ನವದೆಹಲಿ: ರಾಜ್ಯ ರಾಜಕೀಯದಲ್ಲಿ ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸಲಾಗುತ್ತಿದೆ ಎಂಬ ಚರ್ಚೆ ತೀವ್ರವಾಗಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಕೆಲವರು ತಮ್ಮ ಬಳಿಗೂ ಜಿಎಸ್‌ಟಿ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲು ಬಂದಿದ್ದರು. ಅವರ ಮೂಲಕವೇ ಸ್ಟಿಂಗ್ ಆಪರೇಷನ್ ಆರಂಭಿಸಲು ಪ್ರಯತ್ನಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಆದರೆ, ಆರಂಭದಲ್ಲೇ ತಮ್ಮಲ್ಲಿ ಅನುಮಾನ ಮೂಡಿದ್ದರಿಂದ ಎಚ್ಚರಿಕೆ ವಹಿಸಿದ್ದಾಗಿ ಡಿಕೆಶಿ ಹೇಳಿದ್ದಾರೆ. ಪೊಲೀಸರ ಮೂಲಕ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದು, ಈ ಸಂಬಂಧದ ದಾಖಲೆಗಳು ಮತ್ತು ಫೋಟೋಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೇನೆ. ಅಗತ್ಯಬಿದ್ದರೆ ಅವುಗಳನ್ನು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.
ಈ ಷಡ್ಯಂತ್ರದ ಹಿಂದೆ ಯಾರ್ಯಾರು ಇದ್ದಾರೆ, ಯಾರು ಹಣಕಾಸು ಒದಗಿಸುತ್ತಿದ್ದಾರೆ ಮತ್ತು ಇದರ ಹಿಂದೆ ಇರುವ ಪ್ರಮುಖ ವ್ಯಕ್ತಿ ಯಾರು ಎಂಬುದು ತಮಗೆ ಸ್ಪಷ್ಟವಾಗಿ ತಿಳಿದಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
‘ಕುಂಬಳಕಾಯಿ ಕಳ್ಳ ಅಂದರೆ ಕೆಲವರು ಹೆಗಲು ಮುಟ್ಟಿಕೊಳ್ಳುತ್ತಿದ್ದಾರೆ’ ಎಂದು ಹೇಳಿರುವ ಅವರು, ಈ ಹಿಂದೆ 2000ರ ಆಸುಪಾಸಿನಲ್ಲಿಯೂ ತಮ್ಮ ವಿರುದ್ಧ ಇಂತಹ ಸಂಚುಗಳು ನಡೆದಿದ್ದವು ಎಂದು ತಿಳಿಸಿದ್ದಾರೆ.
ಸುಖಾಸುಮ್ಮನೆ ಟ್ರಾಪ್ ಮಾಡಲು ಕೆಲವರು ಬರುತ್ತಾರೆ. ಹೀಗಾಗಿ ಅಧಿಕಾರಿಗಳು ಮತ್ತು ಸಚಿವರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ. ಖಾಸಗಿ ಭೇಟಿಗಳು ಹಾಗೂ ಸಂಭಾಷಣೆಗಳ ವೇಳೆ ಎಚ್ಚರಿಕೆ ವಹಿಸುವಂತೆ ಸಚಿವರಿಗೆ ಸೂಚಿಸಲಾಗಿದೆ ಎಂಬ ವರದಿಯೂ ಇದೆ.
ಇನ್ನು ಈ ಸಂಚಿನ ಹಿಂದೆ ಕರ್ನಾಟಕದವರೇ ಇದ್ದಾರಾ ಅಥವಾ ಹೊರರಾಜ್ಯದವರೇ ಇದ್ದಾರಾ ಎಂಬುದನ್ನು ಸದ್ಯಕ್ಕೆ ಬಹಿರಂಗಪಡಿಸುವುದಿಲ್ಲ. ಕಾಲವೇ ಎಲ್ಲದಕ್ಕೂ ತಕ್ಕ ಉತ್ತರ ನೀಡಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದ್ಯ ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ಕುರಿತ ಆರೋಪ-ಪ್ರತ್ಯಾರೋಪಗಳು ಮುಂದುವರಿದಿದ್ದು, ಈ ಆರೋಪಗಳ ಹಿಂದೆ ಇರುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ಕುರಿತು ಯಾವುದೇ ಅಧಿಕೃತ ದೃಢೀಕರಣ ಇನ್ನೂ ಬಹಿರಂಗವಾಗಿಲ್ಲ.



