ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ದರ್ಶನ್ ಆ್ಯಂಡ್ ಗ್ಯಾಂಗ್ ರೇಣುಕುಸ್ವಾಮಿಯನ್ನು ಕಿಡ್ನಾಪ್ ಮಾಡಿ ಬಳಿಕ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್ ನಲ್ಲಿ ಮನಸ್ಸೋ ಇಚ್ಛೆ ಹಲ್ಲೆ ಮಾಡಿ ಬಳಿಕ ಹತ್ಯೆ ಮಾಡಿತ್ತು. ಇದೇ ಮಾದರಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದ್ದು, ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೌದು ಮಂಜುನಾಥ್ ಹಾಗೂ ಬಾಗೇಗೌಡ ಎರಡು ವರ್ಷದಿಂದ ಸ್ನೇಹಿತರಾಗಿದ್ದು, ಗ್ಲೋಬಲ್ ಲಿಮಿಟೆಡ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ಕೊನೆಗೆ ಕಂಪನಿ ನಷ್ಟವಾಗಿ ಈ ಪ್ರಕರಣ ಸಿಐಡಿಯಲ್ಲಿದೆ. ಬಾಗೇಗೌಡನ ನಂಬಿ ಹಣ ಹೂಡಿಕೆ ಮಾಡಿ ನಷ್ಟವಾಗಿದ್ದರಿಂದ ಮಂಜುನಾಥ್ ಕೋಪಗೊಂಡಿದ್ದ.
ಹೇಗಾದರೂ ಮಾಡಿ ತನ್ನ ಹಣ ವಸೂಲಿ ಮಾಡಬೇಕೆಂದು ಪ್ಲ್ಯಾನ್ ಮಾಡಿ ಬಾಗೇಗೌಡನನ್ನು ಹೋಟೆಲ್ ಗೆ ಕರೆಯಿಸಿಕೊಂಡಿದ್ದಾನೆ. ಬಳಿಕ ಆಚೆ ಹೋಗಿ ಬರೋಣ ಎಂದು ಗೋದಾಮಿಗೆ ಕರೆದೊಯ್ದಿದ್ದಾನೆ. ಬಳಿಕ ಗೋದಾಮಿಗೆ 8 ಜನರ ಕರೆಯಿಸಿ ಹಣ ಕೊಡುವಂತೆ ಬಾಗೇಗೌಡನ ಮೇಲೆ ಹಲ್ಲೆ ಮಾಡಿದ್ದಾನೆ.ಒಂದು ವೇಳೆ ಹಣ ಕೊಡದಿದ್ದರೆ ರೇಣುಕಾಸ್ವಾಮಿ ರೀತಿ ಕೊಲೆ ಆಗ್ತೀಯಾ ಎಂದು ಧಮ್ಕಿ ಹಾಕಿದ್ದಾನೆ.
ಇನ್ನು ಇದೇ ವೇಳೆ 44 ಲಕ್ಷದಷ್ಟು ಹಣ ಕೊಡಬೇಕು ಎಂದು ಬಾಗೇಗೌಡನಿಂದ ಬಲವಂತವಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದು, ಬಾಗೇಗೌಡನ ಬಾಮೈದನಿಂದ ಚೆಕ್ ತರಿಸಿ ಸಹಿ ಮಾಡಿಸಿಕೊಂಡಿದ್ದಾರೆ. ಸದ್ಯ ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.



