Home Blog Page 83

‘ಭರವಸೆ ಹೆಚ್ಚು, ಸಾಧನೆ ಕಡಿಮೆ’: ಮೋದಿ ಸರ್ಕಾರದ ವಿರುದ್ಧ ಅಶೋಕ ಮಂದಾಲಿ ವಾಗ್ದಾಳಿ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳ ಆಡಳಿತವು ಸಾಧನೆಗಿಂತ ಸುಳ್ಳು ಭರವಸೆಗಳು, ವೈಫಲ್ಯಗಳು, ಬೆಲೆ ಏರಿಕೆ, ನಿರುದ್ಯೋಗ ಹಾಗೂ ರೈತರ ಸಂಕಷ್ಟಗಳಿಂದಲೇ ಗುರುತಿಸಿಕೊಂಡಿದೆ ಎಂದು ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸುದೀರ್ಘ ಪ್ರಕಟಣೆ ನೀಡಿರುವ ಅವರು, “ಗರೀಬ್ ಕಲ್ಯಾಣ್” ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ವಾಸ್ತವದಲ್ಲಿ ಕೆಲವೇ ಉದ್ಯಮಿಗಳ ಹಿತಾಸಕ್ತಿಗೆ ಆದ್ಯತೆ ನೀಡಿದ್ದು, ಸಾಮಾನ್ಯ ಜನರ ಬದುಕು ದುಸ್ತರಗೊಳಿಸಿದೆ ಎಂದು ಆರೋಪಿಸಿದರು.

ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ, 2022ರೊಳಗೆ ರೈತರ ಆದಾಯ ದ್ವಿಗುಣ, ಗುಡಿಸಲು ಮುಕ್ತ ಭಾರತ, 100 ಸ್ಮಾರ್ಟ್ ಸಿಟಿಗಳು, ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಆತ್ಮನಿರ್ಭರ ಭಾರತ, ಎಲ್ಲರಿಗೂ ಆರೋಗ್ಯ ವಿಮೆ, ಜಲ ಜೀವನ್ ಮಿಷನ್ ಸೇರಿದಂತೆ ಅನೇಕ ಯೋಜನೆಗಳು ನಿರೀಕ್ಷಿತ ಗುರಿ ತಲುಪಿಲ್ಲ ಎಂದು ಅವರು ದೂರಿದರು.

ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮೆ ಮಾಡುವ ಭರವಸೆ ಸೇರಿದಂತೆ ಹಲವು ಚುನಾವಣಾ ಆಶ್ವಾಸನೆಗಳು ಜನರನ್ನು ಸೆಳೆಯುವ ರಾಜಕೀಯ ಘೋಷಣೆಗಳಾಗಿ ಉಳಿದಿವೆ ಎಂದು ಟೀಕಿಸಿದರು.

ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಇಂದು ಲಕ್ಷಾಂತರ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಯುವಕರನ್ನು ನಿರುದ್ಯೋಗದ ಅಂಚಿಗೆ ತಳ್ಳಿದೆ ಎಂದು ಆರೋಪಿಸಿದ ಅಶೋಕ ಮಂದಾಲಿ, ಪದವೀಧರ ಯುವಕರಲ್ಲಿ ನಿರುದ್ಯೋಗ ಪ್ರಮಾಣ ಆತಂಕಕಾರಿ ಮಟ್ಟ ತಲುಪಿದೆ ಎಂದು ಹೇಳಿದರು.

ಪೇಪರ್ ಲೀಕ್ ಹಗರಣಗಳು, ಅಗ್ನಿಪಥ್ ಯೋಜನೆ, ಸರ್ಕಾರಿ ನೇಮಕಾತಿಗಳ ವಿಳಂಬ ಹಾಗೂ ಉದ್ಯೋಗಾವಕಾಶಗಳ ಕೊರತೆಯಿಂದ ಯುವಜನತೆ ಭವಿಷ್ಯದ ಬಗ್ಗೆ ಆತಂಕದಲ್ಲಿದೆ ಎಂದು ಹೇಳಿದರು.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಆಹಾರ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಚುನಾವಣೆ ಮುಗಿದ ತಕ್ಷಣ ಇಂಧನ ಹಾಗೂ ಎಲ್‌ಪಿಜಿ ದರಗಳನ್ನು ಹೆಚ್ಚಿಸುವುದು ಕೇಂದ್ರ ಸರ್ಕಾರದ ರೂಢಿಯಾಗಿದೆ ಎಂದು ಆರೋಪಿಸಿದರು.

2014ಕ್ಕೆ ಹೋಲಿಸಿದರೆ ಇಂದಿನ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರಗಳು ಗಣನೀಯವಾಗಿ ಏರಿಕೆಯಾಗಿದ್ದು, ಸಾಮಾನ್ಯ ವರ್ಗದ ಜನರು ಆರ್ಥಿಕ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

2022ರೊಳಗೆ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ಈಡೇರಿಲ್ಲ. ಕನಿಷ್ಠ ಬೆಂಬಲ ಬೆಲೆ (MSP), ರಸಗೊಬ್ಬರ ದರ ಏರಿಕೆ, ಕೃಷಿ ವೆಚ್ಚ ಹೆಚ್ಚಳ ಹಾಗೂ ಅನುದಾನ ಕಡಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಆರೋಪಿಸಿದರು.

ರಸಗೊಬ್ಬರ ಸಬ್ಸಿಡಿ ಕಡಿತ ಹಾಗೂ ಕೃಷಿ ಕ್ಷೇತ್ರದ ಮೇಲಿನ ನಿರ್ಲಕ್ಷ್ಯದಿಂದ ರೈತರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದು ದೂರಿದರು.

ಜಿಎಸ್‌ಟಿ ಜಾರಿಯಾದ ನಂತರ ಕರ್ನಾಟಕದಂತಹ ತೆರಿಗೆ ಕೊಡುಗೆ ನೀಡುವ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ಕರ್ನಾಟಕ ದೇಶದ ಅತಿಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾಗಿದ್ದರೂ, ಕೇಂದ್ರದಿಂದ ಮರಳಿ ಸಿಗುವ ಪಾಲು ತೀರಾ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಹಣಕಾಸು ಆಯೋಗದ ಶಿಫಾರಸುಗಳು ಹಾಗೂ ಜಿಎಸ್‌ಟಿ ವ್ಯವಸ್ಥೆಯಿಂದ ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ಸಂಪನ್ಮೂಲಗಳು ಕಡಿಮೆಯಾಗುತ್ತಿವೆ ಎಂದು ಅಶೋಕ ಮಂದಾಲಿ ಆರೋಪಿಸಿದರು.

ಆರ್ಥಿಕತೆ ಮತ್ತು ರೂಪಾಯಿ ಮೌಲ್ಯ ಕುಸಿತ

ದೇಶದ ಆರ್ಥಿಕ ಬೆಳವಣಿಗೆ ದರ ಕುಸಿಯುತ್ತಿದ್ದು, ರೂಪಾಯಿ ಮೌಲ್ಯ ಇತಿಹಾಸದಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದೆ. ದೇಶದ ಸಾಲದ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ಪರಿಣಾಮವಾಗಿ ಸಣ್ಣ ಕೈಗಾರಿಕೆಗಳು, ಎಂಎಸ್‌ಎಂಇಗಳು ಹಾಗೂ ಸ್ಟಾರ್ಟ್‌ಅಪ್ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ದೂರಿದರು. ಕೇಂದ್ರ ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಬದಲು ಪ್ರಚಾರ ರಾಜಕಾರಣದಲ್ಲಿ ತೊಡಗಿದೆ. ಜನರ ನೈಜ ಸಮಸ್ಯೆಗಳಿಗೆ ಪರಿಹಾರ ನೀಡುವುದು ಕೇಂದ್ರದ ಮೊದಲ ಆದ್ಯತೆಯಾಗಬೇಕು ಎಂದು ಅಶೋಕ ಮಂದಾಲಿ ಆಗ್ರಹಿಸಿದ್ದಾರೆ.

