ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಸಮೀಪದ ತಲಕಾವೇರಿ ವನ್ಯಧಾಮದಲ್ಲಿ ಕಳ್ಳಬೇಟೆಗೆ ತೆರಳಿದ್ದ ಎಂಟು ಮಂದಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ.
ವನ್ಯಧಾಮದೊಳಗೆ ಬೇಟೆಗಾರರು ಮೂರು ಸುತ್ತು ಗುಂಡು ಹಾರಿಸಿದ್ದು, ಗುಂಡಿನ ಶಬ್ದ ಕೇಳಿ ಅಲರ್ಟ್ ಆದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಆರ್ಎಫ್ಒ ತ್ಯಾಗರಾಜ್ ನೇತೃತ್ವದಲ್ಲಿ ಬೆಳಗಿನ ಜಾವ ನಡೆದ ಕಾರ್ಯಾಚರಣೆಯಲ್ಲಿ ಬೇಟೆಗಾರರನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.
ಅರಣ್ಯದೊಳಗಿನ ರಸ್ತೆಯಲ್ಲಿ ನಿಂತಿದ್ದ ಬೇಟೆಗಾರರ ವಾಹನಗಳನ್ನು ಪತ್ತೆಹಚ್ಚಿದ ಅರಣ್ಯ ಇಲಾಖೆ ಸಿಬ್ಬಂದಿ, ಬಂದೂಕು, ಮದ್ದು-ಗುಂಡುಗಳು ಸೇರಿದಂತೆ ಮೂರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಂಗತ್ತೂರು ಗ್ರಾಮದ ವಸಂತ ಎಂಬುವರಿಗೆ ಸೇರಿದ ಒಂಟಿ ನಳಿಕೆ ಕೋವಿಯನ್ನೂ ವಶಪಡಿಸಿಕೊಳ್ಳಲಾಗಿದೆ.
ಘಟನಾ ಸ್ಥಳಕ್ಕೆ ಎಸಿಎಫ್ ಅನನ್ಯ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಧಿತರ ಬಿಡುಗಡೆಗೆ ರಾಜಕೀಯ ಒತ್ತಡ ಬಂದಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಪರಾರಿಯಾಗಿರುವ ಮತ್ತೋರ್ವ ಆರೋಪಿಯ ಬಂಧನಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಬಂಧಿತ ಎಂಟು ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.










