Home Blog Page 83

ಅದಾನಿ ವಿರುದ್ಧದ ಕ್ರಿಮಿನಲ್ ಪ್ರಕರಣ ಅಂತ್ಯ: ಅಮೆರಿಕ ನ್ಯಾಯಾಂಗದ ಮಹತ್ವದ ನಿರ್ಧಾರ!

ವಾಷಿಂಗ್ಟನ್: ಭಾರತದ ಪ್ರಮುಖ ಉದ್ಯಮಿ ಹಾಗೂ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿಗೆ ಅಮೆರಿಕದಿಂದ ಮಹತ್ವದ ಪರಿಹಾರ ಸಿಕ್ಕಿದೆ.

ಇವರ ವಿರುದ್ಧ ಇದ್ದ ಎಲ್ಲಾ ಕ್ರಿಮಿನಲ್ ವಂಚನೆ ಮತ್ತು ಲಂಚದ ಆರೋಪಗಳನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಶಾಶ್ವತವಾಗಿ ಕೈಬಿಟ್ಟಿದೆ ಎಂದು ವರದಿಯಾಗಿದೆ.

ನ್ಯೂಯಾರ್ಕ್‌ನಲ್ಲಿ ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ಧ ಹೈಪ್ರೊಫೈಲ್ ಸೆಕ್ಯೂರಿಟೀಸ್ ಮತ್ತು ವೈರ್ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಟರ್‌ಗಳಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೈಬಿಡಲಾಗಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ನ ಷೇರುಗಳು ಸಕಾರಾತ್ಮಕ ಚಲನೆಯನ್ನು ತೋರಿಸುತ್ತಿವೆ ಎಂದು ತಿಳಿದುಬಂದಿದೆ.

ಇದೇ ವೇಳೆ, ಪ್ರಕರಣ ಇತ್ಯರ್ಥವಾದ ನಂತರ ಅಮೆರಿಕದ ಆರ್ಥಿಕತೆಯಲ್ಲಿ ಸುಮಾರು 10 ಬಿಲಿಯನ್ ಡಾಲರ್ (ಅಂದಾಜು 83,000 ಕೋಟಿ ರೂ.) ಹೂಡಿಕೆ ಮಾಡುವುದಾಗಿ ಹಾಗೂ ಸುಮಾರು 15,000 ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಅದಾನಿ ಸಮೂಹ ಭರವಸೆ ನೀಡಿದೆ.

ಈ ಪ್ರಕರಣದ ಅಂತ್ಯವು ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆ ವಲಯದಲ್ಲೂ ಗಮನ ಸೆಳೆದಿದ್ದು, ಮುಂದಿನ ಬೆಳವಣಿಗೆಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಠಾಣೆಯಲ್ಲೇ ಕುಳಿತು ಟ್ರಾಫಿಕ್ ಕಂಟ್ರೋಲ್..!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ದಿನೇದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿರುವ ನಡುವೆ, ಲಕ್ಷ್ಮೇಶ್ವರ ಪೊಲೀಸ್ ಠಾಣೆ ತಂತ್ರಜ್ಞಾನ ಆಧಾರಿತ ಹೊಸ ಮಾದರಿಯ ಸಂಚಾರ ನಿಯಂತ್ರಣ ವ್ಯವಸ್ಥೆ ಜಾರಿಗೆ ತಂದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪುರಸಭೆಯ ಸಹಕಾರದೊಂದಿಗೆ ಪೊಲೀಸ್ ಇಲಾಖೆ “ಪಬ್ಲಿಕ್ ಅಡ್ರೆಸ್ ಸಿಸ್ಟಂ” ಬಳಸಿ ಠಾಣೆಯಲ್ಲೇ ಕುಳಿತು ಟ್ರಾಫಿಕ್ ನಿಯಂತ್ರಣ ಮಾಡುವ ವ್ಯವಸ್ಥೆ ಜಾರಿಗೆ ತಂದಿದೆ. ಪಟ್ಟಣದ ಪ್ರಮುಖ ವೃತ್ತಗಳು, ಮಾರುಕಟ್ಟೆ ಪ್ರದೇಶಗಳು ಹಾಗೂ ವಾಹನ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ಮೂಲಕ ಪೊಲೀಸ್ ಸಿಬ್ಬಂದಿ ವಾಹನ ಸಂಚಾರದ ಮೇಲೆ ನಿಗಾ ವಹಿಸುತ್ತಿದ್ದಾರೆ.

ವಾಹನ ದಟ್ಟಣೆ, ಅಡ್ಡಾದಿಡ್ಡಿ ಪಾರ್ಕಿಂಗ್, ರಸ್ತೆ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಕ್ಯಾಮರಾಗಳ ಮೂಲಕ ಗಮನಿಸಿ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತಿದೆ. ಧ್ವನಿವರ್ಧಕಗಳ ಮೂಲಕ “ವಾಹನಗಳನ್ನು ಸರಿಯಾಗಿ ನಿಲ್ಲಿಸಿ”, “ರಸ್ತೆ ಮಧ್ಯೆ ವಾಹನ ನಿಲ್ಲಿಸಬೇಡಿ”, “ಟ್ರಾಫಿಕ್ ನಿಯಮ ಪಾಲಿಸಿ” ಎಂಬ ಸೂಚನೆಗಳನ್ನು ಠಾಣೆಯಿಂದಲೇ ನೇರವಾಗಿ ನೀಡಲಾಗುತ್ತಿದೆ. ಸಂಚಾರ ದಟ್ಟಣೆ ಹೆಚ್ಚಾದಲ್ಲಿ ಸೈರನ್ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ.

ವಿಶೇಷವಾಗಿ ಶಾಲಾ-ಕಾಲೇಜು ಅವಧಿ, ಮಾರುಕಟ್ಟೆ ದಿನಗಳು ಹಾಗೂ ಹಬ್ಬದ ಸಂದರ್ಭಗಳಲ್ಲಿ ಈ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕೆಲವೆಡೆ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಧ್ವನಿವರ್ಧಕದ ಮೂಲಕವೇ ಎಚ್ಚರಿಕೆ ನೀಡಲಾಗುತ್ತಿದ್ದು, ಜನರು ಕೂಡ ಇದಕ್ಕೆ ಸ್ಪಂದಿಸುತ್ತಿದ್ದಾರೆ.

ಈ ವ್ಯವಸ್ಥೆಯನ್ನು ಪುರಸಭೆಯವರು ಸ್ವಚ್ಛತೆ, ಕರ ವಸೂಲಿ ಹಾಗೂ ಸಾರ್ವಜನಿಕ ಪ್ರಕಟಣೆಗಳಿಗೂ ಬಳಸಿಕೊಳ್ಳುತ್ತಿರುವುದು ವಿಶೇಷವಾಗಿದೆ.

