Home Blog Page 82

ವಸತಿ ಶಾಲೆಯಲ್ಲಿ 10 ವರ್ಷದ ವಿದ್ಯಾರ್ಥಿ ಅನುಮಾನಾಸ್ಪದ ಸಾವು; ‘ಶಿಕ್ಷಕರು ಹೊಡೆದಿದ್ದರು’ ಎಂದಿದ್ದ ಬಾಲಕ

0

ಧಾರವಾಡ: ವಸತಿ ಶಾಲೆಯಲ್ಲಿ ಓದುತ್ತಿದ್ದ 10 ವರ್ಷದ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ರಸ್ತೆಯಲ್ಲಿರುವ ವಿದ್ಯಾಜ್ಯೋತಿ ವಸತಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ. ಘಟನೆಯು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪೋಷಕರು ಶಾಲಾ ಆಡಳಿತದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಶಾನವಾಡ ಗ್ರಾಮದ ಆಕಾಶ್ ನೀಲಣ್ಣವರ್ (10) ಮೃತ ವಿದ್ಯಾರ್ಥಿ. ಸುಮಾರು 10 ದಿನಗಳ ಹಿಂದಷ್ಟೇ ತಂದೆ ವಸಂತ್ ಅವರು ಮಗನನ್ನು ನಾಲ್ಕನೇ ತರಗತಿಗೆ ವಸತಿ ಶಾಲೆಗೆ ಸೇರಿಸಿದ್ದರು.

ಬುಧವಾರ ಮುಂಜಾನೆ ಶಾಲಾ ಸಿಬ್ಬಂದಿ ಪೋಷಕರಿಗೆ ಕರೆ ಮಾಡಿ, ಆಕಾಶ್ ಕಾಂಪೌಂಡ್ ಮೇಲಿಂದ ಬಿದ್ದು ಗಾಯಗೊಂಡಿದ್ದು, ನವಲಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಬಳಿಕ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲು ಪೋಷಕರು ಮುಂದಾದರೂ, ಮಾರ್ಗಮಧ್ಯೆಯೇ ಆಕಾಶ್ ಮೃತಪಟ್ಟಿದ್ದಾನೆ.

ಘಟನೆ ಕುರಿತು ಅನುಮಾನ ವ್ಯಕ್ತಪಡಿಸಿರುವ ಮೃತ ಬಾಲಕನ ತಂದೆ ವಸಂತ್, “ನಿನ್ನೆ ಮಗ ಕರೆ ಮಾಡಿ ಶಿಕ್ಷಕರು ಹೊಡೆದಿದ್ದಾರೆ ಎಂದು ಹೇಳಿದ್ದ. ಈಗ ಶಾಲೆಯವರು ಕಾಂಪೌಂಡ್ ಮೇಲಿಂದ ಬಿದ್ದಿದ್ದಾನೆ ಎನ್ನುತ್ತಿದ್ದಾರೆ. ಕಾಂಪೌಂಡ್ ಮೇಲಿಂದ ಬಿದ್ದರೆ ಸಾವಾಗುವುದಿಲ್ಲ. ಆತ ನಿಜವಾಗಿಯೂ ಕಾಂಪೌಂಡ್ ಮೇಲಿಂದ ಬಿದ್ದಿದ್ದಾನಾ, ಅಥವಾ ಶಾಲಾ ಕಟ್ಟಡದಿಂದ ಬಿದ್ದಿದ್ದಾನಾ ಎಂಬುದು ಸಿಸಿಟಿವಿ ದೃಶ್ಯ ಪರಿಶೀಲಿಸಿದ ಬಳಿಕವೇ ಗೊತ್ತಾಗಬೇಕು” ಎಂದು ಪ್ರಶ್ನಿಸಿದ್ದಾರೆ.

ಘಟನೆಯ ಹಿನ್ನೆಲೆ ಶಾಲಾ ಆಡಳಿತದ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಾವಿನ ನಿಖರ ಕಾರಣ ಪತ್ತೆಹಚ್ಚುವಂತೆ ಆಗ್ರಹಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ನವಲಗುಂದ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಆರಂಭಿಸಿದ್ದಾರೆ.

ವಿದ್ಯಾರ್ಥಿಯ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿರುವ ಹಿನ್ನೆಲೆಯಲ್ಲಿ ಸಿಸಿಟಿವಿ ದೃಶ್ಯಗಳು ಹಾಗೂ ವೈದ್ಯಕೀಯ ವರದಿಗಳು ತನಿಖೆಗೆ ಪ್ರಮುಖ ಸಾಕ್ಷಿಯಾಗುವ ಸಾಧ್ಯತೆಯಿದೆ.

ಗೌಪ್ಯ ಮತದಾನದ ನಿಯಮ ಉಲ್ಲಂಘಿಸಿಲ್ಲ, ನನ್ನ ಮತ ಮಾನ್ಯ: ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಗೌಪ್ಯ ಮತದಾನದ ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾಂಗ್ರೆಸ್ ಆರೋಪವನ್ನು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಳ್ಳಿಹಾಕಿದ್ದು, ತಾವು ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತದಾನದ ಕೊಠಡಿಯೊಳಗೆ ತಾವು ಯಾರಿಗೆ ಮತ ಹಾಕಿದ್ದೇವೆ ಎಂಬುದು ಸಂಪೂರ್ಣ ಗೌಪ್ಯವಾಗಿಯೇ ಉಳಿದಿದೆ. ಮತ ಚಲಾಯಿಸಿದ ತಕ್ಷಣ ಅಲ್ಲಿಯೇ ಯಾರಿಗಾದರೂ ಮತಪತ್ರವನ್ನು ತೋರಿಸಿದ್ದರೆ ಮಾತ್ರ ಅದು ಅಮಾನ್ಯವಾಗುತ್ತಿತ್ತು. ಆದರೆ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದರು.

“ನಾನು ಗೌಪ್ಯವಾಗಿಯೇ ಮತ ಹಾಕಿದ್ದೇನೆ. ಯಾರಿಗೂ ಮತಪತ್ರ ತೋರಿಸಿಲ್ಲ. ಹೀಗಾಗಿ ನನ್ನ ಮತ ಸಂಪೂರ್ಣ ಮಾನ್ಯವಾಗಿದೆ,” ಎಂದು ಯತ್ನಾಳ್ ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ಪತ್ರ ಬರೆದಿರುವುದನ್ನು ಒಪ್ಪಿಕೊಂಡ ಅವರು, “ನಾನು ಲಿಂಗರಾಜ ಪಾಟೀಲ್ ಅವರ ಹೆಸರನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದೇನೆ. ಆದರೆ ಮತದಾನದ ಕೊಠಡಿಯೊಳಗೆ ಯಾರಿಗೆ ಮತ ಹಾಕಿದ್ದೇನೆ ಎಂಬುದನ್ನು ಯಾರಿಗೂ ತೋರಿಸಿಲ್ಲ. ಗೌಪ್ಯ ಮತದಾನದ ನಿಯಮವನ್ನು ಸಂಪೂರ್ಣವಾಗಿ ಪಾಲಿಸಿದ್ದೇನೆ,” ಎಂದು ಸ್ಪಷ್ಟನೆ ನೀಡಿದರು.

