HomeKarnataka Newsದಂಪತಿ ಕಲಹಕ್ಕೆ ಮಗು ಬಲಿಯಾಗಬಾರದು: ತಂದೆಯ ಒಪ್ಪಿಗೆ ಇಲ್ಲದೇ ಪಾಸ್ ಪೋರ್ಟ್ ನೀಡಲು ಹೈಕೋರ್ಟ್ ಆದೇಶ

ದಂಪತಿ ಕಲಹಕ್ಕೆ ಮಗು ಬಲಿಯಾಗಬಾರದು: ತಂದೆಯ ಒಪ್ಪಿಗೆ ಇಲ್ಲದೇ ಪಾಸ್ ಪೋರ್ಟ್ ನೀಡಲು ಹೈಕೋರ್ಟ್ ಆದೇಶ

For Dai;y Updates Join Our whatsapp Group

Spread the love

ಬೆಂಗಳೂರು: ದಂಪತಿಗಳ ನಡುವಿನ ವೈಮನಸ್ಸು ಅಥವಾ ವೈವಾಹಿಕ ಕಲಹಕ್ಕೆ ಅಪ್ರಾಪ್ತ ಮಗು ಬಲಿಯಾಗಬಾರದು ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ತಂದೆಯ ಒಪ್ಪಿಗೆ ಇಲ್ಲದಿದ್ದರೂ ಐದು ವರ್ಷದ ಬಾಲಕಿಗೆ ಅಲ್ಪಾವಧಿಯ ಪಾಸ್‌ಪೋರ್ಟ್ ನೀಡುವಂತೆ ಪಾಸ್‌ಪೋರ್ಟ್ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.

ಈ ಕುರಿತು ಆದೇಶ ಹೊರಡಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದೂಮ್ ಅವರಿದ್ದ ಏಕಸದಸ್ಯ ಪೀಠ, ಬಾಲಕಿ ವಿದೇಶದಲ್ಲಿರುವ ಅಜ್ಜಿ-ಅಜ್ಜರನ್ನು ಭೇಟಿ ಮಾಡಿ ಪಾಸ್‌ಪೋರ್ಟ್ ಅವಧಿ ಮುಗಿಯುವ ಮೊದಲು ಭಾರತಕ್ಕೆ ಮರಳಬೇಕು ಎಂಬ ಷರತ್ತು ವಿಧಿಸಿದೆ. ಈ ಸಂಬಂಧ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿರುವ ನ್ಯಾಯಪೀಠ, ಒಂದು ವಾರದೊಳಗೆ ಪಾಸ್‌ಪೋರ್ಟ್ ನೀಡುವಂತೆ ಆದೇಶಿಸಿದೆ.

ತಂದೆಯ ಅನುಮತಿ ಇಲ್ಲದ ಕಾರಣ ಪಾಸ್‌ಪೋರ್ಟ್ ನೀಡಲಾಗುತ್ತಿಲ್ಲ ಎಂದು ಆರೋಪಿಸಿ ಮಗುವಿನ ತಾಯಿ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಮಗುವಿನ ಹಿತಾಸಕ್ತಿಯೇ ಮುಖ್ಯ ಎಂದು ಸ್ಪಷ್ಟಪಡಿಸಿದೆ.

ತಂದೆ ಒಂದೇ ವಿಳಾಸದಲ್ಲಿ ವಾಸವಿದ್ದರೂ ನ್ಯಾಯಾಲಯದ ನೋಟಿಸ್ ಸ್ವೀಕರಿಸದೇ ಉದ್ದೇಶಪೂರ್ವಕವಾಗಿ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ ಎಂದು ನ್ಯಾಯಪೀಠ ಗಮನಿಸಿದೆ.

“ಒಬ್ಬ ಪೋಷಕರು ಅನಗತ್ಯವಾಗಿ ಅಡ್ಡಿಪಡಿಸಿದಾಗ, ಮಗುವಿನ ಹಿತದೃಷ್ಟಿಯಿಂದ ನಿಯಮಗಳನ್ನು ಸಡಿಲಿಸಬಹುದು. ಕುಟುಂಬ ಸದಸ್ಯರನ್ನು ಭೇಟಿ ಮಾಡುವುದು ಮಗುವಿನ ನ್ಯಾಯಸಮ್ಮತ ಹಕ್ಕು. ದಂಪತಿಗಳ ನಡುವಿನ ಹಳಸಿದ ಸಂಬಂಧವು ಮಗುವಿನ ಹಕ್ಕುಗಳನ್ನು ಕಸಿದುಕೊಳ್ಳಬಾರದು” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ತಂದೆಯ ಅನುಮತಿಯಿಲ್ಲದಿದ್ದರೂ ಬಾಲಕಿಗೆ ಎಂಟು ವಾರಗಳ ಅವಧಿಗೆ ವಿದೇಶ ಪ್ರವಾಸ ಕೈಗೊಳ್ಳಲು ಅವಕಾಶ ಕಲ್ಪಿಸುವಂತೆ ಪಾಸ್‌ಪೋರ್ಟ್ ನೀಡಲು ಸೂಚಿಸಿದೆ.

ಅಪ್ರಾಪ್ತ ಮಕ್ಕಳಿಗೆ ಪಾಸ್‌ಪೋರ್ಟ್ ನೀಡುವ ವೇಳೆ ಸಾಮಾನ್ಯವಾಗಿ ಇಬ್ಬರು ಪೋಷಕರ ಒಪ್ಪಿಗೆ ಕಡ್ಡಾಯವಾದರೂ, ಒಬ್ಬರು ಅನಗತ್ಯವಾಗಿ ನಿರಾಕರಿಸಿದರೆ ಮಗುವಿನ ಕಾನೂನುಬದ್ಧ ಹಕ್ಕುಗಳಿಗೆ ಧಕ್ಕೆ ತರುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ

ಬಾಲಕಿ ತನ್ನ ತಾಯಿ ಹಾಗೂ ಅಜ್ಜಿ-ಅಜ್ಜರೊಂದಿಗೆ ಬೇಸಿಗೆ ರಜೆ ಕಳೆಯಲು ಆಸ್ಟ್ರೇಲಿಯಾಗೆ ತೆರಳಲು ಉದ್ದೇಶಿಸಿದ್ದಳು. ಆದರೆ ತಂದೆ ಒಪ್ಪಿಗೆ ನೀಡದ ಕಾರಣ ಪಾಸ್‌ಪೋರ್ಟ್ ಪ್ರಾಧಿಕಾರ ಅರ್ಜಿಯನ್ನು ಬಾಕಿ ಇಟ್ಟಿತ್ತು.

ಈ ಹಿನ್ನೆಲೆ ಹೈಕೋರ್ಟ್ ಮೆಟ್ಟಿಲೇರಿದ್ದ ತಾಯಿ ಪರ ವಕೀಲರು, ದಂಪತಿಗಳ ವಿಚ್ಛೇದನ ಪ್ರಕರಣ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆದರೆ ಬಾಲಕಿ ಆಸ್ಟ್ರೇಲಿಯಾದಲ್ಲಿರುವ ಅಜ್ಜಿ-ಅಜ್ಜರನ್ನು ಭೇಟಿ ಮಾಡಲು ಬಯಸುತ್ತಿದ್ದು, ಪಾಸ್‌ಪೋರ್ಟ್ ವಿಳಂಬವಾದರೆ ಮಗುವಿನ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!