62 ಸಿಸಿ ಕ್ಯಾಮರಾಗಳ ಕಣ್ಗಾವಲು

ಪಟ್ಟಣದಲ್ಲಿ ಈಗಾಗಲೇ ಪುರಸಭೆಯ ಸಹಯೋಗದಲ್ಲಿ ಅಳವಡಿಸಿರುವ 62 ಸಿಸಿ ಕ್ಯಾಮರಾಗಳು ಸಂಚಾರದ ಚಲನವಲನಗಳನ್ನು ಸೆರೆಹಿಡಿಯುತ್ತಿವೆ. ಅಲ್ಲದೇ ಗ್ರಾಮೀಣ ಭಾಗಗಳಲ್ಲಿ 38 ಹಾಗೂ ಪಟ್ಟಣ ಸಂಪರ್ಕಿಸುವ ರಸ್ತೆಗಳಲ್ಲಿ 3 ವಿಶೇಷ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಈ ಕ್ಯಾಮರಾಗಳ ಮೂಲಕ ಟ್ರಾಫಿಕ್ ಮಾತ್ರವಲ್ಲದೆ ಕಾನೂನುಬಾಹಿರ ಚಟುವಟಿಕೆ, ಅಕ್ರಮ ಸಾಗಾಣಿಕೆ, ಕಳ್ಳತನ ಹಾಗೂ ಅಪರಾಧ ಪ್ರಕರಣಗಳ ಮೇಲೂ ನಿಗಾ ಇಡಲಾಗುತ್ತಿದೆ.

ಪ್ರಮುಖ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಸುಧಾರಿಸಲು ಪೊಲೀಸರು ಕ್ರಮ ಕೈಗೊಂಡಿದ್ದರೂ ಕೆಲವರು ನಿಯಮ ಉಲ್ಲಂಘಿಸುತ್ತಿದ್ದಾರೆ. ಇಂತಹ ವಾಹನಗಳನ್ನು ಸೀಜ್ ಮಾಡಿ ತೆರವುಗೊಳಿಸಲು ಟೋಯಿಂಗ್ ವಾಹನ ವ್ಯವಸ್ಥೆ ದೊರಕಿದರೆ ಇನ್ನಷ್ಟು ಪರಿಣಾಮಕಾರಿ ಟ್ರಾಫಿಕ್ ನಿರ್ವಹಣೆ ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಪ್ರಮುಖ ಸ್ಥಳಗಳಲ್ಲಿ ಧ್ವನಿವರ್ಧಕ ಅಳವಡಿಕೆ

ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನ, ಸರಾಫ್ ಬಜಾರ್, ಭಾನು ಮಾರ್ಕೆಟ್, ಸೋಮೇಶ್ವರ ಪಾದಗಟ್ಟಿ, ಪುರಸಭೆ ಮುಂಭಾಗ, ಸರ್ಕಾರಿ ಆಸ್ಪತ್ರೆ ಕ್ರಾಸ್, ಶಿಗ್ಲಿ ನಾಕಾ, ಬಸ್ ನಿಲ್ದಾಣ ಹಾಗೂ ಪಂಪ ವೃತ್ತ ಸೇರಿದಂತೆ 10 ಪ್ರಮುಖ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ.

“ಕಡಿಮೆ ಸಿಬ್ಬಂದಿಯಲ್ಲಿಯೇ ಹತ್ತು ಜನರ ಕೆಲಸವನ್ನು ತಂತ್ರಜ್ಞಾನದ ಮೂಲಕ ನಿರ್ವಹಿಸಲು ಸಾಧ್ಯವಾಗುತ್ತಿದೆ.”

ನಾಗರಾಜ ಗಡದ, ಪಿಎಸ್‌ಐ, ಲಕ್ಷ್ಮೇಶ್ವರ

“ಸಿಸಿ ಕ್ಯಾಮರಾ-ಧ್ವನಿವರ್ಧಕ ಬಳಸಿ ಠಾಣೆಯಿಂದಲೇ ಟ್ರಾಫಿಕ್ ನಿಯಂತ್ರಿಸುವ ಕ್ರಮ ಇತರ ಪಟ್ಟಣಗಳಿಗೂ ಮಾದರಿಯಾಗಲಿದೆ.”

ಗಂಗಾಧರ ಮೆಣಸಿನಕಾಯಿ

ಬಿಜೆಪಿ ಪ್ರಧಾನ ಕಾರ್ಯದರ್ಶಿ

ನಗರಸಭೆ ವಿರುದ್ಧ ಎಸ್‌ಡಿಪಿಐ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಂಭವಿಸಿದ ಭಾರೀ ಬಿರುಗಾಳಿ ಸಹಿತ ಮಳೆಯಿಂದ ಅನೇಕ ಮನೆಗಳು ಹಾನಿಗೊಳಗಾಗಿದ್ದು, ಮನೆ ಕಳೆದುಕೊಂಡ ನಿರಾಶ್ರಿತ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಖಾಯಂ ವಸತಿ ಮನೆಗಳನ್ನು ಕಲ್ಪಿಸಬೇಕು ಎಂದು ಎಸ್‌ಡಿಪಿಐ ಪಕ್ಷದ ಗದಗ ವಿಧಾನಸಭಾ ಮತಕ್ಷೇತ್ರ ಸಮಿತಿ ಆಗ್ರಹಿಸಿದೆ.

ಈ ಸಂಬಂಧ ಎಸ್‌ಡಿಪಿಐ ಪಕ್ಷದ ಗದಗ ವಿಧಾನಸಭಾ ಮತಕ್ಷೇತ್ರ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ನಗರದ ಗಾಂಧಿ ವೃತ್ತದಿಂದ ಗದಗ-ಬೆಟಗೇರಿ ನಗರಸಭೆ ಕಚೇರಿವರೆಗೆ ಪಾದಯಾತ್ರೆ ನಡೆಸಲಾಯಿತು. ಪ್ರತಿಭಟನಾಕಾರರು ನಗರಸಭೆ ಆಡಳಿತ ವ್ಯವಸ್ಥೆ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಪೌರಾಯುಕ್ತರಿಗೆ ಮನವಿ ಸಲ್ಲಿಸಿ, ಬಿರುಗಾಳಿ ಹಾಗೂ ಮಳೆಯಿಂದ ಹಾನಿಗೊಂಡ ಮನೆಗಳಿಗೆ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಬೇಕು. ಸಾರ್ವಜನಿಕರ ಆಸ್ತಿ-ಪಾಸ್ತಿ ಹಾನಿಯನ್ನು ಸರಿಪಡಿಸಿ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.

ನಗರಾದ್ಯಂತ ಬೀದಿ ದೀಪಗಳ ಅವ್ಯವಸ್ಥೆ ಹಾಗೂ ಕಳಪೆ ಮಟ್ಟದ ರಸ್ತೆಗಳ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ. ಗದಗ-ಬೆಟಗೇರಿ ನಗರಸಭೆ ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಇಲಾಖೆಗಳಿಂದ ತ್ವರಿತ ಕಾರ್ಯಾಚರಣೆ ನಡೆಸಬೇಕು ಎಂದು ಮನವಿ ಮುಖಾಂತರ ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಗದಗ ವಿಧಾನಸಭಾ ಮತಕ್ಷೇತ್ರ ಸಮಿತಿ ಅಧ್ಯಕ್ಷ ಮುಸ್ತಾಕ್ ಹೊಸಮನಿ, ಕಾರ್ಯದರ್ಶಿ ಸಮೀರ್ ಕೊಟ್ಟೂರು, ಇಬ್ರಾಹಿಂ ಕುಂದರಪಿ, ಜಿಲ್ಹಾನಿ ಲಕ್ಕುಂಡಿ, ರಶೀದ್ ಕಟ್ಟಿಮನಿ, ಗದಗ ಜಿಲ್ಲಾ ಸಮಿತಿ ಉಪಾಧ್ಯಕ್ಷ ಹಾಗೂ ಹಿರಿಯ ಮುಖಂಡ ಹಿದಾಯತುಲ್ಲಾ ಕಾಗದಗಾರ, ವಿಮೆನ್ ಇಂಡಿಯಾ ಮೂವ್ಮೆಂಟ್ ಅಧ್ಯಕ್ಷೆ ಸುಮಯ್ಯ ಬಳ್ಳಾರಿ, ಗಂಗಿಮಡಿ ಸಾರ್ವಜನಿಕರು, ಸಂತ್ರಸ್ತರು ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ಉಪಸ್ಥಿತರಿದ್ದರು.

