಸ್ನೇಹಿತರ ಸಹಾಯದಿಂದ ನಕಲಿ ಚಿನ್ನಾಭರಣಗಳನ್ನು ಅಡಮಾನ ಇಡುತ್ತಿದ್ದ. ಚಿನ್ನದ ಸರಗಳ ಕೊಂಡಿ ಮಾತ್ರ ಅಸಲಿ ಚಿನ್ನದಿಂದ ಮಾಡಲಾಗಿದ್ದರೆ, ಉಳಿದ ಭಾಗ ನಕಲಿಯಾಗಿತ್ತು. ಬ್ಯಾಂಕ್ ಆಡಿಟ್ ವೇಳೆ ಈ ಅಕ್ರಮ ಬೆಳಕಿಗೆ ಬಂದಿದ್ದು, ಬ್ಯಾಂಕ್ ಅಧಿಕಾರಿಗಳು ಹಣ ಮರುಪಾವತಿಸದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು.

ಈ ಪ್ರಕರಣದಿಂದ ಪಾರಾಗಲು ಆರೋಪಿ ತನ್ನ ಸ್ನೇಹಿತರ ಮೂಲಕ ಉದ್ಯಮಿ ಜಗದೀಶ್ ಅವರನ್ನು ಪರಿಚಯಿಸಿಕೊಂಡಿದ್ದಾನೆ. ಬ್ಯಾಂಕ್‌ನಲ್ಲಿ ಕಡಿಮೆ ಬೆಲೆಗೆ ಹರಾಜಿಗೆ ಬಂದಿರುವ ಚಿನ್ನವನ್ನು ಖರೀದಿಸಿದರೆ ಸುಮಾರು ₹40 ಲಕ್ಷ ಲಾಭವಾಗುತ್ತದೆ ಹಾಗೂ ಹಿಂದಿನ ಸಾಲಗಾರರು ಚಿನ್ನವನ್ನು ಬಿಡಿಸಿಕೊಳ್ಳುವುದಿಲ್ಲ ಎಂದು ನಂಬಿಸಿ ಹಣ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾನೆ.

ಆರೋಪಿಯ ಮಾತನ್ನು ನಂಬಿದ ಉದ್ಯಮಿ ಜಗದೀಶ್, ₹1.53 ಕೋಟಿ ಹಣ ನೀಡಿದ್ದರು. ಉದ್ಯಮಿಯಿಂದ ಪಡೆದ ಹಣವನ್ನು ನಾಗೇಶ್ ಬ್ಯಾಂಕ್‌ಗೆ ಪಾವತಿಸಿ, ಬಳಿಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ತಾನು ವಂಚನೆಗೆ ಒಳಗಾಗಿರುವುದು ತಿಳಿದ ಬಳಿಕ ಜಗದೀಶ್ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿ ನಾಗೇಶ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೆಂಕಿಪೊಟ್ಟಣ ಕೊಡಲಿಲ್ಲವೆಂದು ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ? ಉದ್ಯಮಿ ಆದಿಕೇಶವುಲು ಮೊಮ್ಮಗ ವಿರುದ್ಧ ಮತ್ತೊಂದು ಆರೋಪ

0

ಬೆಂಗಳೂರು: ಉದ್ಯಮಿ ಆದಿಕೇಶವುಲು ಕುಟುಂಬದ ವಿರುದ್ಧ ಮತ್ತೊಮ್ಮೆ ಗಂಭೀರ ಆರೋಪ ಕೇಳಿಬಂದಿದೆ. ಸಿಗರೇಟ್ ಹಚ್ಚಲು ಬೆಂಕಿಪೊಟ್ಟಣ ನೀಡಲಿಲ್ಲ ಎಂಬ ಕಾರಣಕ್ಕೆ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿರುವ ಆರೋಪ ಆದಿಕೇಶವುಲು ಅವರ ಮೊಮ್ಮಗನ ವಿರುದ್ಧ ಕೇಳಿಬಂದಿದೆ. ಘಟನೆ ಸಂಬಂಧ ದೂರು ದಾಖಲಾಗಿದ್ದರೂ, ಪೊಲೀಸರು ಎನ್‌ಸಿಆರ್ ಮಾತ್ರ ದಾಖಲಿಸಿರುವುದು ಪ್ರಶ್ನೆಗೆ ಕಾರಣವಾಗಿದೆ.

ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ ಪ್ರಕೃತಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಗಾರ್ಡ್ ಪ್ರಕಾಶ್ ಅವರ ಮೇಲೆ ಹಲ್ಲೆ ನಡೆದಿರುವುದಾಗಿ ಆರೋಪಿಸಲಾಗಿದೆ.

ಮಾಹಿತಿಯ ಪ್ರಕಾರ, ಆದಿಕೇಶವುಲು ಅವರ ಮೊಮ್ಮಗ ಸಿಗರೇಟ್ ಸೇದಲು ಬೆಂಕಿಪೊಟ್ಟಣ ಕೇಳಿದ್ದು, ಸೆಕ್ಯುರಿಟಿ ಗಾರ್ಡ್ “ಇಲ್ಲ” ಎಂದು ಉತ್ತರಿಸಿದ ಹಿನ್ನೆಲೆಯಲ್ಲಿ ಕೋಪಗೊಂಡು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಅಪಾರ್ಟ್‌ಮೆಂಟ್ ಪಾರ್ಕಿಂಗ್ ಪ್ರದೇಶದಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ನಿವಾಸಿಗಳ ಆತಂಕಕ್ಕೂ ಕಾರಣರಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಘಟನೆ ಬಳಿಕ ಸೆಕ್ಯುರಿಟಿ ಗಾರ್ಡ್ ಪ್ರಕಾಶ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಎಫ್‌ಐಆರ್ ದಾಖಲಿಸದೆ ಎನ್‌ಸಿಆರ್ ಮಾತ್ರ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಡಿಸಿಪಿಗೆ ಪ್ರತ್ಯೇಕ ದೂರು ಸಲ್ಲಿಸಲಾಗಿದೆ.

ಆದಿಕೇಶವುಲು ಕುಟುಂಬದ ಹೆಸರು ಈ ಹಿಂದೆ ಕೂಡ ಹಲವು ವಿವಾದಗಳಲ್ಲಿ ಕೇಳಿಬಂದಿತ್ತು. 2019ರಲ್ಲಿ ಅವರ ಆಪ್ತ ರಘುನಾಥ್ ಅನುಮಾನಾಸ್ಪದ ಸಾವಿನ ಪ್ರಕರಣ, ಗೀತಾ ವಿಷ್ಣು ಮೇಲಿನ ಹಲ್ಲೆ ಪ್ರಕರಣ, 2017ರ ಎಸ್‌ಯುವಿ ಅಪಘಾತ ಹಾಗೂ ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ಪ್ರಕರಣ, ನಾಯಿ ಮೇಲೆ ಕಾರು ಹತ್ತಿಸಿದ ಆರೋಪ ಸೇರಿದಂತೆ ಹಲವು ಪ್ರಕರಣಗಳು ಈ ಕುಟುಂಬದ ಸುತ್ತ ಸದ್ದು ಮಾಡಿದ್ದವು.

ಮಾತು ಕೊಟ್ಟು ಮಾತು ತಪ್ಪಿದರು ಸಿದ್ದರಾಮಯ್ಯ: ಸಚಿವ ಸ್ಥಾನ ಸಿಗದ ಬೇಸರ ಹೊರಹಾಕಿದ ಬಿ.ಆರ್. ಪಾಟೀಲ್

ಕಲಬುರಗಿ: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಆಳಂದ ಶಾಸಕ ಬಿ.ಆರ್. ಪಾಟೀಲ್, ತಮ್ಮ ಸಚಿವ ಸ್ಥಾನಕ್ಕೆ ಕಲಬುರಗಿ ಜಿಲ್ಲೆಯ ಕೆಲ ನಾಯಕರು ಅಡ್ಡಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾಗಿ ತಿಳಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅದು ಯಾವ ನಾಯಕ ಎನ್ನುವುದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಜಾರಿಕೊಳ್ಳಲು ಈ ರೀತಿಯ ಕಾರಣ ಹೇಳಿದ್ದಾರೆ ಅಥವಾ ನಿಜವಾಗಿಯೇ ಹೇಳಿದ್ದಾರೆ ಎಂಬುದೂ ತಿಳಿದಿಲ್ಲ” ಎಂದು ಪ್ರತಿಕ್ರಿಯಿಸಿದರು.

