ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಖ್ಯಾತ ಕೋಚ್ ರಾಹುಲ್ ದ್ರಾವಿಡ್ ಇದೀಗ ಯುರೋಪಿಯನ್ ಟಿ20 ಲೀಗ್‌ನಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ETPL) ಉದ್ಘಾಟನಾ ಆವೃತ್ತಿಯ ತಂಡವೊಂದರ ಸಹ ಮಾಲೀಕರಾಗಿ ದ್ರಾವಿಡ್ ಸೇರ್ಪಡೆಯಾಗಿದ್ದು, ಐರ್ಲೆಂಡ್ ಮೂಲದ ‘ಡಬ್ಲಿನ್ ಗಾರ್ಡಿಯನ್ಸ್’ ಫ್ರಾಂಚೈಸಿಯನ್ನು ಖರೀದಿಸಿದ್ದಾರೆ.
ನಟ ಅಭಿಷೇಕ್ ಬಚ್ಚನ್ ಸಹ-ಸ್ಥಾಪಕರಾಗಿರುವ ಈ ಲೀಗ್ ಆಗಸ್ಟ್ 26ರಿಂದ ಆರಂಭವಾಗಲಿದ್ದು, ಡಬ್ಲಿನ್ ಗಾರ್ಡಿಯನ್ಸ್ ತಂಡಕ್ಕೆ ಭಾರತ ತಂಡದ ಮಾಜಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ನಾಯಕತ್ವ ವಹಿಸಲಿದ್ದಾರೆ.
ಇದಕ್ಕೂ ಮೊದಲು ರಾಹುಲ್ ದ್ರಾವಿಡ್ ಮತ್ತು ಅಶ್ವಿನ್ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇದೀಗ ಯುರೋಪಿಯನ್ ಟಿ20 ಲೀಗ್‌ನಲ್ಲಿ ಈ ಜೋಡಿ ಮತ್ತೊಮ್ಮೆ ಒಂದಾಗುತ್ತಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಯುರೋಪಿನ ವಿವಿಧ ರಾಷ್ಟ್ರಗಳಲ್ಲಿ ಕ್ರಿಕೆಟ್ ಬೆಳೆಸುವ ಉದ್ದೇಶದಿಂದ ಈ ಟೂರ್ನಿ ಆಯೋಜಿಸಲಾಗುತ್ತಿದೆ. ಐರ್ಲೆಂಡ್ ಸೇರಿದಂತೆ ಯುರೋಪಿನಾದ್ಯಂತ ಉದಯೋನ್ಮುಖ ಪ್ರತಿಭಾವಂತ ಆಟಗಾರರಿಗೆ ವೇದಿಕೆ ಕಲ್ಪಿಸುವುದು ಲೀಗ್‌ನ ಪ್ರಮುಖ ಉದ್ದೇಶವಾಗಿದೆ.
ತಂಡ ಖರೀದಿ ಕುರಿತು ಪ್ರತಿಕ್ರಿಯಿಸಿದ ರಾಹುಲ್ ದ್ರಾವಿಡ್, “ಈ ಲೀಗ್ ಹಿಂದೆ ಇರುವ ದೃಷ್ಟಿಕೋನವೇ ನನ್ನನ್ನು ಹೆಚ್ಚು ಆಕರ್ಷಿಸಿದೆ. ಐರ್ಲೆಂಡ್ ಹಾಗೂ ಯುರೋಪಿನ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಮೂಲಕ ಕ್ರಿಕೆಟ್ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ,” ಎಂದು ಹೇಳಿದರು.
ಡಬ್ಲಿನ್ ತಂಡದಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದಾರೆ. ಮುಂದಿನ ಪೀಳಿಗೆಯ ಕ್ರಿಕೆಟಿಗರನ್ನು ಬೆಳೆಸುವುದು ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ETPL ಮಹತ್ವದ ಪಾತ್ರ ವಹಿಸಲಿದೆ ಎಂಬ ವಿಶ್ವಾಸವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಲೀಗ್‌ನಲ್ಲಿ ಡಬ್ಲಿನ್, ಬೆಲ್‌ಫಾಸ್ಟ್, ಎಡಿನ್‌ಬರ್ಗ್, ಗ್ಲಾಸ್ಗೋ, ರೊಟರ್‌ಡ್ಯಾಮ್ ಮತ್ತು ಆಂಸ್ಟರ್ಡ್ಯಾಮ್ ಸೇರಿ ಒಟ್ಟು ಆರು ತಂಡಗಳು ಭಾಗವಹಿಸಲಿವೆ. ಜೊತೆಗೆ ಕ್ರಿಸ್ ಗೇಲ್, ಸ್ಟೀವ್ ವಾ ಮತ್ತು ಜಾಂಟಿ ರೋಡ್ಸ್ ಸೇರಿದಂತೆ ಜಾಗತಿಕ ಕ್ರಿಕೆಟ್ ದಿಗ್ಗಜರು ವಿವಿಧ ತಂಡಗಳ ಮಾಲೀಕರಾಗಿ ಹೂಡಿಕೆ ಮಾಡಿರುವುದು ಲೀಗ್‌ಗೆ ಇನ್ನಷ್ಟು ಮೆರುಗು ತಂದಿದೆ.