ತಾವು ಬಿಜೆಪಿ ಚಿಹ್ನೆಯಡಿ ಆಯ್ಕೆಯಾಗಿ ಶಾಸಕನಾಗಿದ್ದೇನೆ. ಆತ್ಮಸಾಕ್ಷಿಗೆ ಅನುಗುಣವಾಗಿ ಹಾಗೂ ಪಕ್ಷ ಸೂಚಿಸಿದ್ದ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ ಎಂದು ಹೇಳಿದ ಅವರು, ಬಿಜೆಪಿ ನಾಯಕ ಅಶ್ವತ್ಥ ನಾರಾಯಣ್ ಸೇರಿದಂತೆ 49 ಶಾಸಕರು ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದ್ದರು. ಪಕ್ಷದ ಚಿಹ್ನೆಯಡಿ ಗೆದ್ದು ಬಂದಿರುವ ಕಾರಣ ಪಕ್ಷದ ಸೂಚನೆಯನ್ನು ಪಾಲಿಸಿದ್ದೇನೆ ಎಂದು ಯತ್ನಾಳ್ ತಿಳಿಸಿದರು.

10 ಲಕ್ಷ ವರದಕ್ಷಿಣೆಗಾಗಿ ಪತ್ನಿಗೆ ಚಿತ್ರಹಿಂಸೆ: ವಿಡಿಯೋ ಕಾಲ್‌ನಲ್ಲಿ ಕಿರುಕುಳ ಬಹಿರಂಗ- ಕುಕ್ಕರ್‌ನಿಂದ ಹೊಡೆದು ಹತ್ಯೆ

0

ಕೋಲಾರ: ವರದಕ್ಷಿಣೆ ಬೇಡಿಕೆ, ನಿರಂತರ ಕಿರುಕುಳ ಮತ್ತು ಮಾರಣಾಂತಿಕ ಹಲ್ಲೆಯ ಆರೋಪಗಳ ನಡುವೆ ಯುವತಿಯೊಬ್ಬಳು ಸಾವನ್ನಪ್ಪಿರುವ ಪ್ರಕರಣ ಕೋಲಾರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹಸಾಳ ಗ್ರಾಮದ ನಿವಾಸಿ ಸಹನಾ (24) ಮೃತಪಟ್ಟಿದ್ದು, ಪತಿ ಮಂಜುನಾಥ್ ವಿರುದ್ಧ ಹತ್ಯೆ ಆರೋಪ ಕೇಳಿಬಂದಿದೆ.

ಮದುವೆಯಾಗಿ ಐದು ವರ್ಷಗಳಾಗಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ವಿವಾಹದ ಆರಂಭದಿಂದಲೇ ಮಂಜುನಾಥ್ ಹೆಚ್ಚುವರಿ ಹಣಕ್ಕಾಗಿ ಪತ್ನಿಯ ಮೇಲೆ ಒತ್ತಡ ಹೇರುತ್ತಿದ್ದ ಎಂದು ಆರೋಪಿಸಲಾಗಿದೆ. ಮದುವೆ ವೆಚ್ಚದ ಹೆಸರಿನಲ್ಲಿ ಈ ಹಿಂದೆ 2 ಲಕ್ಷ ರೂಪಾಯಿ ಪಡೆದಿದ್ದ ಆತ, ನಂತರ ಮನೆ ನಿರ್ಮಾಣಕ್ಕಾಗಿ 10 ಲಕ್ಷ ರೂಪಾಯಿ ತರಬೇಕೆಂದು ಆಗ್ರಹಿಸಿದ್ದ ಎನ್ನಲಾಗಿದೆ.

ಹಣದ ವಿಚಾರವಾಗಿ ಪದೇ ಪದೇ ಗಲಾಟೆ ನಡೆಯುತ್ತಿದ್ದ ಕಾರಣ ಹಲವು ಬಾರಿ ಕುಟುಂಬ ಮಟ್ಟದಲ್ಲಿ ರಾಜಿ ಪಂಚಾಯಿತಿಗಳು ನಡೆದಿದ್ದವು. ಆದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ ಎಂದು ಮೃತಳ ಸಂಬಂಧಿಕರು ತಿಳಿಸಿದ್ದಾರೆ.

ಘಟನೆಗೆ ಕೆಲವೇ ಗಂಟೆಗಳ ಮೊದಲು ಸಹನಾ ತನ್ನ ತಾಯಿ ಜಯಮ್ಮ ಅವರಿಗೆ ವಿಡಿಯೋ ಕಾಲ್ ಮಾಡಿ, “ನನ್ನ ಮೇಲೆ ಹಲ್ಲೆ ನಡೆಯುತ್ತಿದೆ, ಮೂಗಿನಿಂದ ರಕ್ತ ಬರುತ್ತಿದೆ” ಎಂದು ಹೇಳಿದ್ದಳು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಳಿಕ ರಾತ್ರಿ ವೇಳೆ ಮಂಜುನಾಥ್ ಕುಕ್ಕರ್ ಸೇರಿದಂತೆ ಅಡುಗೆ ಪಾತ್ರೆಗಳಿಂದ ಹಲ್ಲೆ ನಡೆಸಿದ್ದು, ಸಹನಾ ಅಸ್ವಸ್ಥಳಾದ ನಂತರ ನೇಣು ಬಿಗಿದು ಆತ್ಮಹತ್ಯೆಯಂತೆ ತೋರಿಸಲು ಯತ್ನಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪ್ರಕರಣದ ಮಾಹಿತಿ ಪಡೆದ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿ ಮಂಜುನಾಥ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಸಾವಿನ ನಿಖರ ಕಾರಣ ಹಾಗೂ ಕುಟುಂಬಸ್ಥರ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.

