Home Blog Page 82

ಅಮೆರಿಕ ದಾಳಿಯಿಂದ ಮುಳುಗಿದ ಇರಾನ್ ಯುದ್ಧನೌಕೆ: ರಕ್ಷಣೆಗೆ ಧಾವಿಸಿದ ಭಾರತೀಯ ನೌಕಾಪಡೆ

0

ನವದೆಹಲಿ: ಅಮೆರಿಕದ ದಾಳಿಯ ನಂತರ ಹಿಂದೂ ಮಹಾಸಾಗರದಲ್ಲಿ ಮುಳುಗಿದ ಇರಾನ್ ದೇಶದ ಯುದ್ಧ ನೌಕೆಯಲ್ಲಿದ್ದ ಸಿಬ್ಬಂದಿಗೆ ನೆರವು ಒದಗಿಸಲು ಭಾರತೀಯ ನೌಕಾಪಡೆ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.

ಅಮೆರಿಕದ ಜಲಾಂತರ್ಗಾಮಿ ನೌಕೆಯಿಂದ ನಡೆದ ಟಾರ್ಪಿಡೊ ದಾಳಿಯಿಂದ ಇರಾನ್ ದೇಶದ ‘ಐರಿಸ್ ದೇನಾ’ ಎಂಬ ಯುದ್ಧ ನೌಕೆ ಸಂಕಷ್ಟಕ್ಕೀಡಾಗಿ ಮುಳುಗಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಮಾರ್ಚ್ 4ರ ಮುಂಜಾನೆ ಕೊಲಂಬೊದಲ್ಲಿರುವ ಸಾಗರ ರಕ್ಷಣಾ ಸಮನ್ವಯ ಕೇಂದ್ರಕ್ಕೆ ಐರಿಸ್ ದೇನಾ ನೌಕೆಯಿಂದ ಸಂಕಷ್ಟ ಸಂದೇಶ ಬಂದಿದ್ದು, ಆ ನೌಕೆ ಶ್ರೀಲಂಕಾದ ಗ್ಯಾಲೆ ನಗರದಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು 20 ಸಮುದ್ರ ಮೈಲು ದೂರದಲ್ಲಿದ್ದ ಪ್ರದೇಶದಲ್ಲಿ ಮುಳುಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ಪ್ರದೇಶವು ಶ್ರೀಲಂಕಾದ ಜವಾಬ್ದಾರಿಯಲ್ಲಿರುವ ಶೋಧ ಮತ್ತು ರಕ್ಷಣಾ ವ್ಯಾಪ್ತಿಗೆ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿ ದೊರಕುತ್ತಿದ್ದಂತೆಯೇ ಭಾರತೀಯ ನೌಕಾಪಡೆ ತಕ್ಷಣ ಕಾರ್ಯಚಟುವಟಿಕೆ ಆರಂಭಿಸಿತು. ಶ್ರೀಲಂಕಾ ನೌಕಾಪಡೆ ಮುನ್ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ ಬೆಂಬಲ ನೀಡುವ ಉದ್ದೇಶದಿಂದ ದೀರ್ಘ ದೂರದ ಕಡಲ ಗಸ್ತು ವಿಮಾನವನ್ನು ಬೆಳಿಗ್ಗೆ ನಿಯೋಜಿಸಲಾಯಿತು. ಅಗತ್ಯವಿದ್ದಲ್ಲಿ ಗಾಳಿಯಿಂದ ರಕ್ಷಣಾ ದೋಣಿಗಳನ್ನು ಕೆಳಗೆ ಬಿಡಲು ಸಿದ್ಧವಾಗಿದ್ದ ಮತ್ತೊಂದು ವಿಮಾನವನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಇದೇ ವೇಳೆ ಸಮೀಪ ಪ್ರದೇಶದಲ್ಲಿ ತರಬೇತಿ ಕಾರ್ಯದಲ್ಲಿ ತೊಡಗಿದ್ದ ಭಾರತೀಯ ನೌಕಾಪಡೆಯ ತರಬೇತಿ ಹಡಗು ‘ಐಎನ್‌ಎಸ್ ತರಂಗಿಣಿ’ಗೆ ಕೂಡ ಶೋಧ ಕಾರ್ಯದಲ್ಲಿ ಭಾಗವಹಿಸಲು ಸೂಚನೆ ನೀಡಲಾಗಿದ್ದು, ಅದು ಸಂಜೆ ವೇಳೆಗೆ ಘಟನಾ ಸ್ಥಳದ ಸಮೀಪ ತಲುಪಿತು. ಆಗಾಗಲೇ ಶ್ರೀಲಂಕಾ ನೌಕಾಪಡೆ ಮತ್ತು ಇತರ ಸಂಬಂಧಿತ ಸಂಸ್ಥೆಗಳು ಶೋಧ ಹಾಗೂ ರಕ್ಷಣಾ ಕಾರ್ಯವನ್ನು ಆರಂಭಿಸಿತ್ತು.

