ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. 2023ರ ವರುಣಾ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಆಮಿಷವೊಡ್ಡಿ ಗೆದ್ದಿದ್ದಾರೆ ಎಂಬ ಕೆ. ಶಂಕರ್ ಅವರ ಆರೋಪದ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಕ್ರಮ ಕೈಗೊಂಡಿದೆ. ವಿಚಾರಣೆ ಬಳಿಕ, ನ್ಯಾಯಮೂರ್ತಿ ವಿಕ್ರಮನಾಥ್ ನೇತೃತ್ವದ ದ್ವಿ–ಸದಸ್ಯ ಪೀಠವು ಸಿಎಂ ಸಿದ್ದರಾಮಯ್ಯ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಭರ್ಜರಿ ಬಹುಮತದಿಂದ ಗೆದ್ದ ಸಿದ್ದರಾಮಯ್ಯ ಅವರ ಗೆಲುವನ್ನು ಮತದಾರ ಕೆ. ಶಂಕರ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಗೃಹಜ್ಯೋತಿ, ಅನ್ನಭಾಗ್ಯ ಸೇರಿದಂತೆ ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಆಮಿಷವಾಗಿ ಬಳಸಿಕೊಂಡು ಮತದಾರರನ್ನು ಪ್ರಭಾವಿಸಿದ್ದಾರೆ ಎನ್ನುವ ಆರೋಪ ಅರ್ಜಿಯಲ್ಲಿ ಸೇರಿತ್ತು.
ಇದೇ ಹಿನ್ನೆಲೆಯಲ್ಲಿ ‘ಭ್ರಷ್ಟಾಚಾರ ಮತ್ತು ಚುನಾವಣಾ ಅಕ್ರಮ’ ನಡೆಸಲಾಗಿದೆ ಎಂದು ದೂರಿದ್ದರು. ಆದರೆ ಅರ್ಜಿಗೆ ಕಾನೂನುಬದ್ಧ ಆಧಾರಗಳಿಲ್ಲ ಎಂದು ಹೇಳಿ ಕರ್ನಾಟಕ ಹೈಕೋರ್ಟ್ ಅದನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೆ. ಶಂಕರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠವು ಅರ್ಜಿದಾರರ ವಾದಗಳು ಮತ್ತು ಲಭ್ಯ ದಾಖಲೆಗಳನ್ನು ಪರಿಶೀಲಿಸಿದ ನಂತರ, ಸಿದ್ದರಾಮಯ್ಯ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದೆ. ಪ್ರತಿವಾದಿಗಳು ಈ ನೋಟಿಸ್‌ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ. ಸುಪ್ರೀಂ ಕೋರ್ಟ್‌ನ ಈ ಬೆಳವಣಿಗೆಯಿಂದ ರಾಜ್ಯದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.