“ಪ್ರತಿ ವರ್ಷ ಎರಡು ಕೋಟಿ ಉದ್ಯೋಗ, ರೈತರ ಆದಾಯ ದ್ವಿಗುಣ, 15 ಲಕ್ಷ ರೂ. ಜಮೆ, ಬೆಲೆ ನಿಯಂತ್ರಣ ಸೇರಿದಂತೆ ಹಲವು ಭರವಸೆಗಳು ಘೋಷಣೆಯಲ್ಲೇ ಉಳಿದಿವೆ. 12 ವರ್ಷದ ಮೋದಿ ಆಡಳಿತದ ಸಾಧನೆಗಿಂತ ವೈಫಲ್ಯಗಳೇ ಹೆಚ್ಚಾಗಿವೆ.”

ಅಶೋಕ ಮಂದಾಲಿ

ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ

  • ಮೋದಿ ಸರ್ಕಾರದ ಪ್ರಮುಖ ವೈಫಲ್ಯಗಳು
  • ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ಈಡೇರಿಲ್ಲ
  • ರೈತರ ಆದಾಯ ದ್ವಿಗುಣ ಮಾಡುವ ಗುರಿ ವಿಫಲ
  • ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ದರಗಳಲ್ಲಿ ಭಾರೀ ಏರಿಕೆ
  • ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಯೋಜನೆಗಳು ನಿರೀಕ್ಷಿತ ಫಲ ನೀಡಿಲ್ಲ
  • ನಿರುದ್ಯೋಗ ಪ್ರಮಾಣ ಏರಿಕೆ
  • ಕರ್ನಾಟಕಕ್ಕೆ ಜಿಎಸ್‌ಟಿ ಮತ್ತು ತೆರಿಗೆ ಹಂಚಿಕೆಯಲ್ಲಿ ಅನ್ಯಾಯ
  • ರೂಪಾಯಿ ಮೌಲ್ಯ ಕುಸಿತ ಹಾಗೂ ಸಾಲದ ಹೊರೆ ಹೆಚ್ಚಳ
  • ರಸಗೊಬ್ಬರ ಸಬ್ಸಿಡಿ ಕಡಿತದಿಂದ ರೈತರಿಗೆ ಸಂಕಷ್ಟ
  • ಸಣ್ಣ ಕೈಗಾರಿಕೆಗಳು ಮತ್ತು ಸ್ಟಾರ್ಟ್‌ಅಪ್‌ಗಳ ಮೇಲೆ ಆರ್ಥಿಕ ಒತ್ತಡ

ಮಾಸಾಶನ ಸ್ಥಗಿತಕ್ಕೆ ಹಿರಿಯರ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಸಂಧ್ಯಾ ಸುರಕ್ಷಾ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಮನಸ್ವಿನಿ ಯೋಜನೆಯ ಮಾಸಾಶನಗಳು ಫಲಾನುಭವಿಗಳ ಖಾತೆಗೆ ಜಮೆಯಾಗದ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು, ವಿಧವೆಯರು ಹಾಗೂ ಅಂಗವಿಕಲರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಈ ಹಿನ್ನೆಲೆ ಸಾಹಿತಿ ಹಾಗೂ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಹಾದಿಮನಿ ನೇತೃತ್ವದಲ್ಲಿ ಫಲಾನುಭವಿಗಳು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಿ, ಬಾಕಿ ಉಳಿದಿರುವ ಮಾಸಾಶನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

ಮನವಿಯಲ್ಲಿ, ಮಾಸಾಶನವೇ ಜೀವನಾಧಾರವಾಗಿರುವ ಸಾವಿರಾರು ಫಲಾನುಭವಿಗಳು ಹಲವು ತಿಂಗಳಿಂದ ಹಣ ಸಿಗದೇ ಸಂಕಷ್ಟ ಎದುರಿಸುತ್ತಿದ್ದಾರೆ. ವಯೋವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ದಿನನಿತ್ಯದ ಖರ್ಚು ನಿರ್ವಹಿಸುವುದೇ ಕಷ್ಟಕರವಾಗಿದ್ದು, ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಲಾಗಿದೆ.

ನಕಲಿ ದಾಖಲೆಗಳ ಆಧಾರದ ಮೇಲೆ ಮಾಸಾಶನ ಪಡೆಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಹೆಸರಿನಲ್ಲಿ ಅರ್ಹ ಫಲಾನುಭವಿಗಳ ಮಾಸಾಶನ ಸ್ಥಗಿತಗೊಳಿಸಿರುವುದು ಸರಿಯಲ್ಲ. ತಪ್ಪಿತಸ್ಥರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವ ಬದಲು ಎಲ್ಲ ಫಲಾನುಭವಿಗಳನ್ನೂ ಸಂಕಷ್ಟಕ್ಕೆ ತಳ್ಳಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಮಾಸಾಶನ ಸ್ಥಗಿತದಿಂದ ಅನೇಕ ಹಿರಿಯ ನಾಗರಿಕರು ಔಷಧೋಪಚಾರ, ಆಹಾರ ಹಾಗೂ ದಿನನಿತ್ಯದ ಅಗತ್ಯ ವೆಚ್ಚಗಳನ್ನು ಭರಿಸಲು ಪರದಾಡುವಂತಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಬಾಕಿ ಉಳಿದಿರುವ ಮಾಸಾಶನವನ್ನು ಬಿಡುಗಡೆ ಮಾಡಿ ಫಲಾನುಭವಿಗಳ ನೆರವಿಗೆ ಬರಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಕೃಷ್ಣ ಜಾಧವ, ನೀಲಪ್ಪ ತುಳಿ, ಅಡಿವೆಕ್ಕ ರಾಮಗಿರಿ, ವೀರಬಸಯ್ಯ ಮಠಪತಿ, ಇಮಾಮಸಾಬ ಬೈರಕದಾರ, ಜನ್ನತಬಿ ಬೈರಕದಾರ, ಪುಂಡಲೀಕ ಪರಬತ, ವಿನಾಯಕ ಹಾದಿಮನಿ, ಲಕ್ಷ್ಮಣ ತೋಡೇಕಾರ, ಲಕ್ಷ್ಮವ್ವ ಹಾದಿಮನಿ, ಈರಪ್ಪ ಚಿಕ್ಕತೋಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಮಾಸಾಶನ ಇಲ್ಲದೆ ಹಿರಿಯ ನಾಗರಿಕರು, ವಿಧವೆಯರು ಹಾಗೂ ಅಂಗವಿಕಲರು ಜೀವನ ಸಾಗಿಸುವುದೇ ಕಷ್ಟವಾಗಿದೆ. ತಕ್ಷಣ ಬಾಕಿ ಪಿಂಚಣಿ ಬಿಡುಗಡೆ ಮಾಡದಿದ್ದರೆ ಹೋರಾಟ ಅನಿವಾರ್ಯ.”

ಶ್ರೀಕಾಂತ ಹಾದಿಮನಿ

ಸಾಹಿತಿ ಹಾಗೂ ಸಾಮಾಜಿಕ ಕಾರ್ಯಕರ್ತ

ಶಾಲೆಯಲ್ಲೇ ಪ್ರಜಾಪ್ರಭುತ್ವದ ಪಾಠ: ಇವಿಎಂ ಮೂಲಕ ವಿದ್ಯಾರ್ಥಿಗಳ ಮತದಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಾಲ್ಯದಲ್ಲಿಯೇ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತುವ ವಿಶಿಷ್ಟ ಪ್ರಯತ್ನವಾಗಿ ನಗರದ ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಯಶಸ್ವಿಯಾಗಿ ನಡೆಯಿತು. ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿಯೇ ನಡೆದ ಈ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಮತದಾನ ಮಾಡಿ ತಮ್ಮ ನಾಯಕ-ನಾಯಕಿಯರನ್ನು ಆಯ್ಕೆ ಮಾಡಿದರು.