“ನಾನು ಎಲ್ಲಿಯೂ ಹೋಗಿ ನನ್ನನ್ನು ಸಚಿವನನ್ನಾಗಿ ಮಾಡಿ ಎಂದು ಕೇಳಿಕೊಂಡಿಲ್ಲ. ವಿಧಾನಸಭೆ ಚುನಾವಣೆಯ ವೇಳೆ ಸಿದ್ದರಾಮಯ್ಯ ಅವರು, ‘ನನ್ನ ಗೆಳೆಯನನ್ನು ಗೆಲ್ಲಿಸಿ ಕಳುಹಿಸಿ, ನಾನು ಸಚಿವನನ್ನಾಗಿ ಮಾಡುತ್ತೇನೆ’ ಎಂದು ಸಾರ್ವಜನಿಕವಾಗಿ ಭರವಸೆ ನೀಡಿದ್ದರು. ಆದರೆ ಈಗ ಮಾತು ಕೊಟ್ಟು ಮಾತು ತಪ್ಪಿದ್ದಾರೆ. ಇದೇ ನನಗೆ ಅತ್ಯಂತ ಬೇಸರ ತಂದಿರುವ ಸಂಗತಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೂರು ಬಾರಿ ಕರೆದು ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಕೊನೆಗೆ ಆ ಮಾತನ್ನು ಉಳಿಸಿಕೊಳ್ಳಲಿಲ್ಲ ಎಂದು ಪಾಟೀಲ್ ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ಗೆ 140ಕ್ಕೂ ಹೆಚ್ಚು ಶಾಸಕರು ಇದ್ದು, ಎಲ್ಲರನ್ನೂ ಕರೆದು ಮಾತನಾಡುವ ಪರಿಸ್ಥಿತಿ ಮುಖ್ಯಮಂತ್ರಿ ಅವರಿಗೆ ಇಲ್ಲ ಎಂಬುದನ್ನೂ ಅವರು ಉಲ್ಲೇಖಿಸಿದರು.

13 ವರ್ಷ ಹಳೆಯ ಲೈಂಗಿಕ ದೌರ್ಜನ್ಯ ಪ್ರಕರಣ: ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ದೋಷಿ

0

ಪಣಜಿ: 2013ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೆಹಲ್ಕಾ ನಿಯತಕಾಲಿಕೆಯ ಮಾಜಿ ಸಂಪಾದಕ-ಇನ್-ಚೀಫ್ ತರುಣ್ ತೇಜ್‌ಪಾಲ್ ಅವರನ್ನು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ದೋಷಿ ಎಂದು ಘೋಷಿಸಿದೆ. ಗೋವಾ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಸೇಷನ್ಸ್ ಕೋರ್ಟ್ ನೀಡಿದ್ದ ಖುಲಾಸೆ ತೀರ್ಪನ್ನು ರದ್ದುಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿಗಳಾದ ಡಾ. ನೀಲಾ ಗೋಖಲೆ ಹಾಗೂ ಅಮಿತ್ ಜಮಸಂಡೇಕರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2)(f), 376(2)(k) (ಅತ್ಯಾಚಾರ) ಹಾಗೂ ಸೆಕ್ಷನ್ 354A ಮತ್ತು 354B (ಲೈಂಗಿಕ ಕಿರುಕುಳ) ಅಡಿಯಲ್ಲಿ 62 ವರ್ಷದ ತರುಣ್ ತೇಜ್‌ಪಾಲ್ ಅವರನ್ನು ದೋಷಿ ಎಂದು ತೀರ್ಮಾನಿಸಿದೆ. ಶಿಕ್ಷೆಯ ಪ್ರಮಾಣವನ್ನು ಮಧ್ಯಾಹ್ನ 2.30ಕ್ಕೆ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿದೆ.

