ಮುಂಬೈ: ಮಹಾರಾಷ್ಟ್ರದ ಬಾರಾಮತಿ ಪ್ರದೇಶದಲ್ಲಿ ಮತ್ತೆ ವಿಮಾನ ಪತನಗೊಂಡ ಘಟನೆ ಆತಂಕಕ್ಕೆ ಕಾರಣವಾಗಿದೆ. ಈ ವರ್ಷದ ಆರಂಭದಲ್ಲಿ ಇದೇ ಭಾಗದಲ್ಲಿ ಸಂಭವಿಸಿದ್ದ ವಿಮಾನ ದುರಂತದ ನೆನಪು ಮಾಸುವ ಮುನ್ನವೇ ಬುಧವಾರ ಮತ್ತೊಂದು ತರಬೇತಿ ವಿಮಾನ ಪತನಗೊಂಡಿದೆ.
ಬಾರಾಮತಿಯ ಗೋಜ್‌ಬಾಬಿ ಗ್ರಾಮದ ಸಮೀಪ ‘ರೆಡ್‌ಬರ್ಡ್’ ವಿಮಾನಯಾನ ಸಂಸ್ಥೆಗೆ ಸೇರಿದ ತರಬೇತಿ ವಿಮಾನ ಹಾರಾಟದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಪತನಗೊಂಡಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ವಿಮಾನ ನೆಲಕ್ಕುರುಳಿದ ಪರಿಣಾಮ ಭಾರೀ ಹಾನಿಯಾಗಿದೆ. ಆದರೆ, ಪೈಲಟ್ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಹಾಗೂ ತುರ್ತುಸೇವಾ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ವಿಮಾನ ಪತನದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ.
ಇದೇ ವರ್ಷದ ಜನವರಿ 28ರಂದು ಇದೇ ಗ್ರಾಮದ ವ್ಯಾಪ್ತಿಯಲ್ಲಿ ನಡೆದ ಚಾರ್ಟರ್ ವಿಮಾನ ದುರಂತ ರಾಜ್ಯದ ಗಮನ ಸೆಳೆದಿತ್ತು. ಆ ಘಟನೆಗೆ ಸಂಬಂಧಿಸಿದಂತೆ ಹಲವು ಚರ್ಚೆಗಳು ನಡೆದಿದ್ದವು. ಇದೀಗ ಅದೇ ಪ್ರದೇಶದಲ್ಲಿ ಮತ್ತೊಮ್ಮೆ ವಿಮಾನ ಪತನಗೊಂಡಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.