ಇನ್ನೂ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಮೀಕ್ಷಾ ಹಡಗು ‘ಐಎನ್‌ಎಸ್ ಇಕ್ಷಾಕ್’ ಅನ್ನು ಕೊಚ್ಚಿ ಬಂದರಿನಿಂದ ಕಳುಹಿಸಲಾಗಿದೆ. ಮುಳುಗಿದ ನೌಕೆಯಲ್ಲಿದ್ದ ಸಿಬ್ಬಂದಿಯ ಪತ್ತೆಗಾಗಿ ಸಮುದ್ರದಲ್ಲಿ ಶೋಧ ಕಾರ್ಯ ಮುಂದುವರಿದಿದೆ.

ಮಾರ್ಚ್ 4ರಂದು ಶ್ರೀಲಂಕಾದ ದಕ್ಷಿಣ ಕರಾವಳಿಯ ಗ್ಯಾಲೆ ನಗರದಿಂದ ಸುಮಾರು 40 ಸಮುದ್ರ ಮೈಲು ದೂರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆಯೊಂದು ಇರಾನ್ ದೇಶದ ಐರಿಸ್ ದೇನಾ ಯುದ್ಧ ನೌಕೆಯ ಮೇಲೆ ದಾಳಿ ನಡೆಸಿದ್ದು, ಅದರ ಪರಿಣಾಮವಾಗಿ ನೌಕೆ ಮುಳುಗಿದ ಘಟನೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಮತ್ತು ಶ್ರೀಲಂಕಾ ನೌಕಾಪಡೆಗಳ ನಡುವೆ ಸಮನ್ವಯದಿಂದ ಶೋಧ ಹಾಗೂ ರಕ್ಷಣಾ ಕಾರ್ಯ ಮುಂದುವರಿಯುತ್ತಿದೆ ಎಂದು ತಿಳಿದುಬಂದಿದೆ.

ರಷ್ಯಾ ತೈಲ ಖರೀದಿಗೆ ಭಾರತಕ್ಕೆ 30 ದಿನಗಳ ವಿನಾಯಿತಿ ಕೊಟ್ಟ ಅಮೆರಿಕ

0

ನವದೆಹಲಿ: ಇರಾನ್ ದೇಶದೊಂದಿಗೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ ದೇಶದಿಂದ ಕಚ್ಚಾ ತೈಲ ಖರೀದಿಸಲು ಭಾರತಕ್ಕೆ ಅಮೆರಿಕ ಸರ್ಕಾರ 30 ದಿನಗಳ ವಿನಾಯಿತಿ ನೀಡಿದೆ. ಇದರಿಂದ ಭಾರತದ ಇಂಧನ ಪೂರೈಕೆಗೆ ತಾತ್ಕಾಲಿಕ ನೆರವು ದೊರಕುವ ಸಾಧ್ಯತೆ ಇದೆ.

ಮಾರ್ಚ್ 5, 2026 ರಂದು ಹಡಗುಗಳಲ್ಲಿ ತುಂಬಿಸಲಾದ ರಷ್ಯಾ ಮೂಲದ ಕಚ್ಚಾ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ ಮತ್ತು ಮಾರಾಟಕ್ಕೆ ಅನುಮತಿ ನೀಡುವ ವಿಶೇಷ ಪರವಾನಗಿಯನ್ನು ಅಮೆರಿಕದ ಖಜಾನೆ ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ ನೀಡಿದೆ. ನಿರ್ಬಂಧಕ್ಕೊಳಗಾದ ಹಡಗುಗಳ ಮೂಲಕ ನಡೆದ ವ್ಯವಹಾರಗಳಿಗೂ ಸೇರಿದಂತೆ ಈ ಅನುಮತಿ ಏಪ್ರಿಲ್ 3, 2026ರವರೆಗೆ ಜಾರಿಯಲ್ಲಿರಲಿದೆ ಎಂದು ತಿಳಿಸಲಾಗಿದೆ.

ಮಧ್ಯಪ್ರಾಚ್ಯ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಜಾಗತಿಕ ಇಂಧನ ಮಾರುಕಟ್ಟೆಯನ್ನು ಸ್ಥಿರಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದ್ವಿಪಕ್ಷೀಯ ಸಂಬಂಧಗಳ ಮಹತ್ವವನ್ನು ಒತ್ತಿಹೇಳುತ್ತಾ ಅಮೆರಿಕದ ಅಧಿಕಾರಿಗಳು ಭಾರತವನ್ನು ಪ್ರಮುಖ ಪಾಲುದಾರ ದೇಶವೆಂದು ಹೇಳಿದ್ದಾರೆ.

