ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ್ದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸಶಸ್ತ್ರ ಪಡೆಗಳ ಧೈರ್ಯ ಮತ್ತು ಶೌರ್ಯಕ್ಕೆ ಗೌರವ ಸಲ್ಲಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯ ಡಿಪಿಯನ್ನು ‘ಆಪರೇಷನ್ ಸಿಂಧೂರ್’ ಚಿತ್ರದಿಂದ ಬದಲಿಸಿಕೊಂಡಿದ್ದಾರೆ.
A year ago, during #OperationSindoor, our armed forces showcased their valour and gave a firm response to those who attacked our people. Every Indian is proud of our armed forces. As a mark of respect to our forces and their success during #OperationSindoor, let us all change our… pic.twitter.com/w4A3j1bGTw
— Narendra Modi (@narendramodi) May 7, 2026
ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ ಬಳಿಕ, ಭಾರತೀಯ ಸೇನೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು.
ಈ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳಿಗೆ ಸೇರಿದ ತಾಣಗಳ ಮೇಲೆ ನಿಖರ ದಾಳಿ ನಡೆಸಲಾಗಿತ್ತು. ಭಾರತೀಯ ಸೇನೆಯ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದರು ಎಂದು ತಿಳಿದುಬಂದಿತ್ತು.
ಭಾರತದ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಡ್ರೋನ್ ಹಾಗೂ ಶೆಲ್ ದಾಳಿಗಳನ್ನು ನಡೆಸಿದ್ದು, ಎರಡು ರಾಷ್ಟ್ರಗಳ ನಡುವೆ ನಾಲ್ಕು ದಿನಗಳ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಭಾರತೀಯ ಸೇನೆ ದೃಢ ಪ್ರತಿರೋಧ ತೋರಿಸಿ ಶತ್ರುಗಳ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಯಿತು.
ನಂತರ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಹಾಗೂ ಭಾರತೀಯ ಸೇನೆಯ ಮಹಾನಿರ್ದೇಶಕರ ನಡುವೆ ಮಾತುಕತೆ ನಡೆದಿದ್ದು, ಮೇ 10ರಂದು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಲಾಗಿತ್ತು. ಇದರೊಂದಿಗೆ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ಅಂತ್ಯಗೊಂಡಿತ್ತು.
ಕಾರ್ಯಾಚರಣೆಯ ವಾರ್ಷಿಕೋತ್ಸವದ ಅಂಗವಾಗಿ ಮಾತನಾಡಿದ ಪ್ರಧಾನಿ ಮೋದಿ, “ಆಪರೇಷನ್ ಸಿಂಧೂರ್ ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ನಿಲುವು ಹಾಗೂ ರಾಷ್ಟ್ರೀಯ ಭದ್ರತೆಯತ್ತ ನಮ್ಮ ಅಚಲ ಬದ್ಧತೆಯ ಪ್ರತೀಕವಾಗಿದೆ” ಎಂದು ಹೇಳಿದ್ದಾರೆ.
“ಈ ಕಾರ್ಯಾಚರಣೆ ಭಾರತೀಯ ಸಶಸ್ತ್ರ ಪಡೆಗಳ ವೃತ್ತಿಪರತೆ, ಸನ್ನದ್ಧತೆ ಮತ್ತು ಸಂಘಟಿತ ಶಕ್ತಿಯನ್ನು ಜಗತ್ತಿಗೆ ತೋರಿಸಿತು. ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆ ದೇಶದ ಭದ್ರತೆಯನ್ನು ಮತ್ತಷ್ಟು ಬಲಪಡಿಸಿದೆ,” ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.



