Home Blog Page 86

ಮಕ್ಕಳ ಭವಿಷ್ಯ ರೂಪಿಸಲು ಮುಂದಾಗಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿಕ್ಷಕ ವೃತ್ತಿ ಬಹು ಪವಿತ್ರವಾದ ವೃತ್ತಿಯಾಗಿದ್ದು, ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸದಾ ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ್ ಅಭಿಪ್ರಾಯಪಟ್ಟರು.

ಅವರು ಎಸ್‌ಟಿಪಿಎಂಬಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆದ 21ನೇ ವರ್ಷದ ವಾರ್ಷಿಕೋತ್ಸವ `ಏಕವಂಶೀಯತ: ಫೋಲ್ಡ್’ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ತಾಯಿ ಪಾರ್ವತಿ ಮಕ್ಕಳ ಬಳಗ ಸಂಸ್ಥೆಯ ಉಪಾಧ್ಯಕ್ಷೆ ಜಯಲಕ್ಷ್ಮಿ ಮಹಾಂತಶೆಟ್ಟರ ಹಾಗೂ ಕಾರ್ಯದರ್ಶಿ ಜಯಲಕ್ಷ್ಮಿ ಗಡ್ಡದೇವರಮಠ ಮಾತನಾಡಿ, ವಿದ್ಯಾರ್ಥಿಗಳು ಗುರು-ಹಿರಿಯರ ಮಾತುಗಳನ್ನು ಕೇಳಿ ಬದುಕಿನಲ್ಲಿ ಸನ್ಮಾರ್ಗದಲ್ಲಿ ಸಾಗಿ ಜೀವನದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ಸಾಗಬೇಕು. ಶ್ರಮಪಟ್ಟು ಓದಿ ಸಾಮಾನ್ಯರ ಗುಂಪಿನಿಂದ ಸಾಧಕರ ಗುಂಪಿಗೆ ಸೇರಬೇಕು. ಅದಕ್ಕಾಗಿ ಯೋಜನಾಬದ್ಧವಾಗಿ ರೂಪು-ರೇಷೆಗಳನ್ನು ಹಾಕಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ಪಾಲಕ ಪ್ರತಿನಿಧಿಯಾಗಿ ವಿಜಯಾ ಕೆಂಚನಗೌಡ ಮಾತನಾಡಿದರು. ಮುಖ್ಯೋಪಾಧ್ಯಾಯ ಪ್ರಭುಗೌಡ ಯಕಿಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಸ್ವಾತಿ ಉದಯ ಪೈ ಶಾಲೆ ನಡೆದು ಬಂದ ದಾರಿ, ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಸಾಧನೆಯ ಕುರಿತು ವರದಿ ಮಂಡಿಸಿದರು.

ಸಂಸ್ಥೆಯ ಅಧ್ಯಕ್ಷೆ ಸುವರ್ಣ ಬಾಯಿಬಹದ್ದೂರ ದೇಸಾಯಿ, ಶಾರಕ್ಕಾ ಮಹಾಂತಶೆಟ್ಟರ, ರೋಹಿಣಿಬಾಯಿ ಬಹದ್ದೂರದೇಸಾಯಿ, ಇಸಿಓ ರಾಘವೇಂದ್ರ ಜೋಶಿ, ಸಿಆರ್‌ಪಿ ಶ್ರೀನಿವಾಸ್ ಮತ್ತೂರ, ಡಾ. ಶಿವಾನಂದ ಹೂವಿನ ಉಪಸ್ಥಿತರಿದ್ದರು.

ನಂತರ ಶಾಲಾ ವಿದ್ಯಾರ್ಥಿಗಳಿಂದ ಶಿವನ ಭಕ್ತಿಯ ಪರಿ, ಯಕ್ಷಗಾನ, ಮೋಹಿನಿ ಅಟ್ಟಂ, ಭರತನಾಟ್ಯದಂತಹ ನೃತ್ಯ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ದೇಸಾಯಿ, ರೂಪಾ ನವಲೆ, ವೀಣಾ ಜಾಮನೂರ, ಲೀಲಾವತಿ ಬೆಳಗಟ್ಟಿ, ಸಿಮ್ರಾನ ನಾಡಗೆರ, ಆಶಾ ಜಾದವ, ಪವಿತ್ರಾ ಕಾರಬಾರಿ, ಶಿವಯೋಗಿ ವಾಲಿಶೆಟ್ಟರ, ಶ್ವೇತಾ ಅರಳಿ ಸೇರಿದಂತೆ ಶಿಕ್ಷಕಿಯರು, ಸಿಬ್ಬಂದಿಗಳು, ಪಾಲಕರು ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಮಹಾರಾಜಪೇಟ ಸ್ವಾಗತಿಸಿದರು. ಮಂಜುಳಾ ಪಾಟೀಲ ನಿರೂಪಿಸಿದರು, ವಿನಾಯಕ್ ದೊಡ್ಡಮನಿ ವಂದಿಸಿದರು.

ಸಿ.ವಿ. ರಾಮನ್ ಅಪ್ರತಿಮ ವಿಜ್ಞಾನಿ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರಾಮನ್ ಪರಿಣಾಮದ ಮೂಲಕ ಜಗತ್ತಿನ ಗಮನ ಸೆಳೆದು ನೋಬಲ್ ಪಾರಿತೋಷಕಕ್ಕೆ ಪಾತ್ರರಾದ ಸರ್ ಸಿ.ವಿ. ರಾಮನ್ ಅಪ್ರತಿಮ ವಿಜ್ಞಾನಿ. ಅವರು ನಮ್ಮ ದೇಶದ ವೈಜ್ಞಾನಿಕ ಕಣ್ಮಣಿ ಎಂದು ಮುಖ್ಯ ಶಿಕ್ಷಕ ಮಂಜುನಾಥ ಗ್ರಾಮಪುರೋಹಿತ ಹೇಳಿದರು.