ಉಕ್ರೇನ್ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ರಷ್ಯಾ ಮೇಲೆ ಒತ್ತಡ ಹೇರುವ ಪ್ರಯತ್ನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ನವೆಂಬರ್‌ನಲ್ಲಿ ರಷ್ಯಾದ ಪ್ರಮುಖ ತೈಲ ಕಂಪನಿಗಳಾದ ಲುಕೋಯಿಲ್ ಮತ್ತು ರೋಸ್‌ನೆಫ್ಟ್ ಮೇಲೆ ನಿರ್ಬಂಧ ವಿಧಿಸಿದ್ದರು.

ಭಾರತಕ್ಕೆ ರಷ್ಯಾದ ಕಚ್ಚಾ ತೈಲ ಆಮದು ಜನವರಿಯಲ್ಲಿ ದಿನಕ್ಕೆ ಸುಮಾರು 1.1 ಮಿಲಿಯನ್ ಬ್ಯಾರೆಲ್ ಮಟ್ಟಕ್ಕೆ ಇಳಿದಿದ್ದು, ಇದು ನವೆಂಬರ್ 2022 ನಂತರದ ಕನಿಷ್ಠ ಮಟ್ಟವಾಗಿದೆ. ಆದರೆ ಫೆಬ್ರವರಿಯಲ್ಲಿ ರಷ್ಯಾದ ತೈಲದ ಪಾಲು ಮತ್ತೆ ಸುಮಾರು 30 ಶೇಕಡಕ್ಕೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಮಧ್ಯಪ್ರಾಚ್ಯದ ಹಲವೆಡೆ ತೈಲ ಉತ್ಪಾದನೆಗೆ ಅಡಚಣೆ ಉಂಟಾಗಿದೆ. ಜಾಗತಿಕ ತೈಲ ಪೂರೈಕೆಯ ಸುಮಾರು 20 ಶೇಕಡ ಸಾಗುವ ಪ್ರಮುಖ ಮಾರ್ಗವಾದ ಸ್ಟ್ರೇಟ್ ಆಫ್ ಹೋರ್ಮುಝ್ ಪ್ರದೇಶವನ್ನು ಇರಾನ್ ದಿಗ್ಬಂಧನಗೊಳಿಸಿರುವುದರಿಂದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿಗರೇ ಅಲರ್ಟ್: ಹೆಚ್ಚಾಯ್ತು ಬಿಸಿಲಿನ ಝಳ! ಇನ್ನೂ ಕೆಲ ದಿನ ಇದೇ ಪರಿಸ್ಥಿತಿ

ಬೆಂಗಳೂರು: ಇಂದು ಬೆಂಗಳೂರಿನಲ್ಲಿ ತಾಪಮಾನದಲ್ಲಿ ಸ್ವಲ್ಪ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನ ಏರಿಕೆಯಾಗುತ್ತಿದ್ದು, ಒಣ ಹವಾಮಾನದ ವಾತಾವರಣ ಮುಂದುವರಿದಿದೆ. ಇಂದಿನಿಂದ ಕೆಲ ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ. ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಇದೇ ಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಹಲವು ದಿನಗಳಿಂದ ಮುಂದುವರಿದಿರುವ ಒಣಹವೆಯ ವಾತಾವರಣ ಇಂದೂ ಮುಂದುವರಿಯಲಿದೆ. ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆ ಕೂಡ ಎಚ್ಚರಿಕೆ ನೀಡಿದೆ.

ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದ್ದು, ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಒಟ್ಟಿನಲ್ಲಿ ಈ ವರ್ಷವೂ ಬೆಂಗಳೂರಿಗರಿಗೆ ಕಠಿಣ ಬೇಸಿಗೆ ಎದುರಾಗುವ ಲಕ್ಷಣಗಳು ಕಂಡುಬರುತ್ತಿವೆ.

ಓವರ್‌ಟೇಕ್ ವೇಳೆ ನಿಯಂತ್ರಣ ತಪ್ಪಿ ಕಂಟೈನರ್ ಲಾರಿ ಪಲ್ಟಿ!

ಬೆಂಗಳೂರು ಗ್ರಾಮಾಂತರ: ಓವರ್‌ಟೇಕ್ ಮಾಡಲು ಹೋಗಿದ್ದ ವೇಳೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬೃಹತ್ ಕಂಟೈನರ್ ಲಾರಿ ಹೈವೇಯಲ್ಲಿ ಉರುಳಿ ಬಿದ್ದ ಭಯಾನಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಮುದುಗೆರೆ ಸಮೀಪ ನಡೆದಿದೆ.

