Home Blog Page 93

ರೈತರು ಭೂಮಿ ಕೊಡಲು ಒಪ್ಪಿದರೆ ನನ್ನದೇನೂ ತಕರಾರು ಇಲ್ಲ: ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ಬಿಡದಿಯ ಭಾಧಿತ ರೈತರ ಹಿತಾಸಕ್ತಿಯ ಬಗ್ಗೆ ಚರ್ಚಿಸಲು ನಾನು ನಾಳೆ (ಜೂನ್ 27 ಶನಿವಾರ) ಭೈರಮಂಗಲದಲ್ಲಿ ಮುಖ್ಯಮಂತ್ರಿಗಳಾಗಿ ಕಾಯುತ್ತೇನೆ. ಅವರು ಸ್ಥಳಕ್ಕೆ ಬಂದರೆ ಸಮಸ್ಯೆಯ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸಚಿವರು; ಮುಖ್ಯಮಂತ್ರಿಗಳ ಜತೆ ಪತ್ರ ಸಮರ ಅಂತೇನಿಲ್ಲ. ವಿಧಾನಸೌಧಕ್ಕೆ ಬರುವಂತೆ ಅವರು ಪತ್ರ ಬರೆದಿದ್ದರು. ವಿಧಾನಸೌಧ ಬೇಡ, ಭೈರಮಂಗಲದಲ್ಲಿ ನೊಂದ ರೈತರ ಸಮ್ಮುಖದಲ್ಲಿಯೇ ಚರ್ಚೆ ನಡೆಯುವುದು ಸೂಕ್ತ ಎಂದು ನಾನು ಪತ್ರದಲ್ಲಿ ತಿಳಿಸಿದ್ದೆ.

ಅಲ್ಲದೆ, ಜೂನ್ 27ರಂದು, ಅಂದರೆ ಶನಿವಾರ ಬಿಡದಿಯ ಭೈರಮಂಗಲದಲ್ಲಿ ಬಹಿರಂಗ ಚರ್ಚೆಗೆ ಬರುತ್ತೇನೆ ಎಂದು ಹೇಳಿದ್ದೆ. ಅದರಂತೆ ನಾನು ಬುಧವಾರ ಭೈರಮಂಗಲಕ್ಕೆ ತೆರಳಿ ಮುಖ್ಯಮಂತ್ರಿಗಳಾಗಿ ಕಾಯುತ್ತೇನೆ. ಅವರು ಬಂದರೆ ಚರ್ಚೆ ನಡೆಸುತ್ತೇನೆ ಎಂದರು ಅವರು.

ಶನಿವಾರ ಮಧ್ಯಾಹ್ನದವರೆಗೂ ನಾನು ಬೈರಮಂಗಲದಲ್ಲಿ ಮುಖ್ಯಮಂತ್ರಿಗಳಿಗಾಗಿ ಕಾಯುತ್ತೇನೆ. ಅವರು ಬಂದರೆ ಸಂತೋಷ. ಚರ್ಚೆಗೆ ಬನ್ನಿ ಎಂದು ಪತ್ರ ಬರೆದಿದ್ದೇನೆ. ಅವರು ಇನ್ನೂ ಏನು ಉತ್ತರ ಕೊಟ್ಟಿಲ್ಲ. ನಾವೇನು ಗಲಾಟೆ ಮಾಡಿಸಲು ಹೋಗುತ್ತಿಲ್ಲ. ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಕೊಡುತ್ತಿದ್ದೇವೆ ಅಷ್ಟೇ. ನಾನು ಕೊಟ್ಟ ಸಮಯಕ್ಕೆ ಹೋಗುತ್ತಿದ್ದೇನೆ. ಅವರು ಬಂದರೆ ಒಳ್ಳೆಯದು.

ನಿನ್ನೆಯಿಂದ ಹದಿನೈದು ಇಪ್ಪತ್ತು ಜನ ಭೂಮಿ ಕೊಡಲು ಸಿದ್ದ ಅಂತ ಕೂತಿದ್ದಾರೆ. ಇದರ ಹಿಂದಿನ ವಿಚಾರಗಳನ್ನು ನಾನೂ ಅರ್ಥ ಮಾಡಿಕೊಂಡಿದ್ದೇನೆ. ಇದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಏನಿಲ್ಲ. ರೈತರು ಭೂಮಿ ಕೊಡಲು ಒಪ್ಪಿದರೆ ನನ್ನದೇನೂ ತಕರಾರು ಇಲ್ಲ. ಬಲವಂತವಾಗಿ ರೈತರನ್ನು ಬೆದರಿಸಿದರೆ ಸರಿ ಇರೋದಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು.

ನಾನು ಕೂಡ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ಅನೇಕ ಸಂದರ್ಭಗಳಲ್ಲಿ ರೈತರ ಬಳಿಯೇ ಹೋಗಿದ್ದೇನೆ. ಇದೇ ಬಿಡದಿ ಯೋಜನೆ ಪ್ರಶ್ನೆ ಬಂದಾಗ ರೈತರನ್ನು ಕೃಷ್ಣಾ ಕಚೇರಿಗೆ ಕರೆಸಿಕೊಂಡು ಅವರ ಸಮ್ಮುಖದಲ್ಲಿಯೇ ಸಭೆ ಮಾಡಿದ್ದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರೇ ಬಿಡದಿ ಉಪನಗರ ಯೋಜನೆಯನ್ನು ವಿರೋಧ ಮಾಡಿದ್ದರು. ರೈತರು ಬೇಡ ಎಂದರು ಕಾಂಗ್ರೆಸ್ ನಾಯಕರಿಗೆ ಯೋಜನೆ ಬೇಕಾಗಿದೆ ಎಂದು ಅವರು ಹೇಳಿದರು.