ಪಟ್ಟಣದ ಡಾ. ಕೆ.ಬಿ. ಧನ್ನೂರ ಪಿಎಸ್‌ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚರಿಸಲಾದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಸರ್ ಸಿ.ವಿ. ರಾಮನ್‌ರವರ ಬಾಲ್ಯ, ಜೀವನ, ನಡೆದು ಬಂದ ದಾರಿಯ ಬಗ್ಗೆ ವಿವರಿಸಿದ ಮಂಜುನಾಥ ಅವರು ಅವರ ಸಂಶೋಧನೆಗಳ ಪರಿಚಯ ಮಾಡಿಕೊಟ್ಟರು. ರಾಮನ್ ಪರಿಣಾಮದ ಮೂಲಕ ಅವರು ಹೇಗೆ ಜಗತ್ಪ್ರಸಿದ್ಧಿಯಾದರು ಎಂಬುದನ್ನು ವಿವರಿಸಿದರು.

ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಸುರೇಶ ಮಲ್ಲನಗೌಡರ ಮಾತನಾಡಿ, ನೀವು ನಿಮ್ಮಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಬಿಡುವಿನ ಸಮಯದಲ್ಲಿ ವೈಜ್ಞಾನಿಕ ಲೇಖನಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಎನ್.ಎಂ. ತಹಸೀಲ್ದಾರ, ವಿ.ಜೆ. ಜೋಗಿ, ಆರ್.ಜೆ. ನಾಗಠಾಣ, ಅಶ್ವಿನಿ ಹಡಪದ, ಕವಿತಾ, ಅಕ್ಷತಾ, ನಿರಂಜನ, ಪುಷ್ಪಾ ಹಿರೇವಡೆಯರ, ಎಂ.ವಿ. ವಾಲ್ಮೀಕಿ, ಬಿ.ಎಫ್. ನೀರಲಗಿ, ಎಂ.ಜಿ. ಮಸ್ಕಿ, ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮನುಕುಲಕ್ಕೆ ಶಾಂತಿ ಮಂತ್ರ ಕಲಿಸಿದವರು ಕನಕದಾಸರು

ವಿಜಯಸಾಕ್ಷಿ ಸುದ್ದಿ, ಗದಗ: ನಾಡಿನ ಪುಣ್ಯದ ಫಲವಾಗಿ ಕನಕದಾಸರು ಜನಿಸಿ ಬಂದಿದ್ದಾರೆ. ನೂರಾರು ದಾರ್ಶನಿಕರಲ್ಲಿ ಕನಕದಾಸರು ಎದ್ದು ಕಾಣುತ್ತಾರೆ ಎಂದು ಕನಕಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಸಾಹಿತಿಗಳಾದ ಡಾ. ಲಿಂಗದಳ್ಳಿ ಹಾಲಪ್ಪ ಹೇಳಿದರು.

ನಗರದ ಕನಕ ಭವನದಲ್ಲಿ ಬೆಂಗಳೂರಿನ ಶ್ರೀ ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿ ಆಯೋಜಿಸಿದ್ದ ಶ್ರೀ ಕನಕ ಸಾಹಿತ್ಯ ಸಂಭ್ರಮದ 100ನೇ ಉಪನ್ಯಾಸದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರೊ. ಸುಧಾ ಕೌಜಗೇರಿ ಮಾತನಾಡಿ, ಕನಕದಾಸರು ಸಾಹಿತ್ಯ ಕ್ಷೇತ್ರದಲ್ಲಿ ನಕ್ಷತ್ರವಾಗಿ ಬೆಳೆದವರು. 12ನೇ ಶತಮಾನದಲ್ಲಿ ಶರಣ ಸಾಹಿತ್ಯ ಬಂತು. ಕನಕದಾಸರು ಏಕಾಂಗಿಯಾಗಿ ಬೆಳೆದವರು. ಸಂತ, ಭಕ್ತ, ಕವಿ ಅಲ್ಲದೆ ಅವರೊಬ್ಬ ಮಹಾನ್ ಹೋರಾಟಗಾರರಾಗಿದ್ದಾರೆ. ಅವರ ಮುಂಡಿಗೆಗಳಿಗೆ ಈವರೆಗೂ ಉತ್ತರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ರುದ್ರಣ್ಣ ಗುಳಗುಳಿ ಅವರು ಮಾತನಾಡಿ, ಈ ಕಾರ್ಯಕ್ರಮ ಸಂಘಟಿಸುವ ಹಿಂದೆ ಸಾಕಷ್ಟು ಶ್ರಮವಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಕೈಜೋಡಿಸಿ ಕನಕದಾಸರ ಸಾಹಿತ್ಯವನ್ನು ಇನ್ನಷ್ಟು ಜನರಿಗೆ ಪರಿಚಯಿಸಬೇಕಾಗಿದೆ ಎಂದರು.

ಚಿಂತಕ ಮಂಜುನಾಥ ಹೊನ್ನನವರ ಮಾತನಾಡಿ, ದಿನನಿತ್ಯದ ಬದುಕಿನಲ್ಲಿ ಕನಕದಾಸರು ನೀಡಿದ ಜೀವನ ತತ್ವ, ಚಿಂತನೆ, ಜ್ಞಾನ ಹಸಿವಿನಿಂದ ಆತ್ಮಸ್ಥೈರ್ಯ ಬೆಳೆಯಲು ಸಾಧ್ಯ. ಇಡೀ ಜಗತ್ತಿನ ನ್ಯೂನತೆ ಕಿತ್ತಾಟವಾಗಿದೆ. ಹಾಗಾಗಿ ಅಹಂಕಾರ ಬಿಡಬೇಕು. ಮನುಕುಲಕ್ಕೆ ಶಾಂತಿ ಮಂತ್ರ ನೀಡಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ ಎಂದರು.