ಈ ಪ್ರಕರಣವು 2013ರ ನವೆಂಬರ್‌ನಲ್ಲಿ ಗೋವಾದ ಪಂಚತಾರಾ ಹೋಟೆಲ್‌ನಲ್ಲಿ ನಡೆದ ‘ಥಿಂಕ್‌ಫೆಸ್ಟ್’ ಕಾರ್ಯಕ್ರಮದ ವೇಳೆ ನಡೆದಿತ್ತು. ಲಿಫ್ಟ್‌ನಲ್ಲಿ ತರುಣ್ ತೇಜ್‌ಪಾಲ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರ ಕಿರಿಯ ಮಹಿಳಾ ಸಹೋದ್ಯೋಗಿ ಆರೋಪಿಸಿದ್ದರು. ಈ ಪ್ರಕರಣದಲ್ಲಿ 2021ರಲ್ಲಿ ಮಾಪುಸಾ ಸೇಷನ್ಸ್ ನ್ಯಾಯಾಲಯ ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಗೋವಾ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಲಯದಲ್ಲೇ ಹಾಜರಿದ್ದ ತೇಜ್‌ಪಾಲ್, ಶಿಕ್ಷೆ ನಿಗದಿಗೂ ಮುನ್ನ ತಮ್ಮ ವಯಸ್ಸು ಮತ್ತು ಕುಟುಂಬದ ಪರಿಸ್ಥಿತಿಯನ್ನು ಪರಿಗಣಿಸಿ ಶಿಕ್ಷೆಯಲ್ಲಿ ಸಡಿಲಿಕೆ ನೀಡುವಂತೆ ಮನವಿ ಮಾಡಿದರು. “ನನಗೆ ಈಗ 62 ವರ್ಷ. ಈ ಪ್ರಕರಣದಲ್ಲಿ ನಾನೇ ಸಂತ್ರಸ್ತ ಎಂದು ಭಾವಿಸುತ್ತೇನೆ. ನನಗೆ ಪತ್ನಿ ಇದ್ದಾಳೆ. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಅವಕಾಶ ನೀಡಬೇಕು” ಎಂದು ಕೋರಿದರು.

ತೇಜ್‌ಪಾಲ್ ಪರ ಹಿರಿಯ ವಕೀಲ ಆಬಾದ್ ಪೋಂಡಾ, ಘಟನೆ ನಡೆದು 13 ವರ್ಷಗಳಾಗಿವೆ ಹಾಗೂ ಅವರ ವಿರುದ್ಧ ಬೇರೆ ಯಾವುದೇ ಅಪರಾಧ ಪ್ರಕರಣಗಳಿಲ್ಲ. ಹೀಗಾಗಿ ಶಿಕ್ಷೆಯಲ್ಲಿ ಸಡಿಲಿಕೆ ನೀಡಬೇಕು ಮತ್ತು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ತೀರ್ಪಿಗೆ ಎಂಟು ವಾರಗಳ ತಡೆ ನೀಡಬೇಕು ಎಂದು ವಿನಂತಿಸಿದರು.

ಆದರೆ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ತಂದೆಯ ಸ್ಥಾನದಲ್ಲಿದ್ದ ವ್ಯಕ್ತಿ ಮಗಳು ಸಮಾನವಾದ ಯುವತಿಯ ಮೇಲೆ ಇಂತಹ ಕೃತ್ಯ ಎಸಗಿದ್ದಾರೆ. ಸಂತ್ರಸ್ತೆ ನಿರಾಕರಿಸಿದರೂ ಕಿರುಕುಳ ಮುಂದುವರಿಸಿದ್ದಾರೆ. ಸಮಾಜಕ್ಕೆ ಸ್ಪಷ್ಟ ಸಂದೇಶ ರವಾನಿಸಲು ಕಠಿಣ ಶಿಕ್ಷೆ ಅಗತ್ಯ” ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

₹3 ಕೋಟಿ ಹೂಡಿಕೆ ಮಾಡಿ ವಂಚನೆ ಆರೋಪ: ಸಲ್ಮಾನ್ ಖಾನ್, ಸಹೋದರಿಗೆ ಕೋರ್ಟ್ ಸಮನ್ಸ್ ಜಾರಿ

ಚಂಡೀಗಢ: ಬೀಯಿಂಗ್ ಹ್ಯೂಮನ್ ಆಭರಣ ಶೋರೂಂಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್, ಅವರ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಹಾಗೂ ಸ್ಟೈಲ್ ಅಂಡ್ ಕಂಟೆಂಟ್ ಜ್ಯುವೆಲ್ಲರಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಿಗೆ ಚಂಡೀಗಢ ಜಿಲ್ಲಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳು ಅಕ್ಟೋಬರ್ 5ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರ ಸಲ್ಲಿಸುವಂತೆ ಕೋರ್ಟ್ ನಿರ್ದೇಶಿಸಿದೆ.