ರೈತರಿಗೆ ಬೆಂಬಲ ಕೊಡಲು ಬೈರಮಂಗಲಕ್ಕೆ ಹೋಗುತ್ತಿದ್ದೇನೆ. ಕಾನೂನು ಮೀರಿ ರೈತರೇನು ಹೋರಾಟ ಮಾಡುತ್ತಿಲ್ಲ. ನಾನು ಕೂಡ ಕಾನೂನು ಪ್ರಕಾರವೇ ಹೋರಾಟದಲ್ಲಿ ಭಾಗಿಯಾಗುತ್ತೇನೆ. ಶನಿವಾರ ಮಧ್ಯಾಹ್ನದವರಿಗೂ ನಾನು ಭೈರಮಂಗಲದಲ್ಲಿಯೇ ಇದ್ದು ರೈತರ ಮನವಿಗಳನ್ನು ಆಲಿಸುತ್ತೇನೆ. ಮುಖ್ಯಮಂತ್ರಿಗಳು ಚರ್ಚೆಗೆ ಬಂದರೆ ಎಲ್ಲವೂ ಸುಗಮವಾಗಿ ಆಗುತ್ತದೆ. ಸರಕಾರದವರೇ ಬೈರಮಂಗಲದಲ್ಲಿ144 ಸೆಕ್ಷನ್ ಹಾಕಲು ಹೊರಟಿದ್ದಾರೆ. ನಾವೇನೂ ಗಲಾಟೆ ಮಾಡಲು ಹೋಗುತ್ತಿಲ್ಲ ಎಂದು ಸಚಿವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

ಕೆಲ ರೈತರು ಭೂಮಿ ಕೊಡಲು ಒಪ್ಪಿರಬಹುದು. ಬಹು ಪ್ರಮಾಣದ ರೈತರು ಭೂಮಿ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವರಲ್ಲಿ ಎಲ್ಲಾ ಮಾಹಿತಿಯು ಇದೆ. ಆದರೆ ಸರ್ಕಾರದವರು ಎಲ್ಲರ ಮೇಲೆಯೂ ಗದ ಪ್ರಹಾರ ನಡೆಸಲು ಹೋಗುತ್ತಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಡೇ ಕೇರ್‌ನಲ್ಲಿ ಬೆಚ್ಚಿಬೀಳಿಸಿದ ನಿರ್ಲಕ್ಷ್ಯ: 2 ವರ್ಷದ ಮಗುವನ್ನು 25 ಬಾರಿ ಕಚ್ಚಿದ ಮತ್ತೊಂದು ಮಗು

ನವದೆಹಲಿ: ಡೇ ಕೇರ್ ಕೇಂದ್ರದ ನಿರ್ಲಕ್ಷ್ಯದಿಂದ 2 ವರ್ಷದ ಮಗುವೊಂದು ಮತ್ತೊಂದು ಮಗುವಿನ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿರುವ ಬೆಚ್ಚಿಬೀಳಿಸುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ. ಸುಮಾರು 15 ನಿಮಿಷಗಳ ಅವಧಿಯಲ್ಲಿ ಮಗುವಿಗೆ 25 ಬಾರಿ ಕಚ್ಚಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಜೂನ್ 22ರಂದು ಸಿಐಡಿಸಿಒ ಪ್ರದೇಶದ ಫಸ್ಟ್‌ಕ್ರೈ ಇಂಟೆಲ್ಲಿಟಾಟ್ಸ್ ಪ್ರೀ-ಸ್ಕೂಲ್‌ನ ಡೇ ಕೇರ್‌ನಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 10.30ರ ಸುಮಾರಿಗೆ ವಕೀಲೆಯಾಗಿರುವ ತಾಯಿ ತಮ್ಮ 2 ವರ್ಷದ ಮಗುವನ್ನು ಡೇ ಕೇರ್‌ಗೆ ಬಿಟ್ಟು ತೆರಳಿದ್ದರು.

ಸ್ವಲ್ಪ ಸಮಯದ ಬಳಿಕ ಒಂದು ಮಗು ಹೊರಗೆ ಹೋಗಲು ಯತ್ನಿಸಿದಾಗ ಆರೈಕೆ ಸಿಬ್ಬಂದಿ ಅದನ್ನು ಹೊರಗೆ ಕರೆದುಕೊಂಡು ಹೋಗಿ, ಉಳಿದ ಮೂವರು ಮಕ್ಕಳನ್ನು ಕೋಣೆಯೊಳಗೆ ಲಾಕ್ ಮಾಡಿ ಬಾಗಿಲು ಮುಚ್ಚಿದ್ದಾರೆ. ಕೋಣೆಯಲ್ಲಿ ಯಾವುದೇ ಶಿಕ್ಷಕಿ ಅಥವಾ ಸಿಬ್ಬಂದಿ ಇರದ ಕಾರಣ ಮಕ್ಕಳು ಭಯದಿಂದ ಅಳತೊಡಗಿದ್ದಾರೆ.