ಡಾ. ಹನಮಗೌಡ ಪಾಟೀಲ ಮಾತನಾಡಿ, ಕನಕ ಸಂಭ್ರಮ ಕುಟುಂಬ, ವಿಜ್ಞಾನ, ತಂತ್ರಜ್ಞಾನ ಆವಿಷ್ಕಾರ, ಧಾರ್ಮಿಕ ಪ್ರಜ್ಞೆ ವಾಸ್ತವಿಕ ಅಂಶಗಳನ್ನು ತಿಳಿಸಲು ಸಂಶೋಧಕರು ಮುಂದಾಗಬೇಕು. ಕನಕ ಸಂದೇಶ ಎಲ್ಲ ಮಾಧ್ಯಮಗಳನ್ನು ಬಳಸಿಕೊಂಡು ಜನರಿಗೆ ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುರೇಶ ಕೊಪ್ಪದ ಮಾತನಾಡಿ, ಈ ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಸಮಾಜದ ಹಿರಿಯರು ಹಾಗೂ ಎಲ್ಲ ತಾಲೂಕಿನ ನೌಕರರ ಬಾಂಧವರು ಅಲ್ಲಲ್ಲಿ ಸಭೆ ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಾಕಷ್ಟು ಶ್ರಮಪಟ್ಟಿದ್ದಾರೆ. ಅವರೆಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಅಧ್ಯಕ್ಷತೆ ವಹಿಸಿದ್ದರು. ವಾಸಣ್ಣ ಕುರಡಗಿ, ರವಿ ದಂಡಿನ, ಪ್ರಕಾಶ ಕರಿ ಮಾತನಾಡಿದರು. ವೇದಿಕೆ ಮೇಲೆ ರಾಜಶೇಖರ ಕಲ್ಲೂರ, ಡಿಡಿಪಿಐ ಆರ್.ಎಸ್. ಬುರಡಿ, ರಾಮಕೃಷ್ಣ ರೊಳ್ಳಿ, ನಿಂಗಪ್ಪ ಸವಣೂರ, ಮಹಾಂತೇಶ ನಿಟ್ಟಾಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ನಂತರ ಶ್ರದ್ಧಾ ಕಬಾಡಿ, ಇಷಾ ಗಣಾಚಾರಿ ಅವರಿಂದ ಭರತನಾಟ್ಯ ಜರುಗಿತು. ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ಹಂತದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಕನಕದಾಸರ ಸಾಹಿತ್ಯ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ 76ರಿಂದ 100ನೇ ಆನ್‌ಲೈನ್ ಗೂಗಲ್ ಮೀಟ್‌ನಲ್ಲಿ ಕನಕದಾಸರ ಸಾಹಿತ್ಯದ ಉಪನ್ಯಾಸ ನೀಡಿದವರಿಗೆ ಸನ್ಮಾನಿಸಲಾಯಿತು.

ಸಮಿತಿಯ ರಾಜ್ಯ ಸಮನ್ವಯಾಧಿಕಾರಿ ಕೃಷ್ಣ ಖಾನಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಮಾರುತಿ ಮಡ್ಡಿ ಸ್ವಾಗತಿಸಿದರು. ಆರ್.ಜಿ. ಕೊರ್ಲಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಕೆರಿ ವಂದಿಸಿದರು.

ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಪ್ರೊ. ಎಫ್.ಟಿ. ಹಳ್ಳಿಕೇರಿ ಮಾತನಾಡಿ, ಸಂಘಟನೆ ಶ್ರದ್ಧೆ, ಶ್ರಮದಿಂದ 100ನೇ ಮಾಲಿಕೆ ಸಾಧ್ಯವಾಗಿದೆ. ಗದಗ ಜಿಲ್ಲೆ ಹಾಲಮತ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದೆ. 1920ರಲ್ಲಿ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರಿನಲ್ಲಿ ಟ್ರೇನಿಂಗ್ ಸೆಂಟರ್ ತೆರೆದಿದ್ದರು. ಹಾಲಮತ ಚರಿತ್ರೆಯನ್ನು ಬೆಳಕಿಗೆ ತಂದ ವಿ.ಆರ್. ಹನಮಂತಯ್ಯ ಅವರನ್ನು ಹಾಲುಮತ ಪಿತಾಮಹ ಎಂದು ಕರೆಯಬಹುದು. ಸಾಹಿತ್ಯ, ಸಮಾಜ ಬೆಳವಣಿಗೆ, ಡೊಳ್ಳಿನ ಹಾಡು ಸಂಗ್ರಹಿಸಿ ಸಂಪುಟ ಹೊರತರಬೇಕು. ಮನೆ ಮನೆಗೂ ಕನಕದಾಸರ ಸಾಹಿತ್ಯ ತಲುಪಿಸಬೇಕಾಗಿದೆ. ನಮ್ಮ ಆರಾಧ್ಯ ದೈವದ ಬಗೆಗೆ ಇರುವ ಹಲವು ಗೊಂದಲ ನಿವಾರಿಸಬೇಕಾಗಿದೆ ಎಂದರು.

ಲತಾ ಬೆಟಗೇರಿ ನಿಧನ: ನೇತ್ರದಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಕೆ.ಸಿ. ರಾಣಿ ರಸ್ತೆಯ ಸಾಯಿಬಾಬಾ ಮಂದಿರದ ಬಳಿಯ ನಿವಾಸಿ ಲತಾ ರವಿ ಬೆಟಗೇರಿ (ಕುಲಕರ್ಣಿ) ರವಿವಾರ ನಿಧನರಾದರು. ಮೃತರಿಗೆ ಪತಿ ಹಾಗೂ ಬಂಧು-ಬಳಗವಿದೆ.

ಗದಗ-ಬೆಟಗೇರಿ ಲಯನ್ಸ್ ಕ್ಲಬ್‌ನ ಪ್ರೇರಣೆಯಿಂದಾಗಿ ಕುಟುಂಬಸ್ಥರು ಮೃತರ ನೇತ್ರದಾನ ಮಾಡಲು ಒಪ್ಪಿಗೆ ಸೂಚಿಸಿದ್ದರನ್ವಯ ಗದಗ ಜಿಮ್ಸ್‌ನ ನೇತ್ರ ತಜ್ಞರ ತಂಡ ನೇತ್ರದಾನ ಪ್ರಕ್ರಿಯೆ ಕೈಗೊಂಡರು.

ಈ ಸಂದರ್ಭದಲ್ಲಿ ರವಿ ಬೆಟಗೇರಿ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ, ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಖಜಾಂಚಿ ರೇಣುಕಾ ಪ್ರಸಾದ ಹಿರೇಮಠ, ರಮೇಶ ಶಿಗ್ಲಿ, ಸಂಜಯ ರುದ್ದಂ ಮುಂತಾದವರಿದ್ದರು.

