ನವದೆಹಲಿ: ಲೋಕಸಭೆಯಲ್ಲಿ ಪ್ರಮುಖ ಮತದಾನಕ್ಕೂ ಮುನ್ನ ಪ್ರಧಾನಿ ಮೋದಿ ಎಲ್ಲಾ ರಾಜಕೀಯ ಪಕ್ಷಗಳು ಮಹಿಳಾ ಮೀಸಲಾತಿ ಕಾನೂನಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡ ಅವರು, ಸಂಸತ್ತಿನಲ್ಲಿ ಮಸೂದೆ ಕುರಿತಂತೆ ಸವಿಸ್ತಾರ ಚರ್ಚೆಗಳು ನಡೆದಿದ್ದು, ತಡರಾತ್ರಿ ತನಕ ಹಾಗೂ ಮುಂದಿನ ದಿನವೂ ಚರ್ಚೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಸರ್ಕಾರವು ಉದ್ಭವಿಸಿದ ಎಲ್ಲ ಆತಂಕಗಳು ಮತ್ತು ತಪ್ಪು ಕಲ್ಪನೆಗಳನ್ನು ವಾಸ್ತವಾಂಶಗಳ ಮೂಲಕ ಸ್ಪಷ್ಟಪಡಿಸಿದೆ ಎಂದರು.
ಮಹಿಳಾ ಮೀಸಲಾತಿ ವಿಚಾರವು ಸುಮಾರು ನಾಲ್ಕು ದಶಕಗಳಿಂದ ಬಾಕಿಯಲ್ಲಿದೆ. ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಸಮಾನ ಹಾಗೂ ನ್ಯಾಯಯುತ ಪ್ರತಿನಿಧಿತ್ವ ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದು ಮೋದಿ ಒತ್ತಿ ಹೇಳಿದರು.
ದೇಶದ ಅರ್ಧ ಜನಸಂಖ್ಯೆಗೆ ನ್ಯಾಯ ಒದಗಿಸುವ ಸಮಯ ಬಂದಿದೆ. ಎಲ್ಲಾ ರಾಜಕೀಯ ಪಕ್ಷಗಳು ಜವಾಬ್ದಾರಿಯಿಂದ ಯೋಚಿಸಿ, ಮಹಿಳಾ ಮೀಸಲಾತಿಯ ಪರವಾಗಿ ಮತ ಚಲಾಯಿಸುವ ಮೂಲಕ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಕೋರಿದರು.
“ದೇಶದ ಕೋಟ್ಯಂತರ ಮಹಿಳೆಯರು ನಮ್ಮತ್ತ ಗಮನ ಹರಿಸಿದ್ದಾರೆ. ಅವರ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ನಡೆದುಕೊಳ್ಳಬಾರದು. ‘ನಾರಿ ಶಕ್ತಿ ವಂದನ್ ಅಧಿನಿಯಮ’ ತಿದ್ದುಪಡಿಗೆ ಎಲ್ಲರೂ ಬೆಂಬಲ ನೀಡಬೇಕು” ಎಂದು ಪ್ರಧಾನಿ ಮನವಿ ಮಾಡಿದ್ದಾರೆ.