ಈ ವೇಳೆ ಒಂದು ಮಗು ಮತ್ತೊಂದು ಮಗುವನ್ನು ಪದೇ ಪದೇ ಕಚ್ಚಿದ್ದು, ಸಿಸಿಟಿವಿ ದೃಶ್ಯದಲ್ಲಿ ಸುಮಾರು 15 ನಿಮಿಷಗಳಲ್ಲಿ 25 ಬಾರಿ ಕಚ್ಚಿರುವುದು ದಾಖಲಾಗಿದೆ. ಮಗು ನೋವಿನಿಂದ ಅಳುತ್ತಿದ್ದರೂ ಸುಮಾರು 45 ನಿಮಿಷಗಳ ಕಾಲ ಯಾರೂ ಒಳಗೆ ಹೋಗಿ ಪರಿಶೀಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಘಟನೆಯಲ್ಲಿ ಮಗುವಿನ ಮುಖ, ಮೂಗು, ತುಟಿ, ಎದೆ, ಬೆನ್ನು ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಮಧ್ಯಾಹ್ನ 2 ಗಂಟೆಯವರೆಗೆ ಈ ಘಟನೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡದ ಶಾಲಾ ಆಡಳಿತ, ಮಗು ಸಣ್ಣ ಗಾಯ ಮಾಡಿಕೊಂಡಿದೆ ಎಂದು ಹೇಳಿತ್ತು. ಆದರೆ ಬಟ್ಟೆ ತೆಗೆದು ನೋಡಿದಾಗ ದೇಹದ ಹಲವೆಡೆ ಕಚ್ಚಿದ ಗಾಯಗಳು ಪತ್ತೆಯಾಗಿವೆ.

ಪೋಷಕರ ದೂರಿನ ಮೇರೆಗೆ ಡೇ ಕೇರ್ ಸಿಇಒ, ಇಬ್ಬರು ವ್ಯವಸ್ಥಾಪಕರು, ಪ್ರಾಂಶುಪಾಲೆ ಹಾಗೂ ಆರೈಕೆ ಸಿಬ್ಬಂದಿ ಸೇರಿ ಒಟ್ಟು ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸದಂತೆ 10 ಲಕ್ಷ ರೂ. ಹಾಗೂ ಮೂರು ವರ್ಷ ಉಚಿತ ಶಿಕ್ಷಣದ ಆಫರ್ ನೀಡಲಾಗಿತ್ತು ಎಂದು ಪೋಷಕರು ಆರೋಪಿಸಿದ್ದಾರೆ.

ಈ ಪ್ರಕರಣದ ತನಿಖೆಯನ್ನು ಶಿಕ್ಷಣ ಇಲಾಖೆ ಆರಂಭಿಸಿದ್ದು, ಡೇ ಕೇರ್‌ಗೆ ಅಗತ್ಯ ಪೌರಾಡಳಿತ ಅನುಮತಿ ಇಲ್ಲ ಎಂಬ ಮಾಹಿತಿಯೂ ಬಹಿರಂಗವಾಗಿದೆ. ಆದರೆ ಇದುವರೆಗೆ ಯಾವುದೇ ಬಂಧನವಾಗಿಲ್ಲ.

‘ವಿಜಯವಾಡ ಚಿತ್ರರಂಗದ ಕೇಂದ್ರವಾಗಬೇಕು’: ಬಾಲಯ್ಯ 112 ಮುಹೂರ್ತದಲ್ಲೇ ಇಂಡಸ್ಟ್ರಿ ಭವಿಷ್ಯದ ಕನಸು ಬಿಚ್ಚಿಟ್ಟ ನಂದಮೂರಿ ಬಾಲಕೃಷ್ಣ

ಅಮರಾವತಿ: ನಂದಮೂರಿ ಬಾಲಕೃಷ್ಣ ಅವರ 112ನೇ ಸಿನಿಮಾ ಅಮರಾವತಿಯಲ್ಲಿ ಅದ್ಧೂರಿಯಾಗಿ ಆರಂಭವಾಗಿದ್ದು, ಕೊರಟಾಲ ಶಿವ ನಿರ್ದೇಶನದ ಈ ಚಿತ್ರಕ್ಕೆ ನಾರಾ ಲೋಕೇಶ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು. ಕಂದುಲ ದುರ್ಗೇಶ್ ಕ್ಯಾಮೆರಾ ಚಾಲನೆ ನೀಡಿದರೆ, ಬಾಲಯ್ಯ ಪುತ್ರಿ ನಂದಮೂರಿ ತೇಜಸ್ವಿನಿ ಮೊದಲ ದೃಶ್ಯವನ್ನು ನಿರ್ದೇಶಿಸಿದರು.