ಅಪಘಾತದ ದೃಶ್ಯ ಸ್ಥಳೀಯ ಹೋಟೆಲ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮುಂದೆ ಸಾಗುತ್ತಿದ್ದ ಟಿಪ್ಪರ್ ಲಾರಿಯನ್ನು ಓವರ್‌ಟೇಕ್ ಮಾಡಲು ಹೋಗಿದಾಗ ಪಕ್ಕದಲ್ಲಿದ್ದ ಬೈಕ್‌ಗಳಿಗೆ ಸೈಡ್ ಕೊಡಲು ಯತ್ನಿಸಿದ ವೇಳೆ ಲಾರಿ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ರಸ್ತೆ ಬದಿ ನಿಂತಿದ್ದ ಕಾರಿನ ಮೇಲೆ ಲಾರಿ ಬೀಳುವುದು ಜಸ್ಟ್ ಮಿಸ್ ತಪ್ಪಿದ್ದು ಕಾರಿಗೆ ಸ್ವಲ್ಪ ತಗುಲಿದೆ. ಕಾರಿನಲ್ಲಿದ್ದವರು ಭಯಭೀತರಾಗಿ ವಾಹನದಿಂದ ಇಳಿದಿದ್ದಾರೆ.

ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಬಿಹಾರ ಮೂಲದ ಚಾಲಕ ಧರ್ಮೇಂದ್ರ ಹಾಗೂ ಕ್ಲೀನರ್ ಲಾಲ್ ಚಂದ್ ಗಾಯಗೊಂಡಿದ್ದು, ಅವರನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಲಾರಿಯಲ್ಲಿ ಪ್ಲಾಸ್ಟಿಕ್ ಪೈಪ್‌ಗಳನ್ನು ತುಂಬಿ ಮಧ್ಯಪ್ರದೇಶದ ಭೋಪಾಲ್‌ನಿಂದ ಹೊಸಕೋಟೆಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಸಿಎಂ ಸಿದ್ದರಾಮಯ್ಯರ ದಾಖಲೆ ಬಜೆಟ್ ಮಂಡನೆಗೆ ಕ್ಷಣಗಣನೆ: ಜನಪರ ಯೋಜನೆಗಳತ್ತ ಗಮನ!

ಬೆಂಗಳೂರು: 2026–27ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ.

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 10.15ಕ್ಕೆ ವಿಧಾನಸಭೆಯಲ್ಲಿ 2026–27ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಆಯವ್ಯಯದ ಮೇಲೆ ರಾಜ್ಯದ ಜನತೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದು, ಗ್ಯಾರಂಟಿ ಯೋಜನೆಗಳಷ್ಟೇ ಅಲ್ಲದೆ ಶಿಕ್ಷಣ, ಕೃಷಿ, ಕೈಗಾರಿಕೆ, ಸಾರಿಗೆ ಹಾಗೂ ಆರೋಗ್ಯ ಸೇರಿದಂತೆ ಪ್ರಮುಖ ವಲಯಗಳಿಗೆ ಬಂಪರ್ ಘೋಷಣೆಗಳ ನಿರೀಕ್ಷೆಯಿದೆ.

ಹಣಕಾಸು ಇಲಾಖೆ ಸಿದ್ಧಪಡಿಸಿರುವ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳ ಜೊತೆಗೆ ಜನಪರ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆಯೇ ಎಂಬ ಕುತೂಹಲ ಮೂಡಿದೆ. ಈ ಬಾರಿ ರಾಜ್ಯದ ಒಟ್ಟು ಬಜೆಟ್ ಗಾತ್ರ ಸುಮಾರು 4.50 ಲಕ್ಷ ಕೋಟಿ ರೂಪಾಯಿಗಳ ಮಟ್ಟ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಸಾಲದ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಗ್ಯಾರಂಟಿ ಯೋಜನೆಗಳ ನಿರ್ವಹಣೆ, ವಿವಿಧ ಇಲಾಖೆಗಳ ಅಭಿವೃದ್ಧಿ, ರೈತರ ಸಮಸ್ಯೆಗೆ ಪರಿಹಾರ, ಮಹಿಳೆಯರಿಗೆ ವಿಶೇಷ ಯೋಜನೆಗಳು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಸೇರಿದಂತೆ ಹಲವು ಸವಾಲುಗಳ ನಡುವೆ ಸಿಎಂ ಸಿದ್ದರಾಮಯ್ಯ ಇಂದು ತಮ್ಮ ದಾಖಲೆಯ 17ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗೆ ಯಾವ ರೀತಿಯ ಆದ್ಯತೆ ಸಿಗಲಿದೆ ಎಂಬುದನ್ನು ಕಾದುನೋಡುವಂತಾಗಿದೆ.

