ವ್ಯಕ್ತಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆಯನ್ನು ಮಾಧ್ಯಮವನ್ನಾಗಿ ಬಳಸಿಕೊಂಡವನು. ಯಾರ ಮುಂದೆಯೂ ಹೇಳಲಾಗದ ಕೆಲವೊಂದು ಮನದ ತುಮುಲಗಳನ್ನು ಬರಹದ ಮೂಲಕ ಹೇಳಲು ಪ್ರಾರಂಭಿಸಿದ. ಇದನ್ನೇ ನಾವು ಸಾಹಿತ್ಯವೆಂದು ಕರೆದೆವು. ಕಥೆ, ಕವನ, ಲೇಖನ, ನಾಟಕ ಹನಿಗವನ ಹೀಗೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ಇಂದು ಬೆಳೆದು ನಿಂತಿದೆ. ಹಾಗೆಯೇ ನಮ್ಮ ಭಾರತೀಯ ಸಾಹಿತ್ಯಕ್ಕೆ ಪರಭಾಷೆಯಿಂದಲೂ ಕೆಲವೊಂದು ಪ್ರಕಾರದ ಸಾಹಿತ್ಯ ಆಗಮಿಸಿ, ಇಲ್ಲಿಯ ಸಾಹಿತ್ಯವಾಗಿ ನೆಲೆ ನಿಂತಿದೆ.
ಅಂತಹ ಸಾಹಿತ್ಯಗಳಲ್ಲಿ ಶಾಯಿರಿಯೂ ಒಂದು.
ಎಲ್ಲ ಸಾಹಿತ್ಯಕ್ಕೂ ಒಂದು ಚೌಕಟ್ಟು ಇರುವಂತೆ ಶಾಯರಿಗೂ ಒಂದು ಚೌಕಟ್ಟಿದೆ. ತನ್ನದೇ ಆದ ಕೆಲವೊಂದಿಷ್ಟು ನಿಯಮದ ಅಡಿಯಲ್ಲಿ ಅದು ರಚನೆಗೊಂಡರೆ ಕೇಳುವ ಕಿವಿಗೂ, ಓದುವ ಮನಸಿಗೂ ಹಿತವನುಂಟು ಮಾಡುತ್ತದೆ. ಪರ್ಷಿಯಾ ಮೂಲದಿಂದ ಉರ್ದುವಿನ ನೆರಳಿನಡಿ ಬೆಳೆದು ಬಂದ ಈ ಸಾಹಿತ್ಯ, ಗಜಲ್‌ನ ಪ್ರತಿರೂಪವೆಂದು ಹೇಳಬಹುದು. ಇಲ್ಲಿ ಗಜಲ್‌ಗೆ ಶೇರ್‌ಗಳಿರುವಂತೆ ಇಲ್ಲಿ ಒಂದೇ ಒಂದು ಶೇರ್ ಇರುತ್ತದೆ. ಮೊದಲನೆಯ ಪಾದವನ್ನು ಸಾನಿ ಮಿಶ್ರಾ ಎಂತಲೂ, ಎರಡನೆಯ ಶೇರ್‌ನ್ನು ಊಲಾ ಮಿಶ್ರಾ ಎಂತಲೂ ಕರೆಯಲಾಗುತ್ತದೆ.
ಕನ್ನಡ ನಾಡಿಗೆ ಶಾಯಿರಿಗಳನ್ನು ಪರಿಚಯಿಸಿದವರು ಖ್ಯಾತ ಶಾಯಿರಿ ಸರದಾರ ಇಟಗಿ ಈರಣ್ಣನವರು. ಇವರ ನಂತರ ಹಲವಾರು ಶಾಯರ್‌ಗಳು ಬಂದರೂ ಕೂಡ ಅವರಂತೆ ಚೌಕಟ್ಟಿನೊಳಗೆ ಬರೆದವರು ವಿರಳರು ಎನ್ನಬಹುದು. ಇತ್ತಿತ್ತಲಾಗೆ ಜಿಲ್ಲೆಗೊಬ್ಬರಂತೆ ಈ ಶಾಯಿರಿ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ.