ಚಂಡೀಗಢ ಮೂಲದ ಉದ್ಯಮಿ ಅರುಣ್ ಗುಪ್ತಾ ಅವರು ದಾಖಲಿಸಿದ ದೂರಿನ ಮೇರೆಗೆ ಈ ಬೆಳವಣಿಗೆ ನಡೆದಿದೆ. ಉತ್ತಮ ವ್ಯವಹಾರ ಹಾಗೂ ಹೆಚ್ಚಿನ ಲಾಭದ ಭರವಸೆ ನೀಡಿ ಬೀಯಿಂಗ್ ಹ್ಯೂಮನ್ ಆಭರಣ ಶೋರೂಂನಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಲಾಗಿತ್ತು. ಆದರೆ ನಂತರ ಕಂಪನಿ ನೀಡಿದ್ದ ಭರವಸೆಗಳನ್ನು ಈಡೇರಿಸದೇ ವಂಚನೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ದೂರಿನ ಪ್ರಕಾರ, ಬೀಯಿಂಗ್ ಹ್ಯೂಮನ್ ಬ್ರಾಂಡ್‌ನ ಆಭರಣಗಳ ಮಾರಾಟದ ಪರವಾನಗಿ ಹೊಂದಿದ್ದ ಸ್ಟೈಲ್ ಅಂಡ್ ಕಂಟೆಂಟ್ ಜ್ಯುವೆಲ್ಲರಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡ ಬಳಿಕ ಅರುಣ್ ಗುಪ್ತಾ ಸುಮಾರು 3 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಇದಲ್ಲದೆ ಶೋರೂಂ ಸ್ಥಾಪನೆಗೆ ಸುಮಾರು 1 ಕೋಟಿ ರೂಪಾಯಿ ವೆಚ್ಚ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಒಪ್ಪಂದದ ಪ್ರಕಾರ ತಮ್ಮ ಪಾಲಿನ ಎಲ್ಲಾ ಜವಾಬ್ದಾರಿಗಳನ್ನು ಪೂರೈಸಿದ್ದರೂ, ಶೋರೂಂ ಆರಂಭವಾದ ಬಳಿಕ ಕಂಪನಿಯು ಅಗತ್ಯವಾದ ವ್ಯವಹಾರಿಕ ಬೆಂಬಲ, ಪ್ರಚಾರ ಹಾಗೂ ಕಾರ್ಯಾಚರಣೆಗೆ ಬೇಕಾದ ಸಹಕಾರ ನೀಡಲಿಲ್ಲ. ಇದರಿಂದಾಗಿ ಕೋಟ್ಯಂತರ ರೂಪಾಯಿ ಆರ್ಥಿಕ ನಷ್ಟ ಅನುಭವಿಸಬೇಕಾಯಿತು ಎಂದು ಅರುಣ್ ಗುಪ್ತಾ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ದೂರನ್ನು ಪರಿಗಣಿಸಿದ ಚಂಡೀಗಢ ಜಿಲ್ಲಾ ನ್ಯಾಯಾಲಯ, ಸಲ್ಮಾನ್ ಖಾನ್, ಅಲ್ವಿರಾ ಖಾನ್ ಅಗ್ನಿಹೋತ್ರಿ ಹಾಗೂ ಸಂಬಂಧಿತ ಕಂಪನಿಯ ನಿರ್ದೇಶಕರಿಗೆ ಸಮನ್ಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆ ಅಕ್ಟೋಬರ್ 5ರಂದು ನಡೆಯಲಿದೆ.

ಡಾಲ್ಫಿನ್ ಚಂಡಮಾರುತ ಎಫೆಕ್ಟ್: ಕೇರಳ ಸೇರಿ ದಕ್ಷಿಣ ಕರ್ನಾಟಕದಲ್ಲೂ ಧಾರಾಕಾರ ಮಳೆಯ ಮುನ್ಸೂಚನೆ!

0

ತಿರುವನಂತಪುರಂ: ಕೇರಳದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಪಶ್ಚಿಮ ಪೆಸಿಫಿಕ್ ಸಾಗರದಲ್ಲಿ ರೂಪುಗೊಂಡಿರುವ ಡಾಲ್ಫಿನ್ ಚಂಡಮಾರುತದ ಪರೋಕ್ಷ ಪರಿಣಾಮದಿಂದ ನೈರುತ್ಯ ಮಾನ್ಸೂನ್ ಮತ್ತಷ್ಟು ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆ ಪ್ರಕಾರ, ಶನಿವಾರದವರೆಗೆ ಕೇರಳ ಸೇರಿದಂತೆ ದಕ್ಷಿಣ ಕರ್ನಾಟಕ, ದಕ್ಷಿಣ ತಮಿಳುನಾಡು, ಪುದುಚೇರಿ ಹಾಗೂ ಬಂಗಾಳ ಕೊಲ್ಲಿಯ ವ್ಯಾಪ್ತಿಯ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.