ಬೃಹತ್ ‘ರಾಮಾಯಣ’ ಸಿನಿಮಾದ ಎರಡನೇ ಭಾಗ ಚಿತ್ರೀಕರಣ ಶುರು: ರಣಬೀರ್–ಸನ್ನಿ ಡಿಯೋಲ್ ಕಾಂಬಿನೇಶನ್ ದೃಶ್ಯಗಳಿಗೆ ಭಾರೀ ಸಿದ್ಧತೆ

ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾದ ‘ರಾಮಾಯಣ’ ಸಿನಿಮಾ ಈಗ ಮತ್ತೊಂದು ಹಂತಕ್ಕೆ ಕಾಲಿಟ್ಟಿದೆ. ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿರುವ ರಣಬೀರ್ ಕಪೂರ್ ಈಗಾಗಲೇ ಚಿತ್ರದ ಎರಡನೇ ಭಾಗದ ಚಿತ್ರೀಕರಣಕ್ಕೆ ಸೆಟ್ ಸೇರಿಕೊಂಡಿದ್ದಾರೆ.

ನಿರ್ದೇಶಕ ನಿತೇಶ್ ತಿವಾರಿ ರೂಪಿಸುತ್ತಿರುವ ಈ ಮಹತ್ವಾಕಾಂಕ್ಷಿ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಮೊದಲ ಭಾಗದ ಶೂಟಿಂಗ್ ಪೂರ್ಣಗೊಂಡಿದೆ. ಈಗ ‘ರಾಮಾಯಣ 2’ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ.

ಈ ಭಾಗದಲ್ಲಿ ಶ್ರೀರಾಮ ಮತ್ತು ಹನುಮಂತನ ಭೇಟಿಯ ದೃಶ್ಯಗಳು ವಿಶೇಷ ಆಕರ್ಷಣೆಯಾಗಲಿವೆ. ಹನುಮಂತನ ಪಾತ್ರವನ್ನು ಬಾಲಿವುಡ್‌ನ ಹಿರಿಯ ನಟ ಸನ್ನಿ ಡಿಯೋಲ್ ನಿರ್ವಹಿಸುತ್ತಿದ್ದು, ಅವರು ಮಾರ್ಚ್ 20ರ ನಂತರ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

ಚಿತ್ರದಲ್ಲಿ ಸೀತೆಯ ಪಾತ್ರವನ್ನು ಸಾಯಿ ಪಲ್ಲವಿ ಮಾಡುತ್ತಿದ್ದು, ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ. ಭಾರೀ ಗ್ರಾಫಿಕ್ಸ್ ಮತ್ತು ದೃಶ್ಯ ವೈಭವದೊಂದಿಗೆ ಸಿನಿಮಾ ಮೂಡಿ ಬರುತ್ತಿದೆ.

ನಿರ್ಮಾಪಕ ನಮಿತ್ ಮಲ್ಹೋತ್ರಾ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಹಾಲಿವುಡ್ ಮಟ್ಟದ ತಂತ್ರಜ್ಞಾನ ಬಳಸಲಾಗುತ್ತಿದೆ. ಅಲ್ಲದೆ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಚಿತ್ರದ ಫೈನಲ್ ಕಟ್ ವೀಕ್ಷಿಸಿ ಸಲಹೆ ನೀಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಈ ನಡುವೆ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಚಿತ್ರದ ಚಿತ್ರೀಕರಣ ಮುಂದೂಡಲ್ಪಟ್ಟಿರುವುದರಿಂದ, ರಣಬೀರ್ ಕಪೂರ್ ತಮ್ಮ ಸಂಪೂರ್ಣ ಗಮನವನ್ನು ಈಗ ‘ರಾಮಾಯಣ 2’ ಕಡೆಗೆ ಹರಿಸಿದ್ದಾರೆ.

ಪತ್ನಿ ಸಂಗೀತಾ ವಿಚ್ಛೇದನ ಅರ್ಜಿ ಮಧ್ಯೆ ತ್ರಿಷಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್!