ಮೇಕೆದಾಟು ಯೋಜನೆ ದಕ್ಷಿಣ ಭಾರತದ ಹೃದಯ: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಮೇಕೆದಾಟು ಯೋಜನೆ ದಕ್ಷಿಣ ಭಾರತದ ಹೃದಯದಂತ ಯೋಜನೆ. ಈ ಯೋಜನೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಹಿತ ಅಡಗಿದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧದಲ್ಲಿ ವಿಧಾನ ಪರಿಷತ್ ಚುನಾವಣೆ ಮತದಾನದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

ತಮಿಳುನಾಡು ಸರ್ಕಾರ ನಿಮ್ಮ ಹೃದಯಕ್ಕೆ ಹತ್ತಿರವಾದ ಮೇಕೆದಾಟು ಯೋಜನೆ ತಡೆಯಲು ಕಾನೂನು ಅವಕಾಶ ಹುಡುಕುತ್ತಿದೆ ಎಂದು ಕೇಳಿದಾಗ, “ಮೇಕೆದಾಟು ಕೇವಲ ನನ್ನ ಹೃದಯಕ್ಕೆ ಮಾತ್ರ ಹತ್ತಿರವಾಗಿಲ್ಲ. ಮೇಕೆದಾಟು ಯೋಜನೆ ಕರ್ನಾಟಕ ರಾಜ್ಯಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲ ನೀಡಲಿದೆ. ತಮಿಳುನಾಡು ಪಾಲಿನ 177 ಟಿಎಂಸಿ ನೀರನ್ನು ಬಿಡಲು ನಾವು ಸಿದ್ಧವಾಗಿದ್ದೇವೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಆದೇಶವೂ ಇದೆ. ಈ ಯೋಜನೆ ತೀರ್ಮಾನವನ್ನು ಕೇಂದ್ರ ಜಲ ಆಯೋಗ ಮಾಡಬೇಕು ಎಂದು ಕೋರ್ಟ್ ತಿಳಿಸಿದೆ” ಎಂದು ತಿಳಿಸಿದರು.

ಒಂದೇ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸುವುದಿಲ್ಲ

“ನಾವು ತಮಿಳುನಾಡಿನ ರೈತರ ಹಿತವನ್ನೂ ಕಾಪಾಡಬೇಕು. ಇದು ಸಮತೋಲಿತ ಜಲಾನಯನ. ಇಲ್ಲಿ ಒಂದೇ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸುವುದಿಲ್ಲ. ಬೆಂಗಳೂರು ನಗರದ ಕುಡಿಯುವ ನೀರು ಪೂರೈಕೆಗೆ ಮಾತ್ರ ಬಳಸಲಾಗುವುದು. ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ನಾವು ಕೃಷ್ಣಾದಿಂದ ನೀರನ್ನು ತರಲು ಸಾಧ್ಯವಿಲ್ಲ. ಹೀಗಾಗಿ ಕಾವೇರಿ ನಮ್ಮ ಮುಂದಿರುವ ಏಕೈಕ ಆಯ್ಕೆ” ಎಂದು ತಿಳಿಸಿದರು.

ಮೇಕೆದಾಟು ಯೋಜನೆ ರದ್ದುಗೊಳಿಸಲು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿರುವ ಬಗ್ಗೆ ಕೇಳಿದಾಗ, “ತಮಿಳುನಾಡಿನವರು ಕಳೆದ 40 ವರ್ಷಗಳಿಂದ ರಾಜಕೀಯ ಅಜೆಂಡಾ ಇಟ್ಟುಕೊಂಡಿದ್ದಾರೆ. ಅವರ ರಾಜಕೀಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಈ ವಿಚಾರದ ಬಗ್ಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಕಳೆದ ವರ್ಷ 400ಕ್ಕೂ ಹೆಚ್ಚು ಟಿಎಂಸಿ ಹೆಚ್ಚುವರಿ ನೀರು ಸಮುದ್ರ ಸೇರಿದೆ.

ಅವರು ಕೆಳ ಹಂತದಲ್ಲಿ ಸಾಕಷ್ಟು ಅಣೆಕಟ್ಟು ನಿರ್ಮಾಣ ಮಾಡುತ್ತಿದ್ದು, ನಾವು ಯಾವುದಕ್ಕೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಅವರ ನೆಲದಲ್ಲಿ ಅವರು ನಿರ್ಮಿಸಿಕೊಳ್ಳುತ್ತಿದ್ದಾರೆ. ಇದೇ ವಿಚಾರ ಸುಪ್ರೀಂ ಕೋರ್ಟ್ ನಲ್ಲೂ ಚರ್ಚೆಯಾಗಿದೆ. ಈ ಯೋಜನೆಗೆ ನಾವು ಯಾವುದೇ ಆರ್ಥಿಕ ನೆರವಾಗಲಿ ಇತರೆ ವಿಚಾರವನ್ನು ಕೇಳುತ್ತಿಲ್ಲ. ಈ ಯೋಜನೆಯಿಂದ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವುದು ಇಂಧನ ಕ್ಷೇತ್ರದಲ್ಲಿ ನಮಗೆ ಅನುಕೂಲ ಮಾಡಿಕೊಡಲಿದೆ” ಎಂದರು.

ತಮಿಳುನಾಡು ಜೊತೆ ಯಾವಾಗ ಬೇಕಾದರೂ ಚರ್ಚೆಗೆ ಸಿದ್ಧ

ಈ ವಿಚಾರವಾಗಿ ತಮಿಳುನಾಡು ಜೊತೆ ಚರ್ಚೆ ಮಾಡುತ್ತೀರಾ ಎಂದು ಕೇಳಿದಾಗ, “ಯಾವಾಗ ಬೇಕಾದರೂ ಅವರ ಜೊತೆ ಮಾತನಾಡಲು ಸಿದ್ಧನಿದ್ದೇನೆ, ತಮಿಳುನಾಡು, ಕರ್ನಾಟಕದವರು ಭಾರತೀಯರು. ನಾವು ಕಾವೇರಿ ನೀರು ಕುಡಿಯಬೇಕು. ತಮಿಳುನಾಡಿನಿಂದ ಇಲ್ಲಿಗೆ ಬಂದು ವೃತ್ತಿ ಮಾಡುತ್ತಿರುವ ಅನೇಕ ಜನರಿದ್ದಾರೆ. ಇಲ್ಲಿಂದ ಹೋಗಿ ಅಲ್ಲಿ ಕೆಲಸ ಮಾಡುತ್ತಿರುವವರೂ ಇದ್ದಾರೆ. ನಾವು ಅವರನ್ನು ಪ್ರತ್ಯೇಕಿಸುವುದಿಲ್ಲ. ಸಮತೋಲಿತ ಜಲಾನಯನ ನಿರ್ಮಾಣದಿಂದ ಕಷ್ಟ ಕಾಲದಲ್ಲಿ ತಮಿಳುನಾಡಿನ ಪಾಲಿನ ನೀರನ್ನು ಹರಿಸಲು ನೆರವಾಗುತ್ತದೆ. ಅತಿ ಕಡಿಮೆ ವೆಚ್ಚದಲ್ಲಿ ಯೋಜನೆ ಆಗುವ ವಿಶ್ವಾಸವಿದೆ” ಎಂದು ತಿಳಿಸಿದರು.

