ಬೆಂಗಳೂರು: ಹೋಲ್‌ಸೇಲ್‌ನಲ್ಲಿ ಚಿನ್ನ ಖರೀದಿಸುವುದಾಗಿ ನಂಬಿಸಿ ದರೋಡೆ ನಡೆಸಿದ್ದ ಮುಂಬೈ ಗ್ಯಾಂಗ್‌ನ ಇಬ್ಬರು ಆರೋಪಿಗಳನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪ್ರವೀಣ್ ಅಲಿಯಾಸ್ ಪಪ್ಪು ಹಾಗೂ ಪರೇಶ್ ಸೋನಿ ಎಂದು ಗುರುತಿಸಲಾಗಿದೆ. ಆರೋಪಿಗಳು ಮುಂಬೈನಿಂದ ಬೆಂಗಳೂರಿಗೆ ಬಂದು, ಕೇವಲ ಒಂದು ವಾರದ ಹಿಂದಷ್ಟೇ ಮಲ್ಲೇಶ್ವರಂ 3ನೇ ಕ್ರಾಸ್‌ನಲ್ಲಿ ಕಚೇರಿ ಆರಂಭಿಸಿ ತಮ್ಮ ಕೃತ್ಯಕ್ಕೆ ಸಂಚು ರೂಪಿಸಿದ್ದರು.
ಹೋಲ್‌ಸೇಲ್‌ನಲ್ಲಿ ಚಿನ್ನಾಭರಣ ಖರೀದಿಸುವುದಾಗಿ ಆನ್‌ಲೈನ್‌ನಲ್ಲಿ ಜಾಹೀರಾತು ನೀಡಿದ್ದ ಆರೋಪಿಗಳು, ಅದನ್ನು ನಂಬಿದ ಮೆಹ್ತಾ ಗೋಲ್ಡ್ ಸಂಸ್ಥೆಯ ಪ್ರತಿನಿಧಿಗಳನ್ನು ತಮ್ಮ ಕಚೇರಿಗೆ ಕರೆಸಿಕೊಂಡಿದ್ದರು. ಸುಮಾರು 3 ಕೆ.ಜಿ. ಚಿನ್ನಾಭರಣ ಮಾರಾಟಕ್ಕೆ ತರಿಸಿದ್ದ ವ್ಯಾಪಾರಿಗಳಿಂದ ಆಭರಣಗಳನ್ನು ಪರಿಶೀಲಿಸಿ ಫೋಟೋ ತೆಗೆದುಕೊಳ್ಳುವುದಾಗಿ ಹೇಳಿ ಒಳಗೆ ತೆಗೆದುಕೊಂಡು ಹೋಗಿದ್ದರು.
ಅನುಮಾನ ಬಾರದಂತೆ ಮೊದಲು ಸುಮಾರು ಒಂದೂವರೆ ಕೆ.ಜಿ. ಚಿನ್ನಾಭರಣವನ್ನು ಮಾತ್ರ ಒಳಗೆ ತೆಗೆದುಕೊಂಡು ಹೋಗಿ, ಅಲ್ಲಿಂದಲೇ ಪರಾರಿಯಾಗಿದ್ದರು. ಘಟನೆ ಸಂಬಂಧ ಮೆಹ್ತಾ ಗೋಲ್ಡ್ ಸಂಸ್ಥೆಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಮಲ್ಲೇಶ್ವರಂ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ₹1.64 ಕೋಟಿ ಮೌಲ್ಯದ 1 ಕೆಜಿ 8 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಮಲ್ಲೇಶ್ವರಂ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದು, ತನಿಖೆ ನಡೆಯುತ್ತಿದೆ.



