ಬೆಂಗಳೂರು: ಸಂಬಂಧಿಕರ ಮನೆಗೆ ಬಂದು ಅಸಲಿ ಚಿನ್ನಾಭರಣಗಳನ್ನು ಕದ್ದು, ಆ ಜಾಗದಲ್ಲಿ ನಕಲಿ ಒಡವೆಗಳನ್ನು ಇಟ್ಟು ಪರಾರಿಯಾಗಿದ್ದ ಖತರ್ನಾಕ್ ಆರೋಪಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ದೂರುದಾರರ ದೂರದ ಸಂಬಂಧಿ ಅಶ್ವಥ್ ಕೆ.ಹೆಚ್. ಎಂದು ಗುರುತಿಸಲಾಗಿದೆ.
ಕೆಂಗೇರಿಯ ಕೈಲಾಸ್ ಬಿಡಿಎ (BDA) ಅಪಾರ್ಟ್ಮೆಂಟ್ ನಿವಾಸಿಯೊಬ್ಬರ ಮನೆಗೆ ಆರೋಪಿ ಅಶ್ವಥ್ ಆಗಾಗ ಬಂದು ಹೋಗುತ್ತಿದ್ದ. ಕಳೆದ ತಿಂಗಳು ನಡೆದಿದ್ದ ಲಕ್ಷ್ಮೀ ಪೂಜೆಗೆ ದೂರುದಾರರು ಈತನನ್ನು ಆಹ್ವಾನಿಸಿದ್ದರು. ಮಾರನೇ ದಿನ ಕಾರಣಾಂತರಗಳಿಂದ ಮನೆಯವರೆಲ್ಲರೂ ಹೊರಹೋಗಿದ್ದಾಗ, ಮನೆಗೆ ಬಂದಿದ್ದ ಅಶ್ವಥ್ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ್ದಾನೆ.
“ನನ್ನದೇ ಮನೆಯ ಕೀ ಕಳೆದುಹೋಗಿದೆ” ಎಂದು ನಂಬಿಸಿ ನಕಲಿ ಕೀ ತಯಾರಿಸುವವರನ್ನು ಕರೆತಂದು ಮನೆ ಬಾಗಿಲು ಓಪನ್ ಮಾಡಿಸಿದ್ದಾನೆ. ಬಳಿಕ ತಾನು ಜೊತೆಯಲ್ಲಿ ತಂದಿದ್ದ ನಕಲಿ ಆಭರಣಗಳನ್ನು ದೇವರ ಮೇಲಿದ್ದ ಮತ್ತು ರೂಮ್ನಲ್ಲಿದ್ದ ಅಸಲಿ ಆಭರಣಗಳ ಜಾಗದಲ್ಲಿ ಇಟ್ಟಿದ್ದಾನೆ. ಈ ಮೂಲಕ ಸುಮಾರು ₹8 ಲಕ್ಷ ಮೌಲ್ಯದ ಚಿನ್ನಾಭರಣ (ಎರಡು ಸರ, ಒಂದು ಜೊತೆ ಬಳೆ ಹಾಗೂ ಸಹೋದರ ಸಂಬಂಧಿ ಮನೆಯಲ್ಲಿಟ್ಟಿದ್ದ ಕಟ್ ಆಗಿದ್ದ ಸರ) ಹಾಗೂ ಪೂಜೆ ತಟ್ಟೆಯಲ್ಲಿದ್ದ ₹8 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದ.
ಮನೆಯವರು ವಾಪಸ್ ಬಂದಾಗ ಪೂಜೆ ತಟ್ಟೆಯಲ್ಲಿದ್ದ ಹಣ ಕಳೆದುಹೋಗಿರುವುದು ಕಂಡುಬಂದು ಅನುಮಾನ ವ್ಯಕ್ತವಾಗಿತ್ತು. ಬಳಿಕ ಆಭರಣಗಳನ್ನು ಪರಿಶೀಲಿಸಿದಾಗ ಅಸಲಿ ಆಭರಣಗಳ ಜಾಗದಲ್ಲಿ ನಕಲಿ ಆಭರಣಗಳನ್ನು ರಿಪ್ಲೇಸ್ ಮಾಡಿರುವುದು ಬಯಲಾಗಿದೆ. ತಕ್ಷಣವೇ ಅಪಾರ್ಟ್ಮೆಂಟ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕೆಂಗೇರಿ ಠಾಣೆ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಅಶ್ವಥ್ನನ್ನು ಬಂಧಿಸಿ, ಕಳುವಾಗಿದ್ದ ಕೆಲವು ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.