ನಮ್ಮ ಎಲ್ಲಾ ಸಂಸದರು ಒಗ್ಗಟ್ಟಾಗಿ ಹೋರಾಡುವ ವಿಶ್ವಾಸವಿದೆ

ತಮಿಳುನಾಡು ಅನಗತ್ಯ ಕ್ಯಾತೆ ತೆಗೆಯುತ್ತಿಲ್ಲವೇ ಎಂದು ಕೇಳಿದಾಗ, “ಅವರು ರಾಜಕೀಯ ಉಳಿವಿಗಾಗಿ ಧ್ವನಿ ಎತ್ತುತ್ತಿದ್ದಾರೆ. ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ತೀರ್ಪು ಬಂದ ಬಳಿಕ ಮತ್ತೇನಿದೆ? ಕರ್ನಾಟಕ 177 ಟಿಎಂಸಿ ನೀರು ಬಿಡಬೇಕು ಎಂದು ನೀಡಿದ ನಿರ್ದೇಶನವನ್ನು ನಾವು ಒಪ್ಪಿಕೊಳ್ಳಲಿಲ್ಲವೇ?” ಎಂದು ತಿಳಿಸಿದರು.

ರಾಜ್ಯದ ಬಿಜೆಪಿ ಸಂಸದರು ಇದರ ಬಗ್ಗೆ ಹೋರಾಟ ಮಾಡಬೇಕಲ್ಲವೇ ಎಂದಾಗ, “ಅವರು ಹೋರಾಟ ಮಾಡುತ್ತಾರೆ. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಕಾಂಗ್ರೆಸ್, ಬಿಜೆಪಿ, ದಳ ಎಲ್ಲಾ ಸಂಸದರು ಒಗ್ಗಟ್ಟಾಗಿ ನಮ್ಮ ರಾಜ್ಯದ ಹಿತ ಕಾಪಾಡುತ್ತಾರೆ ಎಂಬ ವಿಶ್ವಾಸ ನಮಗಿದೆ” ಎಂದು ತಿಳಿಸಿದರು.

ತಮಿಳುನಾಡಿನಲ್ಲಿ ನಿಮ್ಮ ಮೈತ್ರಿ ಇದೆ ಎಂದು ಕೇಳಿದಾಗ, “ನಾವು ಅವರಿಗೆ ಏನು ಮನವಿ ಮಾಡಬೇಕೋ ಮನವಿ ಮಾಡುತ್ತೇವೆ. ಇಲ್ಲಿ ರಾಜಕಾರಣ ಏನಿಲ್ಲ. ಎರಡು ರಾಜ್ಯಗಳ ಜನರ ಹಿತ ಕಾಪಾಡಿಕೊಂಡು ಹೋಗೋಣ” ಎಂದರು.

ಪರಿಷತ್ ಚುನಾವಣೆ ಅಡ್ಡಮತದಾನದ ಅಗತ್ಯವಿಲ್ಲ

ಪರಿಷತ್ ಚುನಾವಣೆಯಲ್ಲಿ ಬಹಳಷ್ಟು ತಂತ್ರಗಾರಿಕೆ ಮಾಡಲಾಗಿದೆ ಎಂದು ಕೇಳಿದಾಗ, “ನಾವು ಯಾವುದೇ ತಂತ್ರಗಾರಿಕೆ ಮಾಡಿಲ್ಲ. ಅದರ ಅವಶ್ಯಕತೆ ಇಲ್ಲ. ಎಲ್ಲರೂ ಪ್ರಜ್ಞಾವಂತರು, ಬುದ್ಧಿವಂತರಿದ್ದು, ಜನರ ಪ್ರತಿನಿಧಿಗಳಾಗಿದ್ದಾರೆ. ಅವರು ತಮ್ಮ ಸ್ವಇಚ್ಛೇ ಮೇಲೆ ಯಾರಿಗೆ ಮತ ಹಾಕಬೇಕೋ ಹಾಕಿದ್ದಾರೆ. ನಾನು ನಮ್ಮ ಶಾಸಕರ ಜೊತೆ ಎರಡು ದಿನ ಕಾಲ ಕಳೆದಿದ್ದೇನೆ ಹೊರತು, ಬೇರೆ ಯಾವ ತಂತ್ರಗಾರಿಕೆ ಮಾಡಿಲ್ಲ” ಎಂದು ತಿಳಿಸಿದರು.

ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಿಂದ ಕಾಂಗ್ರೆಸ್ ಅಭ್ಯರ್ಥಿಗೆ ಅಡ್ಡಮತದಾನ ನಡೆದಿದೆ ಎಂಬ ವಿಚಾರವಾಗಿ ಕೇಳಿದಾಗ, “ನಾವು ಯಾವುದೇ ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ, ಅದರ ಬಗ್ಗೆ ಮಾಹಿತಿಯೂ ಇಲ್ಲ. ಇದು ರಹಸ್ಯ ಮತವಾಗಿದ್ದು, ಫಲಿತಾಂಶ ಬರುವವರೆಗೂ ಕಾಯೋಣ. ಅಡ್ಡಮತದಾನ ಯಾವ ಕಾರಣಕ್ಕೆ ಆಗುತ್ತದೆ? ನಮ್ಮ ಶಾಸಕರ ಮತವನ್ನು ನಮ್ಮ ಅಭ್ಯರ್ಥಿಗೆ ಹಾಕುವಂತೆ ಕೇಳಿಕೊಂಡಿದ್ದೇವೆ. ಅಭ್ಯರ್ಥಿಗಳು ಏನೇನು ಮಾಡಿಕೊಂಡಿದ್ದಾರೋ ಗೊತ್ತಿಲ್ಲ” ಎಂದರು.

