ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ವಚನಾನಂದಶ್ರೀ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಹರಿಹರ ಗ್ರಾಮಾಂತರ ಠಾಣೆ ಪಿಎಸ್‌ಐ ಮಂಜುಳಾ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.
ದಾವಣಗೆರೆ ಎಸ್‌ಪಿ H.T. ಶೇಖರ್ ಅವರು ಹೊರಡಿಸಿದ ಆದೇಶದಂತೆ ಪಿಎಸ್‌ಐ ಮಂಜುಳಾ ಅವರನ್ನು ದಾವಣಗೆರೆಯ ಆಜಾದ್ ನಗರ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಆಜಾದ್ ನಗರ ಠಾಣೆಯ ಪಿಎಸ್‌ಐ ಜಯರತ್ನಮ್ಮ ಅವರನ್ನು ಹೊಸ ತನಿಖಾಧಿಕಾರಿಯಾಗಿ ನೇಮಿಸಲಾಗಿದೆ.
ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಪಂಚಮಸಾಲಿ ಪೀಠ ಟ್ರಸ್ಟ್ ಪದಾಧಿಕಾರಿಗಳು ಪೂರ್ವ ವಲಯ ಐಜಿಪಿ ಬಿ.ಆರ್. ರವಿಕಾಂತೇಗೌಡ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಯನ್ನು ಬದಲಾಯಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಪಿಎಸ್‌ಐ ಮಂಜುಳಾ ಅವರು ವಚನಾನಂದಶ್ರೀ ಅವರನ್ನು ಎರಡು ಬಾರಿ ಹರಿಹರ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಸ್ವಾಮೀಜಿಯ ವಿರುದ್ಧ ಮಕ್ಕಳ ಮೇಲಿನ ದೌರ್ಜನ್ಯ ಆರೋಪದಡಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಈಗ ಹೊಸ ತನಿಖಾಧಿಕಾರಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಮುಂದಿನ ದಿನಗಳಲ್ಲಿ ಯಾವ ಹಾದಿಯಲ್ಲಿ ಸಾಗಲಿದೆ ಎಂಬುದು ಗಮನ ಸೆಳೆಯುತ್ತಿದೆ.



