ಬೆಂಗಳೂರು: ಸಂತ್ರಸ್ತೆ ಬೇರೊಬ್ಬರನ್ನು ಮದುವೆಯಾಗಿದ್ದಾರೆ ಎಂಬ ಕಾರಣಕ್ಕೆ ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣವನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ದೇವನಹಳ್ಳಿ ತಾಲೂಕಿನ ಪಾಲಾಕ್ಷ ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಪ್ರಕರಣ ರದ್ದುಪಡಿಸಲು ಯಾವುದೇ ಆಧಾರ ಇಲ್ಲ ಎಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತು.
ಅರ್ಜಿದಾರರು, ಸಂತ್ರಸ್ತೆ ಈಗ ಬೇರೊಬ್ಬರನ್ನು ಮದುವೆಯಾಗಿದ್ದು, ಪ್ರಕರಣದ ಇತರೆ ಆರೋಪಿಗಳು ಈಗಾಗಲೇ ಖುಲಾಸೆಯಾಗಿರುವುದರಿಂದ ತಮ್ಮ ವಿರುದ್ಧದ ವಿಚಾರಣೆಯನ್ನು ರದ್ದುಪಡಿಸಬೇಕು ಎಂದು ಕೋರಿದ್ದರು. ಆದರೆ ಇದನ್ನು ಪ್ರಶ್ನಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಅರ್ಜಿದಾರನಿಗೆ ಇತರೆ ಆರೋಪಿಗಳ ಖುಲಾಸೆ ಹೇಗೆ ಅನ್ವಯಿಸುತ್ತದೆ ಎಂದು ಪ್ರಶ್ನಿಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು, ಸಂತ್ರಸ್ತೆ ರಾಜಿ ಸಂಧಾನದ ಮೂಲಕ ಪ್ರಕರಣ ಬಗೆಹರಿಸಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಸಂತ್ರಸ್ತೆ ಅರ್ಜಿದಾರನನ್ನು ಮದುವೆಯಾಗಿಲ್ಲ. ಬೇರೊಬ್ಬರನ್ನು ಮದುವೆಯಾದರೆ ಆರೋಪಿಯ ಮೇಲಿನ ಅಪರಾಧ ಹೇಗೆ ಅಳಿಸಿಹೋಗುತ್ತದೆ?” ಎಂದು ಪ್ರಶ್ನಿಸಿತು.
ಅರ್ಜಿದಾರರ ವಿರುದ್ಧ ಪೋಕ್ಸೊ ಕಾಯ್ದೆಯ ಸೆಕ್ಷನ್ 3 ಮತ್ತು 4 ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಆರೋಪಗಳಿದ್ದು, ಇಂತಹ ಗಂಭೀರ ಆರೋಪಗಳನ್ನು ರಾಜಿ ಮೂಲಕ ಮುಕ್ತಾಯಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿತು.
“ಸಂತ್ರಸ್ತೆ ಮದುವೆಯಾಗಿದ್ದಾರೆ ಎಂಬ ಕಾರಣಕ್ಕೆ ಅಪರಾಧವೇ ಅಳಿಸಿಹೋಗುವುದಿಲ್ಲ. ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಲು ಅಥವಾ ರದ್ದುಪಡಿಸಲು ಅವಕಾಶವಿಲ್ಲ. ಆರೋಪಿಯು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಿ ವಿಚಾರಣೆ ಎದುರಿಸಬೇಕು” ಎಂದು ಪೀಠ ಖಡಕ್ ಅಭಿಪ್ರಾಯ ವ್ಯಕ್ತಪಡಿಸಿತು.
ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸುವ ಸೂಚನೆ ನೀಡುತ್ತಿದ್ದಂತೆ, ಅರ್ಜಿದಾರರ ಪರ ವಕೀಲರು ಅರ್ಜಿಯನ್ನು ಹಿಂಪಡೆಯಲು ಅನುಮತಿ ಕೋರಿದರು. ಇದಕ್ಕೆ ನ್ಯಾಯಪೀಠ ಒಪ್ಪಿಗೆ ನೀಡಿ ಅರ್ಜಿ ಹಿಂಪಡೆಯಲು ಅವಕಾಶ ನೀಡಿತು.