ರೆಸಾರ್ಟ್ ಸೇರಿದ್ದರ ಬಗ್ಗೆ ಕೇಳಿದಾಗ, “ಪರಿಷತ್ ಚುನಾವಣೆಯಲ್ಲಿ ಹೇಗೆ ಮತದಾನ ಮಾಡಬೇಕು ಎಂದು ಮಾರ್ಗದರ್ಶನ ಹಾಗೂ ತರಬೇತಿ ನೀಡಿದ್ದೇವೆ. ಇಲ್ಲಿ ಆದ್ಯತೆ ಮತ ಚಲಾವಣೆಯಲ್ಲಿ ಗುರುತು ಮಾಡುವಾಗ ಅನೇಕ ವ್ಯತ್ಯಾಸಗಳಾಗುತ್ತವೆ. ನಮ್ಮಲ್ಲಿ 60-70 ಶಾಸಕರು ಹೊಸಬರಾಗಿದ್ದು, ಅವರಿಗೆ ಆದ್ಯತೆ ಮತದ ಬಗ್ಗೆ ಅರಿವು ಮೂಡಿಸಿದ್ದೇವೆ. ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸುಮಾರು 7-8 ಸಾವಿರ ಮತಗಳು ತಿರಸ್ಕೃತಗೊಳ್ಳುತ್ತವೆ” ಎಂದು ತಿಳಿಸಿದರು.

ಬಿಜೆಪಿ ಉಚ್ಛಾಟಿತ ಶಾಸಕರು ನಿಮ್ಮ ಜೊತೆ ಕಾಣಿಸಿಕೊಂಡಿದ್ದಾರೆ ಎಂದು ಕೇಳಿದಾಗ, “ರಾಜ್ಯದ 224 ಶಾಸಕರೂ ನನ್ನ ಜೊತೆ ಆತ್ಮೀಯರಾಗಿದ್ದಾರೆ. ನಾನು 224 ಶಾಸಕರಿಗೂ ಮುಖ್ಯಮಂತ್ರಿ. ನಾನು ಒಂದು ಪಕ್ಷಕ್ಕೆ ಮುಖ್ಯಮಂತ್ರಿ ಅಲ್ಲ. ಎಲ್ಲರೂ ನಮ್ಮ ಸಹೋದರರೇ” ಎಂದು ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಇದ್ದೇವೆ ಎಂದು ತಿಳಿಸಿದ್ದಾರೆ ಎಂದು ಕೇಳಿದಾಗ, “ಇದು ಗೌಪ್ಯ ಮತದಾನವಾಗಿರುವುದರಿಂದ ಅವರು ಯಾರಿಗೆ ಮತ ಹಾಕಿದ್ದಾರೆ ಎಂದು ನಮಗೆ ಗೊತ್ತಿಲ್ಲ. ನಾನು ದುರ್ಬಿನು ಹಾಕಿ ನೋಡಲು ಸಾಧ್ಯವಿಲ್ಲ” ಎಂದು ತಿಳಿಸಿದರು.

ಅಸೂಯೆಗೆ ಮದ್ದಿಲ್ಲ

ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, “ಅಸಂಬದ್ಧ ಹೇಳಿಕೆಗಳಿಗೆಲ್ಲ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈ ರೀತಿ ಮಾತನಾಡುವುದು ಅವರ ಮಟ್ಟಕ್ಕೆ ಸರಿಯಲ್ಲ ಅಥವಾ ಈ ಮಟ್ಟಕ್ಕೆ ಇಳಿದು ಅವರು ಮಾತನಾಡಬಾರದು. ಈ ಮಾತುಗಳು ಅವರ ಘನತೆಗೆ ಸೂಕ್ತವಾದುದಲ್ಲ. ಅವರು ತಮ್ಮ ಹಿರಿತನ ಕಾಪಾಡಿಕೊಂಡು ಹೋದರೆ ಒಳ್ಳೆಯದು. ಅಸೂಯೆಗೆ ಮದ್ದಿಲ್ಲ ಎಂದಷ್ಟೇ ನಾನು ಹೇಳಬಹುದು” ಎಂದು ತಿಳಿಸಿದರು. ದೆಹಲಿಗೆ ಹೋಗುತ್ತಿದ್ದೀರಾ ಎಂದು ಕೇಳಿದಾಗ, “ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಿದ್ದೇನೆ” ಎಂದು ತಿಳಿಸಿದರು.

ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ: ಜಾಮೀನು ರದ್ದು ಅರ್ಜಿ ತೀರ್ಪು ಜೂನ್ 30ಕ್ಕೆ ಕಾಯ್ದಿರಿಸಿದ ನ್ಯಾಯಾಲಯ

ದಾವಣಗೆರೆ: ಹರಿಹರದ ವಚನಾನಂದ ಸ್ವಾಮೀಜಿ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ರದ್ದುಪಡಿಸುವ ಅರ್ಜಿಗೆ ಸಂಬಂಧಿಸಿದಂತೆ ದಾವಣಗೆರೆಯ ವಿಶೇಷ ಪೋಕ್ಸೋ ನ್ಯಾಯಾಲಯ ತನ್ನ ಆದೇಶವನ್ನು ಜೂನ್ 30ಕ್ಕೆ ಕಾಯ್ದಿರಿಸಿದೆ.

ವಚನಾನಂದ ಸ್ವಾಮೀಜಿಗೆ ನೀಡಲಾಗಿರುವ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸುವಂತೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಜೂನ್ 11ರಂದು ಪೂರ್ಣಗೊಂಡಿದ್ದು, ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.

ಈ ಕುರಿತು ಮಾಹಿತಿ ನೀಡಿದ ಸ್ವಾಮೀಜಿ ಪರ ವಕೀಲ ಎಸ್.ವಿ. ಪಾಟೀಲ್, ಜೂನ್ 23ರಂದು ಹೈಕೋರ್ಟ್‌ನಲ್ಲಿ ವಚನಾನಂದ ಸ್ವಾಮೀಜಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದ್ದು, ಅದರ ನಂತರ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯ ಜೂನ್ 30ರಂದು ತನ್ನ ಆದೇಶ ಪ್ರಕಟಿಸಲಿದೆ ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ, ಸಂತ್ರಸ್ತ ಬಾಲಕನ ತಾಯಿಯೂ ವಚನಾನಂದ ಸ್ವಾಮೀಜಿಗೆ ನೀಡಿರುವ ಜಾಮೀನನ್ನು ರದ್ದುಪಡಿಸುವಂತೆ ಜೂನ್ 6ರಂದು ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರವನ್ನು ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯದ ಗಮನಕ್ಕೆ ತರದ ಕಾರಣ ನ್ಯಾಯಾಲಯದ ಆದೇಶ ಪ್ರಕಟಿಸುವ ಪ್ರಕ್ರಿಯೆ ಮುಂದೂಡಿಕೆಯಾಗಿದೆ ಎನ್ನಲಾಗಿದೆ.