“ಪ್ರಕೃತಿ ವಿಕೋಪಕ್ಕೊಳಗಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಖಾಯಂ ವಸತಿ ಹಾಗೂ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಬೇಕು.”

ಮುಷ್ತಾಕ್ ಹೊಸಮನಿ, ಎಸ್‌ಡಿಪಿಐ ಮುಖಂಡ

“ಕರ್ನಾಟಕ ಪ್ರೆಸ್ ಕ್ಲಬ್‌ಗೆ ವೀರೇಶ್ ಅಂಗಡಿ ಸಾರಥ್ಯ!”

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಕರ್ನಾಟಕ ಪ್ರೆಸ್ ಕ್ಲಬ್‌ನ ಕೂಡ್ಲಿಗಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ವಿಜಯವಾಣಿ ವರದಿಗಾರ ವೀರೇಶ್ ಅಂಗಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಪ್ರೆಸ್ ಕ್ಲಬ್‌ನ ರಾಜ್ಯ ಉಪಾಧ್ಯಕ್ಷ ಕೆ. ಕೊಟ್ರೇಶ್, ರಾಜ್ಯಾಧ್ಯಕ್ಷ ಬಿಚ್ಚುಗತ್ತಿ ಖಾಜ್ ಹುಸೇನ್ ಹಾಗೂ ವಿಜಯನಗರ ಜಿಲ್ಲಾಧ್ಯಕ್ಷ ಕಾಕುಬಾಳು ಪ್ರಕಾಶ್ ಅವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ. ಕೊಟ್ರೇಶ್, ಪತ್ರಕರ್ತರ ಕಲ್ಯಾಣಕ್ಕಾಗಿ ಆರೋಗ್ಯ ವಿಮೆ ಯೋಜನೆ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪ್ರೋತ್ಸಾಹ ಧನ ಹಾಗೂ 55 ವರ್ಷ ಮೇಲ್ಪಟ್ಟ ಪತ್ರಕರ್ತರಿಗೆ ವಾರ್ಷಿಕ ₹5000 ಪ್ರೋತ್ಸಾಹ ಧನ ನೀಡುವ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಎಂ. ಮಂಜು ಮಯೂರ ಅವರನ್ನು ಕರ್ನಾಟಕ ಪ್ರೆಸ್ ಕ್ಲಬ್‌ನ ರಾಜ್ಯ ಕಾರ್ಯದರ್ಶಿಯಾಗಿ ಹಾಗೂ ಎಚ್. ವೀರಣ್ಣ ಅವರನ್ನು ವಿಜಯನಗರ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಪತ್ರ ವಿತರಿಸಲಾಯಿತು.

ಇತರೆ ಪದಾಧಿಕಾರಿಗಳ ಆಯ್ಕೆ

ಗೌರವ ಅಧ್ಯಕ್ಷರಾಗಿ ಕಾವಲಿ ಶಿವಪ್ಪ ನಾಯಕ (ಉದಯದಿಗಂತ), ಉಪಾಧ್ಯಕ್ಷರಾಗಿ ಎಲೆ ನಾಗರಾಜ್ (ಹೊಂಬೆಳಕು), ಖಜಾಂಚಿಯಾಗಿ ಎ.ಎಂ. ಸೋಮಶೇಖರಯ್ಯ (ಪ್ರಜಾವಾಣಿ), ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ. ವೀರೇಶ್ (ಸಂಯುಕ್ತ ಕರ್ನಾಟಕ), ಸಹ ಕಾರ್ಯದರ್ಶಿಯಾಗಿ ಬಿ. ನಾಗರಾಜ್ (ಹೊಸಪೇಟೆ ಟೈಮ್ಸ್), ಸಂಘಟನಾ ಕಾರ್ಯದರ್ಶಿಯಾಗಿ ಇಬ್ರಾಹಿಂ (ಬಳ್ಳಾರಿ ಬೆಳಗಾಯಿತು) ಅವರನ್ನು ಆಯ್ಕೆ ಮಾಡಲಾಯಿತು.

ಇದಲ್ಲದೆ ಬಗುಡಿ ಬಾಲಪ್ಪ (ಈ ನಮ್ಮ ಕನ್ನಡ ನಾಡು), ಶಿವು ಪ್ರಸಾದ್ (ಸಂಯುಕ್ತ ಕರ್ನಾಟಕ), ಎಸ್‌.ಎಂ. ರಿಯಾಜ್ ಬಾಷಾ (ವಿಜಯನಗರ ಟೈಮ್ಸ್) ಸೇರಿದಂತೆ ಹಲವರನ್ನು ಪದಾಧಿಕಾರಿಗಳಾಗಿ ನೇಮಕ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೊಟ್ಟೂರು ತಾಲೂಕಿನ ಪ್ರೆಸ್ ಕ್ಲಬ್ ಅಧ್ಯಕ್ಷ ಡಿ. ಸಿದ್ದಪ್ಪ, ಉಪಾಧ್ಯಕ್ಷ ತೆಗ್ಗಿನಕೇರಿ ಕೊಟ್ರೇಶ್, ಹೆಚ್‌. ದಾದಾಪೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಪತ್ರಕರ್ತರ ಹಿತಾಸಕ್ತಿ ಮತ್ತು ಭದ್ರತೆಗಾಗಿ ಸಂಘಟಿತ ಹೋರಾಟ ಮುಂದುವರೆಯಲಿದೆ.”

ಕೆ. ಕೊಟ್ರೇಶ್ರಾ

ಜ್ಯ ಉಪಾಧ್ಯಕ್ಷ, ಕರ್ನಾಟಕ ಪ್ರೆಸ್ ಕ್ಲಬ್

₹23 ಕೋಟಿ ಅಕ್ರಮ ಬಿಲ್‌ಗಳ ಶಂಕೆ: ಕೊಳಚೆ ನಿರ್ಮೂಲನಾ ಮಂಡಳಿ ಮೇಲೆ ಲೋಕಾಯುಕ್ತ ದಾಳಿ!