ಆಗಸ್ಟ್ ತಿಂಗಳ ಮೊದಲ ಐದು ದಿನಗಳಲ್ಲೇ ಕೇರಳದಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿರುವುದು ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಆಗಸ್ಟ್ 1ರಿಂದ 5ರವರೆಗೆ ರಾಜ್ಯದಲ್ಲಿ 226 ಮಿ.ಮೀ. ಮಳೆಯಾಗಿದ್ದು, ಇದೇ ಅವಧಿಯ ಸಾಮಾನ್ಯ ಮಳೆಯ ಪ್ರಮಾಣ 90.6 ಮಿ.ಮೀ. ಆಗಿದೆ. ಅಂದರೆ, ವಾಡಿಕೆಗಿಂತ ಶೇ.149ರಷ್ಟು ಅಧಿಕ ಮಳೆ ದಾಖಲಾಗಿದೆ.

ನಿರಂತರ ಮಳೆಯ ಪರಿಣಾಮ ಹಲವು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಲಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಮಳೆಯ ತೀವ್ರತೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕಿ ನೀತಾ ಕೆ. ಗೋಪಾಲ್, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭೂಮಿ ಸಂಪೂರ್ಣ ತೇವಾಂಶದಿಂದ ಕೂಡಿದ್ದು, ಹಲವೆಡೆ ಸಣ್ಣ ಪ್ರಮಾಣದ ಭೂಕುಸಿತಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಸುರಿಯುವ ಭಾರೀ ಮಳೆಯು ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತದ ಅಪಾಯವನ್ನು ಮತ್ತಷ್ಟು ಹೆಚ್ಚಿಸಬಹುದು. ಆದ್ದರಿಂದ ಸಾರ್ವಜನಿಕರು ಹಾಗೂ ಸಂಬಂಧಪಟ್ಟ ಜಿಲ್ಲಾಡಳಿತಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

30 ಕೋಟಿ ಮೌಲ್ಯದ ದೇವಸ್ಥಾನ ಜಾಗದಲ್ಲಿ ರಸ್ತೆ ಕಾಮಗಾರಿ: ಪುತ್ತೂರಿನಲ್ಲಿ ಭಕ್ತರ ಆಕ್ರೋಶ

0

ಮಂಗಳೂರು, ಆ.6: ಐತಿಹಾಸಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ರಸ್ತೆ ನಿರ್ಮಾಣ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿದೆ. ದೇವಸ್ಥಾನಕ್ಕೆ ಸೇರಿದ ಸುಮಾರು 3 ಎಕರೆ, 30 ಕೋಟಿ ರೂಪಾಯಿ ಮೌಲ್ಯದ ಜಾಗದಲ್ಲಿ ಸಾರ್ವಜನಿಕ ರಸ್ತೆ ನಿರ್ಮಿಸಲು ಕೈಗೊಂಡಿರುವ ಕ್ರಮಕ್ಕೆ ಭಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರ ಅಭಿವೃದ್ಧಿ ಯೋಜನೆಯಡಿ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈ ವೇಳೆ ವರ್ಷಗಳ ಇತಿಹಾಸ ಹೊಂದಿದ್ದ ‘ನಟರಾಜ ವೇದಿಕೆ’ಯನ್ನು ನೆಲಸಮಗೊಳಿಸಿರುವುದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ಮುಜರಾಯಿ ಇಲಾಖೆಯ ನಿಯಮಾವಳಿಯಂತೆ ದೇವಸ್ಥಾನದ ಆಸ್ತಿಯಲ್ಲಿ ಕಾಮಗಾರಿ ನಡೆಸಲು ಟೆಂಡರ್ ಪ್ರಕ್ರಿಯೆ ಕಡ್ಡಾಯ. ಆದರೆ, ಯಾವುದೇ ಅಧಿಕೃತ ಟೆಂಡರ್ ಕರೆಯದೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಭಕ್ತರು ಗಂಭೀರ ಆರೋಪ ಮಾಡಿದ್ದಾರೆ. ದೇವಸ್ಥಾನದ ಅಮೂಲ್ಯ ಆಸ್ತಿಯನ್ನು ರಸ್ತೆಗಾಗಿ ಬಳಸುವ ಬದಲು ಬೇರೆ ಮಾರ್ಗವನ್ನು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ವಾಹನ ದಟ್ಟಣೆ ನಿಯಂತ್ರಿಸಲು ಅಗಲವಾದ ರಸ್ತೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ. ಭಕ್ತರ ಸುರಕ್ಷತೆ ಮತ್ತು ಸುಗಮ ಸಂಚಾರವನ್ನು ಗಮನದಲ್ಲಿಟ್ಟುಕೊಂಡೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಸ್ತೆ ನಿರ್ಮಾಣದ ವಿಚಾರ ಇದೀಗ ಪುತ್ತೂರಿನಲ್ಲಿ ಭಕ್ತರು, ಸ್ಥಳೀಯರು ಮತ್ತು ಆಡಳಿತ ಮಂಡಳಿ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.