ಇದೇ ಮೊದಲ ಬಾರಿಗೆ ಬಾಲಯ್ಯ-ಕೊರಟಾಲ ಶಿವ ಕಾಂಬಿನೇಷನ್ ಒಂದಾಗಿದ್ದು, ಎಸ್ಎಲ್ವಿ ಸಿನಿಮಾಸ್ ಹಾಗೂ ಯುವಸುಧಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಸುಧಾಕರ್ ಚೆರುಕುರಿ ಮತ್ತು ಸುಧಾಕರ್ ಮಿಕ್ಕಿಲಿನೇನಿ ಚಿತ್ರ ನಿರ್ಮಿಸುತ್ತಿದ್ದಾರೆ. ‘ಮಿರ್ಚಿ’, ‘ಶ್ರೀಮಂತುಡು’, ‘ಜನತಾ ಗ್ಯಾರೇಜ್’ ಹಾಗೂ ‘ಭರತ್ ಅನೆ ನೇನು’ ಖ್ಯಾತಿಯ ಕೊರಟಾಲ ಶಿವ ಈ ಮಹತ್ವಾಕಾಂಕ್ಷೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಮುಹೂರ್ತ ಸಮಾರಂಭದಲ್ಲಿ ಮಾತನಾಡಿದ ಬಾಲಯ್ಯ, ಅಭಿಮಾನಿಗಳ ಪ್ರೀತಿ ತಮ್ಮ ದೊಡ್ಡ ಶಕ್ತಿ ಎಂದರು. ನಾರಾ ಲೋಕೇಶ್, ಕಂದುಲ ದುರ್ಗೇಶ್ ಹಾಗೂ ಪುತ್ರಿ ತೇಜಸ್ವಿನಿಗೆ ಧನ್ಯವಾದ ಸಲ್ಲಿಸಿದ ಅವರು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಬೆಂಬಲದೊಂದಿಗೆ ಆಂಧ್ರಪ್ರದೇಶದಲ್ಲಿ ಚಲನಚಿತ್ರೋದ್ಯಮವನ್ನು ಮತ್ತಷ್ಟು ಬೆಳೆಸುವ ಸಂಕಲ್ಪ ವ್ಯಕ್ತಪಡಿಸಿದರು.

ವಿಜಯವಾಡ ಚಿತ್ರರಂಗದ ಪ್ರಮುಖ ಕೇಂದ್ರವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ. ಸಿನಿಮಾ ಉದ್ಯಮದ ಜೊತೆಗೆ ಮನೋರಂಜನೆ ಮತ್ತು ಪ್ರವಾಸೋದ್ಯಮ ಮೂಲಸೌಕರ್ಯವನ್ನೂ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ. ಎನ್‌ಟಿಆರ್ ಹಾಗೂ ಎಎನ್‌ಆರ್ ಜನಿಸಿದ ನೆಲದಲ್ಲಿ ಚಿತ್ರರಂಗ ಮತ್ತಷ್ಟು ವಿಸ್ತರಿಸಬೇಕು ಎಂಬುದು ನಮ್ಮ ಕನಸು ಎಂದು ಹೇಳಿದರು.

ಸದ್ಯ ಗೋಪಿಚಂದ್ ಮಲಿನೇನಿ ನಿರ್ದೇಶನದ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿರುವ ಬಾಲಯ್ಯ, ಕಾಕಿನಾಡ ವೇಳಾಪಟ್ಟಿ ಮುಗಿದ ಬಳಿಕ ಕೊರಟಾಲ ಶಿವ ನಿರ್ದೇಶನದ ಹೊಸ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ಗಾಯಗೊಂಡ ತಾತನತ್ತ ನೋಡುತ್ತಿದ್ದ 16 ವರ್ಷದ ಬಾಲಕನಿಗೆ ಕಾರು ಢಿಕ್ಕಿ: ಗಂಭೀರ ಗಾಯ

0

ಹಾಸನ: ಒಂದೇ ಕುಟುಂಬಕ್ಕೆ ಕೆಲವೇ ಕ್ಷಣಗಳ ಅಂತರದಲ್ಲಿ ಎರಡು ಆಘಾತಗಳು ಎದುರಾದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳೆಗದ್ದೆ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಅಜ್ಜನನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸುತ್ತಿದ್ದ ವೇಳೆ, ರಸ್ತೆ ಬದಿಯಲ್ಲಿ ನಿಂತಿದ್ದ 16 ವರ್ಷದ ಮೊಮ್ಮಗನಿಗೆ ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಳಿಸಿದೆ.

ಭವಿಷ್ ಎಂಬ ಬಾಲಕನ ಅಜ್ಜ ಸಿದ್ದರಾಜು ಅವರಿಗೆ ಬೈಕ್ ಡಿಕ್ಕಿಯಾಗಿ ಗಾಯಗಳಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ತಾತನತ್ತ ನೋಡುತ್ತಾ ನಿಂತಿದ್ದ ಭವಿಷ್‌ಗೆ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ಬಳಿಕ ಚಾಲಕ ವಾಹನ ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಶನಿವಾರ ಶಾಲೆಗಳಿಗೆ ಹೊಸ ಸಮಯ ಪ್ರಕಟಿಸಿದ ಶಿಕ್ಷಣ ಇಲಾಖೆ

ಬೆಂಗಳೂರು:ರಾಜ್ಯದ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದ್ದು, ಶನಿವಾರ ನಡೆಯುವ ಶಾಲೆಗಳ ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇನ್ನು ಮುಂದೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಶನಿವಾರ ಒಂದೇ ಸಮಯದ ವೇಳಾಪಟ್ಟಿ ಜಾರಿಯಾಗಲಿದೆ.