ಬೆಳಗಾವಿ/ಬೆಂಗಳೂರು: ರಾಜ್ಯದಲ್ಲಿ ಭಾರೀ ಅಕ್ರಮ ಅನುದಾನ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳಗಾವಿ ಕೊಳಚೆ ನಿರ್ಮೂಲನಾ ಮಂಡಳಿಗೆ ಸಂಬಂಧಿಸಿದ 8 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

ದೂರುಗಳ ಪ್ರಕಾರ, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಬಂದ ಅನುದಾನದಲ್ಲಿ 600 ಕುಟುಂಬಗಳಿಗೆ ಮನೆ ನಿರ್ಮಿಸಬೇಕಾಗಿದ್ದರೂ ಯೋಜನೆ ಪೂರ್ಣಗೊಳಿಸದೇ ಸುಮಾರು ₹33 ಕೋಟಿ ಅನುದಾನದಲ್ಲಿ ₹23 ಕೋಟಿ ರೂಪಾಯಿ ಅಕ್ರಮವಾಗಿ ದುರುಪಯೋಗ ಮಾಡಲಾಗಿದೆ ಎಂಬ ಆರೋಪ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಾಯುಕ್ತ ಎಸ್‌ಪಿ ಪ್ರಶಾಂತ್ ದೇಸಾಯಿ ನೇತೃತ್ವದಲ್ಲಿ ಬೆಂಗಳೂರು, ಧಾರವಾಡ, ರಾಮದುರ್ಗ, ವಿಜಯಪುರ, ಹುಬ್ಬಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿದೆ.

ದಾಳಿಯ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಬಿಲ್‌ಗಳು ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ₹23 ಕೋಟಿ ರೂಪಾಯಿ ಅನಧಿಕೃತ ಬಿಲ್‌ಗಳ ಬಗ್ಗೆ ಲೋಕಾಯುಕ್ತ ತಂಡಗಳು ಪರಿಶೀಲನೆ ಮುಂದುವರಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳಚೆ ನಿರ್ಮೂಲನಾ ಅಭಿವೃದ್ಧಿ ಇಲಾಖೆಯ ನಿವೃತ್ತ ಎಇಇ ಶಂಭುಲಿಂಗಪ್ಪ, ಎಕ್ಸಿಕ್ಯೂಟಿವ್ ಇಂಜಿನಿಯರ್ ಲಮಾಣಿ, NTCC ಮ್ಯಾನೇಜರ್ ಎನ್. ಪ್ರಸಾದ್ ಹಾಗೂ ವಿಜಯಪುರ ಗುತ್ತಿಗೆದಾರ ಗಿರಮಲಪ್ಪ ಜೋಗೂರ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆವರು ಮತ್ತು ಎಣ್ಣೆ ಕಲೆಗಳಿಗೆ ರಾಮಬಾಣದಂತ ಮನೆಮದ್ದುಗಳು: ಶರ್ಟ್ ಕಾಲರ್ ಕ್ಲೀನ್ ಮಾಡುವ ಟಿಪ್ಸ್ ಇಲ್ಲಿವೆ!

ಶರ್ಟ್ ಕಾಲರ್‌ನಲ್ಲಿ ಅಂಟಿಕೊಳ್ಳುವ ಕಲೆಗಳು ಬಹುತೇಕ ಎಲ್ಲರಿಗೂ ಸಾಮಾನ್ಯ ಸಮಸ್ಯೆಯಾಗಿದೆ.

ವಿಶೇಷವಾಗಿ ಬೆವರು, ಚರ್ಮದ ಎಣ್ಣೆ, ಧೂಳು ಮತ್ತು ದೈನಂದಿನ ಬಳಕೆಯಿಂದ ಉಂಟಾಗುವ ಮೊಂಡುತನದ ಕಲೆಗಳು ಕಾಲರ್ ಭಾಗದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ. ಇವು ಸಾಮಾನ್ಯ ವಾಶ್‌ನಿಂದ ಸುಲಭವಾಗಿ ಹೋಗದೇ, ಶರ್ಟ್ ಹಳೆಯದಾಗಿ ಮತ್ತು ಅಸ್ವಚ್ಛವಾಗಿ ಕಾಣುವಂತೆ ಮಾಡುತ್ತವೆ.

ಈ ರೀತಿಯ ಕಲೆಗಳನ್ನು ತೆಗೆದುಹಾಕಲು ಮಾರುಕಟ್ಟೆಯಲ್ಲಿ ಹಲವು ಕ್ಲೀನಿಂಗ್ ಉತ್ಪನ್ನಗಳು ಲಭ್ಯವಿದ್ದರೂ, ಸರಳ ಮನೆಮದ್ದುಗಳ ಮೂಲಕವೂ ಪರಿಣಾಮಕಾರಿಯಾಗಿ ಶುದ್ಧೀಕರಣ ಮಾಡಬಹುದು ಎಂದು ಗೃಹಿಣಿಯರು ಮತ್ತು ಪರಿಣಿತರು ಸೂಚಿಸುತ್ತಿದ್ದಾರೆ.

ಅಡಿಗೆ ಸೋಡಾ ಮತ್ತು ನಿಂಬೆ ದ್ರಾವಣ:

ಕಾಲರ್ ಮೇಲಿನ ಹಠಮಾರಿ ಕಲೆಗಳನ್ನು ತೆಗೆದುಹಾಕಲು ಅಡಿಗೆ ಸೋಡಾ ಮತ್ತು ನಿಂಬೆ ಅತ್ಯಂತ ಜನಪ್ರಿಯ ಮನೆಮದ್ದುಗಳಲ್ಲಿ ಒಂದಾಗಿದೆ. 2 ಚಮಚ ಅಡಿಗೆ ಸೋಡಾವನ್ನು ಸ್ವಲ್ಪ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ ದಪ್ಪ ಪೇಸ್ಟ್ ತಯಾರಿಸಬಹುದು. ಈ ಪೇಸ್ಟ್ ಅನ್ನು ಕಲೆ ಇರುವ ಭಾಗಕ್ಕೆ ಹಚ್ಚಿ ಹಳೆಯ ಟೂತ್ ಬ್ರಷ್ ಸಹಾಯದಿಂದ ನಿಧಾನವಾಗಿ ಉಜ್ಜಬೇಕು. ನಂತರ 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಕಲೆಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ.

ಬಿಳಿ ವಿನೆಗರ್ ಮತ್ತು ಡಿಟರ್ಜೆಂಟ್ ವಿಧಾನ:

ಹಳೆಯ ಹಾಗೂ ಗಾಢವಾದ ಕಲೆಗಳನ್ನು ತೆಗೆದುಹಾಕಲು ಬಿಳಿ ವಿನೆಗರ್ ಮತ್ತು ಲಿಕ್ವಿಡ್ ಡಿಟರ್ಜೆಂಟ್ ಪರಿಣಾಮಕಾರಿ ಪರಿಹಾರವೆಂದು ಪರಿಗಣಿಸಲಾಗಿದೆ. ಮೊದಲು ಕಾಲರ್‌ಗೆ ಸ್ವಲ್ಪ ಡಿಟರ್ಜೆಂಟ್ ಹಚ್ಚಿ, ನಂತರ ಅದರ ಮೇಲೆ 1 ರಿಂದ 2 ಚಮಚ ಬಿಳಿ ವಿನೆಗರ್ ಸುರಿಯಬೇಕು. ಇದನ್ನು 10 ರಿಂದ 15 ನಿಮಿಷಗಳ ಕಾಲ ಬಿಡಿ, ನಂತರ ಮೃದುವಾಗಿ ಬ್ರಷ್‌ನಿಂದ ಉಜ್ಜಿ ತೊಳೆಯುವುದರಿಂದ ಕಲೆಗಳು ಸುಲಭವಾಗಿ ಹೋಗುತ್ತವೆ ಎಂದು ತಿಳಿದುಬಂದಿದೆ.

