ದಾವಣಗೆರೆ: ಹಿರಿಯ ಶಾಸಕ ದಿವಂಗತ ಡಾ. ಶಾಮನೂರು ಶಿವಶಂಕರಪ್ಪನವರ ಸ್ಮರಣಾರ್ಥ ‘ನುಡಿನಮನ’ ಕಾರ್ಯಕ್ರಮವನ್ನು ಅವರ ಕುಟುಂಬಸ್ಥರು ಡಿಸೆಂಬರ್ 26ರಂದು ಹಮ್ಮಿಕೊಂಡಿದ್ದಾರೆ. ಹಳೇ ದಾವಣಗೆರೆಯ ಶ್ರೀ ಕಲ್ಲೇಶ್ವರ ಮಿಲ್ ಹಿಂಭಾಗದಲ್ಲಿರುವ 100 ಎಕರೆ ವಿಶಾಲ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರ ಪುತ್ರ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ನುಡಿನಮನ ಕಾರ್ಯಕ್ರಮಕ್ಕಾಗಿ ಮೂರು ಬೃಹತ್ ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಸ್ವಾಮೀಜಿಗಳು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿವಿಧ ರಾಜಕೀಯ ನಾಯಕರು ಹಾಗೂ ಶಾಮನೂರು ಕುಟುಂಬದ ಸದಸ್ಯರು ಭಾಗವಹಿಸಲಿದ್ದಾರೆ. ಬೆಳಗ್ಗೆ 10.15ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಾ. ಶಾಮನೂರು ಶಿವಶಂಕರಪ್ಪ ಅವರು ನಡೆದು ಬಂದ ಬದುಕಿನ ಹಾದಿಯನ್ನು ಒಳಗೊಂಡ ‘ಅಮೃತ ಪುರುಷ’ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿ ನುಡಿನಮನ ಸಲ್ಲಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 2026ನೇ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ.
ಕಾರ್ಯಕ್ರಮದ ಸಾನಿಧ್ಯ ವಹಿಸಲಿರುವ ವಿವಿಧ ಮಠಾಧೀಶರು ಆಶೀರ್ವಚನ ನೀಡಲಿದ್ದು, ಡಾ. ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಹೊಂದಿದ್ದ ಸಾಂಗತ್ಯದ ಕುರಿತು ಅವರ ಮೊಮ್ಮಕ್ಕಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.