ಶಿಕ್ಷಣ ಇಲಾಖೆಯ ಹೊಸ ಆದೇಶದಂತೆ, ಇನ್ನು ಮುಂದೆ ಶನಿವಾರ ಶಾಲೆಗಳು ಬೆಳಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿವೆ. ಈ ಮೂಲಕ ರಾಜ್ಯದ ಎಲ್ಲ ಶಾಲೆಗಳಲ್ಲಿ ಏಕರೂಪದ ವೇಳಾಪಟ್ಟಿಯನ್ನು ಅನುಸರಿಸುವಂತೆ ಸೂಚಿಸಲಾಗಿದೆ.

ಇಲ್ಲಿಯವರೆಗೆ ವಿವಿಧ ಜಿಲ್ಲೆಗಳಲ್ಲಿ ಶನಿವಾರದ ಶಾಲಾ ಸಮಯದಲ್ಲಿ ವ್ಯತ್ಯಾಸವಿತ್ತು. ಕೆಲವು ಶಾಲೆಗಳು ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯುತ್ತಿದ್ದರೆ, ಇನ್ನೂ ಕೆಲವು ಶಾಲೆಗಳಲ್ಲಿ ಬೆಳಗ್ಗೆ 7.30ರಿಂದ 11.30ರವರೆಗೆ ತರಗತಿಗಳು ನಡೆಯುತ್ತಿದ್ದವು. ಈ ಗೊಂದಲಕ್ಕೆ ತೆರೆ ಎಳೆಯುವ ಉದ್ದೇಶದಿಂದ ಶಿಕ್ಷಣ ಇಲಾಖೆ ಹೊಸ ವೇಳಾಪಟ್ಟಿಯನ್ನು ಜಾರಿಗೆ ತಂದಿದೆ.

ಹೊಸ ವೇಳಾಪಟ್ಟಿಯಿಂದ ವಿದ್ಯಾರ್ಥಿಗಳು ಶನಿವಾರ ಅತಿ ಮುಂಜಾನೆ ಎದ್ದು ಶಾಲೆಗೆ ತೆರಳುವ ಅಗತ್ಯ ಇರುವುದಿಲ್ಲ. ಇದರಿಂದ ಮಕ್ಕಳಿಗೆ ಹೆಚ್ಚು ಅನುಕೂಲವಾಗುವುದರ ಜೊತೆಗೆ ವಿಶ್ರಾಂತಿಗೂ ಅವಕಾಶ ಸಿಗಲಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ಶಿಕ್ಷಕರಿಗೂ ಈ ಬದಲಾವಣೆ ನೆರವಾಗಲಿದೆ. ಸರ್ಕಾರ ಈಗಾಗಲೇ ಶಾಲೆಗಳಲ್ಲಿ ಆನ್‌ಲೈನ್ ಹಾಜರಾತಿಯನ್ನು ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ, ನಿಗದಿತ ಸಮಯಕ್ಕೆ ಹಾಜರಾತಿ ದಾಖಲಿಸಲು ಹೊಸ ವೇಳಾಪಟ್ಟಿ ಅನುಕೂಲಕರವಾಗಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.

ಕೆ.ಆರ್.ಪುರ ತ್ರಿವಳಿ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಕೆನೆತ್ ಪುದುಚೇರಿಯಲ್ಲಿ ಅರೆಸ್ಟ್

0

ಬೆಂಗಳೂರು: ಕೆ.ಆರ್.ಪುರ ತ್ರಿವಳಿ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಕೆನೆತ್‌ನನ್ನು ಕೆ.ಆರ್.ಪುರ ಪೊಲೀಸರು ಪುದುಚೇರಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಬೆಂಗಳೂರಿಗೆ ಕರೆತಂದು ಬಂಧನದ ಕಾನೂನು ಪ್ರಕ್ರಿಯೆ ಆರಂಭಿಸಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ ಬಂಧಿತಳಾಗಿರುವ ಆರೋಪಿ ಶ್ವೇತಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಮತ್ತೊಂದೆಡೆ ತಲೆಮರೆಸಿಕೊಂಡಿದ್ದ ಕೆನೆತ್ ಪತ್ತೆಗಾಗಿ ಎರಡು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದ ಪೊಲೀಸರು ಹಲವು ರಾಜ್ಯಗಳಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದರು.

