ಮಧ್ಯಪ್ರದೇಶ: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಮೇಘಾಲಯ ಹನಿಮೂನ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸೋನಮ್ ರಘುವಂಶಿಗೆ ಶಿಲ್ಲಾಂಗ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮೃತ ರಾಜಾ ರಘುವಂಶಿ ಅವರ ಹಿರಿಯ ಸಹೋದರ ವಿಪಿನ್ ರಘುವಂಶಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಆದರೆ, ಸೋನಮ್ ಕುಟುಂಬ ಅಥವಾ ಆಕೆಯ ಸಹೋದರರಿಂದ ಈ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ.
ಪ್ರಕರಣದ ವಿಚಾರಣೆ ಶಿಲ್ಲಾಂಗ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಸೋನಮ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ವಾದ-ಪ್ರತಿವಾದ ಆಲಿಸಿದ ಬಳಿಕ ಜಾಮೀನು ನೀಡಿದೆ ಎಂದು ವಿಪಿನ್ ರಘುವಂಶಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಲು ಸೋನಮ್ ಸಹೋದರ ಗೋವಿಂದ್ ರಘುವಂಶಿ ನಿರಾಕರಿಸಿದ್ದಾರೆ. ಇತ್ತ, “ಜಾಮೀನು ಕುರಿತು ಮಾಧ್ಯಮಗಳ ಮೂಲಕ ಮಾಹಿತಿ ತಿಳಿದಿದ್ದು, ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸುತ್ತೇವೆ” ಎಂದು ವಿಪಿನ್ ರಘುವಂಶಿ ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ:
2025ರ ಮೇ 11ರಂದು ಇಂದೋರ್‌ನಲ್ಲಿ ಸೋನಮ್ ಮತ್ತು ರಾಜಾ ರಘುವಂಶಿ ವಿವಾಹವಾಗಿದ್ದರು. ಬಳಿಕ ಮೇ 20ರಂದು ಹನಿಮೂನ್‌ಗೆ ಮೇಘಾಲಯಕ್ಕೆ ತೆರಳಿದ್ದರು. ಮೇ 23ರಂದು ಇಬ್ಬರೂ ನಾಪತ್ತೆಯಾಗಿದ್ದು, ಕುಟುಂಬದವರು ದೂರು ದಾಖಲಿಸಿದ್ದರು.
ಪೊಲೀಸರ ಶೋಧ ಕಾರ್ಯಾಚರಣೆಯ ನಡುವೆ ಜೂನ್ 2ರಂದು ಕಾಡಿನಲ್ಲಿ ರಾಜಾ ಅವರ ಕೊಳೆತ ಸ್ಥಿತಿಯ ಮೃತದೇಹ ಪತ್ತೆಯಾಗಿತ್ತು. ಆದರೆ ಸೋನಮ್ ಪತ್ತೆಯಾಗಿರಲಿಲ್ಲ. ಬಳಿಕ ಜೂನ್ 9ರಂದು ಉತ್ತರ ಪ್ರದೇಶದ ಘಾಜಿಪುರದ ರೆಸ್ಟೋರೆಂಟ್ ಬಳಿ ಸೋನಮ್ ಪತ್ತೆಯಾಗಿದ್ದಳು.
ವಿಚಾರಣೆ ವೇಳೆ, ತನ್ನ ಪ್ರಿಯಕರ ರಾಜ್ ಕುಶ್ವಾಹ ಮತ್ತು ಇತರರ ಜೊತೆಗೂಡಿ ಪತಿ ರಾಜಾ ಹತ್ಯೆಗೆ ಸಂಚು ರೂಪಿಸಿದ್ದಾಗಿ ಸೋನಮ್ ಒಪ್ಪಿಕೊಂಡಿದ್ದಳು. ಆಕೆಯ ಹೇಳಿಕೆಯ ಆಧಾರದ ಮೇಲೆ ರಾಜ್ ಕುಶ್ವಾಹ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದರು.
ಈ ಪ್ರಕರಣದಲ್ಲಿ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದ್ದು, ಅವರಲ್ಲಿ ಮೂವರಿಗೆ ಈಗಾಗಲೇ ಜಾಮೀನು ದೊರೆತಿದೆ.