ತಮಿಳು ಸಿನಿರಂಗದ ಜನಪ್ರಿಯ ನಟ ದಳಪತಿ ವಿಜಯ್ ಅವರ ವೈಯಕ್ತಿಕ ಜೀವನ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದೆ. 27 ವರ್ಷಗಳ ದಾಂಪತ್ಯ ಜೀವನದ ಬಳಿಕ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ವರದಿಗಳ ನಡುವೆ, ವಿಜಯ್ ಅವರು ನಟಿ ತ್ರಿಷಾ ಕೃಷ್ಣನ್ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಚೆನ್ನೈನಲ್ಲಿ ನಡೆದ ಎಸ್‌. ಕಲ್ಪತಿ ಸುರೇಶ್ ಮತ್ತು ಮೀನಾಕ್ಷಿ ಸುರೇಶ್ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ವಿಜಯ್ ಹಾಗೂ ತ್ರಿಷಾ ಒಟ್ಟಿಗೆ ಹಾಜರಾಗಿದ್ದರು. ಈ ಕಾರ್ಯಕ್ರಮದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ವಿಜಯ್ ಅವರ ವಿಚ್ಛೇದನ ವಿಚಾರದಲ್ಲಿ ತ್ರಿಷಾ ಹೆಸರು ಕೇಳಿಬರುತ್ತಿರುವುದು ಈ ಹಿಂದೆ ಹರಿದಾಡಿದ ಗಾಸಿಪ್‌ಗಳಿಗೆ ಮತ್ತೆ ಜೀವ ತುಂಬಿದೆ. ಇಬ್ಬರೂ ದೀರ್ಘಕಾಲದಿಂದ ಸ್ನೇಹಿತರಾಗಿದ್ದು, ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.

ಈ ವಿವಾದದ ಬಗ್ಗೆ ತಮಿಳುನಾಡಿನಲ್ಲಿ ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ. ಕೆಲವರು ವಿಜಯ್ ಅವರ ನೈತಿಕತೆ ಬಗ್ಗೆ ಪ್ರಶ್ನೆ ಎತ್ತುತ್ತಿದ್ದರೆ, ಅಭಿಮಾನಿಗಳು ಇದು ಮುಂಬರುವ ರಾಜಕೀಯ ಬೆಳವಣಿಗೆಗಳ ನಡುವೆ ಸೃಷ್ಟಿಸಲಾದ ವಿವಾದ ಎಂದು ಹೇಳುತ್ತಿದ್ದಾರೆ.

ವಿಜಯ್ ಅವರ ರಾಜಕೀಯ ಪ್ರವೇಶದ ಹಿನ್ನೆಲೆ ಮತ್ತು ಮುಂದಿನ ವಿಧಾನಸಭಾ ಚುನಾವಣೆಗಳ ಸನ್ನಿವೇಶದಲ್ಲಿ ಈ ವಿಷಯ ಯಾವ ರೀತಿಯ ತಿರುವು ಪಡೆಯುತ್ತದೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಇಂಗ್ಲೆಂಡ್‌ ವಿರುದ್ಧ 7 ರನ್‌ ರೋಚಕ ಜಯ: ಫೈನಲ್​ಗೇರಿದ ಟೀಂ ಇಂಡಿಯಾ!

0

ರೋಚಕ ಹೋರಾಟಕ್ಕೆ ಸಾಕ್ಷಿಯಾದ ಸೆಮಿಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ತ್ರಿಲ್ಲಿಂಗ್ ಜಯ ಸಾಧಿಸಿ ಟಿ20 ವಿಶ್ವಕಪ್ ಫೈನಲ್‌ಗೆ ಭರ್ಜರಿ ಪ್ರವೇಶ ಮಾಡಿದೆ.

ಸಂಜು ಸ್ಯಾಮ್ಸನ್‌ ಅವರ ಸ್ಫೋಟಕ ಬ್ಯಾಟಿಂಗ್‌, ಅಕ್ಷರ್ ಪಟೇಲ್ ಅವರ ಅದ್ಭುತ ಕ್ಯಾಚ್‌ಗಳು ಹಾಗೂ ಜಸ್ಪ್ರೀತ್ ಬುಮ್ರಾ ಅವರ ಕೊನೆಯ ಓವರ್‌ಗಳ ನಿಯಂತ್ರಿತ ಬೌಲಿಂಗ್ ಭಾರತಕ್ಕೆ ಜಯ ತಂದುಕೊಟ್ಟವು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿತು. ಈ ಭಾರೀ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಬೆಥೆಲ್ ಅವರ ಸ್ಫೋಟಕ ಶತಕದ ಹೊರತಾಗಿಯೂ 7 ವಿಕೆಟ್‌ಗೆ 246 ರನ್ ಗಳಿಸಿ ಸೋಲಿಗೆ ತುತ್ತಾಯಿತು.