ಡಿಶ್ ವಾಶ್ ಲಿಕ್ವಿಡ್ ಮತ್ತು ಶಾಂಪೂ ಮಿಶ್ರಣ:

ಎಣ್ಣೆಯಂತಹ ಮೊಂಡುತನದ ಕಲೆಗಳಿಗೆ ಡಿಶ್ ವಾಶ್ ಲಿಕ್ವಿಡ್ ಮತ್ತು ಶಾಂಪೂ ಮಿಶ್ರಣವೂ ಉತ್ತಮ ಪರಿಹಾರವಾಗಿದೆ. ಸಮಾನ ಪ್ರಮಾಣದಲ್ಲಿ ಎರಡನ್ನೂ ಮಿಶ್ರಣ ಮಾಡಿ ಕಾಲರ್ ಭಾಗಕ್ಕೆ ಹಚ್ಚಬೇಕು. ಸುಮಾರು 10 ನಿಮಿಷಗಳ ನಂತರ ಬ್ರಷ್‌ನಿಂದ ನಿಧಾನವಾಗಿ ಉಜ್ಜಿ ತೊಳೆಯುವುದರಿಂದ ಕಾಲರ್ ಭಾಗ ಸ್ವಚ್ಛವಾಗುತ್ತದೆ.

ಎಚ್ಚರಿಕೆ ಅಗತ್ಯ:

ಈ ಮನೆಮದ್ದುಗಳನ್ನು ಬಳಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ. ಕಾಲರ್ ಭಾಗವನ್ನು ತುಂಬಾ ಗಟ್ಟಿಯಾಗಿ ಉಜ್ಜುವುದರಿಂದ ಬಟ್ಟೆ ಹಾನಿಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಬಣ್ಣದ ಶರ್ಟ್‌ಗಳ ಮೇಲೆ ನಿಂಬೆ ಅಥವಾ ಇತರ ಬ್ಲೀಚಿಂಗ್ ಗುಣ ಹೊಂದಿರುವ ಪದಾರ್ಥಗಳನ್ನು ಬಳಸುವಾಗ ಹೆಚ್ಚು ಎಚ್ಚರಿಕೆ ವಹಿಸಬೇಕು.

ಇದಲ್ಲದೆ ಯಾವುದೇ ಹೊಸ ವಿಧಾನ ಪ್ರಯೋಗಿಸುವ ಮೊದಲು ಬಟ್ಟೆಯ ಒಂದು ಸಣ್ಣ ಭಾಗದಲ್ಲಿ ಪ್ಯಾಚ್ ಟೆಸ್ಟ್ ಮಾಡುವುದು ಸೂಕ್ತ ಎಂದು ತಜ್ಞರು ಸಲಹೆ ನೀಡುತ್ತಾರೆ. ಬಣ್ಣ ಮಸುಕಾಗುವುದಿಲ್ಲವೆಂಬುದನ್ನು ಖಚಿತಪಡಿಸಿಕೊಂಡ ನಂತರ ಮಾತ್ರ ಸಂಪೂರ್ಣ ಕಾಲರ್‌ಗೆ ಬಳಸುವುದು ಉತ್ತಮ.

ಸಾಮಾನ್ಯವಾಗಿ ದಿನನಿತ್ಯದ ಸರಳ ಮನೆಮದ್ದುಗಳ ಮೂಲಕವೇ ಶರ್ಟ್ ಕಾಲರ್‌ನ ಹಠಮಾರಿ ಕಲೆಗಳನ್ನು ಕಡಿಮೆ ಮಾಡಿ, ಬಟ್ಟೆಯ ಆಯುಷ್ಯವನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.

ವಚನಾನಂದಶ್ರೀ ಪೋಕ್ಸೋ ಪ್ರಕರಣ ತನಿಖಾಧಿಕಾರಿ ದಿಢೀರ್ ವರ್ಗಾವಣೆ!

ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ವಚನಾನಂದಶ್ರೀ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.

ಪ್ರಕರಣದ ತನಿಖಾಧಿಕಾರಿಯಾಗಿದ್ದ ಹರಿಹರ ಗ್ರಾಮಾಂತರ ಠಾಣೆ ಪಿಎಸ್‌ಐ ಮಂಜುಳಾ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.

ದಾವಣಗೆರೆ ಎಸ್‌ಪಿ H.T. ಶೇಖರ್ ಅವರು ಹೊರಡಿಸಿದ ಆದೇಶದಂತೆ ಪಿಎಸ್‌ಐ ಮಂಜುಳಾ ಅವರನ್ನು ದಾವಣಗೆರೆಯ ಆಜಾದ್ ನಗರ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಆಜಾದ್ ನಗರ ಠಾಣೆಯ ಪಿಎಸ್‌ಐ ಜಯರತ್ನಮ್ಮ ಅವರನ್ನು ಹೊಸ ತನಿಖಾಧಿಕಾರಿಯಾಗಿ ನೇಮಿಸಲಾಗಿದೆ.

ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಪಂಚಮಸಾಲಿ ಪೀಠ ಟ್ರಸ್ಟ್ ಪದಾಧಿಕಾರಿಗಳು ಪೂರ್ವ ವಲಯ ಐಜಿಪಿ ಬಿ.ಆರ್. ರವಿಕಾಂತೇಗೌಡ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಯನ್ನು ಬದಲಾಯಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಪಿಎಸ್‌ಐ ಮಂಜುಳಾ ಅವರು ವಚನಾನಂದಶ್ರೀ ಅವರನ್ನು ಎರಡು ಬಾರಿ ಹರಿಹರ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಸ್ವಾಮೀಜಿಯ ವಿರುದ್ಧ ಮಕ್ಕಳ ಮೇಲಿನ ದೌರ್ಜನ್ಯ ಆರೋಪದಡಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.

ಈಗ ಹೊಸ ತನಿಖಾಧಿಕಾರಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಮುಂದಿನ ದಿನಗಳಲ್ಲಿ ಯಾವ ಹಾದಿಯಲ್ಲಿ ಸಾಗಲಿದೆ ಎಂಬುದು ಗಮನ ಸೆಳೆಯುತ್ತಿದೆ.

ಬ್ಯುಸಿ ಜೀವನಶೈಲಿಗೆ ಪರಿಹಾರ: ಪ್ರತಿದಿನ ಧ್ಯಾನ ಅಗತ್ಯ ಎಂದ ತಜ್ಞರು!

ಇಂದಿನ ವೇಗವಾಗಿ ಸಾಗುತ್ತಿರುವ ಜೀವನಶೈಲಿಯಲ್ಲಿ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯಕ್ಕೂ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.