ಸಾಹಿತ್ಯ ವಲಯದಲ್ಲಿ ಉತ್ತರ ಕರ್ನಾಟಕದ ಗಂಡು ಭಾಷೆಯನ್ನು ಬಳಸಿಕೊಂಡು ಶಾಯಿರಿ ರಚಿಸಿ ಸೈ ಎನಿಸಿಕೊಂಡವರೆಂದರೆ, ಶ್ರೀ ಮರುಳುಸಿದ್ದಪ್ಪ ದೊಡ್ಡಮನೆಯವರು. ಇವರು ಈಗಾಗಲೇ `ಮರುಳನ ಶಾಯರಿ’ ಎಂಬ ಶಾಯಿರಿ ಸಂಕಲನವನ್ನು ರಚಿಸಿ ಓದುಗರ ಎದೆಯಾಳದಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ. ಈಗ ಅವರ ಎರಡನೆಯ ಸಂಕಲನ `ಎದೆಯಾಗಿದ ಮಾತು’ ಎಂಬ ನಾಮದಿಂದ ಹೊರಬಂದು ಓದುಗ ವಲಯದಲ್ಲಿ ವಾವ್ ಎನಿಸಿಕೊಳ್ಳುತ್ತಿದ್ದಾರೆ.
ಇರದಲ್ಲಿನ 94 ಶಾಯರಿಗಳು ಒಂದಕ್ಕೊಂದು ವಿಭಿನ್ನ ಭಾವವನ್ನು ಹೊಂದಿ ಓದುಗರಿಗೆ ಆನಂದವನ್ನು ನೀಡುತ್ತವೆ. ಪ್ರೀತಿ, ಪ್ರೇಮದ ಹಪಾ ಹಪಿ, ಕನವರಿಕೆ, ವಿರಹ, ಮೋಸ, ದಗಲ್ಭಾಜಿತನ, ರಾಜಕೀಯ, ಆಧ್ಯಾತ್ಮ, ಹೃದಯದ ನೋವು, ತಾತ್ವಿಕ ಚಿಂತನೆ, ಪರಿಸರ, ಪ್ರಕೃತಿ ವರ್ಣನೆ ಹೀಗೆ ಹತ್ತು ಹಲವಾರು ವಿಭಿನ್ನ ವಿಷಯ ವಸ್ತುವನ್ನು ಒಂದೊಮ್ಮೆ ಗಂಭೀರವಾಗಿ, ಮತ್ತೊಮ್ಮೆ ತಿಳಿಹಾಸ್ಯವಾಗಿ, ಮಗದೊಮ್ಮೆ ಅಷ್ಟೇ ರಸಿಕತೆಯಿಂದ ಇಲ್ಲಿಯ ಶಾಯರಿಗಳನ್ನು ಕಟ್ಟಿಕೊಟ್ಟಿದ್ದಾರೆ.
ಹೆಣ್ಣಿನ ವರ್ಣನೆ ಮಾಡದೇ ಇದ್ದರೆ ಅವನನ್ನು ಕವಿ ಎನ್ನುವುದಿಲ್ಲ. ಪಂಪನಿಂದ ಹಿಡಿದು ಇಂದಿನ ಕವಿಗಳವರೆಗೂ ಹೆಣ್ಣನ್ನು ವರ್ಣನೆ ಮಾಡುತ್ತಲೇ ಬಂದಿದ್ದಾರೆ. ಅವಳ ಮೂಗು, ತುಟಿ, ಕೆನ್ನೆ, ದಂತ, ಅವಳ ಹುಬ್ಬು, ಕೇಶ ರಾಶಿ, ಸೊಂಟ ಹೀಗೆ ಅವಳ ದೇಹದ ಅಂಗಗಳನ್ನು ನದಿ, ಝರಿ, ತೊರೆ, ಭೂಮಿ, ಬಾನು, ಸೂರ್ಯ, ಚಂದ್ರ, ನಕ್ಷತ್ರ, ಗುಡ್ಡ, ಬೆಟ್ಟ, ಹಗಲು-ರಾತ್ರಿಗಳಿಗೆ ಹೋಲಿಕೆ ಮಾಡಿ, ಅವಳನ್ನು ವರ್ಣಿಸಿದ್ದುಂಟು. ಇಲ್ಲಿ ಮರಳು ಸಿದ್ದಪ್ಪನವರು ಕೂಡ ಪ್ರೇಯಸಿಯ ಕೇಶರಾಶಿಯ ಬಗ್ಗೆ ಹಲವಾರು ಶಾಯಿರಿಗಳನ್ನು ಕಟ್ಟಿಕೊಟ್ಟಿದ್ದಾರೆ. ಅವಳ ಜೋತಾಡೊ ಕೂದಲು ಹೇಗೆ ಅವರ ಎದೆಗೆ ಪ್ರೇಮ ಬಾಣ ನಾಟಿದಂಗೆ ನಾಟಿದ್ದಾವೆ, ಅವು ಹೇಗೆ ಅವರ ಏಕಾಗ್ರತೆಯನ್ನು ಚಂಚಲಗೊಳಿಸಿವೆ ಎಂದು ಅದನ್ನು ಅತ್ಯಂತ ರಸಾತ್ಮಕವಾಗಿ ವರ್ಣಿಸಿದ್ದಾರೆ. ಅದಕ್ಕೆ ಸಾಕ್ಷಿಯೇ ಈ ಶಾಯಿರಿ.