Young Age Grey Hair: 20ರಲ್ಲೇ ಕೂದಲು ಬಿಳಿಯಾಗಲು ಕಾರಣವೇನು?

0

ಇತ್ತೀಚಿನ ದಿನಗಳಲ್ಲಿ 20ರಿಂದ 30 ವರ್ಷದ ಯುವಕರಲ್ಲಿ ಅಕಾಲಿಕವಾಗಿ ಕೂದಲು ಬಿಳಿಯಾಗುವ ಸಮಸ್ಯೆ ಹೆಚ್ಚುತ್ತಿದೆ.

ಹಿಂದೆ ವಯಸ್ಸಾದ ನಂತರ ಕಾಣಿಸಿಕೊಳ್ಳುತ್ತಿದ್ದ ಈ ಸಮಸ್ಯೆ ಈಗ ಯುವಜನರಲ್ಲಿಯೂ ಸಾಮಾನ್ಯವಾಗುತ್ತಿದೆ.

ಒತ್ತಡ, ಅಸಮತೋಲಿತ ಆಹಾರ, ವಿಟಮಿನ್ ಕೊರತೆ, ಮಾಲಿನ್ಯ ಹಾಗೂ ಬದಲಾದ ಜೀವನಶೈಲಿ ಕೂದಲು ಬೇಗ ಬಿಳಿಯಾಗಲು ಪ್ರಮುಖ ಕಾರಣಗಳಾಗಿವೆ. ಆದರೆ ಒಮ್ಮೆ ಬಿಳಿಯಾದ ಕೂದಲು ಮತ್ತೆ ಕಪ್ಪಾಗಬಹುದೇ ಎಂಬ ಪ್ರಶ್ನೆ ಹಲವರಲ್ಲಿದೆ.

ಕೂದಲು ಬೇಗ ಬಿಳಿಯಾಗಲು ಕಾರಣವೇನು?

ಚರ್ಮರೋಗ ತಜ್ಞರ ಪ್ರಕಾರ, ಕೂದಲಿನ ಸಹಜ ಬಣ್ಣಕ್ಕೆ ಕಾರಣವಾಗಿರುವುದು ಮೆಲನಿನ್ ಎಂಬ ವರ್ಣದ್ರವ್ಯ. ದೇಹದಲ್ಲಿ ಮೆಲನಿನ್ ಉತ್ಪಾದನೆ ಕಡಿಮೆಯಾದಾಗ ಕೂದಲು ಬೂದು ಅಥವಾ ಬಿಳಿ ಬಣ್ಣಕ್ಕೆ ತಿರುಗುತ್ತದೆ.