ಜಿಮ್‌ಗೆ ಹೋಗುವುದು, ವ್ಯಾಯಾಮ ಮಾಡುವುದು ಹೇಗೆ ದೇಹವನ್ನು ಫಿಟ್‌ ಆಗಿಡಲು ಸಹಾಯ ಮಾಡುತ್ತದೋ, ಅದೇ ರೀತಿ ಧ್ಯಾನ ಮನಸ್ಸನ್ನು ಶಾಂತವಾಗಿಡಲು ಹಾಗೂ ಒತ್ತಡವನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಕೆಲಸದ ಒತ್ತಡ, ಜೀವನದ ವೇಗ ಮತ್ತು ಮಾನಸಿಕ ಚಿಂತೆಗಳಿಂದ ಬಳಲುತ್ತಿದ್ದು, ಇದರಿಂದ ಮುಕ್ತಿ ಪಡೆಯಲು ಧ್ಯಾನವನ್ನು ದೈನಂದಿನ ಜೀವನದ ಭಾಗವನ್ನಾಗಿ ಮಾಡುವುದು ಅತ್ಯಂತ ಅಗತ್ಯವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರತಿದಿನ ಕೇವಲ 10 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ದೇಹ ಮತ್ತು ಮನಸ್ಸಿನಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ವಿಶೇಷವಾಗಿ ಬೆಳಿಗ್ಗೆ ಎದ್ದ ಕೂಡಲೇ ಮೊಬೈಲ್‌ ಬಳಸುವ ಅಭ್ಯಾಸವನ್ನು ಬಿಟ್ಟು, ಆ ಸಮಯವನ್ನು ಧ್ಯಾನಕ್ಕೆ ಮೀಸಲಿಟ್ಟರೆ ದಿನವಿಡೀ ಮನಸ್ಸು ಶಾಂತವಾಗಿರುತ್ತದೆ ಎಂದು ಹೇಳಲಾಗಿದೆ. ಬೆಳಗಿನ ಧ್ಯಾನದಿಂದ ದೇಹದಲ್ಲಿ ಒತ್ತಡಕ್ಕೆ ಕಾರಣವಾಗುವ ಕಾರ್ಟಿಸೋಲ್  ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಮಾನಸಿಕ ಒತ್ತಡ, ಆತಂಕ ಮತ್ತು ಕಿರಿಕಿರಿ ಕಡಿಮೆಯಾಗುವ ಜೊತೆಗೆ ಭಾವನಾತ್ಮಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ಧ್ಯಾನ ಮಾಡುವುದರಿಂದ ಗಮನ ಶಕ್ತಿ ಹೆಚ್ಚಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ದಿನನಿತ್ಯ 10 ನಿಮಿಷಗಳ ಧ್ಯಾನ ಅಭ್ಯಾಸ ಮಾಡಿಕೊಂಡರೆ ಮನಸ್ಸಿನಲ್ಲಿ ಇರುವ ಗೊಂದಲಗಳು ಕಡಿಮೆಯಾಗುತ್ತವೆ. ಇದರಿಂದ ವ್ಯಕ್ತಿಯು ಸ್ಪಷ್ಟವಾಗಿ ಯೋಚಿಸಲು ಸಾಧ್ಯವಾಗುತ್ತದೆ ಹಾಗೂ ನಿರ್ಧಾರಗಳನ್ನು ತ್ವರಿತವಾಗಿ ಮತ್ತು ಸರಿಯಾಗಿ ತೆಗೆದುಕೊಳ್ಳುವ ಸಾಮರ್ಥ್ಯವೂ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ನಿರಂತರವಾಗಿ ಮಾನಸಿಕ ಒತ್ತಡದಲ್ಲಿ ಕೆಲಸ ಮಾಡುವವರಿಗೆ ಇದು ಅತ್ಯಂತ ಉಪಯುಕ್ತ ಅಭ್ಯಾಸವಾಗಿದೆ.

ಅದೇ ರೀತಿ ಧ್ಯಾನವು ಮಾನಸಿಕ ಶಕ್ತಿಯನ್ನು ಹೆಚ್ಚಿಸಿ, ದೇಹದ ಶಕ್ತಿಯ ಮಟ್ಟವನ್ನೂ ಸುಧಾರಿಸುತ್ತದೆ. ಒತ್ತಡ ಮತ್ತು ಆತಂಕದಿಂದ ಬಳಲುವ ವ್ಯಕ್ತಿಗಳಲ್ಲಿ ದೈಹಿಕ ಚೈತನ್ಯ ಕಡಿಮೆಯಾಗುವುದು ಸಾಮಾನ್ಯ. ಆದರೆ ನಿಯಮಿತ ಧ್ಯಾನ ಅಭ್ಯಾಸದಿಂದ ನರಮಂಡಲ ಸಮತೋಲನದಲ್ಲಿರುತ್ತದೆ ಹಾಗೂ ದೇಹದಲ್ಲಿ ಆಮ್ಲಜನಕದ ಹರಿವು ಉತ್ತಮಗೊಳ್ಳುತ್ತದೆ. ಇದರಿಂದ ದಿನವಿಡೀ ಚೈತನ್ಯಶೀಲವಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ.

ಧ್ಯಾನವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದಕ್ಕೂ ಸಹಾಯಕವಾಗಿದೆ. ಮನಸ್ಸು ಶಾಂತವಾಗಿರುವಾಗ ದೇಹವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ನಿಯಮಿತ ಧ್ಯಾನ ಮಾಡುವವರಲ್ಲಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆಯಾಗುತ್ತದೆ ಮತ್ತು ದೇಹವು ಶೀಘ್ರವಾಗಿ ಪುನಃಶಕ್ತಿಯನ್ನು ಪಡೆಯುತ್ತದೆ. ಇದರಿಂದ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.

ಇದಲ್ಲದೆ, ಧ್ಯಾನವು ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಧ್ಯಾನದ ಮೂಲಕ ಮನಸ್ಸು ಶಾಂತವಾಗುವುದರಿಂದ ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಮತ್ತು ರಕ್ತದ ಹರಿವು ಸಮತೋಲನದಲ್ಲಿರುತ್ತದೆ. ಇದರಿಂದ ಹೃದಯ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ನಿದ್ರೆಯ ಸಮಸ್ಯೆ ಹೊಂದಿರುವವರಿಗೂ ಧ್ಯಾನ ಬಹಳ ಉಪಯುಕ್ತವಾಗಿದೆ. ಇಂದಿನ ದಿನಗಳಲ್ಲಿ ಅನೇಕರು ಒತ್ತಡ ಮತ್ತು ಆತಂಕದಿಂದ ನಿದ್ರೆ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಪ್ರತಿದಿನ ಮಲಗುವ ಮುನ್ನ ಅಥವಾ ಬೆಳಿಗ್ಗೆ ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ ಮತ್ತು ನಿದ್ರೆಯ ಗುಣಮಟ್ಟವೂ ಸುಧಾರಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ದಿನಕ್ಕೆ ಕೇವಲ 10 ನಿಮಿಷಗಳ ಧ್ಯಾನವು ದೈಹಿಕ ಆರೋಗ್ಯ, ಮಾನಸಿಕ ಸ್ಥಿರತೆ, ಒತ್ತಡ ನಿಯಂತ್ರಣ, ಗಮನ ಶಕ್ತಿ ಹೆಚ್ಚಳ ಹಾಗೂ ಉತ್ತಮ ನಿದ್ರೆ ಸೇರಿದಂತೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಆದ್ದರಿಂದ ಧ್ಯಾನವನ್ನು ಜೀವನದ ದೈನಂದಿನ ಅಭ್ಯಾಸವಾಗಿಸಿಕೊಂಡರೆ ಆರೋಗ್ಯಕರ ಮತ್ತು ಸಮತೋಲನದ ಜೀವನವನ್ನು ನಡೆಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಗದಗ: ಬಟ್ಟೆ ತೊಳೆಯಲು ಹೋಗಿದ್ದ ಅಕ್ಕ-ತಂಗಿ ನೀರಲ್ಲಿ ಮುಳುಗಿ ಸಾವು..!