ಶಾಲಾ ನಾಯಕ-ನಾಯಕಿ ಹಾಗೂ ಉಪನಾಯಕ-ಉಪನಾಯಕಿಯರ ಆಯ್ಕೆಗಾಗಿ ಆಯೋಜಿಸಿದ್ದ ಚುನಾವಣೆಯಲ್ಲಿ ಅಭ್ಯರ್ಥಿಗಳ ಘೋಷಣೆ, ನಾಮಪತ್ರ ಸಲ್ಲಿಕೆ, ಪ್ರಚಾರ ಭಾಷಣ, ಪೋಸ್ಟರ್ ಮೇಕಿಂಗ್ ಸ್ಪರ್ಧೆ, ಚುನಾವಣಾ ಜಾಗೃತಿ ನಾಟಕ ಸೇರಿದಂತೆ ಚುನಾವಣೆಯ ಎಲ್ಲ ಹಂತಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲಾಯಿತು. ಇದರಿಂದ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರಕ್ರಿಯೆಯ ನೈಜ ಅನುಭವ ದೊರೆಯುವಂತಾಯಿತು.

ಚುನಾವಣೆಯ ವಿಶೇಷ ಆಕರ್ಷಣೆಯಾಗಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಮಾದರಿಯ ಸಾಫ್ಟ್‌ವೇರ್‌ನ್ನು ಸಿದ್ಧಪಡಿಸಲಾಗಿತ್ತು. ವಿದ್ಯಾರ್ಥಿಗಳು ಇದೇ ವ್ಯವಸ್ಥೆಯ ಮೂಲಕ ಮತ ಚಲಾಯಿಸಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು. ಯುವ ಪೀಳಿಗೆಗೆ ಮತದಾನದ ಮಹತ್ವ ಮತ್ತು ಪ್ರಜಾಪ್ರಭುತ್ವದ ಜವಾಬ್ದಾರಿಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ವಿನೂತನ ಪ್ರಯೋಗ ಕೈಗೊಳ್ಳಲಾಗಿತ್ತು.

ಚುನಾವಣೆಗೆ ಮೂರು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಒಟ್ಟು 26 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, 496 ಮತದಾರರಲ್ಲಿ 473 ವಿದ್ಯಾರ್ಥಿಗಳು ಮತದಾನ ಮಾಡಿ ಶೇ.95.36ರಷ್ಟು ಮತದಾನ ದಾಖಲಿಸಿದರು. 6ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮತದಾನದ ಹಕ್ಕು ನೀಡಲಾಗಿತ್ತು.

ಚುನಾವಣೆಯ ಫಲಿತಾಂಶವನ್ನು ಜೂನ್ 13ರಂದು ಪ್ರಕಟಿಸಲಾಗುವುದು ಎಂದು ಶಾಲಾ ಚುನಾವಣಾಧಿಕಾರಿ ಹಾಗೂ ಶಿಕ್ಷಕಿ ಪೂಜಾ ಎಂ. ಕಾಡಪ್ಪನವರ ತಿಳಿಸಿದ್ದಾರೆ. ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸಂಭ್ರಮ ವ್ಯಕ್ತಪಡಿಸಿದ್ದು, ಶಾಲಾ ಆವರಣವೇ ಪ್ರಜಾಪ್ರಭುತ್ವದ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಯಿತು.

ಪ್ರಜಾಪ್ರಭುತ್ವದ ಪ್ರಾಯೋಗಿಕ ಪಾಠ

ಮತದಾನ, ನಾಯಕತ್ವ ಹಾಗೂ ಜನಪ್ರತಿನಿಧಿಗಳ ಆಯ್ಕೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಅನುಭವಾತ್ಮಕವಾಗಿ ತಿಳಿಸಿಕೊಟ್ಟ ಈ ಶಾಲಾ ಚುನಾವಣೆ, ಭವಿಷ್ಯದ ಜಾಗೃತ ಮತದಾರರನ್ನು ರೂಪಿಸುವಲ್ಲಿ ಮಹತ್ವದ ಹೆಜ್ಜೆಯಾಗಿ ಗಮನ ಸೆಳೆಯಿತು.

ಮಣ್ಣಿನ ಆರೋಗ್ಯವೇ ಸುಸ್ಥಿರ ಕೃಷಿಯ ಅಡಿಪಾಯ: ಚೇತನಾ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಮಣ್ಣಿನ ಫಲವತ್ತತೆ ಕಾಪಾಡಿ ಕೃಷಿಯನ್ನು ಸುಸ್ಥಿರಗೊಳಿಸುವ ಉದ್ದೇಶದಿಂದ ಐಸಿಎಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಹಾಗೂ ಕೃಷಿ ಇಲಾಖೆ, ಗದಗ ಸಹಯೋಗದಲ್ಲಿ ಹಮ್ಮಿಕೊಂಡಿರುವ ಖೇತ್ ಬಚಾವೋ ಅಭಿಯಾನಕ್ಕೆ ಡಿ.ಎಸ್. ರಾಮೇನಹಳ್ಳಿಯಲ್ಲಿ ಚಾಲನೆ ನೀಡಲಾಯಿತು.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಸಸಿಗೆ ನೀರೆರೆಯುವ ಮೂಲಕ ಅಭಿಯಾನ ಉದ್ಘಾಟಿಸಿ ಮಾತನಾಡಿ, ಯೂರಿಯಾ, ಡಿಎಪಿ ಸೇರಿದಂತೆ ವಿವಿಧ ರಾಸಾಯನಿಕ ಗೊಬ್ಬರಗಳ ತಯಾರಿಕೆಗೆ ಅಗತ್ಯ ಕಚ್ಚಾ ವಸ್ತುಗಳ ಕೊರತೆಯಿಂದ ಮುಂದಿನ ದಿನಗಳಲ್ಲಿ ಗೊಬ್ಬರಗಳ ಲಭ್ಯತೆ ಕಡಿಮೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರೈತರು ಮಣ್ಣಿನ ಪರೀಕ್ಷೆ ಆಧರಿಸಿ ಗೊಬ್ಬರ ಬಳಕೆ ಮಾಡುವುದರ ಜೊತೆಗೆ ಸಾವಯವ ಪರ್ಯಾಯಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ರಾಸಾಯನಿಕ ಗೊಬ್ಬರಗಳ ನಿರಂತರ ಮತ್ತು ಅತಿಯಾದ ಬಳಕೆಯಿಂದ ಮಣ್ಣಿನ ಗುಣಮಟ್ಟ ಕುಸಿಯುತ್ತಿದ್ದು, ಬೆಳೆಗಳ ಇಳುವರಿಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹಸಿರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ ಸೇರಿದಂತೆ ಸಾವಯವ ಪರಿಕರಗಳ ಬಳಕೆಯಿಂದ ಮಣ್ಣಿನ ಆರೋಗ್ಯ ಕಾಪಾಡಿ ಉತ್ತಮ ಇಳುವರಿ ಪಡೆಯಬಹುದು ಎಂದು ಹೇಳಿದರು.

ಮುಂಡರಗಿ ಸಹಾಯಕ ಕೃಷಿ ನಿರ್ದೇಶಕ ಡಾ. ಪ್ರಣೇಶ ಹಾದಿಮನಿ ಮಾತನಾಡಿ, ಮಣ್ಣು ಜೀವಂತ ಸಂಪನ್ಮೂಲವಾಗಿದ್ದು, ಅದರಲ್ಲಿರುವ ಉಪಯುಕ್ತ ಸೂಕ್ಷ್ಮಾಣು ಜೀವಿಗಳ ಸಂರಕ್ಷಣೆ ಅತ್ಯಗತ್ಯವಾಗಿದೆ. ಸಾವಯವ ಹಾಗೂ ನೈಸರ್ಗಿಕ ಕೃಷಿಯತ್ತ ರೈತರು ಮುಖ ಮಾಡದಿದ್ದರೆ ಭೂಮಿ ಬರಡಾಗುವ ಅಪಾಯವಿದೆ ಎಂದು ಎಚ್ಚರಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ಚೇತನ ಬಾಬು ಆರ್.ಟಿ. ಹೆಸರು, ಉದ್ದು, ಸೂರ್ಯಕಾಂತಿ ಹಾಗೂ ಕಡಲೆ ಬೆಳೆಗಳ ವೈಜ್ಞಾನಿಕ ಬೇಸಾಯ ಪದ್ಧತಿ ಮತ್ತು ಕೀಟ-ರೋಗಗಳ ಹತೋಟಿಗೆ ಕಡಿಮೆ ವೆಚ್ಚದ ತಂತ್ರಜ್ಞಾನಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.