ನಿನ್ನ ತಲಿಯಾಗಿನ ಕೂದಲು
ನನ್ನ ಹೃದಯಾನ ಬಾಳ ಕಲಿಕ್ಯಾವು
ಅವು ಹಾರಿದಂಗೆಲ್ಲಾ ನನ್ನ
ಜೀವನಾ ತಿಂತಾವು
ಪ್ರೀತಿಯ ಇನ್ನೊಂದು ಮುಖ ವಿರಹ ಎನ್ನುತ್ತಾರೆ. ಈ ಭೂಮಿಯ ಮೇಲೆ ಪ್ರೀತಿಸಿದವರು ಎಲ್ಲರಿಗೂ ಸಿಕ್ಕಿದ್ದರೆ ಈ ವಿರಹ, ದ್ವೇಷ, ನಶೆಯ ಅಂಗಡಿ ಯಾವವು ಇರುತ್ತಿದ್ದಿಲ್ಲ. ಪ್ರೀತಿಯೆಂಬ ಅಮೃತ ಕುಡದ ಮ್ಯಾಲ, ಅದ್ನ ಉಗುಳಾಕ ಬರಾಂಗಿಲ್ಲ. ಅದು ಒಳಗೆ ಇದ್ದು ವಿಷವಾಗಿ ಪರಿವರ್ತನೆ ಹೊಂದಿ, ಕೊನೆಗೊಂದು ದಿನ ಅವನಲ್ಲಿ ಹೆಪ್ಪುಗಟ್ಟಿ ಅವನ ಜೀವನಕ್ಕೆ ಸಂಚಕಾರ ತರಬಹುದು. ಆ ಪ್ರೀತಿಯನ್ನು ಮರೆಯಲಾಗದೆ ಎಷ್ಟೋ ಜೀವಗಳು ಬಲಿಯಾಗಿದ್ದುಂಟು. ಈ ಸಂಕಲನದಲ್ಲಿ ಇಂತಹ ಭಾವನೆಗಳೇ ಮರುಕಳಿಸುವ ಶಾಯರಿಗಳು ಅಲ್ಲಲ್ಲಿ ಸಿಗುತ್ತವೆ.
ಈ ಸಂಕಲನದ ಪ್ರತಿ ಶಾಯಿರಿಯಲ್ಲಿ ಬಳಸಿದ ಭಾಷೆ ಉತ್ತರ ಕರ್ನಾಟಕದ ಗ್ರಾಮೀಣ ಸೊಗಡಿನ ಘಮಲನ್ನು ಗಮಿಸಿದೆ. ಶಾಯಿರಿ ಎಂದರೆ ಏಕತಾನತೆ, ತನ್ಮಯತೆಯಿಂದ ಕೂಡಿರಬೇಕು. ಪ್ರತಿ ಶಾಯಿರಿಯೂ ಕೂಡ ಪ್ರೀತಿಯಿಂದ ಕೂಡಿ, ಆ ಭಗವಂತನಲ್ಲಿ ಲೀನವಾಗುವಂತಿರಬೇಕು. ಅದಕ್ಕೆ ತನ್ನದೇ ಆದ ಸೊಬಗು, ಪರಿಮಳದ ಹೊದಿಕೆ ಇದೆ. ಪ್ರೀತಿಯನ್ನು ಅತ್ಯಂತ ಧ್ಯಾನಸ್ಥ ರೀತಿಯಲ್ಲಿ ಹಂಚಬೇಕಿದೆ. ಆ ಭಾಷೆಯೊಂದಿಗೆ ಶಾಯಿರಿಗಳು ಸಂಜೆ ಸವಿಯುವ ಚುರುಮುರಿ-ಬಜಿಯ ಗಮನನ್ನು ಪಮ್ಮಿಸುತ್ತಿದ್ದವು. ಎದೆಯಾಗಿನ ಮಾತು ಎದೆಯಿಂದ ಎದೆಗೆ ಪ್ರೀತಿ ಹಂಚಲಿ ಎಂದು ಆಶಿಸುತ್ತೇನೆ.
– ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ (ಯಮಹ).
ಕೊಪ್ಪಳ.