ವಿಜಯಪುರ: ಮುಂದಿನ ತಿಂಗಳಲ್ಲಿ ಶುಭ ಮುಹೂರ್ತ ನೋಡಿ ಹೊಸ ರಾಜಕೀಯ ಚಟುವಟಿಕೆ ಆರಂಭಿಸುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜ್ಯಾದ್ಯಂತ ಜಿಲ್ಲಾವಾರು ಹಿಂದುತ್ವ ಸಭೆಗಳನ್ನು ನಡೆಸಲು ಯೋಜನೆ ರೂಪಿಸಿದ್ದೇನೆ. ಈ ಸಭೆಗಳನ್ನು ಕೋಲಾರ ಜಿಲ್ಲೆಯ ಐತಿಹಾಸಿಕ ವಿಘ್ನೇಶ್ವರ ದೇವಸ್ಥಾನದಿಂದ ಆರಂಭಿಸುತ್ತೇನೆ” ಎಂದು ಹೇಳಿದರು.
ಹಿಂದುತ್ವ, ನಿರುದ್ಯೋಗ ಮತ್ತು ಅಭಿವೃದ್ಧಿ ಎಂಬ ಮೂರು ಪ್ರಮುಖ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಈ ಸಭೆಗಳು ನಡೆಯಲಿವೆ. ಜನರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷ ಸ್ಥಾಪನೆ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ಶುಭ ಮುಹೂರ್ತ ನೋಡಿ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳುತ್ತೇನೆ. ಮೊದಲು ಜಿಲ್ಲಾ ಕೇಂದ್ರಗಳು, ಬಳಿಕ ತಾಲೂಕು ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲಾಗುತ್ತದೆ” ಎಂದರು.
ಹಿಂದೂಪರ ಚಿಂತನೆ ಹೊಂದಿರುವವರು, ನಿರುದ್ಯೋಗಿ ಯುವಕರು ಮತ್ತು ಅಭಿವೃದ್ಧಿ ಪರ ಜನರನ್ನು ಒಗ್ಗೂಡಿಸುವ ಉದ್ದೇಶ ಹೊಂದಿದ್ದೇನೆ. ಜನರ ಅಭಿಪ್ರಾಯದ ಆಧಾರದಲ್ಲಿ ಪ್ರಾದೇಶಿಕ ಪಕ್ಷ ಸ್ಥಾಪನೆ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಇದಲ್ಲದೆ, ಪಕ್ಷ ಸ್ಥಾಪನೆಯಾದರೆ ಚುನಾವಣಾ ಆಯೋಗ ಯಾವ ಚಿಹ್ನೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಯತ್ನಾಳ್ ಹೇಳಿದರು.