ಕೃಷಿ ವಿಸ್ತರಣೆ ವಿಜ್ಞಾನಿ ಡಾ. ಮಂಜುಪ್ರಕಾಶ ಪಾಟೀಲ ‘ಖೇತ್ ಬಚಾವೋ ಅಭಿಯಾನ’ದ ಮಹತ್ವವನ್ನು ವಿವರಿಸಿ, ಸಾವಯವ ಮತ್ತು ನೈಸರ್ಗಿಕ ಕೃಷಿ ನಮ್ಮ ಸಂಪ್ರದಾಯದ ಭಾಗವಾಗಿದ್ದು, ಇಂದಿನ ಪರಿಸ್ಥಿತಿಯಲ್ಲಿ ಮತ್ತೆ ಅದರತ್ತ ಮರಳುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಗಳು, ಕೃಷಿ ಸಖಿಯರು, ರೈತರು ಹಾಗೂ ರೈತ ಮಹಿಳೆಯರು ಸೇರಿದಂತೆ 120ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

“ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ ಹದಗೆಡುತ್ತಿದೆ. ಸಾವಯವ ಹಾಗೂ ನೈಸರ್ಗಿಕ ಕೃಷಿಯ ಮೂಲಕ ಮಣ್ಣನ್ನು ಸಂರಕ್ಷಿಸುವುದು ಇಂದಿನ ಅಗತ್ಯ.”

ಚೇತನಾ ಪಾಟೀಲ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ

ಸಾವಯವ ಕೃಷಿಗೆ ಒತ್ತು ನೀಡಿ: ಚೇತನಾ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಣ್ಣಿನ ಫಲವತ್ತತೆ ಕಾಪಾಡಲು ರೈತರು ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಸಾವಯವ ಹಾಗೂ ನೈಸರ್ಗಿಕ ಕೃಷಿಗೆ ಆದ್ಯತೆ ನೀಡಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಹೇಳಿದರು.

ತಾಲೂಕಿನ ಸೂರಣಗಿ ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ‘ಭೂಮಿ ಬಚಾವೋ’ ಹಾಗೂ ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗುತ್ತಿರುವುದು ಮಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರೈತರು ತಮ್ಮ ಜಮೀನಿನ ಒಂದು ಭಾಗವನ್ನಾದರೂ ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಮೀಸಲಿಟ್ಟು ಪ್ರಯೋಗಾತ್ಮಕವಾಗಿ ಕೃಷಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ದ್ವಿದಳ ಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು, ರೈತರು ಹೆಸರು, ತೊಗರಿ, ಉದ್ದು ಸೇರಿದಂತೆ ದ್ವಿದಳ ಧಾನ್ಯಗಳ ಬೆಳೆಗೆ ಒತ್ತು ನೀಡುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂದರು.

ಪ್ರತಿ ವರ್ಷ ಮಣ್ಣಿನ ಪರೀಕ್ಷೆ ಮಾಡಿಸಿ ಅದರ ವರದಿ ಆಧರಿಸಿ ಗೊಬ್ಬರ ಮತ್ತು ಬೆಳೆ ಆಯ್ಕೆ ಮಾಡಿದರೆ ಕೃಷಿಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಇಲಾಖೆಯ ಉಪನಿರ್ದೇಶಕಿ ಸ್ಫೂರ್ತಿ ಜಿ.ಎಸ್., ರೈತರು ಅಗತ್ಯಕ್ಕಿಂತ ಹೆಚ್ಚು ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಮಣ್ಣಿನ ಸತ್ವ ಕಾಪಾಡಲು ಸಮತೋಲಿತ ಗೊಬ್ಬರ ಬಳಕೆ ಅಗತ್ಯ ಎಂದರು.

ಇಫ್ಕೋ ಕಂಪನಿಯ ಕ್ಷೇತ್ರ ಅಧಿಕಾರಿ ಯಕ್ಷಿತ್ ಡಿ.ಎಸ್., ವಿಜ್ಞಾನಿಗಳಾದ ಚೇತನ್ ಬಾಬು, ವಿನಾಯಕ ನಿರಂಜನ ಹಾಗೂ ಸುಧಾ ಮಂಕಣಿ ರೈತರಿಗೆ ಕೃಷಿ ತಂತ್ರಜ್ಞಾನ ಮತ್ತು ಮಣ್ಣಿನ ಆರೋಗ್ಯ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ ಕಾಶಪ್ಪನವರ, ಬಸವರಾಜ ಇಟಗಿ, ಶಂಕ್ರಣ್ಣ ಶಿರನಹಳ್ಳಿ, ಶಶಿಕಲಾ ಸಾಸಲವಾಡ, ಪ್ರಕಾಶ ಕಳ್ಳಿಹಾಳ, ಚನ್ನಪ್ಪ ಶಿರನಹಳ್ಳಿ, ಚಂದ್ರಶೇಖರ ಮೂಲಿಮನಿ ಸೇರಿದಂತೆ ರೈತರು ಭಾಗವಹಿಸಿದ್ದರು.

ಗದಗ ಕೈಗಾರಿಕಾ ವಲಯಕ್ಕೆ ಹೊಸ ಭರವಸೆ: ಸಮಸ್ಯೆಗಳ ಪರಿಶೀಲನೆಗೆ ಅಧಿಕಾರಿಗಳ ಭೇಟಿ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಆನಂದ ಆಶ್ರಮ ರಸ್ತೆಯಲ್ಲಿರುವ ಮುಧೋಳ ಇಂಡಸ್ಟ್ರಿಯಲ್ ಎಸ್ಟೇಟ್‌ಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿದರೆ ರಾಜ್ಯದಲ್ಲೇ ಮಾದರಿ ಕೈಗಾರಿಕಾ ವಲಯವಾಗಿ ರೂಪುಗೊಳ್ಳುವ ಎಲ್ಲ ಸಾಧ್ಯತೆಗಳಿವೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ ಹೇಳಿದರು.

ಬುಧವಾರ ಇಂಡಸ್ಟ್ರಿಯಲ್ ಎಸ್ಟೇಟ್‌ಗೆ ಭೇಟಿ ನೀಡಿ ಉದ್ಯಮಿದಾರರ ಸಮಸ್ಯೆಗಳನ್ನು ಆಲಿಸಿದ ಅವರು, ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು ಹಾಗೂ ಉದ್ಯಮಿದಾರರೊಂದಿಗೆ ಸಭೆ ನಡೆಸಿ ಮಾತನಾಡಿದರು.

ಸುಮಾರು 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಕೈಗಾರಿಕಾ ವಲಯದಲ್ಲಿ 20ಕ್ಕೂ ಹೆಚ್ಚು ಕೈಗಾರಿಕೆಗಳು ಸಕ್ರಿಯವಾಗಿದ್ದು, 400ಕ್ಕೂ ಹೆಚ್ಚು ಕಾರ್ಮಿಕರಿಗೆ ನೇರ ಉದ್ಯೋಗ ಒದಗಿಸುತ್ತಿವೆ. ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಈ ವಲಯದ ಕೊಡುಗೆ ಗಮನಾರ್ಹವಾಗಿದೆ ಎಂದು ಅವರು ಹೇಳಿದರು.

ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಸಲ್ಲಿಸಲಾದ ಮನವಿಗೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ತಕ್ಷಣ ಸ್ಥಳ ಪರಿಶೀಲನೆಗೆ ಸೂಚನೆ ನೀಡಿದ್ದರು. ಅದರಂತೆ ಜಂಟಿ ನಿರ್ದೇಶಕರು ಎಸ್ಟೇಟ್‌ಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದರು.

ಸಭೆಯಲ್ಲಿ ಮಾತನಾಡಿದ ಉದ್ಯಮಿದಾರರು, ರಸ್ತೆ, ಚರಂಡಿ, ಒಳಚರಂಡಿ, ಕುಡಿಯುವ ನೀರು ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳ ಕೊರತೆ ಕೈಗಾರಿಕೆಗಳ ಅಭಿವೃದ್ಧಿಗೆ ತೊಡಕಾಗಿದೆ ಎಂದು ಅಹವಾಲು ಸಲ್ಲಿಸಿದರು.

ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಕೋಲ್ಡ್ ಸ್ಟೋರೇಜ್, ವೇರ್‌ಹೌಸ್ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಸ್ಥಾಪಿಸಲು ಸಾಕಷ್ಟು ಅವಕಾಶಗಳಿದ್ದು, ಉದ್ಯಮಿದಾರರು ಒಗ್ಗೂಡಿ ಸಂಘ ರಚಿಸಿಕೊಂಡರೆ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಅನುಕೂಲವಾಗಲಿದೆ ಎಂದು ಪ್ರಶಾಂತ ಬಾರಿಗಿಡದ ಸಲಹೆ ನೀಡಿದರು. ಚೇಂಬರ್ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಜಿಲ್ಲಾಡಳಿತದ ಸ್ಪಂದನೆಗೆ ಕೃತಜ್ಞತೆ ಸಲ್ಲಿಸಿ, ಉದ್ಯಮಿದಾರರ ಬಹುದಿನಗಳ ಬೇಡಿಕೆಗಳಿಗೆ ಶೀಘ್ರ ಪರಿಹಾರ ದೊರೆಯುವ ನಿರೀಕ್ಷೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಚೇಂಬರ್ ಕಾರ್ಯದರ್ಶಿ ಚನ್ನವೀರಪ್ಪ ಹುಣಶೀಕಟ್ಟಿ, ಉಪಾಧ್ಯಕ್ಷರಾದ ಸಿದ್ಧರಾಮಪ್ಪ ಉಮಚಗಿ, ಪ್ರಕಾಶ ಉಗಲಾಟದ, ಸಹ ಕಾರ್ಯದರ್ಶಿ ರಾಘವೇಂದ್ರ ಕಾಲವಾಡ ಹಾಗೂ ಉದ್ಯಮಿದಾರರಾದ ಬಸವರಾಜ ಅಂಗಡಿ, ವೀರಣ್ಣ ಕಾಡಪ್ಪನವರ, ಶ್ರೀಕಾಂತ ಅಂಗಡಿ, ಅರುಣ ಮಿಸ್ಕಿನ್, ಅಜ್ಜಣ್ಣ ಉಮಚಗಿ, ಚನ್ನಯ್ಯ ಹಿರೇಮಠ, ಶಿವಾನಂದ ನರಗುಂದ, ಸಂಜಯ ಮಿಸ್ಕಿನ್, ಚಂದ್ರಶೇಖರ ಉಗಲಾಟದ, ಬಸವರಾಜ ಕಾಡಪ್ಪನವರ, ಮಂಜಣ್ಣ ಮಲ್ಲರಡ್ಡಿ, ಗಂಗಾಧರ ನವಲಗುಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಸ್ಥಳ ಪರಿಶೀಲನೆ ನಡೆಸಿ ಉದ್ಯಮಿದಾರರ ಸಮಸ್ಯೆಗಳನ್ನು ಆಲಿಸಲಾಗಿದೆ. ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು. ವರದಿ ಆಧರಿಸಿ ಉದ್ಯಮಿಗಳ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು.”

ಪ್ರಶಾಂತ ಬಾರಿಗಿಡದ, ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಕೇಂದ್ರ

ಮಕ್ಕಳ ಭವಿಷ್ಯ ಕಸಿಯುವುದು ಮಹಾಪರಾಧ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳನ್ನು ದುಡಿಮೆಗೆ ತಳ್ಳುವುದು ಕೇವಲ ಕಾನೂನುಬಾಹಿರ ಕೃತ್ಯವಲ್ಲ, ಅದು ಅವರ ಭವಿಷ್ಯ ಕಸಿಯುವ ಸಾಮಾಜಿಕ ಅನ್ಯಾಯವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಕ್ಷಣ ಪಡೆಯಬೇಕಾದ ವಯಸ್ಸಿನಲ್ಲಿ ಮಕ್ಕಳು ದುಡಿಮೆಗೆ ಇಳಿಯುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರತಿಯೊಬ್ಬ ಮಗುವಿಗೂ ಶಿಕ್ಷಣ, ಉತ್ತಮ ಮೌಲ್ಯಗಳು ಮತ್ತು ಸುರಕ್ಷಿತ ಬಾಲ್ಯ ಸಿಗಬೇಕು. ಬಾಲ ಕಾರ್ಮಿಕತೆ ಕಂಡು ಬಂದರೆ ಸಾರ್ವಜನಿಕರು ತಕ್ಷಣ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ, ಶಿಕ್ಷಣವು ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದರು. ಶಿಕ್ಷಣದಿಂದ ದೂರವಾದ ಮಕ್ಕಳು ಬಾಲ ಕಾರ್ಮಿಕತೆ, ಅಪರಾಧ ಚಟುವಟಿಕೆಗಳು ಹಾಗೂ ಮಾದಕ ವ್ಯಸನಗಳಂತಹ ಅನಿಷ್ಟಗಳತ್ತ ಸೆಳೆಯಲ್ಪಡುವ ಅಪಾಯವಿದೆ ಎಂದು ಎಚ್ಚರಿಸಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಯದೇವಿ ಅಂದಪ್ಪ ಕವಲೂರು ಮಾತನಾಡಿ, ಬಡತನ ಮತ್ತು ಅನಕ್ಷರತೆ ಬಾಲ ಕಾರ್ಮಿಕತೆಗೆ ಪ್ರಮುಖ ಕಾರಣಗಳಾಗಿವೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ಜವಾಬ್ದಾರಿ ಪಾಲಕರ ಮೇಲಿದೆ. ಎಲ್ಲಿಯಾದರೂ ಬಾಲ ಕಾರ್ಮಿಕತೆ ಕಂಡುಬಂದರೆ ಮಕ್ಕಳ ಸಹಾಯವಾಣಿ 1098ಕ್ಕೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ, ಮಕ್ಕಳ ಶಿಕ್ಷಣದ ಹಕ್ಕು, ಮಕ್ಕಳ ಸುರಕ್ಷತೆ ಹಾಗೂ ಮಾದಕ ವ್ಯಸನ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲಾಯಿತು. ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಹಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಮಣ್ಣೂರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

“ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಮಾಡದಂತೆ ತಡೆಯುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿ.” 