ತನಿಖೆ ವೇಳೆ ಶ್ವೇತಾ ಮತ್ತು ಕೆನೆತ್ ಇಬ್ಬರೂ ಬೆಂಗಳೂರಿನಿಂದ ಬೈಕ್‌ನಲ್ಲಿ ಪುದುಚೇರಿಗೆ ತೆರಳಿರುವುದು ಬೆಳಕಿಗೆ ಬಂದಿದೆ. ಕೆನೆತ್, ಶ್ವೇತಾಳನ್ನು ಪುದುಚೇರಿವರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯೇ ಇಬ್ಬರ ನಡುವೆ ವಾಗ್ವಾದ ನಡೆದಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ತ್ರಿವಳಿ ಕೊಲೆ ಪ್ರಕರಣದ ವಿಚಾರದಲ್ಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಗಲಾಟೆಯ ಬಳಿಕ ಇಬ್ಬರೂ ಪ್ರತ್ಯೇಕವಾಗಿದ್ದು, ಕೆನೆತ್ ಶ್ವೇತಾಳನ್ನು ಪುದುಚೇರಿಯಲ್ಲೇ ಬಿಟ್ಟು ತೆರಳಿದ್ದಾನೆ. ನಂತರ ಶ್ವೇತಾ ಪುದುಚೇರಿ ರೈಲು ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಳು. ಅಲ್ಲಿಂದ ಬೇರೆಡೆಗೆ ಪರಾರಿಯಾಗಲು ಆಕೆ ಸಂಚು ರೂಪಿಸಿದ್ದಳೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.

ಕೆನೆತ್ ಪತ್ತೆಗಾಗಿ ಕೆ.ಆರ್.ಪುರ ಪೊಲೀಸರು ತಿರುಚಿ, ವೇಲಾಂಕಣಿ, ಚೆನ್ನೈ ಹಾಗೂ ಕೊಯಂಬತ್ತೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ಹಲವು ಸ್ಥಳಗಳಲ್ಲಿ ಸಂಚರಿಸಿದ್ದ ಕೆನೆತ್ ಕೊನೆಗೆ ಪುದುಚೇರಿಗೆ ತಲುಪಿರುವುದು ತನಿಖೆಯಿಂದ ಗೊತ್ತಾಗಿದೆ. ಆತನ ಚಲನವಲನವನ್ನು ಆಧರಿಸಿ ಎರಡು ಪೊಲೀಸ್ ತಂಡಗಳು ನಿರಂತರವಾಗಿ ಬೆನ್ನುಹತ್ತಿ, ಕಳೆದ ರಾತ್ರಿ ಪುದುಚೇರಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿವೆ.

ಬಂಧಿತ ಕೆನೆತ್‌ನನ್ನು ಇಂದು ಕೆ.ಆರ್.ಪುರ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಬಂಧನದ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

‘ಕ್ಲೀನ್ ಆಗಿದ್ದರೆ ಯಾಕೆ ಭಯ?’; ಇಡಿ ದಾಳಿ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ವಿರುದ್ಧ ಮುರುಗೇಶ್ ನಿರಾಣಿ ವಾಗ್ದಾಳಿ

0

ಬಾಗಲಕೋಟೆ: “ಇಡಿ ದಾಳಿ ಬಗ್ಗೆ ಭಯವಿದ್ದರೆ ಅದರ ಹಿಂದೆ ಕಾರಣವೇನು? ತಪ್ಪು ಮಾಡದೇ ಇದ್ದರೆ ಯಾಕೆ ಹೆದರಬೇಕು?” ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ಇಡಿ ಹಾಗೂ ಐಟಿ ದಾಳಿ ನಡೆಸುತ್ತಿದೆ. ಮುಂದೆ ನಮ್ಮ ಮೇಲೂ ದಾಳಿ ಆಗಬಹುದು ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ನಿರಾಣಿ, “ಕುಂಬಳಕಾಯಿ ಕಳ್ಳ ಎಂದರೆ ನೀವೇಕೆ ಹೆಗಲು ಮುಟ್ಟಿಕೊಳ್ಳುತ್ತೀರಿ?” ಎಂದು ಪ್ರಶ್ನಿಸಿದರು.

ಇಡಿ ಯಾವುದೇ ರಾಜಕೀಯ ಪಕ್ಷದ ಕೈಗೊಂಬೆಯಲ್ಲ. ಪೂರಕ ದಾಖಲೆಗಳು ಹಾಗೂ ದೃಢವಾದ ಸಾಕ್ಷ್ಯಗಳ ಆಧಾರದಲ್ಲಿಯೇ ತನಿಖೆ ಮತ್ತು ದಾಳಿ ನಡೆಸುತ್ತದೆ. ಕ್ಲೀನ್ ಆಗಿದ್ದರೆ ಆತಂಕಪಡುವ ಅಗತ್ಯವೇ ಇಲ್ಲ ಎಂದು ಹೇಳಿದರು.

ಪ್ರಿಯಾಂಕ್ ಖರ್ಗೆ ರಾಜಕೀಯವಾಗಿ ಉಜ್ವಲ ಭವಿಷ್ಯ ಹೊಂದಿದ್ದಾರೆ. ಹೀಗಾಗಿ ವಿವಾದಾತ್ಮಕ ಹೇಳಿಕೆಗಳ ಬದಲು ಕಲ್ಯಾಣ ಕರ್ನಾಟಕದ ಅಭಿವೃದ್ಧಿ, ಕೈಗಾರಿಕೆ, ಕೃಷಿ ಮತ್ತು ಶಿಕ್ಷಣ ಕ್ಷೇತ್ರಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಆರ್‌ಎಸ್‌ಎಸ್ ಕುರಿತು ಮಾತನಾಡುವ ಮುನ್ನ ಅದರ ತತ್ವ-ಸಿದ್ಧಾಂತಗಳನ್ನು ತಿಳಿದುಕೊಳ್ಳಬೇಕು. ದಿನನಿತ್ಯ ನೆಗೆಟಿವ್ ಸುದ್ದಿಗಳಲ್ಲೇ ಕಾಣಿಸಿಕೊಳ್ಳುವ “ಪೇಪರ್ ಹುಲಿ” ಆಗಬಾರದು ಎಂದು ನಿರಾಣಿ ಕಿಡಿಕಾರಿದರು.

ನಿಂತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿ; ಟೈರ್ ಬದಲಿಸುತ್ತಿದ್ದ ವೇಳೆ ಭೀಕರ ದುರಂತ, ಇಬ್ಬರು ಸ್ಥಳದಲ್ಲೇ ಸಾವು

0

ತುಮಕೂರು/ಧಾರವಾಡ: ರಾಜ್ಯದಲ್ಲಿ ಎರಡು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳು ನಾಲ್ವರಿಗೆ ಕಣ್ಣೀರಿನ ಮಳೆ ಸುರಿಸಿವೆ. ತುಮಕೂರಿನಲ್ಲಿ ಹೊಸ ಬೈಕ್ ಖರೀದಿಸಿದ ಮರುದಿನವೇ ಯುವಕ ಪ್ರಾಣ ಕಳೆದುಕೊಂಡಿದ್ದರೆ, ಧಾರವಾಡದಲ್ಲಿ ನಿಂತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಂಗಸಾಗರ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ದೊಡ್ಡಹಳ್ಳಿ ನಿವಾಸಿ 19 ವರ್ಷದ ನಂದೀಶ್ ಕುಮಾರ್ ಸಾವನ್ನಪ್ಪಿದ್ದಾರೆ. ನಿನ್ನೆಯಷ್ಟೇ ಹೊಸ ಬೈಕ್ ಖರೀದಿಸಿದ್ದ ಅವರು ಸ್ನೇಹಿತನೊಂದಿಗೆ ಮನೆಗೆ ಮರಳುತ್ತಿದ್ದ ವೇಳೆ ವೈಎನ್ ಹೊಸಕೋಟೆ ಕಡೆಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ನಂದೀಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪಾವಗಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದೆಡೆ ಧಾರವಾಡ ತಾಲೂಕಿನ ಬೇಲೂರು ಗ್ರಾಮದ ಬಳಿ ಟೈರ್ ಬ್ಲಾಸ್ಟ್‌ನಿಂದ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಕ್ಯಾಂಟರ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಹಳೇ ತೇಗೂರು ನಿವಾಸಿ ಷಣ್ಮುಖ ಜೋಗಿ (28) ಹಾಗೂ ಉತ್ತರ ಪ್ರದೇಶ ಮೂಲದ ಸಾಗರ್ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಚಾಲಕ ಟೈರ್ ಬದಲಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ಗರಗ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ; ಮದುವೆ ಬ್ಯಾಂಡ್ ವಾಹನಕ್ಕೆ ಲಾರಿ ಡಿಕ್ಕಿಯಾಗಿ 7 ಮಂದಿ ದುರ್ಮರಣ

0

ರಾಂಚಿ: ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ಕಲ್ಲಿದ್ದಲು ಸಾಗಿಸುತ್ತಿದ್ದ ಟ್ರಕ್ ಮತ್ತು ಪ್ರಯಾಣಿಕರ ವಾಹನದ ನಡುವೆ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದ ತೀವ್ರತೆಗೆ ಪ್ರಯಾಣಿಕರಿದ್ದ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತಪಟ್ಟವರೆಲ್ಲರೂ ಮದುವೆ ಸೇರಿದಂತೆ ವಿವಿಧ ಶುಭ ಸಮಾರಂಭಗಳಲ್ಲಿ ಸಂಗೀತ ವಾದನ ಮಾಡುತ್ತಿದ್ದ ಬ್ಯಾಂಡ್ ತಂಡದ ಸದಸ್ಯರು ಎಂದು ಪೊಲೀಸರು ತಿಳಿಸಿದ್ದಾರೆ.

ಹಜಾರಿಬಾಗ್ ಜಿಲ್ಲೆಯ ಬಾಲ್ಸಾಗ್ರ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ತಡರಾತ್ರಿ ತಮ್ಮ ಊರಿಗೆ ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ರಾಜ್ರಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-23ರಲ್ಲಿ ರಾತ್ರಿ ಸುಮಾರು 12 ಗಂಟೆ ವೇಳೆಗೆ ಓವರ್‌ಟೇಕ್ ಮಾಡಲು ಮುಂದಾದ ಕಲ್ಲಿದ್ದಲು ತುಂಬಿದ್ದ ಟ್ರಕ್, ಎದುರಿನಿಂದ ಬರುತ್ತಿದ್ದ ಪ್ರಯಾಣಿಕರ ವಾಹನಕ್ಕೆ ಭಾರೀ ವೇಗದಲ್ಲಿ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಅಪಘಾತದ ಭೀಕರ ಶಬ್ದ ಕೇಳಿ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸಾರ್ವಜನಿಕರ ಸಹಾಯದಿಂದ ಗಾಯಾಳುಗಳನ್ನು ಹಾಗೂ ಮೃತದೇಹಗಳನ್ನು ರಾಮಗಢ ಸದರ್ ಆಸ್ಪತ್ರೆಗೆ ಸಾಗಿಸಿದರು.