ಜೂನ್ 23ರಂದು ಹೈಕೋರ್ಟ್‌ನಲ್ಲಿ ಜಾಮೀನು ರದ್ದುಪಡಿಸುವ ಅರ್ಜಿಯ ವಿಚಾರಣೆ ನಡೆಯಲಿದ್ದು, ವಚನಾನಂದ ಸ್ವಾಮೀಜಿ ತಮ್ಮ ವಕೀಲರೊಂದಿಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.

 

ಯತ್ನಾಳ್ ಮತ ಅಸಿಂಧುಗೊಳಿಸುವಂತೆ ಕಾಂಗ್ರೆಸ್ ಆಕ್ಷೇಪ; ಚುನಾವಣಾಧಿಕಾರಿಗಳು ಹೇಳಿದ್ದೇನು..?

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮತವನ್ನು ಅಸಿಂಧುಗೊಳಿಸಬೇಕೆಂದು ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಆಕ್ಷೇಪವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ.

ಯತ್ನಾಳ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ಬಹಿರಂಗ ಪತ್ರ ಬರೆದಿರುವುದನ್ನು ಉಲ್ಲೇಖಿಸಿ, ಅವರು ಚುನಾವಣಾ ನಿಯಮಗಳಲ್ಲಿನ ರೂಲ್ 39 ಅನ್ನು ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ವಾದಿಸಿತ್ತು. ಈ ಹಿನ್ನೆಲೆಯಲ್ಲಿ ಅವರ ಮತವನ್ನು ಅಮಾನ್ಯಗೊಳಿಸಬೇಕು ಎಂದು ಒತ್ತಾಯಿಸಿತ್ತು.

ಆದರೆ, ವಿಚಾರಣೆ ನಡೆಸಿದ ಚುನಾವಣಾಧಿಕಾರಿಗಳು ಮತಗಟ್ಟೆಯೊಳಗೆ ಯಾವುದೇ ರೀತಿಯ ನಿಯಮ ಉಲ್ಲಂಘನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿ ಕಾಂಗ್ರೆಸ್‌ನ ಆಕ್ಷೇಪವನ್ನು ತಳ್ಳಿ ಹಾಕಿದರು.

ಇದೇ ವೇಳೆ, ಕರ್ನಾಟಕ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ನಡೆದ ಚುನಾವಣೆಯ ಮತದಾನ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಬಸವರಾಜ್ ರಾಯರೆಡ್ಡಿ ಕೊನೆಯದಾಗಿ ಮತ ಚಲಾಯಿಸುವ ಮೂಲಕ ಮತದಾನಕ್ಕೆ ತೆರೆ ಬಿದ್ದಿದೆ.

ಬೆಂಗಳೂರು ರಸ್ತೆಗಳಿಗೆ ₹2,000 ಕೋಟಿ ಮರುಡಾಂಬರೀಕರಣ ಯೋಜನೆ: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ನಗರದ ಹಾಳಾಗಿರುವ ಆಂತರಿಕ ರಸ್ತೆಗಳನ್ನು ಸುಧಾರಿಸುವ ಉದ್ದೇಶದಿಂದ ಐದು ನಗರ ಪಾಲಿಕೆ ವಲಯಗಳ ರಸ್ತೆಗಳಿಗೆ ಸುಮಾರು ₹2,000 ಕೋಟಿ ವೆಚ್ಚದಲ್ಲಿ ಮರುಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಐದು ವಲಯ ಆಯುಕ್ತರು ಹಾಗೂ ಕಸ ನಿರ್ವಹಣಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ನಗರದ ಆಂತರಿಕ ರಸ್ತೆಗಳನ್ನು ಉತ್ತಮ ಸ್ಥಿತಿಗೆ ತರುವುದೇ ನಮ್ಮ ಪ್ರಮುಖ ಗುರಿಯಾಗಿದೆ” ಎಂದರು.

ನಗರದ ವಿವಿಧ ಭಾಗಗಳಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಮೊದಲು ಗುರುತಿಸಿ, ಅವುಗಳ ದುರಸ್ತಿ ವೆಚ್ಚದ ಅಂದಾಜು ಸಿದ್ಧಪಡಿಸಲಾಗುವುದು. ಬಳಿಕ ಅಲ್ಪಾವಧಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಶೀಘ್ರವಾಗಿ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

ವಾರ್ಡ್ ಮಟ್ಟದ ರಸ್ತೆ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ನೀಡಿದ್ದು, ಯೋಜನೆ ಯಶಸ್ವಿಯಾಗಲು ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದು ಹೇಳಿದರು.

ನಗರದಲ್ಲಿ ಕಸ ಸಮಸ್ಯೆ ಕಡಿಮೆ ಮಾಡಲು ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡಿದ ಸಚಿವರು, ನಿಮ್ಮ ಪ್ರದೇಶಕ್ಕೆ ಕಸದ ವಾಹನ ಬರದಿದ್ದರೆ ನಮ್ಮ ಗಮನಕ್ಕೆ ತರಿರಿ. ಕಸದ ವಾಹನ ನಿಯಮಿತವಾಗಿ ಬರುವಂತೆ ಮಾಡುವುದು ನಮ್ಮ ಜವಾಬ್ದಾರಿ. ಆದರೆ ವಾಹನ ಬಂದ ಬಳಿಕವೂ ಕಸವನ್ನು ರಸ್ತೆ ಬದಿಯಲ್ಲಿ ಎಸೆಯುವುದು ನಗರದ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕ ಎಂದು ಎಚ್ಚರಿಸಿದರು.

ನಾವು ನಮ್ಮ ವ್ಯವಸ್ಥೆಯನ್ನು ಸುಧಾರಿಸಲು ಬದ್ಧರಾಗಿದ್ದೇವೆ. ಸಾರ್ವಜನಿಕರೂ ಜವಾಬ್ದಾರಿಯಿಂದ ನಡೆದುಕೊಂಡರೆ ಮಾತ್ರ ಬೆಂಗಳೂರು ಮತ್ತಷ್ಟು ಸ್ವಚ್ಛ ಹಾಗೂ ಸುಂದರ ನಗರವಾಗಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ, ಆತ್ಮಸಾಕ್ಷಿಯಂತೆ ನಿರ್ಧಾರ ತೆಗೆದುಕೊಂಡೆ: ಎಸ್.ಟಿ. ಸೋಮಶೇಖರ್

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿರುವುದಾಗಿ ಶಾಸಕ ಎಸ್.ಟಿ. ಸೋಮಶೇಖರ್ ಬಹಿರಂಗವಾಗಿ ತಿಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮತ್ತು ಜನರ ಹಿತದೃಷ್ಟಿಯಿಂದಲೇ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ.

ಮತದಾನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸೋಮಶೇಖರ್, ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿ ಮತ ಕೇಳಿಲ್ಲ. ಸಂಪರ್ಕವೇ ಮಾಡದಿದ್ದರೆ ಮತ ಹೇಗೆ ಸಿಗುತ್ತದೆ? ಯಾರು ಮನವಿ ಮಾಡುತ್ತಾರೆ, ಅವರ ಪರವಾಗಿ ಮತದಾನ ಆಗುತ್ತದೆ ಎಂದು ಹೇಳಿದರು.

ನನ್ನ ಕ್ಷೇತ್ರದ ಅಭಿವೃದ್ಧಿ ಹಾಗೂ ಅನುದಾನದ ವಿಚಾರವಾಗಿ ಕಾಂಗ್ರೆಸ್ ಸರ್ಕಾರದೊಂದಿಗೆ ಸಹಕಾರ ಹೊಂದಿದ್ದೇನೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ಮಾಡಿ ಮತ ಹಾಕುವಂತೆ ಮನವಿ ಮಾಡಿದ್ದರು. ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದರು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಯ ಪರ ಮತ ಚಲಾಯಿಸಿದ್ದೇನೆ. ಇದು ನನ್ನ ಆತ್ಮಸಾಕ್ಷಿಯ ನಿರ್ಧಾರ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಶಾಸಕ ಶಿವರಾಮ್ ಹೆಬ್ಬಾರ್ ಕೂಡ ಪ್ರತಿಕ್ರಿಯಿಸಿ, “ಬಿಜೆಪಿ ಅಥವಾ ಜೆಡಿಎಸ್‌ನವರು ನನ್ನ ಬಳಿ ಮತ ಕೇಳಿಲ್ಲ. ಕಾಂಗ್ರೆಸ್ ನಾಯಕರು ಮಾತ್ರ ಸಂಪರ್ಕಿಸಿ ಮನವಿ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದ್ದಾರೆ. ನಾನು ಯಾರಿಗೆ ಮತ ಹಾಕಿದ್ದೇನೆ ಎಂಬುದನ್ನು ಬಹಿರಂಗಪಡಿಸುವುದಿಲ್ಲ. ಆತ್ಮಸಾಕ್ಷಿಯಂತೆ ಮತ ಚಲಾಯಿಸಿದ್ದೇನೆ ಅಷ್ಟೇ” ಎಂದು ಹೇಳಿದರು.

ಅನುಮತಿ ಇಲ್ಲದೆ ಖಾಸಗಿ ಫೋಟೋ, ವೀಡಿಯೊ ಹಂಚಿಕೊಂಡ್ರೆ ತಕ್ಷಣ FIR: ಪೊಲೀಸ್ ಠಾಣೆಗಳಿಗೆ ಡಿಜಿ-ಐಜಿಪಿ ಖಡಕ್ ಸೂಚನೆ

ಬೆಂಗಳೂರು: ವ್ಯಕ್ತಿಯೊಬ್ಬರ ಅನುಮತಿಯಿಲ್ಲದೆ ಅವರ ಖಾಸಗಿ ಫೋಟೋಗಳು ಅಥವಾ ಆಪ್ತ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಇತರೆ ಮಾಧ್ಯಮಗಳ ಮೂಲಕ ಹಂಚಿಕೊಳ್ಳುವ ಪ್ರಕರಣಗಳಲ್ಲಿ ತಕ್ಷಣ ಎಫ್‌ಐಆರ್ ದಾಖಲಿಸಬೇಕು ಎಂದು ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಐಜಿಪಿ ಎಂ.ಎ. ಸಲೀಮ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಆನ್‌ಲೈನ್ ಬ್ಲ್ಯಾಕ್‌ಮೇಲ್, ರಿವೆಂಜ್ ಪೋರ್ನೋಗ್ರಫಿ ಹಾಗೂ ಸೆಕ್ಸ್ಟಾರ್ಷನ್‌ಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಿಕೊಳ್ಳುವಲ್ಲಿ ಕೆಲ ಪೊಲೀಸ್ ಠಾಣೆಗಳಲ್ಲಿ ವಿಳಂಬ ಅಥವಾ ನಿರಾಕರಣೆ ನಡೆಯುತ್ತಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಜೂನ್‌ 16ರಂದು ಈ ಮಹತ್ವದ ಆದೇಶ ಹೊರಡಿಸಲಾಗಿದೆ.

ಕೆಲವು ಪ್ರಕರಣಗಳಲ್ಲಿ ಸಂತ್ರಸ್ತರು ಹಿಂದೆ ಫೋಟೋ ಅಥವಾ ವಿಡಿಯೊ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣವನ್ನು ಮುಂದಿಟ್ಟುಕೊಂಡು ದೂರು ಸ್ವೀಕರಿಸಲು ನಿರಾಕರಿಸಲಾಗುತ್ತಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಜಿಪಿ, ಚಿತ್ರ ಅಥವಾ ವಿಡಿಯೊ ಚಿತ್ರೀಕರಣಕ್ಕೆ ಒಪ್ಪಿಗೆ ನೀಡುವುದು ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಒಪ್ಪಿಗೆ ನೀಡುವುದು ಎರಡು ವಿಭಿನ್ನ ಕಾನೂನು ಪರಿಕಲ್ಪನೆಗಳಾಗಿವೆ ಎಂದು ಹೇಳಿದ್ದಾರೆ.

“ಸಂತ್ರಸ್ತರು ಆರಂಭದಲ್ಲಿ ಫೋಟೋ ಅಥವಾ ವಿಡಿಯೊ ತೆಗೆಯಲು ಒಪ್ಪಿಗೆ ನೀಡಿದ್ದರೂ, ನಂತರ ಅವರ ಅನುಮತಿಯಿಲ್ಲದೆ ಅದನ್ನು ಮೂರನೇ ವ್ಯಕ್ತಿಗೆ ಕಳುಹಿಸುವುದು ಅಥವಾ ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಗಂಭೀರ ಅಪರಾಧವಾಗಿದೆ” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಸಂತ್ರಸ್ತರ ಹಿಂದಿನ ಒಪ್ಪಿಗೆಯನ್ನು ನೆಪವನ್ನಾಗಿ ಮಾಡಿಕೊಂಡು ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಬಾರದು ಅಥವಾ ದೂರು ತಿರಸ್ಕರಿಸಬಾರದು ಎಂದು ಡಿಜಿಪಿ ಸ್ಪಷ್ಟ ಸೂಚನೆ ನೀಡಿದ್ದಾರೆ.