ದೈವ ಅವಮಾನ ವಿವಾದ; ರಣವೀರ್ ಸಿಂಗ್ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

0

ತುಳುನಾಡಿನ ದೈವ ಕುರಿತು ಅವಮಾನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಬಾಲಿವುಡ್ ನಟ ರಣವೀರ್ ಸಿಂಗ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಯಿತು.

ಕಾಂತಾರಾ ಚಾಪ್ಟರ್–1 ಚಿತ್ರದ ಪಾತ್ರದ ಕುರಿತು ನೀಡಿದ್ದ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ದಾಖಲಾದ ದೂರಿನ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆ ನಡೆದಿದ್ದು, ಈ ವೇಳೆ ರಣವೀರ್ ಸಿಂಗ್ ಪರ ವಕೀಲ ಸಜನ್ ಪೂವಯ್ಯ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ, ಇರಾನ್–ಇಸ್ರೇಲ್ ಯುದ್ಧ ಪರಿಸ್ಥಿತಿಯಿಂದಾಗಿ ನಟರು ಇಂಗ್ಲೆಂಡ್‌ನಲ್ಲೇ ಸಿಲುಕಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಸರ್ಕಾರದ ಪರ ಎಸ್‌ಪಿಪಿ ಜಗದೀಶ್ ಅವರು ನಟರಿಗೆ ನೋಟಿಸ್ ನೀಡಲಾಗಿದ್ದು, ಅವರು ಕಾಲಾವಕಾಶ ಕೇಳಿದ್ದಾರೆ ಎಂದು ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ, ಹೈಕೋರ್ಟ್ ರಣವೀರ್ ಸಿಂಗ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿ, ಅರ್ಜಿ ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಿದೆ.

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಖಮೇನಿ ಪತ್ನಿ ನಿಧನ!

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪತ್ನಿ ಮನ್ಸೌರೆ ಖೋಜಸ್ತೆಹ್ ಇಂದು ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

78 ವರ್ಷದ ಮನ್ಸೌರೆ ಖೋಜಸ್ತೆಹ್ ಅವರು ದಾಳಿಯ ಬಳಿಕ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ದಿನಗಳ ಹಿಂದೆ ನಡೆದ ಅಮೆರಿಕ–ಇಸ್ರೇಲ್ ಜಂಟಿ ದಾಳಿಯಲ್ಲಿ ಖಮೇನಿ ಸೇರಿದಂತೆ ಅವರ ಕುಟುಂಬದ ಹಲವಾರು ಸದಸ್ಯರು ಮೃತಪಟ್ಟಿದ್ದರು. ಟೆಹ್ರಾನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ ದಾಳಿಯಲ್ಲಿ ಪ್ರಮುಖ ವಾಯು ನೆಲೆಗಳು ಹಾಗೂ ಭದ್ರತಾ ಕೇಂದ್ರಗಳು ಹಾನಿಗೊಳಗಾಗಿದ್ದವು.

ಖಮೇನಿ ಸಾವಿನ ವಿಷಯವನ್ನು ಡೊನಾಲ್ಡ್ ಟ್ರಂಪ್ ಸಾರ್ವಜನಿಕವಾಗಿ ಘೋಷಿಸಿದ ಕೆಲವೇ ಗಂಟೆಗಳ ಬಳಿಕ ಇರಾನ್ ಮಾಧ್ಯಮಗಳು ಅಧಿಕೃತ ದೃಢೀಕರಣ ನೀಡಿದ್ದವು. ದಾಳಿಯ ನಂತರ ಗಾಯಗೊಂಡಿದ್ದ ಖಮೇನಿಯವರ ಪತ್ನಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಲಾಗಿದೆ.

ಭವಿಷ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ದಾಳಿ ಸಂಭವಿಸಬಹುದು ಎಂಬ ಅಂದಾಜಿನ ಹಿನ್ನೆಲೆ ಇರಾನ್ ವಾಯು ರಕ್ಷಣಾ ವ್ಯವಸ್ಥೆ ಬಲಪಡಿಸಲು ಪ್ರಯತ್ನಿಸಿತ್ತು. ಆದರೆ ದಾಳಿಯ ಸಮಯದಲ್ಲಿ ಆ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ವಿಫಲವಾದ ಕಾರಣ ಖಮೇನಿ ಸೇರಿದಂತೆ ಉನ್ನತ ಮಟ್ಟದ ಕಮಾಂಡರ್‌ಗಳು ದಾಳಿಗೆ ಬಲಿಯಾದರು ಎಂಬ ಮಾಹಿತಿಯೂ ಹೊರಬಂದಿದೆ.

ಈ ಘಟನೆ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಪ್ರದೇಶದ ಭದ್ರತಾ ಪರಿಸ್ಥಿತಿ ಗಂಭೀರವಾಗುತ್ತಿದೆ.

ಪೀರಸಾಬ ಕೌತಾಳ ಅಂದ್ರೆ ಸರ್ವ ಕ್ಷೇತ್ರಗಳ ಸೇವಕ- ಮಾನವ ಧರ್ಮ ಸಾಧಕ!

ಒಬ್ಬ ವ್ಯಕ್ತಿ ಸರ್ವರೊಳಗೆ ಒಂದಾಗಿ ಅರಿತು ಬೆರೆತು ನಡೆದುಕೊಂಡರೆ ಎಂತಹ ಅದ್ಭುತ ಶಕ್ತಿಯಾಗಿ ಕಾಣಬಹುದು ಎಂಬುದಕ್ಕೆ ‘ಸರ್ವ ಕ್ಷೇತ್ರಗಳ ಸೇವಕ, ಮಾನವ ಧರ್ಮದ ಸಾಧಕ’ರಾಗಿರುವ ಪೀರಸಾಬ ಕೌತಾಳ ಅವರು ಸ್ಪಷ್ಟ ಉದಾಹರಣೆ.