ರಾಮಗಢ ಸದರ್ ಆಸ್ಪತ್ರೆಯ ಸಿವಿಲ್ ಸರ್ಜನ್ ಅನಿಲ್ ಕುಮಾರ್ ಮಾತನಾಡಿ, ಆಸ್ಪತ್ರೆಗೆ ಕರೆತರಲಾದ ಎಂಟು ಮಂದಿಯಲ್ಲಿ ಏಳು ಮಂದಿ ಮೃತಪಟ್ಟ ಸ್ಥಿತಿಯಲ್ಲೇ ಇದ್ದರು ಎಂದು ತಿಳಿಸಿದ್ದಾರೆ.

ತಲೆಗೆ ಗಂಭೀರ ಗಾಯಗೊಂಡಿದ್ದ ಮತ್ತೊಬ್ಬರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ರಾಂಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಾಮ ಮಂದಿರ ಕಾಣಿಕೆ ಹಣ ದುರ್ಬಳಕೆ ಪ್ರಕರಣ: ಚಂಪತ್ ರಾಯ್ ಆಪ್ತ ಸಹಾಯಕ ಸೇರಿ 8 ಮಂದಿ ಬಂಧನ

0

ಲಕ್ನೋ: ಅಯೋಧ್ಯೆಯ ಶ್ರೀರಾಮ ಮಂದಿರದ ಕಾಣಿಕೆ ಹಾಗೂ ದೇಣಿಗೆ ಹಣದ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದ ತನಿಖೆಯಲ್ಲಿ ವಿಶೇಷ ತನಿಖಾ ತಂಡ (SIT) ಮಹತ್ವದ ಕ್ರಮ ಕೈಗೊಂಡಿದ್ದು, ಪ್ರಕರಣದಲ್ಲಿ ಹೆಸರಿಸಲಾದ ಎಂಟು ಪ್ರಮುಖ ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಆಪ್ತ ಸಹಾಯಕ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಕೂಡ ಸೇರಿದ್ದಾರೆ ಎನ್ನಲಾಗಿದೆ.

ಬಂಧಿತರಲ್ಲಿ ಟಿನ್ನು ಯಾದವ್ ಜೊತೆಗೆ ಅನುಕಲ್ಪ್ ಮಿಶ್ರಾ, ಅವಿನಾಶ್ ಶುಕ್ಲಾ, ಕರುಣೇಶ್ ಪಾಂಡೆ, ಲವ್ ಕುಶ್ ಮಿಶ್ರಾ, ರಾಮ ಶಂಕರ್ ಮಿಶ್ರಾ ಹಾಗೂ ಸುಭಾಷ್ ಶ್ರೀವಾಸ್ತವ ಸೇರಿದಂತೆ ಒಟ್ಟು ಎಂಟು ಮಂದಿ ಇದ್ದಾರೆ. ಇವರೆಲ್ಲರೂ ದೇವಸ್ಥಾನಕ್ಕೆ ಬಂದ ಕಾಣಿಕೆ ಹಾಗೂ ನಗದು ಹಣವನ್ನು ಎಣಿಸುವ ಜವಾಬ್ದಾರಿಯಲ್ಲಿದ್ದ ತಂಡದ ಸದಸ್ಯರಾಗಿದ್ದರು ಎಂದು ತಿಳಿದುಬಂದಿದೆ.

ದೇವಸ್ಥಾನದ ಒಳಾಂಗಣದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಗಳು ಹಾಗೂ ವಿಧಿವಿಜ್ಞಾನ (ಫೊರೆನ್ಸಿಕ್) ಸಾಕ್ಷ್ಯಗಳ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS)ಯ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಲಾಗಿತ್ತು. ಪ್ರಕರಣ ದಾಖಲಾಗಿದ ಒಂದೇ ದಿನದೊಳಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಹಗರಣಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ತನಿಖಾ ಮೂಲಗಳು ತಿಳಿಸಿವೆ. ಆದರೆ, ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅಥವಾ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ವಿರುದ್ಧ ಇದುವರೆಗೆ ಯಾವುದೇ ಅಧಿಕೃತ ಎಫ್‌ಐಆರ್ ದಾಖಲಾಗಿಲ್ಲ.

ಈ ಪ್ರಕರಣ ಉತ್ತರ ಪ್ರದೇಶ ರಾಜಕೀಯದಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆಗೆ ಮುನ್ನ ಹೊಸ ಸಂಚಲನ ಸೃಷ್ಟಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಖನ್ನಾ,

ಯೋಗಿ ಆದಿತ್ಯನಾಥ್ ಸರ್ಕಾರ ಅಪರಾಧಗಳ ವಿರುದ್ಧ ಆರಂಭದಿಂದಲೂ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಅನುಸರಿಸುತ್ತಿದೆ. ರಾಮ ಮಂದಿರದ ಪವಿತ್ರ ದೇಣಿಗೆ ಹಣದಲ್ಲಿ ಅಕ್ರಮ ಎಸಗಿರುವ ಯಾರನ್ನೂ ಬಿಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.