ಗದಗ : ಬೇಸಿಗೆಯಿಂದಾಗಿ ಊರಿನ ಕೆರೆ ಬತ್ತಿ ಹೋಗಿದ್ದರಿಂದ ಬಟ್ಟೆ ತೊಳೆಯಲು ಕೃಷಿಹೊಂಡಕ್ಕೆ ತೆರಳಿದ್ದ ಇಬ್ಬರು ಬಾಲಕಿಯರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಬಳಿ ನಡೆದಿದೆ.

ಮೃತರನ್ನು ತಿಮ್ಮಾಪೂರ ಗ್ರಾಮದ ಲಕ್ಷ್ಮವ್ವ ಹರಣಶಿಕಾರಿ (15) ಹಾಗೂ ಮುತ್ತವ್ವ ಹರಣಶಿಕಾರಿ (8) ಎಂದು ಗುರುತಿಸಲಾಗಿದೆ.

ತಿಮ್ಮಾಪೂರ – ಯರೇಹಂಚಿನಾಳ ರಸ್ತೆಯ ಸಮೀಪ, ಕೊಪ್ಪಳ ಜಿಲ್ಲೆಯ ಯರೆಹಂಚಿನಾಳ ಗ್ರಾಮದ ಸರಹದ್ದಿನ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಕೃಷಿಹೊಂಡದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಗ್ರಾಮದ ಕೆರೆ ಸಂಪೂರ್ಣ ಬತ್ತಿ ಹೋಗಿರುವುದರಿಂದ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದರು. ಇದೇ ಕಾರಣಕ್ಕೆ ಮಂಗಳವಾರ ಮಧ್ಯಾಹ್ನ ಇಬ್ಬರು ಬಾಲಕಿಯರು ಕೃಷಿಹೊಂಡಕ್ಕೆ ಬಟ್ಟೆ ತೊಳೆಯಲು ತೆರಳಿದ್ದರು. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದು, ಈಜಲು ಬಾರದೆ ಇಬ್ಬರೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕೃಷಿಹೊಂಡದಿಂದ ಇಬ್ಬರ ಮೃತದೇಹಗಳನ್ನು ಹೊರತೆಗೆದರು. ಇಬ್ಬರು ಹೆಣ್ಣುಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

ಘಟನಾ ಸ್ಥಳಕ್ಕೆ ಕುಕನೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ತೀವ್ರ ನೀರಿನ ಸಮಸ್ಯೆ ಇರುವುದರಿಂದ ಜನರು ಕೃಷಿಹೊಂಡಗಳನ್ನೇ ಅವಲಂಬಿಸಿರುವುದು ಈ ದುರಂತಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

ರೈತರ ಆತ್ಮಹತ್ಯೆ ಪ್ರಕರಣಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮುಚ್ಚಿಟ್ಟಿದೆ: ಕುಮಾರಸ್ವಾಮಿ ಆರೋಪ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮುಚ್ಚಿಟ್ಟಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ಇತ್ತೀಚೆಗೆ ನಾನು ಪತ್ರಿಕೆಯೊಂದರಲ್ಲಿ ಅನ್ನದಾತರ ಆತ್ಮಹತ್ಯೆ ಹೆಚ್ಚಳ ಎನ್ನುವ ವರದಿಯೊಂದನ್ನು ಓದಿದೆ.

ಅದನ್ನು ಓದಿ ನನಗೆ ತೀವ್ರ ಆಘಾತ ಉಂಟಾಯಿತು. ಹನ್ನೆರಡು ದಿನಗಳ ಹಿಂದೆ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿದ್ದ ಈ ವರದಿಯನ್ನು ಓದಿ ಈ ಸರ್ಕಾರ ಕಣ್ತೆರೆಯುತ್ತದೆ ಎಂದು ಭಾವಿಸಿದ್ದೆ. ಆದರೆ, ಸಾಧನಾ ಸಮಾವೇಶಗಳನ್ನು ಮಾಡುವುದರಲ್ಲಿ ಸಂಭ್ರಮಿಸುತ್ತಿರುವ ಈ ಸರ್ಕಾರಕ್ಕೆ ರೈತರ ಹಿತಾಸಕ್ತಿ ಬೇಕಾಗಿಲ್ಲ ಎಂದು ಕಿಡಿಕಾರಿದರು.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯ ಪ್ರಕಾರ ರಾಜ್ಯದಲ್ಲಿ 2023ರಲ್ಲಿ 2,423 ಹಾಗೂ 2024ರಲ್ಲಿ 2,971 ರೈತರು, ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ವರ್ಷಗಳಲ್ಲಿ ಒಟ್ಟು 5,394 ರೈತರು ಜೀವ ಚೆಲ್ಲಿದ್ದಾರೆ. ಕರ್ನಾಟಕ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜ್ಯ ಸರಕಾರಕ್ಕೆ ಈ ಅಂಕಿ ಅಂಶಗಳು ಗೊತ್ತಿಲ್ಲವೇ? ಅಥವಾ ಗೊತ್ತಿದ್ದರೂ ಮುಚ್ಚಿಟ್ಟಿದಿಯ ಎನ್ನುವ ಅನುಮಾನ ಕಾಡುತ್ತಿದೆ ಎಂದು ಕೇಂದ್ರ ಸಚಿವರು ದೂರಿದರು.

ಇಷ್ಟು ಬೃಹತ್ ಪ್ರಮಾಣದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಈ ಸರ್ಕಾರದವರು ಜಾಣ್ಮೆಯಿಂದ ಮುಚ್ಚಿಟ್ಟಿದಾರೆ. ಈ ಆತ್ಮಹತ್ಯೆಗಳ ಸಮರ್ಪಣೆಗಾಗಿ ತುಮಕೂರಿನಲ್ಲಿ ಇವರು ಸಮಾವೇಶ ಮಾಡಿದ್ದಾರೆ ಎಂದು ತಿಕ್ಷ್ಣವಾಗಿ ಕೇಂದ್ರ ಸಚಿವರು ಪ್ರಶ್ನಿಸಿದರು.

ಕೇವಲ ಹತ್ತು ನಿಮಿಷಗಳ ಕಾಲ ಮಳೆ ಬಂದರೆ ಇಲ್ಲಿ ನೋಡಿದರೂ ನೀರು ನಿಲ್ಲುತ್ತದೆ. ಈ ಸಮಾವೇಶಕ್ಕೆ ಸರ್ಕಾರ ಕೋಟ್ಯಂತರ ರೂಪಾಯಿ ದುಂದು ವೆಚ್ಚ ಮಾಡಿದೆ. ಜನರನ್ನೂ ಸರಕಾರವೇ ಕರೆತರಬೇಕು. ಅದಕ್ಕೆ ಅಧಿಕಾರಿಗಳಿಗೆ ಇಂತಿಷ್ಟು ಜನರನ್ನು ಕರೆದುಕೊಂಡು ಬರುವುದಕ್ಕೆ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ. ಕಾಂಗ್ರೆಸ್ ನವರ ಕಾರ್ಯಕ್ರಮಗಳಿಗೆ ಜನ ಬರಬೇಕಲ್ಲ, ಅದಕ್ಕಾಗಿ ಅಧಿಕಾರಿಗಳನ್ನು ದುರ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಕಿಡಿಕಾರಿದರು.

ಈ ಸರಕಾರ ರೈತರ ಜೀವನದ ಮೇಲೆ ಸಮಾಧಿ ಕಟ್ಟಿ, ಅದರ ಮೇಲೆ ತಮ್ಮ ವೈಭವ ಪ್ರದರ್ಶನ ಮಾಡುತ್ತಿದ್ದಾರೆ. ಇವರನ್ನು ಜನ ಕ್ಷಮಿಸುವುದಿಲ್ಲ. ಒಂದೆಡೆ ರೈತರು ನಿತ್ಯವೂ ಸಾಯುತ್ತಿದ್ದಾರೆ ಇವರು ಗ್ಯಾರಂಟಿ ಹೆಸರಿನಲ್ಲಿ ಹಬ್ಬ ಮಾಡುತ್ತಿದ್ದಾರೆ. ಇವರ ಗ್ಯಾರಂಟಿಗಳು ಉತ್ತಮವಾಗಿ ಇದ್ದಿದ್ದರೆ ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಎಂದು ಸಚಿವ ಕುಮಾರಸ್ವಾಮಿ ಅವರು ಅತ್ಯಂತ ತೀಕ್ಷ್ಣವಾಗಿ ಪ್ರಶ್ನಿಸಿದರು.

ಸಮಾವೇಶದ ಹೆಸರಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಹಲವಾರು ವಿಚಾರಗಳನ್ನು ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಕಳೆದ ವರ್ಷ ಕೂಡ ಹಕ್ಕು ಪತ್ರಗಳ ಬಗ್ಗೆಯೇ ಹೆಚ್ಚು ಚರ್ಚೆ ಮಾಡಿದ್ದರು. ನಮ್ಮ ಬಳಿ ಬರುವ ರೈತರು ಹಾಗೂ ಅನೇಕ ಜಿಲ್ಲೆಗಳಲ್ಲಿ ನಾವು ಹೋದಾಗ ಕಂದಾಯ ಇಲಾಖೆಯ ಬಗ್ಗೆಯೇ ಹೆಚ್ಚು ದೂರು, ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. 6ನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಕೊಡುತ್ತಿದ್ದೇವೆ ಎಂದು ಇವರು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ. ಆದರೆ ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ರೈತ ಆತ್ಮಹತ್ಯೆ ಪ್ರಕರಣಗಳು ಇವರ ಯೋಗ್ಯತೆಯನ್ನು ಸಾರಿ ಸಾರಿ ಸಾರಿ ಹೇಳುತ್ತಿವೆ ಎಂದು ಸಚಿವರು ಅಕ್ರೋಶ ವ್ಯಕ್ತಪಡಿಸಿದರು.

ಬಿಡದಿ ಟೌನ್ ಶಿಪ್ ಬಗ್ಗೆ ಚರ್ಚೆಗೆ ಸಿದ್ದ:

ಬಿಡದಿ ಟೌನ್ ಶಿಪ್ ವಿಚಾರವಾಗಿ ಚರ್ಚೆಗೆ ಪಂಥಾಹ್ವಾನ ನೀಡಿರುವ ರಾಜ್ಯದ ಉಪ ಮುಖ್ಯಮಂತ್ರಿಯ ಸವಾಲನ್ನು ಸ್ವೀಕರಿಸಿದ ಕೇಂದ್ರ ಸಚಿವರು, ಚರ್ಚೆ ಮಾಡಲು ತಯಾರ್ ಇದ್ದೇನೆ. ಎಲ್ಲಿಗೆ ಬೇಕಾದರೂ ಬರಲಿ. ಬಿಡದಿಯಲ್ಲಿ ಮೂರೂವರೆ ಸಾವಿರ ಜನ ತಕರಾರು ತೆಗೆದು ಅರ್ಜಿ ಕೊಟ್ಟಿದ್ದಾರೆ. ರೈತರನ್ನು ರೌಡಿಗಳು ಮತ್ತು ಪೊಲೀಸರ ಮೂಲಕ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಯೋಜನೆಯಿಂದ ಒಳ್ಳೆಯದು ಆಗುವುದಿದ್ದರೆ ರೈತರೆ ಸಂತೋಷವಾಗಿ ಭೂಮಿ ಕೊಡುತ್ತಿದ್ದರು. ಆದರೆ ಇಲ್ಲಿ ಭೂಮಿ ಕೊಡಲು ರೈತರು ಬಯಸುತ್ತಿಲ್ಲ. ಹೀಗಾಗಿ ರೈತರ ಹಿತಕ್ಕೆ ತಕ್ಕಂತೆ ಸರ್ಕಾರ ವರ್ತಿಸಬೇಕು ಎಂದು ಸಚಿವರು ಹೇಳಿದರು

ಅಖಂಡ ಶ್ರೀನಿವಾಸ ಮೂರ್ತಿ ಜೆಡಿಎಸ್ ಸೇರುತ್ತಾರೆ:

ಎರಡು ಬಾರಿ ಶಾಸಕರಾಗಿ ಗೆದ್ದಿರುವ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಮಂಗಳವಾರ ಬೆಳಗ್ಗೆ ಭೇಟಿ ನೀಡಿದ್ದಾಗಿ ಸಚಿವ ಕುಮಾರಸ್ವಾಮಿ ಅವರು ತಿಳಿಸಿದರು.

ಇದೊಂದು ಗೌರವಪೂರ್ವಕ ಭೇಟಿ ಎಂದ ಅವರು, ಜೆಡಿಎಸ್ ಪಕ್ಷ ಸೇರಲು ಅವರು ಉತ್ಸುಕರಾಗಿದ್ದಾರೆ. ಸದ್ಯದಲ್ಲೇ ದಿನಾಂಕ ನಿಗದಿ ಮಾಡಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಪಕ್ಷದ ಬಲವರ್ಧನೆಗೆ ನಾವು ಆದ್ಯತೆ ಕೊಟ್ಟು ಕೆಲಸ ಮಾಡುತ್ತಿದ್ದೇವೆ. ಈಗಿನ ತಲೆ ಪಕ್ಷಕ್ಕೆ ಶಕ್ತಿ ತುಂಬುತ್ತಿದ್ದೇವೆ. ಅದರ ಭಾಗವಾಗಿ ಅಖಂಡ ಶ್ರೀನಿವಾಸ ಮೂರ್ತಿ ಅವರು ಜೆಡಿಎಸ್ ಸೇರುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಪಕ್ಷದ ಕಚೇರಿಗೆ ಆಗಮಿಸುವುದಕ್ಕೂ ಮುನ್ನ ಸಚಿವರು ಬೆಂಗಳೂರಿನ ಕಾವಲ್ ಭೈರಸಂದ್ರದಲ್ಲಿರುವ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಭೇಟಿ ನೀಡಿದ್ದರು. ಸುಮಾರು ಒಂದು ತಾಸಿನ ಈ ಭೇಟಿ ಸಂದರ್ಭದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಮಲ್ಲೇಶ್ ಬಾಬು, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಮ್. ರಮೇಶ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಸೇರಿದಂತೆ ಅನೇಕ ಮುಖಂಡರು ಸಚಿವರ ಜೊತೆಯಲ್ಲಿ ಇದ್ದರು.

error: Content is protected !!