ಅಕಾಲಿಕ ಕೂದಲು ಬಿಳಿಯಾಗಲು ಪ್ರಮುಖ ಕಾರಣಗಳು:

  • ಅನುವಂಶಿಕ ಕಾರಣಗಳು (Genetics)
  • ವಿಟಮಿನ್ ಬಿ12 ಕೊರತೆ
  • ವಿಟಮಿನ್ ಡಿ ಕೊರತೆ
  • ಐರನ್ ಕೊರತೆ
  • ಕಾಪರ್ ಮತ್ತು ಫೋಲೇಟ್ ಕೊರತೆ
  • ದೀರ್ಘಕಾಲದ ಮಾನಸಿಕ ಒತ್ತಡ
  • ಧೂಮಪಾನ
  • ವಾಯು ಮಾಲಿನ್ಯ
  • ಆಕ್ಸಿಡೇಟಿವ್ ಸ್ಟ್ರೆಸ್

ಇದಲ್ಲದೆ, ಥೈರಾಯ್ಡ್ ಸಮಸ್ಯೆ, ವಿಟಿಲಿಗೋ, ಅಲೋಪೇಶಿಯಾ ಏರಿಯಾಟಾ ಹಾಗೂ ಕೆಲವು ಆಟೋಇಮ್ಯೂನ್ ಕಾಯಿಲೆಗಳಂತಹ ಆರೋಗ್ಯ ಸಮಸ್ಯೆಗಳೂ ಕೂದಲು ಬೇಗ ಬಿಳಿಯಾಗಲು ಕಾರಣವಾಗಬಹುದು.

ಬಿಳಿಯಾದ ಕೂದಲು ಮತ್ತೆ ಕಪ್ಪಾಗುತ್ತದೆಯೇ?

ತಜ್ಞರ ಪ್ರಕಾರ, ಇದಕ್ಕೆ ನಿಖರವಾದ ಒಂದೇ ಉತ್ತರ ಇಲ್ಲ. ಪೋಷಕಾಂಶಗಳ ಕೊರತೆ ಅಥವಾ ಚಿಕಿತ್ಸೆ ಮಾಡಬಹುದಾದ ಆರೋಗ್ಯ ಸಮಸ್ಯೆಯಿಂದ ಕೂದಲು ಬಿಳಿಯಾಗಿದ್ದರೆ, ಸರಿಯಾದ ಚಿಕಿತ್ಸೆ ಹಾಗೂ ಪೌಷ್ಟಿಕ ಆಹಾರದಿಂದ ಹೊಸದಾಗಿ ಬೆಳೆಯುವ ಕೂದಲಿನಲ್ಲಿ ಮತ್ತೆ ಬಣ್ಣ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಆದರೆ ವಯಸ್ಸು ಅಥವಾ ಅನುವಂಶಿಕ ಕಾರಣಗಳಿಂದ ಬಿಳಿಯಾದ ಕೂದಲು ಸಂಪೂರ್ಣವಾಗಿ ಮತ್ತೆ ಕಪ್ಪಾಗುತ್ತದೆ ಎಂಬುದಕ್ಕೆ ವೈಜ್ಞಾನಿಕವಾಗಿ ದೃಢಪಟ್ಟ ಚಿಕಿತ್ಸೆ ಇನ್ನೂ ಲಭ್ಯವಿಲ್ಲ.

ಕೂದಲಿನ ಆರೋಗ್ಯಕ್ಕೆ ಸೇವಿಸಬೇಕಾದ ಆಹಾರಗಳು:

  • ಮೊಟ್ಟೆ
  • ಹಾಲು ಮತ್ತು ಹಾಲಿನ ಉತ್ಪನ್ನಗಳು
  • ಹಸಿರು ಎಲೆ ತರಕಾರಿಗಳು
  • ಬಾದಾಮಿ, ವಾಲ್ನಟ್
  • ಎಳ್ಳು
  • ಬೀನ್ಸ್ ಮತ್ತು ಬೇಳೆಕಾಳುಗಳು
  • ಮೀನು
  • ನೆಲ್ಲಿಕಾಯಿ
  • ಕಿತ್ತಳೆ, ಸೀಬೆಹಣ್ಣು ಸೇರಿದಂತೆ ವಿಟಮಿನ್ ಸಿ ಇರುವ ಹಣ್ಣುಗಳು

ಕೂದಲು ಬಿಳಿಯಾಗುವ ಸಮಸ್ಯೆ ಹೆಚ್ಚಾದರೆ ಸ್ವಯಂ ಚಿಕಿತ್ಸೆ ಮಾಡುವ ಬದಲು ತಜ್ಞ ವೈದ್ಯರನ್ನು ಸಂಪರ್ಕಿಸಿ ಮೂಲ ಕಾರಣ ಪತ್ತೆಹಚ್ಚುವುದು ಉತ್ತಮ.