ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ. ಭಾರಿ ಮಳೆಯಿಂದ ಭೂಕುಸಿತ, ಮನೆ ಕುಸಿತ, ಹಠಾತ್ ಪ್ರವಾಹ ಸೇರಿದಂತೆ ಹಲವು ಅವಘಡಗಳು ಸಂಭವಿಸಿದ್ದು, ರುದ್ರಪ್ರಯಾಗ ಜಿಲ್ಲೆಯಲ್ಲಿ ಭೂಕುಸಿತ ಹಾಗೂ ಮಣ್ಣಿನ ಸವಕಳಿಯಿಂದ ಮನೆಗಳು, ರಸ್ತೆಗಳು ಮತ್ತು ಕೃಷಿ ಜಮೀನುಗಳಿಗೆ ವ್ಯಾಪಕ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರ್ ಕಿ ಟುನಿ ಪ್ರದೇಶದಲ್ಲಿ ಗುಡ್ಡದ ಮೇಲಿನಿಂದ ಭಾರಿ ಪ್ರಮಾಣದ ಮಣ್ಣು ಮತ್ತು ಅವಶೇಷಗಳು ಕುಸಿದು ಟಿನ್ ಶೆಡ್‌ವೊಂದರ ಗೋಡೆ ಕುಸಿದ ಪರಿಣಾಮ, ಅದರೊಳಗೆ ಮಲಗಿದ್ದ ಇಬ್ಬರು ನೇಪಾಳಿ ಕಾರ್ಮಿಕರು ಮೃತಪಟ್ಟಿದ್ದಾರೆ. ನಿರಂತರ ಮಳೆಯಿಂದ ಗುಡ್ಡದ ಮೇಲಿನ ಮಣ್ಣು ಮತ್ತು ಅವಶೇಷಗಳು ಸಡಿಲಗೊಂಡು ಶೆಡ್ ಮೇಲೆ ಬಿದ್ದಿದ್ದು, ಶೆಡ್ ಕುಸಿದ ಪರಿಣಾಮ ಒಳಗಿದ್ದ ಕಾರ್ಮಿಕರು ಸಿಲುಕಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ವಿನೀತ್ ಪಾಲ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸೋಮೇಶ್ವರ ಬ್ಲಾಕ್‌ನ ವದ್ಯೂರಾ ಗ್ರಾಮದಲ್ಲಿ ಮನೆಯೊಂದರ ಮೇಲೆ ಮಣ್ಣು ಮತ್ತು ಅವಶೇಷಗಳು ಕುಸಿದು ಬಿದ್ದ ಪರಿಣಾಮ ಮೂವರು ಮೃತಪಟ್ಟಿದ್ದರು. ಜಿಲ್ಲಾಧಿಕಾರಿ ಅಂಶುಲ್ ಸಿಂಗ್ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.
ಅಲ್ಮೋರಾದಲ್ಲಿ ಹಲವು ಗಂಟೆಗಳ ಕಾಲ ಸುರಿದ ಭಾರಿ ಮಳೆಯಿಂದ ಮನೆಗಳಿಗೆ ಮಣ್ಣು ಮತ್ತು ಅವಶೇಷಗಳು ನುಗ್ಗಿದ್ದು, ಹಲವು ರಸ್ತೆಗಳು ಬಂದ್ ಆಗಿವೆ. ಇದರಿಂದ ಸಂಚಾರ ಹಾಗೂ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆ ಹಾಗೂ ಅಸ್ಥಿರವಾಗಿರುವ ಗುಡ್ಡ ಪ್ರದೇಶಗಳು ರಕ್ಷಣಾ ಮತ್ತು ರಸ್ತೆ ತೆರವು ಕಾರ್ಯಕ್ಕೆ ಸವಾಲಾಗಿ ಪರಿಣಮಿಸಿವೆ.