ಸಿ.ಎನ್. ಶ್ರೀಧರ್

ಜಿಲ್ಲಾಧಿಕಾರಿ

ಒಂದು ಕರೆ, ಒಂದು ಲಿಂಕ್… ಖಾತೆ ಖಾಲಿ! ಸೈಬರ್ ವಂಚನೆಗೆ ಹೊಸ ಬ್ರೇಕ್

0

ವಿಜಯಸಾಕ್ಷಿ ಸುದ್ದಿ, ಗದಗ: ಒಂದು ಮೊಬೈಲ್ ಕರೆ… ಒಂದು ನಕಲಿ ಲಿಂಕ್… ಒಂದು ಒಟಿಪಿ…! ಸಾಕು, ಜೀವನಪೂರ್ತಿ ಕೂಡಿಟ್ಟ ಹಣ ಕ್ಷಣಾರ್ಧದಲ್ಲಿ ಖದೀಮರ ಖಾತೆಗೆ ಜಮೆಯಾಗುತ್ತದೆ. ಸೈಬರ್ ವಂಚಕರ ಕುತಂತ್ರಕ್ಕೆ ಬಲಿಯಾಗಿ ಸಾವಿರಾರು, ಲಕ್ಷಾಂತರ ರೂಪಾಯಿ ಕಳೆದುಕೊಂಡು ಕಣ್ಣೀರಿಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಇಂತಹ ಸಂತ್ರಸ್ತರಿಗೆ ಇದೀಗ ದೊಡ್ಡ ನೆಮ್ಮದಿಯ ಸುದ್ದಿ ಸಿಕ್ಕಿದ್ದು, ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಕೇಂದ್ರ ಸರ್ಕಾರ ಹೊಸ ವ್ಯವಸ್ಥೆ ಜಾರಿಗೊಳಿಸಿದೆ.

ಸೈಬರ್ ವಂಚನೆಗೆ ಒಳಗಾದವರು ಪೊಲೀಸ್ ಠಾಣೆ, ಬ್ಯಾಂಕ್ ಹಾಗೂ ವಿವಿಧ ಕಚೇರಿಗಳ ಸುತ್ತ ಅಲೆದಾಡುವ ದಿನಗಳಿಗೆ ತೆರೆ ಬಿದ್ದಿದೆ. ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (NCRP) ಅಡಿಯಲ್ಲಿ ಜಾರಿಗೊಂಡಿರುವ ‘ಮನಿ ರಿಸ್ಟೋರೇಶನ್ ಮಾಡ್ಯೂಲ್’ ಮೂಲಕ ಸಂತ್ರಸ್ತರು ತಮ್ಮ ಫ್ರೀಜ್ ಆಗಿರುವ ಹಣವನ್ನು ಆನ್‌ಲೈನ್ ಮೂಲಕವೇ ಮರಳಿ ಪಡೆಯಬಹುದಾಗಿದೆ.

ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಗದಗ ಜಿಲ್ಲಾ ಪೊಲೀಸರು ವ್ಯಾಪಕ ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಸೈಬರ್ ವಂಚನೆಗೆ ಒಳಗಾದವರು ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ.

‘ಗೋಲ್ಡನ್ ಅವರ್’ನಲ್ಲಿ ದೂರು ಕೊಟ್ಟರೆ ಹಣ ಉಳಿಯುವ ಸಾಧ್ಯತೆ ಹೆಚ್ಚು

ಸೈಬರ್ ವಂಚನೆ ಪ್ರಕರಣಗಳಲ್ಲಿ ಮೊದಲ ಕೆಲವು ಗಂಟೆಗಳು ಅತ್ಯಂತ ಮಹತ್ವದ್ದಾಗಿವೆ. ಹಣ ಖಾತೆಯಿಂದ ವರ್ಗಾವಣೆಯಾದ ತಕ್ಷಣವೇ 1930 ಸಹಾಯವಾಣಿಗೆ ಕರೆ ಮಾಡಿ ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‌ನಲ್ಲಿ ದೂರು ದಾಖಲಿಸಿದರೆ, ವಂಚಕರು ಹಣವನ್ನು ಹಿಂಪಡೆಯುವ ಮುನ್ನವೇ ಅದನ್ನು ಫ್ರೀಜ್ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ತಡವಾದರೆ ಹಣ ಹಲವು ಖಾತೆಗಳಿಗೆ ವರ್ಗಾವಣೆಯಾಗುವ ಸಾಧ್ಯತೆ ಇದ್ದು, ಮರುಪಾವತಿ ಪ್ರಕ್ರಿಯೆ ಸಂಕೀರ್ಣವಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಸಂತ್ರಸ್ತರು ಎನ್‌ಸಿಆರ್‌ಪಿ ಪೋರ್ಟಲ್‌ನಲ್ಲಿ ದಾಖಲಾಗಿರುವ ತಮ್ಮ ದೂರಿನೊಂದಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಆಗಬೇಕು. ನಂತರ 14 ಅಂಕಿಯ ದೂರು ಸಂಖ್ಯೆಯನ್ನು ನಮೂದಿಸಿ ಅಗತ್ಯ ದಾಖಲೆಗಳು ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸಬೇಕು.

ಪೊಲೀಸ್ ಇಲಾಖೆ ಹಾಗೂ ಬ್ಯಾಂಕ್ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಫ್ರೀಜ್ ಆಗಿರುವ ಹಣವನ್ನು ನೇರವಾಗಿ ಸಂತ್ರಸ್ತರ ಖಾತೆಗೆ ವರ್ಗಾಯಿಸಲಾಗುತ್ತದೆ.

₹50 ಸಾವಿರದವರೆಗೆ ಎಫ್‌ಐಆರ್ ಅಗತ್ಯವಿಲ್ಲ

ಒಂದು ಖಾತೆಯಲ್ಲಿ ₹50 ಸಾವಿರದವರೆಗೆ ಹಣ ಫ್ರೀಜ್ ಆಗಿದ್ದರೆ ಪೊಲೀಸ್ ವರದಿ ಆಧಾರದ ಮೇಲೆ ಮರುಪಾವತಿ ಸಾಧ್ಯವಾಗುತ್ತದೆ. ಆದರೆ ₹50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಪ್ರಕರಣಗಳಲ್ಲಿ ಎಫ್‌ಐಆರ್ ಹಾಗೂ ಹೆಚ್ಚುವರಿ ಪರಿಶೀಲನೆ ಕಡ್ಡಾಯವಾಗಿರುತ್ತದೆ.

‘ನಿಮ್ಮ ಹಣ ಮರಳಿ ಕೊಡಿಸುತ್ತೇವೆ’ ಎಂದು ಕರೆ ಮಾಡುವ ಮಧ್ಯವರ್ತಿಗಳು ಹಾಗೂ ಖಾಸಗಿ ಏಜೆಂಟರ ಬಗ್ಗೆ ಎಚ್ಚರಿಕೆಯಿಂದಿರಬೇಕು. ಹಣ ಮರುಪಾವತಿ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿದ್ದು, ಯಾರಿಗೂ ಹಣ ನೀಡುವ ಅಗತ್ಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾದ್ಯಂತ ಜಾಗೃತಿ ಅಭಿಯಾನ

ಸೈಬರ್ ವಂಚನೆ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗದಗ ಜಿಲ್ಲಾ ಪೊಲೀಸರು ಶಾಲೆ, ಕಾಲೇಜು, ಬ್ಯಾಂಕ್, ಸಾರ್ವಜನಿಕ ಸಭೆ ಹಾಗೂ ಗ್ರಾಮ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಬ್ಯಾಂಕ್ ಖಾತೆ ಸಂಖ್ಯೆ, ಒಟಿಪಿ, ಯುಪಿಐ ಪಿನ್, ಎಟಿಎಂ ಪಿನ್ ಮತ್ತು ಪಾಸ್‌ವರ್ಡ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ.

ಒಂದು ಕ್ಷಣದ ನಿರ್ಲಕ್ಷ್ಯ… ಲಕ್ಷಾಂತರ ರೂ. ನಷ್ಟ!

ಸೈಬರ್ ವಂಚಕರು ಹೊಸ ಹೊಸ ತಂತ್ರಗಳ ಮೂಲಕ ಜನರನ್ನು ಗುರಿಯಾಗಿಸುತ್ತಿದ್ದಾರೆ. ಆದರೆ ಒಂದು ತ್ವರಿತ ದೂರು, ಒಂದು ಕರೆ ಮತ್ತು ಸ್ವಲ್ಪ ಜಾಗೃತಿ ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಉಳಿಸಬಹುದು. ಆದ್ದರಿಂದ “ವಂಚನೆ ಗೊತ್ತಾದ ಕ್ಷಣವೇ 1930” ಎಂಬುದನ್ನು ಮರೆಯಬೇಡಿ.