“ತನ್ನ ಧರ್ಮವನ್ನು ಪ್ರೀತಿಸು, ಇತರ ಧರ್ಮಗಳನ್ನು ಗೌರವಿಸು” ಎಂಬ ತತ್ವವನ್ನು ಪಾಲಿಸುವಲ್ಲಿ ಯಶಸ್ವಿಯಾಗಿರುವ ಪೀರಸಾಬ ಕೌತಾಳ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಸೇರಿದಂತೆ ಸರ್ವ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವಕರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸದಾ ಲವಲವಿಕೆಯಿಂದ ಸ್ನೇಹಮಯ ನಡೆ-ನುಡಿಯಲ್ಲಿ ಎಲ್ಲರನ್ನು ತನ್ನತ್ತ ಸೆಳೆಯುತ್ತಾ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪೀರಸಾಬ ಕೌತಾಳರ ಸಾಧನೆ ನಿಜಕ್ಕೂ ಹುಬ್ಬೇರಿಸುವಂತಿದ್ದು, ಕಣ್ಣರಳಿಸುವಂತಿದೆ.

ರೂಪಾಂತರದ ಬದುಕು-ಒರಟಿನಿಂದ ಒಲವಿನತ್ತ

ಒಂದು ಕಾಲದಲ್ಲಿ ಹೊಡಿ-ಬಡಿ ನಡೆ-ನುಡಿಯ, ಒರಟು ಸ್ವಭಾವದವರಾಗಿದ್ದ ಪೀರಸಾಬ ಕೌತಾಳರ ಇಂದಿನ ಬದಲಾವಣೆಗಳನ್ನು ಕಂಡರೆ ಆಶ್ಚರ್ಯವೆನಿಸದೆ ಇರಲಾಗದು.

ಭಕ್ತಿ ಮಾರ್ಗದ ಅನುಕರಣೆಯಲ್ಲಿ, ಸಾಮಾಜಿಕ ಸೇವೆಯ ಚಿಂತನೆಯಲ್ಲಿ ಹಾಗೂ ಮಾನವೀಯ ಮೌಲ್ಯಗಳ ಅಳವಡಿಕೆಯಲ್ಲಿ ಎಲ್ಲ ಧರ್ಮಗಳ ಆಚಾರ-ವಿಚಾರಗಳ ರಸತತ್ವದ ಅಡಿಯಲ್ಲಿ ವಿವಿಧ ರೀತಿಯ ಸೇವಾ ಕಾರ್ಯಗಳಲ್ಲಿ ತೊಡಗಿರುವ ಪೀರಸಾಬ ಕೌತಾಳರನ್ನು ನೋಡಿದಾಗ ಮಹರ್ಷಿ ವಾಲ್ಮೀಕಿ ಅವರ ಜೀವನ ಯಶೋಗಾಥೆ ನೆನಪಾಗದೆ ಇರಲಾರದು.

ರಾಜಕೀಯ ಜೀವನದಲ್ಲಿ ಸೋಲಿಲ್ಲದ ಪಯಣ

ಕಿರಿಯ ವಯಸ್ಸಿನಲ್ಲಿ ಗದಗ ಬೆಟಗೇರಿ ನಗರಸಭೆಯ 17 ಮತ್ತು 18ನೇ ವಾರ್ಡ್‌ಗಳಿಂದ ಸತತವಾಗಿ ಗೆಲುವು ಸಾಧಿಸಿ, ಸೋಲಿಲ್ಲದ ಸರದಾರ ಎಂಬ ಪ್ರಶಂಸೆಗೆ ಪಾತ್ರರಾದ ಪೀರಸಾಬ ಕೌತಾಳರು ನಗರಸಭೆ ಅಧ್ಯಕ್ಷರಾಗಿ ಮಾಡಿದ ಸಾಧನೆ ಹಾಗೂ ಅವಳಿ ನಗರಕ್ಕೆ ನೀಡಿದ ಕೊಡುಗೆಗಳು ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಿವೆ. ಇತರರಿಗೆ ಮಾದರಿಯಾಗಿರುವಂತಹ ಸೇವೆಯನ್ನು ಅವರು ಸಲ್ಲಿಸಿದ್ದಾರೆ.

ಇತ್ತೀಚೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾಗಿ ಆಡಳಿತ ನಡೆಸಿದ ಪೀರಸಾಬ ಕೌತಾಳರು ಸಂಸ್ಥೆಗೆ ಹೊಸ ದಾರಿ, ಹೊಸ ಬದುಕು ಕಟ್ಟಿಕೊಟ್ಟಿದ್ದು, ಅವರ ಕ್ರಿಯಾಶೀಲ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಎಲ್ಲ ಧರ್ಮಗಳ ಮೌಲ್ಯಯುತ ಸಾರಗಳಲ್ಲಿ ಸಾಗುತ್ತಾ ಮಾನವ ಧರ್ಮದ ನಡೆ-ನುಡಿ, ಸಾಮಾಜಿಕ, ಸಾಹಿತ್ಯಿಕ, ಸಂಗೀತ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಹಾಗೂ ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪೀರಸಾಬ ಕೌತಾಳರು ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆಂದರೆ ಅತಿಶಯೋಕ್ತಿ ಆಗಲಾರದು.

ಹೃದಯವಂತಿಕೆ, ಗುಣವಂತಿಕೆ ಹಾಗೂ ಆತ್ಮೀಯ ಶ್ರೀಮಂತಿಕೆಯೊಂದಿಗೆ ಸಾಮಾಜಿಕ ಮತ್ತು ಸಾರ್ವತ್ರಿಕ ಸೇವಾ ಚಿಂತನೆಗಳಲ್ಲಿ ಭಕ್ತಿ ಮಾರ್ಗದ ನೆಲೆಯಲ್ಲಿ ಸಾಗುತ್ತಿರುವ ಪೀರಸಾಬ ಕೌತಾಳರಿಂದ ಇನ್ನಷ್ಟು ಸಮಾಜಮುಖಿ ಸೇವೆ ದೊರೆಯಲಿ ಎಂಬುದು ಅವರ ಅಭಿಮಾನಿಗಳ ಆಶಯ.