ಆದೇಶದಲ್ಲಿ 2017ರ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ‘ಜಸ್ಟಿಸ್ ಕೆ.ಎಸ್. ಪುಟ್ಟಸ್ವಾಮಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ’ ತೀರ್ಪನ್ನು ಉಲ್ಲೇಖಿಸಲಾಗಿದೆ. ವೈಯಕ್ತಿಕ ಖಾಸಗಿತನ, ದೇಹದ ಗೌಪ್ಯತೆ ಹಾಗೂ ವೈಯಕ್ತಿಕ ಮಾಹಿತಿಯ ಹಂಚಿಕೆಯನ್ನು ನಿಯಂತ್ರಿಸುವ ಹಕ್ಕು ಸಂವಿಧಾನದ ವಿಧಿ 21ರ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ ಎಂದು ನೆನಪಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್‌ 77ರ ಪ್ರಕಾರ, ವ್ಯಕ್ತಿಯ ಖಾಸಗಿ ದೃಶ್ಯಗಳನ್ನು ಅನುಮತಿಯಿಲ್ಲದೆ ಹಂಚಿಕೊಳ್ಳುವುದು ‘ವೊಯರಿಸಂ’ (Voyeurism) ಅಪರಾಧದ ವ್ಯಾಪ್ತಿಗೆ ಬರುತ್ತದೆ. ಇಂತಹ ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದೇ ವೇಳೆ, ಸೆಕ್ಸ್ಟಾರ್ಷನ್, ಬ್ಲ್ಯಾಕ್‌ಮೇಲ್, ರಿವೆಂಜ್ ಪೋರ್ನೋಗ್ರಫಿ ಸೇರಿದಂತೆ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ದೂರುಗಳ ಮೇಲೆ ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ತೋರಿದರೆ ಅಥವಾ ಎಫ್‌ಐಆರ್ ದಾಖಲಿಸಲು ನಿರಾಕರಿಸಿದರೆ ಸಂಬಂಧಿತ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಿಜಿಪಿ ಹಾಗೂ ಐಜಿಪಿ ಎಂ.ಎ. ಸಲೀಮ್ ಎಚ್ಚರಿಕೆ ನೀಡಿದ್ದಾರೆ.

ಅಮಾಯಕರ ಹಣ ಲೂಟಿ ಮಾಡುವ ಸೈಬರ್ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಅಗತ್ಯ: ಸುಪ್ರೀಂ ಕೋರ್ಟ್

0

ನವದೆಹಲಿ: ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅಮಾಯಕರನ್ನು ವಂಚಿಸಿ ಹಣ ದೋಚುವ ಸೈಬರ್ ಅಪರಾಧಿಗಳನ್ನು “ಸಮಾಜದ ಪರಾವಲಂಬಿಗಳು” ಎಂದು ಕರೆದಿದೆ. ಇಂತಹ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಜೈಲಿನಲ್ಲಿಡುವುದು ಸಮಾಜದ ಹಿತದೃಷ್ಟಿಯಿಂದ ಅಗತ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗಳನ್ನು ಒಗ್ಗೂಡಿಸಿ ಒಂದೇ ಸ್ಥಳದಲ್ಲಿ ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ವಿ. ಮೋಹನ್ ಅವರಿದ್ದ ನ್ಯಾಯಪೀಠ ವಜಾಗೊಳಿಸಿತು.

ವಿಚಾರಣೆ ವೇಳೆ ನ್ಯಾಯಪೀಠ, ಸೈಬರ್ ವಂಚಕರು ಅಮಾಯಕರ ಹಣವನ್ನು ಕಸಿದುಕೊಳ್ಳುವ ಪರಾವಲಂಬಿಗಳು. ಇಂತಹ ಅಪರಾಧಿಗಳ ವಿರುದ್ಧ ನ್ಯಾಯಾಂಗ ಕಠಿಣ ನಿಲುವು ತಾಳಬೇಕಿದೆ. ದೇಶದಾದ್ಯಂತ ಸಾವಿರಾರು ಜನರು ಇವರ ವಂಚನೆಗೆ ಬಲಿಯಾಗುತ್ತಿದ್ದಾರೆ. ಒಂದು ರಾಜ್ಯದಲ್ಲಿ ವಂಚನೆ ನಡೆಸಿ ಮತ್ತೊಂದು ರಾಜ್ಯಕ್ಕೆ ಪರಾರಿಯಾಗುವುದು ಸಾಮಾನ್ಯವಾಗಿದೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಕಟುವಾಗಿ ಅಭಿಪ್ರಾಯ ವ್ಯಕ್ತಪಡಿಸಿತು.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ತಮಿಳುನಾಡಿನಲ್ಲಿ ವಂಚನೆ ಎಸಗಿ ಬಳಿಕ ಜಮ್ಮು-ಕಾಶ್ಮೀರ ಅಥವಾ ಈಶಾನ್ಯ ರಾಜ್ಯಗಳಿಗೆ ಪರಾರಿಯಾಗುವುದು ಇಂತಹ ಅಪರಾಧಿಗಳ ಸಾಮಾನ್ಯ ತಂತ್ರವಾಗಿದೆ. ಹಣ ಕಳೆದುಕೊಂಡವರು ಮಾತ್ರ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.

ಅರ್ಜಿದಾರನ ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠ, ಅಗತ್ಯವಿದ್ದರೆ ಸಂಬಂಧಿತ ರಾಜ್ಯಗಳ ಹೈಕೋರ್ಟ್‌ಗಳನ್ನು ಸಂಪರ್ಕಿಸಿ ಕಾನೂನು ಪರಿಹಾರ ಪಡೆಯಬಹುದು ಎಂದು ತಿಳಿಸಿತು.

ಇದೇ ವೇಳೆ ದೇಶದಾದ್ಯಂತ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ ಸೇರಿದಂತೆ ಸೈಬರ್ ವಂಚನೆ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಕೇಂದ್ರ ತನಿಖಾ ದಳ (ಸಿಬಿಐ) ಮೂಲಕ ಸಮಗ್ರ ತನಿಖೆ ನಡೆಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಸಂಬಂಧ ಸಿಬಿಐಗೆ ಅಗತ್ಯ ಸ್ವಾತಂತ್ರ್ಯ ನೀಡುವಂತೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ನ್ಯಾಯಪೀಠ ಸೂಚಿಸಿದೆ.