ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ರಾಮನಗರದ ಪ್ರತಿಭಾವಂತ ಬಾಲಕಿ ಕುಮಾರಿ ಹೆಚ್. ಶ್ರೀರಕ್ಷ ಅವರು ಪ್ರತಿಷ್ಠಿತ ಶ್ರೀ ವಾಲ್ಮೀಕಿ ಕಲಾ ಸೇವಾ ರಾಷ್ಟ್ರೀಯ ಬಾಲ ಪ್ರತಿಭೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯ ಶ್ರೀ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆ (ರಿ.) ವತಿಯಿಂದ ಜೂನ್ 28ರಂದು ಆಯೋಜಿಸಿರುವ 13ನೇ ವಾರ್ಷಿಕೋತ್ಸವ ಹಾಗೂ ರಾಜ್ಯ-ರಾಷ್ಟ್ರ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀರಕ್ಷ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷೆ ಅನುರಾಧ ವಾಲ್ಮೀಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಮನಗರದ ಹಿಟ್ನಾಳ್ ಶ್ರೀನಿವಾಸ ಹಾಗೂ ಶ್ರೀದೇವಿ ದಂಪತಿಯ ಪುತ್ರಿಯಾಗಿರುವ ಶ್ರೀರಕ್ಷ, ಪ್ರಸಿದ್ಧಿ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕರಾಟೆ ಹಾಗೂ ಭರತನಾಟ್ಯ ಕ್ಷೇತ್ರಗಳಲ್ಲಿ ವಿಶೇಷ ಪ್ರತಿಭೆ ತೋರಿದ್ದಾರೆ. ಅಲ್ಲದೇ ಮೊದಲನೇ ತರಗತಿಯಲ್ಲಿಯೇ 10 ಅಡಿ ಎತ್ತರದ ಮಲ್ಲಗಂಬ ಏರುವ ಮೂಲಕ ಗಮನ ಸೆಳೆದಿದ್ದರು.
ಬಾಲ್ಯದಲ್ಲಿಯೇ ವಿವಿಧ ಕ್ಷೇತ್ರಗಳಲ್ಲಿ ತೋರಿದ ಸಾಧನೆ ಹಾಗೂ ಪ್ರತಿಭೆಯನ್ನು ಪರಿಗಣಿಸಿ ರಾಷ್ಟ್ರೀಯ ಬಾಲ ಪ್ರತಿಭೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಶ್ರೀರಕ್ಷ ಅವರ ಸಾಧನೆಗೆ ಕರಾಟೆ ತರಬೇತುದಾರರಾದ ಅಲಬೂರು ನಾಗರಾಜ ಮತ್ತು ಕಿರಣ್, ಭರತನಾಟ್ಯ ಶಿಕ್ಷಕಿ ಅಂಬಿಕಾ ಮೇಡಂಗು ಅಭಿನಂದನೆ ಸಲ್ಲಿಸಿದ್ದಾರೆ.
ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿರುವ ಶ್ರೀರಕ್ಷ ಅವರಿಗೆ ಕುಟುಂಬ ಸದಸ್ಯರು, ಪ್ರಸಿದ್ಧಿ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.