ಸರ್ವಧರ್ಮ ಹಾಗೂ ಸರ್ವ ಕ್ಷೇತ್ರಗಳ ಸೇವಕರಾಗಿ, ಮಾನವೀಯ ಮೌಲ್ಯಗಳ ಹಿರಿಮೆ-ಗರಿಮೆಯಲ್ಲಿ ಭಕ್ತಿ ಪಂಥದ ನಡೆಯಲ್ಲಿ ಜೀವನ ರೂಪಿಸಿಕೊಂಡಿರುವ ಪೀರಸಾಬ ಕೌತಾಳರಿಗೆ ಡಾ. ಪಂಡಿತ ಪುಟ್ಟರಾಜರು ಅವರ ಕೃಪೆ ಸದಾ ಲಭಿಸಲಿ ಎಂಬುದು ಸರ್ವಧರ್ಮ ಚಿಂತಕರ ಹಾಗೂ ಪತ್ರಕರ್ತರಾದ ಆನಂದ ಸಾಲಿಗ್ರಾಮ ಸ್ನೇಹ ಬಳಗದ ಶುಭ ಹಾರೈಕೆ.

ಸಮಾಜಮುಖಿ ಸೇವೆಯ ವಿಶಾಲ ವ್ಯಾಪ್ತಿ

ಸಾಮೂಹಿಕ ವಿವಾಹಗಳ ಆಯೋಜನೆ, ಸಾಮಾಜಿಕ ಕಾರ್ಯಚಟುವಟಿಕೆಗಳು, ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿ, ಶಿಕ್ಷಣ ಪ್ರಸಾರದ ಚಿಂತನೆ, ಸರ್ವಧರ್ಮ ಸಮನ್ವಯ ಸಾಧನೆ, ಕೈಗೊಂಡ ಕಾರ್ಯಯೋಜನೆಗಳು, ಸಾಮೂಹಿಕ ತತ್ವಾದರ್ಶಗಳ ನಡೆ-ನುಡಿ, ಧಾರ್ಮಿಕ ಅನುಷ್ಠಾನಗಳು ಸೇರಿದಂತೆ ಪ್ರತಿ ರಂಗದಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ಈ ಬದಲಾವಣೆಗಳಿಂದ ಇಂದು ಪೀರಸಾಬ ಕೌತಾಳರು ಎಲ್ಲರನ್ನು ಸೆಳೆಯುವ ವ್ಯಕ್ತಿತ್ವ ಹಾಗೂ ಶಕ್ತಿಯಾಗಿದ್ದಾರೆ.

ಅಂಧ-ಅನಾಥ ಮಕ್ಕಳು, ದೀನ-ದಲಿತರು, ಬಡವರು ಹಾಗೂ ನಿರ್ಗತಿಕರ ಸೇವೆಯಲ್ಲಿ ತೊಡಗಿಸಿಕೊಂಡು ಡಾ. ಪಂಡಿತ ಪುಟ್ಟರಾಜರು ಅವರ ಪುಣ್ಯಾಶ್ರಮಕ್ಕೆ ಸಲ್ಲಿಸುತ್ತಿರುವ ಸೇವೆಯಿಂದ ಪೀರಸಾಬ ಕೌತಾಳರು ಮತ್ತು ಅವರ ಕುಟುಂಬ ಇನ್ನಷ್ಟು ಆದರ್ಶಪ್ರಾಯರಾಗಿದ್ದಾರೆ.

– ಅನಂತ ಎಸ್. ಕಾರ್ಕಳ, ಪತ್ರಕರ್ತರು, ಗದಗ

ಮುಂಬೈನಲ್ಲಿ ಷೇರುಪೇಟೆ ತತ್ತರ: ಒಂದೇ ದಿನ 8 ಲಕ್ಷ ಕೋಟಿ ರೂ. ನಷ್ಟ – ಚಿನ್ನದ ಬೆಲೆ ಮತ್ತೆ ಏರಿಕೆ?

0

ಮುಂಬೈ: ಇಸ್ರೇಲ್, ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧದ ಭೀತಿಯಿಂದಾಗಿ ಭಾರತದ ಷೇರುಪೇಟೆ ಇಂದು ಭಾರೀ ಕುಸಿತ ಕಂಡಿದೆ.

ಒಂದೇ ದಿನದಲ್ಲಿ ಹೂಡಿಕೆದಾರರಿಗೆ ಸುಮಾರು ಎಂಟು ಲಕ್ಷ ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಜಾಗತಿಕ ಮಟ್ಟದಲ್ಲಿ ಉಂಟಾದ ಅಸ್ಥಿರತೆಯ ಪರಿಣಾಮವಾಗಿ ದೇಶೀಯ ಷೇರು ಸೂಚ್ಯಂಕಗಳು ತತ್ತರಿಸಿದ್ದು, ಮಾರುಕಟ್ಟೆಗಳಲ್ಲಿ ಆತಂಕದ ವಾತಾವರಣ ಆವರಿಸಿದೆ.

ಇದರ ನಡುವೆ ಸುರಕ್ಷಿತ ಹೂಡಿಕೆಯೆಂದು ಪರಿಗಣಿಸಲ್ಪಡುವ ಚಿನ್ನದ ಬೆಲೆ ಮತ್ತೆ ಏರಿಕೆಯತ್ತ ಸಾಗುತ್ತಿದೆ. ಫೆಬ್ರವರಿ ಆರಂಭದಲ್ಲಿ ಸ್ವಲ್ಪ ಇಳಿಕೆ ಕಂಡಿದ್ದ ಚಿನ್ನದ ದರ, ಇದೀಗ ಯುದ್ಧ ಭೀತಿಯ ಹಿನ್ನೆಲೆಯಲ್ಲಿ ಮತ್ತೆ ಏರಿಕೆಯಾಗುವ ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ಎರಡು ಲಕ್ಷ ರೂಪಾಯಿ ಗಡಿ ದಾಟುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಲಯ ಅಂದಾಜಿಸಿದೆ.

ಇಂದು ದೇಶದಲ್ಲಿ ಚಿನ್ನದ ದರ?
24 ಕ್ಯಾರಟ್ 1 ಗ್ರಾಂ – 17,051 ರೂ.
24 ಕ್ಯಾರಟ್ 10 ಗ್ರಾಂ – 1,70,510 ರೂ.

22 ಕ್ಯಾರಟ್ 1 ಗ್ರಾಂ – 15, 630 ರೂ.
22 ಕ್ಯಾರಟ್ 10 ಗ್ರಾಂ – 1,56,300 ರೂ.

