ಹಾಸನ/ಚಿಕ್ಕಬಳ್ಳಾಪುರ: ಭಯೋತ್ಪಾದನೆಗೆ ಪಿತೂರಿ ನಡೆಸಿದ ಆರೋಪದ ತನಿಖೆ ಮುಂದುವರಿಸಿರುವ ಚಿಕ್ಕಬಳ್ಳಾಪುರ ಪೊಲೀಸರು ಹಾಸನ ಜಿಲ್ಲೆಯಲ್ಲಿ ಮತ್ತೋರ್ವ ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ.
ಬಿಹಾರ ಮೂಲದ 25 ವರ್ಷದ ಸಲಾಮಿನ್ ಬಂಧಿತನಾಗಿದ್ದಾನೆ ಎಂದು ತಿಳಿದುಬಂದಿದೆ.
ಸಲಾಮಿನ್ ಈ ಹಿಂದೆ ಹಾವೇರಿಯಲ್ಲಿ ತನ್ನ ಸಹೋದರನೊಂದಿಗೆ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿನ ಕೆಲಸ ಪೂರ್ಣಗೊಂಡ ಬಳಿಕ ಗುತ್ತಿಗೆದಾರನ ಸೂಚನೆಯಂತೆ ಅರಕಲಗೂಡಿಗೆ ತೆರಳಿದ್ದ. ಸೆಪ್ಟೆಂಬರ್ 24ರಂದು ಅರಕಲಗೂಡಿಗೆ ಬಂದಿದ್ದ ಆತನನ್ನು ಶಬ್ಬೀರ್ನಿಂದ ಸಿಕ್ಕ ಮಾಹಿತಿಯ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಪ್ರಕರಣದ ತನಿಖೆಯಲ್ಲಿ ಸಲಾಮಿನ್ ಹಾಗೂ ಶಬ್ಬೀರ್ ನಡುವೆ ಸಾಮಾಜಿಕ ಜಾಲತಾಣದ ಸಂಪರ್ಕವಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ವಿಶೇಷವಾಗಿ ಟೆಲಿಗ್ರಾಂ ಗ್ರೂಪ್ನಲ್ಲಿ ಸಲಾಮಿನ್ ಸಕ್ರಿಯವಾಗಿದ್ದ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಆತನ ಚಟುವಟಿಕೆಗಳ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇದಕ್ಕೂ ಮುನ್ನ ಶಬ್ಬೀರ್ನ ಸಾಮಾಜಿಕ ಜಾಲತಾಣ ಚಟುವಟಿಕೆಗಳು ಪೊಲೀಸರ ಗಮನಕ್ಕೆ ಬಂದಿದ್ದವು. ಉಗ್ರ ಸಂಘಟನೆಗಳಿಗೆ ಸಂಬಂಧಿಸಿದ ಪೋಸ್ಟ್ಗಳಿಗೆ ಆತ ಪ್ರತಿಕ್ರಿಯಿಸುತ್ತಿದ್ದ ಎನ್ನಲಾದ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿತ್ತು. ಬಳಿಕ ಚಿಕ್ಕಬಳ್ಳಾಪುರ ನಗರ ಪೊಲೀಸರು ಆತನನ್ನು ಬಂಧಿಸಿ ಮೊಬೈಲ್ ಪರಿಶೀಲನೆ ನಡೆಸಿದ್ದರು.
ಮೊಬೈಲ್ನಲ್ಲಿದ್ದ ಇನ್ಸ್ಟಾಗ್ರಾಂ ಮತ್ತು ಟೆಲಿಗ್ರಾಂ ಚಟುವಟಿಕೆಗಳನ್ನು ಪರಿಶೀಲಿಸಿದಾಗ ಪ್ರಚೋದನಕಾರಿ ಸಂದೇಶಗಳಿರುವ ಕ್ಲೋಸ್ಡ್ ಗ್ರೂಪ್ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ಚಿಕ್ಕಬಳ್ಳಾಪುರ ಎಸ್ಪಿ ಪದ್ಮಿನಿ ಸಾಹು ಮಾತನಾಡಿ, ಸಾಮಾಜಿಕ ಜಾಲತಾಣದ ಕ್ಲೋಸ್ಡ್ ಗ್ರೂಪ್ನಲ್ಲಿ ಪ್ರಚೋದನಕಾರಿ ಸಂದೇಶಗಳು ಕಂಡುಬಂದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಂಧಿತರ ಹಿನ್ನೆಲೆ, ಸಾಮಾಜಿಕ ಜಾಲತಾಣ ಸಂಪರ್ಕ ಹಾಗೂ ಮೊಬೈಲ್ ಚರ್ಚೆಗಳ ಕುರಿತು ಹೆಚ್ಚಿನ ತನಿಖೆ ನಡೆಯಬೇಕಿದೆ. ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.