ಕೊನೆಯ ಮೂರು ಓವರ್‌ಗಳಲ್ಲಿ 45 ರನ್ ಅಗತ್ಯವಿದ್ದಾಗ ಬುಮ್ರಾ 18ನೇ ಓವರ್‌ನಲ್ಲಿ ಕೇವಲ 6 ರನ್ ನೀಡಿ ಪಂದ್ಯವನ್ನು ಭಾರತ ಪರ ತಿರುಗಿಸಿದರು. ನಂತರ ಹಾರ್ದಿಕ್ ಪಾಂಡ್ಯ 19ನೇ ಓವರ್‌ನಲ್ಲಿ 9 ರನ್ ನೀಡಿ ಸ್ಯಾಮ್ ಕರ್ರನ್ ವಿಕೆಟ್ ಪಡೆದರು. ಬೌಂಡರಿ ಗೆರೆಯಲ್ಲಿ ತಿಲಕ್ ವರ್ಮಾ ಹಿಡಿದ ಅದ್ಭುತ ಕ್ಯಾಚ್ ಪಂದ್ಯಕ್ಕೆ ಮತ್ತಷ್ಟು ರೋಚಕತೆ ತಂದಿತು. ಅಂತಿಮ ಓವರ್‌ನಲ್ಲಿ ಶಿವಂ ದುಬೆ ಬೌಲಿಂಗ್ ಮಾಡುತ್ತಿದ್ದಾಗ ಬೆಥೆಲ್ 105 ರನ್ (48 ಎಸೆತ, 8 ಬೌಂಡರಿ, 7 ಸಿಕ್ಸ್) ಹೊಡೆದು ರನ್ ಔಟ್ ಆಗಿದ್ದು ಇಂಗ್ಲೆಂಡ್ ಗೆ ದೊಡ್ಡ ಹೊಡೆತವಾಯಿತು.

ಕೊನೆಯಲ್ಲಿ ಜೋಫ್ರಾ ಅರ್ಚರ್ ಮೂರು ಸಿಕ್ಸ್ ಹೊಡೆದರೂ ಭಾರತ 7 ರನ್‌ಗಳಿಂದ ಗೆದ್ದು ಫೈನಲ್ ಪ್ರವೇಶಿಸಿತು. ಅಕ್ಷರ್ ಪಟೇಲ್ ಫಿಲ್ ಸಾಲ್ಟ್, ಹ್ಯಾರಿ ಬ್ರೂಕ್ ಮತ್ತು ವಿಲ್ ಜಾಕ್ಸ್ ಅವರ ಪ್ರಮುಖ ಕ್ಯಾಚ್‌ಗಳನ್ನು ಹಿಡಿದು ಪಂದ್ಯದಲ್ಲಿ ಮಹತ್ವದ ಪಾತ್ರವಹಿಸಿದರು. ಫೈನಲ್ ಪಂದ್ಯ ಭಾನುವಾರ ಅಹಮದಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ.

ಬೈಕ್–ಕಾರು ನಡುವೆ ಭೀಕರ ಅಪಘಾತ: ಮೂವರು ಬೈಕ್ ಸವಾರರ ದುರ್ಮರಣ!

ಗದಗ: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಬೈಕ್ ಸವಾರರು ಸಾವನ್ನಪ್ಪಿರುವ ದುರ್ಘಟನೆ ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಾವನ್ನಪ್ಪಿದವರನ್ನು ಆನಂದ ಲಕ್ಷ್ಮೇಶ್ವರಮಠ (50), ಶಿವಪ್ಪ ಪಾಟ್ಲಿ (36) ಹಾಗೂ ಮುತ್ತಪ್ಪ ಮುದಗಣ್ಣವರ (28) ಎಂದು ಗುರುತಿಸಲಾಗಿದೆ.

ಮುಂಡರಗಿ ಪಟ್ಟಣದಿಂದ ಜಂತ್ಲಿ ಶಿರೂರ ಗ್ರಾಮಕ್ಕೆ ತೆರಳುತ್ತಿದ್ದ ಬೈಕ್ ಸವಾರರು ಮತ್ತು ಡೋಣಿ ಗ್ರಾಮದಿಂದ ಹಿರೇಹಡಗಲಿ ಕಡೆಗೆ ಸಾಗುತ್ತಿದ್ದ ಕಾರಿನ ನಡುವೆ ಬರದೂರು ಹಾಗೂ ಮೇವುಂಡಿ ಗ್ರಾಮಗಳ ಮಧ್ಯೆ ಈ ಅಪಘಾತ ಸಂಭವಿಸಿದೆ.

ಪೊಲೀಸ್ ಮೂಲಗಳ ಮಾಹಿತಿಯ ಪ್ರಕಾರ, ಒಂದೇ ಬೈಕ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಇದೇ ವೇಳೆ ಎದುರಿನಿಂದ ಬರುತ್ತಿದ್ದ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೂವರು ಸವಾರರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದ ಸ್ಥಳದಲ್ಲೇ ಆನಂದ ಲಕ್ಷ್ಮೇಶ್ವರಮಠ ಮತ್ತು ಶಿವಪ್ಪ ಪಾಟ್ಲಿ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮುತ್ತಪ್ಪ ಮುದಗಣ್ಣವರ ಅವರನ್ನು ಸ್ಥಳೀಯರು ಮತ್ತು ಪೊಲೀಸರು ತಕ್ಷಣ ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಹ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದ ಸುದ್ದಿ ತಿಳಿದ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ದುರ್ಘಟನೆಯಿಂದ ಮೃತರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ದುಃಖ ಮೂಡಿಸಿದೆ.

ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಸಿದ್ದರಾಮಯ್ಯ ಈ ಬಾರಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡಿಸಲಿದ್ದಾರೆ: ಆರ್. ಅಶೋಕ್ ಟೀಕೆ

ಬೆಂಗಳೂರು: ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹1.15 ಲಕ್ಷ ಕೋಟಿ ಸಾಲ ಪಡೆದು ಬಜೆಟ್ ಮಂಡಿಸಲಿದ್ದಾರೆ. ಜನರ ಮೇಲೆ ಮತ್ತೊಮ್ಮೆ ತೆರಿಗೆಗಳ ಹೊರೆ ಹಾಕುವುದು ಖಚಿತ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಎಂದರೆ ತೆರಿಗೆ ಹೇರುವ ರಾಮಯ್ಯ ಆಗಿದ್ದಾರೆ. ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆಗಳ ಹೊರೆಯನ್ನು ಕಡಿಮೆ ಮಾಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ತಿಂಗಳಿಗೆ ನಾಲ್ಕರಂತೆ ತೆರಿಗೆ ಹಾಕುತ್ತಿದ್ದಾರೆ. ಈಗಾಗಲೇ 36 ತೆರಿಗೆಗಳನ್ನು ಜನರ ಮೇಲೆ ಹೇರಿದ್ದಾರೆ ಎಂದು ಆರೋಪಿಸಿದರು.

ಚುನಾವಣೆಗೆ ಮುನ್ನ ಗ್ಯಾರಂಟಿ ಯೋಜನೆಗಳನ್ನು ಜನರ ಮೇಲೆ ಹೊರೆ ಹಾಕದೇ ಜಾರಿಗೊಳಿಸುವುದಾಗಿ ಭರವಸೆ ನೀಡಿದರೂ, ಈಗ ತೆರಿಗೆಗಳ ಮೂಲಕ ಜನರ ಮೇಲೆ ಭಾರ ಹಾಕಲಾಗಿದೆ ಎಂದು ಅವರು ದೂರಿದರು. ಸಿದ್ದರಾಮಯ್ಯ ಅವರ ಅವಧಿ ಮುಗಿಯುವ ವೇಳೆಗೆ ರಾಜ್ಯದ ಒಟ್ಟು ಸಾಲ ₹8 ಲಕ್ಷ ಕೋಟಿ ಮೀರಲಿದೆ. ಇದರಿಂದ ಆರ್ಥಿಕ ಶಿಸ್ತು ಹಾಳಾಗಲಿದೆ ಎಂದು ಅಶೋಕ್ ಹೇಳಿದರು.

ಸಿಎಂ ಇಲ್ಲದ ಆದಾಯವನ್ನು ಸೃಷ್ಟಿಸಿದಂತೆ ತೋರಿಸಿ ಜಿಎಸ್ಡಿಪಿಗೆ ಹೋಲಿಕೆಯ ಶೇಕಡಾವಾರು ಕಡಿಮೆ ಇದೆ ಎಂದು ಪ್ರದರ್ಶಿಸುತ್ತಿದ್ದಾರೆ. ಇದನ್ನು ಆರ್ಥಿಕ ಶಿಸ್ತು ಎಂದು ತೋರಿಸುವುದು ತಪ್ಪು ಎಂದು ಅವರು ಟೀಕಿಸಿದರು. “ಸಾಲ ಮಾಡಿ ಸರ್ಕಾರ ನಡೆಸಲು ಯಾರೂ ಬೇಕಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಜನರ ನಿರೀಕ್ಷೆ ಸುಳ್ಳಾಗಿದೆ” ಎಂದರು.

ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಲವಿಲ್ಲದ ಬಜೆಟ್ ಮಂಡಿಸಿದ್ದರು. ಇನ್ನೂ ₹24,400 ಕೋಟಿ ಸಾಲ ಪಡೆಯುವ ಅವಕಾಶವಿದ್ದರೂ ಅವರು ಸಾಲ ಪಡೆದಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಪ್ರತಿ ವರ್ಷ ಸಾಲ ಪಡೆಯುತ್ತಿದೆ. ಈ ಬಾರಿ ₹1.15 ಲಕ್ಷ ಕೋಟಿ ಸಾಲ ಪಡೆಯುವ ಸಾಧ್ಯತೆ ಇದೆ ಎಂದು ಅಶೋಕ್ ಆರೋಪಿಸಿದರು.

error: Content is protected !!