ಯುದ್ಧ ಭೀತಿ ಹೆಚ್ಚಾದ ಸಂದರ್ಭಗಳಲ್ಲಿ ಹೂಡಿಕೆದಾರರು ಷೇರುಗಳಿಂದ ಹಿಂದೆ ಸರಿದು ಚಿನ್ನದಂತಹ ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡುವುದು ಸಾಮಾನ್ಯವಾಗಿದೆ. ಈಗಾಗಲೇ ಚಿನ್ನದ ಪೂರೈಕೆ ಸೀಮಿತವಾಗಿರುವುದರಿಂದ ಬೇಡಿಕೆ ಹೆಚ್ಚಾದರೆ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಇದೇ ವೇಳೆ ಸರಕು ವಹಿವಾಟು ಕ್ಷೇತ್ರದಲ್ಲೂ ಚಟುವಟಿಕೆ ಹೆಚ್ಚಾಗಿದ್ದು, ಚಿನ್ನದ ವಹಿವಾಟು ನಡೆಸುವ ಸಂಸ್ಥೆಗಳ ಷೇರುಗಳು ಲಾಭ ಕಂಡಿವೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಶಮನವಾಗುವವರೆಗೆ ಮಾರುಕಟ್ಟೆಗಳಲ್ಲಿ ಅಸ್ಥಿರತೆ ಮುಂದುವರಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಎಚ್ಚರಿಕೆ ನೀಡಿದ್ದಾರೆ.

ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿಂದೂ ಧರ್ಮ, ದೇಶದ ಸಂಸ್ಕೃತಿಯನ್ನು ರಕ್ಷಣೆ ಮಾಡಿದ ಅಪ್ಪಟ ದೇಶಪ್ರೇಮಿ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದು ಬಿಜೆಪಿ ಶಿರಹಟ್ಟಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ತಿಳಿಸಿದರು.

ಅವರು ಪಟ್ಟಣದ ಅಖಂಡ ಭಾರತ ಯುವಸೇನೆ ಇವರ ವತಿಯಿಂದ ರವಿವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜ ಜಯಂತ್ಯುತ್ಸವದ ಅಂಗವಾಗಿ ಶಿವಾಜಿ ಮಹಾರಾಜರ ಭವ್ಯಮೂರ್ತಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಶಿವಾಜಿ ಮಹಾರಾಜರ ಧೈರ್ಯ ಮತ್ತು ಸ್ಫೂರ್ತಿದಾಯಕ ಕಾರ್ಯಗಳು ಯುವಕರಿಗೆ ಪ್ರೇರಣೆ ಆಗಬೇಕು. ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಶಿವಾಜಿ ಮಹಾರಾಜರ ಭವ್ಯಮೂರ್ತಿ ಶೋಭಾಯಾತ್ರೆ ಪಂಪ ವೃತ್ತದಿಂದ ಪ್ರಾರಂಭಗೊಂಡು, ಬಸ್ತಿಕೇರಿ ವಿದ್ಯಾರಣ್ಯ ವೃತ್ತ, ಹಾವಳಿ ಆಂಜನೇಯ ದೇವಸ್ಥಾನ, ಪಾದಗಟ್ಟಿ, ಪುರಸಭೆ, ಸರ್ಕಾರಿ ಆಸ್ಪತ್ರೆ, ಹಳೆ ಬಸ್‌ಸ್ಟಾಂಡ್ ಮುಂಭಾಗದಿಂದ ಪರ್ವತ ಮಲ್ಲಯ್ಯನ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಅಮರೀಶ ಗಾಂಜಿ, ಶ್ರೇಯಾಂಕ ಹಿರೇಮಠ, ಪ್ರತಾಪ ಅಂಕಲಿ, ಎಂ.ಆರ್. ಪಾಟೀಲ, ಗಂಗಾಧರ ಮೆಣಸಿನಕಾಯಿ, ವಿವೇಕ ಕದಂ, ಚಂದ್ರಗೌಳಿ, ಶಕ್ತಿ ಕತ್ತಿ, ಈಶ್ವರ ಗದಗ, ಶಂಕರ ಶಳಕೆ, ಶರಣಬಸಪ್ಪ ಗಾಂಜಿ, ಪ್ರವೀಣ ದಶಮನಿ, ಚಂದ್ರು ಬಾರ್ಕಿ, ನವೀನ ಗಾಯಕವಾಡ, ಪ್ರಕಾಶ ಗುತ್ತಲ, ನವೀನ ಗುರಿಕಾರ, ಶಿವು ಆರೇರ, ಖಂಡಪ್ಪ ಅಣ್ಣಿಗೇರಿ, ಮಂಜುನಾಥ ಗಾಂಜಿ, ಆಕಾಶ ಸೌದತ್ತಿ, ಗೋವಿಂದ ಗೋಸಾವಿ ಸೇರಿದಂತೆ ನೂರಾರು ಯುವಕರು, ಹಿರಿಯರು ಇದ್ದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಗ್ರಾಮೀಣ ರಸ್ತೆ ಅಭಿವೃದ್ಧಿ, ಶಿಕ್ಷಣ, ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ರೋಣ ಕ್ಷೇತ್ರಾದ್ಯಂತ ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಡಂಬಳ ಹೋಬಳಿಯ ಜಂತ್ಲಿ ಶಿರೂರ ಗ್ರಾಮದಲ್ಲಿ 2024-25ನೇ ಸಾಲಿನ ಮಳೆ ಪರಿಹಾರ ಯೋಜನೆಯಡಿ ಶಿರೂರ ಗ್ರಾಮದಲ್ಲಿ ಸಿ.ಸಿ. ರಸ್ತೆ ನಿರ್ಮಾಣ, ಶಿರೂರ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ, ಪೇಠಾಲೂರ ಗ್ರಾಮದಲ್ಲಿ ಹಾಲಪ್ಪ ಕರಿಗಾರ ಮನೆಯಿಂದ ಸೋಮಣ್ಯ ಕರಳ್ಳಿ ಅವರ ಮನೆಯವರೆಗೆ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ, 16 ಲಕ್ಷ ವೆಚ್ಚದಲ್ಲಿ ನವೀಕೃತಗೊಂಡ ಪೇಠಾಲೂರ ಸರ್ಕಾರಿ ಹಿರಿಯ ಮಾದರಿ ಕೇಂದ್ರ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಗ್ರಾಮದ ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಸೂಕ್ತ ವಾತಾವರಣ ನಿರ್ಮಾಣಕ್ಕಾಗಿ ಸರ್ಕಾರಿ ಶಾಲೆಗಳ ನವೀಕರಣ, ಸ್ಮಾರ್ಟ್ ತರಗತಿ ಕೊಠಡಿಗಳ ಸ್ಥಾಪನೆ, ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವದರ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಲಾಗುತ್ತಿದೆ ಎಂದರು.

