ರಾಯಚೂರು: ಜಿಲ್ಲೆಯಾದ್ಯಂತ ಶನಿವಾರ ತಡರಾತ್ರಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಭಾರೀ ಮಳೆಯ ನಡುವೆ ಸಿಡಿಲು ಬಡಿದು ತೆಂಗಿನ ಮರ ಸುಟ್ಟು ಕರಕಲಾಗಿರುವ ಘಟನೆ ಒಂದೆಡೆ ನಡೆದರೆ, ಮಂತ್ರಾಲಯದಲ್ಲಿ ಮಳೆಯಿಂದ ಸಾವಿರಾರು ಭಕ್ತರು ಸಂಕಷ್ಟಕ್ಕೆ ಸಿಲುಕಿದ ಘಟನೆ ಮತ್ತೊಂದೆಡೆ ನಡೆದಿದೆ.
ಜಿಲ್ಲೆಯ ಅರಕೇರಾ ತಾಲೂಕಿನ ಮುಕ್ಕಲಗುಡ್ಡ ತಾಂಡಾದಲ್ಲಿ ರಾತ್ರಿ ವೇಳೆ ಭೀಕರ ಸಿಡಿಲು ಬಡಿದಿದೆ. ತಾಂಡಾದ ನಿವಾಸಿ ಮನೋಹರ್ ನಾಯ್ಕ್ ಅವರ ಮನೆ ಮುಂದೆ ಇದ್ದ ತೆಂಗಿನ ಮರಕ್ಕೆ ಏಕಾಏಕಿ ಸಿಡಿಲು ಬಡಿದ ಪರಿಣಾಮ, ಮರದಲ್ಲಿದ್ದ ತೆಂಗಿನಕಾಯಿಗಳು ಹಾಗೂ ಗರಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ಸಿಡಿಲಿನ ತೀವ್ರತೆಗೆ ಮರ ಹೊತ್ತಿ ಉರಿದ ದೃಶ್ಯ ಕಂಡು ಗ್ರಾಮಸ್ಥರು ಆತಂಕಕ್ಕೊಳಗಾದರು. ದಟ್ಟ ಜನವಸತಿ ಪ್ರದೇಶದಲ್ಲೇ ಈ ಘಟನೆ ಸಂಭವಿಸಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದರಿಂದ ಇಡೀ ತಾಂಡಾ ದೊಡ್ಡ ಅನಾಹುತದಿಂದ ಪಾರಾಗಿದೆ.
ಇನ್ನೊಂದೆಡೆ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಂತ್ರಾಲಯದಲ್ಲೂ ಸುಮಾರು ಎರಡು ಗಂಟೆಗಳ ಕಾಲ ಭಾರೀ ಮಳೆಯಾಗಿದೆ. ವಾರಾಂತ್ಯ ಹಿನ್ನೆಲೆ ರಾಯರ ದರ್ಶನಕ್ಕಾಗಿ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು.
ಜಾಗದ ಕೊರತೆಯಿಂದ ಮಠದ ಹೊರಪ್ರಾಂಗಣದಲ್ಲಿ ನೂರಾರು ಭಕ್ತರು ಮಲಗಿದ್ದ ವೇಳೆ ತಡರಾತ್ರಿ ಏಕಾಏಕಿ ಮಳೆ ಆರಂಭವಾಗಿದೆ. ಮಳೆಯಿಂದ ತಪ್ಪಿಸಿಕೊಳ್ಳಲು ಭಕ್ತರು ದಿಕ್ಕಾಪಾಲಾಗಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸಣ್ಣ ಮಕ್ಕಳು ಹಾಗೂ ವೃದ್ಧರೊಂದಿಗೆ ಭಕ್ತರು ಮಳೆಯಲ್ಲಿ ನೆನೆದು ಪರದಾಡಿದರು.
ಭಕ್ತರು ಸಂಕಷ್ಟಕ್ಕೆ ಸಿಲುಕಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ತಡರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ತಕ್ಷಣವೇ ಮಠದ ಕಲ್ಯಾಣ ಮಂಟಪಗಳ ಬಾಗಿಲು ತೆರೆಯಿಸಿ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದರು.