“ಸೈಬರ್ ವಂಚನೆಗೆ ಒಳಗಾದ ಕ್ಷಣವೇ 1930ಕ್ಕೆ ಕರೆ ಮಾಡಿ. ಸಮಯಕ್ಕೆ ದೂರು ನೀಡಿದರೆ ಕಳೆದುಕೊಂಡ ಹಣವನ್ನು ಫ್ರೀಜ್ ಮಾಡಿ ಮರಳಿ ಪಡೆಯುವ ಅವಕಾಶ ಹೆಚ್ಚಿರುತ್ತದೆ.”

ರೋಹನ್ ಜಗದೀಶ್ಜಿ

ಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಭೂತಾನ್‌ನಲ್ಲಿ ಭಾರತದ ಧ್ವಜ ಹಾರಿಸಿದ ಗದಗದ ಪ್ರತಿಭೆಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಭೂತಾನ್‌ನಲ್ಲಿ ನಡೆದ ಏಷ್ಯನ್ ಆಟ್ಯಾಪಾಟ್ಯಾ ಚಾಂಪಿಯನ್‌ಶಿಪ್‌ನಲ್ಲಿ ಗದಗ ಜಿಲ್ಲೆಯ ಇಬ್ಬರು ಯುವ ಕ್ರೀಡಾಪಟುಗಳು ಚಿನ್ನದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದುಕೊಟ್ಟಿದ್ದು, ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ಬರೆದಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮೆರೆದ ಮುಂಡರಗಿ ತಾಲೂಕಿನ ಶಿಂಗಟರಾಯನಕೇರಿ ತಾಂಡಾದ ರಾಹುಲ್ ಶೇಖರ್ ಕಾರಭಾರಿ ಹಾಗೂ ಶಿರಹಟ್ಟಿ ತಾಲೂಕಿನ ದೇವಿಹಾಳ ತಾಂಡಾದ ಉಳವೇಶ ಶಿವಾಜಿ ಲಮಾಣಿ ಅವರನ್ನು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಜಿಲ್ಲಾಡಳಿತ ಭವನದಲ್ಲಿ ಸನ್ಮಾನಿಸಿ ಅಭಿನಂದಿಸಿದರು.

ಜೂನ್ 7ರಿಂದ 10ರವರೆಗೆ ಭೂತಾನ್‌ನಲ್ಲಿ ನಡೆದ 3ನೇ ಸೀನಿಯರ್ ಏಷ್ಯನ್ ಆಟ್ಯಾಪಾಟ್ಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ್ದ ರಾಹುಲ್ ಶೇಖರ್ ಕಾರಭಾರಿ ಅವರು ಅತ್ಯುತ್ತಮ ಪ್ರದರ್ಶನ ನೀಡಿ ತಂಡದೊಂದಿಗೆ ಚಿನ್ನದ ಪದಕ ಜಯಿಸಿದರು. 15 ಆಟಗಾರರನ್ನು ಒಳಗೊಂಡಿದ್ದ ಭಾರತೀಯ ತಂಡವು ಪ್ರತಿಸ್ಪರ್ಧಿಗಳನ್ನು ಮಣಿಸಿ ಏಷ್ಯಾದ ಚಾಂಪಿಯನ್ ಆಗಿ ಹೊರಹೊಮ್ಮಿತು.

ಇದೇ ವೇಳೆ ಜೂನ್ 4ರಿಂದ 6ರವರೆಗೆ ನಡೆದ ಪ್ರಥಮ ಜೂನಿಯರ್ (ಅಂಡರ್-19) ಏಷ್ಯನ್ ಆಟ್ಯಾಪಾಟ್ಯಾ ಚಾಂಪಿಯನ್‌ಶಿಪ್‌ನಲ್ಲಿ ದೇವಿಹಾಳ ತಾಂಡಾದ ಯುವ ಕ್ರೀಡಾಪಟು ಉಳವೇಶ ಶಿವಾಜಿ ಲಮಾಣಿ ಅವರು ಭಾರತೀಯ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದರು. ಅವರ ನಾಯಕತ್ವದಲ್ಲಿ 15 ಸದಸ್ಯರ ಭಾರತೀಯ ತಂಡ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತನ್ನದಾಗಿಸಿಕೊಂಡಿತು.

ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಈ ಇಬ್ಬರು ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಧ್ವಜ ಹಾರಿಸಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿರುವುದು ಕ್ರೀಡಾ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಸೀಮಿತ ಸೌಲಭ್ಯಗಳ ನಡುವೆಯೂ ಸಾಧನೆ ಮಾಡುವ ಮೂಲಕ ಅವರು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಗ್ರಾಮೀಣ ಭಾಗದ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸ ಇದ್ದರೆ ಯಾವುದೇ ಗುರಿ ಅಸಾಧ್ಯವಲ್ಲ ಎಂಬುದನ್ನು ಈ ಕ್ರೀಡಾಪಟುಗಳು ಸಾಬೀತುಪಡಿಸಿದ್ದಾರೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ ಹಾಗೂ ಶಾಸಕ ಜಿ.ಎಸ್. ಪಾಟೀಲ ಅವರು ದೂರವಾಣಿ ಮೂಲಕ ಕ್ರೀಡಾಪಟುಗಳೊಂದಿಗೆ ಮಾತನಾಡಿ ಅಭಿನಂದನೆ ಸಲ್ಲಿಸಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಜಿಲ್ಲೆ, ರಾಜ್ಯ ಹಾಗೂ ದೇಶದ ಕೀರ್ತಿಯನ್ನು ಹೆಚ್ಚಿಸಿರುವುದು ಶ್ಲಾಘನೀಯ ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಒಂದೇ ಜಿಲ್ಲೆಯ ಇಬ್ಬರು ಯುವಕರು ಸೀನಿಯರ್ ಹಾಗೂ ಜೂನಿಯರ್ ವಿಭಾಗಗಳಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿರುವುದು ಗದಗ ಜಿಲ್ಲೆಯ ಕ್ರೀಡಾ ಇತಿಹಾಸದಲ್ಲೇ ಅಪರೂಪದ ಸಾಧನೆಯಾಗಿದೆ. ಈ ಸಾಧನೆಯಿಂದ ಜಿಲ್ಲೆಯ ಕ್ರೀಡಾಪಟುಗಳಲ್ಲಿ ಹೊಸ ಆತ್ಮವಿಶ್ವಾಸ ಮೂಡಿದ್ದು, ಆಟ್ಯಾಪಾಟ್ಯಾ ಕ್ರೀಡೆಗೆ ಮತ್ತಷ್ಟು ಉತ್ತೇಜನ ದೊರೆತಿದೆ.

ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಶರಣು ಗೊಗೇರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಮನೋಜ್ ರಾಠೋಡ, ಕ್ರೀಡಾಪಟುಗಳ ಪಾಲಕರು, ತರಬೇತುದಾರರು ಹಾಗೂ ಸ್ನೇಹಿತರು ಉಪಸ್ಥಿತರಿದ್ದರು.

“ಗ್ರಾಮೀಣ ಭಾಗದ ಯುವಕರು ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಸಾಧನೆ ಮಾಡಿರುವುದು ಗದಗ ಜಿಲ್ಲೆಯ ಹೆಮ್ಮೆ. ಇವರ ಸಾಧನೆ ಇತರ ಯುವಕರಿಗೆ ಪ್ರೇರಣೆಯಾಗಬೇಕು.”

ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

ಧಾರಾಕಾರ ಮಳೆಗೆ ಚಿಗುರೊಡೆದ ಕೃಷಿ ಕನಸು ಶಿರಹಟ್ಟಿಯಲ್ಲಿ ಭರದಿಂದ ಬಿತ್ತನೆ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮುಂಗಾರು ಆರಂಭದಲ್ಲೇ ಉತ್ತಮ ಮಳೆಯಾಗಿರುವುದು ಶಿರಹಟ್ಟಿ ತಾಲೂಕಿನ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದು, ತಾಲೂಕಿನಾದ್ಯಂತ ಬಿತ್ತನೆ ಕಾರ್ಯ ಜೋರಾಗಿ ಸಾಗುತ್ತಿದೆ. ವಾಡಿಕೆಗಿಂತ ಶೇ.35ರಷ್ಟು ಅಧಿಕ ಮಳೆಯಾಗಿರುವ ಹಿನ್ನೆಲೆಯಲ್ಲಿ ಹೊಲಗಳು ಹದಗೊಂಡಿದ್ದು, ರೈತರು ಬೀಜ ಮತ್ತು ಗೊಬ್ಬರಗಳೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ತಾಲೂಕಿನಲ್ಲಿ ಜನವರಿ 1ರಿಂದ ಜೂನ್ 4ರವರೆಗೆ 130.9 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿತ್ತು. ಆದರೆ ಇದೇ ಅವಧಿಯಲ್ಲಿ 176.9 ಮಿ.ಮೀ. ಮಳೆಯಾಗಿದ್ದು, ಶೇ.35ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ. ಮುಂಗಾರು ಪೂರ್ವದಲ್ಲಿಯೇ ಆಗಿಂದಾಗ್ಗೆ ಸುರಿದ ಮಳೆಯಿಂದ ರೈತರು ತಮ್ಮ ಜಮೀನುಗಳನ್ನು ಬಿತ್ತನೆಗೆ ಸಿದ್ಧಪಡಿಸಿಕೊಂಡಿದ್ದರು. ಇದೀಗ ಜಮೀನುಗಳು ಬಿತ್ತನೆಗೆ ಯೋಗ್ಯವಾಗಿರುವುದರಿಂದ ರೈತರು ಬೀಜ-ಗೊಬ್ಬರ ಖರೀದಿಸಿ ಹೊಲಗಳತ್ತ ಮುಖ ಮಾಡಿದ್ದಾರೆ.

ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 51,698 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣವಿದ್ದು, ಅದರಲ್ಲಿ 46,735 ಹೆಕ್ಟೇರ್ ಪ್ರದೇಶ ಕೃಷಿಗೆ ಯೋಗ್ಯವಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 36,430 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ.

ಈಗಾಗಲೇ 10,355 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಪೂರ್ಣಗೊಂಡಿದೆ. ಮೆಕ್ಕೆಜೋಳ 8,500 ಹೆಕ್ಟೇರ್, ಹೆಸರು 1,220 ಹೆಕ್ಟೇರ್, ತೊಗರಿ 550 ಹೆಕ್ಟೇರ್, ಶೇಂಗಾ 25 ಹೆಕ್ಟೇರ್, ಸೋಯಾಬಿನ್ 15 ಹೆಕ್ಟೇರ್ ಹಾಗೂ ಹತ್ತಿ 45 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಮುಂದಿನ ಕೆಲ ದಿನಗಳಲ್ಲಿ ಮಳೆ ಮುಂದುವರಿದರೆ ಬಿತ್ತನೆ ಕಾರ್ಯ ಮತ್ತಷ್ಟು ವೇಗ ಪಡೆಯುವ ನಿರೀಕ್ಷೆಯಿದೆ.

ಕೃಷಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ತಾಲೂಕಿನಲ್ಲಿ ಯೂರಿಯಾ 783.5 ಮೆಟ್ರಿಕ್ ಟನ್, ಡಿಎಪಿ 126.5 ಮೆಟ್ರಿಕ್ ಟನ್ ಹಾಗೂ ಕಾಂಪ್ಲೆಕ್ಸ್ ಗೊಬ್ಬರ 617 ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದೆ.

ಹೆಸರು ಬೀಜ 67.20 ಕ್ವಿಂಟಲ್ ದಾಸ್ತಾನು ಇದ್ದು, ಅದರಲ್ಲಿ 66.20 ಕ್ವಿಂಟಲ್ ವಿತರಿಸಲಾಗಿದೆ. ತೊಗರಿ ಬೀಜ 187.20 ಕ್ವಿಂಟಲ್ ವಿತರಿಸಲಾಗಿದೆ. ಮೆಕ್ಕೆಜೋಳ ಬೀಜ 476.24 ಕ್ವಿಂಟಲ್ ಲಭ್ಯವಿದ್ದು, 208.86 ಕ್ವಿಂಟಲ್ ವಿತರಿಸಲಾಗಿದ್ದು, 267.86 ಕ್ವಿಂಟಲ್ ದಾಸ್ತಾನು ಉಳಿದಿದೆ.

ಕೃಷಿ ಇಲಾಖೆಯಿಂದ ಹೆಚ್ಚಿನ ಮಾರ್ಗದರ್ಶನಕ್ಕೆ ಒತ್ತಾಯ

ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ಹಾಗೂ ತಳಿಗಳ ಬೀಜಗಳು ಮಾರಾಟವಾಗುತ್ತಿದ್ದು, ಅವುಗಳ ಗುಣಮಟ್ಟದ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ ನೀಡಬೇಕಾಗಿದೆ. ಕೃಷಿ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿ ಪರಿಶೀಲಿಸಬೇಕು ಹಾಗೂ ರೋಗ-ಕೀಟಗಳ ಹತೋಟಿ ಕುರಿತು ಸಲಹೆ ನೀಡಬೇಕು ಎಂಬ ಒತ್ತಾಯ ರೈತರಿಂದ ಕೇಳಿಬಂದಿದೆ.

ಜೊತೆಗೆ ಬೀಜ ಮತ್ತು ಗೊಬ್ಬರಗಳ ಕೃತಕ ಅಭಾವ ಉಂಟಾಗದಂತೆ ನಿಗಾ ವಹಿಸುವುದು, ಬೆಳೆಗಳಲ್ಲಿ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಹೆಚ್ಚಿನ ಇಳುವರಿ ಪಡೆಯಲು ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ತರಬೇತಿ ನೀಡುವುದು ಅಗತ್ಯವಾಗಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ, ರೈತರು ಯೂರಿಯಾ ಗೊಬ್ಬರವನ್ನು ಮಿತವಾಗಿ ಬಳಸಬೇಕು. ಬೀಜ ಮತ್ತು ಗೊಬ್ಬರ ಖರೀದಿಸುವಾಗ ಕಡ್ಡಾಯವಾಗಿ ಎಂಆರ್‌ಪಿ ಬಿಲ್ ಪಡೆಯಬೇಕು. ಮಾರಾಟಗಾರರು ಸಹ ರೈತರಿಗೆ ಬಿಲ್ ನೀಡುವುದನ್ನು ಕಡ್ಡಾಯವಾಗಿ ಪಾಲಿಸಬೇಕು. ದಾಸ್ತಾನು ಪ್ರಮಾಣವನ್ನು ಅಂಗಡಿಗಳಲ್ಲಿ ಪ್ರದರ್ಶಿಸುವಂತೆ ಸೂಚಿಸಲಾಗಿದೆ. ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಬಳಕೆ ಮಾಡುವುದರಿಂದ ಗೊಬ್ಬರ ಬಳಕೆ ಕಡಿಮೆಯಾಗಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಸಲಹೆ ನೀಡಿದರು.

“ರೈತರು ಯೂರಿಯಾ ಗೊಬ್ಬರವನ್ನು ಮಿತವಾಗಿ ಬಳಸಬೇಕು. ಬೀಜ-ಗೊಬ್ಬರ ಖರೀದಿಸುವಾಗ ಕಡ್ಡಾಯವಾಗಿ ಬಿಲ್ ಪಡೆಯಬೇಕು. ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಬಳಕೆ ಮಾಡುವುದು ಸೂಕ್ತ.”

 ಶಿವಕುಮಾರ ಕಾಶಪ್ಪನವರ

ಸಹಾಯಕ ಕೃಷಿ ನಿರ್ದೇಶಕ