ಈಗಾಗಲೇ ಕಂದಾಯ ಇಲಾಖೆಯಲ್ಲಿ ಹಲವು ದಶಕಗಳಿಂದ ಇತ್ಯರ್ಥವಾಗದೇ ಬಾಕಿ ಉಳಿದಿದ್ದ ದರಕಾಸ್ತು ಪೋಡಿ, ಪೌತಿ ಖಾತೆ ಸಮಸ್ಯೆಗಳ ಪರಿಹಾರಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ರೈತರು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಸಾವಿರಾರು ರೈತರು ದರಕಾಸ್ತು ಪೋಡಿ ವಿಶೇಷ ಅಭಿಯಾನದಡಿ ತಮ್ಮ ಸಾಗುವಳಿ ಜಮೀನಿಗೆ ನೈಜ ವಾರಸುದಾರರಾಗಿ ಅಧಿಕೃತ ಹಕ್ಕು ದಾಖಲೆ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕಂದಾಯ ಇಲಾಖೆಯಲ್ಲಿನ ಹಲವು ಸಮಸ್ಯೆಗಳಿಗೆ ಮುಕ್ತಿ ಕಾಣಿಸಿ ಜನರಿಗೆ ನೆಮ್ಮದಿ ನೀಡಲಾಗುತ್ತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಮಾತನಾಡಿ, ಪೇಠಾಲೂರ ಸರ್ಕಾರಿ ಹಿರಿಯ ಮಾದರಿ ಕೇಂದ್ರ ಶಾಲೆಯ ನವೀಕರಣದಿಂದ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಸಿಗಲಿದೆ. ತಾಲೂಕಿನ ಎಲ್ಲಾ ಶಾಲೆಗಳ ದುರಸ್ತಿ ಮತ್ತು ನೂತನ ಶಾಲಾ ಕೊಠಡಿಗಳ ನಿರ್ಮಾಣ ಸರ್ಕಾರ ಮತ್ತು ಈ ಭಾಗದ ಶಾಸಕರಾದ ಜಿ.ಎಸ್. ಪಾಟೀಲರು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖಂಡ ವೀರಯ್ಯ ಸೋಮನಕಟ್ಟಿಮಠ, ಇಒ ವಿಶ್ವನಾಥ ಹೊಸಮನಿ, ಮುಂಡರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ಮುಖಂಡರಾದ ಅಬ್ದುಲ ಕಲಕೇರಿ, ಹಾಲಪ್ಪ ಕಬ್ಬೇರಳ್ಳಿ, ಎಸ್‌ಡಿಎಮ್‌ಸಿ ಅಧ್ಯಕ್ಷ ಅಶೋಕ ಕಬ್ಬೇರಳ್ಳಿ, ಯಲ್ಲಪ್ಪ ಕರಮುಡಿ, ಭೀಮರಡ್ಡಿ ಪಾಟೀಲ, ಹೇಮಣ್ಣ ಪೂಜಾರ, ರವಿ ದೊಡ್ಡಮನಿ, ಪುಲಕೇಶಗೌಡ, ಭುವನೇಶ್ವರಿ ಕಲ್ಲಕುಟಿಗರ, ಶರಣಪ್ಪ ಶಿರುಂದ, ಬಸವರಡ್ಡಿ ಬಂಡಿಹಾಳ, ಬಶೀರ ಹಾರೂಗೇರಿ, ಬಸುರಾಜ ಶಿರೋಳ, ಹನಮಂತಪ್ಪ ಹೊಸಮನಿ, ಶಿಕ್ಷಕ ವಿಶ್ವನಾಥ ಪಾಟೀಲ, ಪ್ರಥಮ ದರ್ಜೆ ಗುತ್ತಿಗೆದಾರ ಪಾಲಾಕ್ಷಿಗೌಡ ಪಾಟೀಲ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಪಿಡಬ್ಲುಡಿ ಅಧಿಕಾರಿ ನಾಗೇಂದ್ರ ಪಟ್ಟಣಶೆಟ್ಟರ, ಪಿಡಿಒಗಳು, ಎಸ್.ಡಿ.ಎಮ್.ಸಿ ಸದಸ್ಯರು, ಗ್ರಾಮಸ್ಥರು ಇದ್ದರು. ಎಮ್.ಎಮ್. ಬಂಡಿ ನಿರೂಪಿಸಿ ವಂದಿಸಿದರು.

ಎಲ್ಲಾ ದಾಖಲೆಗಳನ್ನು ಆನ್‌ಲೈನ್ ಮೂಲಕ ಒಂದೇ ಕಡೆ ಅಥವಾ ಒಂದೇ ಕಚೇರಿಯಲ್ಲಿ ಲಭ್ಯವಾಗುವ ರೀತಿಯಲ್ಲಿ ಹಲವು ಸುಧಾರಣೆಗಳನ್ನು ಇಲಾಖೆ ಈಗಾಗಲೇ ಕೈಗೊಂಡಿದೆ. ಬರುವ ಆಯವ್ಯಯದ ನಂತರ ಜನರು ದೃಢೀಕೃತ ಪಹಣಿ, ಸ್ಕೆಚ್ ಕಾಪಿ, ಇಸಿಎಂಆರ್ ಹಾಗೂ ಆಕಾರ್‌ಬಂದ್ ದಾಖಲೆಗಳನ್ನು ಆನ್‌ಲೈನ್ ಮೂಲಕವೇ ಪಡೆಯುವ ಏಕ ವ್ಯವಸ್ಥೆ ತ್ವರಿತವಾಗಿ ಬರಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಭರವಸೆ ನೀಡಿದರು.

error: Content is protected !!